ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ

ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ ಹುಡುಕಾಟವೆಂದೇ ನನ್ನ ಭಾವನೆ. ಈ ಕಥೆಗಳೂ ಹಾಗೆಯೇ. ಬದುಕಿನಷ್ಟೇ ನಿಗೂಢ ಮತ್ತು ಅವುಗಳ ತಿರುವುಗಳು ಅಷ್ಟೇ ರೋಚಕ. ನೂರಾರು ಕಥೆಗಳಿಗೆ ಬಾಯಾಗುವವರ ಒಳಗೆ ಕೆಲವೊಮ್ಮೆ ಕಥೆಗಳೇ ಇರುವುದಿಲ್ಲ ಮತ್ತು ಬಾಯೇ ಬಿಡದವರ ಎದೆಯೊಳಗೆ ನೂರಾರು ಕಥೆಗಳು ಹುತ್ತಗಟ್ಟಿರುತ್ತವೆ.

ಇವೆಲ್ಲ ವಿಸ್ಮಯಗಳು ನನ್ನನ್ನು ನಿರಂತರವಾಗಿ ಕಥೆಗಳ ಅನ್ವೇಷಣೆಯಲ್ಲಿ ಮುಳುಗುವಂತೆ ಮಾಡುತ್ತವೆ. ಹಾಗೆ ಈ ಸಲ ಕಥೆಯನ್ನರಸಿ ನಾನು ಹೊರಟದ್ದು ನಗರದ ಪ್ರಸಿದ್ಧ ವೈದ್ಯರ ಬಳಿಗೆ. ಅವರ ಬಳಿ ಬರುವ ಪ್ರತಿಯೊಂದೂ ರೋಗಿಗಳದೂ ಮತ್ತು ರೋಗಗಳದ್ದೂ ಒಂದೊಂದು ಕಥೆಯಾಗಬಹುದೇನೋ? ಯಾರಿಗೆ ಗೊತ್ತು? ಅವರ ದೃಷ್ಟಿಯಲ್ಲಿ ಎದುರಿಗಿರುವುದೆಲ್ಲ ಕೇವಲ ದೇಹವಾಗಿದ್ದರೆ ಕಥೆಯೇ ಇಲ್ಲದೇ ಕೇವಲ ವಿವರಣೆಗೆ ಕಿವಿಯಾಗುವ ಪ್ರಾರಬ್ಧವೂ ನನ್ನದಾಗಬಹುದು ಎಂಬ ಆತಂಕದಿಂದಲೇ ನಾನವರ ವಿಶ್ರಾಂತಿ ಕೋಣೆಯನ್ನು ಪ್ರವೇಶಿಸಿದೆ.

ಈಗಾಗಲೇ ಆ ದಿನದ ಎಲ್ಲಾ ಕೆಲಸಗಳನ್ನು ಮುಗಿಸಿ, ಕೈಯಲ್ಲೊಂದು ಚಹಾದ ಕಪ್ ಹಿಡಿದು ಮಂದ ಬೆಳಕಿನ ಆ ಕೊಠಡಿಯಲ್ಲವರು ಯಾವುದೋ ಹಿಂದುಸ್ಥಾನಿ ಹಾಡನ್ನು ಕೇಳುತ್ತಾ ಕುಳಿತಿದ್ದರು. ನಾನೂ ಆ ರಾಗದ ಫಲುಕಿನಲ್ಲಿ ನಿಧಾನವಾಗಿ ತೂರಿಕೊಂಡೆ. ಪ್ರಶ್ನೆಗಳ ಮೂಲಕ ಕಥೆಗಳು ಹುಟ್ಟುವುದಿಲ್ಲವೆಂಬುದು ನಾನು ಅನುಭವದಿಂದ ಕಂಡುಕೊಂಡ ಸತ್ಯ. ಹಾಗೆ ಪ್ರಶ್ನಿಸಿದರೆ ಅದೊಂದು ಸಂದರ್ಶನವಷ್ಟೇ ಆದೀತು. ನಾನು ಅವರ ಬಾಯಿಂದ ಕಥೆಯೊಂದು ಹರಿದು ಬರುವುದನ್ನು ಹೊಸ ಹುಟ್ಟಿನಂತೆಯೇ ನಿರೀಕ್ಷಿಸತೊಡಗಿದೆ. ರಾಗದ ತಾನುಗಳು ಅಲೆ ಅಲೆಯಾಗಿ ಹರಿದುಬರುತ್ತಿದ್ದಂತೆಯೇ ಅವರು ತಮ್ಮ ಮಾತುಗಳ ಮೂಲಕ ತಾವೇ ಕಥೆಯಾಗತೊಡಗಿದರು.

ಕಥೆ… ಹಾಗೆಂದಾಗಲೆಲ್ಲಾ ನನಗೆ ಅದೇ ಘಟನೆಯ ನೆನಪು. ಆ ದಿನ ನಾನು, ನನ್ನ ತಮ್ಮ, ಅಪ್ಪ, ಅಮ್ಮ ಕಾರಿನಲ್ಲಿ ಅಜ್ಜನ ಮನೆಯಿಂದ ಮನೆಗೆ ಬರುತ್ತಿದ್ದೆವು. ಹಿಂದಿನ ಸೀಟಿನಲ್ಲಿ ಕುಳಿತು ನಮ್ಮ ಪುಟ್ಟ ಗೊಂಬೆಗಳನ್ನು ಒಬ್ಬರ ಮೇಲೊಬ್ಬರು ಎಸೆಯುತ್ತ ಆಡುತ್ತಿದ್ದೆವು. ಆಗಲೇ ಆ ಶಬ್ದ ಕೇಳಿದ್ದು. ಅಮ್ಮಾ… ಎಂದು ಕೂಗಿದ್ದೊಂದೇ ನೆನಪು. ಎಚ್ಚರವಾದಾಗ ಆಸ್ಪತ್ರೆಯ ಹಾಸಿಗೆಯಲ್ಲಿದ್ದೆ. ಸುತ್ತಮುತ್ತ ಯಾರೂ ಕಾಣಲಿಲ್ಲ. ಪಕ್ಕದ ಹಾಸಿಗೆಯಲ್ಲಿ ನನ್ನ ತಮ್ಮ ಮಲಗಿದ್ದುದು ಮಾತ್ರ ಕಾಣಿಸಿತು.

ಆ ಕ್ಷಣಕ್ಕೆ ಏನೂ ನೆನಪಾಗಲಿಲ್ಲ. ಅಮ್ಮ ಬೇಕು ಎನಿಸಿತು. ಅವಳನ್ನು ಕರೆಯಲು ಬಾಯಿ ಅಲುಗಾಡಿಸಿದೆ. ಶಬ್ದ ಬಾಯಿಂದ ಹೊರಡಲಿಲ್ಲ. ಹಾಗೇ ಕಣ್ತೆರೆದು ಮಲಗಿದ್ದೆ. ಅಷ್ಟರಲ್ಲಿ ಡಾಕ್ಟರ್ ನರ್ಸಗಳೊಂದಿಗೆ ಅಲ್ಲಿಗೆ ಬಂದರು. ಅವರೊಂದಿಗೆ ನನ್ನ ದೊಡ್ಡಪ್ಪ ದೊಡ್ಡಮ್ಮನೂ ಇದ್ದರು. ಡಾಕ್ಟರ್ ಪ್ರೀತಿಯಿಂದ ನನ್ನ ತಲೆ ನೇವರಿಸಿದರು. ‘ಹಿ ಈಸ್ ಆಲ್‌ರೈಟ್‌ನೌ. ಹೆಚ್ಚು ಮಾತನಾಡಿಸಬೇಡಿ. ನಾಳೆಯ ವೇಳೆಗೆ ಮನೆಗೆ ಹೋಗಬಹುದು.’ ಎಂದರು. ನಾನು ಏನೋ ಹೇಳಲು ತುಟಿಯಾಡಿಸಿದೆ. ಧ್ವನಿ ಹೊರಬರಲಿಲ್ಲ. ಮತ್ತೆ ಮಂಪರು… ನಿಧಾನವಾಗಿ ಕಣ್ಣು ಮುಚ್ಚಿದೆ. ಹಿಂದಿನ ಘಟನೆಗಳೆಲ್ಲಾ ಕನಸಿನಂತೆ ನನ್ನೆದುರು ತೆರೆದುಕೊಳ್ಳತೊಡಗಿದವು.

ಅಂದು ದೀಪಾವಳಿಯ ಮೊದಲ ಸಂಜೆ. ನಾನು, ಅಮ್ಮ, ತಮ್ಮ ಎಲ್ಲರೂ ನಗರದ ಹೊರವಲಯದಲ್ಲಿರುವ ಅಜ್ಜನ ಮನೆಗೆ ಹೊರಟಿದ್ದೆವು. ಯಾವಾಗಲೂ ನಾವು ದೀಪಾವಳಿಯನ್ನು ಅಲ್ಲಿಯೇ ಆಚರಿಸುವುದು. ನನ್ನ ಮತ್ತು ತಮ್ಮನ ಖುಶಿಗಂತೂ ಪಾರವೇ ಇರಲಿಲ್ಲ. ಅಜ್ಜನ ಮನೆಯೆಂದರೆ ನಮ್ಮ ಪಾಲಿಗೆ ಸ್ವರ್ಗದಂತಿತ್ತು. ವಿಶಾಲವಾದ ಅಂಗಳ, ಹಸಿರಿನಿಂದ ಕಂಗೊಳಿಸುವ ತೋಟ, ಮನೆಯಲ್ಲಿರುವ ಎರಡೆರಡು ನಾಯಿಗಳು, ಸದಾ ಅಜ್ಜಿಯ ಹಿಂದೆ ತಿರುಗುವ ಬೆಕ್ಕಿನ ಪರಿವಾರ… ಅಜ್ಜ ಪ್ರತಿವರ್ಷವೂ ನಮಗೆಲ್ಲರಿಗೂ ಹೊಸಬಟ್ಟೆ ತರುತ್ತಿದ್ದರು.

ಅಜ್ಜಿ ಮತ್ತು ಅಮ್ಮ ಅಡಿಗೆಮನೆ ಸೇರಿಕೊಂಡರೆ ಅಪ್ಪ ನನ್ನನ್ನು ತಮ್ಮನನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಮುತ್ತಲ ಹಸಿರು ಪರಿಸರದಲ್ಲಿ ಅಡ್ಡಾಡಿಸುತ್ತಿದ್ದರು. ಬೇರೆ ಬೇರೆ ಹಕ್ಕಿಗಳನ್ನು, ಗಿಡಮರಗಳನ್ನು ತೋರಿಸುತ್ತಿದ್ದರು. ಹಬ್ಬದ ದಿನ ಅಜ್ಜಿ ನಮ್ಮೆಲ್ಲರಿಗೆ ಅಭ್ಯಂಜನ ಸ್ನಾನ ಮಾಡಿಸಿದರು. ಮೊದಲ ಸಲ ನಾನು ಕೋಲಿನ ತುದಿಗೆ ಪಟಾಕಿ ಸಿಕ್ಕಿಸಿಕೊಂಡು ಪಟಾಕಿ ಹಚ್ಚಿದ್ದೆ. ನಾನೂ ಅಪ್ಪನಂತೆ ದೊಡ್ಡವನಾಗಿಬಿಟ್ಟೆ ಎಂಬ ಹೆಮ್ಮೆ.ಬಾಣ, ಬಿರುಸು, ನಕ್ಷತ್ರಕಡ್ಡಿ, ನೆಲಚಕ್ರ ಎಲ್ಲವನ್ನೂ ಹೊಡೆದು ಸಂಭ್ರಮಿಸಿದೆವು. ಮೂರುದಿನ ಮೂರು ನಿಮಿಷಗಳಂತೆ ಉರುಳಿಹೋಯಿತು.

ಸಂಜೆ ನಾವೆಲ್ಲರೂ ಮತ್ತೆ ಮನೆಯ ಕಡೆ ಹೊರಟೆವು. ಅಜ್ಜಿ ಒಂದಿಷ್ಟು ಒಬ್ಬಟ್ಟು, ಉಂಡೆಗಳನ್ನು ನಮಗಾಗಿ ಡಬ್ಬದಲ್ಲಿ ತುಂಬಿಸಿಕೊಟ್ಟಳು. ನಾನು ಮತ್ತು ತಮ್ಮ ಕಾರಿನಲ್ಲಿ ಹಿಂದೆ ಕುಳಿತು ಯಥಾಪ್ರಕಾರ ನಮ್ಮ ಗೊಂಬೆಗಳಿಗೆ ಫೈಟಿಂಗ್ ಮಾಡಿಸುವ ಆಟದಲ್ಲಿ ಮುಳುಗಿದ್ದೆವು. ಅಮ್ಮ, ಅಪ್ಪ ಮುಂದೆ ಕುಳಿತು ಅವರದೇ ಮಾತುಕತೆಯಲ್ಲಿ ಮುಳುಗಿದ್ದರು. ಇದ್ದಕ್ಕಿದ್ದಂತೇ ಕಿರ್… ಎನ್ನುವ ಶಬ್ದದೊಂದಿಗೆ ನಮ್ಮ ಕಾರು ಢಮಾರ್ಎಂದು ಜಜ್ಜಿದಂತಾಯಿತು. ನಾನು ಅಮ್ಮಾಎಂದು ಜೋರಾಗಿ ಕಿರುಚಿದೆ. ಆ ಘಟನೆಯ ನೆನಪಾದೊಡನೇ ನಾನು ನಿಜವಾಗಿಯೂ ಕಿರುಚಿದ್ದೆ.

ನಾನು ಎಷ್ಟು ಜೋರಾಗಿ ಕಿರಿಚಿದ್ದೆನೆಂದರೆ ನರ್ಸ ಡಾಕ್ಟರ್ ಎಲ್ಲರೂ ಒಡೋಡಿ ಬಂದರು. ನಾನು ಹೆದರಿ ನಡುಗುತ್ತಿದ್ದೆ. ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ನಾನು ಕಿರುಚಿದ ಶಬ್ದಕ್ಕೆ ತಮ್ಮನಿಗೂ ಎಚ್ಚರವಾಗಿತ್ತು. ಅವನೂ ಅಮ್ಮ ಬೇಕೆಂದು ಅಳತೊಡಗಿದ. ನರ್ಸ ನಮ್ಮನ್ನು ಸಮಾಧಾನಗೊಳಿಸತೊಡಗಿದಳು. ಮರುದಿನ ನಾವು ದೊಡ್ಡಪ್ಪ, ದೊಡ್ಡಮ್ಮನೊಂದಿಗೆ ಮನೆಗೆ ಹೊರಟೆವು. ಕಾರು ನಮ್ಮ ಮನೆಯತ್ತ ಹೋಗದೇ ಅವರ ಮನೆಯೆದುರು ನಿಂತಾಗ ನಿರಾಶೆಯಾಯಿತು.

‘ನಾವು ಮನೆಗೆ ಹೋಗಬೇಕು, ಅಪ್ಪ ಅಮ್ಮನನ್ನು ನೋಡಬೇಕು’ ಎಂದೆವು. ಅವರು ಒಂದು ವಾರ ಬಿಟ್ಟು ಅಪ್ಪ ಅಮ್ಮನಲ್ಲಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದರು. ನಮಗಾಗಿ ನಿಗದಿಪಡಿಸಿದ ಕೋಣೆಯಲ್ಲಿ ನಾವಿಬ್ಬರೂ ಸೇರಿಕೊಂಡೆವು. ವಾರ ಕಳೆದರೂ ಅಪ್ಪ ಅಮ್ಮನ ಸುಳಿವಿರಲಿಲ್ಲ. ದೊಡ್ಡಪ್ಪ ವಾರ ಮುಗಿಯುವಾಗ ಅಪ್ಪ ಅಮ್ಮ ಜೊತೆಗಿರುವ ದೊಡ್ಡ ಫೋಟೋವೊಂದನ್ನು ನಮ್ಮ ಕೋಣೆಯಲ್ಲಿ ನೇತು ಹಾಕಿದರು. ಅವರು ದೇವರಲ್ಲಿಗೆ ಹೋಗಿರುವುದಾಗಿಯೂ, ಮತ್ತೆ ಬರಲಾರರೆಂದೂ ಹೇಳಿದರು. ನಾನು, ತಮ್ಮ ಆ ದಿನ ಹಾಸಿಗೆಯಲ್ಲಿ ಮಲಗಿ ಮುಸುಕು ಹಾಕಿ ತುಂಬ ಹೊತ್ತು ಅತ್ತೆವು.

ನಮ್ಮ ಶಾಲೆಯ ದಿನಗಳು ಆರಂಭಗೊಂಡವು. ಬೆಳಿಗ್ಗೆ ಕೆಲಸದಾಳು ಬಂದು ನಮ್ಮನ್ನು ಎಬ್ಬಿಸುತ್ತಿದ್ದ. ನಾವು ಸ್ನಾನ ಮುಗಿಸಿ ಬರುವಾಗ ತಿಂಡಿ ರೆಡಿಯಾಗಿರುತ್ತಿತ್ತು. ತಿಂಡಿ ತಿಂದು ಶಾಲೆಗೆ ಹೊರಟರೆ ಸಂಜೆ ಮನೆಗೆ ಬರುತ್ತಿದ್ದೆವು. ಆಗಲೂ ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ. ಕೆಲಸದವನು ಕೊಟ್ಟ ತಿಂಡಿಯನ್ನು ತಿಂದು ಕೊಠಡಿ ಸೇರಿಕೊಳ್ಳುತ್ತಿದ್ದೆವು. ಹೊರಗಡೆಯೆಲ್ಲಾ ಆಡಲು ಹೋಗಲು ನಮಗೆ ಅನುಮತಿಯಿರಲಿಲ್ಲ. ಕೊಠಡಿಯೊಳಗೇ ಕುಳಿತು ಏನಾದರೂ ಆಡುತ್ತಿದ್ದೆವು. ಸ್ವಲ್ಪ ಹೊತ್ತಿಗೆಲ್ಲಾ ಬೇಸರವಾಗಿ ಅಲ್ಲಿಯೇ ಮಲಗುತ್ತಿದ್ದೆವು. ರಾತ್ರಿ ದೊಡ್ಡಮ್ಮ ಬಂದು ಊಟಕ್ಕೆ ಎಬ್ಬಿಸುವಾಗಲೇ ಎಚ್ಚರ. ನಮ್ಮ ಮನೆಗೆಲಸಗಳೆಲ್ಲಾ ಹಾಗೆಯೇ ಉಳಿಯತೊಡಗಿದವು. ಪರೀಕ್ಷೆಯಲ್ಲಿ ಅಂಕಗಳು ಕಡಿಮೆಯಾಗತೊಡಗಿದವು.

ಒಂದು ದಿನ ದೊಡ್ಡಮ್ಮ ಹೇಳುತ್ತಿದುದು ಕೇಳಿಸಿತು, ‘ನನಗೆ ಬೆಳಗಿನಿಂದ ಸಂಜೆಯವರೆಗೆ ವಿದ್ಯಾರ್ಥಿಗಳೊಂದಿಗೆ ಗುದ್ದಾಡಿ ಸಾಕಾಗಿರುತ್ತದೆ. ಮತ್ತೆ ಇವರಿಗೆ ಅಕ್ಷರ ಬರೆಸುತ್ತಾ ಕುಳಿತುಕೊಳ್ಳಲಾಗದು. ನೀವೇ ಏನಾದರೂ ವ್ಯವಸ್ಥೆ ಮಾಡಿ.’ ದೊಡ್ಡಪ್ಪ ನಮ್ಮನ್ನು ಹತ್ತಿರದಲ್ಲಿರುವ ಟ್ಯೂಶನ್ ಸೆಂಟರಿಗೆ ಸೇರಿಸಿದರು. ಅಲ್ಲಿಂದ ಮುಂದೆ ಸಂಜೆಗಳೂ ಕೂಡ ನಮ್ಮದಾಗಿ ಉಳಿಯಲಿಲ್ಲ. ನಮಗೆ ಪದೇ ಪದೇ ಅಮ್ಮನ ನೆನಪಾಗುತ್ತಿತ್ತು. ಆ ದಿನಗಳು ಎಷ್ಟು ಚೆನ್ನಾಗಿದ್ದವು. ಅಮ್ಮ ನಾವು ಶಾಲೆಯಿಂದ ಬರುವುದನ್ನೇ ಕಾಯುತ್ತಿರುತ್ತಿದ್ದಳು. ಬಂದ ಕೂಡಲೇ ನಮ್ಮ ಯುನಿಫಾರಂಗಳನ್ನೆಲ್ಲಾ ತೆಗೆದು ಗರಿಗರಿಯಾದ ಮನೆಯಂಗಿಯನ್ನು ತಾನೇ ತೊಡಿಸುತ್ತಿದ್ದಳು.

ನನ್ನ ತಮ್ಮ ಯುನಿಫಾರಂ ಬದಲಾಯಿಸಲು ಎಷ್ಟು ಸತಾಯಿಸುತ್ತಿದ್ದ ಅಮ್ಮನನ್ನು. ಅಮ್ಮ ಅವನನ್ನು ಒತ್ತಾಯದಿಂದ ಎತ್ತಿ ಮುದ್ದಿಸಿ ಎಲ್ಲವನ್ನೂ ಮಾಡಿಸಬೇಕಿತ್ತು. ಅದಕ್ಕಾಗಿ ಅವಳು ಪಡಿಪಾಟಲು ಪಡುತ್ತಿದ್ದರೆ ನನಗಂತೂ ಅವರಿಬ್ಬರ ಈ ಆಟ ಟಾಮ್ ಮತ್ತು ಜೆರಿಯ ಆಟದಂತೆ ಮಜವಾಗಿರುತ್ತಿತ್ತು. ಮತ್ತೆ ಡೈನಿಂಗ್ ಟೇಬಲ್ ಮೇಲೆ ನಮ್ಮನ್ನು ಕೂರಿಸಿ ತಿಂಡಿ ತಿನ್ನಿಸುತ್ತಿದ್ದಳು. ನಾವು ತಿಂಡಿ ತಿನ್ನುತ್ತಿದ್ದರೆ ಅಮ್ಮ ನಮ್ಮ ಚೀಲಗಳಿಂದ ಮನೆಗೆಲಸದ ಪುಸ್ತಕಗಳನ್ನು ತೆಗೆದು ಬರೆಯಬೇಕಾದ್ದನ್ನೆಲ್ಲ ಗುರುತು ಹಾಕುತ್ತಿದ್ದಳು.

ನಾವೇನಾದರೂ ಬರೆಯಲು ಮನಸ್ಸು ಮಾಡದಿದ್ದರೆ ಅಮ್ಮ ಹೇಗೆ ನಮ್ಮನ್ನು ಪುಸಲಾಯಿಸುತ್ತಿದ್ದಳು. ನೀವು ಬೇಗ ಬೇಗ ಬರೆದರೆ ಅಪ್ಪ ಬಂದೊಡನೇ ನಾಲ್ಕೂ ಜನ ಸೇರಿ ಕೇರಂ ಆಡಬಹುದು ಎಂತಲೋ ಅಥವಾ ಎಲ್ಲರೂ ಸೇರಿ ಪಾರ್ಕಿಗೆ ಹೋಗೋಣ ಅಂತಲೋ ಆಮಿಷಗಳನ್ನು ತೋರಿಸಿ ಮನಗೆಲಸವನ್ನು ಮುಗಿಸುವಂತೆ ಮಾಡುತ್ತಿದ್ದಳು. ಆದರೂ ಬರೆಯಲು ಕಾಡಿಸುವ ತಮ್ಮನ ಕೈ ಹಿಡಿದು ತಾನೇ ಬರೆಸುತ್ತಿದ್ದಳು. ನೆನಪಾದಾಗಲೆಲ್ಲ ತುಂಬ ಒಂಟಿತನ ಕಾಡುತ್ತಿತ್ತು. ಇಲ್ಲಿ ತಿಂಡಿ, ಊಟಕ್ಕೆಲ್ಲ ಏನೂ ತೊಂದರೆಯಿರಲಿಲ್ಲ. ದೊಡ್ಡಪ್ಪ ದೊಡ್ಡಮ್ಮ ಗದರುತ್ತಲೂ ಇರಲಿಲ್ಲ. ಆದರೂ ಏನೋ ಖಿನ್ನತೆ ಬಿಡದೇ ಕಾಡುತ್ತಿತ್ತು. ಹಳ್ಳಿಯಲ್ಲಿರುವ ಅಜ್ಜ ಅಜ್ಜಿ ನೆನಪಾಗುತ್ತಿದ್ದರು. ಆದರೆ ಅಲ್ಲಿಗೆ ಹೋಗೋಣವೆಂದು ದೊಡ್ಡಪ್ಪನಲ್ಲಿ ಹೇಳಲು ಅಳುಕಾಗುತ್ತಿತ್ತು.

ಹೀಗಿರುವಾಗೊಮ್ಮೆ ಅಜ್ಜ ನಮ್ಮ ಮನೆಗೇ ಬಂದರು.ನನಗೂ ತಮ್ಮನಿಗೂ ಏನೋ ಹಿಗ್ಗು.ಖಂಡಿತ ನಮ್ಮನ್ನು ತನ್ನ ಮನೆಗೆ ಕರೆದೊಯ್ಯಬಹುದೆಂಬ ಆಸೆ. ಅಜ್ಜಿ ನಮಗೆಂದು ಉಂಡೆಯ ಡಬ್ಬವನ್ನೇ ಕಳಿಸಿದ್ದರು. ನಾವಿಬ್ಬರೂ ಅಜ್ಜನ ತೊಡೆಯಮೇಲೆ ಕುಳಿತು ಉಂಡೆ ತಿಂದೆವು.ಆದರೆ ಅಷ್ಟರಲ್ಲೇ ನಮ್ಮ ಟ್ಯೂಶನ್ ಸಮಯವಾದ್ದರಿಂದ ನಾವು ಹೊರಡಲೇಬೇಕಾಯಿತು.

ನಾವು ಬರುವವರೆಗೆ ಅಜ್ಜನಿಗೆ ಇರಲು ಹೇಳಿ ನಾವು ಒಲ್ಲದ ಮನಸ್ಸಿನಿಂದ ಹೊರಟೆವು. ಬರುವಾಗ ಅಜ್ಜ ಇರಲಿಲ್ಲ. ದೊಡ್ಡಪ್ಪನಲ್ಲಿ ಕೇಳಿದಾಗ ಅವರು ಹೇಳಿದರು, ‘ಅಜ್ಜನಿಗೆ ನೀವು ಬೇಡವಂತೆ. ನಿಮ್ಮಪ್ಪನ ದುಡ್ಡು ಮಾತ್ರ ಬೇಕೆನ್ನುತ್ತಾರೆ. ಅಲ್ಲಿಗೆ ಹೋದರೆ ಹಳ್ಳಿ ಗಮಾರರಾಗುತ್ತೀರಿ ಅಷ್ಟೆ. ಇನ್ನೊಮ್ಮೆ ಅಲ್ಲಿಗೆ ಹೋಗುವ ಮಾತೆತ್ತಬೇಡಿ’ ಎಂದು ತಾಕೀತು ಮಾಡಿದರು.ಮತ್ತೆ ದಿನಗಳು ಯಂತ್ರದಂತೆ ಉರುಳತೊಡಗಿದವು.

ಅದೊಂದು ದಿನ ದೊಡ್ಡಪ್ಪ ನಮಗೆ ಶಾಲೆಗೆ ರಜೆಮಾಡುವಂತೆ ಹೇಳಿದರು.ಮಾರನೇ ದಿನ ಕೋರ್ಟಗೆ ಹೋಗಲಿದೆಯೆಂದು ತಿಳಿಸಿದರು.ರಾತ್ರಿ ನಮ್ಮ ಕೊಠಡಿಗೆ ಬಂದ ದೊಡ್ಡಪ್ಪ ದೊಡ್ಡಮ್ಮ ನಮಗೆ ನಾಳೆ ಕೋರ್ಟನಲ್ಲಿ ನೀವು ಯಾರ ಜೊತೆಯಲ್ಲಿರುತ್ತೀರೆಂದು ಕೇಳಿದರೆ ತಮ್ಮ ಜೊತೆಯಲ್ಲೇ ಎಂದು ಹೇಳಬೇಕೆಂದು ತಾಕೀತು ಮಾಡಿದರು. ನಾನು ಮೌನವಾಗಿದ್ದೆ. ತಮ್ಮ ಮಾತ್ರ, ‘ನಾನು ಅಜ್ಜನ ಮನೆಗೆ ಹೋಗುತ್ತೇನೆ’ ಎಂದ.ಅದಕ್ಕೆ ದೊಡ್ಡಮ್ಮ, ‘ಹೋಗುವುದಿದ್ದರೆ ಹೋಗು.ಅಲ್ಲಿ ಮಕ್ಕಳನ್ನು ಹಿಡಿಯುವವರ ದಂಡೇ ಬಂದಿದೆ. ನಿನ್ನನ್ನು ಹಿಡಿದುಕೊಂಡು ಹೋಗಲಿ’ ಎಂದು ಹೆದರಿಸಿದರು. ಅಲ್ಲಿಗೆ ಹೋದರೆಅಜ್ಜ ಅಜ್ಜಿ ನಮ್ಮನ್ನು ಮಕ್ಕಳನ್ನು ಹಿಡಿಯುವವರಿಗೆ ಕೊಟ್ಟುಬಿಡುತ್ತಾರೆ ಎಂದು ತಮ್ಮನನ್ನು ನಂಬಿಸಿದರು.

ಆ ರಾತ್ರಿ ನನಗೆ ತುಂಬ ಹೊತ್ತು ನಿದ್ದಯೇ ಬರಲಿಲ್ಲ. ನಾನು ನಿರ್ಧರಿಸಿದ್ದೆ. ಅಮ್ಮ ಯಾವಾಗಲೂ ಹೇಳುವಂತೆ ನಾನು ಡಾಕ್ಟರ್ ಆಗಬೇಕು ಮತ್ತು ಅಪ್ಪ ಅಮ್ಮ ಇರುವ ಮನೆಯಲ್ಲಿ ಇರಬೇಕು. ಆಗ ಅಲ್ಲಿಗೆ ನನ್ನ ಅಜ್ಜ ಅಜ್ಜಿಯರನ್ನು ಕರೆಸಿಕೊಳ್ಳಬೇಕು ಎಂದು. ನನಗೆ ಹಾಗೆ ಯೋಚಿಸುವುದೊಂದನ್ನು ಬಿಟ್ಟು ಬೇರೆ ಬಿಡುಗಡೆಯ ದಾರಿಗಳಿರಲಿಲ್ಲ. ನಮ್ಮನ್ನು ತಮ್ಮ ಕೊಠಡಿಗೆ ಕರೆಸಿ ಮಾತನಾಡಿದ ನ್ಯಾಯಾಧೀಶರಿಗೂ ನಾನು ಇದನ್ನೇ ಹೇಳಿದೆ. ತಮ್ಮ ಮಾತ್ರ ದೊಡ್ಡಮ್ಮ ಹೇಳಿದುದನ್ನೆಲ್ಲ ನಂಬಿಬಿಟ್ಟಿದ್ದ. ನಾನು ಅಜ್ಜ ಅಜ್ಜಿಯರೊಂದಿಗೆ ಹೋಗುವುದಿಲ್ಲ ಎಂದಿರಬೇಕು. ತಿರುಗಿ ಬರುವಾಗ ದೊಡ್ಡಪ್ಪ, ದೊಡ್ಡಮ್ಮ ತುಂಬ ಖುಷಿಯಲ್ಲಿದ್ದರು. ನಮಗಿಬ್ಬರಿಗೂ ಐಸ್‌ಕ್ರೀಮ್ ತಿನ್ನಿಸಿದರು.

ದಿನಗಳು ಹೀಗೆಯೇ ಉರುಳುತ್ತಿದ್ದವು. ನಿರಾಶೆಯ ಕಾರ್ಮೋಡ ಇಡಿಯ ಮನಸ್ಸನ್ನು ಆವರಿಸುತ್ತಿತ್ತು. ಓಡಿಹೋಗಿ ಯಾರನ್ನಾದರೂ ತಬ್ಬಿಕೊಂಡು ಅಳಬೇಕೆಂಬಷ್ಟು ಹಂಬಲ. ಯಾರ ಮಡಿಲಿನಲ್ಲಾದರೂ ಮಲಗಿಬಿಡಬೇಕೆಂಬ ಆಸೆ. ಏನೂ ಮಾಡಲಾಗದ ಅಸಹಾಯಕತೆ. ಎಲ್ಲವೂ ಸರಿಯಿದ್ದರೂ ಏನೂ ಸಿಗದೆಂಬ ಶೂನ್ಯತೆ. ಶಾಲೆಯ ಅಂಕಗಳು ತೀರ ಕಡಿಮೆಯಾಗಿದ್ದವು. ತಮ್ಮನಂತೂ ಇಡಿಯ ತರಗತಿಯಲ್ಲಿ ತುಂಟನಾಗಿ ಬದಲಾಗಿದ್ದ. ಅನೇಕ ಸಲ ದೊಡ್ಡಪ್ಪ ದೊಡ್ಡಮ್ಮ ಶಾಲೆಗೆ ಬರಬೇಕಾಯಿತು. ಅದಕ್ಕಾಗಿ ಮನೆಯಲ್ಲಿ ಒಂದೆರಡು ಏಟುಗಳೂ ಬಿದ್ದವು. ಹೀಗಿರುವಾಗ ನಮ್ಮನ್ನು ಮತ್ತೊಮ್ಮೆ ಕೋರ್ಟಗೆ ಕರೆದೊಯ್ಯುವ ಬಗ್ಗೆ ಮಾತುಕತೆಗಳಾದವು.

ಯಥಾಪ್ರಕಾರ ಶಾಲೆಗೆ ರಜೆಹಾಕಿ ಹೋದದ್ದಾಯಿತು. ಈ ಸಲ ಅಲ್ಲಿಗೆ ಅಜ್ಜ ಅಜಿ ಇಬ್ಬರೂ ಬಂದಿದ್ದರು. ನನಗೆ ಅವರ ಬಳಿಗೆ ಹೊಗುವ ಆಸೆಯಾಯಿತಾದರೂ ನಾನು ಅಸಹಾಯಕನಾಗಿ ಕುಳಿತಿದ್ದೆ. ತಮ್ಮ ಮಾತ್ರ ಅವರ ಮುಖವನ್ನೂ ನೋಡದೇ ಮುನಿಸಿಕೊಂಡು ಕುಳಿತಿದ್ದ. ದೊಡ್ಡಪ್ಪ, ದೊಡ್ಡಮ್ಮನ ಮುಖದಲ್ಲಿ ದುಗುಡ ಮನೆಮಾಡಿತ್ತು.

ಅಜ್ಜ, ಅಜ್ಜಿ ಆಗಾಗ ನಮ್ಮನ್ನು ನೋಡಿ ಕಣ್ಣು ಒರೆಸಿಕೊಳ್ಳುತ್ತಿದ್ದರು. ನ್ಯಾಯಾಧೀಶರು ತೀರ್ಪನ್ನು ಓದುತ್ತಿದ್ದಂತೆ ದೊಡ್ಡಪ್ಪ, ದೊಡ್ಡಮ್ಮನ ಮುಖ ಕಪ್ಪಿಟ್ಟಿತು. ಅವರು ತಮ್ಮಷ್ಟಕ್ಕೆ ಏನೇನೋ ಗೊಣಗಿಕೊಳ್ಳತೊಡಗಿದರು. ಅಜ್ಜ ಮಾತ್ರ ತೀರ್ಪು ಓದಿ ಮುಗಿದ ನಂತರ ಎದ್ದು ನಿಂತು ಕೈಮುಗಿದರು. ಅವರ ಕಣ್ಣಿಂದ ಅಶ್ರುಬಿಂದುಗಳು ಸುರಿಯತೊಡಗಿದವು. ಅಜ್ಜಿಯಂತೂ ತನ್ನ ಸಂತೋಷವನ್ನು ತಡೆಯಲಾರದೇ ಗೋಳೋ ಎಂದು ಅಳತೊಡಗಿದಳು.

ಯಾರೋ ನನ್ನನ್ನು ಅಜ್ಜನ ತೆಕ್ಕೆಗೆ ಒಪ್ಪಿಸಿದರು. ಅಜ್ಜಿ ನನ್ನನ್ನು ಇನ್ನೆಂದೂ ಬಿಡಲಾರೆನೆಂಬಂತೆ ಗಾಢವಾಗಿ ತಬ್ಬಿಕೊಂಡಳು. ನಾನು ಮೌನವಾಗಿ ಅವಳ ಕಣ್ಣೀರನ್ನು ಒರೆಸುತ್ತಿದ್ದೆ. ಅಜ್ಜ ತಮ್ಮನನ್ನು ಎತ್ತಿಕೊಂಡಾಗ ಮೊದಮೊದಲು ಕೊಸರಿಕೊಂಡನಾದರೂ ಮತ್ತೆ ಅವರನ್ನು ಗಟ್ಟಿಯಾಗಿ ತಬ್ಬಿ ಅಳತೊಡಗಿದ. ದೊಡ್ಡಪ್ಪ ದೊಡ್ಡಮ್ಮ ತಮ್ಮ ಕಾರನ್ನು ಹತ್ತಿ ಕಣ್ಮರೆಯಾದರು. ನಾವು ಅಜ್ಜಿಯ ಮನೆಗೆ ಬಂದೆವು.

ಡಾಕ್ಟರ್ ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು ಮುಂದುವರೆಸಿದರು. ನಮಗೆ ಕಳೆದುಹೋದುದು ಪುನಃ ಸಿಕ್ಕಿತ್ತು. ಅಜ್ಜ, ಅಜ್ಜಿ ನಮ್ಮ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸಿದರು. ಅವರಿಗೆ ನಮ್ಮಲ್ಲಿ ತಮ್ಮ ಕಳೆದುಹೋದ ಮಗಳು ಕಾಣಿಸುತ್ತಿದ್ದಳು. ಅಜ್ಜ ನನಗೆ, ತಮ್ಮನಿಗೆ ಮನೆಯಲ್ಲಿ ದಿನಾಲೂ ಪಾಠ ಹೇಳಿಕೊಡುತ್ತಿದ್ದರು. ಅವರ ಬೆಚ್ಚನೆಯ ಪ್ರೀತಿಯಲ್ಲಿ ಬೆಳೆದು ನಾನು ಅಮ್ಮ ಹೇಳಿದಂತೆ ಡಾಕ್ಟರ್ ಆಗಲು ಸಾಧ್ಯವಾಯಿತು.

ಆದರೆ ಇಂದಿಗೂ ನನಗೆ ಅನಿಸುತ್ತದೆ ನಮ್ಮನ್ನು ಮತ್ತೆ ಅಜ್ಜ, ಅಜ್ಜಿಯ ಮಡಿಲಿಗೆ ಒಪ್ಪಿಸಿದ ಆ ನ್ಯಾಯಾಧೀಶರನ್ನೊಮ್ಮೆ ಭೇಟಿಯಾಗಬೇಕೆಂದು. ಅವರಿಗೆ ನಮ್ಮನ್ನು ಹಾಗೆ ಒಪ್ಪಿಸಬೇಕೆಂದು ಅನಿಸಿದ್ದಾದರೂ ಯಾಕೆ? ಎಂಬುದನ್ನು ಕೇಳಿ ತಿಳೀಯಬೇಕೆಂದು. ನೀವೇನಾದರೂ ಈ ಬಗ್ಗೆ ನನಗೆ ಸಹಾಯ ಮಾಡಬಹುದೇ? ಎಂದವರು ಪ್ರಶ್ನಿಸಿದರು. ‘ಖಂಡಿತ ಸರ್’ ಎಂದು ನಾನವರ ಕೈ ಕುಲುಕಿದೆ. ಇಡಿಯ ಕಥೆಯನ್ನು ಹಾಗೇ ನನ್ನೊಳಗೆ ತುಂಬಿಸಿಕೊಂಡು ಅಲ್ಲಿಂದ ಹೊರಟೆ. ಈ ಕಥೆಗಳ ಖಯಾಲಿಯೇ ಹಾಗೆ. ನಿಂತಲ್ಲಿ ನಿಲ್ಲಗೊಡದು. ಮತ್ತೆ ಸ್ವಲ್ಪ ದಿನಗಳಲ್ಲಿಯೇ ನಾನು ಹಿರಿಯ ವ್ಯಕ್ತಿಯೊಬ್ಬರ ಎದುರು ಕಥೆಗಾಗಿ ಕಿವಿತೆರೆದು ಕುಳಿತಿದ್ದೆ. ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಕಥೆಯಾಗುತ್ತ ಸಾಗಿದರು.

ಅದು ಅಂಥ ಪ್ರಮುಖವಾದ ಪ್ರಕರಣವೇನೂ ಆಗಿರಲಿಲ್ಲ. ಕೆಳಗಿನ ಕೋರ್ಟ ನೀಡಿದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟಗೆ ಮನವಿ ಸಲ್ಲಿಸಿದ ಪ್ರಕರಣ ಅದಾಗಿತ್ತು. ಎರಡು ಪುಟ್ಟ ಪುಟ್ಟ ಮಕ್ಕಳ ಸುಪರ್ದಿಯ ಪ್ರಶ್ನೆಯದು. ಅವರವರ ವಕೀಲರು ತಮ್ಮ ತಮ್ಮ ವಾದಗಳನ್ನು ಮಂಡಿಸಿದರು. ಅಂತಹ ದೊಡ್ಡ ವಾಗ್ವಾದಗಳೇನೂ ನಡೆಯಲಿಲ್ಲ. ನಾನು ಎದುರಿನಲ್ಲಿ ಕುಳಿತಿದ್ದ ಆ ವೃದ್ಧ ದಂಪತಿಗಳ ಮುಖವನ್ನೊಮ್ಮೆ ನೋಡಿದೆ. ಅವರ ಕಣ್ಣಿನಲ್ಲಿ ನೋವು ಹೆಪ್ಪುಗಟ್ಟಿತ್ತು. ಹಾಗೆ ಮಕ್ಕಳ ಮುಖವನ್ನೊಮ್ಮೆ  ನೋಡಿದೆ. ಅದರಲ್ಲಿ ನಿರಾಶೆಯ ಗೆರೆಗಳಿದ್ದವು. ಪ್ರಕರಣದ ವಿಚಾರಣೆಯ ಮೇಲೆ ಕಣ್ಣಾಡಿಸಿದೆ. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿಯೇ ಇದ್ದವು. ಆ ಮಕ್ಕಳ ದೊಡ್ಡಪ್ಪ ದೊಡ್ಡಮ್ಮನ ಸುಪರ್ದಿಯಲ್ಲಿ ಮಕ್ಕಳಿದ್ದರು. ಅಜ್ಜ, ಅಜ್ಜಿಯರಿಗೆ ಸಹಜವಾಗಿಯೇ ಮೊಮ್ಮಕ್ಕಳನ್ನು ತಮ್ಮ ವಶಕ್ಕೆ ಪಡೆಯುವ ಬಯಕೆ. ಆದರೆ ಮಕ್ಕಳನ್ನು ಕೆಳಗಿನ ಕೋರ್ಟಿನ ನ್ಯಾಯಾಧೀಶರು ತಮ್ಮ ಕೊಠಡಿಯೊಳಗೇ ಕರೆಸಿ ವೈಯಕ್ತಿಕವಾಗಿ ವಿಚಾರಿಸಿದ್ದರು.

ಇಬ್ಬರೂ ತಾವು ದೊಡ್ಡಪ್ಪ, ದೊಡ್ಡಮ್ಮನೊಂದಿಗೆ ಇರುವುದಾಗಿ ಒಪ್ಪಿಕೊಂಡಿದ್ದರು. ಅದರ ಆಡಿಯೋವನ್ನು ಕೂಡ ಸಾಕ್ಷಿಗಾಗಿ ಸಲ್ಲಿಸಲಾಗಿತ್ತು. ಮೇಲೋಟಕ್ಕೆ ನೋಡಿದರೆ ಅದೇ ತೀರ್ಪನ್ನು ಪುನರುಚ್ಛರಿಸುವುದಷ್ಟೇ ನನ್ನ ಕೆಲಸವಾಗಿತ್ತು. ಆದರೆ ಇಂತಹ ಸನ್ನಿವೇಶದಲ್ಲಿ ತೀರ್ಪನ್ನು ಬುದ್ಧಿಯಿಂದ ಬರೆಯಲಾಗದು, ಹೃದಯದಿಂದ ಬರೆಯಬೇಕು ಎಂಬುದು ನನ್ನ ಅನುಭವ. ನಾನು ಒಂದು ದಿನವನ್ನು ನನ್ನ ಹೃದಯಕ್ಕಾಗಿ ಉಳಿಸಿಕೊಂಡೆ. ತೀರ್ಪನ್ನು ನಾಳೆಗಾಗಿ ಮುಂದೂಡಿದೆ.

ರಾತ್ರಿ ಒಬ್ಬನೇ ಕುಳಿತು ಕೆಳಗಿನ ಕೋರ್ಟನ ನ್ಯಾಯಾಧೀಶರು ನಡೆಸಿದ ವೈಯಕ್ತಿಕ ವಿಚಾರಣೆಯ ವೀಡಿಯೋವನ್ನು ಪರಿಶೀಲಿಸತೊಡಗಿದೆ. ದೊಡ್ಡ ಮಗು ತಾನು ದೊಡ್ಡವನಾದ ಮೇಲೆ ವೈದ್ಯನಾಗುವುದಾಗಿಯೂ, ನಂತರ ತನ್ನ ಅಜ್ಜ, ಅಜ್ಜಿಯರನ್ನು ತನ್ನ ಜೊತೆಯಲ್ಲಿಟ್ಟುಕೊಳ್ಳುವುದಾಗಿಯೂ ಹೇಳಿದ್ದ. ಚಿಕ್ಕವ ಪಾಪ ಇನ್ನೂ ಆರರ  ಹರೆಯದ ಮಗು. ಅಜ್ಜ, ಅಜ್ಜಿ ಬಹಳ ಕೆಟ್ಟವರೆಂದು ದೊಡ್ಡಪ್ಪ ದೊಡ್ಡಮ್ಮ ಹೇಳಿರುವುದರಿಂದ ತಾನು ದೊಡ್ಡಪ್ಪ ದೊಡ್ಡಮ್ಮನವರ ಜೊತೆಗಿರುವುದಾಗಿ ಹೇಳಿದ್ದ. ಆ ವಾಕ್ಯವನ್ನು ನಾನು ಪುನಃ ಪುನಃ ಕೇಳಿಸಿಕೊಂಡೆ. ನನಗೇನೋ ಹೊಳೆದಂತಾಯಿತು. ನನ್ನ ಎಲ್ಲ ಗೊಂದಲಗಳಿಗೂ ಉತ್ತರ ಹೊಳೆಯಿತು. ಮರಣಿಸಿದ ಅವರ ತಂದೆ ತಾಯಿಗಳ ಆಸ್ತಿಯ ವಿವರಗಳನ್ನು ಪರಿಶೀಲಿಸತೊಡಗಿದೆ. ಎಲ್ಲವೂ ಅರಿವಾಗತೊಡಗಿತು.

ನಿಜವಾಗಲೂ ನಾವು ಮಕ್ಕಳ ಒಳಿತಿಗೆ ಅನುಕೂಲವಾಗುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ಕಾಲವದು. ಆದರೆ ಈ ಒಳಿತುಎಂಬ ಪದ ವಿಸ್ತಾರವಾದ ಅರ್ಥವ್ಯಾಪ್ತಿಯನ್ನು ಹೊಂದಿದೆ. ಇದು ಆರ್ಥಿಕ, ಶೈಕ್ಷಣಿಕ, ಭೌತಿಕ, ನೈತಿಕ ಮತ್ತು ಧಾರ್ಮಿಕ ನೆಲೆಗಳನ್ನು ಹೊಂದಿದೆ. ಆದ್ದರಿಂದ ಮಕ್ಕಳು ಆಸ್ತಿಎಂಬುದು ಸತ್ಯವಾದರೂ ಆಸ್ತಿಯ ಹಂಚಿಕೆಯನ್ನು ಮಾಡಿದಂತೆ ಮಕ್ಕಳ ಜವಾಬ್ದಾರಿಯನ್ನು ಹಂಚಲಾಗದು.

ಬೆಳೆಯುವ ಮಕ್ಕಳಿಗೆ ಬೇಕಾಗುವುದು ಪೋಷಕರ ಅಮೂಲ್ಯವಾದ ಸಮಯ. ಅದನ್ನು ಹಂಚಿಕೊಳ್ಳಲು ಅವರಿಗೆ ಸಾಧ್ಯವಾದಾಗ ಮಾತ್ರವೇ ಅವರು ಈ ಆಸ್ತಿಯನ್ನೂ ಹಂಚಿಕೊಳ್ಳಬಲ್ಲರು. ಆದರೆ ಇಲ್ಲಿ ಆ ಮಕ್ಕಳ ದೊಡ್ಡಪ್ಪ ದೊಡ್ಡಮ್ಮ ಇಬ್ಬರೂ ಪೂರ್ಣಕಾಲಿಕ ಹುದ್ದೆಯಲ್ಲಿ ಕೆಲಸ ನಿರ್ವಹಿಸುವವರಾದ್ದರಿಂದ ಅವರಿಬ್ಬರಿಗೂ ಮಕ್ಕಳೊಂದಿಗೆ ಹಂಚಿಕೊಳ್ಳಲು ಸಮಯ ಸ್ವಲ್ಪ ಮಾತ್ರವೇ ಇತ್ತು. ಅದಲ್ಲದೇ ಅವರು ಈಗಾಗಲೇ ಆ ಮಕ್ಕಳ ಪಾಲಕರ ಆಸ್ತಿಯಲ್ಲಿ ಕೆಲಭಾಗವನ್ನು ಮಾಯ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.

ಮಕ್ಕಳ ಅಭಿಪ್ರಾಯವನ್ನು ಇಲ್ಲಿ ಪ್ರಮುಖವಾಗಿ ಪರಿಗಣಿಸಬೇಕಾದ್ದು ಅವಶ್ಯವಾದರೂ ಆರು, ಎಂಟರ ಪ್ರಾಯದ ಮಕ್ಕಳಿಗೆ ಅವರ ಭವಿಷ್ಯದ ಬಗ್ಗೆ ಅರಿವಿರುವುದು ಹೇಗೆ ಸಾಧ್ಯ? ಆರರ ಹರೆಯದ ಆ ಮಗುವಿನ ಹೇಳಿಕೆಯೇ ಇದು ಒತ್ತಾಯಪೂರ್ವಕವಾಗಿ ಹೇಳಿಸಿದ ಹೇಳಿಕೆ ಎಂಬುದನ್ನು ಸಾಬೀತುಪಡಿಸುತ್ತಿತ್ತು. ನಿವೃತ್ತರಾದ ಅಜ್ಜ, ಅಜ್ಜಿಯರ ತೆಕ್ಕೆಯಲ್ಲಿ ಆ ಮಕ್ಕಳ ಭವಿಷ್ಯ ಭದ್ರವಾಗಿರುವುದೆಂಬ ಭಾವನೆ ನನಗೆ ಆ ಕ್ಷಣಕ್ಕೆ ಹೊಳೆಯಿತು. ಆದರೆ ನಾನದಕ್ಕೆ ಕಾನೂನಿನ ನೆಲೆಗಟ್ಟನ್ನು ಕಂಡುಕೊಳ್ಳಬೇಕಿತ್ತು.

ರಾತ್ರಿಯೆಲ್ಲ ಕುಳಿತು ಪುಸ್ತಕದಲ್ಲಿ ಪ್ರಸ್ತಾಪಿಸಿದ ಮಕ್ಕಳ ಒಳಿತುನನ್ನದೇ ಆದ ಭಾಷ್ಯವೊಂದನ್ನು ಬರೆದುಕೊಂಡೆ. ನಾನು ಕೋರ್ಟಿನಲ್ಲಿ ಅದನ್ನು ಓದಿದಾಗ, ಆ ಹಿರಿಯ ಜೀವಗಳ ಕಣ್ಣಿಂದ ಸುರಿಯಿತಲ್ಲ, ಆನಂದಭಾಷ್ಪ! ಅದಕ್ಕೆ ಎಂದಿಗೂ ಬೆಲೆಕಟ್ಟಲಾಗದು. ಅವರು ಕಥೆಯನ್ನು ಮುಗಿಸಿ, ನಿರಾಳವಾಗಿ ತಾನು ಕುಳಿತ ಕುರ್ಚಿಗೆ ಒರಗಿದರು. ನಾನು ಯೋಚಿಸತೊಡಗಿದೆ. ನ್ಯಾಯಕ್ಕೆ ನಿಜವಾಗಿಯೂ ಕಣ್ಣಿಲ್ಲದಿರಬಹುದು. ಆದರೆ ಒಳಗಣ್ಣನ್ನು ತೆರೆಸುವ ಇಂತಹ ಸಣ್ಣ ನಿರೀಕ್ಷಣೆಗಳು ಇಡಿಯ ಬದುಕಿಗೆ ಬೆಳಕಾಗಬಲ್ಲವು.

ನೀವೇ ಹೇಳಿ, ಅಸಲಿಗೆ ಜೀವನ ಅಂದರೆ ಏನು? ಅಪರಿಚಿತರು ಪರಿಚಿತರಾಗುತ್ತಾ ಹೊಸಹೊಸ ನೆಲೆಯಲ್ಲಿ ತೆರೆದುಕೊಳ್ಳುತ್ತ ಸಾಗುವುದೇ ಅದರ ಚಹರೆಯಲ್ಲವೇನು? ಈ ಕಥೆಗಳೂ ಹಾಗೆಯೇ ನೋಡಿ. ಅಪರಿಚಿತವಾದ ಕಥೆಗಳು ಎಲ್ಲೆಲ್ಲಿಯೋ ಒಂದನ್ನೊಂದು ಬೆಸೆದುಕೊಂಡು ಬೇರೆಯಾದ ಪುಸ್ತಕದ ಭಾಗಗಳೇನೋ ಎಂಬಂತೆ ಸೇರಿಕೊಳ್ಳುತ್ತ ಅಚ್ಛರಿಯನ್ನು ಮೂಡಿಸುತ್ತಲೇ ಇರುತ್ತವೆ. ಆದರೆ ಅವುಗಳ ಪರಿಣಾಮ ಎಷ್ಟು ಚೆನ್ನಾಗಿರುತ್ತದೆಯೆಂದರೆ ಈ ನ್ಯಾಯಾಧೀಶರು ಈಗ ಆ ಡಾಕ್ಟರರ ಕೈಯ್ಯಿಂದ ಆರೋಗ್ಯ ಸಲಹೆಗಳನ್ನು ಪಡೆಯುತ್ತಾ, ಆಗಾಗ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಸುಖವಾಗಿರುತ್ತಾರೆ. ನಿಮಗೆಲ್ಲ ಗೊತ್ತಿದೆ, ನಮ್ಮ ಎಲ್ಲ ಜನಪದೀಯ ಕಥೆಗಳೂ ಕೊನೆಯಲ್ಲಿ ಎಲ್ಲರೂ ಸುಖವಾಗಿದ್ದರು ಎಂಬಲ್ಲಿಗೆ ಮುಕ್ತಾಯಗೊಳ್ಳುತ್ತವೆ. ನಾನೂ ಹಾಗೇ ಅಂದುಕೊಳ್ಳುತ್ತೇನೆ, ಎಲ್ಲ ಕಥೆಗಳೂ ಹೀಗೆಯೇ ಮುಗಿಯಬಾರದೆ?ಎಂದು.

‍ಲೇಖಕರು Avadhi

February 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Poorvi

    KATHE HOSATHARAVAGIDE SUDHA ONDE GUKKINALLI ODIMUGISIDE. ODUTTA ODUTTA KAN TUMBI BANTHU.HAGE DAVANAGEREYA APAGHATHAVU SAHA NENAPIGE BANTHU. INDINA DINAGALALLI SUKHANTYADA KATHEGALANNODUVUDU MANASSIGE ONTARA DHAIRYAVANNU TANDUKODUVANTADE.

    ಪ್ರತಿಕ್ರಿಯೆ
  2. Poorvi

    Kathe hosataravagide Sudha. Onde gukkinalli odi mugiside. Odutta odutta kantumbi banthu, hage Davanagereya apagathavoo nenapige banthu. Heege sukhantyada kathegalannu oduvudu manassige ontara dhairya tandukoduttade.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: