ಸುಧಾ ಆಡುಕಳ ಶೋಕ- ಹೀಗೆ ಎದ್ದು ನಡೆದರೆ ಹೇಗೆ ಸರ್?

ಸುಧಾ ಆಡುಕಳ

ಧಡಕ್ಕನೆ ಎದ್ದು ನಡೆಯುವುದು ನಿಮ್ಮ ಚಾಳಿಯೆಂದು ಗೊತ್ತು. ಆದರೆ ಮತ್ಯಾವುದೋ ತಿರುವಿನಲ್ಲಿ ಸಿಕ್ಕು ನಗೆ ಮಲ್ಲಿಗೆಯ ಸುತ್ತೆಲ್ಲ ಚೆಲ್ಲುತ್ತಿದ್ದವರು ನೀವು. ಹಾಗೆ ಆಸ್ಪತ್ರೆಯ ಬೆಡ್‌ನಿಂದ ನಗುತ್ತಲೇ ಎದ್ದು ಬರುತ್ತೀರಿ ಎಂದು ಕಾಯುತ್ತಿದ್ದೆವು. ನೀವು ನನಗೆ ಮಾತ್ರವಲ್ಲ, ನನ್ನ ಮನೆಯ ಎಲ್ಲರಿಗೂ ಆಪ್ತರು. ನಿಮ್ಮ ವ್ಯಕ್ತಿತ್ವವೇ ಅಂಥದ್ದು. ಒಮ್ಮೆ ನೋಡಿದರೆ ಪೂರ್ಣವಾಗಿ ಆವರಿಸಿಬಿಡುವಂಥದ್ದು.

ಸಂತೋಷದ ಸಮಯದಲ್ಲಿ ನೀವು ಇರುತ್ತಿದ್ದಿರೋ, ಇಲ್ಲವೋ ನೆನಪೇ ಆಗುತ್ತಿಲ್ಲ. ಆದರೆ ದುಃಖವೆಂದಾಗಲೆಲ್ಲ ನೀವು ನೆನಪಾಗುತ್ತಿದ್ದಿರಿ, ಇಲ್ಲಾ ದನಿಯಾಗುತ್ತಿದ್ದಿರಿ. ಸುತ್ತಲೂ ನಡೆಯುವ ಕ್ರೌರ್ಯಕ್ಕೆ ತೀರ ಬೆಚ್ಚುವ ಮತ್ತು ಏನೂ ಮಾಡಲಾಗದೇ ಪರಿತಪಿಸುವ ಗಳಿಗೆಯಲ್ಲಿ ತಡರಾತ್ರಿಯಲ್ಲಿಯೂ ನಿಮಗೆ ಕರೆ ಮಾಡಿದ್ದಿತ್ತು. ಒಂದು ಭರವಸೆಯ ಕಿರು ಬೆಳಕನ್ನಲ್ಲದೇ ನಿರಾಸೆಯ ಮಾತುಗಳು ನಿಮ್ಮಿಂದ ಬಂದುದಿಲ್ಲ.

ನಾನಾಗ ಹೊನ್ನಾವರದ ಕಾಲೇಜಿನಲ್ಲಿ ಬಿ.ಎಸ್.ಸಿ. ಓದುತ್ತಿದ್ದೆ. ನೀವು ಕನ್ನಡ ಅಧ್ಯಾಪಕರಾಗಿ ಬಂದಿರಿ. ಒಂದೋ, ಎರಡೋ ತಿಂಗಳಷ್ಟೆ. ನೀವು ಮರೆಯಾಗಿ ಹೋದಿರಿ. ಅಂದೆನಲ್ಲ, ಎದ್ದು ನಡೆಯುವುದು ನಿಮ್ಮ ರೂಢಿಯೇ ಆಗಿತ್ತೆಂದು. ತರಗತಿಯಲ್ಲಿ ಬಂಡವಾಳಶಾಹಿಯೊಬ್ಬರ ವಿಷಯವನ್ನು ನೀವು ಪ್ರಸ್ತಾಪಿಸಿದಿರೆಂದು ನಿಮ್ಮನ್ನು ಕೆಲಸದಿಂದ ತೆಗೆದುಹಾಕಿದರೆಂದು ಇಡೀ ಕಾಲೇಜಿನ ತುಂಬಾ ಸುದ್ಧಿ ಹರಡಿತ್ತು. ಬಿಸಿರಕ್ತದ ನಮಗೆ ನೀವೊಬ್ಬರು ಅದೃಶ್ಯ ಹೀರೋ ಆಗಿ ಕಾಣಿಸಿದಿರಿ. ನಿಮ್ಮ ಮಾತುಗಳನ್ನು ತನ್ನ ದೊಡ್ಡಪ್ಪನಿಗೆ ವರದಿ ಮಾಡಿದ ಹುಡುಗಿಯೂ ನಿಮ್ಮ ನಿರ್ಗಮನದ ನಂತರ ಬಿಕ್ಕಿ, ಬಿಕ್ಕಿ ಅತ್ತಿದ್ದಳು.

ಆ ಒಂದು ತಿಂಗಳು ನಿಮ್ಮ ಪಾಠ ಕೇಳಿದ್ದಕ್ಕೆ ನೀವು ಸಿಕ್ಕಿದಾಗಲೆಲ್ಲ ನಾನು ಇವರು ನನ್ನ ಗುರುಗಳುಎಂದು ಎಲ್ಲರಿಗೆ ಪರಿಚಯಿಸುವುದು, ನೀವದಕ್ಕೆ ಅಷ್ಟೇ ನಾಜೂಕಾಗಿ ನಾಚಿಕೊಳ್ಳುವುದು ಸದಾ ನಡೆದೇ ಇರುತ್ತಿತ್ತು. ಆದರೆ ಒಂದು ತಿಂಗಳ ಹಿಂದೆಯಷ್ಟೇ ನಾಟಕೋತ್ಸವದ ಉದ್ಘಾಟನೆಯಲ್ಲಿ ಒಟ್ಟಿಗೆ ಭಾಗವಹಿಸಿದಾಗಲೂ ಇದೇದೃಶ್ಯ ಮತ್ತೆ ಪುನರಾವರ್ತನೆಯಾಯಿತು.’ನನ್ನ ಗುರುಗಳು ಎಲವನ್ನೂ ಹೇಳಿದ್ದಾರ’ ಎಂದು ನಾನು ಜಾರಿಕೊಳ್ಳುವೆ ಎಂದಾಗ ನೀವು ಅದೆಷ್ಟು ಚಂದವಾಗಿ ನಗುತ್ತಾ, ‘ನಮಗೆ ಹೇಳಿಕೊಡಬೇಕಾ? ನಾನು ನನ್ನ ಮಾತುಗಳೆಲ್ಲವನ್ನೂ ನನ್ನ ಶಿಷ್ಯೆ ಹೇಳಲಿದ್ದಾಳೆ ಎಂದು ಹೇಳಿ ಮುಗಿಸಾಕ್ತೆ’ ಎಂದು ನನ್ನನ್ನು ನಿರುತ್ತರಳನ್ನಾಗಿಸಿದಿರಿ. ಆದರೆ ಅಂದು ವೇದಿಕೆಯಲ್ಲಿ ಎಷ್ಟೊಂದು ಅಭಿಮಾನದಿಂದ ನುಡಿದಿರಿ, ‘ನನ್ನ ಶಿಷ್ಯೆ ಸುಧಾ’ ಎಂದು. ನೀವು ನಿಜಕ್ಕೂ ನನ್ನ ಗುರುವಾದಿರಿ.

ದೂರದೂರಿನ ಉದ್ಯೋಗದ ಕಾರಣದಿಂದ ಎರಡು ದಶಕಗಳ ಬಿಡುವಿನ ನಂತರ ಮತ್ತೆ ನಿಮ್ಮಒಡನಾಟಕ್ಕೆ ಬಂದಾಗ ನಿಮ್ಮ ಮನೆ ಸಹಯಾನ ಸಾಹಿತ್ಯದ ಕೇಂದ್ರವಾಗಿ ಬೆಳೆದಿತ್ತು. ಎಷ್ಟೊಂದು ಗೋಷ್ಠಿಗಳು, ಕಾರ್ಯಕ್ರಮಗಳು, ನಾಟಕದ ತಯಾರಿಗಳು!!! ರಜೆಯಲ್ಲಿ ಊರಿಗೆ ಬಂದರೆ ಮನಸ್ಸು ಖಿನ್ನವಾದಾಗಲೆಲ್ಲ ಸಹಯಾನಕ್ಕೊಮ್ಮೆ ಹೋಗಿ ಬರುವ ಆಸೆ ಮನಸ್ಸಿನ ತುಂಬಾ.

ನಿಮ್ಮ ಮನೆಯಂಗಳ ನಿಜಕ್ಕೂ ನಮ್ಮೆಲ್ಲರ ತವರು! ನನ್ನ ಎಷ್ಟೊಂದು ಮೊದಲುಗಳಿಗೆ ಕಾರಣರು ನೀವು. ನಾನು ಮೊದಲು ಕವನ ವಾಚಿಸಿದ್ದು ಜಯಂತ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ನಿಮ್ಮ ಮನೆಯಂಗಳದ ಸಹಯಾನೋತ್ಸವದಲ್ಲಿ, ಮೊದಲ ಪ್ರಬಂಧ ಮಂಡಿಸಿದ್ದು ದಲಿತ ಆತ್ಮಕತೆಗಳ ಬಗ್ಗೆ ಅಲ್ಲಿಯೇ ನಡೆದ ವಿಚಾರಗೋಷ್ಠಿಯಲ್ಲಿ, ಮೊದಲ ನಿರೂಪಣೆ ಮಾಡಿದ್ದು ಸಹಯಾನದ ಕವಿಗೋಷ್ಠಿಯನ್ನೆ, ಮೊದಲ ಪುಸ್ತಕ, ಮೊದಲ ನಾಟಕ, ಮೊದಲ ಅನುವಾದ, ಮೊದಲ ರೂಪಾಂತರ ಎಲ್ಲ ಮೊದಲುಗಳಿಗೆ ನೀವು ಕಾರಣರಾದಿರಿ.

ಕಾಲೇಜು ಮಕ್ಕಳೆದುರು ನಾನು ಮಾಡಿದ ಭಾಷಣವನ್ನೇ ನೀವು ಪುಸ್ತಕ ರೂಪದಲ್ಲಿ ಪ್ರಕಟಿಸಿ ನನ್ನ ಮುಂದೆ ಇಟ್ಟಾಗ ನಾಚಿ ನೀರಾಗಿದ್ದೆ. ಹದಿಹರೆಯದ ಕನಸುಗಳೊಂದಿಗೆನಾನು ಬರೆದ ಮೊದಲ ಪುಸ್ತಕ. ನಾಟಕದ ವೀಕ್ಷಕಳು ಮಾತ್ರವಾಗಿದ್ದ ನನ್ನಿಂದ ರವೀಂದ್ರರ ಬಗ್ಗೆ ನಾಟಕ ಬರೆಸಿದ್ದಲ್ಲದೇ ಅದನ್ನು ಪುಸ್ತಕ ರೂಪದಲ್ಲಿಯೂ ಪ್ರಕಟಿಸಿದಿರಿ. ಆ ನಾಟಕ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಜಶ್ನೆ ಬಚಪನ್‌ ಉತ್ಸವಕ್ಕೆ ಆಯ್ಕೆಯಾದಾಗ ಲೇಖಕಿಯೆಂಬ ನೆಲೆಯಲ್ಲಿ ನನ್ನನ್ನು, ಪುಟ್ಟ ಮಗುವೆಂಬ ಕಾರಣಕ್ಕೆ ಮಗನನ್ನೂತಂಡದೊಂದಿಗೆ ಕರೆದುಕೊಂಡು ಹೋಗಿ ದೆಹಲಿಯ ಪ್ರವಾಸ ಮಾಡಿಸಿದಿರಿ. ಎರಡು ಹಗಲು, ಒಂದು ರಾತ್ರಿಗಳ ಆ ರೈಲು ಪ್ರಯಾಣ ನಮ್ಮಿಬ್ಬರ ಬಾಳಿನ ಮರೆಯಲಾಗದ ಸೊಗದ ಯಾತ್ರೆ.

ನಿಮ್ಮ ಹಾಗೂ ಸಂಗಾತಿ ಯಮುನಾ ಅವರ ಪ್ರೀತಿ, ಮಾಧವಿ ಅಕ್ಕನ ಕವನಗಳ ವಾಚನ, ಧಾರೇಶ್ವರ ಸರ್ ಕಾಳಜಿ, ನಟಿಸುವ ಮಕ್ಕಳ ಕಲರವ ಎಲ್ಲವೂ ಸೇರಿ ಅದೊಂದು ಅಳಿಸಲಾಗದ ಸ್ಮೃತಿಯಾಗಿ ಉಳಿದುಕೊಂಡಿದೆ. ಆರ್. ವಿ. ಯವರ ಯಶವಂತನ ಯಶೋಗೀತವನ್ನು ನಾಟಕವಾಗಿಸಿ, ಅನಿವಾರ್ಯ ಕಾರಣದಿಂದ ಲೇಖಕರ ಮಾತನ್ನು ಸಾಹಿತ್ಯೋತ್ಸವಕ್ಕೆ ಎರಡೇ ದಿನ ಮೊದಲು ಅಳುಕುತ್ತಲೇ ಕಳಿಸಿದಾಗ ನೀವು ಬರೆದಿರಿ, ‘ಸುಧಾ, ಎಷ್ಟು ಚಂದ ಬರೆದಿದ್ದೀರಿ. ಅಣ್ಣ ಇದ್ದಿದ್ದರೆ ಹೆಣ್ಣು ಮಕ್ಕಳು ಬರೆಯುವ ಬಗ್ಗೆ ಅದೆಷ್ಟು ಹೆಮ್ಮೆಪಡುತ್ತಿದ್ದ.’ ಆ ಮಾತುಗಳು ನನಗೆ ನೀಡಿದ ಚೈತನ್ಯಕ್ಕೆ ಎಣೆಯೇ ಇರಲಿಲ್ಲ.

ಅಣ್ಣ ಆರ್. ವಿ. ಯವರ ಪ್ರಸ್ತಾಪವಿಲ್ಲದೇ ನೀವಾಗಲೀ, ಮಾಧವಿಯಾಗಲೀ ಮಾತು ಮುಗಿಸುತ್ತಿರಲಿಲ್ಲ. ಮೊನ್ನೆ ಅಕಾಡೆಮಿಯ ಬಹುಮಾನ ಬಂದಾಗಲೂ ನಿಮಗೆ ತಿಳಿಸಿ, ‘ಏನೂ ಅಲ್ಲದ ನನ್ನನ್ನು ಸಾಹಿತಿ ಎಂಬ ಭ್ರಮೆಯಲ್ಲಿ ಮೊದಲಿಗೆ ಮುಳುಗಿಸಿದವರು ನೀವು ಸರ್’ ಎಂದರೆ ನಿಮ್ಮಉತ್ತರ, ‘ಓ, ಹಾಗಾದರೆ ಈ ಸಲ ನಮ್ಮನೆಯವರಿಗೆ ಪ್ರಶಸ್ತಿ ಬಂತು ಅಂತಾಯ್ತು’ ಎಂಬುದಾಗಿತ್ತು. ನಿಮ್ಮ ಕುಟುಂಬದಲ್ಲಿ ನಾವೆಲ್ಲರೂ ಇದ್ದೆವಲ್ಲ ಸರ್.

ಎಷ್ಟೆಲ್ಲ ಕೆಲಸವನ್ನು ಮಾಡಿಸುತ್ತಿದ್ದಿರಿ. ಮಕ್ಕಳ ಶಿಬಿರದ ನೆಪದಲ್ಲಿ ನಿಮ್ಮ ಮನೆಯಂಗಳದಲ್ಲಿ ದಿನವಿಡೀ ಸಮಯ ಕಳೆಯುವಾಗ ಸಹಯಾನದ ಎಲ್ಲ ದಾಖಲೆಗಳ ಕಟ್ಟನ್ನುಕೊಟ್ಟು ಬ್ರೋಶರ್ ಮಾಡಿಕೊಡು ಎಂದಿರಿ. ಅದೆಷ್ಟೋ ಕವಿತೆಗಳನ್ನು ಮುಂದಿಟ್ಟು, ‘ಓದಿ ಅರ್ಥ ಹೇಳು, ರೆಕಾರ್ಡ ಮಾಡಿಕೊಳ್ಳುವೆ. ನಮ್ಮ ಮಕ್ಕಳಿಗೆ ನನ್ನ ಮುಸುಡಿಯನ್ನೇ ನೋಡಿ, ನೋಡಿ ಬೇಸರ. ನಿನ್ನ ವೀಡಿಯೋ ಹಾಕಿ ತೋರಿಸುವೆ’ಎಂದು ನಗುತ್ತಿದ್ದಿರಿ.

ಸಂವಿಧಾನ ಓದು ಪಠ್ಯ ಸಿದ್ಧವಾದೊಡನೆ, ‘ಇದನ್ನೊಮ್ಮೆ ಓದು ಸುಧಾ, ಪ್ರೌಢಶಾಲೆ ಮತ್ತು ಕಾಲೇಜಿನ ಮಕ್ಕಳಿಗೆ ಅರ್ಥವಾಗಬಹುದಾ ಪರೀಕ್ಷಿಸು. ನೀನು ಹೇಳಿದರೆ ಫೈನಲ್.’ ಅಂತ ನನಗೆ ಹೆಮ್ಮೆಯ ಕೋಡು ಮೂಡಿಸಿದ್ದಿರಿ. ಅದ್ಯಾವುದೋ ಸಮುದಾಯದ ಗೋಷ್ಠಿಯಲ್ಲಿ ನಿಮ್ಮ ನಿರೀಕ್ಷೆಗೆ ವ್ಯತಿರಿಕ್ತವಾಗಿ ಮಾತನಾಡಿ ನಿಮ್ಮನ್ನು ತೀವ್ರ ಇಕ್ಕಟ್ಟಿಗೆ ಸಿಕ್ಕಿಸಿದಾಗಲೂ ಮುನಿಸಿಕೊಳ್ಳದೇ, ವೇದಿಕೆಯಿಂದ ಇಳಿದ ಮೇಲೆ, ‘ನಿನ್ನತ್ರ ಜಗಳ ಆಡೋದದೆ. ಆದರೆಈಗಲ್ಲ’ ಎಂದಿರಿ. ಅದರ ನಂತರವೂ ಅದೆಷ್ಟು ಗೋಷ್ಠಿಗಳಿಗೆ, ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಮತ್ತೆ, ಮತ್ತೆ ಕರೆದಿರಿ. ಏನೇ ಕಾರ್ಯಕ್ರಮ ನಡೆದರೂ ಸಮಗ್ರ ವರದಿಯನ್ನು ನನ್ನಿಂದಲೇ ಬರೆಸುತ್ತಿದ್ದಿರಿ. ಬರೆದು ಮುಗಿಸುವವರೆಗೂ ಪ್ರೀತಿಯಿಂದ ವಿಚಾರಿಸುತ್ತಲೇ ಇರುತ್ತಿದ್ದಿರಿ.

ನನಗೆ ನಿಮ್ಮ ಹೋರಾಟ, ಚಳುವಳಿ, ಪಕ್ಷದ ಚಟುವಟಿಕೆಗಳ ವಿವರಗಳು ತಿಳಿದಿಲ್ಲ. ಅದನ್ನೆಲ್ಲ ಕಂಡವರೆಲ್ಲರ ಮೇಲೆ ಹೇರುವ ಗುಣವೂ ನಿಮ್ಮದಾಗಿರಲಿಲ್ಲ. ನಮಗರಿವಿಲ್ಲದಂತೆ ನಮ್ಮನ್ನು ಅದರ ಭಾಗವಾಗಿಸುವ ನಿಮ್ಮ ಗುಣಕ್ಕೆ ಬದಲಿಯಿರಲಿಲ್ಲ. ನಿಮ್ಮ ಚಿಂತನೆಗಳು ಸುತ್ತಲಿನವರನ್ನು ಒಳಗೊಳ್ಳಲಾರದಂಥದ್ದಾಗಿರಲಿಲ್ಲ.

ಉತ್ತರ ಕನ್ನಡದ ಎಲ್ಲ ಲೇಖಕಿಯರನ್ನು, ಚಿಂತಕಿಯರನ್ನು ಒಮ್ಮೆ ಶಿರಸಿಯಲ್ಲಿ ಒಟ್ಟು ಸೇರಿಸಿ ಇಡೀ ದಿನ ಅವರಿಂದ ಮಾತುಗಳನ್ನಾಡಿಸಿದಿರಿ, ಕವನ ವಾಚನ ಮಾಡಿಸಿದಿರಿ. ಅದರ ಬಗ್ಗೆ ವಿವರವಾದ ವರದಿಯನ್ನು ಬರೆದ ನಾನು ಕೊನೆಯಲ್ಲಿ ಈ ವಾಕ್ಯವನ್ನು ಬರೆದಿದ್ದೆ, ‘ಒಲ್ಲದ ಮನಸ್ಸಿನಿಂದ ರಾತ್ರಿಯ ಬಸ್ಸಿಗೆ ಕೆಲಸ ಮಾಡುವ ಊರಿಗೆ ಮರಳುವಾಗ ಪೇಟೆಯ ಬದಿಯಲ್ಲಿ ಭಂಡಾರಿ ಸರ್ ಕುರ್ಚಿಗಳನ್ನು ಹೊತ್ತು ಸಾಗುತ್ತಿರುವುದನ್ನು ನೋಡಿದೆ. ನಾವೆಲ್ಲ ಮಲಗಿದ ಮೇಲೆ ದೀಪ ಹಚ್ಚಿಕೊಂಡು ಹಿಂದಿನ ಬಾಗಿಲಿನಲ್ಲಿ ಸದ್ದಾಗದಂತೆ ಪಾತ್ರೆ ತೊಳೆಯುವ ಅಮ್ಮ ನೆನಪಾದಳು’ ಎಂದು. ನಿಜಕ್ಕೂ ನಿಮ್ಮೊಳಗೆ ಒಬ್ಬ ಮಮತಾಮಯಿ ಅಮ್ಮ ಸದಾ ಜಾಗೃತವಾಗಿದ್ದಳು!

ಮುಂದಿನ ಪೀಳಿಗೆಯ ಮೇಲೆ ಅದೆಂತಹ ಭರವಸೆ ನಿಮಗೆ! ನಾನೇನಾದರೂ ವಾದ ಮಾಡಿದರೆ, ‘ನಿನಗಿಂತ ನಿನ್ನ ಮಕ್ಕಳಿಗೆ ಅದರ ಬಗ್ಗೆ ಕ್ಲಾರಿಟಿ ಇದೆ. ಅವರನ್ನು ಕೇಳು’ ಎಂದು ನಗುತ್ತಿದ್ದಿರಿ. ನನ್ನನಲ್ಲದೇ ಅವರನ್ನೂ ನಿಮ್ಮೆಲ್ಲ ಚಟುವಟಿಕೆಯ ಭಾಗವಾಗಿಸುತ್ತಿದ್ದಿರಿ. ಎಲ್ಲಿಯಾದರೂ ಸಹಯಾನದ ಕಾರ್ಯಕ್ರಮಕ್ಕೆ ಹೋಗಲಾಗುವುದಿಲ್ಲವೆಂದರೆ ಸಾಕು, ಮಗ ಕೇಳುತ್ತಿದ್ದ ಪ್ರಶ್ನೆ, ‘ಮತ್ತೆ ಅಲ್ಲಿ ಎಲ್ಲರಿಗೂ ನೀರು ಕೊಡುವವರು ಯಾರು?‘ ಅಂತಹ ಬದ್ಧತೆಯನ್ನು ಮಕ್ಕಳೂ ನಿಮ್ಮ ಮನೆಯಂಗಳದಲ್ಲಿ ಕಲಿಯುತ್ತಿದ್ದರು.

ನಿಮ್ಮ ವಿದ್ಯಾರ್ಥಿಗಳನ್ನು ಸಾಹಿತಿಗಳ ಮನೆಗೆ ಕರೆದುಕೊಂಡು ಹೋಗುತ್ತಿದ್ದಿರಿ. ಹಾಗೆ ಮಾರ್ಗ ಮಧ್ಯದಲ್ಲಿ ಸಹಯಾನದಲ್ಲಿ ತಂಗಿದ ವಿದ್ಯಾರ್ಥಿಗಳು ಮರಳಿ ಹೋದಾಗ, ‘ಮನೆಯ ಮಕ್ಕಳೆಲ್ಲ ಮನೆ ಖಾಲಿಮಾಡಿ ಹೋದ ಹಾಗಾಯಿತು ಎಂದು ಅವರು ಮನೆಯಲ್ಲಿ ಹರಡಿಟ್ಟು ಹೋದ ಸಾಮಗ್ರಿಗಳ ಚಿತ್ರದೊಂದಿಗೆ ಮುಖ ಹೊತ್ತಿಗೆಯಲ್ಲಿ ಹಾಕಿದ್ದಿರಿ. ತಾಯಿಯಲ್ಲದೇ ಬೇರೆಯವರಿಗೆ ಹೀಗೆ ಅನಿಸಲು ಸಾಧ್ಯವೆ?

ಎಷ್ಟೆಲ್ಲ ಬಾಕಿ ಉಳಿದಿತ್ತು! ಸಹಯಾನದಲ್ಲಿ ಕಟ್ಟಿಸಿದ ಹೊಸ ಕಟ್ಟಡವನ್ನುಕಾವ್ಯ ಕಮ್ಮಟವನ್ನು ನಡೆಸುವುದರ ಮೂಲಕವೇ ಉದ್ಘಾಟಿಸುವುದಿತ್ತು. ಅದಕ್ಕೆ ದಿನಗಳೂ ನಿಗದಿಯಾಗಿ ಕೊರೊನಾ ಕಾರಣದಿಂದ ನಿಂತು ಹೋಗಿತ್ತು. ಮತ್ತೆ ಅಲ್ಲಿ ಹಳೆಯ ಮನೆಯ ಮಾದರಿಯಲ್ಲಿಯೇ ಹೊಸ ಕಟ್ಟಡವೊಂದು ನಿರ್ಮಾಣವಾಗುವುದಿತ್ತು. ಚಿಂತನರಂಗ ಅಧ್ಯಯನ ಕೇಂದ್ರದ ರೆರ‍್ಟರಿಯಾಗಿ ಅದು ರೂಪುಗೊಳ್ಳುವುದಿತ್ತು.

ಜನಶಕ್ತಿ ಮೀಡಿಯಾಕ್ಕಾಗಿ ನಾನು ಎರಡು ತಿಂಗಳಗೊಮ್ಮೆ ಕವನವನ್ನು ವಿಶ್ಲೇಷಿಸುವುದಿತ್ತು, ಯುವ ಜನರು ಓದುವಂತಹ ಒಂದು ವೈಚಾರಿಕ ಪುಸ್ತಕವನ್ನು ನಾನು ನಿಮ್ಮ ಪ್ರಕಾಶನಕ್ಕೆಂದು ಬರೆದುಕೊಡುವುದಿತ್ತು, ನಿಮ್ಮ ಕಾಲೇಜಿನ ಎನ್. ಎಸ್. ಎಸ್. ಮಕ್ಕಳಿಗೆ ಪವಾಡಗಳ ರಹಸ್ಯ ಬಯಲು ಬಗೆಗೊಂದು ನಾಟಕ ಕಟ್ಟುವುದಿತ್ತು, ಒಂದಿಡೀ ದಿನ ನಾನು ಅವರೊಂದಿಗೆ ಸಂವಾದ ನಡೆಸುವುದಿತ್ತು, ನನ್ನ ಮಕ್ಕಳ ನಾಟಕಗಳನ್ನೆಲ್ಲ ನೀವು ಅಚ್ಚು ಹಾಕಿಸುವುದಿತ್ತು, ಉತ್ತರಕನ್ನಡದ ಗ್ರಾಮೊಕ್ಕಲ ಜನಾಂಗದವರ ಮಹಾಭಾರತವನ್ನು ನಾಟಕವಾಗಿ ಬರೆದು ಆಡುವುದಿತ್ತು, ನಮ್ಮನೆಯಲ್ಲಿ ಗೆಣಸಲೆ ಮಾಡಿ ಮತ್ತೊಮ್ಮೆ ನಿಮ್ಮನ್ನು ಊಟಕ್ಕೆ ಕರೆಯುವುದಿತ್ತು, ನಿಮ್ಮ ಮನೆಯಂಗಳದಲ್ಲಿ ಬೆಳೆದ ಹುಡುಗ ಪ್ರೀತಂ ಮತ್ತೆ ಸಹಯಾನಕ್ಕೆ ಬಂದು ಮಕ್ಕಳಿಗೆ ತಾನೇ ನಾಟಕ ಮಾಡಿಸುವುದಿತ್ತು, ನಿಮ್ಮ ಮೊದಲ ಆಸ್ಪತ್ರೆಯ ವಾಸದ ಅನುಭವವನ್ನು ಹಾಸ್ಯದ ದಾಟಿಯಲ್ಲಿ ನಿಮ್ಮ ಬಾಯಿಂದ ಕೇಳುವುದಿತ್ತು, ಸಹಯಾನದ ಅಂಗಳದ ಕಟ್ಟೆಯಲ್ಲಿ ಕುಳಿತು ಕವಳ ಹಾಕುವುದಿತ್ತುಏನೆಲ್ಲ, ಎಷ್ಟೆಲ್ಲ ಬಾಕಿಯಿರುವಾಗಲೇ ಸಹಯಾನಿಯಾದ ನೀವು ಹೀಗೆ ಹೇಳದೇ ಹೊರಟು ಬಿಡಬಹುದೆ? ಇನ್ನೇನು ಬಂದೇ ಬಿಡುತ್ತೇನೆಂದು ನಿಮ್ಮ ಪುಟ್ಟ ಗೆಳೆಯನಿಗೆ ಮಾತುಕೊಟ್ಟ ನೀವು ಮಾತಿಗೆ ತಪ್ಪಬಹುದೆ?

ನಿಮ್ಮ ಭೇಟಿಯ ಕೊನೆಯ ಚಿತ್ರ ಇನ್ನೂ ಮನಸ್ಸಿನಲ್ಲಿ ದಾಖಲಾಗಿ ಉಳಿದಿದೆ. ಅದೊಂದು ರೂಪಕವಾಗಿತ್ತೆಂದು ಈಗ ಅನಿಸುತ್ತಿದೆ. ನಾವು ಮುಖತಃ ಭೇಟಿಯಾಗದೇ ಎಷ್ಟೊಂದು ದಿನಗಳಾಗಿದ್ದವು. ಒಂದು ವೇದಿಕೆ ಮತ್ತು ಒಂದು ಊಟದ ಋಣ ಇನ್ನೂ ಉಳಿದಿತ್ತು ಅನಿಸುತ್ತದೆ. ಬೈದೂರಿನ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿ, ಊಟ ಮಾಡಿ ಒಂದೇ ವಾಹನದಲ್ಲಿ ಊರಿಗೆ ಹೊರಟೆವು.

ನಡುರಾತ್ರಿಯಲ್ಲಿ ಹೊನ್ನಾವರ ತಲುಪಿದರೂ ನಿಮ್ಮ ಕೆಲಸಗಳಿನ್ನೂ ಬಾಕಿಯಿದ್ದವು. ನಿಮಗೆ ಅದ್ಯಾವುದೋ ಹಳ್ಳಿಯಲ್ಲಿ ನಡೆಯುವ ದೇವಿ ಮಹಾತ್ಮೆಯಕ್ಷಗಾನ ನೋಡುವುದಿತ್ತು. ಪೇಟೆಯ ಸಂಧಿಯಲ್ಲೆಲ್ಲೋ ಇಟ್ಟ ಬೈಕನ್ನು ತರಲು ಅಲ್ಲಿಗೆ ಹೋದೆವು. ನಮಗೆ ಹೆದ್ದಾರಿ ತಲುಪಲು ದಾರಿ ತೋರಿಸಲೆಂದು ನೀವು ಬೈಕಿನಲ್ಲಿ ಮುಂದೆ ಹೊರಟಿರಿ. ಅಂಕುಡೊಂಕಿನ ದಾರಿಯಲ್ಲಿ ನಾವು ನಿಮ್ಮನ್ನೇ ಹಿಂಬಾಲಿಸುತ್ತಾ ಸಾಗಿದೆವು.

ಹಾಗೆ…. ಹಾಗೆ….

ನಮಗೆಲ್ಲದಾರಿಯಾದವರು ನೀವು. ಹೀಗೆ ನಡುದಾರಿಯಲ್ಲಿ ನಿರ್ಗಮಿಸಬಹುದೆ?

ಸಾವೂ ಕೂಡ ದುಃಖಿಸಿರಬಹುದು

ನಿಮ್ಮ ಮಾಸದ ನಗುವ ಕಂಡು

ಹೇಗೆ ವಿದಾಯ ಹೇಳುವುದು?

‍ಲೇಖಕರು Avadhi

May 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. T S SHRAVANA KUMARI

    ಓದಿ ಮುಗಿಸುವಾಗ ಕಣ್ಣಲ್ಲಿ ನೀರು ತುಂಬಿತ್ತು

    ಪ್ರತಿಕ್ರಿಯೆ
  2. Mandya Ramesh

    ಪರಿಶುದ್ಧ ಭಾವುಕತೆಇಂದ ಕೂಡಿದ ,ಆಪ್ತತೆಯ ಅಕ್ಷರ ಭಾಷ್ಪಾಂಜಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: