ಸಿ ಬಸವಲಿಂಗಯ್ಯ ಕಂಡಂತೆ ‘ಶೂದ್ರ ಶಿವ’

ಸಿ ಬಸವಲಿಂಗಯ್ಯ

ಸಿ. ಜಿ. ಕೆ. ರಾಷ್ಟ್ರೀಯ ರಂಗೋತ್ಸವ 2023. ರ ಮೂರನೇ ದಿನ ರುದ್ರ ಥೇಟರ್ ಮಂಗಳೂರು ತಂಡ “ಶೂದ್ರ ಶಿವ” ನಾಟಕವನ್ನ ಡಿ.ಕೆ.ಚೌಟ ವೇದಿಕೆ, ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸಿದರು. ಬ್ರಹ್ಮಶ್ರೀ ನಾರಯಣಗುರುಗಳ ‘ಬಾಯೋಪಿಕ್’ ನಾಟಕಕ್ಕೆ ಬಾಬು ಶಿವ ಪೂಜಾರಿಯವರ “ಶ್ರೀ ನಾರಾಯಣ ಗುರು ವಿಜಯ ದರ್ಶನ” ಪ್ರೇರಣ ಪಠ್ಯವಾಗಿ ನೆರವಿಗೆ ಬಂದಿದೆ . ಮತ್ತು ನಾರಯಣ ಗುರುಗಳ ಬದುಕು, ಹೋರಾಟ , ಅವರ ತತ್ವ ದರ್ಶನ, ಬರಹಗಳಿಂದ ಹಾಗೂ ಹಲವಾರು ಲೇಖಕರ ಚಿಂತನಾ ಸಾಹಿತ್ಯದ ನಾನಾ ಆಕರಗಳನ್ನು ಆಧಾರಿಸಿದ ರಂಗರೂಪಕ ಪಠ್ಯವನ್ನ ಶರತ್ ಎಸ್ ನೀನಾಸಂ. ಮನೋಜ್ ವಾಮಂಜೂರು ಎಪಿಸೋಡಿಕ್ ಹಿರಿ ಕಿರಿ ದೇಶ್ಯಾವಳಿಗಳ ಮೂಲಕ ಮನೋಜ್ಞವಾಗಿ ರೂಪಿಸಿದ್ದಾರೆ. ತಮ್ಮ ಪರಿಕಲ್ಪನೆಯಿಂದ ನಿರ್ದೇಶಕರಾದ ವಿದು ಉಚ್ಚಿಲ್ ವಿಶಿಷ್ಟ ವಿನ್ಯಾಸದ ನೆರವಿನಿಂದ ಸುಮಾರು 70 ದಿನಗಳ ಕಲಾವಿದರ ತರಬೇತಿಯ ಮೂಲಕ ಸಿದ್ಧಗೊಂಡ ಸೀಜನಲ್ ರೆಪರ್ಟರಿಗೆ ಪರಿಣಾಮಕಾರಿಯಾಗಿ ನಿರ್ದೇಶಿಸಿದ್ದಾರೆ.

ಕಲಾಕ್ಷೇತ್ರ ತುಂಬಿ ಬಾಲ್ಕನಿಯಲ್ಲು ನಾಟಕ ನೋಡಲು ಜನ ಸೇರಿದ್ದರ ಸಂಭ್ರಮ, ಸಡಗರ, ಕುತೂಹಲಕ್ಕೆ ನಾಟಕದ ಕಥಾ ವಸ್ತುವಿನ ವಿಶಿಷ್ಟತೆ ಮತ್ತು ಶೀರ್ಷಿಕೆಯೂ ಕಾರಣ ವಿರಬಹುದು ಎನಿಸುತ್ತದೆ. ಈ ನಾಟಕ ಸಮಾಜ ಸುಧಾರಕ ಮತ್ತು ಧಾರ್ಮಿಕ ಅದ್ವೈತ ತತ್ವ ಪ್ರತಿಪಾದಕ ಶ್ರೀ ನಾರಯಣ ಗುರುಗಳ ಜೀವನ ಮತ್ತು ವರ್ಣಾಶ್ರಮ ವಿರುದ್ಧದ ಹೋರಾಟದ ಚಿತ್ರಣವೂ ಆಗಿರುವುದರಿಂದ ಆಕರ್ಷಣೆಗೆ ಮತ್ತೋಂದು ಕಾರಣವೂ ಇರಬಹುದು.

ಆಧುನಿ ಕನ್ನಡ ರಂಗಭೂಮಿಯಲ್ಲಿ ಇತ್ತೀಚೆಗೆ ಅಲ್ಲಲ್ಲಿ ನಡೆಯುತ್ತಿರುವ ಕೆಲವು ನಾಟಕ ಪ್ರಯೋಗಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ವರ್ತಮಾನ ಸಮಾಜದ ಘಟನೆಗಳಿಗೆ ಸೃಜನಾತ್ಮಕವಾಗಿ ಪ್ರತಿಕ್ರಿಯಿಸಬೇಕಾದ ನಾಟಕ ಮತ್ತೇ ದಶವಾತಾರದ ರಾಮಕಥೆ, ಕೃಷ್ಣಕಥೆ, ಶಿವ ಕಥೆಯನ್ನೊಳಗೊಂದಂತೆ ಪುರಾಣ ಕಥನಾಕಾಗಳಿಗೆ ಮರಳಿರುವಂತೆ ಭಾಸವಾಗುತ್ತದೆ. ಅಲ್ಲದೇ ಘಟಿಸಿಹೋದ ಚರಿತ್ರೆಯ ಪಾತ್ರಗಳು ತಮ್ಮ ಕಾಲಘಟ್ಟದಲ್ಲಿ ನಡೆಯದೇ ಇರುವ ಹುಸಿ ಸಂಕಥನಗಳನ್ನು ಹೊಸ ವೇಷಧರಿಸಿಕೊಂಡು ನಾವೇನು ಕಡಿಮೆ ಎಂದು ರಂಗದಲ್ಲಿ ಅಬ್ಬರದಿಂದ ಮಂಡಿಸುತ್ತಿವೆ. ಪ್ರಭುತ್ವವೂ ಜೊತೆಯಾಗಿರುವುದರಿಂದ ಇದರ ಅಬ್ಬರ ತುಸುಹೆಚ್ಚೇ ಆಗಿದೆ. ಈ ಭರಾಟೆಯಲ್ಲಿಯೇ ಚಾತುರ್ವರ್ಣದ ವ್ಯವಸ್ಥೆಯ ಆಚೆಯಿದ್ದ ಸಮುದಾಯಗಳು ಸಹ ತಮ್ಮ ತಮ್ಮ ಪುರಾಣಗಳನ್ನು ರಂಗವೇರಿ ನೀವೇದಿಸುತ್ತಿವೆ.

“ಶೂದ್ರ ಶಿವ” ನಾಟಕ ವಿಮರ್ಶೆಗೆ ನಾನು ಇಲ್ಲಿ ತೊಡಗದೆ, ರಂಗಭೂಮಿಯಲ್ಲಿ ಈ ಮಾದರಿಯ ಪ್ರತಿರೋಧದ ಹೊಸ ಚಿಂತನೆಯ ಮಾದರಿಯ ರೂಪಕಗಳು ಏಕೆ ಜನ್ಮ ತಳೆಯುತ್ತವೆ ಎಂದು ಕುತೂಹಲ ವೀಕ್ಷಣೆ ನನ್ನದೂ ಆಗಿರುವುದರಿಂದ ಈ ಬರಹ. ಲಾಗಾಯ್ತಿನಿಂದ ಜಾತಿಯಾಧಾರಿತ ತಾರತಮ್ಯದ ಸಂಕಥನಗಳು, ಪ್ರಭುತ್ವ ಮತ್ತು ಆಳುವ ವರ್ಗದ ಜನರು ಸೃಷ್ಟಿಸಿರುವ ಹಾಗೂ ಇಂದಿಗೂ ಪುರಾಣ, ಇತಿಹಾಸಗಳ ಹುಸಿ ಸೃಷ್ಟಿಯ ಕಥಾನಕಗಳು ಬಹುಜನರ ಹಾಗು ಶೋಷಿತರ ಆಶೋತ್ತರಳಿಗೆ ಎಳ್ಳು ನೀರು ಬಿಟ್ಟು ಅಸಮಾನತೆ, ಅಧರ್ಮವೇ ನ್ಯಾಯ ನೀತಿಯಾಗಿ ಲಲಿತಕಲೆಗಳಲ್ಲಿ ಪ್ರಚಾರ ಸಾಮಗ್ರಿಯಾಗಿ ಅಭಿವ್ಯಕ್ತಗೊಂಡು ಜನಜನಿತವಾಗಿ ಪ್ರಭುತ್ವದ ಓಲೈಕೆಗಾಗಿ ವಿಜೃಂಭಸುತ್ತಿರುವುದನ್ನು ಸುಲಭವಾಗಿ ಕಡೆಗಣಿಸಲಾಗದು. ಪ್ರಜಾಪ್ರಭುತ್ವ ವ್ಯವಸ್ತೆಯ ಒಳಗೇ ಊಳಿಗಮಾನ್ಯ ವ್ಯವಸ್ಥೆಯ ಜನವಿರೋಧಿ ಮೌಲ್ಯಗಳು, ರಾಜಪ್ರಭುತ್ವದ ನಿರಂಕುಶ ಆಡಳಿತ ಜನವಿರೋಧಿ ಹಳೆ ಮೌಲ್ಯಗಳು ಅಂತರ್ಗತವಾಗಿ ಇನ್ನೂ ಜೀಂತವಾಗಿರುವುದರಿಂದಲೇ ಸದ್ಯದ ಪ್ರಜಾಪ್ರಭುತ್ವದ ಸರ್ವೋದಯ, ಮಾನವೀಯ ಆಶಯಗಳು , ಸರ್ವಜನಾಂಗದ ಶಾಂತಿಯ ತೋಟಕ್ಕೆ ಅಶಾಂತಿಯ ಕಿಡಿಹತ್ತಿ ಮುಸುಕಿರುವ ದ್ವೇಷದ ಹೊಗೆಯಿಂದ ಅವಜ್ಞೆಗೆ ಒಳಗಾಗುತ್ತಿವೆ.

ರಂಗಭೂಮಿಯೂ ಸಹ ಚರಿತ್ರೆಉದ್ದಕ್ಕೂ ಮತ ಧರ್ಮ ಪ್ರಚಾರದ ಪ್ರಬಲ ಸಾಧನವಾಗಿ ಹಿಂದೆ ಬಳಕೆಯಾಗಿದೆ, ಜೊತೆಗೆ ವ್ಯವಸ್ಥೆಯ ಪರ್ಯಾಯ ತತ್ವಚಿಂತನೆಗೂ ಸಹ ಸಮರ್ಥವಾಗಿ ಕೆಲಸಮಾಡುತ್ತಾ ಬಂದಿದೆ. ಈ ಮಾದರಿಯ ದ್ವಂದ್ವ ಮತ್ತು ಪ್ರತಿರೋಧಕ್ಕೆ ಕಾರಣಗಳ ಹುಡುಕಿದರೆ ಸಮಾಜದ, ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿ ಕ ಅಸಮಾನತೆಯ ತೊಡರುಗಳನ್ನು ಅರಿಯುವ ಅವಶ್ಯಕತೆ ರಂಗಭೂಮಿಗೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಮಾಜದ ಗುಣಾವಾಗುಣಗಳ ಪರಿಶೀಲನೆಗೆ “ಶೂದ್ರ ಶಿವ” ನಾಟಕ ಮತ್ತು ಅದರ ಮಹತ್ವವನ್ನು ಅರಿಯಲು ಈ ಟಿಪ್ಪಣಿ.

ಸಧ್ಯ ಭಾರತ ಧರ್ಮವನ್ನ ಅಧಿಕಾರದ ರಾಜಕಾರಣದ ಚಿಮ್ಮಲಗೆ ಮಾಡಿಕೊಂಡಿರುವ ಕಾರಣಕ್ಕೆ ಬಹುತ್ವದ ಸಾಂಸ್ಕೃತಿಕ ಅಭಿವ್ಯಕ್ತಿಗಳು ವಿಘಟನೆಗೆ, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆಗಳ ಜನರ ಮನಸ್ಸಿಗೆ ಬಿತ್ತಿ ಭರಪೂರ ಕೊಯಲು ತೆಗೆಯಲು ಪ್ರಭುತ್ವ ಮತ್ತು ಆಡಳಿತಗಾರರು ನಿಂತಿರುವಂತಿದೆ. ಆಗಾಗ ಬಿತ್ತರಗೊಳ್ಳುತ್ತಿರುವ ಕೊಲುವವನ ಹಿಂಸಾತ್ಮಕ ನುಡಿಗಳು ನಂಜಿನ ಎಡೆ ಎತ್ತಿ ನಿಂತಿರುವುದನ್ನು ಯಾವ ವಿಶಿಷ್ಠ ಚಾಳಿಸ್ಸನ್ನು ಕಣ್ಣಿಗೆ ತೊಡದೆ ಬರಿಗಣ್ಣಿನಿಂದ ನೋಡಿದರು ಸ್ಪಷ್ಟವಾಗಿ ಕಾಣುತ್ತದೆ. ಈ ದ್ವೇಷ ಪೂರಿತ ಮತ-ಧರ್ಮ ಮೌಢ್ಯದ ‘ನರೆಟಿವ್ಸ್ ‘ಹೊಸ ಬಿಕ್ಕಟ್ಟುಗಳನ್ನು ಜನರ ಐಕ್ಯತೆಯನ್ನು ,ಪ್ರೀತಿ, ಧರ್ಮ ಸಹಿಷ್ಣುತೆ, ಭಾತ್ರುತ್ವದ ಭಾರತವನ್ನೂ ಚಿದ್ರಿಸಿ ಹೊಸ ಸಾಮಾಜಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳು ಹೊಸ ಸಂಕಷ್ಟಗಳಿಗೆ ಈಡುಮಾಡುತ್ತಿದೆ.

ಭಾರತದ ಹಿಂದಿನ ಧಾರ್ಮಿಕ ಚರಿತ್ರೆಯನ್ನು ಸೂಕ್ಸ್ಮವಾಗಿ ಗಮನಿಸಿದರೆ ತಿಳಿದು ಬರುವ ಸಂಗತಿಗಳನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು. ದೇವಾಲಯಗಳ ಪೂಜಾಕಾರ್ಯ ನಿರ್ವಹಿಸುವ ಪುರೋಹಿತರು ದೇವರ , ದೇವಸ್ಥಾನದ , ಧರ್ಮದ, ರಕ್ಷಕರು ಆಗಿದ್ದರು. ಪ್ರಭುತ್ವದ ಪರವಾಗಿ ಆಡಳಿತ ನಡೆಸುವ ಭೂಮಾಲಿಕರಾಗಲಿ, ಭೂಕೃಷಿ ರೈತ ಕಾರ್ಮಿಕರಾಗಲಿ, ಅಕ್ಷರ ಕಲಿತವರಲ್ಲ. ಇಂದಿಗೂ ಈ ಮಂದಿ ಹೆಚ್ಚಿನ ಮಟ್ಟಿಗೆ ಓದು ಬರಹ ಅರಿತವರಲ್ಲ. ಓದುವುದನ್ನು, ಪುರೋಹಿತಿಕೆಯನ್ನು , ಪ್ರಭುತ್ವದ- ಆಡಳಿತದ ಸಹಾಯದಿಂದ ಬಹಳ ಹೆಚ್ಚರಿಕೆಯಿಂದ ಕೆಲವೇ ಕೆಲವು ಮಂದಿ ಮೀಸಲಿರಿಸಿಕೊಂಡಿದ್ದ ಕ್ಷೇತ್ರವಾಗಿತ್ತು. ದೇವಸ್ಥಾನಗಳು ಪ್ರಭುತ್ವಕ್ಕೆ ಮತ್ತು ಪುರೋಹಿತಶಾಹಿಯ ವರ್ಗಕ್ಕೆ ಅಗಾಧ ಪ್ರಮಾಣದ ಆರ್ಥಿಕ ಸಂಪತ್ತನ್ನು ಒದಗಿಸುತ್ತಿತ್ತು. ಈ ಎರಡೂ ವರ್ಗಗಳ ಅಧೀನದಲ್ಲಿ ಅಪಾರವಾದ ಸಂಪತ್ತು ಕ್ರೌಡಿಕರಣಗೊಂಡಿತ್ತು ಅಲ್ಲದೆ ರಾಜಕೀಯವಾಗಿ ಪ್ರಬಲವಾಗಿತ್ತು. ರಾಜನನ್ನು ಮೀರಿದ ಆದೇಶಗಳನ್ನು ದೇವರ ಹೆಸರಿನಲ್ಲಿ ಪುರೋಹತಶಾಹಿ ಜಾರಿಗೊಳಿಸುತ್ತಿತ್ತು.

ರಾಜಪ್ರಭುತ್ವ ಪುರೋಹಿತಶಾಹಿಯ ಹಿಡಿತದಲ್ಲೇ ಇದ್ದುದರಿಂದ ಧರ್ಮ ರಕ್ಷಣೆಯ ಹೊಣೆಗಾರಿಕೆಯನ್ನು ತನಗೆ ತಾನೇ ಹೊಂದಿತ್ತು. ಅದಕ್ಕೆ ಪೂರಕಾವಾಗಿ ಶ್ರೇಣೀಕೃತ ಜಾತಿಗಳಿಗೆ ಆಯಾ ಜಾತಿಗಳಿಗೆ ಸೀಮಿತವಾದ ಕುಲ ಕಸುಬುಗಳನ್ನು ನಿಗದಿ ಪಡಿಸಿ ಧಾರ್ಮಿಕ ಆಚರಣೆಗಳ ಮುಖೇನ ಜಾರಿಗೊಳಿಸುತ್ತಿತ್ತು. ಈ ಪುರೋಹತಶಾಹಿ ದೇವರು ಮತ್ತು ಜನರ ನಡುವೆ ಮಧ್ಯವರ್ತಿಗಳಂತೆ ಕಾರ್ಯನಿರ್ವಹಿಸುತ್ತಿದ್ದರು. ವರ್ಣಾಶ್ರಮ ಪ್ರೇರಿತ ಕುರುಡು ನಂಬಿಕೆಗಳನ್ನು ನಿರಂತರವಾಗಿ ಪೋಷಿಸುವುದು, ಕ್ರಿಯಾವಿಧಿ ಆಚರಣೆ ಮೂಲಕ ಸಂಸ್ಕೃತಿ ಪರಂಪರೆ ಎಂದು ರಕ್ಷಿಸುವುದು, ನಿಮ್ನ ವರ್ಗದ ಅವರ್ಣಿಯರಿಗೆ ಪೂಜಾಸ್ಥಳ- ಮಂದಿರಗಳನ್ನು ಪ್ರವೇಶಿಸದಂತೆ ನಿಯಮ ರೂಪಿಸಿ ಮಡಿ ಮೈಲಿಗೆಗಳಿಂದ ರಕ್ಷಿಸಿಕೊಳ್ಳುವುದೇ ಪವಿತ್ರ ಕರ್ತವ್ಯವೆಂದು ಪುರೋಹಿತಶಾಹಿಗಳು ಭಾವಿಸಿ ವಿಶೇಷ ಹಕ್ಕನ್ನು ಪಡೆದಿದ್ದರು.

ಭಾರತದ ವೈಧಿಕ ಧರ್ಮ (ಇಂದಿನ ಹಿಂದುತ್ವ – ಬ್ರಾಹ್ಮಣ್ಯದ ಹೊಸ ಹೆಸರು)ಸೃಷ್ಟಿಸಿರುವ ಚಾತುರ್ವರ್ಣ ಜಾತಿ ವ್ಯವಸ್ಥೆಯು ಕಿಟಕಿ ಬಾಗಿಲುಗಳಿರದ ನಾಲ್ಕು ಗೋಡೆಗಳ ಮನೆ!. ಹಿಂದೂ ನಾವೆಲ್ಲ ಒಂದು ಎಂದು ನೀತಿ, ಕಥೆ, ಪುರಾಣ ಹೇಳುತ್ತಲೇ ಜಾತಿ ಜಾತಿಗಳ ನಡುವೆ ಶ್ರೇಷ್ಟ ಕನಿಷ್ಟವೆಂಬ, ಮಡಿ ಮೈಲಿಗೆ ಆಹಾರ ಪದ್ಧತಿಯಲ್ಲಿ ಸಸ್ಯಾಹಾರ ಧರ್ಮದ ಶ್ರೇಷ್ಠ ಆದರ್ಶ ಎಂದು ನಂಬುವ, ಇಂದಿಗೂ ನಂಬಿಸುತ್ತಾ ಬಂದಿರುವ ಸಾವಿರಾರು ಜಾತಿಗಳ ದೊಡ್ಡ ಮನೆ!! ಬಾಗಿಲು ಕಿಟಕಿಗಳಿಲ್ಲದ ಈ ..ಮನೆಯ ನಾಲ್ಕು ಗೋಡೆಗಳ ಮನೆಯೊಳಗೆ ಮತ್ತೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, (ಸವರ್ಣೀಯ) ಶೂದ್ರ ಎಂಬ ಪ್ರತ್ಯೇಕ ನಾಲ್ಕು ಗೋಡೆಗಳ ಮನೆಗಳು. ಈ ಯಾವಾ ಮನೆಗಳಿಗೂ ಅಕ್ಕಪಕ್ಕದ ವರ್ಣದ ಮನೆಗಳಿಗೂ ಯಾರೂ; ಯಾವುದೂ ಎಂದೂ ಸುಳಿಯದ ಹಾಗೆ ಕಿಟಕಿ, ಬಾಗಿಲುಗಳಿರದ ಧಾರ್ಮಿಕ ಕಟ್ಟಳೆಗಳ ಮೂಲಕ ಮುಚ್ಚಿ ಆಚರಣೆಯಲ್ಲಿಟ್ಟಿರುವ ಕಾರಣ ಆ ಯಾವಾ ಮನೆಗಳಿಗೂ ಬದಲಾವಣೆಯ ಹೊಸ ಗಾಳಿ, ಬೆಳಕು ಸರಾಗವಾಗಿ ಸುಳಿಯದು. ಅದು ಸುಳಿಯದಂತೆ ಪರಲೋಕದ ಸುರರ ಮತ್ತು ಭೂಲೋಕದ ಸ್ವಯಂ ಘೋಷಿತ ಭೂಸುರರ ಧರ್ಮ,ಶಾಸ್ತ್ರ ಸಮ್ಮತದ ಅವರದೇ ಆದೇಶ! . ದೇವರ ನಿಯಮವನ್ನು ಮೀರಲಾಗದು.

ಒಂದು ವೇಳೆ ಹಾಗೇ ಮೀರಿದರೆ ಧರ್ಮದ್ರೋಹ, ವರ್ಣಸಂಕರ ದ್ರೋಹಕ್ಕೆ ಕಾರಣವಾಗುತ್ತದೆ . ದೇವರ ಪ್ರಕಾರ ಎಲ್ಲರೂ ಸಮಾನರು. ಎಲ್ಲ ಧರ್ಮಗಳೂ ಸಮಾನ ಎಂಬ ಧರ್ಮದ ಸಮ್ಮತಿ ಇದ್ದರು ; ದೇವರ ಮಧ್ಯವರ್ತಿ ಪುರೋಹಿತ ಶಾಹಿಯ ಸಮ್ಮತಿ ಎಂದೆಂದಿಗೂ ಸಿಗದು. ಇಂಥಾ ಮಡುಗಟ್ಟಿದ ವ್ಯವಸ್ಥೆಯಲ್ಲಿ ಬದಲಾವಣೆ ಶಾಸ್ತ್ರ ಸಮ್ಮತವಲ್ಲದ ಕಾರಣ ಆಯಾ ವರ್ಣಗಳು ಆಯಾ ವರ್ಣಗಳಲ್ಲಿ ಉಳಿದು ಉಸಿರು ಕಟ್ಟಿ ಜಡಗೊಂಡ ಬದುಕಾಗಿದೆ. ದೇವರು ಧರ್ಮದ ಹಕ್ಕುದಾರಾರು ಮೇಲ್ಜಾತಿಯ ಮೂರು ವರ್ಣದವರೆ ಆಗಿರುವುದರಿಂದ, ದೇವರ ಆರಾಧನೆ, ದೇವಾಲಯಗಳ ಪ್ರವೇಶ ನಾಲ್ಕನೇ ವರ್ಣದವರಾದ ಶೂದ್ರರಿಗೆ ಮತ್ತು ವರ್ಣ ವ್ಯವಸ್ಥೆಯ ಹೊರಗುಳಿದ ಅವರ್ಣಿಯರಿಗೆ ನಿಷೇಧ. ಅವರು ಎಂದೆಂದಿಗೂ ದಾಸರಾಗಿ ಹುಟ್ಟುವುದು ಅವರ ಪೂರ್ವಜನ್ಮದ ಕರ್ಮವಾಗಿರುವ ಕಾರಣ ಮೇಲ್ಜಾತಿಯವರ ಸೇವೆ ಮತ್ತು ಶ್ರಮದಿಂದ ಇವರು ಉತ್ಪಾದಿಸುವ ಸಂಪತ್ತು. ಎಲ್ಲಾವೂ ದೇವರಿಗೆ ಮತ್ತು ದೇವರ ಮಧ್ಯವರ್ತಿಗಳಿಗೆ ಅಲ್ಲದೆ ಮೇಲಿನವರಿಗೂ ಅರ್ಪಿಸುವ ಮೀಸಲು!.

ಆದರೂ ಕಿಟಕಿ ಬಾಗಿಲುಗಳಿರದ ನಾಲ್ಕು ಗೋಡೆಗಳ ಒಳಗೊಳಗೇ ಸ್ಥಗಿತಗೊಂಡ ಮನೆಗೆ ಕಿಟಕಿ ಬಾಗಿಲ ತೆರೆದು ಒಳಗೆ ಬಂಧಿತರಾಗಿದ್ದ ಶೂದ್ರರು ಮತ್ತು ಅತೀ ಶೂದ್ರರಿಗೆ ಹೊಸ ಗಾಳಿ ಬೆಳಕು ಬರುವಂತೆ ಮಾಡಿ, ಮಡುಗಟ್ಟಿದ್ದ ಮತಿಗೆ ವಿಚಾರದ ಅರಿವಿನ ದೀಪ ಹಚ್ಚುವ ಕೆಲಸವನ್ನ ಕೆಲವು ಮಹನೀಯರು ಚರಿತ್ರೆಯುದ್ದಕ್ಕೂ ಮಾಡಿದರು. ಅಂಥಾ ಅಸಂಖ್ಯ ಮಹಾ ಜ್ಯೋತಿಗಳಲ್ಲಿ ಬುದ್ಧ ಬಸವ ವಿವೇಕಾನಂದ ನಾರಾಯಣಗುರು ಗಾಂಧಿ ಅಂಬೇಡ್ಕರ್ ಪೆರಿಯಾರ್, ಕುವೆಂಪು ಮುಂತಾದವರು ಹಾಗೂ ಇಲ್ಲಿ ಹೆಸರಿಸದ ಹಲವರು ಸಾದು ಸಂತರು ಮಾನವೀಯತೆ ಮೆರೆದು ಪ್ರತಿರೋಧ ತೋರಿದ ಪ್ರತಿಧರ್ಮದ ಮಹಾ ಧರ್ಮ ಸುಧಾರಕರು ಇದ್ದಾರೆ.

“ಶೂದ್ರ ಶಿವ “ನಾಟಕದ ಕಾಲ- ದೇಶದ ಆವರಣ ಪುರಾತನ ಕೇರಳಕ್ಕೆ ನಮ್ಮನ್ನು ಕರೆದೊಯ್ದು ನಿಲ್ಲಿಸುತ್ತದೆ. ಉತ್ತರ ಭಾರತದ ಮನುಧರ್ಮ ಪ್ರಣೀತಾ ‘ ಪೇಶ್ವೇ ಭಾರತ ಮತ್ತು ದಕ್ಷಿಣದ ನಂಬೂದರಿಗಳ ಭಾರತ ಒಂದೇ ಮಾದರಿಯದು!. ಎಂದು ನಾಟಕ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಕೇರಳದ 19ನೇ ಶತಮಾನ, ಚರಿತ್ರೆ ಆ ಕಾಲದ ಸಮಾಜದ ಚಿತ್ರಣ ನಾಟಕದಲ್ಲಿ ಹಾಸುಹೊಕ್ಕಾಗಿಯೇ ಬಂದಿದೆ. ದೇವರ ನಾಡೆಂದು, ಪ್ರಮೀಳಾ ರಾಜ್ಯವೆಂದು ಹೆಸರಾದ ನಾಡಿನಲ್ಲೇ ದೇವಸ್ಥಾನ ಕಟ್ಟಿದವರಿಗೆ ದೇವಸ್ಥಾನದ ಒಳಗಿರಲಿ. ಆ ದಾರಿಯಲ್ಲಿ ನಡೆಯುವ ಅವಕಾಶವಿಲ್ಲ. ಬಹು ಸಂಖ್ಯಾತರಾದ ಕೆಳ ವರ್ಗದ ಮಹಿಳೆಯರ ಸ್ಥಿತಿಯಂತೂ ಅಸ್ಪೃಶ್ಯರಿಗಿಂತ ಇನ್ನೂ ಕೀಳಾಗಿತ್ತೆಂಬುದನ್ನು ಮನನಮಾಡಿಸುತ್ತದೆ. ತಮ್ಮ ಎದೆಗಳನ್ನು ವಸ್ತ್ರದಿಂದ ಮುಚ್ಚದೆ ತೆರದ ಎದೆಯಲ್ಲೆ ಅರೆಬೆತ್ತಲೆ ಇರಬೇಕು. ವಸ್ತ್ರದಿಂದ ಮುಚ್ಚಿದರೆ , ಮಕ್ಕಳಿಗೆ ಹಾಲೂಡಿಸಿದರೆ ‘ಸ್ಥನಕರ ‘ ವನ್ನು ನಂಬೂದರಿಗಳಿಗೆ ಧರ್ಮ ಶಾಸ್ತ್ರಗಳ ಕಟ್ಟಳೆಯಂತೆ ಸಲ್ಲಿಸಬೇಕಾಗಿತ್ತು!. ( ಉದಾ: ಈ ಅನಿಷ್ಠ ಪದ್ಧತಿಯನ್ನು ವಿರೋಧಿಸಿ ನಂಗಲಿ ಎಂಬ ಹೆಣ್ಣು ತನ್ನದ ಸ್ಥನಗಳನ್ನೆ ಕೊಯ್ದು ತೆರಿಗೆಯಾಗಿ ಅರ್ಪಿಸಿದ ಕಥನ ನಮ್ಮ ಮುಂದಿದೆ).

ಮದುವೆಯಾದರೆ ಮದುಮಗಳು ಮೊದಲ ರಾತ್ರಿಯನ್ನು ನಂಬೂದರಿ ಸ್ವಾಮಿಗಳ ಹಾಸಿಗೆಯಲ್ಲಿ ಕಳೆಯಬೇಕು. ಯುವತಿಯರು ಋತುಮತಿಯಾಗುವ ಮೊದಲೇ ಯಾವುದಾದರು ಒಬ್ಬ ವ್ಯಕ್ತಿಯಿಂದ ತಾಳಿಕಟ್ಟಿಸುವ ‘ ತಾಳಿಕೆಟ್ಟು ಕಲ್ಯಾಣo ‘ ಅಣಕು ಮದುವೆಯ ಪದ್ದತಿ ಅಮಾನವೀಯವಾದ ಸಂಪ್ರದಾಯದ ದ್ಯೋತಕವಾಗಿತ್ತು. ಕೆಳ ವರ್ಗದ ಹೆಣ್ಣು ಮಕ್ಕಳು ಮೈನೆರೆದಾಗ ಸಾರ್ವಜನಿಕವಾಗಿ ಘೋಷಿಸುವ ‘ತಿರುಂಡ್ ಕಲಿ’ ಪದ್ಧತಿ. ಗರ್ಭಿಣಿಯಾದಾಗ ‘ ಪುಲೂಕೂಡಿ’ ಎಂಬ ಸೀಮಂತ ನಡೆಸುವ ಅಂಧ ಸಂಪ್ರದಾಯ, ಸತ್ತರೆ ಶ್ಮಶಾನ ತೆರಿಗೆ.. ಇಂಥ ನೂರಾರು ಸಂಪ್ರದಾಯಗಳಿಂದ ಈಳವ ಕುಟುಂಬಗಳು ನಂಬೂದರಿ ನಾಯರ್ ಗಳ ಸಾಲಗಾರರಾಗಿ ಜೀವನದುದ್ದಕ್ಕೂ ಜೀತಗಾರರಾಗಿ ಬದುಕು ಸವೆಸುತ್ತಿದ್ದದ್ದನ್ನು ಅನಾವರಣ ಗೊಳಿಸುವ ದೃಷ್ಯಗಳು ಸಾಮಾನ್ಯರ ಧಾರುಣತೆಯನ್ನು ಕಂಡಾಗ ನಾವು ಯಾವ ಅನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ನಾಟಕ ನೆನಪಿಸುತ್ತವೆ.

ದೇವಾಲಯದ ಒಳಗೆ ಶೂದ್ರರು ಮತ್ತು ಕೆಳಜಾತಿ ಜನರು ಕಾಲಿಡುವಂತಿಲ್ಲ. ಇದು ಅಂದಿನ ಕೇರಳದ ಸ್ಥಿತಿ. ಇಂದಿಗೂ ಎಷ್ಟೇ ಮಹಾಪುರುಷರು ಬಂದರೂ ದೇಶದಲ್ಲಿ ಆ ಪರಿಸ್ಥಿತಿ ಹಾಗೇ ಜೀವಂತವಾಗಿ ಉಳಿಯಲು ಆಧುನಿಕ ಕಾಲದಲ್ಲಿ ಹೊಸ ವೇಷತೊಟ್ಟು ಅವತರಿಸಿ ಊಳಿಡುತ್ತಾ ಕಣ್ಣೆದುರಿಗೆ ತರಾವರಿ ಕುಣಿತದ ವರಸೆಯನ್ನು ಮತ ಮೌಢ್ಯದ ರಾಕ್ಷಸ ತೋರುತ್ತಿದೆ. ಇನ್ನೂ ಸ್ವಲ್ಪ ಹಿಂದಕ್ಕೆ ಹೋದರೆ, ಹನ್ನೆರಡನೇ ಶತಮಾನದ ಕರ್ನಾಟಕದಲ್ಲಿ ಬಸವವಾದಿ ಶಿವ ಶರಣರು ನಡೆಸಿದ ವಚನ ಚಳುವಳಿ , ದೇವರನ್ನು ನಿಜವಾದ ಆಧ್ಯಾತ್ಮ ತತ್ವವನ್ನೂ ಜನರೆಡೆಗೆ ಕೊಂಡೊಯ್ಯಲು ದ್ವೇಷರಹಿತ, ಸಮಾನತೆಯನ್ನು ಅನುಭವ ಮಂಟಪದಲ್ಲಿ ಚಿಂತನ ಮಂಥನಗಳ ಮೂಲಕ ವೈಧಿಕ ಧರ್ಮಕ್ಕೆ ಪರ್ಯಾಯ ವಾಗಿ ವಿಶಿಶ್ಟಾದ್ವೈತ ಕಲ್ಪನೆಯ ಶರಣ ಧರ್ಮವನ್ನ ಬಸವಣ್ಣ ಕಟ್ಟಿದರು. ಲಕ್ಷಾಂತರ ಜನರು ಶರಣ ಧರ್ಮ ಸ್ವೀಕರಿಸುವಂತೆ ಧಾರ್ಮಿಕ ಆಂದೋಲನ ನಡೆಸಿ ದೇವರನ್ನು ಭಕ್ತರ ಕೊರಳಿಗೆ ಸಾಂಕೇತಿಕವಾಗಿ ಕಟ್ಟಿ :
“ಉಳ್ಳವರು ಶಿವಾಲಯ ಮಾಡಿಹರು
ನಾನೇನ ಮಾಡುವೆ ಬಡವನಯ್ಶಾ
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೆ ಹೊನ್ನ ಕಲಶವಯ್ಶಾ
ಕೂಡಲಸಂಗಮದೇವಾ ಕೇಳಯ್ಶ
ಸ್ಥಾವಕ್ಕಳಿವುಂಟು ಜಂಗಮಕ್ಕಳಿವಿಲ್ಲ”

ಎಂದು ರೂಡಿಗತ ದೇವರು ದೇವಸ್ತಾನ ಎರಡನ್ನೂ ತಿರಸ್ಕರಿಸಿ ಹೊಸ ಧರ್ಮಕ್ಕೆ ನಾಂದಿಹಾಡಿದರು. ದೇವರು ದೇವಸ್ತಾನ ಪುರೋಹತಶಾಹಿಗಳ ಬಂದಂದಲ್ಲಿದ್ದಾಗ ಬಸವಣ್ಣ ದೇಹವನ್ನೇ ದೇವಾಲಯಮಾಡಿ ಮನುಷ್ಯನ ಅಂತರಂಗದಲ್ಲಿ ನೆಲೆಗೊಂಡಿರುವ ದೇವರನ್ನು ತೋರಿದರು. ಜಾತಿತಾರತಮ್ಯದ ನೀತಿ ನಿಯಮಗಳನ್ನು ದಿಕ್ಕರಿಸಿ ಹೊಸ ಸಮಾನತೆಯ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಲು, ಆರಾಧಿಸಲು ಬಸವಣ್ಣ ತಿಳಿಹೇಳಿದ. ಪುರಾಣಗಳು ಯಾರ್ಯಾರಿಗೆ ಮಾರಿ ಆದವು ಎಂಬುದನ್ನು ಒಂದು ವಚನದಲ್ಲಿ ವೈಧಿಕ ಧರ್ಮ ಸೃಷ್ಟಿಸಿರುವ ಪುರಾಣಗಳ ಅಲ್ಲಗಳಿದು ಶಿವನಿಗೆ ಪ್ರತಿಯಿಲ್ಲ.. ಅವನು ಎಲ್ಲರಲ್ಲಿಯೂ ಅಂತರ್ಗತ ವಾಗಿರುವವನು ಎಂದು ಬಸವ್ಣನವರು ಪ್ರತಿಪಾದಿಸುತ್ತಾರೆ.
“ಆದಿ ಪುರಾಣ ಅಸುರರಿಗೆ ಮಾರಿ
ವೇದಪುರಾಣ ಹೋತಿಂಗೆ ಮಾರಿ
ರಾಮಾಪುರಾಣ ರಕ್ಕಾಸರಿಗೆ ಮಾರಿ
ಭಾರತಪುರಾಣ ಗೋತ್ರಕ್ಕೆ ಮಾರಿ
ಎಲ್ಲ ಪುರಾಣ ಕರ್ಮಕ್ಕೆ ಮೊದಲು
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ”

ಎಂದು ಹಾಡಿದರು. ಬಸವಣ್ಣನ ಜೊತೆಗೆ ಕೆಳವರ್ಗದ ಎಲ್ಲರೂ ವಚನಕಾರರಾಗಿ ಹಾಡಿದರು, ಶಿವನ ಕುರಿತು ಅನುಭವ ಮಂಟಪದಲ್ಲಿ ಆ ಜಾತಿ ಈ ಜಾತಿ ಎನ್ನದೆ ಜೊತೆಯಾಗಿ ಚಿಂತಿಸಿದರು.
“ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ
ಇಹ ಲೋಕದೊಳಗೆ ಮತ್ತೇ ಅನಂತಲೋಕ
ಶಿವಲೋಕ ಶಿವಾಚಾರವಯ್ಯಾ
ಶಿವಭಕ್ತನಿದ್ದ ಠಾವೆ ದೇವಲೋಕ
ಭಕ್ತನಂಗಳವೆ ವಾರಣಾಸಿ
ಕಾಯಕವೇ ಕೈಲಾಸ
ಇದು ಸತ್ಯ
ಕೂಡಲಸಂಗಮದೇವಾ”

ಎನ್ನುತ್ತಾ ಬಸವಣ್ಣ ಸುರಲೋಕ ನರಲೋಕಗಳ ಬೇಧವಳಿಸಿ ಇಹಲೋಕದಲ್ಲೇ ಕಾಯಕ ತತ್ವದ ಮೇಲೆ ಜನರಿಗೆ ಕೈಲಾಸದ ಅರಿವು ಮೂಡಿಸಿದರು. ಅಲ್ಲಮ ಪ್ರಭು ಸ್ಥಾವರರೂಪಿ ಮೂರ್ತಿಯಾಗಿರುವ ದೇವರನ್ನೂ ಹೀಗೆಳೆದು ನಿರಾಕಾರ ನಿರ್ಗುಣನಾದ ಜಂಗಮ ಸ್ವರೂಪಿ ದೇವನನ್ನು ತೋರಿ ಸನಾತನ ಪ್ರಮಾಣಗಳನ್ನು ನಿರಾಕರಿಸಿ ನಿಜದ ಭಕ್ತಿ ಮತ್ತು ಗುಹೇಶ್ವರನನ್ನು ಕಾಣುವ ಅಲ್ಲಪ್ರಭುವಿನ ಪರಿ ಇದು:
“ವೇದವೆಂಬುದು ಓದಿನ ಮಾತು
ಶಾಸ್ತ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಠಿ
ತರ್ಕವೆಂಬುದು ತಗರ ಹೋರಟೆ
ಭಕ್ತಿ ಎಂಬುದು ತೋರುಂಬ ಲಾಭ
ಗುಹೇಶ್ವರನೆಂಬುದುಮೀರಿದ ಘನವು”
ಎಂದು ಸಾರಿದರು.
ನಾಟಕದ ಪ್ರಧಾನ ಪಾತ್ರವಾಗಿ ನಿರೂಪಿತವಾಗಿರುವ ನಾರಾಯಣಗುರುಗಳು ಬಸವಣ್ಣ ಮತ್ತು ಇನ್ನಿತರ ಶರಣರಂತೆ ದೇವಾಲಯ ಮತ್ತು ಮೂರ್ತಿರೂಪದ ಶಿವನನ್ನು ತಿರಸ್ಕರಿಸಲಿಲ್ಲ . ನಿಮ್ನ ವರ್ಗದ ಜನರ ಆರಾಧನೆಗೆ ಸನಾತನ ಧರ್ಮ , ದೇವಸ್ಥಾನದ ಕಲ್ಪನೆಯನ್ನೂ ತಿರಸ್ಕರಿಸಲಿಲ್ಲ. ಎಂಬದನ್ನು ಮನನ ಮಾಡಿಸುತ್ತದೆ. ಕಲ್ಯಾಣ ಕ್ರಾಂತಿಯ ಚರಿತ್ರೆಯ ಅರಿವಿರುವಂತೆ ಗುರುಗಳಿಗೆ ಕಾಣುತ್ತದೆ. ಅಲ್ಲದೇ ಸನಾತನ ಪುರೋಹತಶಾಹಿಗಳ ಅವರ ಹುನ್ನಾರಗಳ ಕಾಳತಂತ್ರಗಳು ತಿಳಿದವರಾಗಿ ದೇವಾಲಯ ಪ್ರವೇಶಕ್ಕೂ ತನ್ನ ಈಳವ ಮತ್ತು ಪುಲಯ ಮತ್ತಿತರ ಜಾತಿ ಜನರನ್ನು ಪ್ರಚೋದಿಸದೆ ಉಪಾಯವಾಗಿ ಕೆಳ ವರ್ಗದ ಜನರಿಗೆ ತಮ್ಮದೇ ದೇವಾಲಯ ನಿರ್ಮಿಸಿ ನದಿಯ ನೀರಿನಿಂದ ಒಂದು ಕಲ್ಲನ್ನು ತಂದು ಪ್ರತಿಷ್ಠಾಪನೆ ಮಾಡಿ ಪೂಜೆಗೆ ಅವಕಾಶ ಕಲ್ಪಿಸಿದರು.

ಸನಾತನ ನಾಂಬೂದರಿಗಳು ಕೀಳು ಕುಲದ ಈಳವನಾದ ನೀನು ಶಾಸ್ತ್ರದ ಪ್ರಕಾರ, ವಾಸ್ತು ಶಿಲ್ಪಶಾಸ್ತ್ರದ ಪ್ರಕಾರ ದೇವಸ್ತಾನ ನಿರ್ಮಿಸದೆ ಅದು ಅಶುದ್ಧವಾಗಿದೆ, ನಿನ್ನ ದೇವರು ಅಶುದ್ಧ! ಎಂದು ಹೀಯಾಳಿಸಿದಾಗ ನಾರಯಣ ಗುರುಗಳು ‘ ನಾನು ನಿಮ್ಮ ಶಾಸ್ತ್ರ ಸಮ್ಮತ ಶಿವನನ್ನು ಪ್ರತಿಷ್ಠಾಪಿಸಿಲ್ಲ. ನಾನು ಪ್ರತಿಷ್ಠಾಪನೆ ಮಾಡಿರುವುದು ‘ ಈಳವ ಶಿವ ‘ .. ಶೂದ್ರಶಿವ”ನನ್ನು ಎಂದು ನಂಬೂದರಿಗಳ, ಅವರ ಬಾಲಬಡುಕರ ಬಾಯಿ ಮುಚ್ಚಿಸುತ್ತಾರೆ. ಪುಟ್ಟದಾಗಿ ದೇವಾಲಯ ನಿರ್ಮಿಸಿ ಅದರ ಸುತ್ತಲೂ ಶಿಕ್ಷಣಕ್ಕೆ ಆಲಯವನ್ನೇ ನಿರ್ಮಿಸುತ್ತಾರೆ. ತಳ ಸಮುದಾಯಗಳ ಮೈತ್ರಿ, ಸಮಾನತೆ ಐಕ್ಯೆಯನ್ನು ಆಧ್ಯಾತ್ಮಿಕ ಕ್ರಾಂತಿಯ ಹರಿಕಾರರಾಗಿ ಸಾಧಿಸಿ ಔದ್ಯೋಗಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜಿಸುತ್ತಾರೆ. ಕುಲಕಸುಬು ಸೇಂದಿ ಇಳಿಸುವ, ಮಾರುವ , ಕುಡಿಯುವ ದಂದೆಯಿಂದ ಮುಕ್ತಗೊಳಿಸಿ ಪರ್ಯಾಯ ಗುಡಿಕೈಗಾರಿಕೆಗೆ ಮಹತ್ವ ಕೊಟ್ಟು ಜನರನ್ನು ಶಿಕ್ಷಣದ ಮೂಲಕ ಮೇಲಕ್ಕೆತ್ತುವ ಈ ಕಾರ್ಯವು ಸಾಮಾನ್ಯರಿಗೆ ಪವಾಡವಾಗಿ ಕಂಡರೆ ಅಚ್ಚರಿಯ ಸಂಗತಿಯಲ್ಲ.

“ಅಸತ್ಯ ದರ್ಶನ” ಎಂಬ ತಮ್ಮ ಕೃತಿಯಲ್ಲಿ ಪ್ರತಿಪಾದಿಸಿರುವ ದರ್ಶನ: ಈ ಲೋಕದಲ್ಲಿ ಸತ್ಯ ಎಂಬುದು ಒಂದೇ, ಎರಡಿಲ್ಲ. ಮನುಷ್ಯನ ಜೀವಾತ್ಮ ಪಂಚೇಂದ್ರಿಯಗಳ ಸಂಕೋಲೆ ಯಲಿ ಸಿಲುಕಿ ಅಸತ್ಯವೂ ಸತ್ಯದಂತೆ ಕಾಣುತ್ತದೆ . ನಾವು ದೇವರನ್ನು ಕಾಣಬೇಕಾಗಿರುವುದು ನಮ್ಮೊಳಗಿರುವ ದೇಹವೆಂಬ ದೇವಾಲಯದಲ್ಲಿ, ಕಲ್ಲು ಮಣ್ಣಿನ ಮೂರ್ತಿ ಗಳಲಲ್ಲ. ದ್ವೇಷವಿಲ್ಲದ ಧರ್ಮ ಸ್ಥಾಪನೆ ನಾರಯಣ ಗುರುಗಳ ಅದ್ವೈತ ಚಿಂತನೆ. ಮೊದಮೊದಲು ಶಿವನ ಪ್ರತೀಕವಾಗಿ ಕಲ್ಲನ್ನು ಶಿವಲಿಂಗ ಎಂದು ಪ್ರತಿಷ್ಠಾಪಿಸಿ ಆ ನಂತರದ ಕಾಲದಲ್ಲಿ.. ಗುಡ್ಡದ ಕಲ್ಲಿನಿಂದ ಕಲಾವಿದನ ಉಳಿ ಒಡೆತಕ್ಕೆಅವನ ಹೃದಯ ದಲ್ಲಿ ನೆಲೆಸಿದ್ದ ದೇವರು ‘ ಮೂರ್ತಿ’ ಯ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಶಿಲ್ಪಿ ಯೊಳಗಿನ ಆತ್ಮ ದಲ್ಲಿರುವ ರೂಪವೇ ದೇವರು ಎಂಬುದು ಅವರ ಅಭಿಮತ. ನಾವು ದೇವರನ್ನು ನಿಜಕ್ಕೂ ಸಾಕ್ಷಾತ್ಕರಿಸ ಬೇಕಾಗಿರುವುದು ವಿವಿಧ ಮೂರ್ತಿಗಳಲ್ಲಲ್ಲ, ಸ್ಥಾವರಗೊಂಡ ದೇವಾಲಯಗಳಲ್ಲಲ್ಲ, ಭಜನೆ ಪ್ರಾಣಿ ಬಲಿ, ಮೆರವಣಿಗೆ ಉತ್ಸವಗಳಲ್ಲಿ ಅಲ್ಲ. ನಮ್ಮ ಹೃದಯದೊಳಗಿರುವ ದೇವರನ್ನೂ ಅರಿತು ಕೊಳ್ಳುವುದರ ಮೂಲಕ ಎಂಬ ಅವರ ಧಾರ್ಮಿಕ ಚಿಂತನೆ.


| ಮುಂದುವರಿಯುವುದು |

‍ಲೇಖಕರು avadhi

February 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: