‘ಸೋನಾ’ ಎಂಬ ಮೋಹನ ವರ್ಣ!

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ‘ಸಿರಿಪಾದ’ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

“ಈ ಕೆಂಪುವರ್ಣವನ್ನು ತುಂಬ ಇಷ್ಟಪಡುವವರಿದ್ದಾರಲ್ಲಾ ಅವರು ಸೂಕ್ಷ್ಮ ಸಂವೇದಿಗಳು, ಕ್ರಿಯಾನಿರತರು, ದೃಢಚಿತ್ತರು, ಮುನ್ನಡೆಯ ನುಗ್ಗು ಸ್ವಭಾವದವರು. ಕಾಂತಶಕ್ತಿ ಅವರಲ್ಲಿ ಅಧಿಕ. ಹಳದಿ ವರ್ಣದವರು ಮಾತುಗಾರರು, ವಿಮರ್ಶಕರು, ಕ್ರಿಯೆಯಲ್ಲಿ ತುಸು ಹಿಂಜರಿತ ಇದೆ ಅವರಲ್ಲಿ. ಹಸಿರು ವರ್ಣದವರು ಸದಾ ತೃಪ್ತರು, ಸೌಂದರ್ಯ ಆರಾಧಕರು, ಅವಲೋಕಿಗಳು, ತೆರೆದ ಹೃದಯ, ಸೂಕ್ಷ್ಮ ನಿರೀಕ್ಷಣೆ, ಸ್ನೇಹ ಅದರ ಸ್ವ-ಭಾವ. ರಸಭಾವದ ಸಾಕಾರಕ್ಕೆ ಅಗತ್ಯವಿದು.

ನೀಲವರ್ಣದವರು ಚೌಕಟ್ಟಿನ ಇತಿಮಿತಿಯಲ್ಲಿ ವ್ಯವಹರಿಸುವವರು, ಶಾಂತ ಸ್ವಭಾವ, ಎಲ್ಲದರಲ್ಲೂ ಸಾವಕಾಶ. ಅಧ್ಯಾಪಕರಿಗೆ ಇವರು ಆಪ್ತರು. ಭಾರೀ ಸಾಧನೆ ಇವರಿಂದ ಅಷ್ಟಕಷ್ಟೆ. ಹದವರಿತು ನಡೆದಾರು; ಹಾದಿ ಸುಗಮವಿದ್ದಾಗ. ಕಪ್ಪು ಬಣ್ಣವನಿಷ್ಟಪಡುವವರು ಹಠಮಾರಿಗಳೂ, ಭಾವುಕರೂ, ಅಂತರ್ಮುಖಿಗಳೂ, ಒಳಗೊಳಗೇ ಹೆಚ್ಚು ಚಿಂತಿಸುವವರು. ಕತ್ತಲಲ್ಲಿ ಕುಳಿತು ಬೆಳಕಿನ ಪ್ರಕ್ರಿಯೆಗಳನ್ನು ಗಮನಿಸುವರು.

ಬಿಳಿ ವರ್ಣದವರು ಎಲ್ಲವೂ, ಆದರೆ ಒಮ್ಮೊಮ್ಮೆ ಏನೂ ಅಲ್ಲದ ಆದರ್ಶವಾದಿಗಳು, ಕನಸುಗಾರರು. ನೇರಳೆಯವರಲ್ಲಿ ಅತಿ ಅನ್ನಿಸುವಷ್ಟು ಚಪಲವಿದೆ, ತುಸು ಅಧಿಕ ಪ್ರಸಂಗತನ, ಕೊನೆಯಿಲ್ಲದ, ಬುಡವಿಲ್ಲದ ಹಾಗೆ. ವಿರೋಧಾಭಾಸ ಹೆಚ್ಚು. ಕೆಂಪಿನ ಜತೆ ಬಿಳಿ, ಹಳದಿ, ಹಸಿರು ಬಣ್ಣದವರ ಸ್ನೇಹ ಒಳ್ಳೆಯದು. ಕಪ್ಪಿನವರ ಜತೆ ಹಸಿರು, ನೀಲ ವರ್ಣದವರನ್ನು ಸೇರಿಸಬೇಕು. ಬಿಳಿಯದರ ಜತೆ ಕೆಂಪು, ಹಸಿರು ಸ್ನೇಹ ಬೆಳೆಸುವುದೊಳಿತು. ಆಗ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದಂತೆ ಆಗುವದು. . . “

ಅವರು ಮಕ್ಕಳೊಂದಿಗಿನ ನಮ್ಮ ಚಟುವಟಿಕೆಯಲ್ಲಿ ‘ವರ್ಣವಿಜ್ಞಾನ’ ವಹಿಸುವ ಪಾತ್ರವನ್ನು ವಿವರಿಸುತ್ತಿದ್ದರು. ಮಣಿಪಾಲದ ಸರೋವರದ ದಂಡೆಯದು. ಅಲ್ಲಿ ಕುಳಿತು ನೀಲ ನೀರನೋಡುತ್ತ ಅವರು ತನ್ಮಯವಾಗಿ ವಿವರಿಸುತ್ತಿದ್ದರೆ ನಾನು ಸುತ್ತಲಿನ ಹಸಿರು ಅವರ ಕಣ್ಣಲ್ಲಿ ಉಕ್ಕುವದನ್ನು ನೋಡುತ್ತ, ಪಾಚಿಯಂತಹ ಕಡುವರ್ಣ ಅವರ ಮಾತುಗಳ ಮೂಲಕ ಹೊರಬರುವದನ್ನ ಅರ್ಥಮಾಡಿಕೊಳ್ಳುತ್ತ ಕುಳಿತಿದ್ದೆ.

ಹಾ! ಅವರು ಮೋಹನ ಸೋನಾ.

ಬಣ್ಣ ಭಾವಗಳ ವಿದ್ಯುದಾಲಿಂಗನವನ್ನು ತೀವ್ರವಾಗಿ ಅನುಭವಿಸುತ್ತ ಅಭಿವ್ಯಕ್ತಿಸುತ್ತ ನಡೆದೇ ಬಿಟ್ಟ ಬಂಗಾರದಂತಹ ಸೋನಾ. ಕಲಾತ್ಮಕತೆ ಅವರ ನೋಟದಲ್ಲೇ ಇತ್ತು. ಅವರು ಸರಳರೇಖೆಯಲ್ಲಿ ಒಂಟಿತನವನ್ನು ಕಾಣಬಲ್ಲವರಾಗಿದ್ದರು. ಸುಮ್ಮನಿರುವ ರೇಖೆಗಳಿಗೆ ತುಸು ವಕ್ರತೆ ಲೇಪಿಸಿದಕೂಡಲೇ ಅವು ಮಾತನಾಡತೊಡಗುವದನ್ನೂ, ಚಿತ್ತದ ಅನುಭವ ಅನುಭಾವಗಳನ್ನು ಕಾವ್ಯಗಳಲ್ಲಿ ಪ್ರತಿಮೆ ಮೂಡಿಸಿದ ಹಾಗೆ ರೇಖೆಗಳಲ್ಲಿ ಮೂಡಿಸುವದು ಹೇಗೆಂಬುದನ್ನೂ ಸರಳವಾಗಿ ಕಾಣಿಸಬಲ್ಲವರಾಗಿದ್ದರು.

 ಬಯಲನ್ನೇ ಚಿತ್ರವಾಗಿಸುವ ಅವರ ಕೆಲಸಗಳ ಬಗ್ಗೆ ಕೇಳಿ ತುಂಬ ಪ್ರಭಾವಿತನಾಗಿದ್ದ ಕಾಲವದು. ಅವರ ಜತೆ ಕೆಲಸಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಂತದೊಂದು ಸಂದರ್ಭ ಒದಗಿಬಂದಿದ್ದು ಉಡುಪಿಯ ರಥಬೀದಿಗೆಳೆಯರಿಂದ. ಉದ್ಯಾವರನಾಗೇಶರು ನಾಟಕವೊಂದನ್ನು ನಿರ್ದೇಶಿಸುವದಕ್ಕಾಗಿ ನನ್ನನ್ನು ಉಡುಪಿಗೆ ಕರೆತಂದರು.  ಕರಾವಳಿಯಲ್ಲಿ ಜನಸಾಮರಸ್ಯ ಕೋಮುಭಾವನೆಯಿಂದ ತೀವ್ರವಾಗಿ ಕದಡಿಹೋಗಿದ್ದ ಕಾಲವದು. ಸಾದತ್ ಹಸನ್ ಮಂಟೋನ ಕತೆಗಳನ್ನು ಅಭಿನಯಿಸುವದಕ್ಕೆ ತಂಡ ಒಪ್ಪಿಕೊಂಡಿತು. ನಾಟಕಕ್ಕೆ ‘ಮಿಸ್ಟೇಕ್’ ಅಂತ ಹೆಸರಿಟ್ಟೆವು.

 “ಮಿಸ್ಟೇಕ್” ಇದು ಸಾದತ್ ಹಸನ್ ಮಂಟೋನ ಕತೆಯೊಂದರ ಹೆಸರು. ದೇಶ ವಿಭಜನೆಯ ಸಂದರ್ಭಗಳನ್ನು ಕಥಿಸುವ ಅವನ ಹಲವಾರು ಕತೆಗಳಲ್ಲಿ ‘ಮಿಸ್ಟೇಕ್’, ‘ಓಪನ್‍ಮಾಡು’, ‘ಷರೀಫನ್’ ಮತ್ತು ‘ಪುರುಷಾರ್ಥ’ ಎಂಬ ನಾಲ್ಕು ಕತೆಗಳನ್ನು ಆಯ್ದುಕೊಂಡಿದ್ದೆವು. 1947 ರ ಭಾರತ ಪಾಕಿಸ್ತಾನ ವಿಭಜನೆ ಹೊತ್ತಿನಲ್ಲಿ ಆದ ಒಂದು ‘ಮಿಸ್ಟೇಕ್’ ಇನ್ನೊಂದು ‘ಮಿಸ್ಟೇಕ್’ಗೆ ದಾರಿ ಮಾಡಿಕೊಡುತ್ತ, ಹಿಂಸೆಯ ರುದ್ರತಾಂಡವಕ್ಕೆ ವೇದಿಕೆಯಾಗುತ್ತ, ಮಿಸ್ಟೇಕ್‍ಗಳ ಸರಮಾಲೆಯನ್ನೇ ನಿರ್ಮಿಸಿತ್ತು.

ಭಾರತ ವಿಭಜನೆಯ ಕೆಂಪು ಹಿಂಪರದೆಯ ಮುಂದೆ ಮನುಷ್ಯನ ಕ್ರೌರ್ಯ ಮತ್ತು ಹಿಂಸಾರತಿಯನ್ನು ಅನಾವರಣಗೊಳಿಸುತ್ತ, ಮಧ್ಯಮ ವರ್ಗದ ಪೊಳ್ಳು ನೈತಿಕತೆಗೆ ಅಘಾತಕೊಡುತ್ತ, ಮನುಷ್ಯನ ಪ್ರಜ್ಞೆಯನ್ನು ಬೆದಕುತ್ತ ಹೋಗುವ  ಕತೆಗಳವು. ವಿಭಜನೆಯ ಗೆರೆ ಕೇವಲ ಭೂಪಟದ ಮೇಲೆ ಮಾತ್ರ ಬೀಳಲಿಲ್ಲ; ಅದು ಮನುಷ್ಯನ ಎದೆಯ ಒಳಗನ್ನೂ ಗೀರಿಬಿಟ್ಟಿದೆ.

ಆ ಗಾಯ ಆಗೀಗ ಮಾಯಲು ಹೊರಡುತ್ತಿದ್ದಂತೆ ಅದನ್ನು ಮತ್ತೆ ಮತ್ತೆ ಕೆರೆದು ವೃಣವಾಗಿಸುವ ಪ್ರಯತ್ನಗಳು ಸಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಭಜನೆಯ ಸಂಕಟದಲ್ಲಿ ನೊಂದವರ ದನಿಗಳು ಹೇಳಿದ ಕತೆಗಳು ತುಸುವಾದರೂ ನಮ್ಮ ಅಂತಃಕರಣವನ್ನು ಸವರಲಿ ಎಂಬ ಆಶಯದಿಂದ ಈ ಪ್ರಯೋಗ ಕಟ್ಟ ಹೊರಟಿದ್ದೆವು. 

ನಿಜ. ಇಲ್ಲಿನ ಕತೆಗಳು ಕಹಿಯಾಗಿದ್ದವು.  ಎನಯ್ಯಾ ! ಇಷ್ಟೊಂದು ಕಹಿಯಾಗಿ ಹೇಳ್ಬೇಕಾ? ಅಂದ್ರೆ ಮಂಟೋ ಅಂತಾನೆ “ಬೇವಿನಸೊಪ್ಪು ಕಹಿಯಾಗಿರುತ್ತೆ. ಆದ್ರೆ ರಕ್ತ ಶುದ್ಧಿ ಆಗೋದಕ್ಕೆ ಅದನ್ನು ಅಗಿಯಲೇ ಬೇಕು”.

ಆತನ ಬರಹದ ಧೈರ್ಯಕ್ಕೆ ಒಂದು ವಿವೇಕವೂ ಸಮತೂಕವೂ ಇತ್ತು. ಆದರೆ ಅದನ್ನು ಅಭಿನಯಿಸೋದು ತುಂಬ ಕಷ್ಟಸಾಧ್ಯದ ಮಾತೂ ಹೌದಾಗಿತ್ತು. ಹಿಂಸೆಯನ್ನು ವಾಚ್ಯವಾಗಿಸದೇ ಅದನ್ನು ವಿವೇಕವಾಗಿಸುವ ಕಲಾಭಿನಯಕ್ಕೆ ತುಂಬ ಸೂಕ್ಷ್ಮತೆಗಳು ಒದಗಿಬರಬೇಕಾಗುತ್ತದೆ; ಇಲ್ಲವಾದಲ್ಲಿ ಹಿಂಸಾರತಿ ಮುನ್ನೆಲೆಗೆ ಬಂದುಬಿಡೋದು ಸಹಜ.

ಹೀಗಾಗಿ ನಾನು ಈ ಕಥಾಭಿನಯಗಳಿಗೆ ರಂಗಸಜ್ಜಿಕೆಯನ್ನು ಸಿದ್ಧಪಡಿಸಿಕೊಡುವಂತೆ ಸೂಕ್ಷ್ಮ ಮನಸಿನ ಕಲಾವಿದ ಸೋನರಲ್ಲಿ ಕೇಳಿಕೊಂಡೆ. ಅವರು ನಾವು ಅಭಿನಯಿಸಲಿರುವ ಕತೆಗಳನ್ನು ತರಿಸಿಕೊಂಡರು.

ಹಲವುದಿನಗಳ ನಂತರ ಅವರು ಫೋನ್ ಮಾಡಿ ಹೇಳಿದ್ದಿಷ್ಟು. “ನಾನು ಕತೆಗಳನ್ನು ಓದಿದೆ. ಸುಧಾರಿಸಿಕೊಳ್ಳಲು ಕೆಲದಿನಗಳೇ ಬೇಕಾಯ್ತು. ಕತೆಗಳಲ್ಲಿನ ಹಿಂಸೆಯನ್ನು ನಟರು ಅಭಿನಯಿಸುವಾಗ ನೋಡೋಕೆ ಇನ್ನೂ ಹಿಂಸೆಯಾಗುತ್ತದೆ. ಬೇಸರಿಸ ಬೇಡಿ. ನನಗೆ ಅದು ಕಷ್ಟ. ನೋಡೋಣ, ನೀವು ತಾಲೀಮು ಶುರುಮಾಡಿ. ನಾನು ಮುಂದಿನವಾರ ಬರುತ್ತೇನೆ. ದೂರ ನಿಂತು ಅದನ್ನು ನೋಡುತ್ತೇನೆ.

ನನಗೆ ಸಾಧ್ಯ ಆಗುವದಾದಲ್ಲಿ ಅಲ್ಲೇ ನಿಮ್ಮ ಜತೆ ಉಳಿದು ಕೆಲಸ ಮುಂದುವರಿಸುವೆ. ಕಷ್ಟ ಅನಿಸಿದರೆ ಸುಮ್ಮನೆ ವಾಪಾಸು ಹೋಗಿಬಿಡುವೆ. ಯಾರಿಗೂ ಈ ವಿಷಯವನ್ನು ಹೇಳಬೇಡಿ. ತಪ್ಪು ತಿಳಿದಾರು. ನಿಮಗೆ ಅರ್ಥವಾಗುತ್ತದೆಂದು ಹೇಳಿಕೊಳ್ಳುವೆ.”  ಸರಿ. ನಾವು ನಮ್ಮ ತಯಾರಿ ಮುಂದುವರಿಸಿದೆವು.

ಕಥಾಭಿನಯದ ಪ್ರಸ್ತುತಿಯನ್ನು ಒಂದು ಪಯಣದಂತೆ ಒಯ್ಯಲು ಮತ್ತು ಅದರ ಇನ್ನೊಂದು ಮಗ್ಗುಲಿನ ಆವಿಷ್ಕಾರಕ್ಕೆ ತೊಡಗಲು ನಾನು ಸಂಗೀತ ತಜ್ಞರಾದ ಡಾ.ಶಶಿಕಾಂತ ಕೆ. ಅವರನ್ನು ಆಹ್ವಾನಿಸಿದ್ದೆ. ಪ್ರಗತಿಪರ ಚಿಂತನೆಯ ಡಾ.ಶಶಿ ನನಗೆ ತುಂಬು ಸಹಕಾರ ನೀಡಿದರು. ನಾವು ಬಳಸಿಕೊಂಡ ನೆರೂಡರ ಕವನ ‘ಅವರು ಕೇಳುತ್ತಾರೆ’ ಮತ್ತು ಕಬೀರರ ‘ಚಲ್‍ರೆಜೋಗಿ’ ಕವನಗಳು ಅವರ ಪ್ರಸ್ತುತಿಯಿಂದ ಬೇರೆಯದೇ ಆಯಾಮವನ್ನು ಸೃಷ್ಟಿಸತೊಡಗಿತ್ತು.  

ನಾಟಕದಲ್ಲಿನ ಕಥಾಪ್ರಸ್ತುತಿ ಕೇವಲ ಸಾಹಿತ್ಯಿಕ ಮಂಡನೆ ಮಾತ್ರವಾಗದೇ, ಯಥಾರ್ಥಬಿಂಬದ ಆಚೆಗಿನ ಪ್ರತಿಮೆಗಳು   ‘Out Of Box’  ನ ರೀತಿಯಲ್ಲಿ ಮಂಡನೆಯಾಗತೊಡಗಿತು. 

ಆ ಒಂದು ದಿನ ಸೋನಾ ಬಂದರು. ತಾಲೀಮು ನಡೆಯುತ್ತಿತ್ತು. ಮೌನವಾಗಿ ದೂರ ಕುಳಿತು ನೋಡಿದರು. ತಾಲೀಮಿನ ಒಂದು ಹಂತ ಮುಗಿದಮೇಲೆ ನೋಡಿದರೆ ಅವರು ಅಲ್ಲಿಯೇ ಕುಳಿತಿದ್ದರು. ಎದ್ದು ಹೋಗಿರಲಿಲ್ಲ. “ನಂಗೆ ಇಷ್ಟ ಆಯ್ತು ಆಯ್ತಾ” ಅಂದ್ರು. ಹಿಂಪರದೆಯ ರಚನೆ ಆರಂಭವಾಯಿತು. ಮೀನುಗಾರರು ಹಾಯಿಗೆ ಬಳಸುವ ಬಟ್ಟೆಯನ್ನು ತರಿಸಿ ಸುಮಾರು 15*10 ಫೂಟ್‍ಗಾತ್ರದ ಭಾರತವೇ ಭಿತ್ತಿಯಾದ ಪೇಂಟಿಂಗ್ ರಚಿಸಿದರು.

ಹಲವು ಕಿಲೋಗಳಷ್ಟು ಬಣ್ಣಗಳನ್ನು ಅರಗಿಸಿಕೊಂಡ ಆ ಪೇಂಟಿಂಗ್, ಎದ್ದು ನಿಂತಕೂಡಲೇ ವಿವಿಧ ಅರ್ಥವನ್ನು ಹೊಳೆಯಿಸತೊಡಗಿತು. ಹಿಮಾಲಯದ ಹಳದಿ ಬಿಸಿತನ, ನೇರಳೆಯ ಕೆನ್ನಾಲಿಗೆ, ಹಸಿರಿನ ಹಂಬಲಗಳು ಗಾಯಗೊಂಡಭಾರತದಲ್ಲಿ ಪಡಿಮೂಡಿದ್ದವು. ಅದರ ಮುಂದೆ ನಟರ ಚಲನೆಯನ್ನು ಸಂಘಟಿಸುವದು ನನಗೆ ಇನ್ನೂ ದೊಡ್ಡ ಕಲಾತ್ಮಕ ಸವಾಲೆನಿಸಿತ್ತು. ನಟರೆಲ್ಲ ತುಂಬ ಘನತೆಯಿಂದ ಆ ಹಿಂಪರದೆಯ ಮುಂದೆ ಬದುಕತೊಡಗಿದರು.

ಹೀಗೆ ನಾಟಕಕ್ಕೆ ಒಂದು ಬಗೆಯ ಕಾವ್ಯಾತ್ಮಕತೆ ಒದಗಲಾರಂಭವಾಯಿತು. ನಾಟಕದ ಪರಿಕರಗಳ ಬಣ್ಣ ಆಕಾರಗಳಿಂದ ಹಿಡಿದು, ಬ್ರೋಷರ್, ಪೋಷ್ಟರ್ ಎಲ್ಲವನ್ನೂ ಅವರು ಸಿದ್ಧಪಡಿಸಿಕೊಟ್ಟರು. ಇಂದಿಗೂ ಅವು ನಮಗೆ ಅಧ್ಯಯನಕ್ಕೆ ಅಗತ್ಯವಾದ ಆಕರಗಳಾಗಿ ಒದಗುತ್ತಿವೆ.

ಅವರೊಡನೆ ಕಳೆದ ಆ ದಿನಗಳೇ, ಬಣ್ಣಗಳ ನನ್ನ ವ್ಯಾಮೋಹಕ್ಕೆ ಖಚಿತ ಅರ್ಥವನ್ನು ದೊರಕಿಸಿಕೊಟ್ಟಿದ್ದು. ತಮ್ಮ ಜತೆಗಿನ ಎಲ್ಲರನ್ನೂ ಕಲಿಕೆಯೊಂದರ ಪರಿಸರದಲ್ಲಿ ಅದ್ದಬಲ್ಲ ಒದ್ದೆಗುಣ ಅವರದು. ಅಂತದೊಂದು ದಿನದಲ್ಲಿಯೇ ಮಣಿಪಾಲದ ಕೆರೆಮುಂದಿನ ಪರಿಸರದಲ್ಲಿ ಮಕ್ಕಳ ವರ್ಣವಿಜ್ಞಾನವನ್ನು ಅವರು ವಿವರಿಸಿದ್ದು. ಮುಂದೆ ಈ ನಮ್ಮ ಬಂಧ ತುಂಬ ಹಿತಕರವಾಗಿ ಮುಂದುವರಿಯಿತು. ನಾನು ಸಂಘಟಿಸಿದ ಹಲವು ಮಕ್ಕಳ ಶಿಬಿರಗಳಿಗೆ ಅವರು ಬಂದು ತರಗತಿ ತೆಗೆದುಕೊಂಡರು.

 ಅದೊಂದು ಸಮಯ. ಬಾಲವನದಲ್ಲಿ ಚಿತ್ರಶಾಲೆಯನ್ನು ನಡೆಸುತ್ತಿದ್ದ ಸೋನಾ, ಅಲ್ಲಿಯ ಅಧಿಕಾರಿಗಳ ಅಸಾಂಸ್ಕಂತಿಕ ಪ್ರವೃತ್ತಿಯಿಂದ ಬೇಸತ್ತು ನಿರ್ಗಮಿಸಿ ಆಗಿತ್ತು. ಆಗ ಪುತ್ತೂರಿಗೆ ಸಹಾಯಕ ಕಮೀಷನರ್ ಆಗಿ ಬಂದವರು ಪ್ರಸನ್ನ ಚಿಕ್ಕಮಗಳೂರು. ಈ ಹಿಂದೆ ಶಿವಮೊಗ್ಗ ವಿಶ್ವವಿದ್ಯಾಲಯದಲ್ಲಿ ಅವರು ವಿದ್ಯಾರ್ಥಿಯಾಗಿದ್ದಾಗ ನಾನು ನಡೆಸುತ್ತಿದ್ದ ರಂಗಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ ಸಾಹಿತ್ಯ ಸಂಸ್ಕಂತಿಯ ಕುರಿತ ವಿಶೇಷ ಪ್ರೀತಿಯೂ ಸಹಜವಾಗಿಯೇ ಅವರಲಿತ್ತು.

ಬಾಲವನವನ್ನು ಪುನಹ ಶಿವರಾಮ ಕಾರಂತರ ನೆನಪಿನೊಂದಿಗೆ ಸೃಜನಶೀಲವಾಗಿಸುವ ಆಸೆ ಅವರದ್ದು. ಅದಕ್ಕಾಗಿ ಸೋನಾರನ್ನು  ವಾಪಾಸು ಕರೆತರುವ  ಕೆಲಸವನ್ನು ನನಗೆ ವಹಿಸಿದ್ದರು. ಸೋನಾರಿಗೆ ಬಾಲವನದಲ್ಲಿ ಮತ್ತೆ ಚಟುವಟಿಕೆ ಆರಂಭಿಸೋದು ಇಷ್ಟದ ಸಂಗತಿಯೇ ಆಗಿತ್ತು.  “ ಶ್ರೀಪಾದ, ಇದು ಉತ್ತಮ ಅವಕಾಶ.

ಖಂಡಿತ ಬರುತ್ತೇನೆ. ಆದರೆ ಅವರು ಅಧಿಕಾರಿಗಳಂತೆ ವರ್ತಿಸಿದರೆ ನಾನು ಸುಮ್ಮನೇ ವಾಪಾಸು ನಡೆಯುತ್ತೇನೆ. ಒತ್ತಾಯಿಸಬಾರದು ಮತ್ತು ಬೇಸರಿಸಬಾರದು” ಎಂಬ ಷರತ್ತಿನೊಂದಿಗೇ ಬಾಲವನಕ್ಕೆ ಮರಳಿದ್ದರು. ಅವರಿಗಿಷ್ಟವಿಲ್ಲದ ಸಂದರ್ಭವಾದರೆ ಮೌನವಾಗಿ ಸರಿದುಹೋಗುವದು ಅವರ ಅಭ್ಯಾಸ ಎಂದು ನನಗೆ ತಿಳಿದಿತ್ತು. ಮುಂದೆ ಪ್ರಸನ್ನ ಮತ್ತು ಸೋನಾ ಅವರ ಸ್ನೇಹ ಚೆನ್ನಾಗಿಯೇ ಫಲಿಸಿತು. ಅವರಿಬ್ಬರೂ ಬಾಲವನದಲ್ಲಿ ಅನೇಕ ಚಟುವಟಿಕೆಗಳನ್ನು ನಡೆಸಿದರು.

‘ಸ್ಕೇಟಿಂಗ್’ ಆಡೋದಕ್ಕೆ ಅಂತ ನಿರ್ಮಿಸಿದ ಕಟ್ಟಡವನ್ನು ಕಾರಂತರ ಕಾದಂಬರಿ ಆಧಾರಿತ ಚಿತ್ರಗ್ಯಾಲರಿ ಆಗುವಂತೆ ರೂಪಾಂತರಿಸಿದವರೂ ಅವರೇ. ಅವರ ನಡುವಿನ ಸ್ನೇಹ ಕಾರವಾರ ಕಡಲತಡಿಯ ‘ರಾಕ್ ಗಾರ್ಡನ’ ನಿರ್ಮಾಣದವರೆಗೂ ಮುಂದುವರಿಯಿತು.

  ಪುತ್ತೂರಿನ ಮಂಜುಳಾ ಸುಬ್ರಹ್ಮಣ್ಯ ಅವರು ಭರತನಾಟ್ಯ ಮತ್ತು ರಂಗಭೂಮಿಯ ಕಲಾವಿದೆ. ಅವರಿಗಾಗಿ ಏಕವ್ಯಕ್ತಿ ರಂಗಪ್ರಯೋಗವನ್ನು ನಿರ್ದೇಶಿಸುವ ಸಂದರ್ಭವದು. ರಾಧೆಯ ಕತೆಯನ್ನು ಆಧರಿಸಿ ಸುಧಾ ಆಡುಕಳ ಪಠ್ಯವೊಂದನ್ನು ರಚಿಸಿಕೊಟ್ಟರು. ಮಹಿಳೆ ಆಯ್ದುಕೊಳ್ಳುವ ಒಂಟಿ ಬದುಕಿನಲ್ಲಿಯ ಘನತೆಯನ್ನು ಸಾರುವ ಆಶಯದ ಆ ಕೃತಿಯನ್ನು ನೃತ್ಯ ಮತ್ತು ನಾಟಕದ ಹಲವು ಸಾಧ್ಯತೆಗಳನ್ನು ಬೆಸೆದು ರಚಿಸಲು ಯತ್ನಿಸಿದ್ದೆ.

ರಂಗದ ಮೇಲಿನ ಅಭಿನಯ ಶಿಲ್ಪಕ್ಕೆ ಭಿತ್ತಿಯಾಗಿ ಚಲನಶೀಲ ಗುಣವುಳ್ಳ ಚಿತ್ರವೊಂದು ನಿರ್ಮಿತವಾಗಬೇಕೆಂದು ಬಯಸಿದ್ದೆ. ಬಣ್ಣಗಳ ಪ್ರವಹಿಸುವಿಕೆಯ ಈ ಸೂಕ್ಷ್ಮವನ್ನು ಮತ್ತಾರು ಹಿಡಿದಾರು? ಸೋನಾರ ಮೊರೆಹೋದೆವು. ಕತೆಯನ್ನು ಓದಿ ತುಂಬ ಇಷ್ಟಪಟ್ಟ ಸೋನಾ ಪುತ್ತೂರಿನ ಸೌಗಂಧಿಕಾ ಮನೆಯ ಚಂದ್ರು ಅವರ ನಿವಾಸಕ್ಕೆ ನಮ್ಮನ್ನು ಆಮಂತ್ರಿಸಿ ಹೊಸ ಸಂಬಂಧ ಬೆಸೆಯಲು ಕಾರಣರಾದರು.

ಸಸ್ಯಗಳ ಚಿತ್ರಹೃದಯವನ್ನೂ ಬಲ್ಲ ಚಂದ್ರು, ಸೋನಾ ಅವರ ಬಾಲವನದ ಸಂಗಾತಿಯೂ ಹೌದು. ಪುತ್ತೂರಿನಿಂದ ಮೈಸೂರಿಗೆ ಹೋಗುವ ಹೆದ್ದಾರಿಯ ಪಕ್ಕದಲ್ಲಿರುವ ಸೌಗಂಧಿಕದಲ್ಲಿ ಈಗಲೂ ನಿರಂತರವಾಗಿ ಚಿತ್ರಚಟುವಟಿಕೆಗಳು ಜರುಗುತ್ತಲೇ ಇರುತ್ತವೆ. ಅವರ ಇಡಿಯ ಕುಟುಂಬದವರ ಮನುಷ್ಯ ಪ್ರೀತಿ ಅವರು ಬೆಳೆಸಿದ ಹೂಗಳಲ್ಲಿ ವಿವರವಾಗಿ ಅರಳಿನಿಂತಿರುವದನ್ನು ನೀವು ಯಾವಾಗಹೋದರೂ ಕಾಣಬಹುದಾಗಿದೆ.

ಆ ದಿನಪೂರ್ತಿ ರಸವತ್ತಾದ ಚರ್ಚೆ, ರಂಗಪರದೆಯ ಮಾದರಿಯ ಹುಡುಕಾಟ. ಅಕಸ್ಮಾತಾಗಿ ಅಲ್ಲಿಯ ಶೋ ಕೆಸಿನಲ್ಲಿದ್ದ ವಕ್ರ ಮೈಯ ಗಾಜಿನ ಚಿಕ್ಕ ಆಕಾರವೊಂದನ್ನು ಗಮನಿಸಿದ ಸೋನಾ ಅದನ್ನು ಹಿಡಿದು ರಂಗಸಜ್ಜಿಕೆಯ ಮಾದರಿಯನ್ನು ಬರೆದೇ ಬಿಟ್ಟರು. ರಾಧೆಯ ಬದುಕಿನ ಪಯಣದ ಕತೆಯೊಂದಿಗೆ ಸಾಗುವ ಆ ಹಿಂಪರದೆಯಲ್ಲಿ ಒಂದೊಂದೇ ಶಿಲ್ಪಭಂಗಿ  ರೂಪುಗೊಳ್ಳುವಂತೆ ಚಿತ್ರಿತವಾದ ಮಾದರಿ ಅದು.! ಆ ದಿನವಂತೂ ಚಂದ್ರು ಅವರ ಮನೆಯ ‘ವೈನ್’ ಗೆ ಅದ್ಭುತ ರುಚಿ ಒದಗಿಬಿಟ್ಟಿತು.

ಮಂಗಳೂರಿನ ಚರ್ಚೊಂದರ ಸುಂದರ ಆವಾರದಲ್ಲಿ ರಾಧಾ ನಾಟಕದ ತಾಲೀಮನ್ನು ಸಂಯೋಜಿಸಿಕೊಟ್ಟವರು ಅರೆಹೊಳೆ ಸದಾಶಿವರಾವ್. ಸೋನಾ, ನಾಟಕದ ಪ್ರದರ್ಶನದ ಎರಡುದಿನ ಮೊದಲು ಅಲ್ಲಿಗೆ ಬಂದರು. ಸೆಟ್‍ನ ಅಸ್ತಿಪಂಜರವಷ್ಟೇ ಸಿದ್ಧವಾಗಿತ್ತು. ಅಗತ್ಯ ಬಣ್ಣಗಳನ್ನು ಹಿಡಿದು ಬರಬೇಕಿದ್ದ ಕಲವಿದ ಗೆಳೆಯ ಇನ್ನೂ ಬಂದಿರಲಿಲ್ಲ. ಸೋನಾ ತಾಲೀಮು ನೋಡುತ್ತ ಕುಳಿತಿದ್ದರು.

‘ನನಗೆ ನಾಟಕ ಪ್ರದರ್ಶನಕ್ಕಿಂತ ಈ ತಾಲೀಮು ಪ್ರಕ್ರಿಯೆಯೇ ತುಂಬ ಆನಂದ ನೀಡುತ್ತದೆ’ ಅನ್ನುತ್ತಿದ್ದರು ಅವರು. ನಾನು ಅದುವರೆಗೂ ಗಮನಿಸಿದ ಹಾಗೆ ತಾಲೀಮು ಪ್ರಕ್ರಿಯೆಗಳನ್ನು ನಿರಂತರವಾಗಿ ಆಸ್ವಾದಿಸುವ ಈ ಆಸಾಮಿ ನಾಟಕದ ಪ್ರದರ್ಶನವನ್ನು ನೋಡುವದರಲ್ಲಿ ಆಸಕ್ತಿವಹಿಸುತ್ತಿರಲಿಲ್ಲ. ಮಿಸ್ಟೇಕ್ ನಾಟಕ ಹಾಗೂ ರಾಧಾ ನಾಟಕ ಸಿದ್ಧವಾಗುತ್ತಿದ್ದ ಎರಡರ ಸಂದರ್ಭದಲ್ಲಿಯೂ ಅಷ್ಟೆ.

ಪ್ರದರ್ಶನದ ಹಿಂದಿನ ದಿನ ರಾತ್ರಿಯವರೆಗೂ ಜತೆಗಿದ್ದು ಆನಂದಿಸಿ ಪ್ರದರ್ಶನದ ದಿನ ಹೊರಟು ಬಿಟ್ಟಿದ್ದರು. ರಂಗಪ್ರಯೋಗವೊಂದು ಬೆಳೆಯುತ್ತಹೋಗುವ ಬಗೆಯನ್ನು ಆಸ್ವಾದಿಸುವದು ಅವರ ರೂಢಿ; ಅದನ್ನೊಂದು ಸಿದ್ಧಗೊಂಡ ಸರಕನ್ನಾಗಿ ನೋಡಲಾರರು ಅವರು. ಉಡುಪಿಯ ಡಾ.ಪ್ರಸಾದ ಮಟ್ಟು ಅವರು ಗುರುತಿಸೋಹಾಗೆ ಅವರ ಈ ಗುಣವೇ ಮಕ್ಕಳ ರಂಗಭೂಮಿಯನ್ನು ಅವರು ಪ್ರೀತಿಸುವ ಹಾಗೆ ಮಾಡಿದ್ದು.               

 ಅಂದು ಮುಂಜಾನೆಯಿಂದ ಸಂಜೆಯವರೆಗೂ ನಡೆದ ಎಲ್ಲ ತಾಲೀಮನ್ನೂ ಬೆಸರವಿಲ್ಲದೇ ನೊಡುತ್ತ ಕುಳಿದ್ದರವರು; ಎಲ್ಲಿಯೋ  ಒಂದು ಚಂದದ ಗತಿಯನ್ನು ಕಂಡಾಗ ಆನಂದಿಸುತ್ತ, ಪಾತ್ರವು ಅನುಭವಿಸುತ್ತಿದ್ದ ಸಂಕಟವನ್ನು ಕಂಡು ನೋವುಣ್ಣುತ್ತ. ಒಮ್ಮೆಯಂತೂ  “ಹೆಣ್ಣಿಗೆ ಎಷ್ಟೆಲ್ಲ ಸಂಕಟಗಳು ಅಲ್ವಾ ಶ್ರೀಪಾದ್ “ ಎನ್ನುತ್ತ ಮರೆಗೆ ಎದ್ದು ನಡೆದಿದ್ದರು. ಆ ದಿನ ಡಿಸೆಂಬರ್ 25 . ಕ್ರಿಸ್ ಮಸ್ ಸಂಭ್ರಮಕ್ಕೆ ನಾವಿರುವ ಚರ್ಚು ಸಿಂಗಾರಗೊಂಡಿತ್ತು. ಮಾರನೇ ದಿನವೇ ಪ್ರದರ್ಶನ. ಆದರೆ ಕುಶಲಕರ್ಮದ ಕೆಲಸಕ್ಕೆ ಒದಗಬೇಕಿದ್ದ ಕಲಾವಿದರು ಬರಲಾಗಲಿಲ್ಲ.

ನಾನು ಕುದಿಯತೊಡಗಿದ್ದೆ. ಸೋನಾ ಸಾವಧಾನವಾಗಿ ‘ನಾವೇ ಮಾಡೋಣ ಬಿಡಿ’ ಎಂದರು. ಚರ್ಚಿನವರ ಆಮಂತ್ರಣದ ಮೇರೆಗೆ ಕ್ರಿಸ್‍ಮಸ್ ಆಚರಣೆಯಲ್ಲಿ ಎಲ್ಲರೂ ಪಾಲ್ಗೊಂಡು ರೂಮಿಗೆ ವಾಪಾಸಾದಾಗ ರಾತ್ರಿ 1 ಘಂಟೆ. ಪಂಚೆ ಬಿಗಿದುಕೊಂಡು ಸಿದ್ಧವಾದ ಸೋನಾ, ಅಂದು ನಾಟಕದ ಸಂಗೀತ ನಿರ್ವಹಣೆ ಮತ್ತು ಮತ್ತಿತರ ಸಹಾಯಕ್ಕೆ ಬಂದಿದ್ದ  ಮಧ್ವರಾಜ, ಪದ್ಮಾಸಿನಿ.

ಪ್ರಥ್ವಿನ್ ಮುಂತಾದವರನ್ನು ಸೇರಿಸಿಕೊಂಡು, ಅವರಿಗೆ ಆ ಕುಶಲಕಲೆಯನ್ನು ಹೇಳಿಕೊಡುತ್ತ ಸರಿಸುಮಾರು ಮುಂಜಾನೆಯವರೆಗೂ ದಣಿವರಿಯದಂತೆ ರಾಧಾಳನ್ನು ಹಿಂಪರದೆಯ ಮೇಲೆ ಚಿತ್ರಿಸಿದ್ದರು. ಅದೊಂದು ಕಲಾಶಾಲೆಯೋ ಎಂಬಂತೆ, ತನ್ಮಯವಾಗಿ ವರ್ಣವಿವರಗಳನ್ನು ಹೇಳಿಕೊಡುತ್ತಿದ್ದ ಅವರ ಕಣ್ಣಲ್ಲಿ ಕ್ರಿಸ್ತನ ಕರುಣೆಯೂ ಇತ್ತು.

ನಾವು ಸಂಧಿಸಿದ ಎಲ್ಲ ಸಮಯವೂ ಕಲೆಯ, ನಾಟಕದ ಕುರಿತ ಮಾತುಕತೆಯೇ ನಡೆದಿತ್ತು. ಬೇರೊಬ್ಬರ ವೈಯಕ್ತಿಕ ಬಾಳುವೆಯನ್ನು ಹಂಗಿಸಿ ಅವರು ಮಾತನಾಡಿದ್ದನ್ನು ನಾನು ಕಂಡಿದ್ದಿಲ್ಲ. ಒಮ್ಮೆ ಅಂಕೋಲಾದ ಹೋಟೆಲ್ ರೂಮಿನಲ್ಲಿ ನಾವು ಸರಿ ಸುಮಾರು ಮುಂಜಾನೆಯವರೆಗೂ ಮಾತನಾಡುತ್ತ ಕುಳಿತಿದ್ದೆವು.

ಮುಂದೊಂದು ದಿನ ನಾವಿಬ್ಬರೂ ಸೇರಿ ಮಕ್ಕಳ ಶೈಕ್ಷಣಿಕ ಬದುಕಿನ ಪ್ರಯೋಗದ ಕುರಿತ ಜಪಾನಿ ಕಾದಂಬರಿ ‘ತೊತ್ತೋಚಾನ್’ ಕೃತಿಯನ್ನು ಪರಿಸರ ರಂಗಭೂಮಿಯ ಚಿಂತನೆಯ ಹಿನ್ನೆಲೆಯಲ್ಲಿ ರಂಗಕ್ಕೆ ತರಲು ಅಂದು ನಿರ್ಧರಿಸಿದ್ದೆವು ಮತ್ತು ಜಗತ್ತಿನ ಪ್ರಮುಖ ಮಹಾಕಾವ್ಯಗಳನ್ನು ಮಕ್ಕಳ ಕಣ್ಣಲ್ಲಿ ಅವರ ಜತೆಗಿದ್ದು ಕಟ್ಟುವದೆಂತಲೂ. ಆ ಕುರಿತ ಕೆಲಸಗಳ ಹಂಚಿಕೆಯ ಒಡಂಬಡಿಕೆಯೂ ನಡೆದಿತ್ತು. ಆದರೆ ಒಪ್ಪಂದ ಮುರಿದಿದೆ. ಎಲ್ಲಿ ಸಂಧಿಸುವೆವೋ ತಿಳಿದಿಲ್ಲ. ಸಂಧಿಸೋದಂತೂ ಖಾತ್ರಿ.

ಮಕ್ಕಳ ಜತೆ ಕೆಲಸ ಮಾಡುವ ಸಮಯದಲ್ಲಿ ಸೋನಾ ಪೂರ್ಣವಾಗಿ ಅರಳುತ್ತಿದ್ದರು. ಮಕ್ಕಳೂ ಅಷ್ಟೆ. ಅವರ ಜತೆಗಿರುವಾಗ ನಿರಾಳವಾಗಿರುತ್ತಿದ್ದರು. “ಸುಮ್ಮನೆ ವಕ್ರ ರೇಖೆಯೊಂದನ್ನು ಗೀಚಿ. ಅದನ್ನೇ ಸೂಕ್ಷ್ಮವಾಗಿ ಗಮನಿಸಿ. ತಿರುಗಿಸಿ, ಎಡಬಲ ಮಾಡಿ ನೋಡಿ. ನಿಮಗೊಂದು ಆಕಾರ ಕಾಣಿಸುತ್ತದೆ.

ಹೋ! ಇದು ಅದರ ಹಾಗೆಯೇ ಇದೆ ಅನ್ನುತ್ತೀರಿ. ಇಷ್ಟುಗೊತ್ತಾದರೆ ಸಾಕು, ನಿಮಗೆ ಡ್ರಾಯಿಂಗ್ ಮಾಡಲು ಲೈಸೆನ್ಸ್ ಸಿಕ್ಕಿಬಿಡುತ್ತದೆ” ಎಂದು ಮಕ್ಕಳ ಕಣ್ಣೊಳಗೆ ಇಣುಕಿ ಅವರು ವಿವರಿಸುತ್ತಿದ್ದರೆ, ಕೇಳುತ್ತಲಿದ್ದ ಮಕ್ಕಳ ಮುಖಮುದ್ರೆಯಲ್ಲಿ ಚಿತ್ರಕಾರರ ಭಾವ ಮೂಡುವ ಸೊಬಗನ್ನು ನೀವು ಕಾಣಬಹುದಿತ್ತು.

ಎಚ್.ಎಸ್.ವಿ.ಅವರ ಕವನಗಳ ಈ ಸಾಲುಗಳೊಂದಿಗೆ ಸೋನಾ, ನೀವು ಯಾವತ್ತೂ ನನ್ನಲ್ಲಿ ಮೋಹಕ ನೆನಪಾಗುಳಿಯುವಿರಿ. 

‘ . . ಮುಗುಳು ನಗೆಗೆ ಯಾವತ್ತೂ ತುಟಿಯ ಎಂಜಲು
ಹತ್ತುವುದಿಲ್ಲ. ದೀಪದ ಮೂತಿಗೆ ಮಸಿ ಮೆತ್ತುವ
ಸರದಾರ ಇನ್ನೂ ಈ ಜಗತ್ತಿನಲ್ಲಿ ಹುಟ್ಟಿಲ್ಲ
ಬೆಳಗಾಗೆದ್ದು ಈ ಮಕ್ಕಳ ತುಟಿಗಳಿಂದ
ನಗೆ ಹೂ ಬಿಡಿಸಿಕೊಂಡು ಗಾಳಿಯಲ್ಲಿ ಉಪ್ಫೆಂದು ಹಾರಿಸುವವನೇ
ನಿನಗಿದೋ ನನ್ನ ಹೃತ್ಪೂರ್ವಕ ಅಭಿನಂದನೆ’

(ಇತ್ತೀಚೆಗೆ ನಮ್ಮನಗಲಿದ ಕಲಾವಿದ ಮೋಹನ ಸೋನಾ ಅವರಿಗೆ ಗೌರವಪೂರ್ವಕ ಸಲಿಸಿದ ನುಡಿ ನಮನವಿದು)

‍ಲೇಖಕರು ಶ್ರೀಪಾದ್ ಭಟ್

October 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ಕಣ್ಣು ಹನಿಯಿತು. ಇನ್ನೇನಾಗಲು ಸಾಧ್ಯವಿತ್ತು?

    ಪ್ರತಿಕ್ರಿಯೆ
  2. Kiran Bhat

    ಸೋನಾ…
    ೧೯೮೪.
    ನನ್ನ ಮಂಗಳೂರಿನ ದಿನಗಳಿಂದಲೂ ಗೆಳೆಯ. ನಾವೆಲ್ಲ ಆಗಾಗ ಸೇರ್ತಿದ್ದದ್ದು ಸುದೇಶ್ ಮನೆಯಟ್ಟದ ‘ ಅಜಂತಾ ಕಲಾವಿದರು’ ಸ್ಟುಡಿಯೋದಲ್ಲಿ.
    ಅದೇ ಕಾಲ. ದಕ್ಷಿಣ ಕನ್ನಡದ ಹವ್ಯಾಸಿ ರಂಗ ತಂಡಗಳೆಲ್ಲ ಸೇರಿ ‘ ದ.ಕ. ಹವ್ಯಾಸಿ ಕಲಾವಿದರ ಒಕ್ಕೂಟ’ ಅಂತ ರಚಿಸಿಕೊಂಡಿದ್ದೆವು. ಒಂದು ದಿನ ಅದರ ವಾರ್ಷಿಕೋತ್ಸವ. ಬಹುಷ ಸುಳ್ಯದಲ್ಲೇ ಇರಬೇಕು. ಒಂದಿಷ್ಟು ಮಾತು, ಊಟ, ಕೆಲವು ಕಾರ್ಯಕ್ರಮಗಳೂ ಇದ್ದವು. ಒಂದು ಚಿಕ್ಕ ಯಕ್ಷಗಾನ ಪ್ರದರ್ಶನವೂ ಇತ್ತು. ಆಟ ಮುಗಿದ ಮೇಲೆ ಚರ್ಚೆ. ಸೋನ ಎದ್ದರು. ಒಬ್ಬ ಪಾತ್ರಧಾರಿ ಹಾಕಿಕೊಂಡಿದ್ದ ಶಾಲಿನ ಬಣ್ಣದ ಕುರಿತು ಅವರ ಪ್ರಶ್ನೆ.
    ಪಾತ್ರದ ವ್ಯಕ್ತಿತ್ವಕ್ಕೂ ಅದು ಉಡುವ ತೊಡುಗೆಯ ಬಣ್ಣಕ್ಕೂ ಇರುವ ಸಂಬಂಧಗಳ ಕುರಿತು ತುಂಬ ಹೊತ್ತು ಮಾತಾಡಿದರು.
    ಶ್ರೀಪಾದ ಸೋನಾ ಮತ್ತು ಬಣ್ಣಗಳ ಕುರಿತು ಹೇಳುವಾಗ ಇದೆಲ್ಲ ನೆನಪಾಯ್ತು.

    ಪ್ರತಿಕ್ರಿಯೆ
  3. Purushothama Bilimale

    ಸೋನಾ ಕುರಿತ ಶ್ರೀಪಾದ ಭಟ್ಟರ ಲೇಖನ ಬ್ರಿಲಿಯಂಟ್.‌ ಸೋನಾ ನನ್ನ ಜೀವನದ ಭಾಗವೇ ಹೌದು. ಅವರು ೮೦ರ ದಶಕದ ಸುಳ್ಯಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ಮಹಾನುಭಾವ.

    ಪ್ರತಿಕ್ರಿಯೆ
  4. Kavya Kadame

    ವರ್ಣಗಳಲ್ಲೇ ಪ್ರಜ್ಞೆಯನ್ನು ಅರಳಿಸಬಲ್ಲ, ಅರಿವನ್ನು ಬಣ್ಣಗಳ ತಂತಿಯಿಂದಲೇ ಹೊರಳಿಸಬಲ್ಲ ಕಲಾವಿದ ಮೋಹನ ಸೋನಾ ಅವರಿಗೆ ಅರ್ಪಿಸಿರುವ ನುಡಿ ನಮನ ಆಪ್ತವಾಗಿದೆ. “ಹಿಂಸೆಯನ್ನು ವಾಚ್ಯವಾಗಿಸದೇ ಅದನ್ನು ವಿವೇಕವಾಗಿಸುವ ಕಲಾಭಿನಯಕ್ಕೆ ತುಂಬ ಸೂಕ್ಷ್ಮತೆಗಳು ಒದಗಿಬರಬೇಕಾಗುತ್ತದೆ; ಇಲ್ಲವಾದಲ್ಲಿ ಹಿಂಸಾರತಿ ಮುನ್ನೆಲೆಗೆ ಬಂದುಬಿಡೋದು ಸಹಜ” ಅಂತ ನೀವು ಹೇಳಿದ್ದು ನಮ್ಮ ಕಾಲದ ಎಲ್ಲ ಪ್ರಕಾರಗಳ ಕಲಾವಿದರೂ ಗಮದಲ್ಲಿಟ್ಟುಕೊಳ್ಳಬೇಕಾಗಿರುವ ಸಂಗತಿ. ಸೋನಾ ಅವರಂಥ ಮೇರು ವ್ಯಕ್ತಿತ್ವವನ್ನು ಆಡಂಬರವಿಲ್ಲದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಸರ್.  
      

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: