ಸುತ್ತಲಿನ ಸ್ವಪ್ನಬೇಲಿಗಳಲ್ಲೀಗ ಬೆಂಕಿ..

ಗೀತಾ ಎನ್ ಸ್ವಾಮಿ

**

ನನ್ನ ಮನೆಯ ಮುಂದಿನ

ದೊಡ್ಡ ಬೇವಿನ ಮರದ ಬುಡದಲ್ಲಿ ನಿಂತರೆ

ಅಕ್ಷಿಯಲ್ಲೇ ನಿಚ್ಚವೂ ಅಲೆಯುವ

ಮುಂಗಾರು ಗುಡ್ಡ ಕರಗಿ ಇಳಿದು

ನನ್ನೊಡನಾಡಿದಂತೆ ಕನಸಾಯ್ತು

ಒಂದಿರುಳು

ನಡೆದೂ ನಡೆದೂ ನಾನು ಸವೆಯುವಾಗ

ಗುಡ್ಡದ ಒಡಲು ಕರಗಿ “ಹೊತ್ತು”

ಪ್ರಶ್ನೆಯಾಯ್ತು

ವಲಸೆಯ ಜೀವಚೆಲುವಿಗೆ ಪಶ್ಚಿಮಕ್ಕೆ

ತಲೆಹಾಕಿ

ಮಲಗಿದರೆ ಅಡವಿಯಲ್ಲಿ ಉರಗ

ಕಚ್ಚಲಾರದೆಂಬ ಮಾತು ಸುಳ್ಳೆನಿಸಿದಾಗ

ಪಂಕಜ ಹಾವು ಕಚ್ಚಿ ಸತ್ತ ಸುದ್ದಿ

ಊರಿನಲ್ಲಿ ಯಾರಿಗೋ ವಿಶಮಶೀತದ

ಸಖ್ಯದಲ್ಲಿ ಕೆಮ್ಮು ಅಡರಿದಾಗ ನಾನು

ವಿಷವಾಗಿ ಕಂಡರೆ

ಅವರ ಎದೆಯ ಪಾಯಸದಲ್ಲಿ ಕೈಮಸ್ಕು

ಆಯಿತವಾರ ಸಣ್ಣ ಜಗಲಿಯಲ್ಲಿ ನೀರು

ಮುಟ್ಟುವ

ಮೊದಲು ದೊಡ್ಡಪ್ಪ ಕೊಟ್ಟ ಮದ್ದು

ಗುಣಗೊಂಡು ಮನೆಯ ಜೀವಗಳೆಲ್ಲ ನಸುಕಿಗೆ ಬಂದು

ಕಾಲ್ಮುಗಿದ

ಮನೆಯಲ್ಲಿ ಹುಟ್ಟಿ ಬೆಳೆದ ನನಗೆ

ಪರಿಣಾಮಗಳು

ತಿವಿದ ರಭಸಕ್ಕೆ ಉಸಿರು ಕಟ್ಟಿತು

ಪೌರ್ಣಮಿಯ ದಿನ ಕಣ ಇಕ್ಕಿದ ದೊಡ್ಡಪ್ಪ

ಅಪ್ಪನಿಗೆ

ಮರದಲ್ಲಿ ತುಂಬಿ ತುಂಬಿ ಊರಮಂದಿಯ

ಮಡಿಲು ತುಂಬಿಸುವಾಗ ಅಮ್ಮಂದಿರಿಬ್ಬರ

ಕೈಗಳಲ್ಲಿ ಹಣ್ಣು ಹೂಗಳಿದ್ದವು; ಕಾಣದಂತೆ

ಇನ್ನೊಂದು ಮರ ದವಸ ಸುರಿದ

ಮಾತೆಯರ ಮಡಿಲು ಮಕ್ಕಳಿಗೆ

ಮಮತೆಯೊಂದನ್ನೇ ತುಂಬಿ ಬೆಳೆಸಿದ್ದು

ನೆನೆದು ಕಣ್ಣೀರು

ಊರ ಸುತ್ತಲಿನ ಸ್ವಪ್ನಬೇಲಿಗಳಲ್ಲೀಗ ಬೆಂಕಿ

ಕಣಗಿಲ ಗಿಡದಲ್ಲಿ ಮಗ್ಗು ಬಿದ್ದು ಹೋದದ್ದು

ಜ್ವರದ ನಾಲಿಗೆಯಲ್ಲಿ ಅಸಹನೆ ಹುಟ್ಟಿದ್ದಕ್ಕೆ

ಗುಡಿಯ ಮುಂದೆ ಪೂಜಿಸುವವ ಅಚ್ಚ ಬಿಳಿ

ತೊಟ್ಟು

ಕತ್ತಲಿನ ಕಡೆಗೇ ನಡೆಯುತ್ತಾನೆ

ಊರಿನೆಲ್ಲ ಮಕ್ಕಳಿಗೆ ಮೈ ಬೆಚ್ಚಗಾದರೆ

ಕರಿಯ ಬಳೆಗೋರಿ ಹಿಡಿದು ಹಣತೆಗೊಡ್ಡಿ

ಕಾಯಿಸಿ ಸುಟ್ಟವಳಿಂದ ಕೇಡೆಂದು ಆಗಲಿಲ್ಲ.

ಗರ್ಭ ಇಳಿಯುವ ನಡುಜಾವ ಈ ದಾದಿಯ

ಕೈಯಲ್ಲಿ ಶಿಶುಗಳು ಕಣ್ಬಿಟ್ಟದ್ದು.

ಎಲ್ಲೆಲ್ಲಿ ಹೆಜ್ಜೆ ಬಿದ್ದರು ಅಲ್ಲೆಲ್ಲ ಮನುಷ್ಯಳಷ್ಟೇ

ಆದ ನಾನು ನೆತ್ತಿ ಬರಿದಾದ ಬಯಲಿಗೇಕೆ

ಪರಿಣಾಮವಾಗಲಿ!

ಗುಡ್ಡ, ದಾದಿ, ಮನೆಯ ಎಲ್ಲರೂ, ಊರಿನ

ಸರೀಕರು

ನನ್ನ ಕಣ್ಣಲ್ಲಿ ಬೆಳಕಷ್ಟೆ

ಪರಿಣಾಮಗಳ

ಸೃಷ್ಟಿಸುವ

ಚಲನೆಯವರು ಕರ್ಪೂರದಂತೆ ಕರಗಿ

ಹೋಗುವಾಗ

ಮತ್ತೆ ಬೆಂಕಿ ಕೆಡಿಸಿ ಕಾಯ್ದುಕೊಳ್ಳುವುದನ್ನು

ಬಿಡಬೇಕು.

‍ಲೇಖಕರು Admin MM

May 28, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: