ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂಗೂರೇಶ ಹಿರೇಮಠ ಹೊಸ ಕವಿತೆ – ಬಣ್ಣದ ಬಟ್ಟೆ…

ಸೂಗೂರೇಶ ಹಿರೇಮಠ

ಆಕಾಶದಲಿ ಸ್ವಚ್ಛಂದವಾಗಿರುವ ನಕ್ಷತ್ರಗಳಿಗೆ
ಬಣ್ಣದ ಬಟ್ಟೆ ಕಟ್ಟಿ ಎಳೆಯಲಾಗಿದೆ
ಖಂಡಿತ ಬೀಳುತ್ತವೆ ಎಂಬ ವಿಕೃತ ನಂಬಿಕೆಯಿಂದಲೆ..
ಒಂದಷ್ಟು ಉದುರಿಬಿದ್ದವು
ಮತ್ತೊಂದಿಷ್ಟು ಮಿನುಗಿ ದೂರದಲೆ ನಕ್ಕವು..

ಎಳೆದ ರಭಸಕ್ಕೆ ದೊಪ್ಪನೆ‌ಬಿದ್ದವು
ಎಲ್ಲಿಬಿದ್ದೆವೆನ್ನುವುದ ಮರೆತು
ಥಟ್ಟನೆ ನಿಂತವು
ಕೊಡವಿಕೊಳ್ಳಲಿಲ್ಲ
ಮೈಗಂಟಿದ‌ ಧೂಳನ್ನೂ ಸಹ..

ಬಣ್ಣಗಳ‌ ಬಟ್ಟೆಕೊಟ್ಟು
ಕೊಚ್ಚೆಯಲ್ಲಿ ಮೀನು ಹುಡುಕಲು
ಕ(ಲಿ)ಳಿಸಲಾಗಿದೆ
ಸಿಕ್ಕಿತೆ ಮತ್ಸ್ಯ??
ಅಥವಾ ಮತ್ಸರ…

ಬಟ್ಟೆಯಿಂದ ನೇಯ್ದ ಹಗ್ಗವನ್ನು
ಅಫೀಮಿನೊಡನೆ ಕಟ್ಟಿಹಾಕಲು ಕೊಡಲಾಗಿದೆ
ತನ್ನದೆ ಕುತ್ತಿಗೆಯ ಬಿಗಿಯುತ್ತದೆಂಬ ಅರಿವಾಗುವುದಿಲ್ಲ
ನಶೆ ಇಳಿಯುವವರೆಗೂ

ಬಾವಿ ತೋರಿಸಿ ವಾಹ್ ಆಳವಾಗಿದೆ
ಅಲ್ಲಿ ನಾವಷ್ಟೆ.. ಬನ್ನಿ ಎಂದು
ಕಂಡವರನ್ನ ಕಾಣಿಸಲಾರದವರನ್ನೂ
ಆಳಕ್ಕೆ ಇಳಿಸಲಾಗುತ್ತಿದೆ..
ಇಲ್ಲ ಇಲ್ಲ ತಳ್ಳಲಾಗುತ್ತಲೆ ಇದೆ.

ಸಮುದ್ರದ ‘ವಿಶಾಲ’ವೂ ಅಸಹ್ಯ ಎಂದೆ
ಬೋಧಿಸಲಾಗುತ್ತಿದೆ ಈಗೀಗ
ಕೂಡುವುದು ಸೇರುವುದು
ಜೊತೆ ಬದುಕುವುದು ಸಹ..

‍ಲೇಖಕರು Admin

26 February, 2022

2 Comments

  1. Kotresh Arsikere

    ವರ್ತಮಾನದ ತಲ್ಲಣಗಳು

  2. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading