ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಖವಾದ ಸ್ವಾರ್ಥ..

– ನಂದಿನಿ ಹೆದ್ದುರ್ಗ

ನಡು ರಾತ್ರಿ ಒಮ್ಮೆಗೆ
ಎಚ್ಚರವಾದರೆ
ಹೊದ್ದು‌ ಮಲಗಿರುವ
ದೇವರ ಎಬ್ಬಿಸಿ
ಮತ್ತೆ ಮತ್ತೆ ಸ್ಮರಿಸಿ
ದಯಾಮಯನೇ
ಕಾಪಾಡು ಎನ್ನುತ್ತ
ಒಂದೇ ಮನವಿಟ್ಟು
ನಿನ್ನ ಬೇಡಿಕೆಗಳ ಪಟ್ಟಿ
ಇಡಲು ಅಣಿಯಾಗಬೇಡ

ತಬ್ಬಿ‌ ಮಲಗಿರುವ
ನಿನ್ನ ಅರ್ಧಾಂಗಿಯ ಕೈಗಳನ್ನು
ಮೆಲ್ಲಗೆ ಬದಿಗೆ ಸರಿಸು
ಹೊದಿಕೆ ಸರಿಪಡಿಸು
ಒಂದು ಒದ್ದೆ ಸ್ಪರ್ಶದಿಂದ
ಮುಂಗುರಳ ಸರಿಸು
ಬೇಕೆನಿಸಿದರೆ ಹಣೆಗೊಂದು
ಹೂ ಮುತ್ತು ಒತ್ತು

ಸದ್ದಾಗದಂತೆ ಎದ್ದು
ಕಿಟಿಕಿ ಪರದೆ ಸರಿಸು
ಚಂದ್ರನಿದ್ದರೆ ಅವನ ಬೆಳಕಲ್ಲಿ
ಇರದಿದ್ದರೆ ಚುಕ್ಕಿಗಳ ಹೊಳಪಲ್ಲಿ
ಗವ್ವನೆ ಕತ್ತಲಿದ್ದರೆ
ಎದೆಯ ಕಿಡಿಯಲ್ಲಿ
ಹೊರಗೆ ನೋಡು
ನನ್ನ ಕೊನೆಯಿರದ ದುಃಖ
ಮೆತ್ತಿಕೊಂಡ ಹಾಡುಗಳು
ಹುಡುಕಿ ಬಂದಿವೆ ನಿನ್ನ
ಅಲ್ಲಿ

‘ನೋಡಬಹುದು ಯಾರಾದರೂ
ಹೊರಡಿ ಹೊರಡಿ’ ಎನ್ನದಿರು
ಎಳೆಗರಿಕೆ ತುದಿಯ
ಹೊಳೆವ ಮಣಿಗಳಡಿ ಅಡಗಿ ಕೂತಿವೆ
ನಿನ್ನವರ ಕಣ್ತಪ್ಪಿಸಿ
ಲೋಕಕ್ಕೆ ಕಾಣದಂತೆ

ಹರಿವ ಅಕ್ಷರಗಳ ಆಚೀಚೆ ಮಾಡು
ಒತ್ತುದೀರ್ಘಗಳ ಮೆತ್ತಗೆ ಮುರಿ
ಪದಗಳ ಅದಲು ಬದಲಾಗಿಸು
ವ್ಯಾಕರಣದೊಳಗೆ ಅವ್ಯಕ್ತ
ತಂಗಾಳಿ ಹರಿಸು
ಬದಲಾಗಲಿ ಅರ್ಥ
ಒಂದಾದರೂ ಸಾಲು ತಿದ್ದು
‘ಒಲವೆಂಬುದು ಸುಖವಾದ ಸ್ವಾರ್ಥ’

ಸುಖ ನಿದ್ದೆಯಲ್ಲಿರುವವರ
ಬೇಕಿದ್ದರೆ
ಮತ್ತೊಮ್ಮೆ ನೋಡು
ಅಕ್ಷರಗಳ ನೇವರಿಸಿ
ಪದಗಳ ತಬ್ಬಿ
ನಡುವಿನ ಮೌನಕ್ಕೆ ಮುತ್ತಿಕ್ಕಿ
ದುಃಖ ಕಳೆದುಕೊಂಡ ಹಾಡಿಗೆ
ನಿನ್ನ ಆರ್ದ್ರ ಪ್ರೇಮದ
ಅಪರೂಪದ ದನಿಯಿಂದ
ರಾಗ ಕೂಡಿಸು

ಮರಳುತ್ತದೆ ಅದು ನನ್ನ ಬಳಿಗೆ
ಮರುದಿನದ ಬೆಳಗಿಗೆ

‍ಲೇಖಕರು Admin

13 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading