ಸುಧಾ ಆಡುಕಳ ಓದಿದ ‘ಬಿಸಿಲಿನ ಷಡ್ಯಂತ್ರದ ವಿರುದ್ಧ’

ಬಿಸಿಲಿನ ಷಡ್ಯಂತ್ರದ ವಿರುದ್ಧ ಅರಳಿದ ಗುಲ್ ಮೊಹರ್ ಹೂವು

ಸುಧಾ ಆಡುಕಳ

ರವೀಂದ್ರನಾಥ ಟ್ಯಾಗೋರರ ಕೆಂಪುಕಣಗಿಲೆ ನಾಟಕದಲ್ಲಿ ಒಂದು ಸಂಭಾಷಣೆಯಿದೆ. ಸಂಪತ್ತಿನ ಆಸೆಗಾಗಿ ತನ್ನ ಸುತ್ತ ತಾನೇ ಕೋಟೆಯನ್ನು ಕಟ್ಟಿಕೊಂಡ ಕ್ರೂರಿಯಾದ ರಾಜನಿಗೆ ಅವನ ಒಂಟಿತನದ ಬಗ್ಗೆ ಅರಿವು ಮೂಡಿಸಲು ನಾಯಕಿ ಪ್ರಯತ್ನಿಸುತ್ತಿರುತ್ತಾಳೆ. ಅದಕ್ಕೆ ರಾಜ ತಾನು ಉರಿವ ಸೂರ್ಯ, ಸೂರ್ಯನಿಗೆ ಸಂಗಾತಿಗಳಿರುವರೆ? ಸುಟ್ಟುರಿಸುವುದೊಂದೇ ಅವನ ಕಾಯಕವೆಂದು ಉತ್ತರಿಸುತ್ತಾನೆ. ಆಗ ನಾಯಕಿ ನಗುತ್ತಾ, “ಸೂರ್ಯನ ತಾಪವನ್ನು ಹೂವುಗಳೂ ಸಹಿಸುತ್ತವೆ, ಬೆಳಗಿನ ಮಂಜು ಮತ್ತು ಸಂಜೆಯ ತಂಗಾಳಿಯ ಸಾಂತ್ವನದಿಂದ” ಎಂದು ಹೇಳಿ ರಾಜನಿಗೆ ಸತ್ಯದರ್ಶನವನ್ನು ಮಾಡಿಸುತ್ತಾಳೆ. ಖ್ಯಾತ ಮರಾಠಿ ಕವಿ ಹಾಗು ಚಲನಚಿತ್ರ ನಿರ್ದೇಶಕರಾದ ನಾಗರಾಜ್ ಮಂಜುಳೆಯವರ ಕವನ ಸಂಕಲನ ‘ಬಿಸಿಲಿನ ಷಡ್ಯಂತ್ರದ ವಿರುದ್ಧ’ ದಲ್ಲಿ ಬರುವ ಈ ಸಾಲುಗಳು ಮತ್ತದೇ ದೃಶ್ಯವನ್ನು ನೆನಪಿಸಿದವು.
‘ಬಿಸಿಲಿನ ಷಡ್ಯಂತ್ರದ ವಿರುದ್ಧ
ರೊಚ್ಚಿಗೆದ್ದ
ಗುಲ್ಮೊಹರ್
ಹೂವಾಗಿ ಯಾಕೆ ಅರಳಬಾರದು?’
ಉರಿವ ಸೂರ್ಯನಿಗೆ ಸೆಡ್ಡು ಹೊಡೆಯುವ ತಾಕತ್ತಿರುವುದು ನಗುವ ಹೂವುಗಳಿಗೆ ಮಾತ್ರ!

ಮರಾಠಿಯಲ್ಲಿ ಸೈರಾಟ್‌ನಂತಹ ಜನಪ್ರಿಯ ಸಿನೆಮಾಗಳನ್ನು ನಿರ್ದೇಶಿಸಿದ ನಾಗರಾಜ್ ಮಂಜುಳೆಯವರ ಒಳಗಿರುವ ಕವಿತ್ವದ ಸೂಕ್ಷ್ಮತೆ ಹೂವಿನಷ್ಟೇ ನವಿರು, ಆದರೆ ಸೂರ್ಯನೊಂದಿಗೂ ಹೋರಾಟಕ್ಕಿಳಿಯುವಷ್ಟು ಗಟ್ಟಿತನದ್ದು. ತಮ್ಮ ಅಪರಿಮಿತ ತಾಜಾತನದಿಂದ ಮತ್ತು ಸರಳತೆಯ ಕಾರಣದಿಂದ ಮತ್ತೆ, ಮತ್ತೆ ಓದಿಸಿಕೊಳ್ಳಬಹುದಾದ, ಓದಿದಷ್ಟೂ ಹೊಸ ಅರ್ಥಗಳನ್ನು ಸ್ಫುರಿಸುವ ಐವತ್ತೈದು ಕವಿತೆಗಳು ಈ ಸಂಕಲನದಲ್ಲಿವೆ. ಉಡುಪಿಯ ‘ಸಂವರ್ಥ ಸಾಹಿಲ್’ ಬಹಳ ಸಮರ್ಥವಾಗಿ ಅವುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. “ಅನುವಾದವೆಂದರೆ ಒಂದು ದಡದಿಂದ ನಾವೆಯನ್ನು ಇನ್ನೊಂದು ದಡಕ್ಕೆ ದಾಟಿಸುವ ಕ್ರಿಯೆ. ಆ ದೃಷ್ಟಿಯಿಂದ ಹೇಳುವುದಾದರೆ ಸಂವರ್ಥ ‘ನಂಬಿಗಸ್ತ ಅಂಬಿಗ’. ಮರಾಠಿ ಮತ್ತು ಕನ್ನಡ ಇವೆರಡೂ ಭಾಷೆಗಳಲ್ಲಿ ಇಲ್ಲಿಯ ಕವನಗಳನ್ನು ಓದಿರುವೆ. ಮರಾಠಿಯಲ್ಲಿರುವ ತೀವ್ರತೆಯನ್ನು ಅನುವಾದಕರು ಕನ್ನಡದಲ್ಲಿಯೂ ಯಥಾವತ್ತಾಗಿ ತಂದಿರುತ್ತಾರೆ.” ಎಂಬುದು ಖ್ಯಾತ ಅನುವಾದಕರಾದ ಕಮಲಾಕರ ಭಟ್ ಕಡವೆ ಅವರ ಅಭಿಪ್ರಾಯವಾಗಿದೆ.

ಈ ಸಂಕಲನದ ಬಿಡುಗಡೆಯ ಕಾರ್ಯಕ್ರಮದಲ್ಲಿ ಕವಿ ಮತ್ತು ಅನುವಾದಕರು ಕವಿತೆ ಹುಟ್ಟುವ ಕೌತುಕದ ಬಗ್ಗೆ ನಡೆಸಿದ ಮಾತುಕತೆಗೆ ಕಿವಿಯಾಗುವ ಅವಕಾಶವೂ ಸಾಹಿತ್ಯಪ್ರೇಮಿಗಳಿಗೆ ಒದಗಿತ್ತು. ಸಂವರ್ಥ ಅವರು ಕೇಳಿದ ಬುದ್ಧಿ-ಭಾವಗಳನ್ನು ನಿಕಷಕ್ಕೊಳಪಡಿಸುವ ಪ್ರಶ್ನೆಗಳಿಗೆ ಮಂಜುಳೆಯವರು ತಮ್ಮ ಎದೆಯಾಳದ ಮಾತುಗಳನ್ನು ಆಪ್ತವಾಗಿ ಹಂಚಿಕೊಂಡರು. ಶಾಲೆಯ ಫಲಿತಾಂಶದಲ್ಲಿ ಅನುತ್ತೀರ್ಣವಾದುದೇ ವಿಸ್ತçತವಾದ ಓದಿಗೆ ಕಾರಣವಾಗಿದ್ದು, ಸೂಕ್ಷ್ಮ ಮನಸ್ಸಿನ ಬಾಲಕನನ್ನು ಪ್ರಭಾವಿಸಿದ ಮರಾಠಿ ಕಾವ್ಯಗಳು, ಅಂತರ್ಮುಖೀ ವ್ಯಕ್ತಿತ್ವಕ್ಕೆ ಎರವಲಾಗಿ ಬಂದ ಬರವಣಿಗೆ, ಎರಡೇ ವಾರದಲ್ಲಿ ಸರಕಾರಿ ನೌಕರಿಗೆ ತಿಲಾಂಜಲಿಯಿಟ್ಟು ಬಂದಿದ್ದು, ಅನಕ್ಷರಸ್ಥ ತಂದೆ ನೀಡಿದ ಆತ್ಮವಿಶ್ವಾಸ ಹೀಗೆ ಕವಿಯೊಬ್ಬ ರೂಪುಗೊಂಡ ಹಾದಿಯ ಹೆಜ್ಜೆಯ ಗುರುತುಗಳು ನಮ್ಮೆದುರು ಅನಾವರಣಗೊಂಡವು. ಮನದ ತಳಮಳವನ್ನು ಮೀರಲು ಪ್ರಾರಂಭಿಸಿದ ಡೈರಿಯ ಬರವಣಿಗೆ ದಿನವೂ ಅದನ್ನೇ ದಾಖಲಿಸಿಕೊಳ್ಳುತ್ತ ಏಕತಾನತೆಯನ್ನು ತಂದಾಗ ಕೇವಲ ವಿಶೇಷ ಘಟನೆಗಳನ್ನು ಮಾತ್ರವೇ ಬರೆಯತೊಡಗಿದ್ದು, ಅದೂ ಸಾಹಿತ್ಯವಾಗದೇ ಕೇವಲ ವರದಿಯಾಯಿತೆನಿಸಿದಾಗ ಆ ಘಟನೆಗಳ ಬಗ್ಗೆ ತನಗೆ ಅನಿಸಿದ್ದನ್ನು ದಾಖಲಿಸಿದ್ದು, ಅಂತಹ ಪುಟವೊಂದನ್ನು ಕಾಲೇಜಿನ ನೋಟೀಸ್ ಬೋರ್ಡನಲ್ಲಿ ಅಂಟಿಸಿದಾಗ ಬಂದ ಪ್ರತಿಕ್ರಿಯೆಗಳು…ಮಾತಿನಲ್ಲಿ ಮತ್ತೆ, ಮತ್ತೆ ಬರುವ ಅಪ್ಪ, ಕಾವ್ಯದಲ್ಲಿ ಅಮ್ಮ ಬಂದಳೆ? ಎಂಬ ಕೌತುಕ! ಹೆಚ್ಚೇನನ್ನು ಮಾಡಲಾಗದಿದ್ದರೂ ಜಗದ ಕೇಡಿಗೆ, ಪ್ರೀತಿ ಹಂಚಬಹುದಲ್ಲವೆ ಜೊತೆಯಲಿರುವ ಎಲ್ಲರಿಗೆ? ಕವಿಯ ಮಾತುಗಳು ಸಹೃದಯರೆಲ್ಲರ ಆಶಯಗಳೂ ಹೌದು. ಮಕ್ಕಳ ಕೈಗೆ ಪುಸ್ತಕವನ್ನಿಟ್ಟು ಏನು ಪ್ರಯೋಜನ? ಎಂಬ ಪಕ್ಕಾ ವ್ಯವಹಾರಸ್ಥ ನಡೆಯ ಶಿಕ್ಷಣ ವ್ಯವಸ್ಥೆಯಾಚೆಗಿನ ಮ್ಯಾಜಿಕ್‌ಗಳನ್ನು ನಮ್ಮೆದುರು ತೆರೆದಿಟ್ಟರು ಮಂಜುಳೆ. ಇನಿದರೊಳ್ ಮಹತನ್ನು ಹೇಳಬೇಕೆನ್ನುವ ಮಂಜುಳೆಯವರ ತುಡಿತಕ್ಕೆ ಒದಗಿದ್ದು ಕಾವ್ಯ.

ಸಾಮಾನ್ಯವಾಗಿ ಅನುವಾದದಲ್ಲಿ ಕವನದ ಭಾವವನ್ನು ದಾಟಿಸುವ ಧಾವಂತದಲ್ಲಿ ಪದಗಳು ತಾ ಮುಂದು ಎಂದು ಬಂದು ಕವನದ ಬಂಧ ಜಾಳುಜಾಳಾಗುತ್ತದೆ. ವ್ರತ ತೊಟ್ಟವರಂತೆ ಸಂವರ್ಥ ಅನುವಾದದಲ್ಲಿ ಇದನ್ನು ದಾಟಿಬಿಡುತ್ತಾರೆ. ಎಷ್ಟೊಂದು ಹೊಸ ಪ್ರತಿಮೆಗಳು ಇಲ್ಲಿ ಬಿಗಿಬಂಧದಲ್ಲಿ ಪೋಣಿಸಲ್ಪಟ್ಟಿವೆ.
‘ರಭಸವಾಗಿ ಬಂದ ಕಾರೊಂದು ನಿಶ್ಶಬ್ದ ಹಾಡಿನ ಮೇಲೆ ಹಾದು ಹೋಗಿದೆ
ನನ್ನ ಅಪೂರ್ಣ ಕವಿತೆಯ ಹಾಳೆ ಬೊಬ್ಬಿಡುತ್ತಾ ಆ ಕಾರಿನ ಹಿಂದೆ ಓಡುತ್ತಿದೆ’
ಮೇಲಿನ ಸಾಲುಗಳನ್ನೂ ಓದಿದಷ್ಟೂ ಮತ್ತೆ, ಮತ್ತೆ ಹೊಸ ಅರ್ಥಗಳು ದಕ್ಕುತ್ತವೆ.

ತೀರ ಗಹನವಾದ ವಿಚಾರವೊಂದನ್ನು ಕೆಲವೇ ಸಾಲುಗಳಲ್ಲಿ ಹೇಳುವ ಒಂದು ಕವಿತೆ ‘ಅ ಮತ್ತು ಆ’

ಕಾಣೆಯಾದವರ ಮನೆಯಲ್ಲಿ
ಜಾಹೀರಾತಿಗೆ ನೀಡಲು
ಇರುವುದೇ ಇಲ್ಲ
ಒಂದೇ ಒಂದು ಒಳ್ಳೆಯ ಭಾವಚಿತ್ರ


ಜಾಹೀರಾತಿಗೆ ನೀಡಲು
ಯಾರ ಒಂದೊಳ್ಳೆ
ಭಾವಚಿತ್ರವೂ ಇರುವುದಿಲ್ಲವೋ
ಅಂಥವರೇ ಮತ್ತೆ ಮತ್ತೆ
ಕಾಣೆಯಾಗುತ್ತಾರೆ
ಇಂತಹ ಅನೇಕ ಸಾಲುಗಳು ಪ್ರತಿ ಪುಟದಲ್ಲಿಯೂ ಎದುರಾಗುತ್ತ ಓದಿನ ಹಿಗ್ಗನ್ನು ವಿಸ್ತರಿಸುತ್ತಲೇ, ವ್ಯವಸ್ಥೆಯ ಕ್ರೌರ್ಯವನ್ನು, ವಾಸ್ತವದ ವಿಡಂಬನೆಯನ್ನು ನಮ್ಮೆದುರು ತೆರೆದಿಡುತ್ತವೆ.
‘ಬರದ ಭೂಮಿಯಲ್ಲಿ
ತಲೆಯೆತ್ತಿ ನಿಂತ ಮರ-
ದ ರೆಂಬೆಗೆ ಕಟ್ಟಿದ ಜೋಳಿಗೆಯಲ್ಲಿ
ಹಸಿಹಸಿದು ದಣಿದಣಿದು
ಮಗು ನಿದ್ದೆ ಹೋಗುವುದು
ನನ್ನ ಕವಿತೆ’

‘ಜನಗಣತಿಗಾಗಿ
“ಸ್ತ್ರೀ- ಪುರುಷ”
ಎಂಬ ಎರಡು ವಿಭಾಗ
ಮಾಡಿಕೊಂಡ ಕಾಗದ ಹಿಡಿದು
ಊರೆಲ್ಲಾ ಸುತ್ತುತ್ತಿದ್ದಾಗ
ಹಳ್ಳಿಯ ಅಜ್ಞಾತ ತುತ್ತ ತುದಿಯಲ್ಲಿ
ಎದುರಾದದದ್ದು
ನಾಲ್ಕು ಹಿಜಡಾಗಳ
ಒಂದು ಮನೆಯನ್ನು’

‘ಒಂದೇ ಸ್ವಭಾವದ
ಗೆಳೆಯರು ನಾವು
ಒಂದೇ ಧ್ಯೇಯ ಒಂದೇ ಕನಸಿನ
ಜೀವದ ಗೆಳೆಯರು
ಕೊನೆಗೆ
ಆತ ಆತ್ಮಹತ್ಯೆ ಮಾಡಿಕೊಂಡ
ನಾನು ಕವಿತೆ ಬರೆಯಲಾರಂಭಿಸಿದೆ’
ಕವಿಯ ವರ್ತಮಾನದ ತಲ್ಲಣಗಳನ್ನು ಇದಕ್ಕಿಂತ ಮಾರ್ಮಿಕವಾಗಿ ಹೇಗೆ ಹೇಳುವುದು? ‘ಮರವನ್ನು ಎಂತಹ ಹತಾಶ ಸ್ಥಿತಿಯಲ್ಲಿಯೂ ನೆಲಕ್ಕುರುಳದಂತೆ ತಡೆಯುವುದು ಈಗಷ್ಟೇ ಚಿಗುರಿದ ಒಂದು ಮೃದು ಎಲೆ’ ಬದುಕ ಭಾರವನು ಬದಿಗಿಡದ ತಾಯ್ತನವನ್ನು ವಿವರಿಸುವ ಸಾಲುಗಳಿವು. ನಾಸ್ತಿಕನೊಬ್ಬನ ಪ್ರೇಮದ ಆಸ್ತಿಕತೆಯನ್ನು ಬಯಲುಗೊಳಿಸುವ ಸಾಲುಗಳು ಹೀಗಿವೆ,
‘ಈಗಲೂ ನೀನು
ಪ್ರಾರ್ಥಿಸುತ್ತೀಯಾ ಎಂದಾದರೆ
ಹಠ ಹಿಡಿದು ಮತ್ತೊಂದು ಜನ್ಮವ ಬೇಡು
ನಾನು ಹೀಗೆಯೇ ಸಾಯುವೆ’
ಇಡಿಯ ಸಂಕಲನದಲ್ಲಿ ಬಹಳ ಕಾಡಿದ ಕವಿತೆಯೆಂದರೆ ‘ನಾನು ಪುಸ್ತಕವನ್ನೇ ಝಳಪಿಸುತ್ತೇನೆ’
‘ಈ ನಿರ್ದಯಿ ಲೋಕದಲ್ಲಿ
ನಾನು ಒಬ್ಬಂಟಿ
ಅನಾಥ ಜನರು ರಕ್ಷಣೆಗೆ
ಕೈಯಲ್ಲಿ ಏನಾದರೂ
ಇಟ್ಟುಕೊಳ್ಳಬೇಕು
ಹಾಗಾಗಿ ನಾನು
ಪುಸ್ತಕಗಳನ್ನು
ಜೊತೆಗಿಟ್ಟುಕೊಳ್ಳುತ್ತೇನೆ
…………
……………..
ಹೊತ್ತಲ್ಲದ ಹೊತ್ತಲ್ಲಿ
ನಾನೊಬ್ಬನೇ ಇರುವುದನ್ನು ಕಂಡು
ಶೂನ್ಯತೆ ನನ್ನತ್ತ ಧಾವಿಸಿ ಬಂದರೆ
ಪುಸ್ತಕವನ್ನು ಝಳಪಿಸುತ್ತೇನೆ
ಆಯುಧವಾಗಿಸುತ್ತೇನೆ’
ಇಲ್ಲಿ ‘ಝಳಪಿಸುತ್ತೇನೆ’ ಎಂಬ ಪದವಿಲ್ಲದಿದ್ದರೆ ಕವನ ಎಷ್ಟೊಂದು ಸೊರಗುತ್ತಿತ್ತು. ಅನುವಾದದ ಸುಖವೊಂದು ದಕ್ಕುವುದೇ ಹೀಗೆ.
ಹೌದು, ಸಾಲಾಗಿ ಮುನ್ನುಗ್ಗಿ ಬರುತ್ತಿರುವ ಕೇಡುಗಳಿಗೆ ಪುಸ್ತಕಗಳನ್ನೇ ಆಯುಧಗಳನ್ನಾಗಿ ಮಾಡಿ ಝಳಪಿಸಬೇಕಷ್ಟೆ. ಒಂದೊಳ್ಳೆಯ ಕವನ ಸಂಕಲನವನ್ನು ಕನ್ನಡಕ್ಕೆ ತಂದ ಸಂವರ್ಥರನ್ನು ಅಭಿನಂದಿಸಬೇಕು. ಹಾಗೆಯೇ ಮೊದಲ ಬಾರಿಗೆ ಕನ್ನಡದ ಪುಸ್ತಕವನ್ನು ಪ್ರಕಟಿಸಿ, ಅದೂ ಕವನ ಸಂಕಲನದ ಪ್ರಕಟಣೆಯೊಂದಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಗೋವಾದ ‘ಸಹಿತ ಪ್ರಕಾಶನ’ದ ಕಾರ್ಯವೂ ಸ್ತುತ್ಯಾರ್ಹ. ನೋಡಿದರೆ ಕೈಗೆತ್ತಿಕೊಳ್ಳಬೇಕೆಂಬಷ್ಟು ಮುದ್ದಾಗಿರುವ ಈ ಪುಸ್ತಕವನ್ನು ಕನ್ನಡದ ಕಾವ್ಯಪ್ರೇಮಿಗಳು ಕೈಗೆತ್ತಿಕೊಂಡರೆ ಸಂವರ್ಥ ಇನ್ನಷ್ಟು ಉತ್ಸಾಹದಿಂದ ಮತ್ತೊಂದಿಷ್ಟು ಅನ್ಯಭಾಷೆಯ ಕವನಗಳನ್ನು ಕನ್ನಡಕ್ಕೆ ತಂದಾರು.

‍ಲೇಖಕರು Admin

April 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: