‘ಕಡೆಗಣಿಸು, ನೀ ರತ್ನಗರ್ಭಾ.!’
ವಸುಂಧರಾ ಕೆ ಎಂ
ಕಂಗೆಡಿಸುವವರ ಕಿರುಗಣ್ಣಿನಲೆ
ಕಡೆಗಣಿಸು, ಹಗಲಿರುಳು
ಅವರೆದೆಯು ಕುದಿಯುತಿರಲಿ..
ದುಗುಡದಲಿ ಮನವ ಮುದುಡ
-ಗೊಡದೆ ಎದೆಗಾರಿಕೆಯ ಅಪ್ಪಿಕೋ,
ನಿಜದ ದನಿಗೆ ನೀ ಕಿವಿಯನಾಂತು..
ನಿನ್ನಳವು ಮಿಗಿಲಿಹುದು; ಪರರ
ಇತಿಮಿತಿಗೆ ತಲೆ ಕೊಡವಿಬಿಡು,
ಅವರೆಣಿಕೆಗೂ ಮಿಕ್ಕು ಮೀರಿ ಬೆಳೆ..
ಎಡೆಗೊಡದೆ ಹುಸಿನುಡಿಗೆ
ಕಿವುಡುಗಿವಿಯಾಗಿ ಬಿಡು,
ಜಾಣೆಯಾದರೆ ನೀನು ನಿಜದಿ..

ಮಣಿಸು ಹುಸಿಯ ನುಡಿವವರ
ಸಂಯಮದ ಶಕ್ತಿಯಲಿ;
ಚದುರದಿರಲಿ ನಿನ್ನ ಮತಿಯು..
ಕಳೆಯ ಕೊಳೆಯು ಕೊಚ್ಚಿ
ಹೋಗುವಂತೆ ಮಹಾಮಳೆಯಾಗಿ
ಸುರಿದು ಸೇರು, ಸಾಗರದ ಒಡಲ..
ಮರೆಯದಿರು; ಮಹಾಜಲಧಿ ನೀನೀಗ,
ಅನನ್ಯ ವಿಸ್ಮಯ ಅಡಗಿರುವ
‘ರತ್ನಗರ್ಭಾ ವಸುಂಧರಾ’…!!!!






ಚೆನ್ನಾಗಿದೆ