ಹೊಳೆಯ ಹಾದಿ ಹಿಡಿದು
ಸೂರ್ಯಕಿರಣ್ ಜೋಯಿಸ್
ಏನು ಎತ್ತ ಎಂದು ಕೇಳದೆ ಸುಮ್ಮನೆ ಹೊರಟು ಬಿಡೋಣ ಹುಣ್ಣಿಮೆಯ ಬೆಳದಿಂಗಳಿಗೋ, ಕಂಪು ಹೊತ್ತ ತಂಗಾಳಿಗೋ ಕಾಯುವುದು ಬೇಡ ಇನ್ನು – ಹಿಡಿಯುವ ಆ ಹೊಳೆಯ ಕಾಲು ದಾರಿಯ ಜಾಡು ಬಿಟ್ಟು ಚಂದಿರನಿಗೆ ಅವನ ಪಾಡು
ಹನಿವ ಮಳೆಗೆರಡು ಬೊಗಸೆ
ಸುಡುವ ಬಿಸಿಲಿಗೆ ನಾಲ್ಕು ಒಲವ ಮಾತು
ಕೊರೆವ ಚಳಿಗೆ ತೋಳ ಬಳಸು
ತುಸು ದೂರದ ನಡಿಗೆಯಷ್ಟೇ
–
ಬೆಸೆದಿರಲಿ ಕೈಯೊಳು ಕೈ
ನಿಂತಿರಲಿ ಬಾಯ ತುದಿಯಲಿ
ಹೇಳಬೇಕೆಂದ ಸವಿ ನುಡಿ
–
ಕಣ್ಣಂಚಿನ ಮಿನುಗು
ಮರೆಮಾಚುವುದು ನೋಡು
ಆ ತುಂಟ ನಗೆಯನು
–
ಹೊಳೆಯ ದಂಡೆಯಲಿ
ಎದೆಗಾತು ಕೂತಿರೆ ನೀನು
ತೆರೆಗಳ ಗುಂಜನದೊಳು
ರೆಪ್ಪೆ ಮುಚ್ಚಲು ನಾನು
ನೆನಪಾಗಿ ಥಟ್ಟನೆ
ನೀನಂದು ಮೈಮರೆಸಿದ ಹಾಡು
–
ಕೈಯ ಹಣೆಮುಟ್ಟಿಸಿ
ನೋಟದಲ್ಲೇ ಅಹವಾಲು ಇಡುವೆನು
ಅದೇ ಹಾಡನು ಆ ಮೋಹಕ ನಾದವನು
ಒಲವ ಸುಧೆಯೊಳದ್ದಿ ಹರಿಯಬಿಡೆಂದು
ಅವೇ ಪದಗಳಿಗೊಮ್ಮೆ ನಿನ್ನ ದನಿಯ
ಜೇನು ಪೂಸಿಬಿಡೆಂದು
–
ಗೊತ್ತಿಲ್ಲದೇನಿಲ್ಲ ನಿನಗೆ
ನಿನ್ನಾ ಹಾಡಿಗೆ ಎದೆ ಹನಿವುದು ಇನ್ನಿಲ್ಲದಂತೆ
ಕಂಠ ಬಿಗಿವುದು ಮಾತು ಹೊರಡದಂತೆ
–
ಬೇಕಿಲ್ಲ ಅಲ್ಲವೆ
ಇನ್ಯಾವ ರಸಘಳಿಗೆಯ ನಿರೀಕ್ಷೆ?
ನಿನ್ನ ಹಾಡು ನನ್ನ ಮೈಮರೆವು
ಕೊರಳ ಇಂಪು ಕವಿತೆಯ ಕಂಪು
ಅರಳಿ ನಗುವ ಮಲ್ಲಿಗೆ ಮುಗಿಲು
ಬಯಲ ತುಂಬಾ ಪ್ರೀತಿ ಹೊನಲು
ಸಾಕಲ್ಲವೆ ಇಷ್ಟು
ಕನಸಿನ ಜೋಳಿಗೆ ತುಂಬಿಸಲು?
–
ಹೊರಡೋಣ ನಡಿ ಇನ್ನು
ಬಿಟ್ಟರಾಯಿತು ಕರಗುವ ಸಮಯವ
ಋತುಗಳ ಪಾಲಿಗೆ
ಹಂಚಿದರಾಯಿತು ಕಿರುನಗೆಯ
ಹೂಗಳ ಸಾಲಿಗೆ]]>






amoghavaagide….its very beautifulll lines