ನನ್ನ ಮಗಳು
-ಶಿವಯೋಗಿ ಕಳ್ಳಿಮಠ
ಬರಿಗಾಲಿನ ಗಾಳಿಗೊಂದು ಪರಿಮಳದ ಗೆಜ್ಜೆ.
ಸೋತ ಇರುಳಿನ ಎದೆಗೆ ಹುಣ್ಣಿಮೆಯ ಹೆಜ್ಜೆ.
ನನ್ನ ಮಗಳು.
ದಣಿದ ಗುಡಿಸಿಲಿಗೆ ತಂಗಾಳಿಯ ಬೀಸುತಿಹ ಮಕ್ಕಳ
ಕೇಕೆ.
ಬರಿಗೈ ಫಕೀರನ ಜೋಳಿಗೆಗೆ ಬಿದ್ದ ಕರಗದ ಸಂಪತ್ತು
ಆಕೆ.
ನನ್ನ ಮಗಳು.
ನಿರಾಳ ನದಿಯ ಜೀವಕ್ಕೊದಗಿದ ಜಲಪಾತದ
ಸೊಬಗು.
ಸದಾ ಹೂ ತುಟಿ ನೇಯುತ್ತಿರುವ ಸಿಹಿ ನಗುವಿನ
ಬೆರಗು.
ನನ್ನ ಮಗಳು.
ಗುಳೆ ಹೋದ ಬೆಳಕನ್ನು ಕಸಿದು ತಂದ ಹಟಮಾರಿ
ಕಣ್ಣು.
ದೌರ್ಭಾಗ್ಯವ ಸಿಗಿದು ಸುಟ್ಟು ಸುಗ್ಗಿಯ ಬೆಳೆದ ಹೆಣ್ಣು.
ನನ್ನ ಮಗಳು.






0 Comments