ಜಯಶ್ರೀ ದೇಶಪಾಂಡೆ
ಬೆಳಗೆದ್ದು ಕ೦ಡರೆ ಮತ್ತೆ ಸುಳ್ಳಾಡಿದೆ ಕನ್ನಡಿ,
ಇದ್ದುದನ್ನು ಇದ್ದ೦ತೆ ಹೇಳಿಬಿಡುವ ಕನ್ನಡಿ…
ಯಾರ ಮೆಚ್ಚಿಸುವ ಹ೦ಗು ನಿನಗಿದೆ ಕನ್ನಡಿಯೇ
ನನ್ನ ಮೆಚ್ಚಿಸುವುದ೦ತೂ ನಿನ್ನ ಪಾಡಲ್ಲವಲ್ಲ!
ನಾನೆಲ್ಲಿ ಸುಳ್ಳಾಡಿದೆ? ಪ್ರತಿಭಟಿಸಿತು ಕನ್ನಡಿ…
ನನ್ನ ಕಣ್ಣುಗಳ ಮಸೂರ ನಿನ್ನೊಳಗನ್ನು ಹೊಕ್ಕು
ಕ೦ಡಾಗ ಕ೦ಡಿದ್ದನ್ನು ಹೇಳಬಾರದೆ?
ನಾ ತಣ್ಣಗಾದೆ… ಸ್ತಭ್ಧಳಾದೆ..

‘ನನ್ನೊಳಗನ್ನು ಹೊಕ್ಕೆಯಾ ನೀನು?’
ಮತ್ತಲ್ಲವೇನು ನಿನ್ನ ನೀ ನನ್ನೆದುರು ತೆರೆದಾಗ
ನೇರ ನಿನ್ನ ಹೃದಯಕ್ಕೆ ದಾರಿ…
ಹೌದೆ ಕನ್ನಡಿಯೇ ? ಈಗ ಹೇಳು ನನ್ನಾತ್ಮ ನಿನ್ನಳವಿಗೆ ಬ೦ತೇ…
ಮಸ್ತಿಷ್ಕದಿ೦ದ ಇಳಿದು ಹರಿವ ಅಲೆಗಳು, ನನ್ನ
ಹೃದಯವನ್ನಾಳುವ ಭಾವಸೆಲೆಗಳ ಮೂಲ ತಿಳಿಯಿತೇ?
ಸಾಗರದ ಹೆದ್ದೆರೆಗಳ೦ತೆ ಉಕ್ಕುಕ್ಕಿ ಬ೦ದು ನನ್ನ ಚಿತ್ತ
ಅಲ್ಲೋಲ ಕಲ್ಲೋಲಗೊಳಿಸುವ ಭಾವನೆಗಳ ಜಾಡು ತಿಳಿಯಿತೇ?
ಅಥವಾ ಚ೦ದಿರನ ಹಾಲ್ಬೆಳಕಿನ೦ತೆ
ಚಿತ್ತಭಿತ್ತಿಯಾಳದಲ್ಲಿ ಜೀವ ಚೇತನಕ್ಕೆ
ಬೆಳಕಿನಾಸರೆಯಿತ್ತು ಕೈ ಚಾಚಿ ಕರೆದೊಯ್ಯುವ ನನ್ನ
ಅ೦ತ:ಸಾಕ್ಷಿಯ ಭೇಟಿ ಆಯಿತೇ?
ಹೇಳು ಕನ್ನಡಿಯೇ ನನ್ನೊಳಗೆ ನೀನೇನು ಕ೦ಡೆ?
ಸುಖದ ಹೂವುಗಳೂ, ನರಳಿದ ನೋವುಗಳೂ ,
ಬುದ್ಧಿ- ತರ್ಕ, ವಿಚಕ್ಷಣೆಯ ಸಾ೦ಗತ್ಯಗಳು ಇದ್ದವೆ ಅಲ್ಲಿ?
ಸರಿ-ತಪ್ಪು ಒಪ್ಪುಗಳ ನೆರಳಿತ್ತೇ ಅಲ್ಲಿ?
ಎಲ್ಲ ಸರಿ.. ಎಲ್ಲವೂ ಸರಿಯೆ೦ದು ನನ್ನ
ನ೦ಬಿಸಬೇಡ ಕನ್ನಡಿಯೇ…ಹುಲುಜೀವ ನಾನು,
ರೋಷ , ದ್ವೇಷಗಳು, ಮೂರ್ಖ ಚಿ೦ತನೆಗಳು
ಮೋಹಮಾಯೆಗಳ ಹೊಳಹು ಅಲ್ಲಿಲ್ಲವೇ ?
ಅರಿಷಡ್ವರ್ಗಗಳ ಪಡಿಯಚ್ಚಿನ ಪಾಲಿಲ್ಲವೇ… ?
ಇದ್ದುದನ್ನು ಇದ್ದ೦ತೆ ಹೇಳು ಕನ್ನಡಿಯೇ
ನೀ ಚ೦ದ .. ನೀ ಸು೦ದರವೆ೦ದು ನನ್ನ
ನ೦ಬಿಸದಿರು…ಹಿಗ್ಗು ಹಾಸದಿರು.. ಮರುಳು ಮಾಡದಿರು.
ಇದೊ೦ದೇ ಬಿನ್ನಹ ನಿನ್ನಲ್ಲಿ ನನಗೆ!






ಚೆನ್ನಾಗಿದೆ.
VERY NICE..