ಗೋಪಿ
ಪಾ.ವೆಂ.ಆಚಾರ್ಯ
ಪ್ರತಿಯೊಬ್ಬ ಗೋಪಿಯೂ,
ಏಕಾಂತದಲ್ಲಿ,
ಸೀರೆಯನು ಬಿಚ್ಚಿಟ್ಟು
ಇಳಿಯುವಳು ಕಾಳಿಂದಿಯಲ್ಲಿ.
ಕ್ಷಣಕ್ಕೊಮ್ಮೆ ಹಾರುವುದು
ದಡದ ಕದಂಬದತ್ತ
ದೃಷ್ಟಿ ಪಕ್ಷಿ-
ಯಾವ ಗೋಪಾಲ ಯಾವಾಗ ಬರುವನೊ ಎಂದು
ಬೆಚ್ಚಿ ಬೆಚ್ಚಿ.
ಆದರೂ,
ತೋರಮೊಲೆಗಳ ಮೇಲೆ
ನೀರ ಮಣಿಗಳ ಮಾಲೆ
ಮಿನುಗಿಸುತ ಮೇಲೆ ಬಂದು,
ಸೀರೆ ಕುಪ್ಪುಸವ ಇದ್ದಲ್ಲೆ ಕಂಡು,
ಸೂಸುವಳು ತನಗು ಕೇಳಿಸದಂತೆ
ನಸು ನಿರಾಶೆಯ ನಿಟ್ಟುಸಿರನೊಂದು.







Very nice
chennagide. koneya eradu saalugalu… nija heli bittive