ಸಂಪು ಕಾಲಂ : ಕರುಣಾಳು ಬಾ ಬೆಳಕೇ…

ಕರುಣಾಳು ಬಾ ಬೆಳಕೇ…

“ತುಂಡ್ ಹೈಕಳ್ ಸಹವಾಸ, ಮೂರು ಹೊತ್ತು ಉಪವಾಸ….” ಅಂತ ಡ್ರಾಮಾ ನೋಡ್ಕೊಂಡು ಅಲ್ಲೇ ಇದ್ದ ಕೆಫೆಟೇರಿಯಾಲಿ ಹೊಟ್ಟೆ ಬೆಚ್ಚಗೆ ಮಾಡಿಕೊಂಡು ಹೊರಟ್ವಿ. ದಾರೀಲಿ ಆಚೀಚೆ ನೋಡ್ತಾ ಹೋಗ್ತಿದ್ರೆ, “ಎಲ್ಲಾರೂ ಮುಖ ಮುಚ್ಕೊಂಡ್ ಡ್ರಾಮ ಮಾಡೋಣ…” ಅನ್ನೋ ಸಾಲುಗಳ ರಿಂಗಣ. ನಮ್ಮ ಚಿಂತನೆಗೆ ಕಾವು ಕೊಡುವಂತಹ ಕೆಲವು ಪಂಚ ಲೈನ್ ಗಳನ್ನ ಬರೆಯೋ ಈ ಯೋಗರಾಜ್ ಭಟ್ ರವರು. ಸಿನೆಮಾ ನಿರ್ದೇಶಕರಿಗಿಂತ ಒಳ್ಳೆ ಬರಹಗಾರರಾಗಬಲ್ಲರು ಅಲ್ಲವೇ ಎನಿಸಿತು. ಕೆಲವೊಮ್ಮೆ ಹೀಗಾಗುತ್ತದೆ, ನಾವು ತಲೆ ತುಂಬಾ ಏನೇನೋ ಯೋಚಿಸುತ್ತಾ ಅವೆಲ್ಲವನ್ನೂ ಒಂದು ಬಿಳಿ ಹಾಳೆಯ ಚೌಕಟ್ಟಿನೊಳಗೆ ಬಿಡಿಸ ಹೋದರೆ, ಆ ಸವಿಸ್ತಾರವಾದ ಯೋಚನಾ ಲಹರಿಯ ಲಯ ತಪ್ಪಿ ಸೋರಿಕೆ ಶುರುವಾಗುತ್ತದೆ. ಈ ರೀತಿ ಅನುಭವವು ‘ಡ್ರಾಮ’ ವನ್ನು ಕಾಡಿದೆಯೇ? ಚೆಂದದ ಪರಿಕಲ್ಪನೆ, ತೀಕ್ಷ್ಣ, ಚುರುಕಾದ ಸಂಭಾಷಣೆ, ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೆ ತಲುಪಿಸುವ ದಾರ್ಶನಿಕತೆ, ಎಲ್ಲೂ ಮಿತಿ ಮೀರದ ಹಾಸ್ಯ ಪ್ರಜ್ಞೆ, ಎಲ್ಲವೂ ಇದ್ದೂ ಒಂಥರಾ ‘ಮೇಲೋ ಡ್ರಾಮಾಟಿಕ್’ ಅನ್ನಿಸಿದ್ದು ಯಾಕೆ? ಎಂದು ಯೋಚಿಸುತ್ತಾ ಹೋಗುತ್ತಿದ್ದೆ. ದಾರಿಯಲ್ಲಿ ಸಿಗ್ನಲ್ ಸಿಕ್ಕಿ ಗಾಡಿಗೆ ಬ್ರೇಕ್ ಹಾಕಿದಾಗ ಎಚ್ಚರಗೊಂಡಂತೆ ಕಣ್ಣರಳಿಸಿ ಸುತ್ತಲೂ ನೋಡಿದೆ. ಫಳಗುಟ್ಟುವ ದೀಪಗಳು, ರಸ್ತೆ ಭರ್ತಿ ವಾಹನಗಳು, ವೀಕ್ ಎಂಡ್ ಮೂಡ್ ನಲ್ಲಿರುವ ‘ತುಂಡ್ ಹೈಕಳು’. ಇವುಗಳ ಮಧ್ಯದಲ್ಲೆಲ್ಲೋ ಒಬ್ಬ ಕಣ್ಣಿಲ್ಲದ ಕುರುಡು ಹುಡುಗಿ, ಸುಮಾರು ಹದಿನೆಂಟರ ವಯಸ್ಸು, ರಸ್ತೆ ದಾಟುತ್ತಿದ್ದಳು. ಆಕೆಯನ್ನು ಕಂಡು, ಟಿವಿ ಚಾನೆಲ್ ನಂತೆ ಬದಲಾದ ನನ್ನ ನೆನಪಿನ ಚಾನೆಲ್, ಮತ್ತದರ ಕೆಲವು ಸೊಗಸಾದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಈ ಕಣ್ಣಿಲ್ಲದವರನ್ನು ಕಂಡರೆ ನನಗೆ ಆತಂಕ, ಸಂಕೋಚ, ತಿರಸ್ಕಾರ! ಅವರನ್ನು ಕಂಡು ಅಲ್ಲ, ನನ್ನ ಬಗ್ಗೆ ನನಗೆ ಮೂಡುವಂತಹ ತಿರಸ್ಕಾರ! ಎಲ್ಲವೂ ಇದ್ದು ಏನೋ ಚಿಂತೆ, ಏನೋ ಕೊರಗು ಎಂದು ಮರುಗುವ ನಮ್ಮಂತಹವರಿಗೆ ಈ ಕುರುಡರು ಕಲಿಸುವ ಪಾಠ, ಸಮಾಜದ ಕಡೆಗಿನ ಅವರ ಒಂದು ದಿಟ್ಟ ನೋಟ!

ದೃಷ್ಟಿ ಹೀನರ ಜೊತೆಗೆ ನನ್ನ ವಯಕ್ತಿಕ ಒಡನಾಟ ಬಹಳ ಕಡಿಮೆ. ಆದರೆ ಸಿಕ್ಕಿರುವ ಕೆಲವೇ ಅವಕಾಶಗಳಲ್ಲಿ, ಅವರು ನನ್ನನು ಬೆಚ್ಚು ಬೀಳಿಸಿದ್ದರು. ಅವರ ಆತ್ಮ ಸ್ಥೈರ್ಯ, ಮನೋಬಲಕ್ಕೆ ಮಾರು ಹೋಗಿದ್ದೆ. ಮೊಟ್ಟ ಮೊದಲನೇ ಬಾರಿಗೆ ನಾನು ಈ ದೃಷ್ಟಿ ಹೀನತೆಯನ್ನು ಅರಿತದ್ದು, ನಮ್ಮ ಶಾಲೆಯ ಬಳಿ ಇದ್ದ ಟೆಲಿಫೋನ್ ಬೂತ್ ನಿಂದ. ಆಗ ನಮಗೆ, ನೀಲಿ ಬಣ್ಣದ ಪೆಟಾರಿಯಂತಿದ್ದ, ಅದಕ್ಕೊಂದು ಬಾಗಿಲು ಕಿಟಕಿ, ಥೇಟ್ ನಾವು ಬಣ್ಣದ ಪೆನ್ಸಿಲ್ ನಲ್ಲಿ ಬಿಡಿಸುವ ಮನೆಯ ಹಾಗೆ ಇದ್ದ ಟೆಲಿಫೋನ್ ಬೂತ್ ನೋಡುವುದೇ ಒಂದು ಸೋಜಿಗ. ಶಾಲೆಯಿಂದ ಹೊರ ಬಂದರೆ ಕಾಣುವ ಆ ಬೂತ್ನಲ್ಲಿ ಇಣುಕಿ ನೋಡುವುದು, ಅಲ್ಲಿ ಕರಿ ಕನ್ನಡಕ ಹಾಕಿ ಕೂತಿರುವ ಒಬ್ಬ ದಪ್ಪ ಹೆಂಗಸು ಇದ್ದರು. ಕರಿ ಕನ್ನಡಕದ ಬಗೆಗಿನ ಆಗಿದ್ದ ನಮ್ಮ ಅರಿವು ಎಂದರೆ ಅದು ಗಾಡಿಯಲ್ಲಿ ಕೂತು ಸ್ಟೈಲ್ ಆಗಿ ಪೋಸ್ ಕೊಡಲಿಕ್ಕೆ ಹಾಕುವ ಕನ್ನಡಕ ಎಂದು. ಈಕೆ ಯಾಕೆ ಆ ಕನ್ನಡಕ ತೊಟ್ಟು, ಅದೂ ಕತ್ತಲ ಬೂತ್ ನಲ್ಲಿ ಕೂತಿರುತ್ತಾಳೆ ಎಂದು ನಮಗೆ ಸ್ನೇಹಿತರಿಗೆಲ್ಲಾ ನಗು, ಅಚ್ಚರಿ. ಮೊದಲನೇ ಬಾರಿ, ಆ ಹೆಂಗಸು ಎಂದೋ ದೃಷ್ಟಿ ವಿಹೀನರಾಗಿದ್ದಾರೆ, ಅವರ ವಿಕಾರವಾಗಿರುವ ಕಣ್ಣನ್ನು ಮರೆ ಮಾಚಲು ಆಕೆ ಕಪ್ಪು ಕನ್ನಡಕ ಧರಿಸುತ್ತಾರೆ ಎಂದು ತಿಳಿದಾಗ ಒಮ್ಮೆ ನನ್ನ ಹೃದಯ ಬಡಿತ ನಿಂತಿತ್ತು. ಅವರ ಬಗ್ಗೆ ಅತ್ಯಂತ ಮರುಕ, ಕುತೂಹಲ ಉಂಟಾದರೂ, ಆ ಸಣ್ಣ ವಯಸ್ಸಿನಲ್ಲಿ ಆಕೆಯನ್ನು ಮಾತನಾಡಿಸಲು ಭಯವಾಗಿ ಸುಮ್ಮನಾಗಿದ್ದೆ.

ಅದನ್ನು ಸಾಕಷ್ಟು ಬಾರಿ ನೆನೆದು ಮರೆತದ್ದೂ ಆಗಿತ್ತು ನಾನು ಕಾಲೇಜಿಗೆ ಸೇರಿದ್ದಾಗ. ಬೆಂಗಳೂರಲ್ಲಿ ಜ್ಞಾನಾರ್ಜನೆಯ ಕೇಂದ್ರ ಹಾಗೂ ‘ತುಂಡ್ ಹೈಕಳ’ ಅಡ್ಡಾ ಆಗಿರುವ ನಮ್ಮ ಕಾಲೇಜು (ಅದರಲ್ಲೂ ಮಹಿಳಾ ಕಾಲೇಜು ಎಂದರೆ ಕೇಳಬೇಕೆ!) ಅಧ್ಯಯನ, ಲಲಿತ ಕಲೆ, ಪಠ್ಯೇತರ ಚಟುವಟಿಕೆ, ಎಲ್ಲದರಲ್ಲೂ ಮುಂದು. ಒಮ್ಮೆ ಹೀಗಾಯಿತು; ಕಾಲೇಜಿನ ‘ಸಮಾಜ ಸೇವಾ’ ವಿಭಾಗದ ಮುಖ್ಯ ವಿದ್ಯಾರ್ಥಿ ಕ್ಲಾಸಿಗೆ ಬಂದು “ಬ್ಲೈಂಡ್ ಸ್ಕೂಲ್ ನಿಂದ ಒಂದು ರಿಕ್ವೆಸ್ಟ್ ಬಂದಿದೆ, ಯಾರಾದರೂ ಸಹಾಯ ಮಾಡಬೇಕು ಅನಿಸಿದರೆ, ನನ್ನ ಕೂಡಲೇ ಭೇಟಿ ಮಾಡಿ” ಎಂದಳು. ಅದಾದ ನಂತರ ತರಗತಿಯ ಪಾಠವೆಲ್ಲಾ ಗಾಳಿಗೆ. ನನ್ನ ತಲೆಯ ಪೂರಾ ಬ್ಲೈಂಡ್ ಸ್ಕೂಲು! ಆ ಕಪ್ಪು ಕನ್ನಡಕ ಆಂಟಿ ನೆನಪಾದದ್ದು ಆವತ್ತೇ. ಯಾಕೋ ತಕ್ಷಣ ಹೋಗಿ ಆ ಲೀಡ್ ಅನ್ನು ಭೇಟಿಯಾಗಬೇನಿಸಿತ್ತು. ಕಷ್ಟ ಪಟ್ಟು ಬೆಲ್ ಆಗುವವರೆಗೂ ಕಾದಿದ್ದು, ಆಕೆಯ ಬಳಿ ಹೋದೆ. “ಏನಿಲ್ಲಮ, ಪರೀಕ್ಷೆ ಬರೆಯಬೇಕಂತೆ, ಆ ಹುಡುಗರು ಹೇಳ್ತಾರೆ, ನೀನದನ್ನ ಬರೀಬೇಕು, ಓಕೆ ನಾ?” ಎಂದು ಕೇಳಿದ್ದಕ್ಕೆ “ಹು ಓಕೆ” ಅಂದು ಹೆಸರು, ವಿಳಾಸ, ಫೋನ್ ನಂಬರು ಎಲ್ಲಾ ಕೊಟ್ಟು ಬಿಟ್ಟೆ. ನಂತರ ಮನೆಗೆ ಬಂದು ವಿಷಯ ತಿಳಿಸಿದಾಗ ಪ್ರಶ್ನೆಗಳ ಸರ ಮಾಲೆ! “ಯಾವ ಸ್ಕೂಲಂತೆ?”, “ಹೆಸರು ಏನು?”, “ಆ ಶಾಲೆಯ ಮುಖ್ಯಸ್ಥರು ಯಾರು?”, “ನಿಮ್ಮ ಟೀಚರ್ಸ್ ಈ ವಿಷಯ ಹೇಳಿದರೆ?”……ಹೀಗೆ. ಒಂದಕ್ಕೂ ನನ್ನ ಬಳಿ ಉತ್ತರವಿಲ್ಲ! ಆಗ್ಗೆ ಮನೆ ಮಗನಾಗಿ ಗೂಗಲ್ ಸಹ ಇರಲಿಲ್ಲ ಬಿಡಿ (ಅಥವಾ ನಾನದಕ್ಕಿನ್ನೂ ಸಖ್ಯಳಾಗಿರಲಿಲ್ಲ ಅನ್ನಿಸತ್ತೆ). ತಿಳಿದಿದ್ದೆಲ್ಲಾ ಇಷ್ಟೇ, ನಾನು ಬ್ಲೈಂಡ್ ಸ್ಕೂಲ್ಗೆ ಹೋಗಬೇಕು, ಅವರಿಗಾಗಿ ಪರೀಕ್ಷೆ ಬರೆಯಬೇಕು! ಅವತ್ತಿನ ನನ್ನ ಪೋಷಕರ ಮನೋಸ್ಥಿತಿಯನ್ನು ನೆನೆಸಿಕೊಂಡರೆ ನಗು ಬರುತ್ತದೆ. ಅವರ ಆತಂಕ ಆಗ ಅಲ್ಲದಿದ್ದರೂ ಈಗ ಅರ್ಥವಾಗುತ್ತದೆ.

ಒಂದು ವಾರ ಕಳೆಯಿತು. ಹೀಗೆ ಭಾನುವಾರದ ಸಂಜೆ ಕೂತು ಟಿವಿ ನೋಡುತ್ತಿದ್ದಾಗ ಒಂದು ದೂರವಾಣಿ ಕರೆ. “ಹಾಯ್, ಐ ಆಮ್ ಮಹಾಂತೇಶ್…” ಎಂದು ಇಂಗ್ಲಿಷ್ ನಲ್ಲಿ ಪ್ರಾರಂಭಿಸಿದ ಈತ, ತಾನು ಆ ಅಂಧ ಶಾಲೆಯ ಮುಖ್ಯಸ್ಥನಾಗಿಯೂ, ಅವರ ಶಾಲೆಯ ಮಕ್ಕಳಿಗೆ ಪರೀಕ್ಷೆ ಬರೆಯಲು ಸಹಕರಿಸಲು ಒಪ್ಪಿಕೊಂಡದ್ದಕ್ಕೆ ಧನ್ಯವಾದ ತಿಳಿಸುತ್ತಿರುವುದಾಗಿಯೂ ಹೇಳಿದ. ಆತನ ಸ್ಟೈಲಿಶ್ ಇಂಗ್ಲಿಷ್ ವೈಖರಿ, ತಾನು ಮಾತನಾಡುತ್ತಿದ್ದ ಹೊಸ ತಂತ್ರಜ್ಞಾನದ ಉಪಯೋಗ, ಕಂಪ್ಯೂಟರೀಕರಣದ ಬಗೆಗಿನ ಫ್ಯಾನ್ಸೀ, ಎಲ್ಲಾ ಕಂಡು ಬೆಂಗಳೂರೆಂಬ ಮಾಯಾ ನಗರಿಯ ಎಲ್ಲಾ ರೀತಿಯ ಮಾಯೆಗಳನ್ನು ನೆನೆದು ನಾವೆಲ್ಲರೂ ಸಿನಿಕರಾಗಿಬಿಟ್ಟೆವು. “ಆತ ಯಾರೋ ಏನೋ, ನಿಮ್ಮಟೀಚರ್ಸ್ ಸಹ ಇದರಲ್ಲಿ ಇನ್ವಾಲ್ವ್ ಆಗ್ತಿಲ್ಲ, ಆತನ ಮಾತಿನ ರೀತಿ ನೋಡಿದರೆ ಅದು ನಿಜವಾಗಿಯೂ ಶಾಲೆ, ಅದರಲ್ಲೂ ಬ್ಲೈಂಡ್ ಶಾಲೆ ಅನ್ಸತ್ತಾ?” ಹೀಗೆ ಮನೆಯಲ್ಲಿ ಚರ್ಚೆ. ಕೊನೆಗೂ ಆತನೊಂದಿಗೆ ಮತ್ತೊಮ್ಮೆ ಮಾತನಾಡಿ, ಆತ “ನಿನಗಾಗಿ ಕಾಯುತ್ತಿರುತ್ತೇನೆ” ಎಂದಾಗ ಆದ ಆತಂಕ, ಕುತೂಹಲದಿಂದಲೇ ಪರೀಕ್ಷೆ ದಿನ ಅವರ ಅಡ್ರೆಸ್ ಹುಡುಕಿಕೊಂಡು ಹೊರಟೆ.

ಅದು ಜೆ ಪಿ ನಗರದ ಗಲ್ಲಿ ರಸ್ತೆಯ ಒಂದು ನಿವಾಸ! ಇದೆಂಥಾ ಶಾಲೆ ಎಂದು ಗಾಬರಿಯಿಂದಲೇ ಒಳ ಹೊಕ್ಕು ನೋಡಿದೆ. “ವೆಲ್ಕಮ್ ಸಂಯುಕ್ತ” ಎಂದು ಮಹಾಂತೇಶ್ ಕೈ ಕುಲುಕಿದಾಗ ಕಾದಿತ್ತು ಅಚ್ಚರಿ! ಆ ಬ್ಲೈಂಡ್ ಶಾಲೆಯ ಮುಖ್ಯಸ್ಥ ಮಹಾಂತೇಶ್ ಸಹ ಒಬ್ಬ ಅಂಧ! ನಾನು ಪಟ್ಟ ಅನುಮಾನ, ಆತಂಕಗಳೆಲ್ಲಾ ನನ್ನ ನೋಡಿ ಮುಸಿ ಮುಸಿ ನಕ್ಕಂತೆ ಭಾಸವಾಯಿತು. ಇನ್ನೂ ಮುಂದಕ್ಕೆ ಆತನ ಕಥೆ ಕೇಳಿ ಕುಳಿತಲ್ಲೇ ನಡುಗಿಹೋದೆ! ಆತ ಹುಟ್ಟುತ್ತಲೇ ದೃಷ್ಟಿ ಹೀನ. ಎಲ್ಲರ ಉಪೇಕ್ಷೆ, ಉದಾಸೀನದ ಪೆಟ್ಟು ಬಿದ್ದೂ ಬಿದ್ದೂ ಇಂದು ಈತ ಒಂದು ಒಳ್ಳೆಯ ಶಿಲ್ಪವಾಗಿ ಮಾರ್ಪಟ್ಟಿದ್ದ. ಅಷ್ಟೇ ಅಲ್ಲ, ತನ್ನಂತೆ ಇರುವ ಇತರರು, ತಾನನುಭವಿಸಿದಂತೆ ಕೆಟ್ಟ ಪಾಡಿಗೆ ತುತ್ತಾಗದಿರಲಿ ಎಂದು ತಾನೇ ಅಂಧರಿಗೆ ಒಂದು ಶಾಲೆ ಪ್ರಾರಂಭಿಸುವಷ್ಟು ಬೆಳೆದಿದ್ದ. ಇಷ್ಟಕ್ಕೆ ತೃಪ್ತನಾಗದ ಮಹಾಂತೇಶ್, ತನ್ನ ಶಾಲೆಯ ಮಕ್ಕಳು ಹೊಸ ತಂತ್ರಜ್ಞಾನವನ್ನೂ ಕಲಿಯಬೇಕು, ಸಮಾಜದಲ್ಲಿ ಎಲ್ಲರಂತೆ ಅವರೂ ಅಭಿವೃಧ್ಧಿಯಾಗಬೇಕು ಎಂಬ ಮಹದಾಸೆ ಹೊತ್ತಿದ್ದರು. ಅವರ ದೂರದೃಷ್ಟಿ ಹಾಗೂ ಸಾಹಸಪ್ರವೃತ್ತಿಗೆ ನಮೋ ಎಂದು ಪರೀಕ್ಷೆ ಬರೆಯಲು ಅನುವಾದೆ.

ಮನುಷ್ಯ ಹೆಜ್ಜೆ ಹೆಜ್ಜೆಗೂ ಕಲಿಯುತ್ತಾ ಬೆಳೆಯುತ್ತಾನಂತೆ. ಈ ಪರೀಕ್ಷೆ ಬರೆಯುವಾಗ ನನಗೆ ಆದದ್ದು ಮರೆಯಲಾರದ ಅನುಭೂತಿ. ಮಹಾಂತೇಶ್ ಮೂಲಕ ಪರಿಚಯವಾದ ಒಂದಷ್ಟು ಮುದ್ದಾದ ಹೆಣ್ಣು ಮಕ್ಕಳು “ಅಕ್ಕಾ” ಎಂದು ನನ್ನನ್ನು ಆಪ್ಯಾಯತೆಯಿಂದ ಕರೆದಾಗ ಆದ ಸಮಾಧಾನ, ಸಂತೋಷ ಅಷ್ಟಿಷ್ಟಲ್ಲ. ವಿಶಾಲವಾದ, ಒಳ್ಳೆಯ ಬೆಳಕು ಹರಡಿರುವ ಅವರ ಹಜಾರ, ಅವರ ಜೀವನಕ್ಕೆ ತುಂಬಾ ಜಕ್ ಸ್ಟಪೋಸ್ ಆಗಿ ಕಾಡಿತ್ತು. ಎಲ್ಲರಲ್ಲೂ ನಗು, ಹರಟೆ, ವಿನೋದ. ಅಲ್ಲಿ ಯಾರೊಬ್ಬರಲ್ಲೂ ನಮಗೆ ಕಣ್ಣಿಲ್ಲ, ನಾವು ಕುರುಡರು ಎಂಬ ಕೀಳರಿಮೆಯಾಗಲೀ, ಕಣ್ಣಿದ್ದವರು ಎಷ್ಟು ಅದೃಷ್ಟವಂತರು ಆ ಅದೃಷ್ಟ ತಮಗಿಲ್ಲ ಅನ್ನೋ ಮತ್ಸರವಾಗಲೀ, ದುಃಖವಾಗಲೀ ಕಾಣಲಿಲ್ಲ. ಅವರಿಗೆ ಚೆಂದ ಬಟ್ಟೆ ತೊಟ್ಟು, ಬಳೆ, ಸರ ಇಂತಹ ಅಲಂಕಾರಿಕ ಪೋಷಾಕುಗಳನ್ನು ಧರಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಒಬ್ಬ ಗುಂಗರು ಕೂದಲಿನ, ಎಣ್ಣೆಗೆಂಪು ಕೆನ್ನೆಯ ಪುಟ್ಟ ಹುಡುಗಿ, “ಅಕ್ಕಾ, ಇದು ಯಾವ ಕಲರ್ ಬಳೆ ಸ್ವಲ್ಪ ಹೇಳ್ತಿರಾ, ನಾನು ಈವತ್ತು ಕೆಂಪು ಬಳೆ ತೊಡಬೇಕು”, ಎಂದಾಗ ನನ್ನ ಕಣ್ಣು ತೇವಗೊಂಡಿತ್ತು. “ಇವರಿಗಿರುವ ಜೀವನ ಪ್ರೀತಿಯಲ್ಲಿ ಸ್ವಲ್ಪವಾದರೂ ‘ಇದು ಹೀಗೆ, ಅದು ಹಾಗೆ’ ಎಂದು ಅಸಮಾಧಾನದಿಂದಲೇ ಬದುಕುವ ನಮಗಿದ್ದಿದ್ದರೆ!” ಎನಿಸಿದ್ದಂತೂ ನಿಜ.

ಇನ್ನೇನು ಪರೀಕ್ಷೆಯ ಕೊನೆ ಘಳಿಗೆ. ನಾನು ಪೆನ್ನು, ರಟ್ಟು ಹಿಡಿದು ಬರೆಯಲು ಸಿಧ್ಧ. ಸುಧಾ ವಾರ ಪತ್ರಿಕೆ ಹಿಡಿದು ಗುಂಪಿನಲ್ಲಿ ಮಾತನಾಡುತ್ತಿದ್ದ ಹುಡುಗಿಯರ ಬಗೆಗೆ ಕುತೂಹಲ ಮೂಡಿ, ಹತ್ತಿರ ಹೋಗಿ ಕೂತೆ. ಆಗ ತಿಳಿಯಿತು, ಅವರು ಸುಧಾ ಪುಸ್ತಕದಲ್ಲೇ, ಕಡ್ಡಿ ಹಿಡಿದು ಬ್ರೈಲ್ ಬರಹದಲ್ಲಿ ಏನೋ ಬರೆದುಕೊಂಡಿದ್ದರು, ಅದನ್ನು ಪರೀಕ್ಷೆಗೆಂದು ಓದುತ್ತಿದ್ದರು ಎಂದು. ಅವರ ಮನೋನಿಗ್ರಹ, ಧೈರ್ಯ, ಆತ್ಮ ವಿಶ್ವಾಸಕ್ಕೆ ಮನಸಾರೆ ಮೆಚ್ಚಿ ಎಲ್ಲರಿಗೂ ಬೆಸ್ಟ್ ವಿಷಸ್ ತಿಳಿಸಿದೆ. ನಾನು ಪ್ರಶ್ನೆ ಜೋರಾಗಿ ಓದುವುದು, ಒಬ್ಬ ಅಂಧ ಹುಡುಗಿ ಅದನ್ನು ಕೇಳಿ, “ಅಕ್ಕಾ, ಇದು ಈಜಿ, ಬರೀರಿ ಹೇಳ್ತೀನಿ” ಎಂದು ನಗುತ್ತಲೇ ಉತ್ತರಿಸುವುದು. ಹೀಗೆ ಈ ‘ಬೆಳಕಿನ’ ಹೊಸ ಪ್ರಪಂಚದಲ್ಲಿ ಮುಳುಗಿ ಹೋಗಿದ್ದೆ, ಅದೇ ರೋಮಾಂಚನದಲ್ಲಿ ಪೂರ್ತಿ ಪರೀಕ್ಷೆ ಮುಗಿದಿತ್ತು. ಆ ಮಕ್ಕಳೆಲ್ಲರೂ ಸಂತೋಷದಿಂದ ನನ್ನನ್ನು ಬೀಳ್ಕೊಟ್ಟರು. ಹಿಂತಿರುಗಿ ಬರುವಾಗ “ಕರುಣಾಳು ಬಾ ಬೆಳಕೇ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು” ಹಾಡು ನೆನಪಾಗಿತ್ತು.

‍ಲೇಖಕರು G

November 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. Sathish Naik

    Baraha thumba hidisthu madam.. 🙂 high school odovaaga naavu kooda andhara sahaaya Nidhi jaathaa maadi.. hana sangrahisi avarige kottidvu.. aa dinagala savi nenapugalu matthomme melukaadvu..

    ಪ್ರತಿಕ್ರಿಯೆ
  2. Gopaal Wajapeyi

    ಕಣ್ಣು ತೆರೆಸುವ ಲೇಖನ… ನನಗೂ ಅಂಧರ ಜೊತೆಗಿನ ಅನುಭವಗಳು ಹೊಸ ಬೆಳಕು ತೋರಿವೆ… ಅವೆಲ್ಲದರ ಅನುಭವದ ಹಿನ್ನೆಲೆಯಲ್ಲಿಯೇ ನಾನು ‘ನಾಗಮಂಡಲ’ ಚಿತ್ರದ ಕುರುಡವ್ವನನ್ನು ಕಾಣಲು ಸಾಧ್ಯವಾದದ್ದು. ಆಕೆ ಹೇಳುತ್ತಾಳೆ : ”ನಿಮಗ, ಕಣ್ಣಿದ್ದವರಿಗೆ ಬರೇ ಯಾಡ್ಡs ಕಣ್ಣು. ಆದ್ರ ನಮಗ ಕುರಡರಿಗೆ ಮೈಯೆಲ್ಲಾ ಕಣ್ಣು… ಇಕಾ, ಈ ಕಿವಿಗೋಳು ‘ಕೇಳಿ’ ನೋಡ್ತಾವು… ಈ ಮೂಗು ‘ಮೂಸಿ’ ನೋಡ್ತೈತಿ… ಈ ಬಳ್ಳು ಅದಾವಲ್ಲಾ ಇವು ‘ಮುಟ್ಟಿ ಮುಟ್ಟಿ’ ನೋಡ್ತಾವು… ಕಾಲು ಸಮಾ ದಾರೀ ‘ನೋಡೇ’ ನಡೀತಾವು… ನಮ್ಮ ಮನಸು ಯಾರು, ಏನು, ಹ್ಯಾಂಗ ಅಂತ ‘ನೋಡದs’ ತಿಳಕೊಂತೈತಿ…”
    ಸಂಯುಕ್ತಾ… ಒಳ್ಳೆಯ ಓದು ನೀಡಿದ್ದಕ್ಕಾಗಿ ಧನ್ಯವಾದ…

    ಪ್ರತಿಕ್ರಿಯೆ
  3. sunil Rao

    the best,
    gratitude is the way all………..
    beyond all dis abilities there will be a emotion moulds humanity.

    ಪ್ರತಿಕ್ರಿಯೆ
  4. Santosh

    ಒಳ್ಳೆಯ ಬರಹ. ಆದರೆ ಬರಹಕ್ಕಿಂತ ನಿಮ್ಮ ಮಾನವೀಯತೆ ದೊಡ್ಡದು.

    ಪ್ರತಿಕ್ರಿಯೆ
  5. Anil Talikoti

    ಬರಹದ ಸೌಂದರ್ಯ ಹೆಚ್ಚಿಸುವದು ಭಾಷೆಗಿಂತ ಬರಹದ ವಸ್ತು ಎನ್ನುವದು ನನ್ನ ಅಭಿಪ್ರಾಯ. ಅದಕ್ಕೊಂದು ಸುಂದರ ಉದಾಹರಣೆ ನಿಮ್ಮ ಇ ಲೇಖನ. ‘ಸ್ಪರ್ಶ’ ದ ನಾಶಿರುದ್ದಿನ ನೆನಪಾದ. ಅಂಧರಿಗೆ ಬೇಕಾಗಿರುವದು ಕರುಣೆಗಿಂತ ಕರುಣಾಳುಗಳು, ಮನೋಸ್ಥೈರ್ಯ ಹೆಚ್ಚಿಸುವವರು ಎಂದು ಬಿಂಬಿಸುವ ಇ ಬರಹ ಯಾವದೋ ಸೇವೆಗೆ ನಮ್ಮನ್ನೆ ನಾವು ತೊಡಗಿಸಿಕೊಳ್ಳಬೇಕು ಎಂದು ಪ್ರಚೋದಿಸುತ್ತದೆ. ಒಳ್ಳೆಯ ಲೇಖನಕ್ಕೆ ಧನ್ಯವಾದಗಳು.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  6. ಪು .ಸೂ.ಲಕ್ಷ್ಮೀನಾರಾಯಣ ರಾವ್

    ಈ ಮಾನವೀಯ ಸಂವೇದನೆ ಬರಹಗಾರರಿಗೆ ಬಹಳ ಮುಖ್ಯ .ಈ ಸೂಕ್ಷ್ಮತೆಯನ್ನು ನಿಮ್ಮ ಜೀವನದುದ್ದಕ್ಕೂ ಉಳಿಸಿಕೊಳಿರಿ.
    ಲೇಖನ ಚೆನ್ನಾಗಿದೆ ,ಶುಭಾಶಯಗಳು .

    ಪ್ರತಿಕ್ರಿಯೆ
  7. ಸುಬ್ರಮ್ಮಣ್ಯ

    ಮನಮಿಡಿಯುವ ಲೇಖನ ನೀಡಿದ್ದಕ್ಕೆ ಧನ್ಯವಾದಗಳು. ಕಣ್ಣಿದ್ದವರಿಗೂ / ಕಣ್ಣಿದ್ದೂ ಇಲ್ಲದವರಿಗೂ (ಕೆಲವರನ್ನು ಬಿಟ್ಟು) ಮತ್ತು ಕಣ್ಣಿಲ್ಲದವರಿಗೂ (ಹುಟ್ಟು ಕುರುಡು) ಇರುವ ಪ್ರಮುಖವಾದ ವ್ಯತ್ಯಾಸವೆಂದರೆ ಹೊರ ಪ್ರಪಂಚದ ಆಕಷ೵ಣೆ. ನಾವು ಅಂದರೆ ಕಣ್ಣಿದ್ದವರೂ / ಕಣ್ಣಿದ್ದೂ ಇಲ್ಲದವರೂ ಹೊರ ಪ್ರಪಂಚದ ಆಕಷ೵ಣೆಗೆ ಒಳಗಾಗಿ ನಮ್ಮ ಒಳ ಮನಸ್ಸಿನ ಕಣ್ಣನ್ನೂ ಸಹ ತೆರೆಯಲು ಪ್ರಯತ್ನಿಸುವುದಿಲ್ಲ. ಆದರೆ ಅವರು ಯಾವ ಆಕಷ೵ಣೆ ಅಥವಾ ಪ್ರಲೋಭನೆಗೆ ಒಳಗಾಗದೇ ತಮ್ಮ ಒಳ ಮನಸ್ಸಿನ ಕಣ್ಣಿಂದ ನೋಡಿ ನಲಿಯುತ್ತಾರೆ. ಇದು ನನ್ನ ಅನಿಸಿಕೆ, ಅದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ.

    ಪ್ರತಿಕ್ರಿಯೆ
  8. ಇಂದುಶೇಖರ ಅಂಗಡಿ

    ಒಳ್ಳೆಯ ಅನುಭವ, ಒಳ್ಳೆಯ ಸೇವೆ ಹಾಗೂ ಒಳ್ಳೆಯ ಬರವಣಿಗೆ….

    ಪ್ರತಿಕ್ರಿಯೆ
  9. Badarinath Palavalli

    ಸಿನಿಮಾ ನೋಡುಗನ ಮತ್ತು ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಮೂಡಿಬಂದ ಈ ಬರಹ ಕಣ್ಣು ತೆರೆಸುತ್ತದೆ.

    ಪ್ರತಿಕ್ರಿಯೆ
  10. Raghunandan K

    ಅಂಧರ ಬದುಕಿನೊಳಗಿನ ಜೀವನ ಪ್ರೀತಿಯ ಬೆಳಕು ಜಗದ ಅಂಧಕಾರವ ತೊಳೆಯಲಿ…

    ಇಷ್ಟವಾಯಿತು ಬರಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: