ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೈಕಲ್ ಎಂಬ ಮಾಯಾಂಗನೆಯೂ… ದಂಡೆ ಎಂಬ ಗೆಳೆಯನೂ..

ನಾಗರಾಜ್ ಹರಪನಹಳ್ಳಿ

ನಮ್ಮ ವೃತ್ತಿಯಲ್ಲಿ ಹೆಚ್ಚು ಸಮಯ ನಿಂತು, ಆಗಾಗ ಕುಳಿತು ಗ್ರಹಿಸುವುದು ಇದೆ. ಆದರೆ ಎರಡರಿಂದ ಮೂರು ತಾಸು ಕುಳಿತು ಬರೆಯುವುದು ಅನಿವಾರ್ಯ. ಹೀಗಿರುವಾಗ ನಮಗೆ ತಿರುಗಾಟ, ವ್ಯಾಯಾಮ ಅಂತ ಏನೂ ಇರಲ್ಲ. ಜೀವನೋತ್ಸಾಹವೇ ವ್ಯಾಯಾಮ. ಹೀಗಿರುವಾಗ ಐವತ್ತರ ಅಂಚಿನಲ್ಲಿರುವ ನನಗ ಈಚೆಗೆ ಮಗನ ಸೈಕಲ್ ಮ್ಯಾಲ ವ್ಯಾಮೋಹ ಹುಟ್ಟಿದ ವಿಚಿತ್ರ ಘಳಿಗೆ ವಿವರಿಸುವೆ.

ಕಾರವಾರದವರು ಅತೀ ಹೆಚ್ಚು ಸೈಕಲ್ ವ್ಯಾಮೋಹಿಗಳು. ಉತ್ತರ ಕನ್ನಡದಲ್ಲಿ ಅತೀ ಹೆಚ್ಚು ಸೈಕಲ್ ಬಳಸುವ ಊರು ಕಾರವಾರವೇ ಆಗಿದೆ. ಸಮದ್ರ ಮಟ್ಟಕ್ಕ ಕೆಲವೇ ಅಡಿಗಳಷ್ಟು  ಎತ್ತರ ಇರುವ ಈ ಊರನ್ನು ದಣಿವಿಲ್ಲದೇ ಸೈಕಲ್‍ನಲ್ಲಿ ಸುತ್ತಾಡಿ ಬರಬಹುದು. ಮಗ 13 ವಯಸ್ಸು ದಾಟುವುದರಲ್ಲಿ ನಾಲ್ಕು ಸೈಕಲ್ ಬಳಸಿ, ಅವುಗಳನ್ನು  ತನಗಿಂತ ಕಿರಿ ವಯಸ್ಸಿನ ಸ್ನೇಹಿತರಿಗೆ ಕೊಟ್ಟು, ಈಗ ಹೊಸದಾಗಿ ಮಾರುಕಟ್ಟೆಗೆ ಬಂದ ಸೈಕಲ್ ಬೇಕೆಂದು ಹಠ ಹಿಡಿದ. ಆಯ್ತು, ಅವನಿಗ್ಯಾಕ ಬೇಜಾರು ಮಾಡೋದು ಅಂತ ಸೈಕಲ್ ಕೊಡಿಸಿದ್ದಾಯಿತು. ಆದರೆ ಶಾಲಾ ಸಮಯ ಬಿಟ್ಟು ಉಳಿದ ಸಮಯ  ಆ ಸೈಕಲ್ ಮಾಯಾಂಗನೆಯಂತೆ ನನ್ನ ಕಾಡತೊಡಗಿತು.

ಹೈಸ್ಕೂಲ್ ಓದುವಾಗ ಅಪ್ಪ ಕೊಡಿಸಿದ್ದ ಸೈಕಲ್ ಹೊಡೆಯಲು ಕಲಿಯದೇ, ಸ್ನೇಹಿತರನ್ನೇ ಡ್ರೈವರ್ ಮಾಡಿಕೊಂಡು, ನಾನು ಸೈಕಲ್ ಹಿಂದೆ ಅಥವಾ ಮುಂದೆ ಕುಳಿತು ಮೈದೂರು-ಚಿಗಟೇರಿಗೆ ಸವಾರಿ ಮಾಡಿದ್ದು ಆಯಿತು. ಕೊನೆಗೆ ಹೈಸ್ಕೂಲ್ ಮುಗಿಯುವ ಹೊತ್ತಿಗೆ ಸ್ವಂತಕ್ಕ ಸೈಕಲ್ ಹೊಡೆಯುವುದು ಕಲಿತಿದ್ದೆ. ಹೈಸ್ಕೂಲ್ ಮುಗಿಯುತ್ತಿದ್ದಂತೆ ಆ ಸೈಕಲ್ ನನ್ನ ಮಾವಂದಿರ ಪಾಲಾಯಿತು.  ಹರಪನಹಳ್ಳಿಗೆ  ಗೆಳೆಯನ ಜೊತೆ ಸೈಕಲ್ ಸವಾರಿ ಮಾಡುತ್ತಾ  ‘ಅಸ್ಫೋಟ’ ಮತ್ತು ‘ಸಂದರ್ಭ’ ಎಂಬ ಸಿನಿಮಾಗಳನ್ನು ನೋಡಿದ್ದು ಆಯಿತು. ಕೊಟ್ಟೂರಿಗೆ ಒಮ್ಮೆ ಇಂದಿರಾ ಗಾಂಧಿ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ, ಗೆಳೆಯನ ಜೊತೆ  ಸೈಕಲ್ ಮೇಲೆ ಹೋದ ನೆನಪು ಅಚ್ಚಳಿಯದೇ ಉಳಿದಿದೆ. ಇದು ಪಿಯುಸಿ ವರೆಗಿನ ನನ್ನ ಮತ್ತು ಸೈಕಲ್ ನಡುವಿನ ಬಂಧ.

ಇನ್ನು, ಸ್ನಾತಕೋತ್ತರ ಪದವಿ ಮುಗಿಸಿದ ಮೇಲೆ ದಾವಣಗೆರೆಗೆ ಬಂದಾಗಿತ್ತು. ಆ ಊರನ್ನು ಸಹ ಬಾಡಿಗೆ ಸೈಕಲ್ ಪಡೆದು ಗಲ್ಲಿ ಗಲ್ಲಿ ಸುತ್ತಿದೆ.  ದಾವಣಗೆರೆ ಎದೆಗಿಳಿದದ್ದು ಸೈಕಲ್ ಮೂಲಕವೇ.  ದಾವಣಗೆರೆಯ ಅಕ್ಕಿಪೇಟೆ ತುಂಬಾ ಜನ ಹಾಗೂ ವಾಹನ ನಿಬಿಡ ಪ್ರದೇಶ. ಅಲ್ಲಿ ಸೈಕಲ್ ಹೊಡೆದರೆ ಎಲ್ಲಿ ಬೇಕಾದರೂ ಸೈಕಲ್ ಹೊಡೆಯಬಹುದು. ಅಂಥ ರಶ್‍ನಲ್ಲಿ ನನ್ನ ಸೈಕಲ್‍ಗೆ ಆಟೋ ಒಮ್ಮೆ ಸವರಿತು. ಕೈಬೆರಳಿನ ಚರ್ಮ ಕಿತ್ತು ರಕ್ತ ಒಸರಿದ್ದು ನೆನಪಲ್ಲಿ ಉಳಿದಿದೆ. ಆ ಸಣ್ಣ ಅಪಘಾತದ  ನಂತರ ದಾವಣಗೆರೆ ನಗರದಲ್ಲಿ ಸೈಕಲ್ ಹೊಡೆಯುವುದು ಈಜಿಯಾಯಿತು.

ಸೈಕಲ್ ಜೊತೆಗಿನ ಇಷ್ಟು ಸಂಬಂಧದ ನಂತರ ಕಾರವಾರಕ್ಕ ಬಂದು 20 ವರ್ಷಗಳೇ ಉರುಳಿವೆ. ಮಗನ ಹೊಸ ನಮೂನಿ ಸೈಕಲ್ ಬಂದ ಮೇಲೆ ಒಂದು ಬೆಳಗು ಕಾರವಾರವನ್ನು ಸೈಕಲ್ ಮೇಲೆ ಸುತ್ತುವ ಮನಸ್ಸಾಯಿತು. ಇಡೀ ನಗರ  8 ಕಿ.ಮೀ ಉದ್ದಗಲಕ್ಕೆ ಬೆಳೆದಿದೆಯಾದರೂ, ಒಳ ರಸ್ತೆಗಳನ್ನು , ಒಂದೊಂದು ವಾರ್ಡನಲ್ಲಿ ಒಂದೊಂದು ದಿನ ಸೈಕಲ್ ಮೇಲೆ ಬೆಳಗಿನ ಜಾವ ಸುತ್ತುವುದು ಅಂತ ಮನಸ್ಸಲ್ಲಿ ಮಾಡಿಕೊಂಡೆ. ಆ ನಿಟ್ಟಿನಲ್ಲಿ ಪ್ರಯತ್ನವೂ ಆರಂಭವಾಯಿತು. ದಿನಕ್ಕೊಂದು ರಸ್ತೆಯಲ್ಲಿ ಹೋಗಿ ಮರಳಿ ಬರುವುದು ಅಂದ್ಕೊಂಡೆ. ಬೆಳಗಿನ 5 ಗಂಟೆಗೆ ಎದ್ದು, 5.30ಕ್ಕೆ ರೆಡಿಯಾಗಿ ಮನೆಯಿಂದ ಸೈಕಲ್ ಮೇಲೆ ಹೊರಟೆ. ಅದೇನ್ಹೋ ಉತ್ಸಾಹ ಮೊದಲ ದಿನವೇ ಹುಟ್ಟಿಕೊಂಡಿತು.

ಜನೇವರಿ ಮಧ್ಯಭಾಗದಲ್ಲಿ ಶುರುವಾದ ಹೊಸ ಹುಚ್ಚು ಕೊರೆವ ಚಳಿಯಲ್ಲೂ ನಿಲ್ಲದೇ ಮುಂದುವರಿಯುತ್ತದೆ ಎಂದು ಅಂದುಕೊಂಡಿರಲಿಲ್ಲ. ಸೈಕಲ್ ತುಳಿಯುತ್ತಾ ಕಾಜೂಭಾಗದಿಂದ ಸುಂಕೇರಿ ರಸ್ತೆ ಹಿಡಿದರೆ 6 ಕಿ.ಮೀ. ಸೈಕಲ್ ತುಳಿದು ಸುಂಕೇರಿ ಕಡವಾಡ ಬ್ರಿಜ್ ತಲುಪಿದೆ. ಸೇತುವೆಯಿಂದ ಸಹ್ಯಾದ್ರಿ ಸಾಲು, ಮೈದುಂಬಿ ಹರಿವ ಕಾಳಿ ನದಿ, ಅದರ ಹಿನ್ನೀರು, ಪಾತಿ ದೋಣಿಯಲ್ಲಿ ಮೀನು ಹಿಡಿಯುವ ಚಿತ್ರಗಳು ಪ್ರಕೃತಿಯ ಪೋಟೋಗ್ರಫಿಗಳಾಗಿ ಎದೆಗಿಳಿದವು.

ಮತ್ತೊಂದು ದಿನ ಕಾಳಿ ನದಿಯ ರಿವರ್ ಗಾರ್ಡನ್ ಸವಾರಿ. ಮುಗದೊಂದು ದಿನ ಕಾಳಿ ಸೇತುವೆಯಿಂದ ಕಾಣ ಸಿಗುವ ನದಿಯ ಸೊಬಗು, ಅಲ್ಲಿಂದ ಕಾಣುವ ಸೂರ್ಯೋದಯದ ಚಿತ್ರಗಳು…ಮತ್ತೊಂದು ದಿನ ಹಬ್ಬುವಾಡ, ಸೋನಾರವಾಡ,ಕೋಡಿಭಾಗ ರಸ್ತೆಗಳಲ್ಲಿ ಪಯಣ ಮುಂದುವರಿಯಿತು. ಸೈಕಲ್ ಸವಾರಿಯಲ್ಲಿನ ಬೆಳಗುಗಳು ಬದುಕಿಗೆ ಹೊಸ ಉತ್ಸಾಹ ತರತೊಡಗಿದವು. ಬೆಳಿಗ್ಗೆ ಆರು ಗಂಟೆಗೆ ಹೊರಟರೂ ಕುಗ್ಗದ ಉತ್ಸಾಹ. ಮನೆಗೆ ಬರುವುದು 90 ನಿಮಿಷಗಳ ನಂತರ.

ಹೀಗೆ ಮತ್ತೊಂದು ದಿನ ದಂಡೆ ಹಾಗೂ ಅರಬ್ಬೀ ಸಮುದ್ರದ ನಂಟಿನಲ್ಲಿ ಸೈಕಲ್ ಸವಾರಿ ಮಾಡಿದಾಗ ಉಂಟಾದ ಅನುಭವ ಮಾತ್ರ  ಶಬ್ದಕ್ಕೆ ಸಿಗದ ಸಂತೋಷ ನೀಡಿತು. ಕಿಶೋರ್ ಕುಮಾರ್ ಹಾಡನ್ನು ಕೇಳುತ್ತಾ (ಈಯರ್‍ಪೋನ್ ಬಳಸಿ), ದಂಡೆಯಲ್ಲಿ ಸೈಕಲ್ ತುಳಿಯುತ್ತಿದ್ದರೆ ಮನಸ್ಸು ಉಲ್ಲಾಸಗೊಳ್ಳತೊಡಗಿತು. ಹೀಗೆ ಒಂದೊಂದು ದಿನ ಒಂದೊಂದು ರಸ್ತೆಯಲ್ಲಿ ಸೈಕಲ್ ಸುತ್ತುವ ಗೀಳು ಅಂಟಿಕೊಂಡಿದೆ. ಏಳು ಗಂಟೆಗೆ ಮುನ್ನ ಎಂದೂ ಹಾಸಿಗೆಯಿಂದ ಏಳದ ನಾನು ಸೈಕಲ್ ಎಂಬ ಮಾಯಾಂಗನೆಯ ಹಿಡಿದು ಕಾರವಾರದ ಬೆಳಗನ್ನು ಅನುಭವಿಸತೊಡಗಿದೆ. ದಂಡೆ ಎಂಬ ಗೆಳೆಯನೊಡನೆ ಸಂಭಾಷಣೆ ಮಾಡುತ್ತಲೇ  ಸೈಕಲ್ ವ್ಯಾಮೋಹ ಐವತ್ತರ ಸನಿಹದಲ್ಲಿ ಹುಟ್ಟಿದ್ದು ಮಾತ್ರ ಸೋಜಿಗ ಎನಿಸತೊಡಗಿದೆ.

‍ಲೇಖಕರು avadhi

22 February, 2019

2 Comments

  1. Anagha LH

    ತುಂಬು ಖುಷಿ,, ಚಂದದ ಅನುಭವದ ನಿರೂಪಣೆ.. ಹೀಗೆ ಹೊಸ ಹೊಸದಾಗಿ ಹುಡುಕುತ್ತಿರಿ..
    ಲಕ್ಷ್ಮಿ ದಾವಣಗೆರೆ

    • Nagraj Harapanahalli.karwar

      ಥ್ಯಾಂಕ್ಯೂ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading