ಅಮ್ಮ…

ಸಹನಾ ಹೆಗಡೆ

ವೃತ್ತಿಯಿಂದ ಉಪನ್ಯಾಸಕರೂ ಪ್ರವೃತ್ತಿಯಿಂದ ಲೇಖಕರೂ ಸಾಹಿತ್ಯಾಸಕ್ತರೂ ಆದ ಶ್ರೀಯುತ ಪ್ರವೀಣ ನಾಯಕ ಹಿಚ್ಕಡ ಅವರು ತಮ್ಮ ತಾಯಿ ದಿವಂಗತ ಸಾವಿತ್ರಿ ಗೋವಿಂದರಾಯ ನಾಯಕ ಅವರ ಸ್ಮರಣಾರ್ಥ, ಸಂಪಾದಿಸಿದ ಕೃತಿಯೇ, ‘ಅವ್ವನೆಂಬ ಹೊಂಗೆಯ ನೆರಳು.’

ಈ ಪುಸ್ತಕದಲ್ಲಿ ವಿವಿಧ ವಯೋಮಾನದ, ವೈವಿಧ್ಯಮಯ ಹಿನ್ನೆಲೆಯ ಐವತ್ತೊಂಬತ್ತು ಜನ ತಮ್ಮ ತಮ್ಮ ತಾಯಂದಿರ ಕುರಿತಾಗಿ ತಮ್ಮ ಅನಿಸಿಕೆ, ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಇಂತಹ ಅಪರೂಪದ ಆಲೋಚನೆಯೊಂದರಲ್ಲಿ ಭಾಗಿಯಾಗುವ ಅವಕಾಶವನ್ನು ನನಗೆ ಒದಗಿಸಿದ್ದಕ್ಕೆ ಗೆಳತಿ ನಾಗರೇಖಾ ಗಾಂವ್ಕರ್ ಮತ್ತು ಅವರ ಪತಿ ಪ್ರವೀಣ್ ಹಿಚ್ಕಡ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ಅಮ್ಮ-
ಶ್ರೀಮತಿ ನಳಿನಿ ಹೇರಂಬ ಹೆಗಡೆ ಕಿಲಾರ

ಹುಲಿ, ಚಿರತೆಗಳನ್ನು ಹತ್ತಿರದಿಂದ ಕಾಣಬಹುದಾಗಿದ್ದ ಸಮಯ ಅದು. ಅವುಗಳ ಕೂಗನ್ನು ಸಮೀಪದಲ್ಲಿಯೇ ಕೇಳಬಹುದಾಗಿದ್ದ ಕಾಲ. ಕೊಟ್ಟಿಗೆಯಲ್ಲಿ ನೂರಾರು ದನಕರುಗಳು, ಮನೆತುಂಬ ಜನ, ಬಂದು ಹೋಗುವ ಹತ್ತಾರು ನೆಂಟರಿಷ್ಟರು, ಆಳು ಕಾಳುಗಳ ಓಡಾಟವಿದ್ದ ವೇಳೆ. ಸಾಮಾಜಿಕ ಬದುಕಿನಲ್ಲಿ ಅದಾಗಲೇ ತಮ್ಮ ಪ್ರಗತಿಪರ ವಿಚಾರಗಳಿಂದಾಗಿ ಹೆಸರು ಮಾಡಿದ್ದ, ಸೂರ್ಯನೇ ಪ್ರತ್ಯಕ್ಷ ದೇವರೆಂದು ನಂಬಿದ್ದ, ಉಳಿದ ದೇವಾನುದೇವತೆ, ಚೌಡಿ-ಭೂತಗಳನ್ನೆಲ್ಲ ಸಾರಾಸಗಾಟಾಗಿ ನಿರಾಕರಿಸಿದ್ದ ನನ್ನ ಅಜ್ಜ ಅಂದಿನ ಕಾಲಕ್ಕೆ ಸರಿಯೆನಿಸಿದ್ದ ವಧೂ ಪರೀಕ್ಷೆಗಳನ್ನೆಲ್ಲ ಒಡ್ಡಿ ಸೊಸೆಯಂದಿರನ್ನು ಆರಿಸುವ ಪ್ರಕ್ರಿಯೆಯಲ್ಲಿ ಮಾತ್ರ ಒಂದಿನಿತೂ ರಿಯಾಯಿತಿ ತೋರಿರಲಿಲ್ಲ.

ಹೀಗೆ ಏಳನೆಯ ಸೊಸೆಯಾಗಿ ಮನೆದುಂಬಿ ಬಂದಿದ್ದಳು ಅಮ್ಮ. ಸಾರಿಗೆ ಸೌಲಭ್ಯಗಳು ವಿರಳವಾಗಿದ್ದ, ಖಾಸಗೀ ವಾಹನಗಳು ಇಲ್ಲವೇ ಇಲ್ಲವೆನ್ನಬಹುದಾಗಿದ್ದ, ರಸ್ತೆಗಳೆಂದರೆ ತುಸು ಅಗಲ ಕಾಲುಹಾದಿಯಾಗಿದ್ದ ಅಂದಿನ ಸನ್ನಿವೇಶದಲ್ಲಿ ಭಾವೀ ಬಾವನ ಮನೆಯನ್ನು ನೋಡಲು ಬಂದ ಅಮ್ಮನ ತಮ್ಮ ಮನೆಗೆ ಹಿಂದಿರುಗಿದವನೇ ಅಳುತ್ತ ಮಲಗಿಬಿಟ್ಟಿದ್ದನಂತೆ.

ನಾಲ್ವತ್ತು ಕಿಮೀಗಳೆನ್ನುವುದು ಆಗ ಪದೇಪದೇ ಓಡಾಡಲಾಗದ ದೂರವೇ ಆಗಿತ್ತು. ಕೂಸನ್ನು ದೂರ ಕೊಡುವ ಆತಂಕ ಮನೆಯ ಜನರಲ್ಲಿ. ಹುಟ್ಟಿ ಬೆಳೆದ ಮನೆಗಿಂತ ಸಂಪೂರ್ಣ ವಿಭಿನ್ನವಾದ ವಾತಾವರಣದಲ್ಲಿ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತ ಕಳೆದ ಅಮ್ಮನ ದಾಂಪತ್ಯಕ್ಕೀಗ ಬರೋಬ್ಬರಿ ಐವತ್ತೇಳು ವರುಷ.

ಅಪ್ಪ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿ ಸಂಸಾರವನ್ನು ಸದಾ ಇನ್ನಷ್ಟು ಮತ್ತಷ್ಟು ಹೆಚ್ಚಿನ ಸ್ತರಕ್ಕೆ ಏರಿಸುವ ವಯಸ್ಸು, ಉತ್ಸಾಹದಲ್ಲಿದ್ದಾಗ ಸಹಕಾರ-ಸಾಂಗತ್ಯ ನೀಡಿ ನಿಜಾರ್ಥದಲ್ಲಿ ಸಹಚರಿಯಾದವಳು. ಬಂಧು-ಮಿತ್ರರಿಂದ ಒಂದೇ ಅಲ್ಲ, ಸ್ವತಃ ಅಪ್ಪನಿಂದಲೂ ಮೆಚ್ಚುಗೆ-ಗೌರವಕ್ಕೆ ಪಾತ್ರಳಾದವಳು. ಉನ್ನತ ವಿದ್ಯಾಭ್ಯಾಸ, ಕುಲೀನ ಹಿನ್ನೆಲೆ, ಆರ್ಥಿಕ ಸ್ವಾತಂತ್ರ್ಯಗಳಿದ್ದರೆ ಮಾತ್ರ ಸಾರ್ಥಕ ಬದುಕನ್ನು ಬದುಕಲು ಸಾಧ್ಯವೇ? ಅಂತ ನಾನು ಒಮ್ಮೊಮ್ಮೆ ಆಲೋಚಿಸುವುದಿದೆ.

ದೇವರು, ಧರ್ಮದಲ್ಲಿ ನಂಬಿಕೆ ಇದ್ದೂ ಯಾವುದರಲ್ಲಿಯೂ ಅತಿ ಎನಿಸದ ಪೂಜೆ-ಪುನಸ್ಕಾರ- ಆಚರಣೆ. ಜಾತಿ-ಮತಗಳನ್ನು ಮೀರದೆಯೂ ಮಾನವೀಯತೆ ಮೆರೆವ ಉದಾರತೆ, ಜಾತಕ-ಜ್ಯೋತಿಷ್ಯಗಳನ್ನು ಎಷ್ಟು ಬೇಕೋ ಅಷ್ಟೇ ನಂಬುವ ವಿವೇಚನೆ, ಸಾಂಪ್ರದಾಯಿಕ ಎನ್ನಬಹುದಾದ ಬದುಕನ್ನು ಬದುಕುತ್ತಲೇ ತಳೆದ ಪ್ರಗತಿಪರ ನಿಲುವುಗಳು ಇವೆಲ್ಲ ಬರೀ ಶಿಕ್ಷಣದಿಂದ ಸಾಧ್ಯವೇ? ಎಂದು ಯೋಚಿಸುವುದಿದೆ.

ಸ್ನಾತಕೋತ್ತರ ಪದವಿಗಳನ್ನು ಪಡೆದೂ ಬರಿ ಮನೆ-ಗಂಡ-ಮಕ್ಕಳಿಗೆ ಬದುಕನ್ನು ಸೀಮಿತ ಮಾಡಿಕೊಂಡ ನನಗೆ ಅಮ್ಮ ಕೆಲ ವರ್ಷಗಳ ಹಿಂದೆಯೇ ಕೇಳಿದ್ದರು- ಇಷ್ಟೇ ಆದರೆ ನನಗೂ ನಿನಗೂ ಏನು ವ್ಯತ್ಯಾಸ ಉಳಿಯಿತು? ಸೌಹಾರ್ದಯುತ ಬದುಕಿಗೆ ವೈಯಕ್ತಿಕ, ಕೌಟುಂಬಿಕ ನೆಲೆಯಲ್ಲಿ ಹೊಂದಾಣಿಕೆ-ಸಾಮರಸ್ಯ ಎಷ್ಟು ಅಗತ್ಯ ಎನ್ನುವುದನ್ನು ಮನಗಾಣಿಸುವ, ತಗ್ಗಿ ಬಗ್ಗಿ ನಡೆಯುವ ಬೋಧನೆ ಮಾಡುವ ಅಮ್ಮನೇ ಆತ್ಮ ಸಮ್ಮಾನದ ವಿಷಯದಲ್ಲಿ ಯಾವ ರಾಜಿಯನ್ನೂ ಮಾಡಿಕೊಳ್ಳದೇ ತಲೆ ಎತ್ತಿ ನಿಲ್ಲುವಂತೆ ಬೋಧಿಸುತ್ತಾಳೆ, ನಿರ್ಣಯಗಳಿಗೆ ಕಲ್ಲಿನ ಬಲ ಒದಗಿಸುತ್ತಾಳೆ.

ಜೀವಸಹಜವಾಗಿ ಎಸಗಿರಬಹುದಾದ ತಪ್ಪುಗಳಿಗೆ ಜೀವಮಾನದ ಶಿಕ್ಷೆಯನ್ನು ವಿಧಿಸಿದ ಅಥವಾ ವಿಧಿಸುವ ಅಮ್ಮ ಇವಳಲ್ಲ. ಆಯ್ದುಕೊಂಡ ದಾರಿಗಳನ್ನು, ತೆಗೆದುಕೊಂಡ ತೀರ್ಮಾನಗಳನ್ನು ಬೆಂಬಲಿಸುವ ಹೃದಯ ಅಮ್ಮನದು. ಅಹಂಕಾರಕ್ಕೂ ಆತ್ಮ ಸಮ್ಮಾನಕ್ಕೂ ವ್ಯತ್ಯಾಸ ತಿಳಿದಿದ್ದೇ ಇವಳಿಂದ. ನಡೆಯಬೇಕಾದ ದೂರಕ್ಕೆ ನೇರ ಬೆನ್ನೆಲುಬಾಗಿ, ಬಾಳಹಾದಿಯ ಕವಲುಗಳಲ್ಲಿ ಮಾರ್ಗಸೂಚಿಯಾಗಿ, ಸುರಿವ ಮಳೆಯಲ್ಲಿ ಕೊಡೆಯಾಗಿ ನಿಂತಿದ್ದು ಇದೇ ಅಮ್ಮ.

ಮೌಲ್ಯಯುತ, ಪ್ರಾಮಾಣಿಕ ಬದುಕಿನ ದಾರಿಯಲ್ಲಿ ಸಾಗಲು ಮಾದರಿಯಾಗಿ ಅಪ್ಪ ನಿಂತರೆ ಇವುಗಳ ಜೊತೆಜೊತೆಗೆ ಈ ದಾರಿಯನ್ನು ಕ್ರಮಿಸಲು ಬೇಕಾದ ಸಹನೆಯನ್ನೂ ಧಾರೆಯೆರೆದವರು ಅಮ್ಮ. ತನಗೆ ಇಷ್ಟವಾಗದ, ಅಭಿಪ್ರಾಯಭೇದವಿರುವ ವಿಷಯಗಳಲ್ಲಿ ಅಗಾಧ ಮೌನ ಮೆರೆದು ಸಜ್ಜನಿಕೆ ಉಳಿಸಿಕೊಳ್ಳುವ ಅಪ್ಪನ ರೀತಿಗೆ ವ್ಯತಿರಿಕ್ತವಾಗಿ ತನ್ನ ಸರಳ ಯೋಚನೆಗಳಿಗೆ ಸ್ಪಷ್ಟ ವಾಕ್ಯಗಳ ರೂಪು ಕೊಟ್ಟು ಮೆತ್ತಗೆಯೇ ಮಾತಿನ ಮುತ್ತನುದುರಿಸುವವಳು ಅಮ್ಮ. ಜ್ಞಾನಲೋಕದ ಅಗಾಧ ಬೆರಗಿಗೆ ನನ್ನನ್ನು ಒಡ್ಡಿದ್ದು ಅಪ್ಪನಾದರೆ ತನ್ನ ದಿನಚರಿಯಲ್ಲಿ ಓದುವ ಹವ್ಯಾಸಕ್ಕೆ ಆದ್ಯತೆಯಿತ್ತು ತಾನಿರುವಲ್ಲಿಯೇ ಇದ್ದು ತನ್ನರಿವಿನ ದಿಗಂತವನ್ನು ವಿಸ್ತರಿಸಿಕೊಂಡವರು ಅಮ್ಮ.

ಉತ್ತಮ ಪುಸ್ತಕಗಳನ್ನು, ವರ್ತಮಾನ ಪತ್ರಿಕೆಗಳನ್ನು ನಿತ್ಯವೂ ಓದುವುದರ ಮೂಲಕ ಪ್ರಸಕ್ತ ಸಾಮಾಜಿಕ-ರಾಜಕೀಯ ವಿದ್ಯಮಾನಗಳ ಪರಿಚಯವುಳ್ಳವರು. ಒಳ್ಳೆಯ ಬರವಣಿಗೆ-ವಿಚಾರಗಳನ್ನು ಮೆಚ್ಚಿಕೊಳ್ಳುವ ಅಮ್ಮ ತಣ್ಣೀರನ್ನೂ ತಣಿಸಿ ಕುಡಿಯುವ ಫಿಲಾಸಫಿಯಲ್ಲಿ ನಂಬಿಕೆ ಇಟ್ಟವರು. ಕೃಷಿ-ಹೂದೋಟಗಳಲ್ಲಿ ಅಪಾರ ಆಸಕ್ತಿಯಿರುವ ಅಪ್ಪನ ಸಂಗಾತಿಯಾಗಿ, ದ್ವೇಷ-ಅಸೂಯೆ-ಸಣ್ಣತನ-ಭೇದಭಾವಗಳಂತ ವಿಷಬೀಜಗಳನ್ನು ಮನೆಯ ಯಾವ ಮೂಲೆಯಲ್ಲಿಯೂ ಇರದಂತೆ, ಅವು ಯಾವ ಕುಂಡದಲ್ಲಿಯೂ ಮೊಳಕೆಯೊಡೆಯದಂತೆ ನೋಡಿಕೊಂಡವರು ಅಮ್ಮ. ವಿದ್ಯಾಭ್ಯಾಸದ ಉನ್ನತ ಮಜಲುಗಳು, ಪದಕ-ಪಾರಿತೋಷಕಗಳು ಬಾಳ ಗೋಜಲುಗಳನ್ನು ಬಿಡಿಸಲಾಗದೇ ಒದ್ದಾಡುತ್ತಿರುವಾಗ ತನ್ನ ಬೆಚ್ಚನೆಯ ಮಡಿಲಿಂದ ಒಡಲಾಳದ ನೋವುಗಳಿಗೆ ಸ್ಪಂದಿಸುವವರು ಅಮ್ಮ.

ಅಮ್ಮನ ಸಾಂತ್ವನದ ಮಾತುಗಳಲ್ಲಿ ಮಿಂದು ಮಡಿಯನುಟ್ಟುಕೊಂಡವರು ಎಷ್ಟೋ ಜನ. ಯಾವ ಯುನಿವರ್ಸಿಟಿಯ ಡಿಗ್ರಿ ಪಡೆಯದಿದ್ದರೂ ಪಕ್ಕಾ ಕೌನ್ಸೆಲರ್‌ ಆಗಿಬಿಡುವ ಅಮ್ಮನ ಬೆಚ್ಚನೆಯ ಎದೆಗೂಡಿನಲ್ಲಿ ಯಾರ್ಯಾರದೋ ಯಾವ್ಯಾವುದೋ ಬಿಚ್ಚಿಡಲಾಗದ, ಬಚ್ಚಿಡಲಾಗದ ಗುಟ್ಟುಗಳು ಹಚ್ಚಡ ಹೊದ್ದು ಮಲಗಿವೆ. ‘Charity begins at home’ ಎಂಬ ತತ್ತ್ವವನ್ನು ಅಕ್ಷರಶಃ ಪಾಲಿಸಿದ ಅಮ್ಮ ನನ್ನ ಪ್ರಸ್ತುತ ಬದುಕಿನ ಯಾವುದೇ ಸಮಾಜಮುಖಿ ಚಟುವಟಿಕೆಗಳಿಗೆ ಹುಟ್ಟಿನ ಜೊತೆಜೊತೆಗೇ ಅಡಿಗಲ್ಲನಿಟ್ಟವರು.

ಅವಿಭಕ್ತ ಕುಟುಂಬಗಳೇ ಕಾಣೆಯಾಗಿರುವ, ಹಿರಿಯ ಜೀವಗಳೊಡನೆ ಬದುಕುವ ಉದಾಹರಣೆಗಳೇ ಇಲ್ಲವಾಗುತ್ತಿರುವ ಇಂದಿನ ದಿನಗಳಲ್ಲಿ ಇರುವ ಒಬ್ಬಳೇ ಸೊಸೆಯೊಂದಿಗಿನ ಅಮ್ಮನ ಸಂಬಂಧ ಅನೇಕ ಜನರಿಗೆ ಅಚ್ಚರಿಯ ಸಂಗತಿ. ಮೂಲ ಮನೆಯಲ್ಲಿ ತನ್ನ ಅತ್ತೆ ಕೊನೆಯುಸಿರೆಳೆಯುವವರೆಗೂ ಅತ್ಯಂತ ಶ್ರದ್ಧೆಯಿಂದ ಅವರನ್ನು ನೋಡಿಕೊಂಡ, ಬರಹೋಗುವವರನ್ನು ಆದರಿಸಿದ ಅಮ್ಮನಿಗೆ ಮುಂದಿನ ತಲೆಮಾರಿನ ಜೊತೆಗೆ ಹೊಂದಾಣಿಕೆಯ ಬದುಕು ಕಷ್ಟವಾಗುವ ಸಾಧ್ಯತೆಯೇ ಇರಲಿಲ್ಲ.

ತಿಳುವಳಿಕೆ, ಸಂಸ್ಕಾರದಲ್ಲಿ ಯಾವುದಕ್ಕೂ ಕಡಿಮೆ ಇಲ್ಲದ ಸೊಸೆಯ ಜೊತೆ ಅದು ಇನ್ನಷ್ಟು ಸುಲಭವೂ ಆದೀತು ಎಂದುಕೊಳ್ಳುವುದು ಸಹಜ. ಆದರೆ ವ್ಯಕ್ತಿಯ ಮನಸ್ಸು ಕೆಲಸ ಮಾಡುವ ರೀತಿ, ವಿವೇಚನೆ, ಸನ್ನಿವೇಶ ಪ್ರಜ್ಞೆ, ದೂರಾಲೋಚನೆ, ಸ್ಪಷ್ಟ ಆಲೋಚನೆ, ಧನಾತ್ಮಕ ನಿಲುವು ಒಂದು ವ್ಯಕ್ತಿಗತ ಸಂಬಂಧವನ್ನು. ಒಂದು ಕುಟುಂಬವನ್ನು, ಕುಟುಂಬ-ಕುಟುಂಬಗಳ ನಡುವಿನ ಸಂಬಂಧವನ್ನು ಆ ಮೂಲಕ ಇಡೀ ಸಮಾಜ-ಸಮುದಾಯವನ್ನು ಹೇಗೆ ಪ್ರಭಾವಿಸಬಲ್ಲದು ಎಂಬುದಕ್ಕೆ ಒಂದು ಘಟನೆಯನ್ನು ವಿವರಿಸಿ ನಿರ್ಗಮಿಸುವೆ.

ಮೇ 8, 1992. ಬೆಳಿಗ್ಗೆ ಅಣ್ಣನ ಮದುವೆ. ರಾತ್ರಿ ವಧೂ ಪ್ರವೇಶದ ಸಂಭ್ರಮ-ಸಡಗರ, ಗಡಿಬಿಡಿ. ನೆರೆದ ನೂರಾರು ಜನ ನೆಂಟರಿಷ್ಟರು, ಬಂಧುಮಿತ್ರರು ನೋಡುನೋಡುತ್ತಿದ್ದಂತೆ ಅತ್ತಿಗೆ ಹೊಸ್ತಿಲೊಳಗೆ ಎಡಗಾಲನ್ನಿಟ್ಟುಬಿಟ್ಟರು. ತನ್ನ ತಂದೆ ಕೂಗಿದ ಹೊಡೆತಕ್ಕೆ ಮಿಂಚಿನ ವೇಗದಲ್ಲಿ ಅದನ್ನು ಹಿಂದಕ್ಕೂ ತೆಗೆದುಕೊಂಡೆ ಅನ್ನುತ್ತಾರೆ ಈಗ! ಆಮೇಲೆ ವಿಧ್ಯುಕ್ತವಾಗಿ ಬಲಗಾಲನ್ನಿಟ್ಟೇ ಒಳಬಂದರು ಅತ್ತಿಗೆ. ಆದರೆ ಆ ಒಂದು ಕ್ಷಣ ಏನಾಯಿತೆಂದೇ ತಿಳಿಯಲಿಲ್ಲ. ತವರು ಮನೆಯ ಕುರಿತು ವಿಪರೀತ ವ್ಯಾಮೋಹ ಹೊಂದಿದ್ದ, ಮುಂದೆ ಬರುವ ಸೊಸೆ ಹೇಗೆ ನಡೆಸಿಕೊಂಡು ಹೋಗುತ್ತಾಳೋ ಎಂಬ ಅವ್ಯಕ್ತ ಆತಂಕದಲ್ಲಿದ್ದ ನನಗೆ ಆ ಕ್ಷಣ ಸಿಟ್ಟು, ಅಳು ಏನೆಲ್ಲ ಬಂದಿದ್ದು ಸುಳ್ಳಲ್ಲ.

ಆ ಗಡಿಬಿಡಿಯಲ್ಲಿಯೇ ಅಮ್ಮನನ್ನು ಪಕ್ಕಕ್ಕೆಳೆದು, ‘ನೀವೆಲ್ಲ ನೋಡ್ತಾ ಕೂತಿದ್ದಿರಲ್ಲ, ಕಾಲನ್ನು ಎತ್ತಿ ಇಡುವಾಗ ಹೇಳಬಾರದಿತ್ತಾ?’ ಎಂದು ಗದರಿದ್ದೆ. ಅಮ್ಮ ಹೇಳಿದ್ದು ಒಂದೇ ಮಾತು. ‘ಏನಾಗಿದೆ ನಿನಗೆ? ತಲೆ ಎಲ್ಲಿಟ್ಟಿದ್ದೀಯಾ? ಎರಡೂ ಕಾಲುಗಳೂ ದೇವರೇ ಕೊಟ್ಟಿದ್ದಲ್ಲವಾ? ಬಲ ಮಾತ್ರ ಶ್ರೇಷ್ಠ ಅಂತ ನಿನಗೆ ಯಾರು ಹೇಳಿದರು?’ ಕಾಲೇಜಿನಲ್ಲಿ ಸಕ್ರಿಯ ಎನ್‌ಸಿಸಿ ಕೆಡೆಟ್‌ ಆಗಿದ್ದ ಅತ್ತಿಗೆಗೆ ಎಲ್ಲದಕ್ಕೂ ಎಡಗಾಲನ್ನು ಮುಂದಿಟ್ಟು ಅಭ್ಯಾಸವಾಗಿಬಿಟ್ಟಿತ್ತಂತೆ ಪಾಪ. ಟೆನ್ಷನ್‌ ಬೇರೆ. ‘ಇಷ್ಟು ಒಳ್ಳೆಯ ಸೊಸೆ ಬರುತ್ತಾಳೆ, ಸಂಸಾರವನ್ನು ಚಂದವಾಗಿ ನಡೆಸಿಕೊಂಡು ಹೋಗುತ್ತಾಳೆ ಎಂದಾದರೆ ಎಲ್ಲರ ಮನೆಯಲ್ಲಿಯೂ ಸೊಸೆಯಂದಿರು ಎಡಗಾಲನ್ನಿಟ್ಟೇ ಒಳಬರಲಿ,’ ಎಂದು ನಗುನಗುತ್ತಲೇ ಗಂಭೀರವಾಗಿ ಹೇಳುತ್ತಾರೆ ತಮಾಷೆ ಪ್ರವೃತ್ತಿಯ ನನ್ನಪ್ಪ. ಸುಖೀ ಸಂಸಾರಕ್ಕೆ ಬೇಕಿರುವುದಾದರೂ ಏನು?

‍ಲೇಖಕರು Avadhi

February 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: