
ಕು ಸ ಮಧಸೂದನ ರಂಗೇನಹಳ್ಳಿ
ಶಾಪಗ್ರಸ್ತ ಹುಲುಮಾನವ ನಾನು
ಅಧಮ್ಯ ಉತ್ಸಾಹದ ಹೆಜ್ಜೆಗಳನಿಟ್ಟು
ರಾಜರಸ್ತೆಯಲಿ ನಡೆಯುವ ನೀನು
ಕಸಾಯಿಖಾನೆ ಪಡಖಾನೆಗಳ ಹಾದು
ಚರಂಡಿ ಬದಿಯ ಪಾಯಖಾನೆಗಳ ದಾಟಿ
ಸಾಗುತ್ತೀಯಾ
ಕಣ್ಣೆದುರಿದ್ದರೂ ಕಾಣಿಸಿಕೊಳ್ಳದಂತೆ
ಬೆಳಕಿನಾಟದೊಳಗೆ ಕತ್ತಲ ಕೋಲಾಟವಾಡುತ್ತ
ಘಮಘಮಿಸುವ ಗುಲಾಬಿತೋಟಗಳ ಅರಸಿ
ನಡೆಯುತ್ತೀಯಾ

ಕುಲುಮೆಯಂತ ಹಗಲಿಗೂ
ಬೆಳದಿಂಗಳ ಲೇಪ ಹಚ್ಚಿ
ದಿವದ ದಿವ್ಯತೆಯ ನೆಚ್ಚಿ ನಡೆಯುತ್ತೀಯಾ
ಧರೆಯಂಚಿನವರೆಗು
ಏಳು ಬಣ್ಣಗಳ
ಏಳು ಸ್ವರಗಳ
ಏಳು ಸಾಗರಗಳ
ಏಳು ಶಿಖರಗಳ
ಮೂರೂ ಲೋಕದೊಳಗೆ
ಗೆದ್ದದ್ದು ನಾನೆಂಬ ಅಹಮ್ಮಿನಲಿ.
ಯಾರೂ ಮೂಸದ ಹೂಗಳ
ಯಾರೂ ಮುಟ್ಟದ ಹಣ್ಣುಗಳ
ಯಾರ ಸ್ಪರ್ಶವೂ ಸಲ್ಲದ ಹೆಣ್ಣುಗಳ
ದೇವಲೋಕದ ದೊರೆಯಂತೆ
ತಿರೆತಿರೆ ನಡೆದು ಹೋಗುತ್ತೀಯಾ
ನನ್ನತ್ತ ಬೆನ್ನು ಹಾಕಿ.

ಶಾಪಗ್ರಸ್ತ ಹುಲು ಮಾನವ ನಾನು
ನೀ ನಡೆದುಹೋದಹಾದಿಯ ಮಣ್ಣಿನ ದೂಳ
ನೆತ್ತಿಗೆ ಸವರಿಕೊಂಡು
ಪಾವನನಾದೆನೆಂದು ಬರಿದೇ ಬೀಗುತ್ತೇನೆ
ಉತ್ಕೃಷ್ಟ ನಿನ್ನ ನೆನೆಯುತ್ತೇನೆ ಅನವರತ
ನಿಕೃಷ್ಟ ನನ್ನ
ವಿಧಿಯ ಹಳಿಯುತ್ತ!
ಪ್ರತಿ ಕ್ಷಣದಿನ ವರ್ಷಗಳ ಎಣಿಸುತ್ತ
ಮಾಡಿದಷ್ಟೂ ಪಾಪಗಳ ಲೆಕ್ಕವಿಡಲಾಗದೆ
ನಕ್ಷತ್ರಗಳಾಚೆಗಿನ ಲೋಕದ ಶಿಕ್ಷೆಗಾಗಿ ಎದುರು ನೋಡುತ್ತ
ಕೊನೆಯುಸಿರೆಳೆಯುತ್ತೇನೆ
ಸೊನ್ನೆಯಾಗುತ್ತೇನೆ






0 Comments