ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೊಸೆಯ ತೊಡೆಯ ಮೇಲೆಯೇ ಮಲಗಿ..

ಆಧಾರ ರಹಿತ ಆಪಾದನೆಗೆ ಅವ್ವನ ಅಂಕುಶ !

s r hiremutt

ಎಸ್ ಆರ್ ಹಿರೇಮಠ

ನಿರೂಪಣೆ : ಚಂದ್ರಶೇಖರ ಬೆಳಗೆರೆ

ನನ್ನ ಹುಟ್ಟೂರು ಅಂದಿನ ಧಾರವಾಡ ಜಿಲ್ಲೆಯ (ಈಗ ಗದಗ ಜಿಲ್ಲೆ) ರೋಣ ತಾಲೂಕಿನ ಬೆಳವಣಿಕೆ ಗ್ರಾಮ. ನನ್ನ ತಂದೆ ಅವರು ಅಲ್ಲಿನ ಸಹಕಾರ ಸಂಘದಲ್ಲಿ ಕೆಲ ಕಾಲ ಚೇರ್ಮನ್ ಆಗಿದ್ದರು. ಊರಿನ ಸಂತೆ ನಡೆಯುವ ಜಾಗ ಬದಲಾವಣೆಗೆ ಸಂಬಂಧಿಸಿದಂತೆ ವರ್ತಕರು ಮತ್ತು ಬಡ ನಾಗರಿಕರ ನಡುವೆ ವಿವಾದ ಸಂಭವಿಸಿದಾಗ ನನ್ನ ತಂದೆ ಹಳ್ಳಿಯ ಬಡವರ ಸಲುವಾಗಿ ಒಂದು ದಾವೆ ಹೂಡಿದರು. ಇದು ಅಲ್ಲಿನ ಪ್ರಭಾವಶಾಲಿಗಳ ಕಣ್ಣು ಕೆಂಪಾಗಿಸಿತು. ಅವರೆಲ್ಲ ಸೇರಿ ನನ್ನ ತಂದೆಯನ್ನು ಕೊಲೆ ಮಾಡುವ ಸಂಚು ಮಾಡಿದರು.

ammana nenapu book2ಅಪ್ಪ ತಲೆಗೆ ಸದಾ ಗಾಂಧಿ ಟೋಪಿ ಹಾಕುತ್ತಿದ್ದರು. ಕೊಲೆಗಡುಕರು ಅಪ್ಪನನ್ನು ಬೆನ್ನು ಹತ್ತಿದಾಗ ನಮ್ಮ ಕುಟುಂಬದ ಹಿತೈಷಿಯೊಬ್ಬರು, ಅವರಂತೆ ಕಾಣುವ ಮತ್ತೊಬ್ಬರಿಗೆ ಅವರ ವೇಷ ಭೂಷಣ ತೊಡಿಸಿ ಎಲ್ಲರಿಗೂ ಕಾಣುವಂತೆ ಸೋಸೈಟಿ ರೂಮಿಗೆ ಕಳುಹಿಸಿದರು. ನಂತರ ತಂದೆಯನ್ನು ಸುರಕ್ಷಿತವಾಗಿ ಊರಿನಿಂದ ಹೊರಗೆ ಕಳುಹಿಸಿದರು. ಅಪ್ಪ ರೈಲು ಹಿಡಿದು ಹೇಗೋ ಬಿಜಾಪುರ ತಲುಪಿದರಂತೆ. ಬಡವರ ಪರವಾಗಿ ಹೋರಾಡಿ ಅಪ್ಪ ಬಲಾಢ್ಯರ ವಿರೋಧ ತಾಳದೆ ಊರು ಬಿಟ್ಟ ವಿಷಯವನ್ನು ಅವ್ವ ನನಗೆ ಪದೇಪದೇ ಹೇಳುವ ಮೂಲಕ ಹೋರಾಟದ ಕಿಚ್ಚು ಹಚ್ಚುತ್ತಿದ್ದಳೇನೋ ಅನ್ನಿಸುತ್ತದೆ.

ಅದೇ ಕಡೆ, ನಾವು ಬೆಳವಣಿಕೆ ಗ್ರಾಮವನ್ನು ಬಿಟ್ಟು ತಾಯಿಯ ತವರು ಮನೆ ಬಿಜಾಪುರಕ್ಕೆ ಬಂದು ನೆಲೆಸಿದೆವು. ಅಲ್ಲಿ ಬಾಡಿಗೆ ಮನೆ ಹಿಡಿದೆವು. ತಂದೆಗೆ ಕ್ಷಯ ರೋಗ ತಗುಲಿತು. ಆ ಕಾರಣ ಅವರು ಎಂದಿಗೂ ನನ್ನನ್ನು ತೊಡೆ ಮೇಲೆ ಕುಳ್ಳರಿಸಿಕೊಂಡು ಮುದ್ದು ಮಾಡಲಿಲ್ಲ ಎಂದು ಅವ್ವ ಕೊನೆಯವರೆಗೂ ಕೊರಗುತ್ತಲೇ ಇದ್ದಳು.

ಐದು ವರ್ಷದವನಿದ್ದಾಗಲೇ, ತಂದೆಯನ್ನು ಕಳೆದುಕೊಂಡ ನನಗೆ ತಾಯಿಯೇ ಎಲ್ಲವೂ ಆದಳು. ನನ್ನ ಬದುಕಿನ ಮತ್ತೊಂದು ಹೆಮ್ಮೆಯ ವಿಚಾರವೆಂದರೆ, ನನ್ನ ತಾಯಿಯ ಅಕ್ಕ ಅಂದರೆ ನನ್ನ ದೊಡ್ಡವ್ವ ನನ್ನನ್ನು ಅಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಅವರಿಗೆ ಮಕ್ಕಳಿಲ್ಲದ ಕಾರಣ ನನ್ನನ್ನು ಬಹಳ ಪ್ರೀತಿಯಿಂದ ಸಲಹುತ್ತಿದ್ದರು. ನನ್ನ ಬದುಕಿನಲ್ಲಿ ಅವರ ಪ್ರಭಾವವೂ ಮಹತ್ವಪೂರ್ಣವಾದದ್ದು. ವಿಶೇಷವಾಗಿ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಆಕೆಯೇ ನನ್ನ ಮಾರ್ಗದರ್ಶಿ. ಅವ್ವ ರಾಚವ್ವ ಆದ್ರೆ ದೊಡ್ಡವ್ವ ನಿಂಬವ್ವ ಆಗಿದ್ದರು. ನನಗೆ ಒಬ್ಬ ಅಣ್ಣ ಹಾಗೂ ಒಬ್ಬ ತಂಗಿ. ಇದು ನಮ್ಮ ಕುಟುಂಬ.

ಅಂದಹಾಗೆ ಬಿಜಾಪುರದಲ್ಲಿ ನನ್ನ ತಂದೆ ವಾಸದ ಮನೆಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡುತ್ತಿದ್ದರು. ಅವರ ಅಕಾಲಿಕ ಮರಣ ನಮ್ಮ ಬದುಕನ್ನು ಜರ್ಝರಿತಗೊಳಿಸಿತು. ತಾಯಿ ಹತ್ತಿ ಬಟ್ಟೆಗೆ ನೂಲು ತೆಗೆಯುವ ಉಪಜೀವನ ಆರಂಭಿಸಿ ನಮ್ಮನ್ನು ಬೆಳೆಸಿದರು. ಆರ್ಥಿಕ ಬಡತನವಿದ್ದರೂ ಆಧ್ಯಾತ್ಮಿಕತೆಯ ಬಲ ತಾಯಿಗೆ ಆತ್ಮ ಸ್ಥೈರ್ಯವನ್ನು ನೀಡಿತ್ತು. ಬಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಬಂತನಾಳದ ಜಾತ್ರೆಗೆ ಅವ್ವ ನನ್ನನ್ನು ಪ್ರತಿವರ್ಷವೂ ತಪ್ಪದೇ ಕರೆದುಕೊಂಡು ಹೋಗುತ್ತಿದ್ದರು. ಈಗ ಪ್ರವಚನದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಸಿದ್ಧೇಶ್ವರ ಸ್ವಾಮಿಗಳ ಗುರುಗಳು ಬಂತನಾಳ ಶಿವಯೋಗಿಗಳು.

ಅವ್ವನ ಜೊತೆ ಪದೇ-ಪದೇ ಅಲ್ಲಿಗೆ ಹೋಗುತ್ತಿದ್ದ ನಾನು ಅವರ ಪ್ರವಚನಕ್ಕೆ ಮಾರು ಹೋದೆ. ಅವರು ತಮ್ಮ ಪ್ರವಚನದಲ್ಲಿ ಕೇವಲ ವಚನಗಳನ್ನಷ್ಟೇ ಅಲ್ಲದೆ, ಭಗವದ್ಗೀತೆ, ಶೂನ್ಯ ಸಂಪಾದನೆ, ಸಿದ್ಧಾಂತ ಶಿಖಾಮಣಿ ಮುಂತಾದ ಗ್ರಂಥಗಳ ಬಗ್ಗೆ ಮನ ಮುಟ್ಟುವಂತೆ ಪ್ರವಚನ ಮಾಡುತ್ತಿದ್ದರು. ಅವ್ವ ಪ್ರತಿ ಶುಕ್ರವಾರ ನನ್ನನ್ನು ದರ್ಗಾಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿಯೂ ಸಹ ಅಮ್ಮನೊಂದಿಗೆ ನಾನು ಕೈಮುಗಿದು ಪ್ರಾರ್ಥಿಸುತ್ತಿದ್ದೆ. ನಾನು ಶಾಲೆಯಲ್ಲಿ ಒಮ್ಮೆ ಭಗವದ್ಗೀತೆ ಸ್ಪರ್ಧೆಯಲ್ಲಿ ಬಹುಮಾನ ಪಡೆದೆ. ಅವ್ವ ಮತ್ತು ದೊಡ್ಡವ್ವ ಆಗ ಅತೀವ ಆನಂದಪಟ್ಟಿದ್ದು ನನಗೆ ಇನ್ನೂ ನೆನಪಿದೆ.

ಅವ್ವ ಬಹುತೇಕ ವಚನಗಳನ್ನು ಸಂದರ್ಭಕ್ಕೆ ತಕ್ಕಂತೆ ನಿರರ್ಗಳವಾಗಿ ಹೇಳುತ್ತಿದ್ದಳು. ಅದರಲ್ಲೂ ಅಲ್ಲಮಪ್ರಭುವಿನ ವಚನಗಳನ್ನು ಆಕೆ ಪದೇ ಪದೇ ಹೇಳುತ್ತಿದ್ದಳು. ಮನದ ಮುಂದಣ ಆಸೆಯೇ ಮಾಯ.., ಎಂಬ ವಚನ ಕೇಳಿದಾಗಲೆಲ್ಲ ಅವ್ವನ ಮುಖವೇ ಈಗಲೂ ನನ್ನ ಕಣ್ಣ ಮುಂದೆ ನಿಲ್ಲುತ್ತದೆ.
ಬಿಜಾಪುರದ ಷಹಾಪುರಪೇಟೆ ಮುಳ್ಳ ಹಲಸಿ ಆದಿಲ್ ಶಾಹಿ ಕೋಟೆಯಲ್ಲಿದ್ದ 11ನೇ ನಂಬರ್ ಶಾಲೆಯಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ದೊಡ್ಡವ್ವ ನನ್ನ ಶಾಲೆ ಖರ್ಚು ನೋಡಿಕೊಳ್ಳುತ್ತಿದ್ದಳು. ಅಷ್ಟೇ ಅಲ್ಲ, ನನಗೆ ಶಿಸ್ತಿನಿಂದ ಓದುವುದನ್ನು ಹೇಳಿಕೊಟ್ಟಳು. ನಾನು ಎಸ್ಎಸ್ಎಲ್ಸಿ ಯವರೆಗೆ ಕಾಲಿಗೆ ಚಪ್ಪಲಿ ಹಾಕುತ್ತಿರಲಿಲ್ಲ. ನಾನು ಶಾಲೆಯಲ್ಲಿ ಯಾವಾಗಲೂ ನಂಬರ್ ಒನ್ ಆಗಿದ್ದೆ. ಇದಕ್ಕಾಗಿ ನನಗೆ ಸ್ಕಾಲರ್ಶಿಪ್ ಬರುತ್ತಿತ್ತು.

ಅವ್ವ ಮತ್ತು ದೊಡ್ಡವ್ವ ಸೇರಿ ನಮ್ಮೆಲ್ಲರಿಗೆ ಹೇಗೆ ಊಟ-ಬಟ್ಟೆ-ಹಚಡಕ್ಕೆ ಹಣ ಹೊಂದಿಸುತ್ತಿದ್ದರೋ ಕಾಣೆ. ಏಳನೇ ಇಯತ್ತೆ ಪಾಸಾದಾಗ ಬಂತನಾಳ ಸ್ವಾಮಿ ಅವರ 5ನೇ ನಂಬರ್ ಶಾಲೆಯಲ್ಲಿ ನಾನು ಪ್ರವೇಶ ಪಡೆದೆ. ಈ ನಡುವೆ ಅಣ್ಣ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ನೌಕರನಾಗಿದ್ದನು. ತಾನೇ ಸ್ವತಂತ್ರ ಬದುಕು ನಡೆಸುತ್ತಿದ್ದರಿಂದ ನಾನು ಅವ್ವ ಸೇರಿ ತಂಗಿ ಮದುವೆ ಮಾಡಿದೆವು. ನಾನು 9ನೇ ತರಗತಿಯಲ್ಲಿದ್ದಾಗ ಉಪಜೀವನಕ್ಕೆ ನೆರವಾಗಲಿ ಎಂದು ಎಮ್ಮೆ ಸಾಕಿದೆವು. ಅದು ಮತ್ತೊಂದು ಎಮ್ಮೆ ಜೊತೆ ಜಗಳವಾಡಿ ಸತ್ತು ಹೋಯಿತು. ಅವ್ವ ನಿತ್ರಾಣವಾಗಿ ಸತ್ತ ಎಮ್ಮೆ ಎದುರು ಅತ್ತಳು. ಕರ್ಮಣ್ಯೇ ವಾಧಿಕಾರಸ್ತೆ ಮಾಫಲೇಷು, ಕದಾಚನ ಎಂದು ಹೇಳಿ ಸಮಾಧಾನ ಪಟ್ಟುಕೊಂಡಿದ್ದು ನನಗೆ ಇನ್ನು ನೆನಪಿದೆ.

ನನ್ನ ನಿರೀಕ್ಷೆ ಮೀರಿ ಎಸ್ಎಸ್ಎಲ್ಸಿಯಲ್ಲಿ ಎರಡನೇ ರ್ಯಾಂಕ್ ಪಡೆದೆ; ಬಿಜಾಪುರ ಜಿಲ್ಲೆಗೆ ಮೊದಲ ರ್ಯಾಂಕ್. ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಡಿ.ಜತ್ತಿ ನನಗೆ ಬಹುಮಾನ ನೀಡಿದರು. ಅವ್ವ ಮತ್ತು ದೊಡ್ಡವ್ವ ಅಂದು ಪಟ್ಟ ಸಂತಸ ನನ್ನ ಕಣ್ಣ ಮುಂದೆ ಈಗಲೂ ಹಬ್ಬದ ಸಡಗರದಂತೆ ತೋರುತ್ತಿದೆ. ಅಂದು ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದ ವಿಜಯ ಕಾಲೇಜು ಸಿಬ್ಬಂದಿ ನಮ್ಮ ಮನೆಗೆ ಬಂದು ಪಿಯುಸಿಗೆ ತಮ್ಮ ಕಾಲೇಜಿಗೆ ಸೇರಿಸುವಂತೆ ಒತ್ತಾಯಿಸಿದಾಗ ತಾಯಿ ಮತ್ತು ದೊಡ್ಡವ್ವ ಪುಳಕಿತರಾದರು. ನಂತರ ಪಿಯುಸಿಯಲ್ಲಿ ಮೊದಲ ರ್ಯಾಂಕ್ ಪಡೆದೆ. ನ್ಯಾಷನಲ್ ಮೆರಿಟ್ ಸ್ಕಾಲರ್ಷಿಪ್ ಸಿಕ್ಕಿತು.

ಮುಂದೆ ಮುಂಬಯಿ ಐಐಟಿಗೆ ಓದಲು ಹೋಗಬೇಕೆಂದಾಗ ಹುಬ್ಬಳ್ಳಿ ಬಿಟ್ಟು ಹೋಗಕೂಡದು ಎಂದು ಹಠ ಹಿಡಿದರು. ನಾನು ಯಾವುದಾದರೂ ಮರಾಠಿ ಹುಡುಗಿಯನ್ನು ಮದುವೆಯಾಗುತ್ತೇನೆ ಎಂಬ ಭಯ ಅವ್ವನಿಗೆ ಯಾವಾಗಲೂ ಕಾಡುತ್ತಿತ್ತು. ಹುಬ್ಬಳ್ಳಿಯ ಭೂಮರೆಡ್ಡಿ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಅಲ್ಲಿಯೇ ಉಪನ್ಯಾಸಕನಾದೆ. ನಂತರ ಅಮೆರಿಕಕ್ಕೆ ಹೋದೆ. ಅಲ್ಲಿ ಯಾವುದೇ ಕಾರಣಕ್ಕೂ ಯಾರನ್ನು ಲಗ್ನವಾಗಕೂಡದು ಎಂದು ಅವ್ವ ಷರತ್ತು ಹಾಕಿದಳು. ಗಾಂಧಿ, ನೆಹರು ಅವರಂತೆ ವಿದ್ಯಾಭ್ಯಾಸ ಮುಗಿಸಿ ವಾಪಾಸು ಬರಬೇಕು ಎಂದು ತಾಕೀತು ಮಾಡಿದಳು.

ಆದರೂ ನಾನು ತಾಯಿ ಮಾತು ಮೀರಿ ವಿದೇಶಿ ಹುಡುಗಿಯನ್ನೇ ಮದುವೆ ಆದೆ. ಅವ್ವ ಭಾವಿ ಸೊಸೆಯನ್ನು ಮನವೊಲಿಸಿ ಆಕೆಯನ್ನು ಲಿಂಗಾಯಿತ ಧರ್ಮಕ್ಕೆ ಕರೆದುಕೊಳ್ಳಲು ಧಾರ್ಮಿಕ ವಿಧಾನಗಳನ್ನು ಆರಿಸಿಕೊಂಡಳು. ನಂತರ ಅವ್ವ ಬಹಳ ಕಾಲ ನಮ್ಮೊಂದಿಗೆ ಇದ್ದಳು. ನನ್ನ ಸಾಮಾಜಿಕ ಹೋರಾಟವನ್ನು ನೋಡುತ್ತಲೇ ಕಂಡವರ ಬಳಿಯೆಲ್ಲಾ ನನ್ನ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾ ಸಂತಸ ಪಡುತ್ತಿದ್ದಳು. ಒಂದು ದಿನ ಸೊಸೆಯ ತೊಡೆಯ ಮೇಲೆಯೇ ಮಲಗಿ ಮಾತನಾಡುತ್ತಲೇ ಕಣ್ಣು ಮುಚ್ಚಿದಳು.

ಹೀಗೆ ತನ್ನ ಬದುಕನ್ನು ಸುಂದರವಾಗಿ ನಡೆಸಿದ ನನ್ನ ತಾಯಿ, ಈ ಕೆಳಗಿನ ಒಂದು ಸಂಗತಿ ಮೂಲಕ ನನ್ನನ್ನು ಸದಾ ಜಾಗೃತಗೊಳಿಸುತ್ತಾಳೆ :
ಬಿಜಾಪುರದಲ್ಲಿ ನಾವು ವಾಸಿಸುವ ಓಣಿಯಲ್ಲಿ ಒಬ್ಬ ವಿಧವೆ ಇದ್ದರು. ಅವರ ಬಗ್ಗೆ ಜನ ಬಹಳ ಹಗುರವಾಗಿ ಮಾತನಾಡುತ್ತಿದ್ದರು. ತಾಯಿ ಅದನ್ನು ಪ್ರಬಲವಾಗಿ ವಿರೋಧಿಸಿದರು. ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎಂದು ಎಲ್ಲರ ಮುಂದೆಯೂ ಮನವರಿಕೆ ಮಾಡಿಕೊಡುತ್ತಿದ್ದಳು. ಆ ಮಹಿಳೆಯ ಬಗ್ಗೆ ಮಾತನಾಡುವವರ ವಿರುದ್ಧ ನಿಂತು ವಿಧವೆ ಬದುಕಿಗೆ ಆತ್ಮ ಸ್ಥೈರ್ಯ ತಂದುಕೊಟ್ಟರು. ಇದನ್ನು ಸದಾ ನೆನೆಪಿಸಿಕೊಳ್ಳುವ ನಾನು ಯಾವುದೇ ವ್ಯಕ್ತಿಯ ವಿರುದ್ಧ ಮಾತನಾಡುವಾಗ ಸಾಕ್ಷ್ಯಾಧಾರಗಳಿಲ್ಲದೇ ಟೀಕೆ ಮಾಡುವುದಿಲ್ಲ. ಇದು ನನಗೆ ತಾಯಿ ಕಲಿಸಿದ ಪಾಠ.

‍ಲೇಖಕರು Admin

9 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading