ಪ್ರೊ ಬಿ ಜಿ ಎನ್ ಎಂಬ ಬೆರಗು..

ಆನಂದ್ ಋಗ್ವೇದಿ

ನಾನು ಪದವಿ ಓದಲೆಂದು ದಾವಣಗೆರೆಗೆ ಬಂದದ್ದು 1992ರಲ್ಲಿ. ಆಗಷ್ಟೇ ಕೋಮು ಗಲಭೆಯಲ್ಲಿ ಮಿಂದೆದ್ದ ದಾವಣಗೆರೆಯಲ್ಲಿ ಓದುವುದು ನನ್ನಪ್ಪ ಅಮ್ಮನಿಗೆ ಇಷ್ಟವಿರಲಿಲ್ಲ. ಆದರೆ ಬದುಕನ್ನು ತಂದೆಯ ನೆರಳಿಲ್ಲದ ಬಯಲಿನಲ್ಲಿ ಕಟ್ಟಿಕೊಳ್ಳಬೇಕೆಂಬ ನನ್ನ ಆಸೆಗೆ ಅವರು ಅಡ್ಡಿ ಮಾಡಲಿಲ್ಲ.

ಒಂದು ಭಾಗದಲ್ಲಿ ಬಿಡಿಟಿ ಇಂಜಿನಿಯರಿಂಗ್ ಕಾಲೇಜ್, ಮತ್ತೊಂದು ಭಾಗದಲ್ಲಿ ಜೆಜೆ ಮೆಡಿಕಲ್ ಕಾಲೇಜ್ ಇದ್ದು ನಡುವೆ ಗಂಭೀರವಾಗಿ ಕೂತಿದ್ದ ಧ.ರಾ.ಮ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಗಾಗಿ ಪ್ರವೇಶ ಪಡೆಯುವ ನನ್ನ ಕನಸು ಸುಲಭ ಸಾಧ್ಯವಾಗಿರಲಿಲ್ಲ.

ಯಾವ ಶಿಫಾರಸ್ಸು ಮತ್ತು ವಶೀಲಿಗಳಿಗೂ ಒಪ್ಪಿ ಸೀಟು ಕೊಡದ ನಿಷ್ಠುರಿ ಪ್ರಾಂಶುಪಾಲರಾದ ಪ್ರೊ. ಬಿ. ಜಿ ನಾಗರಾಜ್ ರವರನ್ನ ಭೇಟಿ ಮಾಡಲೂ ನನಗೆ ಅಳುಕು. ಆಗ ನೆರವಿಗೆ ಬಂದವರು ಅದೇ ಕಾಲೇಜಿನ ಪ್ರಾಣಿ ಶಾಸ್ತ್ರ ಪ್ರಾಧ್ಯಾಪಕ ಜಿ ಹೆಚ್ ಶಂಕರಪ್ಪನವರು. ಅವರೊಂದಿಗೆ ಛೇಂಬರ್ ನ ಒಳಹೊಕ್ಕ ನನ್ನ ಸ್ವಾಗತಿಸಿದ್ದು ಸಿಗರೇಟಿನ ಘಾಟು ಹೊಗೆ ಮತ್ತು ಬಿಜಿಎನ್ ರ ನಗೆ!!

ಖಡಕ್ ಆಸಾಮಿ ಎಂದೇ ಹೆಸರಾಗಿದ್ದ ಬಿಜಿಎನ್ ಸದಾ ನಗು ಮೊಗದವರು. ಅವರು ಗಣಿತದ ಪ್ರಾಧ್ಯಾಪಕರು ಮತ್ತು ನಮ್ಮ ಧ.ರಾ.ಮ ಕಾಲೇಜಿಗೆ ಸುದೀರ್ಘ ಅವಧಿಗೆ ಪ್ರಾಂಶುಪಾಲರಾಗಿದ್ದವರು. ಖಚಿತ ನಿಲುವಿನ, ಮಾನವೀಯ ಅಂತಃಕರಣದ, ಅಪಾರ ಓದಿನ ಮಹಾನ್ ವಾಗ್ಮಿ ಈ ವಾಮನ ಮೂರ್ತಿ. ನಮ್ಮ ದಾವಣಗೆರೆ ಸೀಮೆಯ ಬಹುತೇಕ ಕಡೆ ಅವರ ಭಾಷಣಗಳು ಬಹು ಜನಪ್ರಿಯ.

Mathematical derivation, successive differentiation, ಬೇಂದ್ರೆಯವರ ಗಂಗಾವತರಣ ಹೀಗೆ ಎಲ್ಲವನ್ನೂ ಪಠ್ಯದ ನೆರವಿಲ್ಲದಂತೆ ವಿವರಿಸುವ ಅಪಾರ ಸ್ಮರಣೆ ಅವರದು. ಅವರ ಪಾಠವೇ ವಿಜ್ಞಾನ ಓದುತ್ತಿದ್ದ ನಮಗೆಲ್ಲಾ ಸಾಹಿತ್ಯ ಪ್ರೀತಿ ಮೂಡಿಸಿದ್ದು!! ಹಾಗೆ ಸಾಹಿತ್ಯ ಕಲೆ ಬಗ್ಗೆ ಪ್ರೀತಿ ಮೂಡಿದ್ದ ನನ್ನಂತಹ ಹಲವರನ್ನು ಅವರು ಕಾಳಜಿಯಿಂದ ಪೊರೆದಿದ್ದರು. ಹಾಗೆ ಅವರ ಅಂತಃಕರಣ ಉಂಡ ನೂರಾರು ಜನರಲ್ಲಿ ಕವಿ ಬಿ ಎನ್ ಮಲ್ಲೇಶ್, ಕಲಾವಿದ ನಾ. ರೇವನ್… ಪ್ರಮುಖರು.

ವಿದ್ಯಾರ್ಥಿಗಳು ಸಂಘಟನೆಯ ಹೆಸರಿನಲ್ಲಿ ರಾಜಕೀಯ ಮಾಡಿ ಅವರ ವಿದ್ಯಾಭ್ಯಾಸ ಹಾಳು ಮಾಡಿಕೊಳ್ತಾರೆ ಎಂದು ವಿದ್ಯಾರ್ಥಿ ಸಂಘವನ್ನೇ ವಿಸರ್ಜಿಸಿದ್ದ ಅವರ ಮನಸ್ಸು ಒಲಿಸಿ ಮತ್ತೆ ವಿದ್ಯಾರ್ಥಿ ಸಂಘ ಪ್ರಾರಂಭಿಸುವಲ್ಲಿ ನನ್ನ ಸೀನಿಯರ್ ಬ್ಯಾಚ್ ನ ಗೆಳೆಯರು ಯಶಸ್ವಿಯಾಗಿದ್ದರು. ಆಗ ಆರಂಭವಾದ ರಂಜನಾ ಹೆಸರಿನ ಸಾಂಸ್ಕೃತಿಕ ಸಂಭ್ರಮ, ವಿದ್ಯಾರ್ಥಿ ಸಂಘದ ಚಟುವಟಿಕೆಗಳೂ ಬಿಜಿಎನ್ ರವರು ನೀಡಿದ್ದ ವಿವೇಕಯುತ ಸ್ವಾಯತ್ತತೆಯಂತೇ ನಡೆಯುತ್ತಿದ್ದವು.

ತತ್ವಬದ್ಧ ರಾಜಕಾರಣವನ್ನು ಬೆಂಬಲಿಸುತ್ತಿದ್ದ ಬಿಜಿಎನ್ ಹಾಕಿಕೊಟ್ಟ ಮಾರ್ಗದಿಂದಾಗಿ ವಿದ್ಯಾರ್ಥಿ ಸಂಘದ ಚುನಾವಣೆ ಯಾವುದೇ ಆಮಿಷ ಅಬ್ಬರಗಳಿಲ್ಲದೇ ನ್ಯಾಯಯುತವಾಗಿ ನಡೆಯುತ್ತಿತ್ತು. ಹಾಗಾಗಿಯೇ ಜೇಬಿನಲ್ಲಿ ಹತ್ತು ರೂಪಾಯಿ ಇಲ್ಲದ, ಹಿಂಬಾಲಕರಿಲ್ಲದ ನನ್ನಂತಹ ನಾನು ವಿದ್ಯಾರ್ಥಿ ಸಂಘದ ನಾಯಕನಾಗಿ ಚುನಾಯಿತನಾಗಿದ್ದೆ!!

ಹಣವಂತ ವಿದ್ಯಾರ್ಥಿಗಳು ಟ್ಯೂಷನ್ ಸೇರಿ, ಕಾಲೇಜಿನ ಕ್ಲಾಸ್ ಗಳಿಗೆ ಹಾಜರಾಗುತ್ತಿರಲಿಲ್ಲ. ಹಾಜರಾತಿಯ ಕೊರತೆಯಿಂದ ಪ್ರಾಧ್ಯಾಪಕರು ತರಗತಿ ತೆಗೆದುಕೊಳ್ಳುವುದೇ ದುಸ್ತರವಾಗಿದ್ದ ಆ ಹೊತ್ತು ಬಿಜಿಎನ್ ತರಗತಿಯ ಹಾಜರಾತಿಯನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದ್ದರು. ಗ್ರಾಮೀಣ ಭಾಗದಿಂದ ಬರುತ್ತಿದ್ದ ಬಡ ವಿದ್ಯಾರ್ಥಿಗಳು ಇತ್ತ ಟ್ಯೂಷನ್ ಸೇರಲಾಗದೇ, ಕಾಲೇಜಿನಲ್ಲಿ ತರಗತಿಗಳೂ ನಡೆಯದೇ ಕಂಗಾಲಾಗಿದ್ದರಿಂದ ವಿದ್ಯಾರ್ಥಿ ಸಂಘದ ನಾಯಕನಾಗಿ ನಾನು ಪ್ರಾಚಾರ್ಯರ ಸುತ್ತೋಲೆ ಬೆಂಬಲಿಸಿ ಹಣವಂತ ವಿದ್ಯಾರ್ಥಿಗಳ ಮತ್ತು ಟ್ಯೂಷನ್ ಕೋರ ಅಧ್ಯಾಪಕರ ವಿರೋಧ ಕಟ್ಟಿಕೊಂಡಿದ್ದೆ!

ನನ್ನನ್ನು ವಿದ್ಯಾರ್ಥಿ ಸಂಘದ ನಾಯಕ ಸ್ಥಾನದಿಂದ ಇಳಿಸಲು ಜನಾಭಿಪ್ರಾಯ ರೂಪಿಸಿ ಪಿಕೆಟಿಂಗ್ ಮಾಡುತ್ತಿದ್ದವರ ಮೀಟಿಂಗ್ ಕರೆದಿದ್ದರು ಬಿಜಿಎನ್. ಬೇಸರದಿಂದ ನಾನೇ ರಾಜಿನಾಮೆ ಕೊಡಲು ಮುಂದಾಗಿದ್ದೆ. ಆಗ ಬಿಜಿಎನ್ ರಾಜಿನಾಮೆಯನ್ನು ಅಂಗೀಕರಿಸಿ, ಸಂಘವನ್ನು ವಿಸರ್ಜಿಸುವುದಾಗಿ ಹೇಳಿದರು. ಆ ಗುಟುರಿಗೇ ಎಲ್ಲರ ಬುಡದಲ್ಲಿ ನೀರು ಹರಿದು, ನನ್ನ ಮೇಲಿನ ವಿರೋಧವೇ ಕೊಚ್ಚಿಹೋಗಿತ್ತು!!

1994 ರಲ್ಲಿ ಕುವೆಂಪು ತೀರಿ ಹೋದರು. ಅವರ ಸ್ಮರಣೆಗಾಗಿ 1994 ರ ಡಿಸೆಂಬರ್ 29 ರಂದು (ಕುವೆಂಪು ಜನ್ಮದಿನ) ಕುವೆಂಪು ಸಂಜೆ ಎಂಬ ಅಂತರ್ ಕಾಲೇಜು ಸ್ಪರ್ದೆ ಮತ್ತು ಕಾರ್ಯಕ್ರಮ ಆಯೋಜಿಸಿದ್ದ ಬಿಜಿಎನ್ ನಮಗೆಲ್ಲಾ ನಿರಂಕುಶ ಮತಿಗಳಾಗುವ, ಸಾಂಸ್ಕೃತಿಕ ಜವಾಬ್ದಾರಿ ಹೊರುವ ದೀಕ್ಷೆಯನ್ನೇ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಅವರ ಗುರುವಾಕ್ಕಿನಂತೆ ಸಾಂಸ್ಕೃತಿಕ ವಲಯದಲ್ಲಿ ಉತ್ತರದಾಯಿತ್ವ ಹೊಂದಿರುವ ದೊಡ್ಡ ಶಿಷ್ಯ ಪಡೆಯೇ ಬಿಜಿಎನ್ ರ ಆಶಯವನ್ನು ಸಾಕಾರಗೊಳಿಸಲು ಉನ್ಮುಖವಾಗಿದೆ.

ಅವರು ಬೆರಳಿಟ್ಟು ತೋರಿದ ದಾರಿ ಮುಂದಿದೆ, ಹಿಂದೆ ಅಭಯ ನೀಡಿ ಗುರಿ ತೋರಿದ್ದ ಗುರುವಿನ ಛಾಯೆಯಿದೆ. ಮುಂದಡಿಯಿಡಬೇಕಾದುದು ಜೀವನ ಧರ್ಮ. ಅದುವೇ ಗುರು ಕಾರುಣ್ಯಕ್ಕೆ ನೀಡುವ ಶಿಷ್ಯ ಕಾಣಿಕೆ

‍ಲೇಖಕರು Avadhi

June 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: