ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುರೇಶ ಎಲ್ ರಾಜಮಾನೆ ಕವಿತೆ- ಏಕೆ ನಮಗೆಲ್ಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ..

ಸುರೇಶ ಎಲ್ ರಾಜಮಾನೆ

ಜೋತುಬಿದ್ದ ಗಿಡದೆಲೆಯ ಒಳಗೆ
ತಲೆಕೆಳಗಾಗಿ ತೂಗುತ್ತಿದೆ ಹಸಿರು
ಹಸಿರಿನ ಬಣ್ಣದಲಿ ಉಸಿರಿನ ಜನನ
ತಿಳಿಯುತ್ತಿಲ್ಲ,
ಜಗತ್ತಿನ ಏಳ್ಗೆಗಾಗಿ ಏಕೆ
ಮನೆಯ ಗೋಡೆಯನು ನಾವು
ಒಡೆಯಬೇಕು
ತಿಳಿಯುತ್ತಿಲ್ಲ,
ಒಡೆದ ಕನ್ನಡಿಯ ಒಳಗೆ ಏಕೆ
ಒಗ್ಗಟ್ಟಿನ ಕನಸನ್ನು ಕಾಪಿಟ್ಟು
ಮುಖ ನೋಡಿಕೊಳ್ಳಬೇಕು.

ಸಂಜೆಯ ಹಾದಿಯಲಿ ಕೈಹಿಡಿದು
ನಡೆಯುವ ಪ್ರಕೃತಿಯು
ಪ್ರತಿ ಹೆಜ್ಜೆಗೂ ಅವಮಾನಕ್ಕೆ ಒಳಗಾಗುತ್ತಿದೆ
ತಿಳಿಯುತ್ತಿಲ್ಲ,
ಹೆಣ್ಣನ್ನು ಭೂಮಿ ಎಂದು ಹೇಳಿ
ಗರ್ಭಕ್ಕೆ ಗರಗಸ ಇಡುವ
ನಿಲುವೇಕೆ!?
ತಿಳಿಯುತ್ತಿಲ್ಲ,
ನಿರಂತರವಾಗಿ ನದಿಯಾಗಿ ಹರಿಯುವ
ನೀರು ಬಾರಿನಲಿ ಕಲಬೆರಿಕೆಗೆ
ಕೈಚಾಚುವಂತಾಗಿದ್ದೇಕೆ !?

ಖಾಲಿ ಹಾಳೆಗಳು ನಮ್ಮ
ನಾಳೆಗಳನ್ನು ದಾಖಲಿಸಲು ಪ್ರತಿಭಟಿಸಬೇಕಿದೆ
ಪ್ರತಿ ಅಕ್ಷರವೂ ಇಲ್ಲಿ ಏಕೆ ಆಕ್ಷೇಪಿಸುತ್ತಿವೆ
ತಿಳಿಯುತ್ತಿಲ್ಲ,
ಲೇಖನಿಗಳು ಲೆಕ್ಕತಪ್ಪಿರಬಹುದೆ
ಏಕೆ ನಮಗೆಲ್ಲ ಒಪ್ಪಿಕೊಳ್ಳಲು
ಸಾಧ್ಯವಾಗುತ್ತಿಲ್ಲ
ತಿಳಿಯುತ್ತಿಲ್ಲ,
ಸಾಲು ತಪ್ಪಿದವರ ಮೈಮನಕೆ
ಮಸಿ ಬಳಸುವದನ್ನು ಬಿಟ್ಟು ನಾವುಗಳೇಕೆ
ಎದೆಗೆ ಬಿದ್ದ ಅಕ್ಷರಗಳ ಅರಳಿಸುತ್ತಿಲ್ಲ

ಬಟ್ಟೆಯಿಂದ ಬದುಕನ್ನು ಮುಚ್ಚಿಕೊಂಡಿದ್ದೇವೆ
ಬದುಕನ್ನು ಮುಚ್ಚುಮರೆಯಲ್ಲದೆ
ತೆರೆದಿಡಲು ಸನ್ನದ್ಧರಾಗಿದ್ದೇವೆ
ತಿಳಿಯುತ್ತಿಲ್ಲ,
ತೀರಾ ತೆರೆದ ಎದೆಯಿಂದ ಇದ್ದರೂ
ಬೋರಲಾಗಿ ಬಿದ್ದರೂ
ಬೇರೆಯವರ ಬಾಯಿಗೇಕೆ ಆಹುತಿಯಾಗುತ್ತಿದೆ
ತಿಳಿಯುತ್ತಿಲ್ಲ,
ಬಟ್ಟೆಯಿಂದ ಬದುಕನ್ನು ಅಳೆಯುವ
ಹರಕು ಮನಸ್ಥಿಗೆ ಬಂದು ನಿಂತಿದ್ದೇಕೆ

ತಿಳುವಳಿಕೆಯ ತೊಟ್ಟಿಲಲಿ ತಿಳಿಯದೇ ನಗುವ
ಮಗುವಿನ ಮನದಲ್ಲಿ ತಿಳಿಯದಂತೆ
ತಿದ್ದುವ ಕಾರ್ಯ
ಕಟ್ಟುವ ಮನೆಗೆ ಬೆಟ್ಟದ ತಾವರೆಯಿಂದ
ಸಿಂಗರಿಸುವ ಔಧಾರ್ಯ
ಎಲ್ಲರದ್ದಾಗಲಿ..

‍ಲೇಖಕರು avadhi

16 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading