ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರ್ಯನೂ ಸುಡಲಾರ..

ಬರೀ ಭ್ರಮೆಯಷ್ಟೇ… 

-ಜಮುನಾ ರಾಣಿ ಹೆಚ್. ಎಸ್.

ಯಾರೊಡನೆ ಹಂಚಿಕೊಳ್ಳುವುದು
ಮನದ ಮೂಲೆಮೂಲೆಯಲೂ 
ಉಕ್ಕಿ ಬರುತಿರುವ ದುಗುಡಗಳ ಪಟ್ಟಿ ಹಿಡಿದು
ಬರೀ ಹುಡುಕಾಟ ಈ ಮಟಮಟ ಮಧ್ಯಾಹ್ನದಲೂ

ಭಾವನೆಗಳು ಸತ್ತು ಮಲಗಿದ ಸುತ್ತಲಿನ
ನಿರ್ಲಿಪ್ತತೆಯನು
ನೆತ್ತರು ಸುರಿಯುವಂತೆ ಧಗಧಗಿಸುತ್ತಿರುವ
ಆ ಸೂರ್ಯನೂ ಸುಡಲಾರ
ಕಲ್ಲಿನ ಮೂರ್ತಿಯಂತೆ ನಿಂತಿರುವ 
ಮನೆ ಮುಂದಿನ ಅದ್ಯಾವುದೋ ಹೆಸರಿಲ್ಲದ ಮರ
ಮೂತಿ ತಿರುವಿ ಕುಂತಂತಿದೆ
ಮತ್ತಿನ್ಯಾರೊಡನೆ ಯಾರೊಡನೆ ಹಂಚಿಕೊಳ್ಳುವುದು

ಕೊಳೆತು ನಾರುತಿರುವ ಭಾವನೆಗಳ
ಯಾವ ಕೀಟನಾಶಕವ ಹಾಕಿ ತಾಜಾಗೊಳಿಸುವುದು
ಊರಾಚಿನ ಹುಣಸೆ ಮರದಿ ಜೋತಾಡುತಿರುವ
ಮುಕ್ತಿ ಕಾಣದ ಆತ್ಮಕೂ, ನನಗೂ
ಯಾವುದೇ ವ್ಯತ್ಯಾಸವಿಲ್ಲ
ದುಃಖ ಕಣಿವೆಯಲ್ಲಿ ದಾರಿ ತಪ್ಪಿದೆ ಬದುಕು
ಇನ್ನೆಷ್ಟು ದಿನ ಈ ಹೋರಾಟ, ಹುಡುಕಾಟ
ಯಾರೋ ಸಿಕ್ಕಿ ತೊಳೆದು ಹಾಕುವರು ನಿನ್ನೆಗಳೆನ್ನುವ
ಆಶಯವೂ ಕಮರಿ ಹೋಗಿದೆ
ಈ ಕಾಂಕ್ರೀಟಿನ ಚಾವಣಿ ಹಾರುವಂತೆ
ಕಿರುಚುತಿವೆ ಯಂತ್ರಗಳ ಸದ್ದು
ಮನದ ಪೊದೆಯಲಿ ತಿಮ್ಮನೆ ತಿಣುಕಿ 
ಹೊರಳಾಡಿ ಅಳುವ ನನ್ನ ದನಿ ಮಾಸಿ ಹೋಗಿದೆ

ಸದ್ದು ಮಾಡಿದ ಜೇಬಿಗಿಳಿಸಿದ್ದ ಮೊಬೈಲಿನ 
ಸಂದೇಶಗಳೊಳಗೆ ಹುಡುಕುತ್ತೇನೆ
ಯಾರು ಯಾರಿಗೋ ಕರೆ ಮಾಡಿ
ನನ್ನೊಳಗ ಕೇಳುವ ಕಿವಿಗಳಿಗಾಗಿ ಹವಣಿಸುತ್ತೇನೆ
ಹೇಳಿ ಕೇಳಿ ಇದು
ಚುನಾವಣೆಯ ಸಂದರ್ಭ 
ಈಗ ಎಲ್ಲರೂ ಭಾಷಣಕಾರರೇ 
ಸಿಕ್ಕವರ ಹಾಕಿ ರುಬ್ಬುವವರೇ ಹೆಚ್ಚು
ಇನ್ನು ನನ್ನ ಕೇಳುವವರು ಸಿಕ್ಕಾರೆ ?
ಬರೀ ಭ್ರಮೆಯಷ್ಟೇ
ನೋವು ಮಾಯುವವರೆಗೆ

‍ಲೇಖಕರು

15 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading