
ಕು.ಸ.ಮಧುಸೂದನ
ಪ್ರಶ್ನೆಗಳಿದ್ದವು
ಅವಳೆದೆಯೊಳಗೆ
ಯಾರಿಗೂ ಕೇಳಲಾಗದ
ಯಾರಿಗೂ ಹೇಳಲಾಗದ
ಉತ್ತರ ನಿರೀಕ್ಷಿಸಲಾಗದಂತವು
ಉತ್ತರವಾಗುತ್ತೇನೆಂದು ಬಂದವ
ಸ್ಖಲಿಸಿದ
ಮರುಕ್ಷಣವೇ ಮಾಯವಾದ
ಪ್ರಶ್ನೋತ್ತರ ಚಿಹ್ನೆಯಾಗಿ
ಈಗ ತನ್ನ ಪ್ರಶ್ನೆಗಳು ಸಾಲದೆಂದು
ಅವನನ್ನೂ
ಮತ್ತೊಂದು ಪ್ರಶ್ನೆಯಾಗಿಸಿಕೊಂಡು
ಕೂತಿದ್ದಾಳೆಉತ್ತರ ಸಿಗಬಹುದೆಂಬ ಭ್ರಮೆಯಲಿ
ಕಾಲದ ಕತ್ತಿಯ ಮಸೆಯುತ್ತ.
ಪ್ರಶ್ನೋತ್ತರಗಳ ಗೋಜಲಿನಲ್ಲಿ
ಮುಟ್ಟುನಿಂತು ಹೋಗಿರುವುದನ್ನೇ ಮರೆತು
ಖರೀದಿಸುತ್ತಾಳೆ
ಸ್ಯಾನಿಟರಿ ನ್ಯಾಪ್ ಕಿನ್ನುಗಳ
ವ್ಯರ್ಥವಾಗಿ

ಮತ್ತೀಗ ಅವರಮ್ಮನಂತೆಯೇ
ಬೇಕಂತಲೇ ಶಬ್ದ ಮಾಡಿ ನಗುತ್ತಾಳೆ
ಅಳುವನ್ನು ಕೊರಳೊಳಗೇ ತಡೆ ಹಿಡಿದು
ಅವಳೀಗ
ಗೋಡೆ ಮೇಲಿನ ಗಡಿಯಾರ ಕ್ಯಾಲೆಂಡರುಗಳ
ಕಿತ್ತೆಸೆದು
ಕಾಲದ ಹಂಗಿಲ್ಲದೆಯೇ
ಬದುಕುತ್ತಿದ್ದಾಳೆ
ಪೂರ್ವಕ್ಕು ಪಶ್ಚಿಮಕ್ಕು
ಅಲೆದಾಡುವ ಸೂರ್ಯನ ನಂಬಿ!






0 Comments