ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ -4:ಅವತ್ತು ಮಂಗಳವಾರವಿರಬೇಕು…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 4

ಅವತ್ತು ಮಂಗಳವಾರವಿರಬೇಕು. ಹಳೇಬೀಡು ಸುಂದರರಾಯರ ಮೈ ಜುಮ್ಮೆಂದಿತು. ಭಾವುಕತೆಯಿಂದ ಕಣ್ಣುಗಳಲ್ಲಿ ನೀರುಕ್ಕಿತು. ಜೂಲುಜೂಲಾಗಿದ್ದ ಅಂಗಿಯ ಚುಂಗಿನಿಂದ ಕಣ್ಣೊರೆಸಿಕೊಂಡರು. ನಡುಗುವ ಹೆಜ್ಜೆಗಳನ್ನಿಡುತ್ತಾ, ಆನಂದತುಂದಿಲರಾಗಿ ಹಗುರಾಗಿ ಕಂಪಿಸುತ್ತಾ, ಸ್ವರ್ಗವನ್ನು ಬಿಟ್ಟು ಭೂಮಿಗಿಳಿಯುವಂತೆ ತಮ್ಮ ಮುಂದಿದ್ದ ಹತ್ತು ಮೆಟ್ಟಿಲುಗಳನ್ನು ಒಂದೊಂದಾಗಿ ಇಳಿದರು.
ಒಂದೆರಡು ಮೆಟ್ಟಿಲುಗಳನ್ನು ಇಳಿದಿದ್ದರೋ ಇಲ್ಲವೋ, ಅದೇನೋ ನೆನಪಾಗಿ ಮತ್ತೆ ಇಳಿದ ಎರಡು ಮೆಟ್ಟಿಲುಗಳನ್ನು ಹತ್ತಿ, ‘ಬಿ ಎಂ ನಾಗರಾಜರಾವ್, ಎಂ ಎ; ಎಲ್ ಎಲ್ ಎಂ. ಹೈಕೋರ್ಟು ವಕೀಲರು‘ ಎಂದು ಢಾಳಾಗಿ ಗೋಡೆಗೆ ನೇತು ಹಾಕಿದ್ದ ಬೋರ್ಡನ್ನು ಮುಟ್ಟಿ, ಕಣ್ಣಿಗೊತ್ತಿಕೊಂಡು ಮೆಟ್ಟಿಲುಗಳನ್ನು ಇಳಿದರು.
ಕಳೆದ ಹಲವಾರು ವರ್ಷಗಳ ವಾಡಿಕೆಯಂತೆ, ಇಂದೂ ಬೆಳಿಗ್ಗೆ ಒಂಬತ್ತೂಮುಕ್ಕಾಲಿಗೆ ಹಳೇಬೀಡು ಸುಂದರರಾಯರು ವಕೀಲ್ ನಾಗರಾಜರಾಯರ ಆಫೀಸಿನ ಮುಂದಿರುವ ಬೆಂಚಿನ ಮೇಲೆ ಜವಾನನಿಗೂ ಒಂದಿಷ್ಟು ಜಾಗ ಬಿಟ್ಟು ಕೂತಿದ್ದರು.
ಕರಾರುವಕ್ಕಾಗಿ ಹತ್ತು ಗಂಟೆ ಹತ್ತು ನಿಮಿಷಕ್ಕೆ ನಾಗರಾಜರಾಯರ ಆಗಮನವನ್ನು ಸಾರುವಂತೆ ಅವರ ಜವಾನ ಊಟದ ಕ್ಯಾರಿಯರ್‌ಅನ್ನೂ, ಒಂದು ಬಾಳೆಎಲೆಯ ಸುರುಳಿಯನ್ನೂ, ರೈಲು ತಂಬಿಗೆಯನ್ನೂ ಕೈಲಿ ಹಿಡಿದು ದುಡುದುಡು ಆಫೀಸು ಹೊಕ್ಕ.
ಅವನ ಬಾಲಕ್ಕಂಟಿಕೊಂಡಂತೇ ನಾಗರಾಜರಾಯರ ಅಸಿಸ್ಟೆಂಟ್ ಒಂದಿಷ್ಟು ಕತ್ತೆ ಕಾಗದದಲ್ಲಿದ್ದ ಫೈಲುಗಳನ್ನೂ, ಒಂದು ಬ್ರೀಫ್‌ಕೇಸನ್ನೂ ಹಿಡಿದು ಒಳಹೊಕ್ಕ. ನಂತರ ನಿಧಾನವಾಗಿ ನಾಗರಾಜರಾಯರು ಯಾವುದೇ ಅವಸರವಿಲ್ಲದೇ, ತೆಳುವಾಗಿ ಲೇಪಿಸಿಕೊಂಡಿದ್ದ ಗಂಧದೆಣ್ಣೆಯ ವಾಸನೆಯನ್ನು ಮುಂದಾಗಿಸಿಕೊಂಡು, ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತುತ್ತಾ ಬಂದರು.
ಗಂಧದೆಣ್ಣೆಯ ಆ ತೆಳು ಪರಿಮಳ ಮೂಗು ಹೊಕ್ಕಿತೋ ಇಲ್ಲವೋ ಹಳೇಬೀಡು ಸುಂದರರಾಯರು ಗಡಬಡಿಸಿ ಎದ್ದು ನೆಲ ನೋಡುತ್ತಾ ನಿಂತರು. ನಾಗರಾಜರಾಯರು ಇವರತ್ತ ನೋಡಿ, ಎಂದಿನಂತೆ ’ಹೂಂ’ ಎಂದು ಗುಟುರಿಕ್ಕಿ, ತಲೆಬಾಗಿಲಿಗೆ ಬಡಿದಿದ್ದ, ಯಾವುದೋ ಒಂದು ದೇವರಿರಬಹುದಾಗಿದ್ದ, ಈಗ ಸವೆದು ಬಕ್ಕವಾಗಿರುವ ಒಂದು ತಾಮ್ರದ ಹಾಳೆಯನ್ನು ಮುಟ್ಟಿ, ಹಣೆಗೊತ್ತಿಕೊಂಡು ಒಳಗೆ ನಡೆದರು.
ಹಳೇಬೀಡು ಸುಂದರರಾಯರು ಮರಳಿ, ಜವಾನನಿಗೆ ಒಂದಿಷ್ಟು ಜಾಗ ಬಿಟ್ಟು, ಬೆಂಚ್ ಮೇಲೆ ನಿಧಾನವಾಗಿ ಕೂತರು. ಇನ್ನೂ ಪೃಷ್ಠ ಬೆಂಚಿನ ಅಂಚನ್ನು ತಾಕಿರಲಿಲ್ಲ, ನಾಗರಾಜರಾಯರು ಹೊರಬಂದದ್ದೇ ಹಳೇಬೀಡು ಸುಂದರರಾಯರು ಗಡಬಡಿಸಿ ಎದ್ದು ನಿಂತು ನೆಲದ ಮೇಲೆ ದೃಷ್ಟಿ ಒಗೆದರು. ನೆಲ ನೋಡುತ್ತಾ ನಿಂತಿದ್ದ ಹಳೇಬೀಡು ಸುಂದರರರಾಯರನ್ನು ನೋಡಿ, ’ಮುಂದಿಂತಿಂಗ್ಳು ಒನ್ಕೇಸಿದೆ.
ನೋಡ್ಕೆಂತೀಯೇನೋ. ಮುಂದಿನ ವಾರ ಬಾ. ನಾಗಬೂಶ್ಣಂಗೆ ಹೇಳಿರ‍್ತೀನಿ. ತಯಾರಾಗು’ ಅಂದವರೇ ನಾಗರಾಜರಾಯರು ಮುಂದಿನ ಉತ್ತರಕ್ಕೆ ಕಾಯದೇ ಒಳಗೆ ಹೋದರು. ಆಗಲೇ ಹಳೇಬೀಡು ಸುಂದರರಾಯರು ಭಾವುಕರಾಗಿ ಕಣ್ಣೀರಿಟ್ಟಿದ್ದು.
ಮುಂದುವರೆಯುವುದು ….

‍ಲೇಖಕರು avadhi

22 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading