ಸುಧಾ ಆಡುಕಳ
೧.
ಪ್ರೇಮವೇ,
ಒಂದೇ ಬೇಡಿಕೆಯಿದೆ
ನನ್ನ ನಿರಾಳತೆಯನು ನನಗೆ ಮರಳಿಸಿಬಿಡು
೨.
ಹೂವರಳುವ ಸದ್ದನ್ನೂ ಕೇಳುವ ಮಾಂತ್ರಿಕ ನೀನು
ಎದೆಯೊಳಗಿನ ಬೇಗೆಯ ಹರಿವಿನ ಸದ್ದೂ ಕೇಳಿರಬೇಕು
೩.
ವಿರಹದ ಕೊನೆಗೊಂದು ವಿಷಾದ ಮಡುಗಟ್ಟಿದೆ
ಹೊರಗಿನ ಬೆಂಕಿಯಾರಿದ ಮೇಲೆಯೇ
ಒಳಗು ಬೆಂದು ಬೂದಿಯಾಗುತ್ತದೆ
೪.
ಗೋಡೆಯೇಕೆ ಬೇಕು?
ಒಂದು ತೆಳುಪರದೆ ಸಾಕು
ನದಿಯ ಪುಳಕದ ಮೀನ ಸೆರೆಹಿಡಿಯಲು….
೫.
ಹಕ್ಕಿಗಳು ಒಂದು ಗುಕ್ಕು ನೀರಿಗಾಗಿ ಕಾಯುತ್ತಿವೆ
ಸಮಾನ ದುಃಖಿಗಳು ನಾವು!

೬.
ಸದಾ ನಿನ್ನ ಸಂಗಕ್ಕೆ ಕೈಚಾಚಿದ ಭೂಮಿ ನನ್ನ ಗುರು!
ಸುಡುವ ಸೂರ್ಯ ನೀನಾದರೂ ಬಿಡುಗಡೆಯ ಬಯಸಬೇಡ
೭.
ಎಂಥ ಅರಸಿಕ ನೀನು!
ಏಕಾಂತದ ಗಳಿಗೆಯಲ್ಲೂ ಬಾರದ ಮಳೆಯ ಬಗ್ಗೆ ಮಾತನಾಡುವಿ. ಮಳೆಯಾಗಿ ಭೋರೆಂದು ಸುರಿಯಬಾರದೇನು?
೮.
ಒಂದಾದರೂ ಕೊರೆಯಿರಲೆಂದು
ಬ್ರಹ್ಮ ನಮ್ಮಿಬ್ಬರನು ಬಗೆದು ಎರಡು ದೇಹದೊಳಗೆ ತುಂಬಿಸಿರಬೇಕು
ಒಂದಾದರೆ ಪರಿಪೂರ್ಣತೆಯ ಭಯ ಅವನಿಗೆ!
೯.
ಕವಿತೆಯೆಂದರೆ
ನಮ್ಮೆದುರು ಹರಡಿರುವ ಈ ಭೂಮಿ-ಬಾನು
ಕಥೆಯೆಂದರೆ
ಅದರೊಳಗಿರುವ ನಾನು, ನೀನು
೧೦.
ನಿನ್ನ ಬಿಟ್ಟೂ ಬಿಡದಂತೆ ಎದೆಗವಚಿಕೊಂಡಿರುವೆ
ಕವಿತೆ!
ನೀನೆನ್ನ ಹಾದರದ ಕೂಸು
೧೧
ಕಣ್ಣಂಚಲಿ ನೋವು ಮಡುಗಟ್ಟಿದೆಯೆಂದರೆ
ಒಳಗೊಂದು ಒಲವಿನ ಕೊಳ ತುಂಬಿದೆಯೆಂದು ತಿಳಿ
೧೨.
ಚಂದ್ರ ಮತ್ತೆ ನಗುತ್ತಾನೆ
ನನ್ನ ಸೂರ್ಯನ ಗಾನ ಅವನಿಗೊಂದು ಚೋದ್ಯ ನನಗೋ ಸುಟ್ಟಾದರೂ ನಿನ್ನ ಮುಟ್ಟುವ ಪತಂಗದ ಹಠ!

೧೩.
ಕೊನೆಗಾಣಿಸುವ ಇರಾದೆಯಿಲ್ಲ ಈ ಒಲವ ಕಥೆಯ
ಈ ನಿಮಿಷಗಳ ಸಂಭಾಳಿಸುವುದರಲ್ಲೇ ಜೀವ ಹೈರಾಣಾಗುತ್ತಿದೆ
೧೪.
ಭೂಮಿ ಕಾದು, ಬಾಯಾರಿ ಆಗಸಕೆ ಮುಖಮಾಡಿದೆ
ಆಗಲೇ ನೋಡು ಒಲವು ಹೂವಾಗಿ ಅರಳಿದೆ!
೧೫.
ನದಿಯ ಹರಿವನ್ನು ಶಂಕಿಸಲಾಗದು ಸಾಕಿ
ಕಡಲ ಸೇರದೇ ನದಿಯು ಮುಗಿದ ಕುರುಹಿಲ್ಲ ನೋಡು
೧೬.
ಸತ್ಯ – ಸುಳ್ಳುಗಳ ನಡುವೆ ಜೀಕುವ
ತುಂಟಮಗು ಪ್ರೇಮ!
೧೭.
ಮುಂಜಾನೆಯ ಗಾಳಿಯನು ಉಸಿರಾಡು
ಗಾಳಿಗಂಧವನೊಮ್ಮೆ ಹೀರಿಬಿಡು
ಹೊಸಗಾಳಿ ನಿನ್ನ ಬದುಕಿಸುವುದು
ಹಾದು ಹೋಗುವ ಮುನ್ನ ಉಸಿರಾಗು
೧೮.
ಕುಣಿದುಬಿಡು ಹೃದಯ ಒಡೆದಾಗಲೂ
ಕುಣಿದುಬಿಡು ಗಾಯ ತೊಳೆಯುವಾಗಲೂ
ಕುಣಿದುಬಿಡು ಜಗಳ ಜಂಜಡಗಳ ನಡುವೆಯೂ
ಕುಣಿದುಬಿಡು ನಿನ್ನ ನಿರಾಳ ಗಳಿಗೆಯಲ್ಲೂ…






0 Comments