ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಡು ಹಗಲ ಸಂಕಟ

ಡಾ ಲಕ್ಷ್ಮಣ ವಿ ಎ 

ಸುಡು ಹಗಲು  ಸಂಕಟಗಳ
ಸಮುದ್ರದ ಪಾಲು ಮಾಡಿ ಬಂದವನೇ ತುಸು ಕೇಳಿಸಿಕೊ ಇಲ್ಲಿ
ಹೀಗೆ ಹೋಗಿ ಹಾಗಿ ಬಂದು
ಹಿತ್ತಿಲು ಬಾಗಿಲ  ಚಿಲಕವ ಹಾಕುವದ ಮರೆತು
ನಿರಾಳ ನಿದ್ದೆಗೆ ಜಾರುವುದೊರಳಗೆ
ಕಡಲು ಮಳೆಯಾಗಿ
ಬಾಗಿಲು ಬಡಿಯುತ್ತದೆ ನಿನ್ನ ಹೆಜ್ಜೆಯ ಜಾಡ ಹಿಂಬಾಲಿಸಿ
ನಂಬಿಕೆಯಿಲ್ಲವಾದಲ್ಲಿ  ಆಲಿಸು
ನಿನ್ನ ಮನೆಯ ಮಾಡಿನ ಮೇಲಿನ ಮಳೆಯ ಸದ್ದ

ಜಂಗುಳಿಯೊಳಗೆ ಹೀಗೆ ಹಾಯ್ದು
ಹಾಗೆ ಮರೆಯಾಗುವ  ನಿನ್ನ ಮುಖದ
ಪರಿಚಯವಿರಲಾದೇನೊ ಈ ಕಡಲಿಗೆ
ನಿನಗಿಂತ ಈ ಮುಂಚೆ  ಎಷ್ಟೋ ಮಂದಿ
ನಿನ್ನ ನಂತರದ ಎಷ್ಟೋ ಮಂದಿ
ತಂದು ಸುರಿದವರಿದ್ದಾರೆ ತಮ್ಮತಮ್ಮ ಸುಡುಗಾಡು
ಸಂಕಟದ ಹಾಡುಗಳ
ಈ ಕಡಲಿನ ಎದೆಯ ಮೇಲೆ ಸವೆದ ಚಪ್ಪಲಿಯ ಸಮೇತ
ನಿನ್ನ  ಸಂಕಟದ ಸುಯ್ಲಿಗೆ  ಲವಲೇಶ ಕರಗಲಾರದ  ಕಡಲಿನ ಲವಣ
ಒಳಗಿವಿಯ  ಅಲೆಯ ಮರ್ಮರಕೆ ಕಿವಿಯಾಗು

ಅಲೆಯ ಮೇಲಿನ
ನಿನ್ನ ಮರಣ ಶಾಸನದ ಲಿಪಿ ಓದುವವರು ಯಾರು!?
ಮೂರು ಮತ್ತೊಂದು  ದಿನ ನಿನ್ನ ಹೆಣ ಹೊರಲಾರದ
ಕಡಲು
ನಿನ್ನ ಸುಡುಹಗಲ ಸಂಕಟದ ಭಾರಕೆ
ಬಾಗಿ  ಕಾಲೂರಿದ ಕಾರ್ಮುಗಿಲ ದಂಡು
ತೆರೆ
ಬಾಗಿಲು
ಮತ್ತೆ ಅಣಿಯಾಗು ಹರ್ಕ್ಯೂಲಸ್

‍ಲೇಖಕರು Avadhi

26 October, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading