ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ -1: ಈಗ ಪಾತ್ರ ಪರಿಚಯ..

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 1

ಪಾತ್ರಗಳು.
(ಈ ಕಥೆಯಲ್ಲಿನ ಪಾತ್ರಗಳು ಬೇರಾವುದೋ ಕಥೆಗಳಿಂದ ನಡೆದು ಈ ಕಥೆಯ ಕಾಲಕ್ಕೆ ಪ್ರವೇಶ ಪಡೆದುಕೊಂಡಂಥವು. ಈ ಕಥೆಯ ಪ್ರದೇಶದ ಹೊಸ ಬದುಕಿಗೆ ವಲಸೆ ಬಂದಂಥವು. ಹಾಗಾಗಿ ಅವುಗಳ ಹೊಸ ಕಾಲ-ಪ್ರದೇಶಮಾನದಲ್ಲಿ ಅವುಗಳ ಪರಿಚಯ ಮಾಡಿಕೊಡುವುದು ನನ್ನ ಕರ್ತವ್ಯ.)

ಪಾತ್ರ ಒಂದು. ಹಳೇಬೀಡು ಸುಂದರರಾಯರು.

ಕೇವಲ ಹತ್ತು ಅಡಿ ದೂರದಿಂದ ನೋಡಿದರೆ ಸಾಧಾರಣ ಕಣ್ಣಿಗೆ ಬೀಳಲಾರದಂಥ ವ್ಯಕ್ತಿತ್ವ. ಹಾಗಂತ ಹೇಳಿ ಅದೇನು ರಾಕ್ಷಸನೋ, ದೇವತೆಯೋ, ಮಾಂತ್ರಿಕನೋ ಅಲ್ಲ. ಸುತ್ತಲಿನ ಒಂದೈದಾರು ಜನರ ನಡುವೆಯೋ, ಒರಗಿ ಕೂತ ಗೋಡೆಯಲ್ಲೋ, ಮಲಗಿರುವ ಹಾಸಿಗೆ ಮಡಿಕೆಗಳಲ್ಲೋ, ಕೂತ ಕುರ್ಚಿಯಲ್ಲೋ, ಉಟ್ಟ ಬಟ್ಟೆಯಲ್ಲೋ ಸುಲಭವಾಗಿ ಕರಗಿ ಹೋಗಬಹುದಾದ ವ್ಯಕ್ತಿತ್ವ ಅಷ್ಟೆ. ಸುಮಾರು ಐದು ಅಡಿಯ ಕಾಷ್ಠ. ಅದಕ್ಕೊಂದು ಮಾಸಲಾದ ಬಿಳಿ ಬಣ್ಣದ ಒಂದು ಪ್ಯಾಂಟು, ಮೇಲೆ ಅಂತಹುದೇ ಒಂದು ಬುಶ್ಶರ್ಟು.

ಸ್ವಲ್ಪ ಕಪ್ಪಿನ ಕಡೆ ಜಾರಿದ ಊದಾ ಮೈ ಬಣ್ಣ. ಜುಟ್ಟು ತೆಗೆದ ತೆಂಗಿನಕಾಯಿಯಂತಹ ಪುಟ್ಟ ಮುಖದ ಮೇಲೆ ಕಪ್ಪುಹಲಗೆಯ ಮೇಲೆ ಸೀಮೇಸುಣ್ಣದಿಂದ ಬರೆದು ಅರೆಬರೆ ಒರೆಸಿದಂತೆ ತೆಳುವಾಗಿ ಹರಡಿಕೊಂಡ ಒಂದೊಬ್ಬೆ ಪೌಡರ್ರು. ಆ ಮುಖಕ್ಕೆ ಸ್ವಲ್ಪ ಅತಿಯಾಯಿತೇನೋ ಅನ್ನುವಂತಹ ಮೂಗು. ಎಂಟಾಣೆ ಗಾತ್ರದ ಹೊಳ್ಳೆಗಳಿಂದ ಹೊರ ಚಾಚಿಕೊಂಡು, ಹಳೇಬೀಡು ಸುಂದರರಾಯರ ಉಚ್ಛ್ವಾಶಕ್ಕೆ ಒಳ ನುಗ್ಗಲೂ, ನಿಶ್ವಾಸಕ್ಕೆ ಮೂಗಿನ ಹೊರಗೇ ಸಳಸಳ ಹೊಯ್ದಾಡುವ ಒಂದೈದಾರು ಕೂದಲುಗಳು.

(ತೀರಾ ಗಂಭೀರವಾದ ಸನ್ನಿವೇಷಗಳಲ್ಲಿ ಹಳೇಬೀಡು ಸುಂದರರಾಯರು ಘಠ್ಠಿಯಾಗಿ ಉಸಿರೆಳೆದುಕೊಂಡಾಗ ಅಕ್ಕಪಕ್ಕದ ಜನ ಉಸಿರಾಡಲೂ ಗಾಳಿ ಸಿಗದೆ ಒದ್ದಾಡಿದ್ದೂ ಇದೆಯಂತೆ.) ಕಾಲಿಗೆ ಅಟ್ಟೆ ಸವೆಯುತ್ತಿರುವ ಟೈರಿನ ಚಪ್ಪಲಿ. ಸುಂದರರಾಯರು ಹಂಗೂ ಹಿಂಗೂ ಎಲ್ಲೆಲ್ಬಿ ಮುಗಿಸಿದ್ದೇ ಅವರ

ತಂದೆ ಹಳೇಬೀಡು ರಾಮಕೃಷ್ಣರಾಯರು (ಗಾಂಧೀ ಸರ್ಕಲ್ಲಿನಲ್ಲಿನ ಮೋತಿ ಟಾಕೀಸಿನ ಪಕ್ಕದ ಮೋತಿ ರೆಸ್ಟೋರೆಂಟಿಗೆ ಅಂಟಿಕೊಂಡಂತೆ ಇವರದು ಒಂದು ಪುಟ್ಟ ಬೀಡಿ ಅಂಗಡಿಯಿದೆ) ತಮ್ಮ ಮಗನಿಗೊಂದು ಹೆಣ್ಣು ತರಬೇಕೆಂದು ಈ ತುದಿಯ ಬಳ್ಳಾರಿ, ಹೊಸಪೇಟೆಯಿಂದ ಆ ತುದಿಯ ಶೇಡಬಾಳ, ಸಾಂಗ್ಲಿಯತನಕ ಹರಡಿದ್ದ ತಮ್ಮ ಸಮಾಜದ ಮನೆಗಳಿಗೆ ಎಡತಾಕಿದರು.

ಸಾಲುಗಟ್ಟಲೆ ಹೆಣ್ಣುಗಳನ್ನು ನೋಡಿದ್ದೂ ಆಯಿತು. ಕೆಲವು ಹೆಣ್ಣುಗಳ ಮನೆಗೆ ಹಳೇಬೀಡು ರಾಮಕೃಷ್ಣರಾಯರೇ ಗಂಡಿನ ಸಮೇತ ಹೋದಲ್ಲಿ, ಕೆಲವು ಹೆಣ್ಣುಗಳು ದಾವಣಗೆರೆಗೆ ಬಂದಿಳಿದಿದ್ದೂ ಆಯಿತು. ಸುಮಾರು ಒಂದೈದಾರು ವರ್ಷ ನಡೆದಿರಬೇಕು ಈ ನೋಡುವ-ನೋಡಿಸುವ ಸಂಪ್ರದಾಯ. ಇಂಥಾ ಊರಲ್ಲಿ ಇಂಥಾ ಮನೆಯಲ್ಲಿ ಇಂಥಾ ಒಂದು ಹೆಣ್ಣಿದೆ ಎನ್ನುವ ವರ್ತಮಾನ ಕಿವಿಗೆ ಬಿತ್ತೋ ತಂದೆ ಹಳೇಬೀಡು ರಾಮಕೃಷ್ಣರಾಯರ ಹಾಗೂ ಮಗ ಹಳೇಬೀಡು ಸುಂದರರಾಯರ ಯಾತ್ರೆ ತಯಾರು.

ಅದು ಭಾನುವಾರವೂ ಆಗಿರಬಹುದು, ಹಬ್ಬ ಹರಿದಿನವಾಗಿರಬಹುದು. ಆದರೆ ಯಾವೊಂದು ಹೆಣ್ಣೂ ಹಳೇಬೀಡು ಸುಂದರರಾಯರಿಗೆ ತಾಳಿ ಕಟ್ಟು ಎಂದು ಕೊರಳು ಕೊಡಲಿಲ್ಲ. ಹಳೇಬೀಡು ಸುಂದರರಾಯರ ಮೀಸಲು ಮುರಿಯಲಿಲ್ಲ. ಹಳೇಬೀಡು ರಾಮಕೃಷ್ಣರಾಯರಿಗೆ ಆಯಸ್ಸು ತುಂಬಿ ಬಂತು. ಮಗನ ಸಂಸಾರವನ್ನು ನೋಡದೇ, ಮೊಮ್ಮಕ್ಕಳನ್ನು ಎತ್ತಿ ಆಡಿಸದೇ ಆ ದೇಹದಿಂದ ಆ ಆತ್ಮ ದೂರವಾಯಿತು. ಅಲ್ಲಿಗೆ ಹಳೇಬೀಡು ಸುಂದರರಾಯರ ಕಲ್ಯಾಣ ಪ್ರಯತ್ನಗಳಿಗೆ ಒಂದು ಮುಕ್ತಿ ದೊರೆಯಿತು. ಆಮೇಲೆ ಹಳೇಬೀಡು ಸುಂದರರಾಯರು ತಮ್ಮ ಮದುವೆಯ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವರಲ್ಲ. ತಲೆ ಕೆಡಿಸಿಕೊಳ್ಳುವಂಥಹ ಪ್ರಸಂಗವೂ ಬರಲಿಲ್ಲ.

ಆದರೆ ಮಗ ಒಂದು ಕರೀಕೋಟು ಹಾಕಿ ಕೋರ್ಟಿನ ಮೆಟ್ಟಿಲು ಹತ್ತಿದ್ದನ್ನು ನೋಡಿ, ಪುಳಕಿತಗೊಂಡು ಆನಂದಬಾಷ್ಪ ಸುರಿಸಿ ಧನ್ಯವಾದ ಕಣ್ಣುಗಳು ಹಳೇಬೀಡು ರಾಮಕೃಷ್ಣರಾಯರದು. ಎಲ್ಲೆಲ್ಬಿ ಮಾಡಿದ ಮೂರ್ನಾಕು ವರ್ಷಕ್ಕೆಲ್ಲಾ ಹಳೇಬೀಡು ಸುಂದರರಾಯರಿಗೆ ಒಂದೆರಡು ಸಣ್ಣಪುಟ್ಟ ಕೇಸುಗಳು ಸಿಕ್ಕು ತಾವೂ ಒಬ್ಬ ಲಾಯರು ಅಂತ ಅನ್ನಿಸಿಕೊಂಡರು. ಮಗ ಲಾಯರ್ ಕೋಟು ಹಾಕಿ ಕೋರ್ಟಿನ ಮೆಟ್ಟಿಲೇರುತ್ತಿದ್ದಂತೇ ಹಳೇಬೀಡು ರಾಮಕೃಷ್ಣರಾಯರು ಬೀಡಿ ಅಂಗಡಿಯನ್ನು ಮಾರಿ ಮಗನ ಛತ್ರ ಚಾಮರದಡಿಯಲ್ಲಿ ನೆಮ್ಮದಿಯ ಬದುಕಿನ ಕನಸು ಕಾಣುತ್ತಾ ಕೂತುಬಿಟ್ಟರು.

ಹಳೇಬೀಡು ಸುಂದರರಾಯರು ವಕೀಲಿಯಲ್ಲಿ ಇನ್ನೂ ಪ್ರವರ್ಧಮಾನಕ್ಕೆ ಬರಬಹುದಿತ್ತೇನೋ, ಹರಿಹರದ ಆ ಗಣಪತಿ ಮಾಸ್ತರು ಹಳೇಬೀಡು ಸುಂದರರಾಯರ ಜೀವನದಲ್ಲಿ ನುಸುಳದೇ ಹೋಗಿದ್ದಲ್ಲಿ. ಅದ್ಯಾವುದೋ ಪ್ರೈವೇಟ್ ಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಗಣಪತಿ ಮಾಸ್ತರು ಸಂಬಳವೇ ಕೊಡದೆ ತಮ್ಮನ್ನು ಶಾಲೆಯಿಂದ ತೆಗೆದು ಹಾಕಿದ್ದಾರೆಂದು ತಂದ ಅಹವಾಲನ್ನು ಕೈಗೆತ್ತಿಕೊಂಡು ಅವರನ್ನು ಕೋರ್ಟ್ ಮೆಟ್ಟಿಲೇರಿಸಿದ್ದರು ಈ ಹಳೇಬೀಡು ಸುಂದರರಾಯರು.

ನೂರು ರೂಪಾಯಿ ಫೀಸು ಅಂತ ಒಪ್ಪಂದವಾಗಿತ್ತು. ಅದೇನು ಗಣಪತಿ ಮಾಸ್ತರು ತನ್ನ ಕಾಣದ ವೈರಿಗಳು ಮಾಡಿದ ಒಳಸಂಚಿನ ಪಾತ್ರವೋ ಅಥವಾ ಭಗವಂತನೇ ಹಳೇಬೀಡು ಸುಂದರರಾಯರ ವಕೀಲಿಯನ್ನು ಒಂದೇ ಹೊಡೆತಕ್ಕೆ ಮುಗಿಸಬೇಕೆಂದು ತೀರ್ಮಾನಿಸಿ ಗಣಪತಿ ಮಾಸ್ತರರ ವೇಷದಲ್ಲಿ ಭೂಮಿಗೆ ಬಂದಿದ್ದನೋ ಏನೋ, ಒಟ್ಟಿನಲ್ಲಿ ಆ ಕೇಸಿನಲ್ಲಿ ಹಳೇಬೀಡು ಸುಂದರರಾಯರ ಮಾನ ಕೋರ್ಟಿನಲ್ಲಿ ಸಾರ್ವಜನಿಕವಾಗಿ ಹರಾಜಾಯಿತು. ಗಣಪತಿ ಮಾಸ್ತರಿಗೆ ಒಂದೋ ಹುಚ್ಚು ಹಿಡಿದಿದ್ದಿರಬೇಕು ಅಥವಾ ಮರೆವಿರಬೇಕು.

ಅವರು ಹಳೇಬೀಡು ಸುಂದರರಾಯರ ಮುಂದೆ ಹೇಳಿದ್ದ ಕಥೆಯೇ ಬೇರೆ, ಪಾಟಿ ಸವಾಲಿನಲ್ಲಿ ಉತ್ತರಿಸಿದ್ದೇ ಬೇರೆ. ಮೊದಲೇ ಯಾವುದೋ ಕನ್ನಡ ಸಿನೆಮಾದೊಳಗೆ ತಮಿಳು ಸಿನೆಮಾ ಜೋಡಿಸಿದಂತೆ ಮೂಡತೊಡಗಿದ್ದ ಈ ಕೇಸಿನ ಸವಾಲು-ಜವಾಬುಗಳಿಂದ ಅರ್ಧ ಹುಚ್ಚಾಗಿದ್ದ ಜಡ್ಜ್, ಬರಬರುತ್ತಾ ತಮ್ಮ ಯಾವುದೇ ಪ್ರಶ್ನೆಗೂ ಹಳೇಬೀಡು ಸುಂದರರಾಯರು ನೀಡುತ್ತಿದ್ದ, `ಕೇಳಿ ನೋಡ್ತೀನಿ ಮೈಲಾರ್ಡ್`, `ವಿಚಾರಿಸಿ ನೋಡ್ತೀನಿ ಮೈಲಾರ್ಡ್`, ಉತ್ತರಗಳಿಂದ ಹುಚ್ಚೆದ್ದು ಕುಣಿಯುವಂತಾಗಿ, ‘ರೀ ಸುಂದರರಾಯರೇ, ಮುಂದಿನ ಸಾರಿನಾದ್ರೂ ಸರಿಯಾಗಿ ಪ್ರಿಪೇರಾಗಿ ಬನ್ನಿ.

ಕೋರ್ಟ್ ಟೈಮ್ ಹಾಳು ಮಾಡಬೇಡಿ. ಈ ಕೇಸನ್ನು ಡಿಸ್‌ಮಿಸ್ ಮಾಡಿದೀನಿ’ ಎಂದು ಅಬ್ಬರಿಸಿ, ಶರಾ ಬರೆದರು. ಜೇಬಿನಲ್ಲಿದ್ದ ಹದಿನೇಳು ರೂಪಾಯಿಗಳಲ್ಲಿ ಹದಿನೈದು ರೂಪಾಯಿಗಳನ್ನು ಹಳೇಬೀಡು ಸುಂದರರಾಯರ ಕೈಗಿತ್ತು ಗಣಪತಿ ಮಾಸ್ತರರು, ಮುಂದಿನ ಹತ್ತು ನಿಮಿಷಗಳಲ್ಲಿ ಹರಿಹರದ ಬಸ್ಸು ಹತ್ತಿ, ತುಂಗಭದ್ರಾ ನದಿಗೆ ಹಾರಿಕೊಂಡು ಜನತಾವಾಣಿಯ ತಲೆಬರಹವಾಗಿ ಬಿಟ್ಟರು. ಕೇವಲ ಗಣಪತಿ ಮಾಸ್ತರೊಬ್ರೇ ತಲೆಬರಹವಾಗಿದ್ದಿದ್ರೆ ಹಳೇಬೀಡು ಸುಂದರರಾಯರಿಗೆ ಏನೂ ನಷ್ಟವಾಗುತ್ತಿರಲಿಲ್ಲ, ನನಗೆ ಈ ಕಥೆ ಬರೆಯುವ ಪ್ರಸಂಗವೂ ಬರುತ್ತಿರಲಿಲ್ಲ. `ಗಣಪತಿ ಮಾಸ್ತರ ಆತ್ಮಹತ್ಯೆ.

ವಕೀಲ್ ಹಳೇಬೀಡು ಸುಂದರರಾಯರ ವೃತ್ತಿಹತ್ಯೆ. ಛೀಮಾರಿ ಹಾಕಿದ ಕೋರ್ಟು. ಇದು ಕೊಲೆಯೋ, ಆತ್ಮಹತ್ಯೆಯೋ. ಈ ಸಾವಿಗೆ ವಕೀಲರೇ ನೇರ ಕಾರಣವೇ.` ಇತ್ಯಾದಿ ಕಪ್ಪನೆಯ ದಪ್ಪ ಅಕ್ಷರಗಳಲ್ಲಿ ತಲೆಬರಹ ಯಾವತ್ತು ಪ್ರಿಂಟಾಯಿತೋ, ಅವತ್ತೇ ಹಳೇಬೀಡು ಸುಂದರರಾಯರ ವಕೀಲಿ ಮುರಿದು ಬಿತ್ತು. `ಒಂದ್ ಪುಟ್ಗೋಸಿ ಸ್ಕೂಲ್ ಮಾಸ್ತರ್ ಕೇಸು ಗೆಲ್ಲಾದಾಗ್ಲಿಲ್ಲ ಈವಯ್ಯನ ಕೈನಗೆ, ಯಿನ್ನೇನು ಕಿತ್ಗತಾನೋ ಯೇನೋ` ಎನ್ನುವ ನಾಣ್ಣುಡಿಯೊಂದಿಗೆ, ತ್ರೇತಾಯುಗದ ಯಾವುದೋ ಋಷಿ ಮುನಿ ಶಾಪ ಹಾಕಿದಂತೆ ಜನ ಹಳೇಬೀಡು ಸುಂದರರಾಯರಿಂದ ದೂರ ಸರಿದರು..

ಒಂದಿಷ್ಟು ದಿನ, ವಾರಗಳು, ತಿಂಗಳುಗಳು ಹಳೇಬೀಡು ಸುಂದರರಾಯರು ಕೋರ್ಟ್ ಬಯಲಿನಲ್ಲಿ ಅಡ್ಡಾಡಿದರೋ, ಹಾವು ಕಂಡಂತೆ ಜನ ಇವರಿಂದ ದೂರವಾದರು. (`ಜನ ಹೆದರ್ತಾರೆ, ಕೋರ್ಟ್ ಅಂಗಳದಲ್ಲಿ ಅಡ್ಡಾಡಬೇಡಿ` ಅಂತ ಜಡ್ಜೇ ಒಂದಿಸ ಆರ್ಡರ್ ಮಾಡಿದ್ರಂತೆ ಅಂತ ಜನ ತಮಾಷೆಗೆ ಮಾತಾಡಿಕೊಳ್ತಾಯಿದ್ರು ಆ ಕಾಲದಲ್ಲಿ.) ಧರಿಸಿದ್ದ ಕರೀಕೋಟಿನ ಬಣ್ಣ ಹಳಸಲಾಗುತ್ತಾ ಬಂತೇ ಹೊರತು ಯಾರೂ ಇವರತ್ತ ತಿರುಗಿ ನೋಡಲಿಲ್ಲ.

ಅದ್ಯಾರೋ `ವಕೀಲ್ ನಾಗರಾಜರಾಯರತ್ರ ಹೋಗಿ. ಅವ್ರು ಮನಸ್ಸು ಮಾಡಿದ್ರೆ ಯೇನಾರ ಆಗ್ತತೆ` ಅಂದಿದ್ದು ಕೇಳಿ ಅವತ್ತಿನಿಂದ ಸುಮಾರು ನಾಲ್ಕಾರು ವರ್ಷಗಳು ದಾವಣಗೆರೆಯ ಸುಪ್ರಸಿದ್ಧ ವಕೀಲ್ ನಾಗರಾಜರಾಯರ ಆಫೀಸಿನ ಮುಂದಿನ ಬೆಂಚನ್ನು ತಮ್ಮ ಕುಂಡೆಯಿಂದ ಸವರುತ್ತಾ ಬಂದಿದ್ದಾರೆ. ಕೇವಲ ಬೆಂಚು ಸವೆಯಿತೇ ಹೊರತು ಇಲ್ಲೀವರೆಗೂ ಒಂದಾದರೂ ಕೇಸು ಇವರ ಕೈಗೆ ಹತ್ತಿಲ್ಲ. ನಾಗರಾಜರಾಯರು ಇನ್ನೂ ಕೃಪೆಗೈದಿಲ್ಲ. ಹಳೇಬೀಡು ಸುಂದರರಾಯರದ್ದು ಹಿಡಿಗಾತ್ರದ ತುತ್ತಿನ ಚೀಲಾನೇ ಇರಲಿ ಪರವಾಗಿಲ್ಲ, ಅದ್ರೆ ಅದಕ್ಕೂ ಏನಾರ ಹಾಕಬೇಕಲ್ಲ. ದಿನಾ ಬೆಳಿಗ್ಗೆ ಒಂದರ್ಧ ಗಂಟೆ ವಕೀಲ್ ನಾಗರಾಜರಾಯರ ಆಫೀಸಿನ ಮುಂದಿನ ಬೆಂಚು ಸವೆಸಿ, ನಂತರ ಸಂಜೆಯವರೆಗೂ ಕೋರ್ಟ್ ಬಯಲಿನಲ್ಲಿ, ಒಂದಿಬ್ಬರು ಸ್ಟಾಂಪ್‌ವೆಂಡರ್ರುಗಳ ಜತೆ ಕೂತು ಅವರಿಗೆ ಇವರಿಗೆ ಪೆಟಿಷನ್ನೋ, ಅಫಿಡೆವಿಟ್ಟೋ ಬರೆದು ಕೊಡುತ್ತಾ ವಾರಕ್ಕೆ ಒಂದು ಐದೋ ಹತ್ತೋ ದುಡಿಯುತ್ತಿದ್ದಾರೆ.

ತಮ್ಮ ತಂದೆ ಈ ಬೀಡಿ ಅಂಗಡಿ ಮಾರದೇ ಹೋಗಿದ್ದರೆ, ಈ ಹೊತ್ತಿಗೆ…ಎಂದು ತಮ್ಮ ತಂದೆಯನ್ನು ಇಂದಿಗೂ ದಿನಕ್ಕೆ ಒಂದೈದಾರು ಸಲವಾದರೂ ನೆನೆಸಿಕೊಳ್ಳುತ್ತಾರೆ. ಪುಣ್ಯಕ್ಕೆ ಮದುವೆಯಿಲ್ಲವಾದ್ದರಿಂದ ಅದ್ಯಾವುದೋ ಹೆಣ್ಣುಜೀವ ಪ್ರಾಣಾಪಾಯದಿಂದ, ನಿರಂತರ ಉಪವಾಸ, ನಿತ್ಯ ಏಕಾದಶಿ ಮುಂತಾದ ಆಚರಣೆಗಳಿಂದ ಬಚಾವಾಗಿತ್ತು.

ಮುಂದುವರೆಯುವುದು….

‍ಲೇಖಕರು avadhi

19 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading