ಹುಲಿಯ ಕತೆ
ಚಾಂದ್ ಪಾಷ ಎನ್. ಎಸ್.
ಚರಿತ್ರೆ ಚೆಲ್ಲಿದ ಬೆಳಕಿಗೆ ಬೆನ್ನು ತೋರಿಸಿ,
ಕತ್ತಲೆಯೇ ಚರಿತ್ರೆ ಎನ್ನುವ ನೂರು ನಾಲಿಗೆಯ ತುದಿಯಲ್ಲೂ ಸತ್ಯದ ಶವವಿದೆ!
ಸುಡುಗಾಲಿನ ಕಣ್ಣಿಗೆ ಮುಲಾಮು ಬಳಿದಿರುವುದಕ್ಕಿಂತ ಸುಣ್ಣ ಬಳಿದದ್ದೇ ಹೆಚ್ಚು.
ಅಳೆದು ಸುರಿದರೂ ಸತ್ಯ ಬರಿಗೈಗೆ ಸಿಗದ ಮೀನ ಹೆಜ್ಜೆ.
ಆದರೂ ಕಡಲು ಮಾರಾಟವಾಗಿದೆ ಸುಳ್ಳಿನ ಸಂತೆಯಲ್ಲಿ!
ಖಡ್ಗವೊಂದು ಕತ್ತರಿಸಿದ ದೇಹಾಂಗಗಳೆಲ್ಲ ಈಗಲೂ ಸಾಕ್ಷಿ ಹೇಳಿ ಸಾಬೀತು ಪಡಿಸುತಿರಲು,
ಕ್ರೂರಿ ಪಟ್ಟ ಸಲೀಸಾಗಿ ಹೆಗಲೇರುತ್ತದೆ.
ಧರ್ಮದ ದಾರಿಯಲ್ಲಿ ಅವ ನೆಟ್ಟ ಗಿಡ ಹೂ ಬಿಟ್ಟಿದ್ದರೂ
ಈಗಲೂ ಮುಳ್ಳೆ ಕಾಣುತ್ತಿವೆ ಸುಳ್ಳೇ ಹೇಳದ ಕಂಗಳಿಗೆ.
ರಾತ್ರಿ ತಾನಾಗೇ ಸತ್ತರೂ ಹಗಲೇ ಅಪರಾಧಿ ಎಂಬಂತೆ!

ಬಿಳಿಯರ ಬೂಟು ನೆಕ್ಕಿದ ನಾಲಿಗೆ ರತ್ನವಾಗಿರಲು,
ಭಾರತಾಂಬೆಗೂ ನಾಚಿಕೆ ಆಗಿರಬೇಕು!
ಹೇಡಿಗಳಿಗೆ ವೀರತ್ವದ ಮಸಿ ಬಳಿದಿರಲು,
ಮುಗಿಲಿಗೂ ಬಂಜೆತನದ ಭಾವ.
ಆದರೂ, ಚೂಪಾದ ಮೀಸೆಯೇ ದೇಶದ್ರೋಹಿ
ಏಕೆಂದರೆ, ಮಣ್ಣಿಗಾಗಿ ಮಕ್ಕಳ ಒತ್ತೆ ಇಟ್ಟವ ದೇಶಪ್ರೇಮಿ ಹೇಗಾದನು??
ಆ ಪುಟದೊಳಗಿನ ಪಟವನೇ ಹರಿದು ಬಿಡಿ,
ಅವನ ಚೂಪಾದ ಮೀಸೆಯ ಕಂಡರೆ ಅವನ ಹರಿತವಾದ ಖಡ್ಗವೇ ನೆನಪಾಗಬಹುದು ನಿಮಗೆ!
ಅಷ್ಟಕ್ಕೂ ಹುಲಿ ಕೊಲ್ಲಲು ದನದ ಕತೆ ಹೇಳಿದವರಲ್ಲವೇ ನೀವು?!






0 Comments