ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರ್ಯಕೀರ್ತಿ ಹೊಸ ಕವಿತೆ- ಈ ರಾಜ ಗೊತ್ತಿರಬೇಕು ಅಲ್ಲವೇ?

ಸೂರ್ಯಕೀರ್ತಿ

ಈ ದೇಶದ ರಾಜ ಚಿಟ್ಟೆ ಹಿಡಿಯುತ್ತಿದ್ದಾನೆ ;
ಅಲ್ಲಲ್ಲಿ ಸೈನಿಕರ ಅಡಗಿಸಿ ಚಿಟ್ಟೆಗಳಿಗೆ ಗುಂಡಿಕ್ಕಿ
ಹೊಡೆಯುವಂತೆ ಆದೇಶಿಸಿದ್ದಾನೆ!
ಈ ದೇಶದ ರಾಜ ಮಣ್ಣಿಗೆ ಅಂಟಿರುವ ಕಲ್ಲುಗಳನ್ನು ಆಯ್ದು ಗುಡಿಯ ಕಟ್ಟುತ್ತಿದ್ದಾನೆ;
ಅಲ್ಲಲ್ಲಿ ಭಕ್ತರು ಸಾಲಾಗಿ ದೇವರಿಗೆ ಪ್ರಾಣವ ಅರ್ಪಿಸಲು ಹರಕೆಯ ಕುರಿಗಳಾಗಿದ್ದಾರೆ.

ರಾಜನಿಗೆ ಬಟ್ಟೆ ತೊಡಿಸುವರೊಬ್ಬರಾದರೆ
ಅವನ ಕೂದಲುಗಳಿಗೆ ಎಣ್ಣೆ ಹಚ್ಚಿ ಎಣೆಯುವವರು ಮತ್ತೊಬ್ಬರು;
ನಿಲುವಂಗಿಯ ತೊಟ್ಟು, ರೇಷ್ಮೆಯ ಪಂಚೆಯನುಟ್ಟು
ಗಡ್ಡಧಾರಿ ಗುಡ್ಡಬಸವನಾಗಿದ್ದಾನೆ!
ಈ ರಾಜನಿಗೆ ನೀತಿಯೆಂಬ ಹೆಂಡತಿ ಬೇಕಾಗಿದ್ದಾಳೆ,
ಛೇ! ಮೂರ್ಖ ರಾಜನ ಸುತ್ತ ಕಾಗೆಗಳ
ಪಲ್ಲಕ್ಕಿಯ ಮೆರವಣಿಗೆಯಿದೆ!

ಹುಡುಕುತಿದ್ದಾನೆ ರಾಜ;
ಏನೋ ಕಳೆದುಹೋದ ಮಾರ್ಯದೆಯನ್ನು .
ಸಭೆಯಲ್ಲಿ ಒಬ್ಬನೇ ನಗುತ್ತಾನೆ, ನಗ್ನನಾಗುತ್ತಾನೆ
ಮತ್ತೆ ಅಳುತ್ತಾನೆ.

ಮೊಲೆ ಮೂಡಿರುವ ರಾಜನಿಗೆ
ತಾಯ್ತನದ ತಿಳಿ ಮಂಕಾಗಿದೆ;
ಸಿಕ್ಕ ಸಿಕ್ಕ ಹೆಣ್ಣುಗಳನ್ನು ಉಪಭೋಗಿಸಬೇಕೆಂದು
ಸಾರಣೆಯ ಮಾಡಿಸಿದ್ದಾನೆ!

ಅಲ್ಲಲ್ಲಿ ಶಿಥಿಲವಾಗಿ ಬಿದ್ದಿರುವ
ಗೆದ್ದಲು ತಿಂದ ಮನುಷ್ಯರನ್ನು
ಆಕಾಶದುದ್ದಕ್ಕೆ ಅಮೃತಶಿಲೆಯಲಿ ಕೆತ್ತಿಸಿ ವ್ಯೋಮತಂತಿಗೆ ಕಟ್ಟಿ
ನಿಲ್ಲಿಸಿದ್ದಾನೆ!

ಮಾತನಾಡುವವರ ನಾಲಿಗೆಯ ಸೀಳಿ
ನಗುವವರ ಕನಸುಗಳ ಕದ್ದು
ದುಡಿಯುವವರ ಕೈಗಳ ಮುರಿದು
ಈ ರಾಜ ಪಟ್ಟಭದ್ರನಾಗಿದ್ದಾನೆ,
ಈ ರಾಜ ಗೊತ್ತಿರಬೇಕು ಅಲ್ಲವೇ?

ರಾತ್ರಿಗಳ ಬೆಳಕಿನ ಮಿಂಚು ಮುಡಿಸುವೆನೆಂದು
ನಕ್ಷತ್ರಗಳ ದೂರಕ್ಕೆ ಹಾರಿಸುವೆನೆಂದು
ಆಗಾಗ ಸಭೆಯಲ್ಲಿ ಕುಡಿದು ಕಿರುಚಾಡಿ, ನಕ್ಕು
ಭರವಸೆಗಳ ಕೊಡುತಲೇ ಭಂಜಕನಾಗಿ ಮೆರೆದಿದ್ದು
ಗೊತ್ತಿರಬೇಕು ಅಲ್ಲವೇ?

ಪ್ರಜೆಗಳ ಕೊರಳಿಗೆ ನೊಗವನೂಡಿ
ಬಾರುಕೋಲುಗಳಿಂದ ಬಾರಿಸುತ್ತಾ
ಒಮ್ಮೊಮ್ಮೆ ಬೆಂಟ್ಟುತ್ತಾ ನಿಧಾನವಾಗಿ
ಮರಣದಂಡನೆಗೆ ನೇಣು ಹಾಕುತಿರುವ
ಈ ರಾಜನ ಬಗ್ಗೆ ಗೊತ್ತಿರಬೇಕು ಅಲ್ಲವೇ?

ದೇಶ ದೇಶಗಳ ಸುತ್ತಿ ಕತ್ತೆ, ಕುದುರೆಗಳ ಏರಿ
ಆಕಾಶದಿಂದ ಆಕಾಶಕ್ಕೆ ಹಾರುತ್ತೇನೆ
ಅಲ್ಲಿನ ಚಿಟ್ಟೆಗಳ ತಂದು ಮಾರುತ್ತೇನೆ
ನಂಬಿಕೆಯಿರಲಿ ಮಹಾಜನಗಳೇ ಎಂದೆಲ್ಲ
ಹೇಳಿದ ಮಾತುಗಳು ಈಗ ಭೂಮಿಯಲ್ಲಿ ಕೊಳೆಯುತಿವೆ!

ಚಪ್ಪಾಳೆ ತಟ್ಟಿ , ಭಜನೆ ಮಾಡಿ, ಕುಡಿದು
ನೃತ್ಯದಲ್ಲಿ ತೇಲಿದ ಪ್ರಜೆಗಳಿಂದು ಕೇಳುತಿದ್ದಾರೆ,
ಈ ರಾಜ ಗೊತ್ತಿರಬೇಕು ಅಲ್ಲವೇ ? ಎಂದು.

‍ಲೇಖಕರು Avadhi

5 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading