ಸೋಂಬೇರಿ ನಾನು ಅಪ್ಪಟ ಸೊಂಬೇರಿ..

ಎಂ ಪ್ರಸನ್ನಕುಮಾರ್

ಹುಟ್ಟಾ ಸೋಂಬೇರಿಯಾದ ನನ್ನಂತಹವನಿಗೆ ಒಂದೇ ಗುಟುಕಿಗೆ ಇಷ್ಟವಾಗಿದ್ದು ಈ ಮಲೆನಾಡು ಅನ್ನೋ ರಮಣೀಯ ಜಾಗ. ಅದರಲ್ಲೂ ಈ ಚಳಿಗಾಲದಲ್ಲಿ ಬೇಗ ಏಳುವುದ ತಪ್ಪಿಸಿಕೊಳ್ಳಲು ಆ ಮಹಾನ್ಮಾತೆ ನನಗೆ ದಯಪಾಲಿಸಿರೋ ವಾತಾವರಣ. ಬೇಗ ಏದ್ದು ಕೆಲಸಕ್ಕೆ ಹೊರಡು ಅನ್ನುವವರಿಗೆ ಸಲೀಸಾಗಿ ಚಳಿಯೆಂಬ ದೃಷ್ಟಾಂತ ಕಾರಣ ಕೊಟ್ಟು ಹೊದ್ದು ಮಲಗಲು ನನಗೆ ಆ ಮಾತೆ ಕೊಟ್ಟಿರುವ ಪರಮ ಅವಕಾಶವೆಂದೇ ನಾನು ಯಾವೊತ್ತೂ ಸಂಭ್ರಮಿಸುತ್ತಿದ್ದೇನೆ. ಹಾಗಾಗಿ ಮಾಡುವ ಕೆಲಸ ಬಹಳಷ್ಟು ಬಾಕಿ ಉಳಿದುಕೊಂಡಿರುವುದರಿಂದಲೇ ಕುತೂಹಲ ನನ್ನೊಳಗೆ ಯಾವೊತ್ತೂ ಜೀವಂತ ಇಲ್ಲದಿದ್ದರೆ ಸಮಯಕ್ಕೆ ಅಧೀನನಾಗಿ ಮುಗಿಸಬೇಕೆಂಬ ಇರಾದೆಗೊಳಪಟ್ಟು ಕೆಲಸ ಮುಗಿಸಿಬಿಟ್ಟರೆ ಅದೊಂದು ಕಾರ್ಯ.. ಮುಗಿದೇಹೋಯಿತಲ್ಲ ಮತ್ಯಿನ್ನೇನು ಮಾಡಲಿ ಅಂದುಕೊಂಡ ಕ್ಷಣ ಮಹಾ ರೋಮಾಂಚನದ ಆ ಸೋಂಬೇರಿತನ ಬರಲು ಅಂಗಾಲಾಚುತ್ತಿರುತ್ತೆ.

ಕರುಣಾಮಯಿ ನಾನಂತೂ ಇಂತದ್ದಕ್ಕೆ ಮನಸಾರೆ ಸೋತುಬಿಡೋ ಜಾಯಮಾನದವನೇ. ಹಾಗಾಗಿ ಕೆಲಸ ಬಾಕಿ ಉಳಿಸಿಕೊಳ್ಳೊದೇ ಒಂಥರಾ ಥ್ರಿಲ್. ಅದು ಸೋಂಬೇರಿತನ ಕರುಣಿಸೋ ಮಹಾ ಪ್ರಸಾದ. ಕಾಲೇಜಿನ ಪರೀಕ್ಷೆಗಳಲ್ಲೂ ಹೀಗೇ ಆಗುತ್ತಿತ್ತು, ಗೊತ್ತಿದ್ದನ್ನೆಲ್ಲಾ ಬರೆದುಬಿಡುತ್ತಿದ್ದೆ. ಉಳಿದದ್ದು ಶರಂಪರ ತಲೆ ಕೆಡಿಸಿಕೊಂಡರೂ ನೆನಪಾಗುತ್ತಿರಲಿಲ್ಲ. ಯಾಕೆಂದರೆ ಓದಿಕೊಳ್ಳುವಾಗ ಅದೇ ಜೊತೆಗಿರುತ್ತಿತ್ತಲ್ಲ ಸೋಂಬೇರಿತನ..

ಎಷ್ಟೆಲ್ಲಾ ಓದಿಮುಗಿಸಿದರೆ ಪುಸ್ತಕಗಳನ್ನೆಲ್ಲಿ ತರುವುದು ಮತ್ತೆ ಲೈಬ್ರೆರಿಗೆ ಹೋಗೋದು ಅದ್ಯಾವನ ಕೈಲಿ ಆಗುತ್ತೆ ಇಷ್ಟು ಸಾಕಲ್ಲವ ಓದಿರೋದು, ಅಷ್ಟಕ್ಕೂ ನಾನು ಓದಿ ಬರೆದರೂ ನನ್ನಂತಹ ಸೋಂಬೇರಿಯ ಕೈಗೆ ಸಿಕ್ಕು ಕಾಟಾಚಾರಕ್ಕೆ ಮಾರ್ಕು ಹಾಕಿದರೆ?. ಅಲ್ಲೂ ಸೋಂಬೇರಿ ಗುರುಗಳಿಲ್ಲ ಅಂತ ವಿಶ್ವವಿದ್ಯಾಲಯವೇನೂ ನನಗೆ ಮುಚ್ಚಳಿಕೆ ಬರೆದು ನೋಟೀಸ್ ಬೋರ್ಡಿನಲ್ಲಿ ಹಾಕಿರಲಿಲ್ಲವಲ್ಲ ಅನ್ನಿಸಿಬಿಡುತ್ತಿತ್ತು. ವೇಳೆ ನೋಡಿದರೆ ಇನ್ನೂ ಬಹಳವಿರುತ್ತಿತ್ತು ಏನು ಮಾಡೋದು ಎದ್ದು ಹೋದರೆ ಎದುರಾಳಿ ಗುಂಪು ವ್ಯಂಗ್ಯದ ನಗು ಬೀರುತ್ತಿತ್ತು.. ಆಕಡೆ ಬರಲು ಹಾಯ್ ಎನ್ನುತ್ತಿದ್ದ ಸೋಂಬೇರಿತನ. ಮೆಲ್ಲಗೆ ಪೆನ್ನಿಗೆ ಕ್ಯಾಪ್ ಇಟ್ಟುಬಿಡುತ್ತಿದ್ದೆ ಹಾಗೆ ಪಸ್ಟ್ ಕ್ಲಾಸ್ ಮಾರ್ಕ್ ತಗೀಬೇಕೆಂಬ ಆಸೆಗೂ ಮತ್ತೊಂದು ಕ್ಯಾಪ್ ಸಹಜವಾಗಿ ಸಿಗುತ್ತಿತ್ತು. ಇಂತ ಸೋಂಬೇರಿತನ ನನಗೆ ಚಿಕ್ಕಂದಿನಿಂದಲೇ ಬಂದಿದ್ದು. ಹಾಸಿಗೆ ಬಿಚ್ಚಿ ಮಲಗಿಕೊಳ್ಳೋರ್ಯಾರು ಅಂತ ಚಾಪೆಮೇಲೇ ಮಲಗಿಬಿಡುತ್ತಿದ್ದೆ.

ಚಿಂತೆ ಇಲ್ಲದವನಿಗೂ ಸೋಂಬೇರಿತನಕ್ಕೂ ಅವಿನಾಭಾವ ಸಂಬಂಧ, ಅವ್ವ ಉಣ್ಣಿಸುತ್ತೇನೆಂದು ಗುಟುಕಿಸಲೂ ಸೋಂಬೇರಿತನ ತೋರುವ ನನ್ನ ಬಾಯಿಗೆ ತುರುಕಿದ್ದು ಗುರುತ್ವಾಕರ್ಷಣೆಯಿಂದ ಜಠರಕ್ಕೆ ಚಲಿಸಿರಬೇಕು. ಹಾಗಾಗಿ ನಾನು ಬೆಳೆದುಕೊಂಡೆ. ಅದಿರಲಿ ಮಲೆನಾಡ ಜನ ಕೆಲಸಕ್ಕೆಂದು ಹೊರಡುವುದೇ ಹತ್ತಕ್ಕೆ. ಆದರೆ ನಮ್ಮ ಬಯಲು ಸೀಮೆಯಲ್ಲಿ ಹಾಗಲ್ಲ, ಹತ್ತಕ್ಕಾಗಲೇ ಒಂದೊತ್ತಿನ ಕೆಲಸ ಮುಗಿಸಿ ಬಂದಿರುತ್ತಾರೆ. ಅದು ನನಗೆ ಒಗ್ಗುವುದಿಲ್ಲ. ಪ್ರಕೃತಿ ದಯಪಾಲಿಸಿರುವ, ದೇಹ ಒಪ್ಪಿಕೊಂಡಿರುವ, ನಿದ್ದೆ ಮಾಡುವ ಅವಕಾಶ ಕಳೆದುಕೊಳ್ಳಲು ನಾನಂತೂ ಸುತಾರಂ ಸಿದ್ದನಿಲ್ಲ. “ಬೇಗನೆದ್ದು ವಾಕ್ ಮಾಡು ಸಿವಾ” ಅನ್ನೋ ಸ್ನೇಹಿತರ ಮಾತು ನನ್ನೆದುರು ಅರಣ್ಯರೋಧನ. ಅದ್ಯಾವುದೋ ವಾಚ್ ಕಟ್ಟಿಕೊಂಡು ಗೂಗಲ್ ಮ್ಯಾಪ್ ಟ್ರೇಸಿಂಗ್ ತೆಗೆದು ಹೆಜ್ಜೆಗಳ ಲೆಕ್ಕ, ದೂರದ ಲೆಕ್ಕ, ಶಕ್ತಿ ಖರ್ಚು ಮಾಡಿದ ಲೆಕ್ಕ ಯಪ್ಪಾ.. ವಾಟ್ಸಪ್ ಸ್ಟೇಟಸ್ ಹಾಕಿ ಮೆರೆದಿದ್ದೂ ಮೆರೆದಿದ್ದೆ.

ದೇಹಕ್ಕೆ ಖರ್ಚು ಮಾಡೋ ಅವಕಾಶಗಳೇ ಇಲ್ಲ ಅನ್ನುವುದು ಗೊತ್ತಿರುವಾಗ ತಿನ್ನೋದನ್ನೇ ಕಡಿಮೆ ಮಾಡಿದ್ದರೆ ಈ ಲೆಕ್ಕಾ ಬೇಕಿತ್ತಾ ಅನ್ನೋದನ್ನ ಬಿಟ್ಟು ಬಿಪಿ, ಷುಗರ್ರು ಇಳಿದೇ ಹೋಯಿತೆಂದು ಟೆಸ್ಟ ಮಾಡಿಸಿದ್ದೂ ಮಾಡಿಸಿದ್ದೇ. ಹತ್ತಾರು ಎಕರೆ ಹೊಲ ಉತ್ತು, ಲೆಕ್ಕ ಹಾಕಿದರೆ ನೂರಾರು ಮೈಲಿ ನಡಿಗೆಯನ್ನ ತನ್ನ ಖಾತೆಗೆ ಜಮಾಯಿಸಿಕೊಂಡಿದ್ದ ನನ್ನಪ್ಪನಿಗೆ ಆ ಡಾಕ್ಟರ್ ಇನ್ಸುಲಿನ್ ಕೊಟ್ಟು ಐಸಿಯುನಲ್ಲಿ ಮಲಗಿಸಿದ್ದಾಗಲೂ ಷುಗರ್ರ ಕಂಟ್ರೋಲ್ ಮಾಡಕ್ಕಾಗಲ್ಲ ಅಂತಾರಲ್ಲ ಅಂತವರ ಮಾತ ನನ್ಯಾಕೆ ನಂಬಲಿ.

ದೇಹಕ್ಕೆ ಗೊತ್ತಿದೆ ಅದನ್ನ ಕಂಟ್ರೋಲ್ ಮಾಡಿಕೊಳ್ಳೋದು ಅದೇ ಆಗಲ್ಲಾಂತ ಕೈ ಚಲ್ಲೋವಾಗ ನಾವೇನ್ಮಾಡೋಕಾಗುತ್ತೆ. ಅಲ್ಲಿಗಲ್ಲಿಗೆ ಬದುಕು ನೇರ ಅಂತ ಅಂದುಕೊಂಡು ದೇಹ ಕೇಳೊ ಸೋಂಬೇರಿತನಾನ ದಯಪಾಲಿಸಬೇಕು ಅಂತಾನೇ ನಾನಂತೂ ಹಾಯಾಗಿ ಮಲಗಿ ಅದನ್ನ ಸುಖಿಸುತ್ತೇನೆ!!. ಯಾರೋ ಏನೋ ಹೇಳ್ತಾರೇಂತ ನಾನ್ಯಾಕೆ ನಂಬಲಿ ನನ್ನ ದೇಹ ನನಗೆ ಹೇಳಬೇಕಲ್ಲ, ನಾನು ಕೋಡೋ ದಂಡನೆ ಒಪ್ಪಿಕೊಳ್ಳಬೇಕಲ್ಲ.

ಮಲಗಿ ಸುಖಿಸೋ ದೇಹ ಬಹಳ ಹೊತ್ತು ನಡೆಯುವುದನ್ನ ತನಗಿಷ್ಟವಾದಾಗೊಮ್ಮೆ ಮನಸ್ಸಿಗೆ ಮುಟ್ಟಿಸುತ್ತದೆ ಹಾಗೂ ಸಕಲವೂ ತನಗೆ ಪೂರಕವಾಗಿದ್ದಾಗೊಮ್ಮೆ ನಡೆದುಬಿಡು ಅನ್ನುತ್ತದೆ. ಆಗ ನನ್ನಷ್ಟಕ್ಕೆ ನಾನೇ ನಡೆದು ಹೋಗುತ್ತೇನೆ, ಗುರಿ ಯಾವೊತ್ತೂ ಇಟ್ಡುಕೊಳ್ಳದೇ.. ಅದಕ್ಕೆ ಕೆಂಪನೆಯ ಸೂರ್ಯನೂ ಬೇಕಾಗಿರಲ್ಲ, ತಣ್ಣನೆಯ ಚಂದ್ರನೂ ಬೇಕಾಗಿರೊಲ್ಲ. 

ಇಬ್ಬನಿಯ ತಂಪೂ ಬೇಡ. ಸುಮ್ಮನೆ ಹೋಗುತ್ತಿರಬೇಕು ಅನ್ನೋದು ಸೊಂಬೇರಿಯ ಯಾವೊತ್ತಿನ ಆಶೆ ಅದು. ಇದರಿಂದಾಗೋ ಸವಲತ್ತು ಏನು? ವೇಳೆಯ ಕಟ್ಟುಪಾಡೂ ಇಲ್ಲ, ಮುಂದ್ಯಾವುದೋ ಮಾಡಬೇಕಾದ ಕೆಲಸವೂ ದುತ್ತೆಂದು ಬಿದ್ದುಬಿಟ್ಟಿರಲ್ಲ ನಾನು ನನ್ನಿಷ್ಟದಂತ ನಡಿಗೆ ಅದರಲ್ಲೂ ಸೋಂಬೇರಿಯ ನಡಿಗೆ ಗೊತ್ತಲ್ಲ ಎಲ್ಲವನ್ನೂ ಪರಾಂಬರಿಸಬೇಕು.. ಬಿರಬಿರನೆ ಹೋಗಬೇಕೆಂದೇನಿಲ್ಲ ಅಲ್ಲೆಲ್ಲೋ ರಸ್ತೆಯಲ್ಲಿ ಸತ್ತು ಅಂಟಿಕೊಂಡಿರೋ ಜೀವಿಯ ಜೀವ ಅಷ್ಟೆ ಅನ್ನೊ ವಾಸ್ತವ ಪ್ರಜ್ಞೆ ಅದನ್ನ ಅಲ್ಲೇಲ್ಲೋ ಕುಹೋ ಅನ್ನೋ ಕೋಗಿಲೆಯ ದ್ವನಿಯಷ್ಟೇ ಸಹಜವಾಗಿ ಒಪ್ಪಿಕೊಂಡು ನಡೆದು ಯತಾಪ್ರಕಾರ ಹುಟ್ಟು, ಸಾವು, ಬೆಳಗು, ಬೈಗು ಚಿಂತಿಸದೇ ಅವಾಗಿನ ಸುತ್ತಲಿದ್ದನ್ನ ನೋಡುತ್ತಾ ಹೋಗಿಬಿಡೋದು ಸೋಂಬೇರಿತನ ಅಂತ ಕಿಚಾಯಿಸಿದರೆ ನಾನೇನು ಮಾಡಲಿ. ಇವತ್ತಾಗದಿದ್ದರೆ ನಾಳೆ ಮಾಡಿದರಾಯಿತು ಅಂತ ಪೆಂಡಿಂಗ್ ಇಟ್ಟಿರೋದರಿಂದಲೇ ನಾಳೆಯ ಬಗ್ಗೆ ಕುತೂಹಲ ಉಳಿದುಕೊಳ್ಳುತ್ತೆ.

ಇವತ್ತಿನದ್ದ ಇವತ್ತೇ ಮುಗಿಸಿ ನಾಳೆಗೇನು ಮಾಡುವುದು ಅಂತ ಕೂರೋನು ಸೋಂಬೇರಿಯಾಗಲಾರ. ಆತ ದುಡಿದು ಗುಡ್ಡೆ ಇಟ್ಟಿದ್ದರ ಕಾವಲುಗಾರ ಅಷ್ಟೇ. ಅದಕ್ಕೇನಿದ್ದರೂ ಹುಟ್ಟಾ ದಿವ್ಯನಿರ್ಲಕ್ಷವೊಂದನ್ನ ಒಳಗೆ ಜೀವಂತವಾಗಿಟ್ಟುಕೊಂಡಿರಲೇ ಬೇಕು. ಇವತ್ತಿನ ಸಕಲೆಂಟು ಜ್ಞಾನದ ದಾರಿಗಳಲ್ಲಿ ಇವತ್ತು ಮಾಡಿದ್ದು ನಾಳೆಗೆ ಹಳತು ಅನ್ನುವಾಗ ಹೊಸತು ಮಾಡಲು ಸೋಂಬೇರಿಗೆ ದಾರಿಗಳು ಯಾವೊತ್ತೂ  ಮುಕ್ತಮುಕ್ತ. ತನ್ನದೇ ಪ್ರತ್ಯೇಕ ಅಸ್ತಿತ್ವ ತೋರಲು ಬೆಳಗ್ಗೆದ್ದರೆ ಅವಕಾಶಗಳ ಪ್ರವಾಹ. ಅದು ಸೋಂಬೇರಿಯಲ್ಲದವನಿಗಿರುವುದಿಲ್ಲ. ಇವತ್ತಿನ ಕೆಲಸ ಮುಗಿದ ಮೇಲೆ ಮುಂದೇನು ಎಂಬುದು ಆತನ ನಿರಂತರ ಸವಾಲು. ಅದು ಸೋಂಬೇರಿಗಿಲ್ಲಬಿಡಿ.

ಸಹಜವಾಗಿ ಆತ ನಿರಂತರ ಕುತೂಹಲಕ್ಕೆ ತೆರೆದುಕೊಳ್ಳುವ ಅದೃಷ್ಟಶಾಲಿ. ಹಾಗಾಗಿ ಒಂಬತ್ತರ ನಂತರ ಚುಮುಚುಮು ಚಳಿಕಳೆದು ಚುರುಚುರು ಬಿಸಿಲು ತರುವ ಮಲೆನಾಡು, ಸೋಂಬೇರಿಯಾದ ನನ್ನಂತಹವನಿಗೆ ಹೇಳಿ ಮಾಡಿಸಿದ ಜಾಗ. ಒಂಬತ್ತಕ್ಕೊ ಹತ್ತಕ್ಕೋ ಇಷ್ಟವಾದಾಗ, ಮಜಾ ಅನ್ನಿಸಿದಾಗ ಎದ್ದು ತೆಳ್ಳಗೆ ಮಾಡಿರೋ ಅಕ್ಕಿರೊಟ್ಟಿಗೆ ತುಪ್ಪಹಾಕಿಕೊಂಡು ಕಾಯಿ ಚಟ್ನಿ ಒಂದು ನಿಂಬೆಕಾಯಿ ಉಪ್ಪಿನಕಾಯಿ ನೆಂಚಿಕೊಂಡು ಸ್ವಲ್ಪ ಮೊಸರಿನ ಜೊತೆಗೆ ನಿಧಾನಕ್ಕೆ ತಿಂದು ಮುಗಿಸಿ, ಇವತ್ತು ಮಾಡದೇ ಇದ್ದರೂ ಪ್ರಪಂಚವೇನೂ ಮುಳುಗಿಹೋಗಲ್ಲ ಅನ್ನಿಸುವಂತ ಕೆಲಸಗಳ್ಯಾವುದಾದರೂ ಇದ್ದಾವೆ ಅನ್ನಿಸಿದರೆ ಅವನ್ನೆಲ್ಲಾವೂ ಮರೆತು ಮೆಲ್ಲಗೆ, ತಣ್ಣಗೆ ಮನೆಯಿಂದ ಹೊರಗೆ ಅಡಿಯಿಡುವ ಸುಖ ಸೋಂಬೇರಿಗಲ್ಲದೇ ಮತ್ಯಾರಿಗೆ ದಕ್ಕೀತು. ಕಳೆದುಕೊಳ್ಳದಿರಿ ಅದನ್ನು. ನಾನಂತೂ ಸುತಾರಾಂ ಸಿದ್ದನಿಲ್ಲ. ಏನಂತೀರ.. ಕ್ರಿಯಾಶೀಲರ ಕ್ಷಮೆಯಿರಲೀ..

‍ಲೇಖಕರು Avadhi

December 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಚಂದ್ರಪ್ರಭ ಕಠಾರಿ

    …ಲೇಖನ ಉಲ್ಲಾಸದಿಂದಿದೆ..
    ಮಜಾವಾಗಿದೆ, ಸೊಂಬೇರಿಯ ದೈನಂದಿನ ಬದುಕನ್ನು ಅನುಭವಿಸುವ ಪರಿ..ಮತ್ತೆ …ಬರೆಯಲು ಸೋಂಬೇರಿತನ ಮಾಡದೆ ಇಂಥ ಹಲವು ಲೇಖನಗಳು ನಿಮ್ಮಿಂದ ಬರಲಿ..

    ಪ್ರತಿಕ್ರಿಯೆ
  2. Mahantesh Soppimath

    ಇಷ್ಟೊಂದ್ ಹೆಂಗಪ್ಪಾ ಒದೋದು ಅಂತ ಸೋಂಬೇರಿತನ ಮಾಡ್ಕೊಳ್ಳದೇ ಓದಿದ್ದೀನಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: