ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಜಾತ ಲಕ್ಷ್ಮೀಪುರ ಹೊಸ ಕವಿತೆ- ಶಿಲುಬೆ ಹೊತ್ತವರು…

ಸುಜಾತ ಲಕ್ಷ್ಮೀಪುರ

ಜನಿಸಿದಾಗಲೇ ಶಿಲುಬೆ ಹೊರಿಸಿ
ಆಗಾಗ ಒಂದೊಂದು ಮೊಳೆ ಹೊಡೆದು
ಹೆಣ್ಣೆಂಬ ಆಕೃತಿಯ ಮಾಡಿ
ಇಂಚಿಂಚು ಬಿಡದೆ ಮೊಳೆಯಿಂದಲೇ ತಿದ್ದಿ
ಆ ಕಡೆ ಈ ಕಡೆ ಗುದ್ದಿ..
ಹೆಂಗಸೆಂದರೆ ಹೀಗಿರಬೇಕೆಂದಿರಿಸಿ
ಶಿಲುಬೆಯ ಸದಾ ಹೊತ್ತುಕೊಂಡೆ
ತಿರುಗುವಂತೆ ಸಿದ್ದಗೊಳಿಸಿದರು.

ಮೊಳೆ ತುರಿಸಿದಂತೆಲ್ಲಾ ಕಿತ್ತು
ಬಿಸಾಡುವ ಮನಸಾಗಿ
ಕೈಯಿಟ್ಟಲೆಲ್ಲಾ ರಕ್ತಮಾಂಸವೇ ಕಿತ್ತು ಬಂದು
ಮೊಳೆ ಶಾಶ್ವತವಾಯಿತು.

ಸದಾ ಹೊತ್ತು ತಿರುಗುವ ಭಾರವ
ಇಳಿಸಿಬಿಡಬೇಕೆಂದುಕೊಂಡಾಗೆಲ್ಲಾ
ಅಪ್ಪ ಅಮ್ಮ ಗಂಡ ಮಕ್ಕಳ ಮೂದಲಿಕೆ
ಗೆಳೆಯ ಗೆಳತಿಯರ ಅಸಹನೆ
ನಕ್ಕೋ,ಉಗಿದೋ ಬೆಂಕಿ ಕಣ್ಣಿನಲಿ
ಇರಿದು ಕೊಲ್ಲುವ ಸಮಾಜ
ಮೊಳೆ ಹೊಡೆಯುತ್ತಲೇ ಇರುತ್ತದೆ.

ತೊಡುಗೆಯಲ್ಲವಿದು ಕಿತ್ತು ಬಿಸಾಡಲು
ತೊಗಲಿಗಂಟಿ ಒಳಗಿಳಿದು
ಉಸಿರಾಟವೇ ಆಗಿಹೋಗಿದೆ ಶಿಲುಬೆ.
ಹೆಣ್ಣು ಹೆಣ್ಣೆಂಬ ಶಿಲುಬೆಗೆ
ನೂರಾರು ಕಟ್ಟುಪಾಡಿನ ಮೊಳೆ ಜಡಿದು
ದೇವಿಯೆಂದು ಸ್ತುತಿಸುತ್ತಲೇ
ಚರ್ಮಸುಲಿದು ರಕ್ತಬಸಿದು
ಮೋಜು ನೋಡಿ ಮಜಾ ಮಾಡುವ
ಮೊಳಗಳೇ ಅಧಿಕ ಜಗದ ತುಂಬ.

ಒಮ್ಮೆ‌ ಶಿಲುಬೆಗೇರಿದ ಯೇಸುಕ್ರಿಸ್ತ
ದಿನ ದಿನವೂ ಕ್ಷಣ ಕ್ಷಣವೂ
ಶಿಲುಬೆ ಹೊತ್ತುಕೊಂಡಿದ್ದರೂ
ಮತ್ತೆ ಮತ್ತೆ ಶಿಲುಬೆಗೇರಿಸುತ್ತಿದ್ದರೂ
ಸತ್ತು, ಬದುಕುತ್ತಲೇ ಜಗವ ಬದುಕಿಸಿರುವ
ಶಿಲುಬೆ ಹೊತ್ತವರ ಕುಡಿ ನಾವು.

‍ಲೇಖಕರು Admin

22 January, 2022

1 Comment

  1. Bhimarao

    ಹೆಣ್ಣಿನ ಮನದಾದ ನೋವು ಬಿಂಬಿಸುವ ರಚನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading