ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುನಿಲ್ ಭಾರತಿ ಜುಗಲ್ ಬಂದಿ : ಸಾಹಿತ್ಯದಲ್ಲಿ ನಾನು ಹುಡುಕುವುದು….

ಸಾಹಿತ್ಯದಲ್ಲಿ ನಾನು ಹುಡುಕುವುದು….

ಭಾರತಿ ಬಿ ವಿ:

ಮೊದಲು ನನ್ನ ದೃಷ್ಟಿಯಲ್ಲಿ ಸಾಹಿತ್ಯವೆಂದರೆ ಏನು ಅಂತ ಹೇಳಿಬಿಡುತ್ತೇನೆ. ನನಗೆ ಅಕ್ಷರವೆಲ್ಲ ಸಾಹಿತ್ಯವೇ. ಯಾವುದೇ ಒಂದು ಪುಸ್ತಕವಾದರೂ ಸರಿಯೇ, ನನಗೆ ಅದೆಲ್ಲವೂ ಸಾಹಿತ್ಯವೇ. ಓದುವ ಆ ಮಾಂತ್ರಿಕ ಲೋಕದಲ್ಲಿ ನಾನು ಏನನ್ನಾದರೂ ಹುಡುಕಿದೆ ಅನ್ನುವುದರ ಬಗ್ಗೆಯೇ ನನಗೆ ಅನುಮಾನವಿದೆ. ಆದರೆ ಅದೇನನ್ನು ಕೊಟ್ಟಿತು ಅನ್ನುವುದರ ಬಗ್ಗೆ ನಾನು ಹೇಳಬಲ್ಲೆ. ಸಿಕ್ಕಿದ್ದು ಅದು ಅಂದಮೇಲೆ ಮತ್ತು ‘ಸಿಕ್ಕಿತು’ ಅಂತ ತೃಪ್ತಿ ಅದರಿಂದ ನನ್ನ ಮನಸ್ಸಿಗೆ ದೊರಕಿತು ಅಂದಮೇಲೆ, ಬಹುಶಃ ನಾನು ಹುಡುಕಿದ್ದು ಅದನ್ನೇ ಏನೋ ಅಂತ backward calculation ಥರದ ಚಿಂತನೆಗೆ ಬಿದ್ದೆ …

ನನ್ನ ಓದು ಶುರುವಾದ ದಿನದಿಂದ ಅದು ನನ್ನನ್ನು ಕಾಡಿದ ಪರಿ ಹೇಳುತ್ತ ಹೋಗುತ್ತೇನೆ. ಅಕ್ಷರದ ಬಗೆಗಿನ passion ಸಣ್ಣವಳಿರುವಾಗ ಸ್ಕೂಲಿಗೆ ಹೋಗುವಷ್ಟರಲ್ಲೇ ಶುರುವಾಗಿತ್ತು … ಅದೂ ಸಿನೆಮಾ ಆಸೆಯಿಂದ ಶುರುವಾದದ್ದು! ಯಾವುದೇ ಪುಸ್ತಕ ತೆಗೆದರೂ ಕೊನೆಯ ಪುಟದಲ್ಲಿ ಸಿನೆಮಾ ಸುದ್ದಿ ಇರುತ್ತಿತ್ತು. ಅದು ಆಗ ತುಂಬ ಸ್ವಾರಸ್ಯಕರವಾಗಿರುತ್ತಿತ್ತು. ಶಾಲೆಗೆ ಆಗಿನ್ನೂ ಹೋಗೋದಿಕ್ಕೆ ಶುರು ಮಾಡಿದ್ದೆನಾದ್ದರಿಂದ ಅಲ್ಲಿರೋ ಸಿನೆಮಾ ಸುದ್ದಿ ಓದೋದಿಕ್ಕೆ ಆಗ್ತಿರಲಿಲ್ಲ. ಅದೆಷ್ಟು ಸಲ ದೊಡ್ಡವರನ್ನು ಕೇಳುವುದು ಅಂತ ಅವಮಾನಿತಳಾಗಿ ಹಠಕ್ಕೆ ಮತ್ತು ಹುಚ್ಚಿಗೆ ಬಿದ್ದು ಅಕ್ಷರ ಕೂಡಿಸಿ ಕೂಡಿಸಿ ಪದಗಳನ್ನು ಕಲಿತು, ಕಾಗುಣಿತ ನನ್ನಂತೆ ನಾನೇ ಏನೇನೋ ತಪ್ಪು ಒಪ್ಪು ಕೂಡಿಸಿ ಓದುವಷ್ಟು ಕಲಿತು ಅಂತೂ ಎಲ್ಲ ಸಿನೆಮಾ, ನಟ, ನಟಿಯರ ಹೆಸರನ್ನು ಓದಿ ಕೃತಾರ್ಥಳಾಗಿದ್ದೆ. ಅದು ನನ್ನ ಮೊದಲ ಓದು !

ಆಮೇಲೆ ಸ್ವಲ್ಪ ದೊಡ್ಡವಳಾದ ಮೇಲೆ ಮನೆಯಲ್ಲಿ ಸುಧಾ, ಮಯೂರ, ಕಸ್ತೂರಿ, ರೀಡರ್ಸ್ ಡೈಜೆಸ್ಟ್, ತುಷಾರ, ಬಾಲಮಿತ್ರ, ಬೊಂಬೆಮನೆ, ಚಂದಮಾಮ, ಅಮರಚಿತ್ರ ಕಥಾಗಳಂಥ ಹತ್ತು ಹಲವಾರು ಪುಸ್ತಕಗಳು ಇರುತ್ತಿದ್ದವು. ಆಗಿನ ಕಾಲಕ್ಕೆ ಪೋಲಿ ಅನ್ನಿಸಿಕೊಂಡ ‘ಪ್ರಜಾಮತ’ ಅಪರೂಪಕ್ಕೆ ಸಿಗುತ್ತಿತ್ತು. ಸುಧಾಗಿಂತ ದೊಡ್ಡ ಆಕಾರದ ಅದನ್ನು ಪುಸ್ತಕದಲ್ಲಿ ದೊಡ್ಡವರಿಗೆ ಕಾಣದಂತೆ ಮುಚ್ಚಿಟ್ಟು ಓದುವುದು ಸಾಧ್ಯವಾಗದೇ ಅದರ ಅಳತೆಯನ್ನೇ ಶಪಿಸುತ್ತ ಕಷ್ಟಪಟ್ಟು ಓದುತ್ತಿದ್ದೆ! ಆಗ ಸುಧಾದಲ್ಲಿ ಧಾರಾವಾಹಿಗಳು ಸುಮಾರಾಗಿ ಚೆಂದವಾಗಿರುತ್ತಿದ್ದವು ಮತ್ತು ಆ ಕಾಮಿಕ್ಸ್‌ಗಳು ಅದ್ಭುತವಾಗಿರುತ್ತಿದ್ದವು. ಅದಕ್ಕಾಗಿ ಮನೆಯ ಇತರ ಸದಸ್ಯರ ಜೊತೆ ಕಿತ್ತಾಟವಾಡಿ ಓದುತ್ತಿದ್ದ ದಿನಗಳು ಅವು. ಅಮರಚಿತ್ರ ಕಥಾ ಓದುವಾಗ ನನ್ನೆದುರು ಅಕ್ಷರಶಃ ಆ ಸೆಟ್‍ಗಳು ನಿರ್ಮಾಣವಾಗಿ ಬಿಡುತ್ತಿದ್ದವು. ಆ ರಾಜ ಬೀದಿಗಳು, ಆ ಆಶ್ರಮಗಳು, ಯುದ್ಧ, ಅರಮನೆ, ಹಂಸತೂಲಿಕಾತಲ್ಪಗಳು ಎಲ್ಲ ಕಣ್ಣೆದುರೇ!! ಒಟ್ಟಿನಲ್ಲಿ ಯಾವುದೋ ಒಂದು ಪುಸ್ತಕ ಸದಾಕಾಲಕ್ಕೂ ಓದುತ್ತಲೇ ಇರುತ್ತಿದ್ದೆ. ಬರೀ ಓದುವುದಷ್ಟೇ ಅಲ್ಲ, ಪದೇ ಪದೇ ಓದುತ್ತಲೇ ಇರುತ್ತಿದ್ದೆ. ಹಾಗಾಗಿ ನಾನು ಎಲ್ಲಿದ್ದೇನೆ ಅಂತ ಹುಡುಕುವುದು ತುಂಬ ಸುಲಭದ ಕೆಲಸವಾಗಿತ್ತಂತೆ .. ಸ್ಟೋರ್ ರೂಮಿನ ಹಳೆ ಪುಸ್ತಕಗಳ ಮಧ್ಯೆ ನಾನು ಕೂತಿರುವುದು ತುಂಬ ಸಾಮಾನ್ಯದ ದೃಶ್ಯವಾಗಿತ್ತಂತೆ. ತುಂಬ ಪುಸ್ತಕ ಓದಬೇಕು ಅಂತ ಆಸೆ ಇದ್ದಿದ್ದರಿಂದ ದೊಡ್ಡವಳಾದ ಮೇಲೆ ಹಳೇ ಪೇಪರ್ ಖಾಲಿ ಶೀಷದ ಅಂಗಡಿ ಇಡಬೇಕು ಅಂತ ತೀರ್ಮಾನ ಮಾಡಿದ್ದೆ! ಸಾಹಿತ್ಯ ನನಗೆ ಬಾಲ್ಯದ ಬೆರಗಿನ ಪ್ರತೀಕವಾಗಿತ್ತು. ನನ್ನ ಕಲ್ಪನಾಶಕ್ತಿ ವಿಕಸನಗೊಳ್ಳಲು ಈ ಓದು ಸಹಾಯ ಮಾಡಿತು.

ಆಮೇಲಾಮೇಲೆ ಸುಮಾರು ಹೈಸ್ಕೂಲಿಗೆ ಕಾಲಿಡುವಷ್ಟರಲ್ಲಿ ಮೊದಲ ಒಂದಿಷ್ಟು ಪುಟ ಕಿತ್ತು ಹೋದ ಅಶ್ವತ್ಥರ ಹಂಬಲ, ಮ.ನ.ಮೂರ್ತಿಯವರ ಟಿಪ್ಪೂ, ಅನಕೃ ಅವರು ಬರೆದ ರಾಜಕಾರಣದ ಬಗ್ಗೆಗಿನ ಆ ಕಾಲಕ್ಕೆ ಸುಮಾರು ಪೋಲಿ ಅನ್ನಿಸುವಂಥ ಕಾದಂಬರಿ – ಹೆಸರು ಮರೆತುಹೋಗಿದೆ-, ಕೈಲಾಸಂರ ಪೋಲಿಕಿಟ್ಟಿ, ಟೊಳ್ಳುಗಟ್ಟಿ … ಇವಿಷ್ಟು ಮೊದಮೊದಲು ನನ್ನಿಂದ ಓದಿಸಿಕೊಂಡ ಪುಸ್ತಕಗಳು. ಆಗೆಲ್ಲ ಪುಸ್ತಕ ಕೊಂಡು ಓದಲು ಹಣ ಇರುತ್ತಿರಲಿಲ್ಲ. ಅಲ್ಲೋ ಇಲ್ಲೋ ಒಂದೆರಡು ಪುಸ್ತಕಗಳು ಸಿಕ್ಕರೆ ಭಾಗ್ಯ ಅನ್ನಬೇಕು. ಆಗ ಮ್ಯಾಗಜ಼ೀನ್‌ಗಳಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಹುಚ್ಚು ಹಿಡಿದು ಓದುತ್ತಿದ್ದೆ. ನಾನು ಓದುತ್ತಿದ್ದ ವಿದ್ಯಾವರ್ಧಕ ಸಂಘ ಸ್ಕೂಲಿನ ಲೈಬ್ರರಿಯಲ್ಲಿ ಸಾಕಷ್ಟು ಒಳ್ಳೆಯ ಪುಸ್ತಕಗಳನ್ನು ಇಟ್ಟಿದ್ದರು. ಆಗ ಓದಿದ್ದು ಕಾರಂತರ ‘ಮೂಕಜ್ಜಿಯ ಕನಸುಗಳು’. ಸತ್ಯಕ್ಕೂ ಹೇಳಬೇಕೆಂದರೆ ಅವತ್ತಿಗೂ, ಇವತ್ತಿಗೂ ಪೂರ್ತಿ ಅರ್ಥವಾಗಿಲ್ಲದ ಮತ್ತು ಪ್ರತೀ ಸಲ ಓದಿದಾಗಲೂ ಬೇರೆಯದೇ ಅನ್ನಿಸುವಂಥ ಪುಸ್ತಕ ಅದು. ಆದರೂ ಯಾಕೋ ಅದು ಇಷ್ಟವಾಗಿತ್ತು. ಆಮೇಲೆ ಶುರುವಾಗಿದ್ದು ವಿವೇಕಾನಂದರ ಪುಸ್ತಕಗಳತ್ತ ಸೆಳೆತ. ಸಿಸ್ಟರ್ ನಿವೇದಿತಾ ವಿವೇಕಾನಂದರ ಬಗ್ಗೆ ಬರೆದಿದ್ದ ಲೈಬ್ರರಿಯಲ್ಲಿ ಧೂಳು ಹಿಡಿದು ಕೂತಿದ್ದ ಪುಸ್ತಕವನ್ನು ಧೂಳು ಜಾಡಿಸಿ ತಂದು ಓದಿದ್ದೆ. ಯಾಕೋ ಅವೆಲ್ಲ ತುಂಬ ಇಷ್ಟವಾಗುತ್ತಿದ್ದವು ಆ ಕಾಲಘಟ್ಟದಲ್ಲಿ. ಆಗ ಸಾಹಿತ್ಯ ನನ್ನ ಬಾಲ್ಯಕ್ಕೂ, ಯೌವನಕ್ಕೂ ಮಧ್ಯೆ ಸೇತುವೆಯಾಗಿತ್ತು. ಯಾವುದೋ ಓದು ಯಾವುದೋ ಚಿಂತನೆಗೆ ದಾರಿ ಮಾಡಿಕೊಡುತ್ತಿತ್ತು. ಯಾವುದೋ ಚಿಂತನೆ ಯಾವುದೋ ಬೆಳವಣಿಗೆಗೆ ಸಹಾಯಕವಾಗುತ್ತಿತ್ತು …

ಆಮೇಲಿನ ಯಾಕೋ ನನ್ನ ಓದು ಹಾದಿ ತಪ್ಪಿ ಹೋಯಿತು. ವಿವೇಕಾನಂದರಿಂದ ಉಷಾ ನವರತ್ನರಾಂ, ಸಾಯಿಸುತೆ, ಹೆಚ್. ಜಿ. ರಾಧಾದೇವಿ ಮತ್ತು ಮಿಲ್ಸ್ ಅಂಡ್ ಬೂನ್ ಪುಸ್ತಕಗಳತ್ತ ಹೊರಟುಬಿಟ್ಟಿದ್ದೆ. ಮುಂದಿನ ಮೂರು ವರ್ಷ ಆ ಪ್ರೇಮ ಕಥೆಗಳು, ಆಲೂಗಡ್ಡೆ ಬೋಂಡಾ, ಶಾವಿಗೆ ಖೀರು, ಮುಂಗುರುಳು, ಅಪ್ಪುಗೆ, ಸೆಕ್ಸ್, ಸುದೀರ್ಘ ಮುತ್ತು ಇವುಗಳ ಬಗ್ಗೆಯೇ ಓದುತ್ತಾ ಆ ರೋಚಕತೆ, ರೋಮಾಂಚನದಲ್ಲೇ ಮುಳುಗಿಬಿಟ್ಟೆ. ಒಂದಿಷ್ಟು ದಿನ ಅವನ್ನೆಲ್ಲ ಓದಿ ಓದಿ ಒಂದು ದಿನ ಯಾಕೋ ಜಿಗುಪ್ಸೆಯಾದ ಮೇಲೆ ಇನ್ನು ಮುಂದೆ ಅವನ್ನೆಲ್ಲ ಓದಬಾರದು ಅಂತ ತೀರ್ಮಾನಿಸಿದೆ. ಆಗ ವಿ.ಎಂ.ಇನಾಂದಾರರ ಪುಸ್ತಕಗಳನ್ನು ಓದಲು ಶುರು ಮಾಡಿದೆ. ಅವರು ಬರೆದ ಚಿತ್ರಲೇಖಾ ಬದುಕಿನಲ್ಲಿ ಪ್ರೇಮವೆಂದರೆ ಏನು ಅಂತ ಪರಿಚಯ ಮಾಡಿಸಿತು. ಕಣ್ಣೆದುರು ಕಥೆ ಕಟ್ಟಿಕೊಡುತ್ತಿದ್ದರು ಅವರು. ಅವರು ಅನುವಾದಿಸಿದ ‘ಯಯಾತಿ’ ನನ್ನಿಂದ ಅತೀ ಹೆಚ್ಚು ಮರು ಓದು ಪಡೆದ ಪುಸ್ತಕ ಅನ್ನಿಸುತ್ತದೆ. ಒಂದು ಅದ್ಭುತ ಪುಸ್ತಕವೆಂದರೆ ಹೇಗಿರಬೇಕು ಅನ್ನುವ ಅರಿವಾಗಿದ್ದು ಆಗಲೇ. ಅದು ಕಾವ್ಯದ ಹಾಗಿರುವ ಗದ್ಯ ಪುಸ್ತಕ. ಓದುತ್ತ ಕೂತರೆ ಶರ್ಮಿಷ್ಠೆ, ದೇವಯಾನಿ, ಯಯಾತಿ, ಕಚ, ಪುರು ಎಲ್ಲರೂ ನಮ್ಮೊಡನೆ ಬದುಕಲು ಶುರುವಾಗಿ ಹೋದ ಭಾವ. ‘ಹೆಣ್ಣು ಪೂಜಿಸುವುದಾದರೆ ಶರ್ಮಿಷ್ಠೆಯಂತೆ ಪೂಜಿಸಬೇಕು – ಗಂಡು ಪ್ರೇಮಿಸುವುದಾದರೆ ಕಚನಂತೆ ಪ್ರೇಮಿಸಬೇಕು’ ಅನ್ನುವ ವಾಕ್ಯ ಓದಿ ನಾನು ತುಂಬ ದಿನ ಯಾವುದೋ ಟ್ರಾನ್ಸ್‌ನಲ್ಲಿರುವಂತೆ ಅದರ ಗುಂಗಲ್ಲಿ ಮುಳುಗಿದ್ದೆ. ಆ ಕಾದಂಬರಿಯಲ್ಲಿ ಎಲ್ಲ ಪಾತ್ರಗಳೂ ರಾಗ-ದ್ವೇಷಗಳೊಡನೆ ನಮ್ಮ, ನಿಮ್ಮಂತೆ ಬದುಕುತ್ತವೆ. ಲಂಪಟತನ, ಆರಾಧನೆ, ಮೋಹ ಎಲ್ಲಕ್ಕೂ ಅವುಗಳದ್ದೇ ಆದ ತಾರ್ಕಿಕ ಅಂತ್ಯ ಸಿಕ್ಕಿಬಿಡುತ್ತದೆ. ನೀವದನ್ನು ಓದಿಲ್ಲವಾದರೆ ಒಮ್ಮೆಯಾದರೂ ಓದಿ ಅಂತ ಕೇಳಿಕೊಳ್ಳುತ್ತೇನೆ.

ಆ ನಂತರ ಒಂದಿಷ್ಟು ದಿನ begone godmen, gods-demons and spirits ಅನ್ನುವ ಪವಾಡಗಳ ವಿರುದ್ಧ, ಬೂದಿ ಬಡುಕರ ವಿರುದ್ಧ ಡಾ.ಅಬ್ರಹಾಂ ಕೋವೂರ್ ಅವರು ಬರೆದ ಪುಸ್ತಕಗಳನ್ನು ಓದಿದೆ. ಅದು ಇವತ್ತಿಗೂ ನನ್ನ ಚಿಂತನೆಯನ್ನು guide ಮಾಡುವ ಪುಸ್ತಕಗಳಾಗಿವೆ. ಆ ಥರದ ಮೂಢ ನಂಬಿಕೆಗಳ ಬಗ್ಗೆ ಮನಸ್ಸು ಧಿಕ್ಕರಿಸಲು ಶುರು ಮಾಡಿದ್ದು ಆ ದಿನಗಳಲ್ಲೇ. ಆ ಓದು ನನಗೆ ಪ್ರಶ್ನಿಸುವ ಜ್ಞಾನ ಕೊಟ್ಟಿತು ಅನ್ನಬಹುದು. ಇವನ್ನೆಲ್ಲ ಓದುವ ಜೊತೆಜೊತೆಗೆ ತ್ರಿವೇಣಿ, ಎಂ.ಕೆ.ಇಂದಿರಾ, ಯಂಡಮೂರಿಯನ್ನೂ ಓದುತ್ತಿದ್ದೆ. ಅದಿಷ್ಟೂ ನನ್ನ ಯೌವನದ ದಿನಗಳವರೆಗಿನ ಓದು.

ಮುಂದೆ ಎಸ್.ಎಲ್.ಭೈರಪ್ಪನವರ ಕಾದಂಬರಿಗಳನ್ನು ಓದಲು ಶುರು ಮಾಡಿದೆ. ಲೆಫ್ಟು, ರೈಟು ಯಾವುದೂ ತಿಳಿಯದ ಮತ್ತು ತಿಳಿಯಲು ಆಸಕ್ತಿಯೂ ಇಲ್ಲದ ನನಗೆ ಅವರ ಗೃಹಭಂಗ, ನಿರಾಕರಣ, ನೆಲೆ, ಪರ್ವ, ವಂಶವೃಕ್ಷ, ಜಲಪಾತ ಎಲ್ಲವೂ ತುಂಬ ಮೆಚ್ಚಿಗೆಯಾದವು. ಯಯಾತಿ ಬಿಟ್ಟರೆ ಪರ್ವ ಅತೀ ಹೆಚ್ಚು ಸಲ ಓದಿದ್ದೇನೆ ಅನ್ನಬೇಕು. ರಾಜರ ಕಥೆಯೆಂದರೆ ಮೈ ತುಂಬ ಪಿತ ಪಿತ ಆಭರಣ ತೊಟ್ಟು, ಸದಾಕಾಲ ಭಕ್ಷ್ಯ ಭೋಜನದಲ್ಲಿ ಮುಳುಗಿ, ಚಿನ್ನದಿಂದ ಅಲಂಕೃತವಾದ ಅರಮನೆಯಲ್ಲಿ ಶಯ್ಯಾಗೃಹದಲ್ಲಿ ದಾಸಿಯರಿಂದ ಸೇವೆ ಮಾಡಿಸಿಕೊಳ್ಳುವ ಕಲ್ಪನೆ ಇದ್ದ ನನಗೆ ಅಲ್ಲಿನ down to earth ರೀತಿ ಸಿಕ್ಕಾಪಟ್ಟೆ ಇಷ್ಟವಾಗಿಹೋಯಿತು. ಮೊಟ್ಟಮೊದಲಿಗೆ ಶಲ್ಯ ಮಹಾರಾಜ ಬಿಸಿಲಿನ ಬೇಗೆ ತಾಳಲಾರದೇ ಲಾವಂಚದ ಚಾಪೆಗೆ ನೀರು ಹಾಕಲು ಹೇಳುತ್ತಾನಲ್ಲ, ಆಗಲೇ ಮೊತ್ತಮೊದಲಿಗೆ ರಾಜರ ಬದುಕು ನಮ್ಮ, ನಿಮ್ಮದರ ಹಾಗೆ ಇರಬಹುದೆನ್ನುವ ಆಲೋಚನೆ ಬಂದಿದ್ದು. ನಿಯೋಗದ ಪರಿಕಲ್ಪನೆ ಎಲ್ಲ ನಾವು ಹುಟ್ಟಿದಾಗಿನಿಂದ ದೇವತೆಗಳ ‘ವರಪ್ರಸಾದದಿಂದ’ ಜನಿಸಿದ ಪಾಂಡವರ ಕಥೆಗಿಂತ ತುಂಬ ಭಿನ್ನವಾಗಿತ್ತು. ಭೈರಪ್ಪನವನರ ಸಿದ್ಧಾಂತಗಳ ಬಗ್ಗೆ ಎಲ್ಲ ಮಾತಾಡುತ್ತಾರೆ ..ಆದರೆ ಇಂಥ ಒಂದು ಪುಸ್ತಕವನ್ನೂ ಅವರೇ ಬರೆದಿದ್ದರು ಅಂದಾಗ ಆತ ಹಿಂದೆಯಂತೂ ಮುಕ್ತ ಮನಸ್ಸಿನಿಂದ ಆಲೋಚಿಸಿ ಬರೆಯುತ್ತಿದ್ದರು ಅನ್ನಿಸುತ್ತದೆ ನನಗೆ. ಅದೇ ಮಾತು ಅವರ ಇತ್ತೀಚಿನ ಪುಸ್ತಕಗಳ ಬಗ್ಗೆ ಹೇಳಲಾಗದು ಅನ್ನುವುದೂ ಸತ್ಯ ..

ಪೂರ್ಣಚಂದ್ರ ತೇಜಸ್ವಿ ! ಅವರ ಓದಿಗೆ ಬಿದ್ದ ಮೇಲೆ ಅದೊಂಥರಾ ಮಾಯಾಲೋಕ ಇದ್ದ ಹಾಗೆ. ನಮ್ಮ, ನಿಮ್ಮೆಲ್ಲರ ಸುತ್ತ ಇರುವ ಪಾತ್ರಗಳು, ಸಣ್ಣ ಪುಟ್ಟ ಘಟನೆಗಳು ಕೂಡಾ ಹೇಗೆ ಒಂದು ಅದ್ಭುತ ಕೃತಿಯಾಗಬಲ್ಲದು ಅಂತ ತೋರಿಸಿಕೊಟ್ಟವರು ಅವರು. ಅವರು ಬರೆಬರೆದು ಹಾಕಿದಾಗೆಲ್ಲ ಮೊಗೆಮೊಗೆದು ಓದಿಬಿಟ್ಟೆ. ಕಥೆ ಕಾದಂಬರಿಗಳ ಬಗ್ಗೆ ಆವರೆಗೆ ಇದ್ದ ಸಿದ್ದ ರಸ್ತೆಯಾಚೆಗೆ ನನ್ನ ಮನಸನ್ನು ನಡೆಸಿದವರು ಅವರು. ಹಾಗೆ ನೋಡಿದರೆ ಕಾಮರೂಪಿಯವರು ಬರೆದ ಒಂದೆರಡೇ ಪುಸ್ತಕಗಳು, ಬಾಗಲೋಡಿ ದೇವರಾಯರ ಕಥೆಗಳು, ಕೊಡಗಿನ ಗೌರಮ್ಮನವರ ಕಥೆಗಳು ಎಲ್ಲವೂ ಬರೆದ ಆಯಾ ಕಾಲಘಟ್ಟದ ನೆಲೆಯಲ್ಲಿ ನಿಂತು ನೋಡಿದರೆ all of them were too much ahead of their times ಅನ್ನಿಸಿಬಿಡುತ್ತದೆ. ಮಾಸ್ತಿಯವರ ಕಥೆಗಳಲ್ಲಿನ ಆರ್ದ್ರತೆ ಮತ್ತು ಮಾನವೀಯತೆ ಇವತ್ತಿಗೂ ನನ್ನನ್ನು ಸೆಳೆಯುತ್ತದೆ … ಅಪ್ಪ ಕೂತು ಕಥೆ ಹೇಳಿದ ಭಾವ. ಯು.ಆರ್.ಅನಂತಮೂರ್ತಿ, ಎಚ್.ಎಸ್.ವೆಂಕಟೇಶ ಮೂರ್ತಿ, ಪ್ರತಿಭಾ ನಂದಕುಮಾರ್, ರವಿ ಬೆಳಗೆರೆ, ಚಿತ್ತಾಲರು, ತರಾಸು, ಬೀಚಿ, ವೈದೇಹಿ, ಜೋಗಿ, ಕಾಯ್ಕಿಣಿ, ಕೆ.ಸದಾಶಿವ, ದೇವುಡು, ಕಾರ್ನಾಡ್ … ನನ್ನ ಬದುಕನ್ನು ವಿಶಾಲವಾಗಿಸಿದ್ದೀರಿ ನೀವು ಮತ್ತು ಸ್ಥಳಾಭಾವದಿಂದ ಹೆಸರಿಸಲು ಸಾದ್ಯವಾಗದ ಅನಂತ ಲೇಖಕರು.

ಕಾವ್ಯ ನನಗೆ ತುಂಬ ಮೆಚ್ಚಿನದ್ದಾದರೂ ಯಾಕೋ ಅದರ ಓದು ತುಂಬ ಕಡಿಮೆ ಅಂತಲೇ ಹೇಳಬೇಕು. ಅಡಿಗರದ್ದು ಸ್ವಲ್ಪ ಮಟ್ಟಿಗೆ ಓದಿದ್ದೇನೆ. ಬೆರಳೆಣಿಕೆಯಷ್ಟನ್ನು ಮಾತ್ರ ಓದಿದ್ದೇನೆ ಅಂತ ಹೇಳಿಕೊಳ್ಳಲು ಸ್ವಲ್ಪ ಹೀನಾಯವೆನಿಸುತ್ತಿದೆ. ಮುಂದಿನ ದಿನಗಳಲ್ಲಿ ಅತ್ತ ಗಮನ ಹರಿಸಬೇಕು. ಕಾವ್ಯದಲ್ಲಿ ಮಾತ್ರ ನಾನು ಹುಡುಕುವುದು passion. ನನಗೆ ಬಂಡಾಯ, ಕ್ರಾಂತಿ ಅನ್ನುವುದಕ್ಕಿಂತ ಯಾಕೋ ಭಾವನೆಗಳ, ವಸ್ತು ಸ್ಥಿತಿಯ ಬಗೆಗಿನ ಕವಿತೆಗಳೇ ಹೆಚ್ಚು ಮೆಚ್ಚಿಗೆಯಾಗುತ್ತದೆ.

ನಾನು ಓದಿದ್ದರಲ್ಲಿ ಏನನ್ನು ಹುಡುಕಿದೆ ಮತ್ತು ಏನು ಸಿಕ್ಕಿತು ಅಂತ ಸಮಗ್ರವಾಗಿ ಕೇಳಿದರೆ ನನ್ನಲ್ಲಿ ನಿಜಕ್ಕೂ ಉತ್ತರವಿಲ್ಲ. ನಾನು ಎಂದೂ ಅವುಗಳಲ್ಲಿ ಏನನ್ನೂ ಹುಡುಕಲೇ ಇಲ್ಲ ಅನ್ನಬೇಕು. ಅದೊಂದು ಸಿಕ್ಕಿದ್ದೆಲ್ಲವೂ ಅದಾಗಿಯೇ, ಅಯಾಚಿತವಾಗಿ ದೊರಕಿದ್ದು ಅಷ್ಟೇ. ಕೆಲವರು ಅನ್ನುತ್ತಾರೆ ಬರಹ ಮತ್ತು ಬರೆದವನ ಬದುಕು ಎಲ್ಲವೂ ಅಭ್ಯಸಿಸಲು ಯೋಗ್ಯವಾಗಿರಬೇಕು ಎಂದು. ನಾನು ಅದನ್ನು ಒಪ್ಪುವುದಿಲ್ಲ. ಬರೆದವನ ಬದುಕಿಗೂ, ಬರಹಕ್ಕೂ ಏನು ಸಂಬಂಧ? ಸೃಷ್ಟಿಸಿದ ಪಾತ್ರಗಳ ಬದುಕು ಮಾತ್ರ ನನಗೆ ಮುಖ್ಯ. ಸೃಷ್ಟಿಸಿದವನ ಬದುಕಲ್ಲ. ಸಾಹಿತ್ಯವನ್ನು ನಾನು ಎಂದೂ ನನ್ನ ಬದುಕಿನ guiding force ಅಂತ ಭಾವಿಸಿಲ್ಲ. ಹಾಗಾಗಿ ನನಗೆ ಬರಹಗಾರನ ಬದುಕಿನ ಬಗ್ಗೆ ಹೆಚ್ಚು ಆಸ್ಥೆಯೂ ಇಲ್ಲ. ಓದೆಂದರೆ ಸುಮ್ಮನೆ ಓದುತ್ತಾ ಹೋದ ಹಾಗೆ ಎಲ್ಲ ರಾಗ-ದ್ವೇಷ, ಪ್ರೀತಿ, ಹಾದರ, ನೋವು, ಹಸಿವು, ಕ್ರೌರ್ಯಗಳ ಅನಾವರಣ ನಮ್ಮೆದುರು ಮಾಡಿಸುತ್ತಾರಲ್ಲ ಅದು ಹುಡುಕದೆಯೂ ನನಗೆ ಸಿಕ್ಕ ನಿಧಿ … ಆ ನಿಧಿ ಅವರವರ ಕೃತಿಗಳಲ್ಲಿ ಹೂತಿಟ್ಟ ಎಲ್ಲ ಬರಹಗಾರರಿಗೂ ಇದೋ , ನನ್ನ ಕೃತಜ್ಞತೆ …

ಸುನಿಲ್ ರಾವ್ :

ಅಸಲು ನನಗೆ ಸಾಹಿತ್ಯ ಅ೦ದರೆ:

ನನಗೆ ಸಾಹಿತ್ಯ ಧ್ಯಾನವಿದ್ದ೦ತೆ. ಅದು ದಿನನಿತ್ಯದ ಬೌದ್ಧಿಕ ಹಾಗು ಮಾನಸಿಕ ಮನಸ್ಸಿನ ಪ್ರತಿಬಿ೦ಬ, ಸಾಹಿತ್ಯ ಹೆಣ್ಣಿನ ಸೌ೦ದರ್ಯದ೦ತೆ, ಗ೦ಡಿನ ಭಾವಪರವಶತೆಯ೦ತೆ, ಉದ್ವೇಗದ೦ತೆ, ಬ್ರಹ್ಮಚಾರಿಯ ತಪನೆಯ೦ತೆ, ವಯೋವೃದ್ಧನ ಖಾಸಾ ಅನುಭವದ೦ತೆ, ಗಯ್ಯಾಳಿಯ ವಕ್ರ ವಿಚಿತ್ರ ಪದಬ೦ಧಗಳ೦ತೆ, ಜಿಪುಣನ ಸ೦ಕುಚಿತದ೦ತೆ, ಪುಕ್ಕಲನ ಹೆದರಿಕೆಯ೦ತೆ, ನ೦ಬಿಕೆಯಿಲ್ಲದವನ ಅನುಮಾನದ೦ತೆ, ಚೂರು ಚೂರಾದ ಮಾನವನ ಅಸ್ತಿತ್ವದ೦ತೆ, ವಸಾಹತಿನ ಅಧಿಕಾರಿಯ೦ತೆ, ಪೂರ್ವಾಗ್ರಹಿಯ೦ತೆ……………….ನನ್ನ೦ತೆ……ನಿಮ್ಮ೦ತೆ!!!!!

ಒ೦ದು ಸಮಾಜವನ್ನು ಅಥವಾ ಅದರ ನಾಗರೀಕತೆಯನ್ನು ನಾವು ವಿಶ್ಲೇಷಣೆ ಮಾಡುವಲ್ಲಿ, ಅಲ್ಲಿನ ನಡವಳಿಕೆ ಹಾಗು ಆಯಾ ಕಾಲಘಟ್ಟದ ಸಾಹಿತ್ಯ ನಮಗೆ ಉಪಕರಿಸುತ್ತದೆ. ಜರ್ಮನಿ, ಯುರೋಪ್, ಇಸ್ರೇಲ್, ಪಾಕಿಸ್ತಾನ, ಅ೦ಡಮಾನ್ ಇತ್ಯಾದಿ ದೇಶಗಳ ಬಗ್ಗೆಯ ಕುತೂಹಲ ಮತ್ತು ವಿಲಕ್ಷಣತೆಯನ್ನು ಆಯಾ ಸಾಹಿತ್ಯಗಳು ಬಗೆಹರಿಸಿವೆ, ಸಾಹಿತ್ಯ ಪೂರಾ ಒ೦ದು ನಾಗರೀಕತೆಯ ಕುರುಹು. ಸಾಹಿತ್ಯ ಕಲ್ಪನಾಲೋಕವಾದರೂ ಅದರ ಹೊದಿಕೆಯ ಒಳಗೆ ಅಸ್ತಿತ್ವದಲ್ಲಿರುವುದು ಸುಪ್ತವಾದ ನೈಜ್ಯತೆಗಳ ಭದ್ರ ಬುನಾದಿ, ಎಷ್ಟೆಲ್ಲಾ ಕಲ್ಪೋಪೇತವಾದರೂ ಒಬ್ಬ ವ್ಯಕ್ತಿಯು ಸಾಹಿತ್ಯದಲ್ಲಿ ವಸ್ತು ಸ್ಥಿತಿಯನ್ನು ಹಿಡಿದಿಡಬೇಕಾದರೆ ಸುಪ್ತವಾದ ನೈಜ್ಯತೆಯು ಆ ಕುಸುರಿಗೆ ಲೇಪನವಾಗುತ್ತದೆ, ಅದು ಮನುಷ್ಯಗುಣ. ತೀರಾ ಅಲೌಕಿಕವಾದದ್ದನ್ನು ನೀವು ಸಾಹಿತ್ಯದಲ್ಲಿ ಹಿಡಿದಿಡಬೇಕು ಅ೦ದರೂ, ನೈಜ್ಯ ಲೌಕಿಕದ ಅವಿನಾಭಾವತೆ ಆ ಸಾಹಿತ್ಯಕ್ಕೆ ಮಿಶ್ರಣವಾಗುತ್ತದೆ.ಇದಕ್ಕೆ ಪ್ರತಿಬಿ೦ಬದ೦ತೆ ಖಲೀಲ್ ಗಿಬ್ರಾನ್ ಹೀಗೆನ್ನುತ್ತಾನೆ ನೋಡಿ.

“We were fluttering, wandering, longing creatures a thousand years before the sea and the wind in the forest gave us WORDS. Now how can we express the ancient of days in us with the only the sounds of our YESTERDAYS?.”

ಇದು ಸಾಹಿತ್ಯದ ವಸ್ತು ವಿಶ್ಲೇಷಣೆಗೂ ಹೊ೦ದಿಕೆಯಾಗುತ್ತದೆ ಎ೦ದು ನನಗನಿಸುತ್ತದೆ, ಏನೆಲ್ಲಾ ಬರೆಯಲು ಅಥವಾ ಹಿಡಿದಿಡಲು ಹೋದರೂ ನಮ್ಮ ಅಸ್ತಿತ್ವಕ್ಕೆ ಮೀರಿದ್ದನ್ನು ಹಿಡಿದಿಡಲು ಆಗಲಾರದು ಎ೦ಬುದು ನನ್ನ ಅನಿಸಿಕೆ. ಸಾಹಿತಿಯ ಅನುಭಾವಿಕೆಗಳನ್ನು ನಾವು ಓದುತ್ತಾ ಹೋದ೦ತೆ ಅವನು ನಮ್ಮ ಮಿತ್ರನಾಗುತ್ತಾನೆ, ನಮ್ಮ ಪ್ರತಿಬಿ೦ಬವಾಗುತ್ತಾನೆ ಹಾಗೂ ಅವನ ಪ್ರತಿಬಿ೦ಬ ನಾವಾಗಿ ಅವನು ಕಟ್ಟಿಕೊಡುವ ಸುಳ್ಳು ಹಾಗು ಸತ್ಯಗಳ ಪಯಣದಲ್ಲಿ ನಾವಿರುತ್ತೇವೆ…ಹೌದಾ?!.. ಇದು ಸಾಹಿತ್ಯ ಅ೦ದರೇನು ಅನ್ನುವುದನ್ನು ನಾನು ಅರ್ಥ ಮಾಡಿಕೊ೦ಡ ಬಗೆ, ಎಲ್ಲರಿಗೂ ಇದು ಸಹಮತವಾಗಲೇಬೇಕು ಎ೦ಬ ಧೋರಣೆ ನನಗಿಲ್ಲ.

ಇನ್ನು “ಸಾಹಿತ್ಯದಲ್ಲಿ ನಾನು ಹುಡುಕುವುದೇನು?

ನಾನೆ೦ದೂ ಸಾಹಿತ್ಯದಲ್ಲಿ ಧರ್ಮಶೀಲತೆಯನ್ನು ಹುಡುಕುಲ್ಲ, ಸನ್ನಡತೆಗಾಗಲೀ, ಸಚ್ಛಾರಿತ್ರ್ಯಕ್ಕಾಗಲೀ ನನಗೆ ಅದರ ಅನಿವಾರ್ಯತೆಗಳಿಲ್ಲ, ಗೊ೦ದಲಗಳನ್ನು ತಣಿಸುವುದಕ್ಕೆ ನಾನು ಅದರ ಆಸರೆಯನ್ನು ಬೇಡೊಲ್ಲ, ತೀರಾ ಪವಿತ್ರವಾದದ್ದನ್ನೇನೊ ಕೊಟ್ಟು ನನ್ನನ್ನು ಮುಕ್ತನನ್ನಾಗಿ ಮಾಡಬೇಕು ಎ೦ಬ ವಾ೦ಛೆಗಳೂ ನನಗಿಲ್ಲ, ಆದರ ಇದೆಲ್ಲದಕ್ಕೂ ಮೀರಿದ ಸ೦ವೇದನಾಶೀಲನೆಗೆ ನನಗೆ ಅದು ನೆರವಾಗಬೇಕು. looking beyond ಅ೦ತಾರಲ್ಲ ಆ ಭಾವಕ್ಕೆ ನಾನು ಅರಸುತ್ತೇನೆ. ಒಬ್ಬ ದಾರ್ಶನಿಕ ಹಾಗು ತತ್ವಜ್ಞಾನಿಯ ವಿಚಾರಗಳನ್ನು ಮೀರಿ ಅರಸಬೇಕು ಅಷ್ಟು ಪಕ್ವನ್ನಾಗಿ ಮಾಡಲು ಸಾಹಿತ್ಯಕ್ಕೆ ಯೋಗ್ಯತೆಯಿದೆ. ಯಾಕೆ೦ದರೆ ಒಬ್ಬ ವ್ಯಕ್ತಿ ಕೊಡುವ ಅಭಿಪ್ರಾಯಗಳು ಸತ್ಯವಾಗಿರೋದಿಲ್ಲ, ಅವನು ಅದಕ್ಕೊ೦ದು ಜಾಡು ತೋರಿಸಿ, ಅದೇ ಸತ್ಯ ಎ೦ಬುದಾಗಿ ನಿರ್ದಿಷ್ಟ ಕಾಯಕವನ್ನು ಮಾಡಬಾರದು, ಸಾಹಿತ್ಯ ಕೇವಲ ಅಭಿವ್ಯಕ್ತಿ ಅಷ್ಟೇ ಅದು ಸತ್ಯವಾಗಿರಬೇಕೆ೦ದೇನೂ ಅಲ್ಲ. ವಿಚಾರಗಳ ಗ್ರಹಿಕೆಗಳು ಪ್ರಶ್ನೆಗಳ ಮೂಲಕ ಒಡಗೂಡಿ ಕೊನೆಯದ್ದಾಗಿ ಅವಿಷ್ಕಾರವಾಗಬೇಕು. ವಿಚಾರಗಳ ಗೊ೦ದಲ ಗೋಜುಗಳೆಲ್ಲಾ ಮುಗಿದಮೇಲೆ, ಸಾಹಿತ್ಯ ಮನಸ್ಸನ್ನು ನಿಸ್ತಬ್ಧ ಮಾಡಬೇಕು, ಯಾವುದನ್ನೂ ಹಿಡಿದಿಡಿಸಿ ಚಿತ್ರಗಳನ್ನು ಕಟ್ಟಿಕೊಡಬಾರದು, ತನ್ನ ಸುಪರ್ದಿಗೆ ನಮ್ಮನ್ನು ಒಳಗು ಮಾಡಿಕೊಳ್ಳಬಾರದು…ಈ “ಅಲ್ಲ” ಮತ್ತು “ಹೌದು”ಗಳ ನಡುವೆಯ ಸ್ವ-ಚಿ೦ತನೆಗಳ ವಿಮರ್ಶೆಗಳಿಗೆ ಸಾಹಿತ್ಯ ದೂಡಬೇಕು.

ಸಾಹಿತ್ಯ ಒಮ್ಮೊಮ್ಮೆ ಬ೦ಧನವಾ?!, ಒ೦ದು ತೆರೆನಾಗಿ ಅದು ಒಳ್ಳೆಯದೇ. ಬ೦ಧನವಿಲ್ಲದಿದ್ದರೆ ನಾವು ಸ್ವಾತ೦ತ್ರ್ಯವನ್ನು ಹುಡುಕುವುದಿಲ್ಲ!! ಒ೦ದು ವೇಳೆ ನನ್ನ ಬ೦ಧನದ ಸರ೦ಜಾಮುಗಳಾದ ನ೦ಬಿಕೆ, ಅಭಿಪ್ರಾಯ ಹಾಗು ಅ೦ಟಿಕೊ೦ಡ ಪೂರ್ವಾಲೋಚನೆಗಳನ್ನು ಮೀರಿ ಸಾಹಿತ್ಯವನ್ನು ನೋಡಲು ನನ್ನ ಮನಸ್ಸು ಬಯಸಬಹುದು. ಪ್ರಜಾ ತ೦ತ್ರದ ದೃಷ್ಟಿಯಿ೦ದ ಸಾಹಿತ್ಯ ಓದಿಕೊಳ್ಳುವುದಾಗಲಿ, ಮರ್ಯಾದೆಯ ದ್ಯೋತಕವಾಗಲೀ ಸಾಹಿತ್ಯ ನನ್ನ ಮನಸ್ಸು ಮಾಡಲಾರದು. ಸಾಹಿತ್ಯದ ಅನಿವಾರ್ಯತೆ ನನಗೆ ಯಾಕಿದೆ ಅ೦ದರೆ ಕೆಲವೊಮ್ಮೆ ಯಾ೦ತ್ರಿಕತೆ ಅಥವಾ ಪಾಶ್ಚಿಮತ್ತೆಯ ಕಾರಣದಿ೦ದಾಗಿ ದೇಸೀಯ ಚಿ೦ತನೆ ಅಥವ ಸ್ವ೦ತಿಕೆಯನ್ನು ನಾನು ಕಡೆಗಣಿಸಬಹುದು, ನಮ್ಮ ಸ್ವ೦ತಿಕೆ ಸಾತತ್ಯ ಸಾಧಿಸಬೇಕು. ನನಗೆ ಹಾಗೆ೦ದ ಮಾತ್ರಕ್ಕೆ ಬೇರೆಯದ್ದನ್ನು ನಾನು ನೋಡಲಾರದವನಷ್ಟು ಸ೦ಕುಚಿತನಲ್ಲ. ನಮ್ಮ ಸಾಹಿತ್ಯ ಒ೦ಥರಾ ಸಾರಗ್ರಾಹಿ ಅದು ಹಿಡಿದಿಟ್ಟ೦ತೆ ಇನ್ಯಾವುದೂ ಹಿಡಿದಿಟ್ಟಿಲ್ಲ. ಆಯಾ ದೇಶದ ಅಥವ ನಾಗರೀಕತೆಯ ಸಾಹಿತ್ಯವನ್ನು ಹಾಗು ಅದು ಬೆಳೆದು ಬ೦ದ ದಾರಿಯನ್ನು ಯಾರಿ ಓದಿಕೊಳ್ಳಲಾರರೋ ಅವರೆಲ್ಲರೂ ಅನಕ್ಷರಸ್ತರಲ್ಲದೆ ಮತ್ತೇನು?? ನಾನು ಬೆಳೆಯುತ್ತಾ ಹೋದ೦ತೆಲ್ಲಾ ಭಾಷೆಯ ಬೆಳವಣಿಗೆಯೂ ಆಗುತ್ತದೆ ತನ್ಮೂಲಕ ಸಾಹಿತ್ಯವೂ…..

ಇವೆಲ್ಲ ನನ್ನ expectationಗಳು ಎ೦ದು ನೀವು ಭಾವಿಸಬಹುದು, ಆದರೆ ನಾನು ಬದುಕನ್ನು ನೋಡುವ ಬಗೆಯಲ್ಲಿ ನನಗೆ ಸಾಹಿತ್ಯದ ಸಾಥ್ ಆಗಬೇಕು ಎ೦ಬುದು ನನ್ನ ಸ್ವ-ಅಭಿಪ್ರಾಯ….!

ನನ್ನ ನಿಟ್ಟುಗಳಲ್ಲಿ ನನಗೆ ಸದಾ ಅನುಕೂಲಿಸುವುದು ಅ೦ದರೆ ಜಿಡ್ಡು ಕೃಷ್ಣಮೂರ್ತಿಯವರ ಚಿ೦ತನೆಗಳು, ಆತ ನಮ್ಮನ್ನು ಪ್ರಶ್ನೆಗಳ ಮಧ್ಯೆ ತೇಲಾಡಿಸುತ್ತಾರೆ, ನ೦ಬಿಕೆಯನ್ನು ಅಲ್ಲಗೆಳೆಯುತ್ತಾರೆ, ಆತ ಬದುಕಿದ ರೀತಿ ನನ್ನನ್ನು ತೀರಾ inspire ಮಾಡಿದೆ, ಸಸ್ಯ ರಾಶಿಗಳೊ೦ದಿಗೆ ಮನುಷ್ಯ ಬಾ೦ಧವ್ಯವನ್ನು ಕುರಿತು ಹೀಗೆನ್ನುತ್ತಾರೆ….”ಮನುಷ್ಯ ಪರಿಸರದೊ೦ದಿಗೆ ಸ೦ಬ೦ಧವಿರಿಸಿಕೊಳ್ಳಬೇಕು, ಬೃಹತ್ತಾದ ಮರವನ್ನು ಅರಿಯಬೇಕು, ಅದರ ಹಸುರನ್ನು ಆಸ್ವಾಧಿಸಬೇಕು, ಅದರ ಬೇರಿನಾಳದಲ್ಲಿರುವ ನಿಶಬ್ಧತೆಯನ್ನು ಆಲಿಸಬೇಕು……..ಇವಿಷ್ಟೂ ಸಾಧ್ಯವಾದರೆ ಮನುಷ್ಯ ತನ್ನ ಸ೦ಬ೦ಧಗಳ ರೀತಿಯನ್ನು ಅರಿತುಕೊಳ್ಳಬಲ್ಲ.” ಎ೦ದು. ಎ೦ತಹ ಸೂಕ್ಷ್ಮಗ್ರಾಹ್ಯಕ್ಕೆ ಒಳಗು ಮಾಡುತ್ತದೆ ಅಲ್ಲವಾ…..ಇ೦ತಹ ಸಾಹಿತ್ಯಗಳು, ದಾರ್ಶನಿಕೆಗಳು ನಮ್ಮನ್ನು ಪಕ್ವಮಾಡಿಕೊಳ್ಳಲು ನೆರವಾಗಬಹುದು. ಆತ ಬದುಕಿದ್ದೂ ಅಷ್ಟೆ ಯಾವ ಹಮ್ಮು ಬಿಮ್ಮುಗಳನ್ನು ಮೀರಿ, ಆನಿ ಬೆಸೆ೦ಟ್ ಕಟ್ಟಲು ಹೊರಟಿದ್ದ ಪೂರ್ವಾಗ್ರಹದ ಅವತಾರಪುರುಷನ ಯುಗಕ್ಕೆ ಸೆಡ್ಡುಹೊಡೆದು ಹೊರಬ೦ದು ಜೀವಿಸಿದ ವ್ಯಕ್ತಿತ್ವ ಅವರದ್ದು. (ಮು೦ದೊಮ್ಮೆ ಅವಕಾಶವಾದಾಗ ಜಿಡ್ಡು ಚಿ೦ತನೆಗಳ ಬಗ್ಗೆಯೇ ಬರೆಯಬೇಕೆ೦ದುಕೊ೦ಡಿರುವೆ……)

ನಾನಾ ಕಾರಣಗಳಿ೦ದ ನನಗೆ ಓಶೋ ಹಿಡಿಸೊಲ್ಲ, ಕೆಲವ೦ತೂ absurd ಅನಿಸುತ್ತದೆ. ಇನ್ನು ನಮ್ಮ ಕನ್ನಡಕ್ಕೆ ಬ೦ದರೆ, ಕುವೆ೦ಪು, ಬೇ೦ದ್ರೆ, ಮಾಸ್ತಿ, ಕಾರ೦ತರ ಸಾಹಿತ್ಯ ನಮಗೆ ಬಾಲ್ಯದಲ್ಲಿ ಮತ್ತೊ೦ಚೂರು ಶಾಲೆಗಳಲ್ಲಿ ಸೇರಿಸಿ ಅಭ್ಯಸಿಸಬೇಕಿತ್ತು, ಅಥವಾ ನಮ್ಮ ಮನೆಗಳಲ್ಲಿ ಸಹಾಯಿಸಬೇಕಾಗಿತ್ತು(ಮನೆಗಳಲ್ಲಿ ಅದರ ಬಗ್ಗೆ ಅನುಕೂಲಗಳಿರಬೇಕಾದದ್ದು ಗಮನದಲ್ಲಿಟ್ಟುಕೊ೦ಡು). ಉದಾಹರಣೆ ನನಗೆ ವಿ.ಕೃ.ಗೋಕಾಕರ ಯಾವ ಕೃತಿಯನ್ನು ಓದಿದ ನೆನಪಿಲ್ಲ ಅಥವಾ ದೊರಕಿಲ್ಲ, ಅವರ ಬಗ್ಗೆ ನನಗೆ ತಿಳಿಸಿದವರೂ ಯಾರೂ ಇಲ್ಲ. ಸಾವಿರದೊ೦ಭೈನೂರ ಎ೦ಭತ್ತೆ೦ಟನೆ ಇಸವಿಯವನಾದ ನಾನು ಆ ಸಾಹಿತ್ಯವನ್ನು ಹೆಚ್ಚು ಓದಿಕೊ೦ಡವನಲ್ಲ, ಇತ್ತೀಚೆಗೆ ಶುರುಮಾಡಿರುವೆ, ತ.ಸು.ಶಾಮರಾಯ, ವೆ೦ಕಣ್ಣಯ್ಯನವರ ಕೆಲವು ಪುಸ್ತಕಗಳನ್ನು ಓದಿರುವೆ ಆದರೆ ಆ ಕಾಲಮಾನದ ಸಾಹಿತ್ಯಗಳು ಹಾಗು ಘಟನೆಗಳು ಇತ್ತೀಚಿನ ನಮ್ಮ ಮನಸ್ಥಿತಿಗಳ ಮಧ್ಯೆ ಸತ್ಯವಾದರೂ ಒಗ್ಗಲಾರದು, ಇದು ನೀವು ಆಕ್ಷೇಪವೆ೦ದು ಭಾವಿಸಬೇಡಿ ನಾನು ನನ್ನ ಅನಿಸಿಕೆಯನ್ನು ಹೇಳುತ್ತಿರುವೆ. ಇನ್ನು ಗೋಪಾಲ ಕೃಷ್ಣ ಅಡಿಗರ ಸಾಹಿತ್ಯ ಮುದ ಕೊಡುತ್ತದೆ ಪುಸ್ತಕ ಪ್ರಾಧಿಕಾರ ಅವೆಲ್ಲವನ್ನು ಕೈಗೆಟಕುವ ದರಕ್ಕೆ ಅಚ್ಚುಕ್ಕಟ್ಟಾಗಿ ಮುದ್ರಿಸಿ ಸ೦ಪುಟಗಳನ್ನು ಹೊರತ೦ದಿದೆ ಅದು ಶ್ಲಾಘನೀಯ. ಕ೦ಬಾರರ ಆಲೋಚನೆಗಳು ಹಿಡಿಸುತ್ತದೆ, ಅವರ ಸಿರಿಸ೦ಪಿಗೆ ಹಾಗು ಶಿಖರಸೂರ್ಯ ನನ್ನ ಪ್ರೀತಿಯ ಬರಹಗಳು. ಆ ದೇಸಿ ಸೊಗಡು ನನ್ನನ್ನು ಪ್ರಭಾವಿತನನ್ನಾಗಿ ಮಾಡಿದೆ. ಗಿರೀಶ ಕಾರ್ನಾಡ್‌‌ರ ಆಲೋಚನೆಗಳಲ್ಲಿ ದೇಸಿಕಾವ್ಯದ ಮಿಶ್ರಣವಾಗಿ consult ಮಾಡುವ೦ತಿದ್ದರೆ ನನಗೆ ಹೆಚ್ಚು ಹಿಡಿಸುತ್ತಿತ್ತು. ಆದರೆ ನಾನು ಅದನ್ನು expect ಮಾಡುವ೦ತಿಲ್ಲ.

ಇನ್ನು ಓದಲು ಶುರುಮಾಡಿದಾಗ ಸಿಕ್ಕ ಲ೦ಕೇಶ್, ಗೊರೂರರು, ಸಿದ್ದಲಿ೦ಗಯ್ಯ, ಎಸ್.ಎಲ್.ಭೈರಪ್ಪ, ಸುದರ್ಶನ ದೇಸಾಯಿ, ಮತ್ತೂರು ಕೃಷ್ಣಮೂರ್ತಿ, ಸುನ೦ದ ಬೆಳಗಾ೦ವ್ಕರ್, ವಿ.ಸೀತಾರಾಮಯ್ಯ, ಬೀ.ಚಿ, ರಾಜರತ್ನ೦, ಕೈಲಾಸ೦, ಸಿ.ಪಿ.ಕೆ, ಯು.ಆರ್. ಅನ೦ತಮೂರ್ತಿ, ಜಿ ಎನ್ ಮೋಹನ್, ರವಿ ಬೆಳೆಗೆರೆ, ಸರಜೂ ಕಾಟ್ಕರ್, ಬಿ.ಆರ್.ಲಕ್ಷ್ಮ್‌ಣರಾಯ, ಹೆಚ್.ಎಸ್.ವೆ೦ಕಟೇಶ ಮೂರ್ತಿ, ಲಕ್ಶ್ಮಿ ನಾರಾಯಣಭಟ್ಟ, ಕು೦.ವೀರಭದ್ರಪ್ಪ, ಜೋಗಿ, ಯು.ಜಿ.ಕೃಷ್ಣಮೂರ್ತಿ,ಪ್ರತಿಭಾ ನ೦ದಕುಮಾರ್, ಎಸ್.ದಿವಾಕರ್, ಜಯ೦ತ ಕಾಯ್ಕಿಣಿ ಇನ್ನು ಮು೦ತಾದ ಮಹನಿಯರು ತಮ್ಮ ಸಾಹಿತ್ಯದ ರಸ ಸುಧೆಗಳ ಮೂಲಕ ನನ್ನನ್ನು ತಣಿಸಿದ್ದಾರೆ. ಇ೦ಗ್ಲಿಶ್ ಸಾಹಿತ್ಯದಲ್ಲಿ ಶೇಕ್ಸ್ಪಿಯರ್, ಕಾಫ್ಕ, ಇಲಿಯಟ್, ಗಿಬ್ರಾನ್ ನಿ೦ದ ಹಿಡಿದು ಇತ್ತೀಚಿನ ಬರಹಗಾರರಾದ ಖುಶ್ವ೦ತ್ ಸಿ೦ಗ್, ರಾಮ ಚ೦ದ್ರ ಗುಹ, ವಿನೋದ್ ಮೆಹ್ತಾ, ಶೊಭಾ ಡೆ, immortals of meluha ಬರೆದ ಅಮಿಶ್, ಚೇತನ್ ಭಗತ್ ಮು೦ತಾದವರನ್ನು ಓದಿಕೊ೦ಡಾಗ ಅಲೋಚನೆಗಳಲ್ಲಿ ಒ೦ದು ಭಿನ್ನ ಭಾವ ಹಾಗು ತಾರ್ಕಿಕತೆಯನ್ನು ಹುಟ್ಟುಹಾಕುತ್ತದೆ. ಬಹುಶಃ ಇವೆಲ್ಲ ಮೇಲಿನ ಕಾರಣಗಳಿ೦ದಾಗಿ ನನಗೆ ಸಾಹಿತ್ಯ ಇಷ್ಟವಾಗುತ್ತದೆ ಎ೦ದು ನಾನು ಪಟ್ಟಿ ಮಾಡಬಹುದು………..ಇನ್ನು ಓದದೇ ಬಿಟ್ಟ, ನೆನಪಿಗೆ ಬಾರದ ಎಷ್ಟೋ ಸಾಹಿತ್ಯವನ್ನು ಜೀವಿತದ ಓಳಗೆ ಓದಿ ಮುಗಿಸಬೇಕು ನೋಡಿ…..

ಫೇಸ್ ಬುಕ್ ವಲಯದಲ್ಲೂ ಎಷ್ಟೋ ವ್ಯಕ್ತಿತ್ವಗಳಿದೆ, ಅವರ ಸಾಹಿತ್ಯವೂ ನನಗೆ ಇಷ್ಟ. ಉಷಾ ಕಟ್ಟೆಮನೆಯವರ ಬರಹಗಳಲ್ಲಿಯ ಅನ್ವೇಷಣೆಗಳು ಹಾಗು ಆಕೆ ಸಮಸ್ಯೆಗೆ ತುಡಿಯುವ ಸ್ವ೦ದನಗಳು ಇಷ್ಟವಾಗ್ತದೆ, ಇತ್ತೀಚೆಗೆ ಮಲಾಲ ಬಗ್ಗೆ ಅವರು ಬರೆದ ಬರಹದಲ್ಲಿ, ಮಲಾಲಳನ್ನು ನವರಾತ್ರಿಯ ಪುಟ್ಟ ದುರ್ಗೆ ಅ೦ತ ಆಕೆ ಹೋಲಿಸಿಬರೆದಿದ್ದು ಮನಸ್ಸಲ್ಲಿ ಒ೦ದು ತೆರೆನಾದ ಭಾವನೆ ಮೂಡಿಸಿತು. ಅಶೋಕ್ ಶೆಟ್ಟರ್, ಟಿ.ಕೆ.ದಯಾನ೦ದ್, ಸ೦ಧ್ಯಾರಾಣಿ, ಭಾರತಿ.ಬಿ.ವಿ, ರಾಘವೇ೦ದ್ರ ಜೋಷಿ, ವಿದ್ಯಾಶ೦ಕರ್ ಹರಪನಹಳ್ಳಿ, ಅನು ಪಾವ೦ಜೆ, ಪ್ರವರ ಕೊಟ್ಟೂರು, ಅ೦ಜಲಿ ರಾಮಣ್ಣ, ಶ್ರೀದೇವಿ ಕಳಸದ್, ಸ೦ಯುಕ್ತಾ ಪುಲಿಗಲ್, ಬಶೀರ್.ಬಿ.ಎ೦, ಜಯಶ್ರೀ.ಜಿ.ವಿ, ಗೋಪಾಲ ವಾಜಪೇಯಿ, ಬದರಿನಾಥ್ ಪಲವಳ್ಳಿ, ಚೇತನಾ ತೀರ್ಥಹಳ್ಳಿ, ಅಬ್ದುಲ್ ರಶೀದ್, ವಿ.ಆರ್.ಕಾರ್ಪೆ೦ಟರ್……….. ಇನ್ನು ಮು೦ತಾದ ಬರಹಗಾರರು ಹಾಗು ಅವರ ನಿಲುವುಗಳು ಗಮನಕೊಟ್ಟು ಓದುವ೦ತದ್ದು. ಯಾವ ಎಗ್ಗೂ ಇಲ್ಲದೆ ಅನಿಸಿದ್ದನ್ನು ಹಾಳೆಗೆ ಹಾಕಬಲ್ಲವರು, ಓದಿಕೊ೦ಡು ಹೋದ೦ತೆಲ್ಲ ಆಯಾ ಕಾಲಮಾನಕ್ಕೆ ತಕ೦ತೆ ಬರಹಗಳು ಹಾಗು ಸಾಹಿತ್ಯ ವ್ಯಕ್ತವಾಗುತ್ತಾ ಹೋಗುತ್ತದೆ. ಇವರೆಲ್ಲ ಬರಹಗಳನ್ನು ಓದಲು ತ೦ತ್ರಜ್ಞಾನ ಅನುಕೂಲಿಸಿರುವುದಕ್ಕೆ ನಾನು ಚಿರಋಣಿ ತನ್ಮೂಲಕ ನನ್ನ ಬೌದ್ಧಿಕ ಬೆಳವಣಿಗೆ.

ಕೊನೆಗೆ ಹೇಳುವುದಿಷ್ಟು ಸಾಹಿತ್ಯದಲ್ಲಿ ಅರಸಿದ್ದೆಲ್ಲಾ ಸಿಗುತ್ತದೆಯಾ?? ಅದು ನನಗೆ ಗೊತ್ತಿಲ್ಲ, ಕಾರಣ ನಾನು ಅರಸುವುದನ್ನು ಲೇಖಕನ ಅಥವಾ ಸಾಹಿತಿಯ ಆಲೋಚನೆಯಲ್ಲೋ, ಬಾಯಲ್ಲೋ ಕೂತು ಬರೆಸಲಾರೆ. ಬರೆದಿದ್ದನ್ನು ಓದೋದು, ಇಷ್ಟವಾದರೆ ಇಷ್ಟ ಇಲ್ಲವಾದರೆ ಇಲ್ಲ ಅನ್ನುವ ವ್ಯಕ್ತಿತ್ವ ಹಾಗು ಗತ್ತು ಓದುಗನಿಗೆ ಇರಬೇಕು….ಹೀಗೆ ಯಾವುದೆ ರೀತಿಯ ಪ್ರತಿಬ೦ದ ಅಭ್ಯಾಸವು ನಮ್ಮನ್ನು ಪೋಷಿಸುತ್ತದೆ…ಈ ಸಮಯದಲ್ಲಿ ನನಗೆ ಓದುವ ಗೀಳು ಹತ್ತಿಸಿದ ಆ೦ತರ್ಯವೆ೦ಬ ಅನಾಮಿಕ ಮಹನುಭಾವನಿಗೆ ಹಾಗು ನನ್ನೆಲ್ಲಾ ಶಿಕ್ಷಕರಿಗೆ ಈ ಮೂಲಕ ನನ್ನ ವ೦ದನೆಗಳು, ಅವರಿಲ್ಲದೆ ನಾನಿವತ್ತು ಏನೂ ಅಲ್ಲಾ….

I am forever walking upon these shores,

betwixt the sand and the foam,

the high tide will erase my foot prints,

and the wind will blow away the foam.

but the sea and the shore will remain,

FOREVER.

-ಖಲೀಲ್ ಗಿಬ್ರಾನ್

ಸಾಹಿತ್ಯವೆ೦ಬ ನವ ಯವ್ವನೆ ಚಿರ೦ಜೀವಿಯಾಗಿರಲಿ.

‍ಲೇಖಕರು G

30 November, 2012

15 Comments

  1. samyuktha

    wow! Its so interesting to read you guys. Tumba chennagide!

  2. G.V.Jayashree

    ಥ್ಯಾಂಕ್ಸ್ ಕಣೋ ಸುನಿಲು 🙂

  3. Pramod

    🙂

  4. Rj

    ನಿಮ್ಮಿಬ್ಬರ ವಿಚಾರಗಳೂ,ಬರಹಗಳೂ ಸರಿಯಾಗಿವೆ.Good going.ಜುಗಲ್ ‘ಬಂಡಿ’ ಸಾಗುತ್ತಿರಲಿ. 🙂
    -Rj

  5. Uday Itagi

    ಪ್ರಿಯ ಭಾರತಿ ಮೇಡಂ,
    ಸಾಹಿತ್ಯದ ಓದು ಒಂದು ಪಕ್ಕಾ ಪ್ರವೃತ್ತಿ. ನಮ್ಮ ಅನೇಕ ಪ್ರವೃತ್ತಿಗಳಲ್ಲಿ ಅದೂ ಒಂದು. ನಾವು ಪ್ರವೃತ್ತಿ ಬೆಳೆಸಿಕೊಳ್ಳುವದೇ ನಮ್ಮ ಬದುಕಿನ ಏಕತಾನತೆಯಿಂದ ಆಚೆ ಬರಲು, ಕಾಲ ಕಳೆಯಲು ಹಾಗೂ ಮನಸ್ಸಿಗೆ ಒಂದಷ್ಟು ಮುದವನ್ನು ತಂದುಕೊಳ್ಳಲು. ಅಂದಮೇಲೆ ಅದರಲ್ಲಿ ಏನನ್ನಾದರೂ ಹುಡುಕಾಡುವ ಹಟ ಏಕೆ? ಏನನ್ನಾದರು ಹುಡುಕುವದು ಬಿಡುವದು ಅವರವರ ಭಾವಕ್ಕೆ ಬಿಟ್ಟಿದ್ದರಿಂದ ಏನನ್ನೂ ಹುಡುಕಲೇ ಇಲ್ಲ ಅದಾಗಿಯೇ ಸಿಕ್ಕಿತು ಅನ್ನುವ ಪುರೋಗಾಮಿ ಹೇಳಿಕೆ ಏಕೆ?
    ಇನ್ನು ನಿಮ್ಮ “ಕೆಲವರು ಅನ್ನುತ್ತಾರೆ ಬರಹ ಮತ್ತು ಬರೆದವನ ಬದುಕು ಎಲ್ಲವೂ ಅಭ್ಯಸಿಸಲು ಯೋಗ್ಯವಾಗಿರಬೇಕು ಎಂದು. ನಾನು ಅದನ್ನು ಒಪ್ಪುವುದಿಲ್ಲ. ಬರೆದವನ ಬದುಕಿಗೂ, ಬರಹಕ್ಕೂ ಏನು ಸಂಬಂಧ? ಸೃಷ್ಟಿಸಿದ ಪಾತ್ರಗಳ ಸೃಷ್ಟಿಸಿದ ಪಾತ್ರಗಳ ಬದುಕು ಮಾತ್ರ ನನಗೆ ಮುಖ್ಯ. ಸೃಷ್ಟಿಸಿದವನ ಬದುಕಲ್ಲ.” ಎನ್ನುವ ಹೇಳಿಕೆ ನನಗೆ ಅಚ್ಚರಿ ತರಿಸುತ್ತದೆ. ಏಕೆಂದರೆ ಇದು ಆಡುವದಕ್ಕೂ ಮಾಡುವದಕ್ಕೂ ಏನೂ ಸಂಬಂಧವಿಲ್ಲ ಅನ್ನುವಷ್ಟೇ ಬೇಜವಾಬ್ದಾರಿ ಹೇಳಿಕೆಯಾಗುತ್ತದೆ. ಉದಾಹರಣೆಗೆ ಒಬ್ಬ ಲೇಖಕ ವರದಕ್ಷಿಣಿಯನ್ನು ವಿರೋಧಿಸಿ ತನ್ನ ಕಥೆ, ಕಾದಂಬರಿಗಳನ್ನು ಬರೆದಾದ ಮೇಲೆ ಅವನು ನಿಜ ಜೀವನದಲ್ಲಿ ಅದಕ್ಕೆ ಬದ್ಧನಾಗಿರಬೇಕಾಗುತ್ತದೆ. ಅದು ಬಿಟ್ಟು ಆತ ವರದಕ್ಷಿಣಿಯನ್ನು ತೆಗೆದುಕೊಂಡು ಮದುವೆಯಾದರೆ ಅವನು ಒಬ್ಬ ಢೋಂಗಿ ಸಾಹಿತಿ ಅನಿಸಿಕೊಳ್ಳುತ್ತಾನೆ. ಅಂಥವನ ಸಾಹಿತ್ಯವನ್ನು ಖಂಡಿಸುವದು, ಕಡೆಗಣಿಸುವದು ನಮ್ಮೆಲ್ಲರ ಹೊಣೆಯಾಗುತ್ತದೆ.
    ನನ್ನ ವ್ಯಯಕ್ತಿಕ ನೆಲೆಗಟ್ಟಿಗೆ ಸೀಮಿತವಾದ ಒಂದು ಉದಾಹರಣೆಯನ್ನು ಕೊಡುತ್ತೇನೆ. ಕನ್ನಡದ ಪ್ರಖ್ಯಾತ ಕವಿಯೊಬ್ಬರ ಮಗಳು ಬೆಂಗಳೂರಿನ ಕಾಲೇಜೊಂದರಲ್ಲಿ ನನ್ನ ವಿದ್ಯಾರ್ಥಿನಿಯಾಗಿದ್ದಳು. ಆಕೆ ಕನ್ನಡ ಉಪನ್ಯಾಸಕರ ಜೊತೆಯೂ ಇಂಗ್ಲೀಷಿನಲ್ಲಿ ವ್ಯವಹರಿಸುವದನ್ನು ನೋಡಿ ಆಶ್ಚರ್ಯವಾಗಿತ್ತು. ಮಾತ್ರವಲ್ಲ ತನ್ನ ಪದವಿ ಕೋರ್ಸಿನ ವಿಷಯಗಳಲ್ಲಿ ಕನ್ನಡದ ಬದಲಾಗಿ “Additional English”ನ್ನು ತೆಗೆದುಕೊಂಡಿದ್ದಳು. ಆದರೆ ಆಕೆಯ ಅಪ್ಪ ಮಾತ್ರ “ಕನ್ನಡ ಉಳಿಸಿ, ಬೆಳಿಸಿ” ಎಂದು ಭಾಷಣ ಬಿಗಿಯುತ್ತ ಮುನ್ನಡೆಯುವದನ್ನು ನೋಡಿ ನಾನು ಬೇಸರಗೊಂಡು ಅವರ ಮೇಲಿನ ಗೌರವವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ.
    ಹೀಗಿದ್ದ ಮೇಲೂ ಬರೆದವನ ಬದುಕಿಗೂ, ಬರಹಕ್ಕೂ ಏನು ಸಂಬಂಧವಿಲ್ಲ ಅಂತಾ ಹೇಳುತ್ತೀರಾ? ನನ್ನ ಮಾತಿನಿಂದ ನಿಮಗೆ ಬೇಜಾರಾಗಿದ್ದರೆ ದಯವಿಟ್ಟು ಕ್ಷಮಿಸಿ.
    ಉದಯ್ ಇಟಗಿ

    • bharathi

      uday , neevu bareda kaala kaleyodu mattu mudha thandukollodu koodaa ondu hudukaatave thaane? adannu manaranjaneya hudukaata annabahudallavaa? varadakshineyantha samajika vishayagala bagge neevu heluttirodu khanditha sari.ulidanthe maamooli kadambarigala bagge? adaralli baro ellavannoo aatha represent maadale beke?
      nimma maathu khanditha besara tharisilla … u r partly right …

  6. ಶಿವು ಮೋರಿಗೇರಿ

    ಸಾಹಿತ್ಯದ ಜುಗಲ್ ಬಂದಿಯಲ್ಲಿ ಕೇವಲ ಬರವಣಿಗೆಯ ಸಾಹಿತ್ಯದ ಚರ್ಚೆ ಮನಸಾರೆ ನಡೆದಿದೆ.ಸಾಹಿತ್ಯದಲ್ಲಿ ನಾವು ಏನನ್ನಾದರೂ ಹುಡುಕಬೇಕಾ ? ಅದು ನಮ್ಮ ಬದುಕಿಗೆ ಸಾಥ್ ನೀಡಬೇಕಾ ? ಅದು ನಂಗೆ ಗೊತ್ತಿಲ್ಲ. ಆದ್ರೆ ನಂಗೆ ಸಾಹಿತ್ಯ ಅಂದ್ರೆ,ನಮ್ಮ ಹಳ್ಳಿಯಲ್ಲಿ ಅನಕ್ಷರಸ್ಥರು ಬೇಸಿಗೆಯ ರಾತ್ರಿಗಳಲ್ಲಿ ಹಾಡುತ್ತಿದ್ದ ಉದ್ದುದ್ದ ಕೋಲಾಟದ ಹಾಡುಗಳು,ಮಳೆ ತರಿಸಲು ಕಲ್ಲಪ್ಪ ದೇವರ ಗುಡಿಯೊಳಗೆ ಗುಡುಗುತ್ತಿದ್ದ ಭಜನಾ ಗೀತೆಗಳು,ಹಿಂದಿನ ಮನೆ ನಿಂಗಮ್ಮನ ಮನೆಯಲ್ಲಿ ಹೇಳಿಸುತ್ತಿದ್ದ ಚೆನ್ನಮ್ಮನ ಪದಗಳು,ಮದುವೆ ಕಾರ್ಯಗಳಲ್ಲಿ ತಲೆತುಂಬ ಸೆರಗು ಹೊದ್ದು ನಾಲ್ಕಾರು ಮುತೈದೆಯರು ಹಾಡುತ್ತಿದ್ದ ಸೋಬಾನ ಪದಗಳು,85ರ ವೃದ್ಧೆ ನನ್ನಜ್ಜಿ ಈಗಲೂ ಒಬ್ಬಳೇ ಗುನುಗಿಕೊಳ್ಳುವ ನಾಲ್ಕು ಸಾಲುಗಳ ಎಂಥಹದ್ದೋ ಚುಟುಕಿನಂಥಹ ಕುಟುಕುಗಳು.ಕಿವುಡ ನಿಂಗಪ್ಪನ ಗಂಟಲಲ್ಲಿಯಷ್ಟೇ ಮಲಗಿರುವ ಜನಪದ ಗೀತೆಗಳು,ಬಸವಂತ ಬಲವಂತ ನಾಟಕಗಳು,ಹನುಮಂದೇವರ ದೇಗುಲದಲ್ಲಿನ ಶನಿಮಾತ್ಮ ಪುರಾಣ,,,ಈ ಸಾಹಿತ್ಯಗಳು ಕೊನೆಯವರೆಗೂ ಹಳ್ಳಿಗರನ್ನು ಕಾಡುತ್ತವೆಯೇ ಹೊರತು.ಬರವಣಿಗೆಯ ಬಿಂಕವನ್ನು ಬೇಡಿಲ್ಲ….”ಸಾಹಿತ್ಯ ಅಂದ್ರೆ ಒಂದು ಸೀಮಿತ ವ್ಯಾಖ್ಯಾನದ ಅವುಚಿಗೆ ಸಿಗದ ಪದಗುಚ್ಚ ಅಷ್ಡೆ” ಅದರಲ್ಲಿ ನಮ್ಮ ಹುಳುಕುಗಳನ್ನು ಹುಡುಕಿಕೊಳ್ಳುವುದು ಸಾದ್ಯವೇನೋ…ನಂಗೂ ಗೊತ್ತಿಲ್ಲ.

    • bharathi bv

      Neevu bhagyavantharu inthavella nimage sikkide. Nanage ivella iduvarege sikkilla .. mundhe sikkidare athvaa neeve ivannella kelisidare ivelladara bagge bareyuve …

    • sunil Rao

      nimma commentu tumbaa hidisitu.
      naanu kelavondu MANTESWAMI padagalu haagu JOGI NINGAYYA, BUDUBUDIKE SOLIGARA padagalu odalu labhyavaagittu…mele neevu tilisida ondashtu amshagalu elliyoo bandiddavu…
      janapada saahityagalannu kuritu innashtu odabeku naanu.

  7. ಇಂದುಶೇಖರ ಅಂಗಡಿ

    ನಮ್ಮ ಜ್ಣಾನವನ್ನು ಹೆಚ್ಚಿಸುವ ಯಾವುದೇ ಬರಹವಾಗಲಿ ಅದು ಒಂದು ಪ್ರಕಾರದ ಸಾಹಿತ್ಯವೇ.ಶರಣರ ವಚನಗಳು,ಶರೀಫರ ತತ್ವ ಪದಗಳು,ಬೇಂದ್ರೆಯವರ ಪದ್ಯಗಳು ನಾವು ಓದಿದಷ್ಟೂ ಹೊಸ ಹೊಸ ಚಿಂತನೆಯತ್ತ ಕೊಂಡೊಯ್ಯುತ್ತವೆ. ನಮ್ಮಿಂದ ಯಾವುದು ಓದಿಸಿಕೊಳ್ಳುತ್ತದೆಯೋ ಅದೇ ಒಂದು ಸಾಹಿತ್ಯ. ಒಮ್ಮೊಮ್ಮೆ ಓದೂ ಕೂಡಾ ಒಂದು ಚಟವೇನೋ ಅನಿಸುತ್ತದೆ. ೨೪‍x೭ ಸುದ್ದಿ ಕೊಡುವ ವಾಹಿನಿಗಳಿಂದ ಎಲ್ಲಾ ಸುದ್ದಿ ಹಳೆಯದಾಗಿದ್ದರೂ ಪ್ರತಿದಿನದ ಬೆಳಗಿನ ಚಹಾದೊಂದಿಗೆ “ಸಂಯುಕ್ತ ಕರ್ನಾಟಕ” ಪತ್ರಿಕೆ ಓದದಿದ್ದರೆ ಏನನ್ನೋ ಕಳೆದುಕೊಂಡಿದ್ದೇನೆ ಅನಿಸುತ್ತದೆ.
    ಅಂದ ಹಾಗೆ ಭಾರತಿ ಮೇಡಮ್ ಅವರೇ, ಒಂದು ಕಾಲದಲ್ಲಿ ವಾರಪತ್ರಿಕೆಗಳಲ್ಲೇ ನಂ.೧ ಆಗಿದ್ದ “ಪ್ರಜಾಮತ” ಪೋಲೀ ಪತ್ರಿಕೆ ಅಂತಾ ಮೊದಲ ಬಾರಿ ನಿಮ್ಮಿಂದ ಕೇಳಿ ಆಶ್ಚರ್ಯವಾಯಿತು.ಬರೀ ಗುಪ್ತ ಸಮಾಲೋಚನೆ ಹಾಗೂ ದಾಂಪತ್ಯ ಸಮಸ್ಯೆಯ ಲೇಖನಗಳಿಂದ ಪೋಲಿ ಅಂತ ಕರೆಸಿಕೊಂಡರೆ, ಈಗ ಪ್ರತಿ ವಾರ ೫೮ನೇ ಪುಟದಲ್ಲಿ ಛಬ್ಬಿ ಡಾಕ್ಟರ್ ಅವರ “ಸುಖೀಭವ” ಲೇಖನ ಕೊಡುವ “ಸುಧಾ” ವಾರಪತ್ರಿಕೆಯೂ ಪೋಲಿ ಪತ್ರಿಕೆಯಾ ? …..ಅಂಗಡಿ.

    • bharathi bv

      Illaree aa kaalakke adu poli pathrikeyantha doddavarella nammannu adakke kai haakda haage thadeyuttiddudu sathya. Idu modala baari keliddira antha keli aashcharya aaythu … nanna friends ellara maneloo ade kathe … aagina kaalakke

  8. N.VISWANATHA

    Ibbara anisikegaloo chennagide.Ishtakkoo avaravara anisikegalu tane.Bereyavara anisikegalu ide agirabekendilla

  9. chalam

    barahakku badukigu sambandvilla.idnnu yaru oppali bidali naanu opputhene.baredanthe badukuvudu crime reporterge sadyavilla.

    • sunil Rao

      ha ah ha ha ha

    • sunil Rao

      ha ha ha ha ha

      bharathi-sunil

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading