“ಜಗವೇ ಒಂದು ರಣರಂಗ…”

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ.

। ಕಳೆದ ವಾರದಿಂದ ।

ಮನೆಗೆ ಬಂದ ಗೌಹರ್ ಮತ್ತು ಆನಾ ಹುಡುಗಿಯ ಬಳಿ ಕುಳಿತುಕೊಂಡು ಮನೆಯಲ್ಲಿ ಕರೆಂಟು ಹೋದ ಸಂದರ್ಭವನ್ನ ವಿವರಿಸುತ್ತಿದ್ದರು. ಕಝಾಕಿಸ್ತಾನದಲ್ಲಿ ಪವರ್ ಇಲ್ಲದಿದ್ದರೆ ಬಹಳ ಕಷ್ಟ ಅದು ಬಹಳ ಚಳಿಯ ಪ್ರದೇಶ ಎಂದು ಹೇಳುತ್ತಿದ್ದಳು. ಆನಾ ಮನೆಯಲ್ಲಿ ಸ್ವಲ್ಪ ಪರವಾಗಿಲ್ಲ ನಮ್ಮದು ಬಹಳ ವಿಂಡ್ ಮಿಲ್ ಇರುವ ಪ್ರದೇಶ ಆದರಿಂದ ತೊಂದರೆ ಇಲ್ಲ ಎಂದೂ ಹೇಳಿದಳು.

ಆದರೆ ಹುಡುಗಿ ಮಾತ್ರ ತನ್ನ ಊರಿನಲ್ಲಿ ಹತ್ತನೇ ಕ್ಲಾಸಿಗೆ ಬಂದಾಕ್ಷಣ ಪರೀಕ್ಷೆಯ ಸಮಯದಲ್ಲೇ ಕರೆಂಟು ತೆಗೆದು ಪ್ರಾಣ ಹಿಂಡುತ್ತಿದ್ದ ಕರೆಂಟ್ ಕಂಪೆನಿಯನ್ನು ಸಿಕ್ಕಾಪಟ್ಟೆ ಮತ್ತೆ ಬೈದುಕೊಂಡಳು. ಹತ್ತನೇ ಕ್ಲಾಸು ಪಾಸು ಮಾಡಿ ಹತ್ತು ವರ್ಷವಾದರೂ ಅವಳಿಗೆ ಕರೆಂಟು ಕಟ್ಟು ಮಾಡಿದವನ ಮೇಲಿನ ಕೋಪ ಹೋಗಿರಲ್ಲಿಲ್ಲ. ಆಮೇಲೆ ಅವರಪ್ಪ ಕಷ್ಟ ಪಟ್ಟು  ಮನಗೆ ಯೂಪಿಸ್ ಹಾಕಿಸಿದ್ದು ನೆನೆಸಿಕೊಂಡು ಕಣ್ಣೀರಾದಳು.

ಮಿಡಲ್ ಕ್ಲಾಸ್ ಜೀವನ ಒಂದು ಥರಹ ವಿಚಿತ್ರ. ಬಡವರಿಗೆ ಸಿಂಪಥಿ, ಶ್ರೀಮಂತರಿಗೆ ಹಣಕಾಸು ಸಿಕ್ಕಾಪಟ್ಟೆ ಸಿಗುತ್ತದೆ. ಮಿಡಲ್ ಕ್ಲಾಸ್ ಜನ, ಅಲ್ಲೂ ಇಲ್ಲ ಇಲ್ಲೂ ಇಲ್ಲದ ಹಾಗಿರುತ್ತಾರೆ. ತುತ್ತಿನ ಚೀಲ ಬರುವ ಸಂಬಳದಲ್ಲಿ ತುಂಬುತ್ತಿದ್ದರೂ ಒಬ್ಬರಿಗೆ ಹುಷಾರು ತಪ್ಪಿದ್ದರೂ ಮನೆಯಲ್ಲಿ ಸ್ವಲ್ಪ ಕಷ್ಟವೇ ಆಗುತ್ತಿತ್ತು.ಇಂಥದನ್ನೆಲ್ಲ ನೋಡಿದ ಹುಡುಗಿಗೆ ಇಲ್ಲಿವರೆಗೂ ಬಂದೆನಲ್ಲಾ ಎಂಬ ಖುಷಿ ಯಾವಾಗಲೂ ಇತ್ತು. ಅದಕ್ಕೆ ಅಪ್ಪ ಅಮ್ಮ ಮಾಡಿದ ತ್ಯಾಗವೇ ಮುಂದಾಳತ್ವ ವಹಿಸಿದೆ ಎಂದು ನೆನಪಿಸಿಕೊಂಡು ಅಪ್ಪ ಅಮ್ಮನಿಗೆ ಫೋನ್ ಮಾಡಲು ಹೋದಳು.

ಗೌಹರ್ ಮತ್ತು ಆನಾ “ಲಾಂಡ್ರಿ ಮಾಡೋದು ತುಂಬಾ ಇದೆ, ಮಾನುಮೆಂಟಲ್ ಹತ್ತಿರ ಹೊಸದೊಂದು ಲಾಂಡ್ರಿ ಅಂಗಡಿ ಇದೆಯಂತೆ, ಅಲ್ಲಿ ಹೋಗೋಣ ಮನೆಯಲ್ಲಿ ಹಾಕಿದರೆ ಇವತ್ತು ಓನರ್ ಶುರು ಮಾಡುತ್ತಾಳೆ ಮೊದಲೇ ಸರಿಯಾಗಿ ಉರಿಸಿದ್ದೇವೆ ಅವಳಿಗೆ” ಎಂದು ಹೇಳಿದರು. ಹುಡುಗಿಯೂ ಆಯ್ತು ಎಂದು ತನ್ನ ಲಾಂಡ್ರಿ ಬುಟ್ಟಿಗೆ ಬಟ್ಟೆ ತುಂಬಿಕೊಂಡು ಮನೆಯಿಂದ ಹೊರಟಳು.

 ಮಾಚರಾಜನಹಳ್ಳಿಯಲ್ಲಿ ಮುತ್ತಜ್ಜಿ, ಹಾಲ್ದೊಡ್ಡೇರಿಯಲ್ಲಿ ಮತ್ತೊಂದು ಮುತ್ತಜ್ಜಿ ಬಟ್ಟೆಯನ್ನೆಲ್ಲಾ ಒಂದು ಬುಟ್ಟಿಯಲ್ಲಿ ತುಂಬಿಕೊಂಡು ಕೆರೆ ಕಡೆಗೆ ಹೋಗುತ್ತಿದ್ದರಂತೆ. ಅಲ್ಲಿ ಬಟ್ಟೆ ಒಗೆಯೋದು ಸೋಷಿಯಲೈಜ್ ಮಾಡೋದು ಹಾಗೆ. ಇಲ್ಲಿ ಮರಿ ಮಗಳು ಬುಟ್ಟಿಯನ್ನು ಎತ್ತಿಕೊಂಡು 2 ಮೆಟ್ರೋ ಸ್ಟಾಪ್ ನಂತರ ಇಳಿದು ಬಟ್ಟೆ ಒಗೆದು, ಒಣಗಿಸಿ, ಐರನ್ ಮಾಡಿಸಿಕೊಂಡು ಬರುವ ಆಟ ಎಂದು ನಕ್ಕು ಕಾಲಚಕ್ರ ಎಂದು ಗೌಹರಿಗೆ ಹೇಳುತ್ತಾ ಬಂದಳು.

ಲಾಂಡ್ರಿ ಬುಟ್ಟಿಯೂ ಅತ್ಯಾಕರ್ಷಕವಾಗಿ ಇರುವುದನ್ನು ಮೆಟ್ರೋ ಸ್ಟೇಷನ್ನಿನಲ್ಲಿ ನೋಡಿದಳು. ಮೂವರೂ ಒಟ್ಟಾಗಿ ಹೋಗಿ ಆ ಹೊಸ ಲಾಂಡ್ರಿ ಅಂಗಡಿಯಲ್ಲಿ ತಮ್ಮ ಉಡುಪನ್ನ ಒಗೆಸಿಕೊಳ್ಳುವ ಕಾರ್ಯ ಮಾಡಲು ಶುರುಮಾಡಿದರು.

ಈ ಬಾರ್ಸಾದ ಎಷ್ಟೋ ಕಥೆಗಳಲ್ಲಿ ಪ್ರೀತಿ ಹುಟ್ಟೋದು ಈ ಲಾಂಡ್ರಿ ಅಂಗಡಿಗಳಲ್ಲಿ. ಕ್ಯೂ ನಿಂತಾಗ, ಹೆಣಭಾರದ ಬುಟ್ಟಿ ಎತ್ತಬೇಕಾದಾಗ, ಇಲ್ಲಾ ನನ್ನ ಬಟ್ಟೆಯ ತೂಕಕ್ಕೆ ನಿಮ್ಮ ಬಟ್ಟೆಯ ತೂಕ ಸೇರಿಸಿದರೆ ಕಡಿಮೆಯಾಗುತ್ತದೆ ಎಂಬ ವಿಷಯಗಳೆಲ್ಲಾ ಆಗಿ ಪ್ರೀತಿ ಶುರುವಾಗುತ್ತದೆ. ಹಂಸಲೇಖಾರವರು ಈ ಸನ್ನಿವೇಶದಲ್ಲಿದ್ದರೆ ಹಾಡು ಹೇಗೆ ಬರೆಯುತ್ತಿದ್ದರು ಎಂದು ಕಲ್ಪಿಸಿಕೊಂಡು ತನ್ನ ಟೋಕನ್ ತೆಗೆದುಕೊಂಡಳು.

ಸರತಿ ಸಾಲಿನಲ್ಲಿ ನಿಂತಿದ್ದಳು. ಅಲ್ಲಿ ಒಂದು ಗುಂಪು ಒಂದು ರೇನ್ ಬೋ ಬ್ಯಾಡ್ಜ್ ಕೊಡುತ್ತಿತ್ತು. ಬಾರ್ಸಿಲೋನಾದಲ್ಲಿ ಆಗಾಗ ಸ್ವಾತಂತ್ರ್ಯಕ್ಕಾಗಿ ದೊಡ್ಡ ದೊಡ್ಡ ಮೋರ್ಚಾಗಳು ಆಗುತ್ತಿದ್ದವು. ಹಂಗೆ ಇದು ಎಂದುಕೊಂಡು ಬ್ಯಾಡ್ಜ್ ತೆಗೆದುಕೊಂಡಳು. ಅದನ್ನ ಹಾಕಿಕೋ ಎಂದು ಹಿಂದೆ ನಿಂತಿದ್ದ ಹುಡುಗ ಹೇಳಿದ. ಸರಿ ಬೇರೆ ದೇಶದಲ್ಲಿ ನನ್ನ ವಾದ ಯಾಕೆ ಎಂದು ಹಾಕಿಕೊಂಡಳು. ಆಮೇಲೆ ನಕ್ಕು ಮಾತಿಗೆಳೆದರು.

ನಾವಿಬ್ಬರೂ ಬಾರ್ಸಿಲೋನಾದವರೇ , ಇಲ್ಲೇ ಹುಟ್ಟಿಬೆಳೆದ್ದದ್ದು, ನಮಗೆ ಈ ಸ್ವಾತಂತ್ರ್ಯ ಅತ್ಯಂತ ಮೌಲ್ಯಯುತವಾದ್ದದ್ದು ಎಂದು ಹೇಳಿದರು. ನಮ್ಮ ಗುಂಪು ಇದಕ್ಕೆ ತುಂಬಾ ಹೋರಾಡುತ್ತಿದ್ದೆ ಎಂದು ಹೇಳಿದರು. ಕತಲೂನ್ಯಾದಲ್ಲಿ ರಸ್ತೆ ರಸ್ತೆಗೆ ಒಂದು ಗುಂಪು ಅದರ ಧ್ವಜ ಹಾಕಿಕೊಂಡು ಸ್ವಾತಂತ್ರ್ಯ ಸ್ವಾತಂತ್ರ ಎಂದು ಹೇಳುತ್ತಿದ್ದರು. ಒಮ್ಮೊಮ್ಮೆ ಸಿಕ್ಕಸಿಕ್ಕವರಲ್ಲೂ ಇದನ್ನೇ ಹೇಳುತ್ತಿದ್ದರು. ಹೀಗೆ ಇದೊಂದು ಗುಂಪು ಎಂದುಕೊಂಡು ಹೂ ಹೂ ಎಂದು ತಲೆ ಆಡಿಸುತ್ತಿದ್ದಳು.

“ನಾನು ನಿಕ್, ಇವನು ನನ್ನ ಪಾರ್ಟ್ನರ್ ಶಾಲೋನ್” ಎಂದು ಪರಿಚಯ ಮಾಡಿಕೊಂಡರು. “ಓಹ್ ಹಾಯ್” ಎಂದು ತಲೆಯಲ್ಲಿ ಹಂಸಲೇಖಾ ಹಾಡನ್ನು ಗುನುಗನುಗುತ್ತಾ ಇದ್ದಳು. “ನಿನಗೆ ನಿಜವಾಗಿಯೂ ಏನೂ ಅನ್ನಿಸಲ್ಲಿಲ್ಲವಾ ?” ಎಂದು ಕೇಳಿದರು. “ಇಲ್ಲಪ್ಪ ನನಗೇನು ಅನ್ನಿಸಬೇಕು?” ಎಂದು ಮತ್ತೆ “ಜಗವೇ ಒಂದು ರಣರಂಗ” ಎಂದು ಗುನುಗುತ್ತಿದ್ದಳು. “ಸ್ಟ್ರೇಂಜ್” ಎಂದು ಮುಖ ಮಾಡಿಕೊಂಡು ನಿಂತಿದ್ದರು.

ತಕ್ಷಣ ಅಲ್ಲಿ ರೇನ್ ಬೋ ಬ್ಯಾಡ್ಜ್ ಹಾಕಿಕೊಂಡು ಬಂದವರೆಲ್ಲ “ನಮಗೆ ಕತಲೂನ್ಯ ಸ್ವಾತಂತ್ರ ಬೇಕು” ಎಂದು ಹೇಳಿದರು. ಒಂದು ಪ್ಯಾಂಪ್ಲೆಟ್ ಕೊಟ್ಟರು, “ಇದು ಯಾರು ಗೊತ್ತಾ ?” ಎಂದು ಕೇಳಿದರು. ಹುಡುಗಿಗೆ ದೇವರಾಣೆಗೂ ಗೊತ್ತಾಗಲ್ಲಿಲ್ಲ. ಚಲ್ತಿ ಕ ನಾಮ್ ಗಾಡಿ ಸಿನಿಮಾದಲ್ಲಿನ ಮೆಕಾನಿಕ್ ಪಾತ್ರಧಾರಿಗಳ ಹಾಗೆ ವೇಷ ತೊಟ್ಟ ಚೆನ್ನಾಗಿರುವ ತರುಣ.

“ಈ ದುಷ್ಟ ಸ್ಪೇನಿನ ಸರ್ಕಾರ ಫೆಡ್ರಿಕೋ ಗಾರಿಯಾ ಲೋರ್ಕಾ ಎಂಬ ಲೇಖಕನ್ನನ್ನ ಗಲ್ಲಿಗೇರಿಸಿತು, ಅವನು ಮಾಡಿದ ತಪ್ಪು ಏನು ಎಂದು ಕೇಳಿದರೆ, ಅವನು ಸರ್ಕಾರದ ವಿರುದ್ಧ ಮಾತಾಡಿದ ಆದರೆ ಅವನು ಗೇ ಎಂದು ಅವನ್ನನ್ನ ಗಲ್ಲಿಗೇರಿಸಲಾಯಿತು. ಸ್ಪೇನಿನ ಸರ್ಕಾರ ಯಾವತ್ತಿಗೂ ನಮ್ಮ ಸ್ವಾತಂತ್ರ್ಯವನ್ನ ಹತ್ತಿಕ್ಕಲು ಪ್ರಯತ್ನ ಮಾಡಿತ್ತು, ಎಲ್ ಜಿ ಬಿ ಟಿ ಅವರ ಹಕ್ಕುಗಳನ್ನು ಸರ್ವಾಧಿಕಾರದ ಸ್ಪೇನ್ ಹತ್ತಿಕ್ಕಿತ್ತಿದೆ. ಹೀಗಿದ್ದಾಗ ಅಂತಹ ದುರಾಡಳಿತವನ್ನ ನಾವು ಸಹಿಸೋದಕ್ಕೆ ಸಾಧ್ಯವೇ ಇಲ್ಲ.

ಎಲ್ ಜಿ ಬಿ ಟಿ ಯವರೆಲ್ಲಾ ಕತಲೂನ್ಯಾದ ಸ್ವಾತಂತ್ರ್ಯಕ್ಕೆ ಹೋರಾಡೇ ಹೋರಾಡುತ್ತೇವೆ” ಎಂದು ಭಾಷಣ ಮಾಡಿ ಅದರ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ತಿಳಿಸುತ್ತೇವೆ ಎಂದು ಹೇಳಿದರು. ಲಾಂಡ್ರಿ ಮಾಡಲು ಬಂದ ಜನರಿಗೆ ತುಂಬಾ ಆಶ್ಚರ್ಯವಾಯಿತು. ಕೆಲವರು ಇವೆಲ್ಲಾ ಎಂಥದ್ದು ಎಂದು ಲಾಂಡ್ರಿ ಬಟ್ಟೆಯನ್ನು ತೆಗೆದುಕೊಂಡು ಆಚೆ ನಡೆದರು. ಹುಡುಗಿಗೆ ಆಶ್ಚರ್ಯವಾಯಿತು.

ಪಾಶ್ಚಿಮಾತ್ಯ ದೇಶದವರು ಎಷ್ಟೆಲ್ಲ ಫ್ರೀ ಎಂದು ತಿಳಿದುಕೊಂಡಿದ್ದರು ಇವರಿಗೆ ಗೇ, ಲಸ್ಬಿಯನ್, ಬೈ ಸೆಕ್ಷುಯಲ್, ಟ್ರಾನ್ಸ್ ಸೆಕ್ಷುಯಲ್ ಮಂದಿಯ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಕೊಂಚವೂ ಆಸಕ್ತಿ ಇಲ್ಲದಿರುವುದು ಅವಳಿಗೆ ಪಿಚ್ಚನಿಸಿತು.

“ನೀನು ಇಂಡಿಯಾದವಳಲ್ಲವಾ ಅದಕ್ಕೆ ನಾವು ಅಂದುಕೊಂಡೆವು ನಿನಗೆ ಇದ್ಯಾವುದರ ಬಗ್ಗೆಯೂ ಒಳ್ಳೆ ಅಭಿಪ್ರಾಯ ಇಲ್ಲ ನೀನು ನಮ್ಮನ್ನು ದೂರ ಸರಿ ಎಂದು ಉಗಿಯುತ್ತೀ ಎಂದು ಅಂದುಕೊಂಡರೆ ನೀನು ಆರಾಮಾಗೇ ಇದ್ದೆಯಲ್ಲ, ಅದು ಬಹಳ ಸಂದೇಹ ಮೂಡಿಸಿತು” ಎಂದು ಅಂದರು. ಅವಳು ನಕ್ಕು, “ನಾನು ಯಾವ ಹುಡುಗನ್ನನ್ನು ಇಷ್ಟ ಪಡುತ್ತೇನೆ ಅನ್ನೋದು ನನ್ನ ವೈಯುಕ್ತಿಕ ವಿಷಯ, ಹಾಗೆಯೇ ನಿನ್ನದೂ ಕೂಡ, ಅದರಲ್ಲಿ ಹುಬ್ಬೇರಿಸುವುದು ಏನಿದೆ ?” ಎಂದು ಹುಡುಗಿ ಕೂಲಾಗಿ ಅಂದಳು.

“ಸ್ಪೇನಿನ ಸಿವಿಲ್ ವಾರ್ ಆದಾಗಿನಿಂದ ಅಂದರೆ 1936ರಿಂದ 75ರ ವರೆಗೆ ಎಲ್ ಜಿ ಬಿ ಟಿ ಅವರನ್ನು ಹಿಂಸೆ ಮಾಡಿ ಕೊಲ್ಲಲಾಯಿತು, ಫ್ರಾಂಕೋ ಅದೆಷ್ಟು ಜನರನ್ನ ಕೊಲ್ಲಿಸಿದ ಅನ್ನೋದಕ್ಕೆ ಲೆಕ್ಕವೇ ಇಲ್ಲ, ಹೆಣ್ಣುಮಕ್ಕಳನ್ನ ಹೇಗೆ ಚಿತ್ರಹಿಂಸೆ ಕೊಟ್ಟು ಈ ಸಂಗ್ರಾಮದಿಂದ ದೂರ ಇಟ್ಟರೋ ಹಾಗೆ ನಮ್ಮಂತಹ ಜನರನ್ನೂ ಹಿಂಸೆ ಮಾಡಿದರು.

ಹೆಣ್ಣುಮಕ್ಕಳ ಮೇಲೆ ನಡೆದ ಹಿಂಸೆಗೆ ಲೆಕ್ಕವಾದರೂ ಇಡುತ್ತಿದ್ದರು, ನಮ್ಮನ್ನು ಪಶುವಿಗಿಂತ ಕಡೆಯಾಗಿ ನೋಡಿದರು ಗೊತ್ತಾ? ಆಮೇಲೆ ಇದೊಂದು ಮಾನಸಿಕ ಖಾಯಿಲೆ ಎಂದು ಹಿಂಸೆ ಕೊಡಲು ಶುರುಮಾಡಿದರು, ನಮ್ಮ ಸಂಬಂಧ ಅನೈತಿಕ ಹಾಗೂ ಪ್ರಕೃತಿಗೆ ವಿರೋಧ ಎಂದೆಲ್ಲಾ ಬೊಬ್ಬೆಇಟ್ಟರು. ಆದೆಷ್ಟು ಕತಲನ್ ಹೋರಾಟಗರರನ್ನ ಸುಮ್ಮ ಸುಮ್ಮನೆ ಈ ಕಾಯ್ದೆಯಲ್ಲಿ ಬಂಧಿಸಿ ಮಜ ತೆಗೆದುಕೊಳ್ಳುತ್ತಿದ್ದರು” ಎಂದಾಗ ಹುಡುಗಿಗೆ ಆಶ್ಚರ್ಯವಾಯಿತು.

“ನಮ್ಮನ್ನು ಮೊದಲು ಆಳುತ್ತಿದ್ದ ರೋಮನ್ನರು ಸಹ ಇದನ್ನ ವಿರೋಧಿಸುತ್ತಿರಲ್ಲಿಲ್ಲ, ಯಾವಾಗ ಹೇಳು 342ನೇ ಇಸವಿಯಲ್ಲಿ ಆಳ್ವಿಕೆ ಮಾಡಿದ್ದಾಗಲೂ ಚಕ್ರವರ್ತಿ ನೀರೋ ಗೇ ಪಾರ್ಟ್ನರನ್ನ ಮದುವೆಯಾಗಿದ್ದ. ಇಷ್ಟು ವಿಶಾಲ ಹೃದಯದವರಾದ ನಾವು ಈ ಹಾಳಾದ ಸ್ಪೇನಿನವರ ಆಡಳಿತದಲ್ಲಿ ಸಿಕ್ಕಿಹಾಕಿಕೊಂಡು ನಮ್ಮ ಹಕ್ಕನ್ನೇ ಕಿತ್ತುಕೊಂಡಿದ್ದರು. ತದನಂತರ ಇತ್ತೀಚೆಗೆ ಬಾರ್ಸಾದ ಇಬಿಝಾ ದಂತಹ ಜಾಗಗಳು ನಮ್ಮನ್ನು ನೆಮ್ಮದಿಯಾಗಿ ಇರೋದಕ್ಕೆ ಬಿಡುವ ಕಾರಣ, ಕತಲೂನ್ಯಾದಲ್ಲಿ ಹಾಯಾಗಿದ್ದೇವೆ” ಎಂದು ನಿಕ್ ಬಹಳ ನೀಟಾಗಿ ಹೇಳಲು ಶುರು ಮಾಡಿದ.

“ತೀರ 1970ರ ವರೆಗೆ ನಮ್ಮನ್ನು ತುಳಿಯುವ ಕೆಲಸವನ್ನೇ ಮಾಡಿದರು. ಕತಲೂನ್ಯ ಹೋರಾಟವನ್ನ ಯಾಕೆ ನಾವು ಬೆಂಬಲಿಸುತ್ತೇವೆ ಅಂದರೆ ಇದು ಬೇರೆ ದೇಶ ಆದಾಗ ಮಾತ್ರ ನಮ್ಮ ಹಕ್ಕುಗಳನ್ನು ಸ್ಥಾಪಿಸುವುದಕ್ಕೆ ಆಗೋದು, ನಾವು ಸರೋಗೆಸಿಯಲ್ಲಿ ಮಗು ಪಡೆಯುವ ಹಾಗಿಲ್ಲ, ದತ್ತು ತೆಗೆದುಕೊಳ್ಳೋದಕ್ಕೆ ಆಗೋದಿಲ್ಲ,ಇವೆಲ್ಲವೂ ಸ್ಪೇನ್ ನಿಷೇಧಿಸಿದೆ ಆದರೆ ಕತಲೂನ್ಯಾದ ಸಂವಿಧಾನದಲ್ಲಿ ಇದನ್ನೆಲ್ಲಾ ಸೇರಿಸುವ ಆಸೆ ಇದೆ, ನಮ್ಮ ದೇಶ ಅಂದಾಗ ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಸಂವಿಧಾನವನ್ನು ಬರೆಯೋದು ಸಾಧ್ಯ” ಎಂದು ಹೇಳಿದಾಗ ಹುಡುಗಿ ಒಮ್ಮೆ ಅವಕ್ಕಾದಳು.

“ಆಯ್ಯೋ ಡ್ರೈಯರ್ ಶೀಟ್ ತರೋದೆ ಮರೆತುಹೋಯ್ತು, ಏನಪ್ಪಾ ಮಾಡೋದು” ಎಂದು ತಲೆ ಚೆಚ್ಚಿಕೊಳ್ಳುತ್ತಿರುವಾಗ, “ಗಾರ್ಸಿಯೋದ ಪೋಸ್ಟರನ್ನೇ ಉಪಯೋಗಿಸು, ಇದು ಡ್ರೈಯರ್ ಶೀಟೇ” ಎಂದರು. “ಪರವಾಗಿಲ್ಲ ಜಗತ್ತಿನ ಕೊಳೆ ತೆಗೆಯೋದಕ್ಕೆ ಹೋಗಿ ತಾನು ಸತ್ತ, ಇನ್ನೂ ಈ ಶೀಟಿನಲ್ಲಾದರೂ ಉಳಿಯಲಿ, ಬಟ್ಟೆ ಕೊಳೆ ತೆಗೆಯೋಕೆ ಬೇರೆದನ್ನೇ ಉಪಯೋಗಿಸುತ್ತೀನಿ” ಎಂದು ಶೀಟ್ ಕೊಂಡುಕೊಳ್ಳಲು ಹೋದಳು. ಅಲ್ಲಿ ನೂರಿ ನಗುತ್ತಾ ಕಾಯುತ್ತಿದ್ದಳು…

। ಮುಂದಿನ ವಾರಕ್ಕೆ ।

October 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: