
ಮೂಲ : ಎಮಿಲಿ ಡಿಕನ್ಸನ್
ಕನ್ನಡಕ್ಕೆ : ಸುಧಾ ಆಡುಕಳ
“ನೀವೂ ಎಮಿಲಿ ಡಿಕನ್ಸನ್ಳ ಜತೆ ಗಾಡಿಯನ್ನೇರಿ
ಆದರೆ ತಿಳಿದಿರಲಿ, ನೀವು ಹಿಂದಿರುಗಲಾರಿರಿ”
ಸಾವಿಗಾಗಿ ಕಾಯುತ್ತಿರಲಿಲ್ಲ
ಕರುಣೆಯಿಂದಲೇ ಸಾವಿನ ಬಂಡಿ ನನ್ನೆದುರು ಬಂದು ನಿಂತಿತು
ಯಾಕೆAದರೆ ನಾನು ಸಾವಿಗಾಗಿ ಎಂದೂ ಕಾಯುತ್ತಿರಲಿಲ್ಲ
ಇಬ್ಬರೂ ಗಾಡಿಯೇರಿ ನಡೆದೆವು, ನಾನು ಮತ್ತು ಸಾವು!
ಸಾವಿಗೇನೂ ಆತುರವಿರಲಿಲ್ಲ, ನಿಧಾನವಾಗಿಯೇ ಸಾಗಿದೆವು
ನಾನು ನನ್ನ ಕೆಲಸಗಳು ಮತ್ತು ಬಿಡುವನ್ನೂ ದೂರವಿಟ್ಟೆ
ಸಾವಿನ ಒಳ್ಳೆಯತನಕ್ಕೆ ಕರಗಿಹೋಗಿ ಗೆಳೆತನ ಮಾಡಿಬಿಟ್ಟೆ
ನಮ್ಮ ಬಂಡಿ ಶಾಲೆಯ ಸಮೀಪದಲ್ಲಿ ಹಾದು ಹೋಗುವಾಗ
ಮೊಳಗಿತು ಬಿಡುವಿನ ಗಂಟೆ, ಮಕ್ಕಳ ಕಲರವದ ಓಡಾಟ

ಹುಲ್ಲುಗಾವಲನು ದಾಟುವಾಗ ಮೇಯುವ ರಾಸುಗಳ ಸಾಲುಸಾಲು
ನಾವು ದಾಟಿ ಹೋದೆವು ಮುಳುಗುವ ಸೂರ್ಯನನ್ನೂ
ಅಥವಾ ಅವನೇ ದಾಟಿಹೋದ ನಮ್ಮನ್ನು
ಮಂಜುಹನಿಗಳು ಸುರಿದು ಕಂಪಿಸಿದವು ಹುಲ್ಲಿನ ಎಸಳುಗಳು
ಚಳಿಗಾಳಿ ಆವರಿಸಿತು ನನ್ನ ನಿಲುವಂಗಿ, ಶಾಲು, ಹೊದಿಕೆಯನ್ನು
ನೆಲವೇ ಮೇಲೆದ್ದು ಮನೆಯಾದಂತೆ ಕಾಣುವ ಮನೆಯೊಂದರ
ಮುAದೆ ನಿಂತಿತು ನಮ್ಮ ಸಾವಿನ ಬಂಡಿ
ಮಾಡಿನವರೆಗೂ ಹೂತುಹೋದ ಮನೆಯೆದುರು ಬರೆದಿತ್ತು
‘ಇವು ಶತಮಾನಗಳು’
ಶತಮಾನವೀಗ ದಿನಕ್ಕಿಂತಲೂ ಕಡಿಮೆ ಅನಿಸಿತು
ಬಂಡಿಗೆ ಕಟ್ಟಿದ ಕುದುರೆಗಳ ತಲೆಯೀಗ
ಅನಂತತೆಯೆಡೆಗೆ ಚಾಚಿರುವುದು ಮನವರಿಕೆಯಾಯಿತು






0 Comments