ಸಿ ಜಿ ಕೆ ನೆನಪಿನಲ್ಲಿ ಉಗಮ ಶ್ರೀನಿವಾಸ್ ಬರೆದ ಕವನ ಅವಧಿ ಓದುಗರಿಗಾಗಿ
ಉಗಮ ಶ್ರೀನಿವಾಸ್
ರಂಗ ನಿದೇ೯ಶಕ, ಸಂಘಟಕ ಸಿ.ಜಿ.ಕೆ ಅವರು ನಮ್ಮನ್ನಗಲಿ ಇದೇ ತಿಂಗಳ 10 ಕ್ಕೆ 6 ವಷ೯ವೇ ಕಳೆದು ಹೋಯಿತು. ಅವರು ನಿಧನರಾಗಿದ್ದಾಗ ಅವರ ಬಗ್ಗೆ ಬರೆದ ಪದ್ಯ ಇದು

ಸಿಜಿಕೆ…….
ನೀವೊಂದು ಶುದ್ಧ ಕವಿತೆಯ ಹಾಗೆ!
ಬೆಟ್ಟವನ್ನು ಕರಗಿಸಬಲ್ಲಿರಿ
ಒಂದೆಸಳ ಹುಲ್ಲಲ್ಲೂ
ಉದ್ಯಾನವನ ಬೆಳೆಸಬಲ್ಲಿರಿ.
.
ನೀವೊಂದು ಪ್ರತಿಮೆ!
ಕಡೆದಿಟ್ಟ ಶಿಲೆಯ ಮೇಲೆ ಕೂತ
ಹಕ್ಕಿಯನ್ನು ಮಾತಿಗೆಳೆಯುವಿರಿ.
.
ನೀವೊಂದು ಬತ್ತದ ನದಿ
ಹರಿಯುವ ನದಿಗೆ
ಮೈಯೆಲ್ಲಾ ಕಾಲು ಎನ್ನುವ ಹಾಗೆ
ನುಗ್ಗುತ್ತಲೇ ಇದ್ದಿರಿ
ದಣಿವಿಲ್ಲದಂತೆ.
.
ನೀವೊಂದು ಬೇರು ಬಿಟ್ಟ ಮರ
ಗೂಡು ಕಟ್ಟುವ ಹಕ್ಕಿಗಳಿಗೆ
ಜಾಗ ಕೊಟ್ಟಿರಿ
ದಾರಿ ಹೋಕರಿಗೆ ನೆರಳು ಕೊಟ್ಟಿರಿ.
.
ನೀವೊಬ್ಬ ಪವಾಡ ಪುರುಷ
ಮಾಯಾವಿ ಮಾಡದ್ದನ್ನು
ಜಾದೂಗಾರನಿಗೆ ಕೈಗೆಟುಕದ್ದನ್ನು
ಮಾಡಿ ತೋರಿಸಿದಿರಿ.
.
ನೀವೊಬ್ಬ ಸಂತ,
ಸ್ವಂತಕ್ಕಲ್ಲ
ಖಾವಿ ತೊಡದೆ
ಕಲ್ಯಾಣ ಕಟ್ಟಿದಿರಿ!





wow!!
ಹೌದು ಸರ್, ಸಿಜಿಕೆ ಸರ್ ಇದ್ದಿದ್ದೇ ಹಾಗೆ….ಆಗುವುದಿಲ್ಲವೆಂಬುದನ್ನು ಮಾಡಿ ತೋರಿಸಿದ ರಂಗ ಮಹಾತ್ಮರು !