ಸುರೇಂದ್ರ ನಾಥ್
(ಗುಲ್ಜಾರ್ ಕವನಗಳ ಭಾವಾನುವಾದ)

ಕನಸಿನ ಚೂರುಗಳು
ನೋಡು, ಮೆಲ್ಲಗೆ ನಡಿ.
ತಡಿ,
ಇನ್ನೂ ನಿಧಾನವಾಗಿ.
ಎಚ್ಚರದಿಂದ ಹೆಜ್ಜೆ ಇಡು.
ಸದ್ದಿಲ್ಲದಂತೆ, ದಯವಿಟ್ಟು.
ಮಾಡದಿರಲಿ ನಿನ್ನ ಹೆಜ್ಜೆ ಸದ್ದು.
ನನ್ನ ಕನಸಿನ ಗಾಜು
ಒಡೆದು
ಎಚ್ಚರಾದೀತು ನನಗೆ.
**
ರಾತ್ರಿ
ಅದನ್ನು
ನಿನ್ನ ತೋಳಲ್ಲಿ ಬಾಚಿ ತಬ್ಬಿದ್ದೆ.
ನಿನ್ನೆದೆಯಲ್ಲಿ ಬಚ್ಚಿಟ್ಟು ಕೊಂಡಿದ್ದೆ.
ಕಥೆ ಹೇಳಿ
ಜೋಗುಳ ಹಾಡಿ ಮಲಗಿಸಿದ್ದೆ.
ಬಹಳ ಮುದ್ದು ಮಾಡಿ ಬಿಟ್ಟೆ.
ಇಂದು ನನ್ನ ಹಾಸಿಗೆಯಲ್ಲಿ
ಹೊರಳುತ್ತ
ಅದು
ಅಳುತ್ತಿದೆ ನೋಡು.
—
ನೆನಪಿದೆಯಾ?
ನೆನಪಿದೆಯಾ
ಅವತ್ತು ನನ್ನ ಮೇಜಿನ ಮೇಲೆ
ಸಿಗರೇಟ್ ಪ್ಯಾಕಿನ ಮೇಲೆ
ಒಂದು ಪುಟ್ಟ ಗಿಡದ
ಚಿತ್ರ ಬರೆದಿದ್ದೆ.
ಹಾಗೆ ಸುಮ್ಮನೆ.
ಬಂದು ನೋಡು
ಆ ಗಿಡ
ಇಂದು
ಹೂ ಬಿಟ್ಟಿದೆ.
—
ಬಾ, ಒಂದು ಪದ್ಯ ಬರೆಯೋಣ
ಹಳೆಯ ಗಾಯಗಳ ಕೆದಕಿ
ಅತ್ತುಬಿಡೋಣ.
ಅಥವಾ
ಮರೆತು ಹೋದ ಕವಲು ದಾರಿಯಲ್ಲಿ
ನಿಂತು
ಒಂದು ಹೆಸರು ಕರೆಯೋಣ.
ಬಾ, ಒಂದು ಪದ್ಯ ಬರೆಯೋಣ.
—
ನೀನು
ರಾತ್ರಿಯನ್ನು ಎಲ್ಲಿ ಬಚ್ಚಿಟ್ಟಿದ್ದೀಯಾ?
ನಿನ್ನ ಕೈಗಳ ಸ್ಪರ್ಶವನ್ನು
ಎಲ್ಲಿ ಅವಿತಿಟ್ಟಿದ್ದೀಯ?
ಎಲ್ಲಿವೆ ನಿನ್ನ ತುಟಿಗಳು?
ಎಲ್ಲಿದ್ದೀಯ ನೀನು?
ಇವತ್ತು ನೀನು ಎಲ್ಲಿದ್ದೀಯ?
ನನ್ನ ಹಾಸಿಗೆಯ ಮೇಲೆ
ಈ ಮೌನ
ಏಕೆ ಮಲಗಿದೆ
ಈ ರಾತ್ರಿ?







ಈ ಪದ್ಯಗಳು ಗುಲ್ಶಾರ್ ಸಾಬ್ ಬರೆದ ಪದ್ಯಗಳ ಅನುವಾದಗಳು. ದಯವಿಟ್ಟು ಗಮನದಲ್ಲಿಡಿ. ಸೂರಿ.
ಸೂರಿ ಸಹೇಬರಿಗೆ ನಮಸ್ಕಾರ.
ಸಿಗರೇಟ್ ಪ್ಯಾಕಿನ ಮೇಲೆ
ಪುಟ್ಟ ಗಿಡ
ಇಂದು
ಹೂ
ಬಿಟ್ಟಿದೆ…
ನವಿರಾಗಿ,ಚುರುಕಾಗಿ, ಹೊಸತಾಗಿವೆ.
ಮತ್ತಷ್ಟು ಹೀಗೆ ಮೂಡಿಬರಲಿ.
ಮರೆತು ಹೋದ ಕವಲು ದಾರಿಯಲ್ಲಿ
ನಿಂತು
ಒಂದು ಹೆಸರು ಕರೆಯೋಣ.
ಬಾ, ಒಂದು ಪದ್ಯ ಬರೆಯೋಣ.
ಈ ಭಾವ ಚೆನ್ನಾಗಿದೆ. ಗುಲ್ಜಾರ್ ಸಾಬ್ ರ ಪ್ರೇಮಕವಿತೆಗಳ ಹೂರಣವೇ ಬಲು ಚೆಂದ. ನಿಮ್ಮ ಭಾವಾನುವಾದ ಚೆನ್ನಾಗಿದೆ.
– ಪ್ರಸಾದ್.ಡಿ.ವಿ.
ಮಾನ್ಯ ಸುರೇಂದ್ರ ಅವರ ಅನುವಾದಗಳು ಚೆನ್ನಾಗಿವೆ. ಭಾವಗಳು ಲಾಸ್ಯವಾಡುತ್ತವೆ. ಕವಿ- ಕಾವ್ಯ ಮತ್ತು ಆಸ್ವಾಧನೆಗೆ ಇಷ್ಟೇ ಸಾಕು. ಹಾಗೇ ಓದುವಾಗ ಪ್ರತಿಕ್ರಿಯೆ ಬರೆಯುತ್ತಾ ಬರೆಯುತ್ತಾ ಹೀಗೆ ಬರೆದುಬಿಟ್ಟೆ. ಒಂದು ನವೋಲ್ಲಾಸದ ಹಕ್ಕಿಯ ಜಗಕೆ.
ಅವಳ ಮುಖ ಪುಸ್ತಕದಲಿ
ಬಳಪದ ಕಣ್ಣು
ಮೇಲೆತ್ತಿ ಹುಬ್ಬು
ಹಣೆ ನಾಲ್ಕು ಗೀಚು
ಕೆಳಗಿಳಿಸಿ ಪಟಪಟ ರೆಪ್ಪೆ
ಭಾವ ಬರೆವ ಅಕ್ಷರ ಸಾಲು |
ನುಸುಳಿ ಗಾಳಿ
ಆಘ್ರಾಣಿಸಿ ಮೂಗ ತೀಡಿಸಿ
ಅಕಟಕಟಾ …. !
ಮೂಗುತಿ ಹಲ್ಕಿಸಿದ ಮಿಂಚು|
ನವಿರು ಇಂಪು
ಜಾಡಿಸಿ ಕಿವಿ ಪಲ್ಲವಿಸಿ
ತುಟಿ ಮೀಟಿ ನಾಲಗೆ ತಂತು
ವೀಣೆಗೆ ಬಾಯಿಗಳೆರಡು |
ಬೆರಳಾಡಿಸುತ್ತಿದೆ
ಮುಡಿ ತಿರುಳ ಮರುಳು
ತಕಥೈ ಕಿವಿಯೋಲೆ ಕಾಲು
ಕೊರಳು ಸಾವಿರ ಕೋಗಿಲೆ ಹಾಡು |
ಮಿಕ್ಕೆಲ್ಲವೂ ನಾನು
ಎಂಜಲೊರಸದೇ
ಪುಟ ಮಗುಚುತ್ತೇನೆ
ಕಥೆ ಮುಗಿಯದ ರಾತ್ರಿ-ಹಗಲು |