ಸುಮಾ ಆನಂದರಾವ್‌ ಸರಣಿ 4 – ಹೈಡೆಲ್ಬರ್ಗ್ ಜೆರ್ಮನಿ…

ಸುಮಾ ಆನಂದರಾವ್‌

4

ಹಸಿರು ತುಂಬಿದ ಗಗನ ಚುಂಬಿ ಪರ್ವತಗಳು ನಡುವೆ ನಿಶ್ಯಬ್ದವಾಗಿ ಹರಿವ ‘ನೆಕ್ಕಾರ್’ ನದಿ. ಬೆಟ್ಟದ ತಪ್ಪಲಿನಲ್ಲಿ ಕೆಂಪು ಹೆಂಚಿನ ಮನೆಗಳಿಂದ ಕಂಗೊಳಿಸುತಿಹ ಊರು. ಬೆಟ್ಟದ ಮೇಲೆ ಅಜರಾಮರವಾಗಿ ಕೋಟೆ, ಇದು ಹೈಡೆಲ್ಬರ್ಗ್.

ಜೆರ್ಮನಿಯ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದಾಗಿದೆ. ಬೇಸಿಗೆಯ ಬೆಳಗಿನಲ್ಲೂ ಚುಮು ಚುಮು ಚಳಿ. ಮಧ್ಯಾಹ್ನ ೧ ಗಂಟೆಯಿಂದ ರಾತ್ರಿ ೭ರವರೆಗೆ 32 ಡಿಗ್ರಿ ಇದ್ದು, ರಾತ್ರಿ ೧೦ರ ನಂತರ ಕತ್ತಲಾಗಿ, ಬೆಳಿಗ್ಗೆ ೧೦ ರ ತನಕ 13ಕ್ಕೆ ಇಳಿಯುತ್ತದೆ. ಹೀಗೆ ಒಂದು ವಾರ, ಮತ್ತೊಂದು ವಾರ ಪೂರ್ತಿ ಚಳಿ, ಜಾಕೆಟ್ ಯಾವಾಗಲೂ ರೆಡಿ ಇರಬೇಕು. ವಾತಾವರಣದ ಏರು ಪೇರನ್ನು ತಿಳಿಯದೆ ಎಲ್ಲೂ ಹೊರಡುವಂತಿಲ್ಲ.

ಸೇತುವೆಯ ಮಧ್ಯ ನಿಂತರೆ ಕೆಳಗೆತುಂಬಿ ಹರಿವನದಿ, ಸುತ್ತಲೂ ದಟ್ಟ ಪರ್ವತ ಶ್ರೇಣಿ, ದೂರದಲ್ಲಿ ಕಾಣುವ ಕೋಟೆ ಹಲವು ಐತಿಹಾಸಿಕ ಸಂಗತಿಗಳ ಮುಖ್ಯ ಸಾಕ್ಷಿಯಾಗಿದೆ.

ಹೈಡೆಲ್ಬರ್ಗ್ ಐತಿಹಾಸಿಕ ವಿಶ್ವ ವಿದ್ಯಾನಿಲಯದ ಪಟ್ಟಣವಾಗಿದೆ. 13 ನೇ ಶತಮಾನದಲ್ಲಿ ಕೋಟೆಯನ್ನು ಕಟ್ಟಲು ಪ್ರಾರಂಭಿಸಲಾಗಿತ್ತು, ಮುಂದೆ 15 ಹಾಗು 16 ನೇ ಶತಮಾನದಲ್ಲಿ ಹೈಡಲ್ಬರ್ಗ್ನ  ಸಾಮ್ರಾಜ್ಯಶಾಹಿ ಆಡಳಿತಗಾರರಿಗೆ ಅರಮನೆಯಾಗಿ ವಿಸ್ತರಿಸಲಾಯಿತು. 1600 ರ ದಶಕದಲ್ಲಿ ಮೂವತ್ತು ವರ್ಷಗಳ ಯುದ್ಧ, 1693 ರಲ್ಲಿ ಫ್ರಾನ್ಸ್ ನೊಡನೆ ನಡೆದ ಯುದ್ಧದಲ್ಲಿ ಬೆಂಕಿಗೆ ಆಹುತಿಯಾಗಿದೆ. ಗುಡುಗು ಸಿಡಿಲಿನಂತಹ ಪ್ರಕೃತಿಯ ವಿಕೋಪಕ್ಕೆ ಒಳಗಾದರು ತನ್ನ ಸೌಂದರ್ಯವನ್ನು ಹಾಗೆ ಉಳಿಸಿಕೊಂಡಿದೆ. 

ಈಗಿರುವ ಸೇತುವೆಯು ಮರಳು ಕಲ್ಲಿನಿಂದ ನಿರ್ಮಿಸಲಾಗಿದೆ. 200 ವರ್ಷಗಳಿಗಿಂತ ಹಳೆಯದಾಗಿದೆ. ಇದು ಒಂಬತ್ತನೆಯ ಬಾರಿ ಕಟ್ಟಿದಂತದ್ದಾಗಿದೆ. ಸೇತುವೆಯ ಮೇಲೆ ಎರೆಡು ಬಗೆಯ ಶಿಲ್ಪಿಗಳನ್ನು ನೋಡಬಹುದು. ಒಂದು ಚಾರ್ಲ್ಸ್ ಥಿಯೊಡೊರ್ ಮತ್ತೊಂದು ರೋಮನ್ ದೇವತೆಯ ವಿಗ್ರಹ.ತುದಿಗಳಲ್ಲಿ ಎರೆಡು ಗೋಪುರ ಗಳಿವೆ, ಅವು ಹೆಬ್ಬಾಗಿಲಿನಂತೆ ಕಾಣುತ್ತವೆ.

ಕೋಟೆಯಮೇಲೆ ನಡೆದು, ಬೈಸಿಕಲ್ಲಿನಲ್ಲು  ಹೋಗಲು ಹಾದಿ ಇದೆ. ಇದಲ್ಲದೆ ಬಹು ಸುಂದರವಾದ ಟ್ರಾಮ್ ಇದೆ.ಇದು ಹಗ್ಗಗಳಿಂದ ಎಳೆಯಲ್ಪಡುತ್ತ ಕಂಬಿಯ ಮೇಲೆ ಸಾಗುವ ಪರಿ ಅದ್ಭುತವಾಗಿದೆ. ಸುತ್ತಲೂ ಪ್ರಕೃತಿಯ ರಂಗು, ದೂರದಿ ಹರಿವ ನದಿ, ಪುರಾತನ ಸೇತುವೆ, ಕೆಂಪು ಹೆಂಚಿನ ಒಂದೇ ಬಗೆಯ ಮನೆಗಳು ವರ್ಣಿಸಲಸದಳ. ಈ ಟ್ರಾಮ್ ಶತಮಾನಗಳಷ್ಟು ಹಳೆಯದು. ಎದಿರು ಬದಿರು ಆಸನಗಳು, ಕುಳಿತನಂತರ ಎರಡು ಬದಿ ಬಾಗಿಲುಗಳನ್ನು ಹೊರಗಿನಿಂದ ಭದ್ರ ಪಡಿಸುತ್ತಾರೆ. ಮೇಲೆ ತಲುಪಿದನಂತರ ಅವರೇ ಬಂದು ತೆಗೆಯುವವರೆಗೂ ಕಾಯಬೇಕು. ಭದ್ರತೆಗೆ ಪ್ರಾಮುಖ್ಯತೆ.

ಒಂದು ಹಂತ ತಲುಪಿದ ನಂತರ ಇಳಿದು ಅಲ್ಲಿ ಕೋಟೆಯ ಅವಶೇಷಗಳು, ಅರಮನೆಯ ಉಳಿದ ಭಾಗಗಳು, 130 ಓಕ್ ಮರಗಳನ್ನು ಉಪಯೋಗಿಸಿ ನಿರ್ಮಿಸಿದಂತಹ ಅಗಾಧವಾದ ಎರೆಡು ಲಕ್ಷ ಲೀಟರ್ ಸಾಮರ್ಥ್ಯವಿರವ ವೈನ್ ಬ್ಯಾರೆಲ್ ಇದೆ. ಎಲ್ಲೆಲ್ಲೂ ಹಸಿರು ಹುಲ್ಲಿನ ಲಾನ್ಗಳು. ಅಲ್ಲಲ್ಲಿ ಯುದ್ಧಕ್ಕೆ ಬಳಸುತ್ತಿದ್ದ ಪರಿಕರಗಳನ್ನು ಕಾಣಬಹುದು.

ಟ್ರಾಮ್ ಹತ್ತಿ ತುತ್ತ ತುದಿಯ ಹಂತ ತಲುಪಿದರೆ ಮೈಲಿಗಳಷ್ಟು ವಿಶಾಲವಾದ ಪುರಾತನ ಮರಗಳಿಂದ ತುಂಬಿದ ಪ್ರದೇಶವಿದೆ. ಅಲ್ಲೊಂದು ವೀಕ್ಷಣಾ ಸ್ಥಳವಿದೆ ಅದು ರಾಜನಿಗೆ ಪ್ರಿಯವಾದ ಸ್ಥಳವಾಗಿತ್ತಂತೆ. ಅಲ್ಲಿಂದ ಕಾಣುವ ಬೃಹದಾಕಾರದ ಹಸಿರ ಬೆಟ್ಟಗಳ ನಡುವೆ  ಹರಿಯುವ ನೆಕ್ಕರ್ ನದಿಯ ಜಲ ಸಿರಿಯ ಸೊಬಗು ಸ್ವರ್ಗಕ್ಕೆ ಕಿಚ್ಚು ಹಚ್ಚ ಬಹುದಾದ  ರಮ್ಯವಾದ ನೋಟ.

ಊರು ಇರುವುದು ಬೆಟ್ಟದ ತಳದಲ್ಲಿ. ಹೊಸ ಊರು, ಹಳೆ ಊರು ಎಂದು ಕರೆಯಲ್ಪಡುವ ಎರೆಡು ಭಾಗಗಳಿವೆ. ಹಳೆ ಊರಲ್ಲಿ ನಡೆಯುತ್ತಿದ್ದರೆ ನಮಗೆ ಐನೂರು ವರ್ಷಗಳಷ್ಟು ಹಿಂದಕ್ಕೆ ಹೋದಂತೆ ಭಾಸವಾಗುತ್ತದೆ. ಸುತ್ತಲೂ ಇರುವ ಕಟ್ಟಡಗಳು ಶತಮಾನ ಗಳಷ್ಟು ಹಳೆಯವು, ಮದ್ಯೆ ಇರುವ ಕಾರಂಜಿ ಇವೆಲ್ಲವೂ ಇನ್ನೂ ಉಪಗೋಗಿಸಲ್ಪಡುತ್ತಿವೆ. ಕಟ್ಟಡಗಳು ಒಳಗಡೆ ದುರಸ್ತಿ ಮಾಡಿ ರೆಸ್ಟೋರೆಂಟಗಳು, ಅಂಗಡಿಗಳು ಹೀಗೆ ಮಾರ್ಪಾಡು ಮಾಡಿದ್ದರು ಸಹ ಮುಂಭಾಗ ಮಾತ್ರ ಹಾಗೆ ಇರಿಸಿದ್ದಾರೆ.

ಆಯತಾಕಾರದ ಚಿಕ್ಕ ಚಿಕ್ಕ ಕಲ್ಲುಗಳನ್ನು ಒಂದರ ಪಕ್ಕ ಒಂದನ್ನು ಹೊಂದಿಸಿ ನಿರ್ಮಿಸಿರುವ ರಸ್ತೆಗಳು ಶತ ಶತಮಾನಗಳು ಕಳೆದರು ಸವೆಯುವುದಿಲ್ಲ. ಪ್ರಕೃತಿಯ ಯಾವ ಹೊಡೆತಕ್ಕೂ ಅಲುಗಾಡುವುದಿಲ್ಲ. ಐತಿಹಾಸಿಕ ಹೆಗ್ಗುರುತುಗಳನ್ನು ಹೊಂದಿರುವ ಚೌಕಗಳು ಅದ್ಭುತ. ಈಗಲೂ ಹೈಡೆಲ್ಬರ್ಗ್ ಜೆರ್ಮನಿಯ ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲೊಂದಾಗಿದೆ.

ಇದು ಐತಿಹಾಸಿಕ ಮಹತ್ವವುಳ್ಳ, ಪ್ರಾಕೃತಿಕ ಸೌಂದರ್ಯದಿಂದ ತುಂಬಿತುಳುಕುತ್ತಿರುವ ಹೈಡಲ್ಬರ್ಗ್.

‍ಲೇಖಕರು Admin

September 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: