‘ಸೈಡ್ ವಿಂಗ್ ನಾಟಕದಲ್ಲಿ ಇಲ್ಲ ಅಂದ್ರೂ ಇತ್ತು

ದಿಲಾವರ್ ರಾಮದುರ್ಗ 

ಜೀನ್‌ ಬ್ಯಾಪ್ಟಿಸ್ಟ್‌ ಪೊಕ್ವೆಲಿನ್‌ ಅಲಿಯಾಸ್‌ ಮೊಲಿಯರ್‌ 18ನೇ ಶತಮಾನದ ಹೆಸರಾಂತ ಫ್ರೆಂಚ್‌ ನಾಟಕಕಾರ. ಮೊಲಿಯರ್‌ ಎನ್ನುವುದು ರಂಗನಾಮ.

ಬದುಕಿನ ಸಣ್ಣ ಪುಟ್ಟ ಖುಷಿ ಕ್ಷಣಗಳು ಮತ್ತು ಹಾಸ್ಯದ ಪ್ರಸಂಗಗಳನ್ನೇ ಎತ್ತಿಕೊಂಡು ಇತರ ನಾಟಕೀಯ ಅಂಶಗಳೊಂದಿಗೆ ಬದುಕಿನ ಬಹುದೊಡ್ಡ ವಿಷಣ್ಣತೆ. ವಿಷಾದವನ್ನು ನಾಟಕವಾಗಿ ಕಟ್ಟಿಕೊಟ್ಟಿದ್ದಾನೆ. ಆ ಮೂಲಕ ಬದುಕಿನ ಬಗ್ಗೆ ಚಿಂತನೆಗೆ ಹಚ್ಚಿದ್ದಾನೆ.

ಪರಿಣಾಮಕಾರಿಯಾದ ಪ್ರಹಸನಗಳಿಂದಲೇ ಮೊಲಿಯರ್‌ ತುಂಬ ಖ್ಯಾತಿ ಗಳಿಸಿದ. ತಾರ್ತೂಫ್‌, ಬೂರ್ಜ್ವಾ ಜಂಟಲ್‌ಮನ್‌ ಮತ್ತಿತರ ನಾಟಕಗಳ ಮೂಲಕ ಅನನ್ಯ ರಂಗಾನುಭವಗಳನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟ ಮೊಲಿಯರ್‌, ನಮ್ಮ ನಡುವೆ ಮತ್ತು ಸಮಾಜದಲ್ಲಿ ಅಸಂಖ್ಯ ಪ್ರಹಸನಗಳು ನಡೆದಾಗೆಲ್ಲ ನೆನಪಾಗುತ್ತಾನೆ.

ಕಳೆದ ಶನಿವಾರ ಸಂಜೆ, ಕೆ.ಎಚ್‌. ಕಲಾಸೌಧದಲ್ಲಿ ‘ಸೈಡ್‌ ವಿಂಗ್‌’ ತಂಡ ಏರ್ಪಡಿಸಿದ್ದ ‘ಇಲ್ಲ.. ಅಂದರೆ.. ಇದೆ!’ ಎನ್ನುವ ಕಾಮಿಡಿ ನಾಟಕದ ಪ್ರಯೋಗಕ್ಕೆ ಜಿ.ಎನ್‌. ಮೋಹನ್‌ ಅವರ ಜೊತೆ ನಾನೂ ಸಾಕ್ಷಿಯಾದೆ.

ಮೊಲಿಯೊರ್‌ ಯಾಕೋ ನೆನಪಾದ.

ನಾವು ನಮ್ಮದೇ ಬದುಕಿನ ನಿಜದ ನೆಲೆಗಳ ಹುಡುಕಾಟಕ್ಕೆ ಇಳಿದಾಗ ವಾಸ್ತವಾಂಶಗಳು ಅನಾವರಣಗೊಳ್ಳುತ್ತವೆ. ಮನುಷ್ಯ ಸಂಬಂಧಗಳಲ್ಲಿ ಅಂದರೆ ಗಂಡು–ಹೆಣ್ಣು, ಸಮಾಜದ ಜೊತೆಗಿನ ಮನುಷ್ಯನ ಸಂಬಂಧಗಳು ಅಂದರೆ ಸಾಮಾಜಿಕ ಸಂಬಂಧ ಇದೆಲ್ಲದರ ಜೊತೆ ನಮ್ಮ ಸ್ಪಂದನೆ ಏನು? ಕಂಡುಕೊಂಡ ಸತ್ಯಗಳ ನೆಲೆಯಲ್ಲಿ ಆತ್ಮವಿಮರ್ಶೆಗಿಳಿದಾಗ ಆಗುವ ದರ್ಶನವನ್ನು ಎದುರಿಸುವುದು ಹೇಗೆ? ನಗುವಲ್ಲಿ ಬದುಕಿನ ದೊಡ್ಡ ವಿಷಾದ ಮರೆಮಾಚುವುದು ಪಾಸಿಟಿವ್‌ ಸೈಡ್‌ ಆಫ್‌ ದಿ ಲೈಫ್‌.

ಮತ್ತೊಂದೆಡೆ ತರತಮದ ಕ್ಷುಲ್ಲಕ ಕಾರಣಗಳಿಗೆ ಬದುಕನ್ನೇ ನರಕವಾಗಿಸಿಕೊಳ್ಳುವುದು ಇಗೋಯಿಸಂ ಅನ್ನಿಸಬಹುದು. ಇದೆಲ್ಲ ಬದುಕಲ್ಲಿ ಕಾಣುವ ಸ್ಥಿತಿ. ಅದನ್ನು ಫೇಟಲಿಸಂಗೆ ಸಮೀಕರಿಸಿ ನೋಡುವುದಲ್ಲ. ಒಂದು ಸ್ಥಿತಿಯಿಂದ ಮತ್ತೊಂದು ಉತ್ತಮ ಸ್ಥಿತಿಗೆ ಮಾನಸಿಕವಾಗಿ, ವೈಚಾರಿಕವಾಗಿ ಪರಿವರ್ತನೆಯಾಗುವುದು ಮುಖ್ಯ. ಹೀಗೆ ಬದಲಾಗುವಾಗ ಹಿಂದಿನದನ್ನು ಖಂಡಿಸುವ ಮತ್ತು ಧಿಕ್ಕರಿಸುವ ಆತ್ಮಸ್ಥೈರ್ಯ ಮೆರೆಯಲೇಬೇಕು.

ಆ ಆತ್ಮಸ್ಥೈರ್ಯ ನಿರ್ಭಯಾ, ದಾನವ್ವ… ಅಂಥವರ ಸ್ಥಿತಿಗೆ ಕಾರಣರಾದವರ ಸದ್ದಡಗಿಸಿ ಅವರನ್ನು ಶಾಶ್ವತ ಷಂಡರನ್ನಾಗಿಸಲು ಸಾಧ್ಯ ಎನ್ನುವ ಬಹುದೊಡ್ಡ ಒಡಲುರಿಯ ಮೂಸೆಯಿಂದ ಬಂದ ಆಕ್ರೋಶವನ್ನು ಒಂದೇ ಒಂದು ಪರಿಣಾಮಕಾರಿ ದೃಶ್ಯದಲ್ಲಿ ನಿರೂಪಿಸಿದ ನಾಟಕಕಾರ/ ನಿರ್ದೇಶಕ ಶೈಲೇಶಕುಮಾರ್‌ ನಿಜಕ್ಕೂ ದಿಟ್ಟ ಮನೋಧರ್ಮವನ್ನೇ ಮೆರೆದರು.

ಪೊಸಿಟಿವಿಟಿ ಕಡೆ ಹೇಗೆ ಮುಖ ಮಾಡಬಹುದೆನ್ನುವುದನ್ನೂ ಕಕ್ಕುಲಾತಿಯಿಂದ ಕಟ್ಟಿಕೊಟ್ಟರು.

ಎರಡೇ ಎರಡು ಪಾತ್ರಗಳ ಮೂಲಕ ಹಲವು ಪಾತ್ರಗಳನ್ನು ಸೃಷ್ಟಿಸಿ ಇಬ್ಬರು ಶೋಷಿತ ಹೆಣ್ಣು ಮಕ್ಕಳ ಬದುಕಿನ ಕೇಸ್‌ ಸ್ಟಡಿಯನ್ನು ಹೈಪಥೀಸಿಸ್‌ನಂತೆ ಎತ್ತಿಕೊಂಡು ಅದನ್ನು ಒಟ್ಟು ಮನುಷ್ಯ ಸಂಬಂಧಗಳಿಗೆ ಪ್ರಯೋತ್ಮಕವಾಗಿ ಸಮೀಕರಿಸಿ, ನಿಕಷಕ್ಕೊಡ್ಡಿ ಅಂತಿಮ ಫಲಿತಾಂಶವನ್ನು ಒಂದು ಪರಿಹಾರದಂತೆ ನಿರೂಪಿಸುವ ವೈಜ್ಞಾನಿಕ ವಿಧಾನ ಅನುಸರಿಸಿದ ನಾಟಕಕಾರ ಶೈಲೇಶಕುಮಾರ್‌ ಮೆಚ್ಚುಗೆಯಾದರು.

ಸಂಭಾಷಣೆಗಳು ತುಂಬ ಕ್ರಿಸ್ಪ್‌ ಮತ್ತು ಸಟೈರಿಕ್‌ ಆಗಿವೆ.

ಸಭ್ಯ, ದುಷ್ಟ, ವಂಚಕ, ಕಿರಾತಕ, ರೋಮ್ಯಾಂಟಿಕ್‌, ಫ್ಲರ್ಟ್‌.. ಎಲ್ಲವೂ ನಮ್ಮೊಳಗಿನ ಭಿನ್ನ ಶೇಡ್‌ಗಳೇ ಎನ್ನುವ ರೀತಿಯಲ್ಲಿ ಲೀಲಾಜಾಲವಾಗಿ ಅವನ್ನೆಲ್ಲ ನಿರೂಪಿಸಿದ ಆ ಇಬ್ಬರು ಹೆಣ್ಣು ಮಕ್ಕಳ ಅಭಿನಯ ಸಿಂಪ್ಲೀ ಸುಪರ್ಬ್‌. ರಂಗವಿನ್ಯಾಸ ಮತ್ತು ದೃಶ್ಯ ಜೋಡಣಾ ಶೈಲಿಯನ್ನು ಕೊಂಚ ಪಾಲಿಶ್‌ ಮಾಡಿಕೊಂಡರೆ ಪ್ರಯೋಗವನ್ನು ಮತ್ತಷ್ಟು ಹದಗೊಳಿಸಬಹುದು.

ಈಗಿನ ಸ್ಥಿತಿಯಲ್ಲಿಯೂ ಇದೊಂದು ಉತ್ತಮ ಪ್ರಯೋಗ.

03-02-2018 ಸಂಜೆ ರಂಗದ ಮೇಲೆ ಮಾತನಾಡಿದ್ದರ ವಿಸ್ತೃತ ರೂಪವಿದು

‍ಲೇಖಕರು avadhi

February 7, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: