ಸಿ ಎಸ್ ಭೀಮರಾಯ ಓದಿದ ‘ಯುದ್ಧ ಕಾಲದ ಹುಡುಗಿಯರು’

ಸಿ ಎಸ್ ಭೀಮರಾಯ

ಚಿನುವಾ ಅಚೆಬೆ (ನವೆಂಬರ್ ೧೬, ೧೯೩೦- ಮಾರ್ಚ್ ೨೨, ೨೦೧೩) ಆಫ್ರಿಕನ್ ಸಾಹಿತ್ಯ ಕಂಡ ಪ್ರಮುಖ ಕವಿ, ಕಥೆಗಾರ, ಪ್ರಬಂಧಕಾರ, ಕಾದಂಬರಿಕಾರ ಮತ್ತು ವಿಮರ್ಶಕ. ಅಚೆಬೆ ಸಾಹಿತ್ಯದಲ್ಲಿ ಇಡೀ ಆಫ್ರಿಕಾ ಖಂಡವನ್ನು ಪ್ರತಿನಿಧಿಸಬಲ್ಲಷ್ಟು ಬೀಸಿನ ಶಕ್ತ ಲೇಖಕ. ಅವನು ಆಫ್ರಿಕನ್‌ರ ಅದರಲ್ಲೂ ವಿಶೇಷವಾಗಿ ನೈಜೇರಿಯಾದ ಇಗ್ಬೋ ಜನಾಂಗದ ಕಥನಗಳನ್ನು ವಿಶ್ವದ ಓದುಗರಿಗೆ ಸಮರ್ಥವಾಗಿ ಪರಿಚಯಿಸಿದ್ದಾನೆ. ಅಚೆಬೆಯ ಕೃತಿಗಳು ಮುಖ್ಯವಾಗಿ ಆಫ್ರಿಕಾದ ಜನಾಂಗಗಳ ಮೇಲೆ ಬ್ರಿಟಿಷ್ ಸಾಮ್ಯಾಜ್ಯಶಾಹಿ ಬೀರಿದ ಪರಿಣಾಮಗಳನ್ನು ವಿಶ್ಲೇಷಿಸುತ್ತವೆ. ಅವನ ‘ಥಿಂಗ್ಸ್ ಫಾಲ್ ಅಪಾರ್ಟ್’ (೧೯೫೮) ಕಾದಂಬರಿ ನೈಜೇರಿಯಾದ ಆದಿವಾಸಿ ಜನಾಂಗಗಳ ಜೀವನ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದಾಗಿ ಛಿದ್ರಗೊಳ್ಳುವ ಪರಿಯನ್ನು ದಟ್ಟವಾದ ವಿವರಗಳಲ್ಲಿ ಚಿತ್ರಿಸುತ್ತದೆ.

ಈ ಕಾದಂಬರಿ ಪ್ರಕಟವಾದಾಗ ಅಚೆಬೆಯ ವಯಸ್ಸು ಕೇವಲ ಇಪ್ಪತ್ತೆಂಟು. ‘ಆ್ಯರೋ ಆಫ್ ಗಾಡ್’ (೧೯೬೪), ‘ನೋ ಲಾಂಗರ್ ಎಟ್ ಈಸ್’ (೧೯೬೦), ‘ಎ ಮ್ಯಾನ್ ಆಫ್ ದಿ ಪೀಪಲ್’ (೧೯೬೬), ‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’ (೧೯೮೭)-ಮುಂತಾದವು ಅಚೆಬೆಯ ಬಹು ಮುಖ್ಯ ಕೃತಿಗಳು. ಐದು ಕಾದಂಬರಿಗಳು, ಸಣ್ಣಕಥೆಗಳು, ಕವನ, ಪ್ರಬಂಧ, ವಿಮರ್ಶೆ ಮತ್ತು ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದಿರುವ ಅಚೆಬೆ, ವಸಾಹತುಶಾಹಿ ರಾಜಕೀಯ -ಸಾಂಸ್ಕೃತಿಕ ರಾಜಕಾರಣದ ಕಟುವಿಮರ್ಶಕನಾಗಿ ಪ್ರಸಿದ್ಧ. ನೈಜೇರಿಯಾದ ಅಸ್ತಿತ್ವದ ಬುಡಕ್ಕೇ ಕೊಡಲಿ ಹಾಕುವ ಪಾಶ್ಚಾತ್ಯರ ಧೋರಣೆಯನ್ನು ಖಂಡಿಸಿ ತನ್ನ ಜೀವನದುದಕ್ಕೂ ಅದನ್ನು ವ್ರತದ ಹಾಗೆ ಪೋಷಿಸಿ ಕಾಪಾಡಿಕೊಂಡು ಬಂದವನು ಅಚೆಬೆ. ಅವನು ತನ್ನ ದೇಶದ ಸಾಹಿತ್ಯ ಕೃಷಿಕರಿಗೆ ಸೃಷ್ಟಿಕ್ರಿಯೆ ಕುರಿತು ಆತ್ಮಗೌರವದ ನೆಲೆಗಟ್ಟಿನ ಹೊಸ ಪರಿಕಲ್ಪನೆಗಳನ್ನು ಒದಗಿಸಿ ಪ್ರವರ್ತಕನೆನಿಸಿದ್ದಾನೆ. ತನ್ನವರ ದೇಶೀಯ ದನಿಗೆ ಅಭಿವ್ಯಕ್ತಿಯ ಸಾಧ್ಯತೆಯನ್ನು, ತನ್ನವರ ಬದುಕಿನ ನೈಜತೆಗೆ ಮಿಡಿಯುವ ಸ್ವರೂಪಗಳನ್ನು ಮತ್ತು ಮನ್ನಣೆಯನ್ನು ಒದಗಿಸಿಕೊಟ್ಟ ಧೀಮಂತಿಕೆ ಅವನದು.

‘ಥಿಂಗ್ಸ್ ಫಾಲ್ ಅಪಾರ್ಟ್’ ಹಲವು ಕಾರಣಗಳಿಗಾಗಿ ಒಂದು ಮಹತ್ವದ ಕಾದಂಬರಿ. ಇದು ಜಗತ್ತಿನ ಐವತ್ತು ಭಾಷೆಗಳಿಗೆ ಅನುವಾದಗೊಂಡಿದ್ದು, ಎರಡು ಕೋಟಿಗೂ ಹೆಚ್ಚಿನ ಪ್ರತಿಗಳು ಮಾರಾಟವಾಗಿ ಏಕಕಾಲದಲ್ಲಿ ಸಾಮಾನ್ಯ ಓದುಗರ ಮತ್ತು ವಿಮರ್ಶಕರ ಆದರಕ್ಕೆ ಪಾತ್ರವಾಗಿದೆ. ಕನ್ನಡದಲ್ಲಿ ಇದರ ಎರಡು ಅನುವಾದಗಳಿವೆ. ಡಾ. ಸಿ. ನಾಗಣ್ಣ ‘ಭಂಗ’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಡಾ. ಪ್ರಮೋದ್ ಮುತಾಲಿಕ್ ಅವರು ‘ಕಳಚಿದ ಕೊಂಡಿ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಜಗತ್ತಿನ ಪ್ರಮುಖ ಲೇಖಕರ ಶ್ರೇಷ್ಠ ಕೃತಿಗಳು ಕನ್ನಡದಲ್ಲಿ ಸಿಗುವುದು ನಮ್ಮ ಸುದೈವ. ಅಚೆಬೆಯ ಕೆಲವು ಕಥೆಗಳು ಮತ್ತು ಕಾದಂಬರಿಗಳು ನಮ್ಮ ರಾಜ್ಯದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಬೋಧಿಸಲ್ಪಡುತ್ತಿವೆ. ಕನ್ನಡದ ಓದುಗರಿಗೆ ಆಫ್ರಿಕಾದ ಬರಹಗಾರರಲ್ಲಿ ಅಚೆಬೆ, ಗೂಗಿ, ಓಲೆ ಸೋಯಿಂಕಾ ಮತ್ತು ಓಲೆ ಕುಲೆಟ್ ಸ್ವಲ್ಪ ಪರಿಚಿತರು.

ಚಿನುವಾ ಅಚೆಬೆಯ ‘Girls at War’ ಎಂಬ ಏಕೈಕ ಕಥಾಸಂಕಲನವನ್ನು ಡಾ. ಚನ್ನಪ್ಪ ಕಟ್ಟಿಯವರು ‘ಯುದ್ಧ ಕಾಲದ ಹುಡುಗಿಯರು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸಂಕಲನದಲ್ಲಿ ಹನ್ನೆರಡು ಕಥೆಗಳಿವೆ. ಅಚೆಬೆಯ ಕಥೆಗಳ ವಸ್ತು ವಸಾಹತುಶಾಹಿಯ ಪ್ರವೇಶದಿಂದ ಸಮಕಾಲೀನ ಆಫ್ರಿಕನ್ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣ ಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಾದ ಪರಿಣಾಮಗಳು, ಆತಂಕ-ತಲ್ಲಣಗಳು, ನೂತನ ಆಸೆ-ಆಕಾಂಕ್ಷೆಗಳು, ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ನಡುವಿನ ಸಂಘರ್ಷ, ಹೊಂದಾಣಕೆ-ರಾಜಿಸೂತ್ರಗಳು. ಹಾಗೆಯೇ ಯುದ್ಧ, ವರ್ಗ, ವರ್ಣ, ಜಾತಿ, ಮತಾಂತರ ಮತ್ತು ಭ್ರಷ್ಟಚಾರದ ಕರಾಳ ಮುಖಗಳನ್ನು ಈ ಸಂಕಲನದ ಹಲವಾರು ಕಥೆಗಳು ದಾಖಲಿಸುತ್ತವೆ. ಒಂದು ಸಂಸ್ಕೃತಿಯು ಇನ್ನೊಂದು ಸಂಸ್ಕೃತಿಗೆ ಮುಖಾಮುಖಿಯಾದಾಗ ಹುಟ್ಟುವ ಬೆರಗು ಮತ್ತು ತಲ್ಲಣಗಳನ್ನು ಅಚೆಬೆ ಸಮೃದ್ಧವಾದ ವಿವರಗಳಲ್ಲಿ, ಲವಲವಿಕೆಯ ನಿರೂಪಣೆಯಲ್ಲಿ ಸೊಗಸಾಗಿ ನಿರೂಪಿಸಿದ್ದಾನೆ.

ಲೇಖಕನ ಕಥನಪ್ರತಿಭೆಗಾಗಿ, ನಮ್ಮಂತೆ ಇರುವ ಇನ್ನೊಂದು ದೇಶ ಮತ್ತು ಜನಸಮುದಾಯದ ಸಾಂಸ್ಕೃತಿಕ ತಿಳುವಳಿಕೆಗಾಗಿ, ಈ ಕಥನಗಳಲ್ಲಿ ಮೂಡಿಬರುವ ಸತ್ಯ, ಪ್ರಾಮಾಣ ಕತೆ, ಮನುಷ್ಯತ್ವ, ಮಾನವೀಯತೆ ಮತ್ತು ವೈಚಾರಿಕತೆಗಳ ಸ್ಪರ್ಶಕ್ಕಾಗಿ ಅಚೆಬೆಯ ಬರವಣ ಗೆಯನ್ನು ಓದಲೇಬೇಕು. ಈ ಸಂಕಲನದಲ್ಲಿರುವ ಬಹುತೇಕ ಎಲ್ಲ ಕಥೆಗಳಲ್ಲಿ ಭಾರತೀಯತೆ ಹೋಲುವ ಆಫ್ರಿಕನ್‌ರ ಜೀವನದ ನೋಟಗಳು, ಯುವಪೀಳಿಗೆಯ ಕನಸುಗಳು, ಪ್ರೀತಿ, ಪ್ರೇಮ, ಫ್ಯಾಷನ್ ಮೋಹ, ಈ ಮೋಹಕ್ಕೆ ಹೊಂದಿಕೊಳ್ಳಲಾಗದ ಹಳೆಗಾಲದ ಹಿರಿಕರ ಹಳಹಳಿಕೆಗಳು ಪ್ರತಿಯೊಂದು ಪುಟದಲ್ಲಿಯೂ ಕಾಣಸಿಗುತ್ತವೆ. ಆಫ್ರಿಕನ್‌ರ ಬದುಕು, ಆಶೋತ್ತರ, ಭಾವನೆಗಳು ಮತ್ತು ಮೌಲ್ಯಗಳು ಭಾರತೀಯರಿಗೆ ಹೆಚ್ಚು ನಿಕಟವಾಗಿ ಹೋಲಿಕೆಯಾಗುವುದರಿಂದ ಇಲ್ಲಿನ ಕಥೆಗಳು ನಮ್ಮವೇ, ನಮ್ಮ ನಡುವಿನಲ್ಲಿ ಇಲ್ಲೇ ಎಲ್ಲೋ ನಡೆದಂತವೇ ಇವು, ಇನ್ನೂ ನಡೆಯುತ್ತಿರುತ್ತವೇ ಎನ್ನಿಸುತ್ತವೆ.

‘ಮದುವೆಯೆಂಬುದು ಖಾಸಗಿ ಸಂಗತಿ’ ಕಥೆ ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ಚಿತ್ರಿಸುತ್ತದೆ. ಯುವಜನಾಂಗದ ಪ್ರಜ್ಞೆಯ ಮೂಲಕವೇ ಇಡೀ ಆಪ್ರಿಕನ್‌ರ ಮನಸ್ಸಿನ ಆಧುನಿಕತೆ, ವೈಚಾರಿಕತೆ, ಸಂಪ್ರದಾಯಬದ್ಧತೆ, ನೈತಿಕತೆಗಳ ಸ್ವರೂಪವನ್ನು ಅಚೆಬೆ ಈ ಕಥೆಯಲ್ಲಿ ವಿಶ್ಲೇಷಿಸಿದ್ದಾನೆ. ಸಾಂಪ್ರದಾಯಿಕ ಜನರ ದೃಷ್ಟಿಯಲ್ಲಿ ನೆಮೆಕಾ ಮತ್ತು ನೆನೆಯರ ಪ್ರೇಮವಿವಾಹ ಲಜ್ಜೆಗೇಡಿತನವೇ. ಆದರೆ ಕಥೆಗಾರ ಅಚೆಬೆಯ ನೈತಿಕ ಮತ್ತು ತಾತ್ವಿಕ ದೃಷ್ಟಿ ಇದಕ್ಕೆ ಭಿನ್ನವಾದದ್ದು. ನೆಮೆಕಾ ಮತ್ತು ನೆನೆಯರ ಬದುಕಿನ ಆಯ್ಕೆ, ಸ್ವಾತಂತ್ರ್ಯವನ್ನು ಕಥೆ ವಿಜೃಂಭಿಸುವ೦ತೆ ಕಂಡುಬರುತ್ತದೆ. ಈ ಕಥೆಯ ನಾಯಕ ನೆಮೆಕಾ ಮತ್ತು ನಾಯಕಿ ನೆನೆಯರು ಬೇರೆ ಧರ್ಮದವರಾಗಿದ್ದರೂ ಆಲೋಚನಾ ಕ್ರಮದಲ್ಲಿ ಸಾಮ್ಯತೆಯಿದೆ. ಜೀವನೋತ್ಸಾಹದ ಸಂಕೇತವಾದ ನೆಮೆಕಾ ಮತ್ತು ನೆನೆಯರ ಪ್ರೀತಿ ಸಂಪ್ರದಾಯಬದ್ಧ ವ್ಯಕ್ತಿ ಓಕೆಕಿ ಮನಸ್ಸನ್ನು ಮೆಟ್ಟಿನಿಲ್ಲುತ್ತದೆ. ನೆಮೆಕಾ ಭಾವಾವೇಶದಿಂದ ತನ್ನ ಪ್ರೀತಿ ಮತ್ತು ಮದುವೆಯ ವಿಚಾರಗಳನ್ನು ತಂದೆ ಓಕೆಕಿಯ ಮುಂದಿಟ್ಟಾಗ, ಓಕೆಕಿ ಪ್ರತಿಕ್ರಿಸುವ ರೀತಿಯಲ್ಲಿ ದಟ್ಟವಾದ ಜೀವನಾನುಭವವಿದೆ. ನೆಮೆಕಾ ಮತ್ತು ನೆನೆ ಹೊಸಜೀವನದಲ್ಲಿ ಬದಲಾದ ಜೀವನಕ್ರಮಗಳಿಗೆ, ಮೌಲ್ಯ-ಆದ್ಯತೆಗಳಿಗೆ ತಾವೇ ಸಾಕ್ಷಿಯಾಗುವುದು ಈ ಕಥೆಯಲ್ಲಿ ಬಹಳ ಸುಂದರವಾಗಿ ನಿರೂಪಿತವಾಗಿದೆ.

ರಾಜಕೀಯ ಕ್ಷೇತ್ರದ ಭ್ರಷ್ಟತೆ, ಅನೀತಿ ಮತ್ತು ಅನಾಚಾರಗಳ ಒಂದು ವಾಸ್ತವಿಕ ಬದುಕಿನ ವಿಶ್ಲೇಷಣೆಯನ್ನು ‘ಮತದಾರ’ ಕಥೆಯಲ್ಲಿ ಕಾಣುತ್ತೇವೆ. ಈ ಕಥೆ ಜಗತ್ತಿನ ಶ್ರೇಷ್ಠ ಕಥೆಗಳ ಸಾಲಿಗೆ ಸೇರುವಂಥದ್ದು. ಸಾಮಾಜಿಕ ವ್ಯವಸ್ಥೆಯನ್ನೂ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ವಿಶ್ಲೇಷಿಸುವ ಪ್ರಯತ್ನ ಈ ಕಥೆಯಲ್ಲಿದೆ. ಮುಖ್ಯವಾಗಿ ರೂಫ್ ಮತ್ತು ಸಚಿವ ಮಾರ್ಕಸ್ ಆಯಿಬ್ ಇವರಿಬ್ಬರ ಪಾತ್ರಗಳ ಪರಿಧಿಯೊಳಗೆ ಬಿಚ್ಚಿಕೊಳ್ಳುವ ‘ಮತದಾರ’ ಕಥೆ ರಾಜಕೀಯ ಕ್ಷೇತ್ರದ ಹಲವು ಮುಖಗಳ ದರ್ಶನ ಮಾಡಿಸುತ್ತದೆ. ಮಾರ್ಕಸ್ ತನ್ನ ಸಹಾಯಕ ರೂಫ್‌ನೊಂದಿಗೆ ಚುನಾವಣೆಯ ಕುರಿತು ಆಡುವ ಮಾತುಗಳು ಗಮನ ಸೆಳೆಯುತ್ತವೆ. ರೂಫ್ ಪಿಎಪಿ ಮತ್ತು ಪಿಓಪಿ ಪಕ್ಷಗಳಿಂದ ಹಣ ಪಡೆದು, ಈ ಎರಡೂ ಪಕ್ಷಗಳಿಗೆ ವೋಟು ಮಾಡುವ ವಂಚನೆ ವ್ಯಕ್ತಿಮಟ್ಟದಲ್ಲೇ ನಿಲ್ಲದೆ ಸಾಮೂಹಿಕವಾಗಬಹುದಾದ ಪರಿಯನ್ನು ಧ್ವನಿಸುತ್ತದೆ.

ರಾಜಕೀಯ ಕ್ಷೇತ್ರದಲ್ಲಿ ಸತ್ಯ, ನ್ಯಾಯ, ಪ್ರಾಮಾಣ ಕತೆ, ಶೀಲ, ನೀತಿ ಮತ್ತು ಆದರ್ಶಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಎಂಬುದನ್ನು ಈ ಕಥೆ ಮತ್ತೊಮ್ಮೆ ಎತ್ತಿ ಹೇಳುತ್ತದೆ. ಅವುಗಳನ್ನು ಮರೆತವರು ಮಾತ್ರ ಈ ಕ್ಷೇತ್ರದಲ್ಲಿ ಯಶಸ್ವಿಯಾಗಬಲ್ಲರೆಂಬುದನ್ನು ಅದು ಸಾರುತ್ತದೆ. ವರ್ತಮಾನದ ರಾಜಕಾರಣ ತನ್ನ ಮೈ ಮನಸ್ಸುಗಳಲ್ಲಿ ಅಸೂಯೆಯನ್ನು ತುಂಬಿಸಿಕೊ೦ಡಿದೆ; ಅದು ಕ್ಷಣ ಕ್ಷಣಕ್ಕೂ ತನ್ನ ಬಣ್ಣ ಬದಲಾಯಿಸುತ್ತದೆ. ಭ್ರಷ್ಟಾಚಾರ ಕೇವಲ ಒಂದು ದೇಶದ ಸಮಸ್ಯೆಯಲ್ಲ, ಅದು ಜಾಗತಿಕ ಸಮಸ್ಯೆಯಾಗಿ ಬೆಳೆದಿದೆ. ಇಂದು ಬರೀ ರಾಜಕೀಯ ನಾಯಕರಷ್ಟೇ ಕೆಟ್ಟಿಲ್ಲ; ಅವರಷ್ಟೇ ಮತದಾರರು ಕೂಡ ಕೆಟ್ಟಿದ್ದಾರೆ. ರಾಜಕೀಯ ನಾಯಕರ ಭ್ರಷ್ಟಾಚಾರ ಸಾರ್ವತ್ರಿಕವಾಗಿದ್ದು, ಮತದಾರರ ಭ್ರಷ್ಟಾಚಾರ ಐದು ವರ್ಷಕ್ಕೊಂದು ಸಲ ಎನ್ನುವಂತಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಮತದಾರರಿಗೆ ಬಾಡೂಟ ಹಾಕಿಸುವ, ಹಣ, ಹೆಂಡ, ಟಿವಿ, ಕುಕ್ಕರ್, ಬಂಗಾರ ಮತ್ತು ಬಟ್ಟೆಗಳನ್ನು ಹಂಚುವ ಸಂಗತಿ ಎಲ್ಲರಿಗೂ ಗೊತ್ತಿದೆ. ಇದಕ್ಕೆ ಯಾವುದೇ ದೇಶ ಮತ್ತು ಪಕ್ಷಗಳು ಹೊರತಾಗಿಲ್ಲವೆಂಬುದನ್ನು ‘ಮತದಾರ’ ಕಥೆ ಅದ್ಭುತವಾಗಿ ಅನಾವರಣ ಮಾಡುತ್ತದೆ.

ಸೈನಿಕ ಕಾರ್ಯಾಚರಣೆ, ವಿಮಾನ ದಾಳಿ ಮುಂತಾದ ವಿವರಗಳಿಂದ ಕೂಡಿದ ಕಥೆ ‘ಯುದ್ಧ ಕಾಲದ ಹುಡುಗಿಯರು’ ಕ್ರಾಂತಿ ಮತ್ತು ಹೋರಾಟಗಳ ಹುಮ್ಮಸ್ಸಿನಲ್ಲಿ ಹೊರಡುವ ಹುಡುಗಿಯರು ವ್ಯವಸ್ಥೆಯ ಬಲಿಪಶುಗಳಾಗುವ, ದೇಹವನ್ನೇ ಮಾರಿಕೊಳ್ಳಬೇಕಾದ ದುಃಸ್ಥಿತಿಗೆ ತಳ್ಳಲ್ಪಡುವ ಸಂಕೀರ್ಣ ಕಥೆ. ಕೊನೆಯಲ್ಲಿ ಕುಂಟ ಸೈನಿಕನೊಬ್ಬನನ್ನು ಕಾರಿನಿಂದ ರಕ್ಷಿಸಲು ಮುಂದಾಗುವ ಹುಡುಗಿ ವಿಮಾನ ದಾಳಿಗೆ ಹೋಳಾಗುವ ದುರಂತ ಬದುಕಿನ ಕಥೆ ಅದು. ಈ ಕಥೆಯ ಕ್ಯಾಪ್ಟನ್ ಜೋ, ಗ್ಲ್ಯಾ೦ಡಿಸ್ ಮತ್ತು ನೊಯೆನ್‌ಕ್ವೊರ ಪಾತ್ರಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿವೆ.

ನೈಜೇರಿಯಾದ ಆದಿವಾಸಿ ಜನಾಂಗವು ವಸಾಹತುಶಾಹಿಯ ಪ್ರಭಾವದಿಂದ ಛಿದ್ರವಾಗುವ ಸ್ವರೂಪವನ್ನು ‘ಹುಚ್ಚ’ ಕಥೆ ಸಾಂಕೇತಿಕವಾಗಿ ಚಿತ್ರಿಸುತ್ತದೆ. ಕಥಾನಾಯಕ ನ್ವಾಯಿಬ್ ಮತ್ತು ಹುಚ್ಚನ ಮಧ್ಯೆ ನಡೆಯುವ ಘಟನೆಗಳು ಕುತೂಹಲಕಾರಿಯಾಗಿದ್ದು, ಇವರಿಬ್ಬರ ನಿಗೂಢ ವ್ಯಕ್ತಿತ್ವವನ್ನು ಆಕರ್ಷಕ ವಿವರಗಳ ಮೂಲಕ ಜಾಣ್ಮೆಯಿಂದ ನೇಯಲು ಕಥೆಗಾರ ಪ್ರಯತ್ನಿಸಿದ್ದಾನೆ. ಈ ಕಥೆ ತನ್ನೊಳಗಿನ ಅಂತಃಸತ್ತ್ವದಿ೦ದಾಗಿ ಹಾಗೂ ಸಾಚಾ ನಿರೂಪಣೆಯಿಂದಾಗಿ ನೇರ ಓದುಗರ ಮನಸ್ಸು-ಹೃದಯಗಳನ್ನು ಮುಟ್ಟುತ್ತದೆ.

‘ಯುದ್ಧಾನಂತರದ ಶಾಂತಿ’ ಕಥೆ ಯುದ್ಧ, ಸಾವು ಮತ್ತು ಜನಸಾಮಾನ್ಯರ ಬದುಕಿನ ಛಿದ್ರಸ್ಥಿತಿಯನ್ನು ಅನಾವರಣಗೊಳಿಸುವ ಪರಿ ತುಂಬಾ ಸಾಂಕೇತಿಕ ಮತ್ತು ಅಷ್ಟೇ ನವೀನ. ಈ ಕಥೆ ನೈಜೇರಿಯಾದ ಅಂತರ್ಯುದ್ಧದಿ೦ದಾದ ಆರ್ಥಿಕ ನಷ್ಟ, ಮೂಲಭೂತ ಸೌಕರ್ಯಗಳ ಕೊರತೆ, ಅಮಾಯಕ ಜೀವಗಳ ಸಾವು ಮತ್ತು ಸಾಮಾನ್ಯ ಜನರ ಶೋಚನೀಯ ಬದುಕನ್ನು ಚಿತ್ರಿಸುತ್ತದೆ. ಈ ಯುದ್ಧದಿಂದ ಜೊನದನ್ ಇವಿ- ಮಾರಿಯಾಯರ ಮನೆ, ಆಸ್ತಿ ಧ್ವಂಸವಾಗುತ್ತದೆ. ಅವರ ಇಡೀ ಕುಟುಂಬವು ಹಣವನ್ನು ಸಂಪಾದಿಸಲು ಮತ್ತು ಜೀವನವನ್ನು ಪುನರ್‌ನಿರ್ಮಿಸಿಕೊಳ್ಳಲು ಮಾಡುವ ಪ್ರಯತ್ನ ಈ ಕಥೆಯಲ್ಲಿದೆ. ಅಧಿಕಾರಿಗಳ ಅಸಮರ್ಥತೆ, ಹಿಂಸಾಚಾರ, ಅದರ ಪರಿಣಾಮಗಳನ್ನು ಚಿತ್ರಿಸುವ ಈ ಕಥೆಯಲ್ಲಿ ‘ಬೈಸಿಕಲ್’ ಬದುಕನ್ನು ಪುನರ್‌ನಿರ್ಮಿಸಿಕೊಳ್ಳುವ ಸಂಕೇತವಾಗಿ ಬರುತ್ತದೆ. ಜಟಿಲವಾದ ಕಥಾವಸ್ತುವನ್ನು ಒಳಗೊಂಡಿರುವ ಈ ಕಥೆ ಅನೇಕ ಮಾನವೀಯ ಮತ್ತು ಅಮಾನವೀಯ ಅಂಶಗಳನ್ನು ಏಕಕಾಲದಲ್ಲಿ ದರ್ಶಿಸುತ್ತದೆ.

ಯುವಜನಾಂಗದ ಮನಸ್ಸುಗಳಲ್ಲಿ ಕಟ್ಟಿಕೊಳ್ಳುವ ಕನಸುಗಳು ಛಿದ್ರಗೊಂಡಾಗಿನ ಪರಿಣಾಮವನ್ನು ಬಹುಸೊಗಸಾಗಿ ಅಚೆಬೆ ಚಿತ್ರಿಸಿದ್ದಾನೆ. ‘ಬೇಬಿ ಶುಗರ್’ ಕಥೆ ಆಧುನಿಕತೆಯ ಆಕರ್ಷಣೆಯ ಅಪಾಯಕಾರಿ ನಿಲುವುಗಳನ್ನು ಸಹಜವಾಗಿ ಹಿಡಿದಿಟ್ಟಿದೆ. ಆಸೆ-ನಿರಾಸೆ, ಬಯಕೆ-ಜಿಗುಪ್ಸೆ, ಸಂತೋಷ-ಕೋಪ, ಕೂಡುವಿಕೆ-ಅಗಲುವಿಕೆ, ಸ್ನೇಹ-ವೈರತ್ವಗಳು ಮನುಷ್ಯ ಬದುಕಿನಲ್ಲಿ ಮುಖಾಮುಖಿಯಾಗುವ ಪ್ರಸಂಗಗಳನ್ನು ಕಥೆಯುದ್ದಕ್ಕೂ ಕಾಣಬಹುದಾಗಿದೆ.

`ಸತ್ತವರ ಸಂಚಾರದ ದಾರಿ’ ಕಥೆ ವಸಾಹತುಶಾಹಿ ತಂದ ಹೊಸ ಧರ್ಮ, ಶಿಕ್ಷಣ ಮತ್ತು ಆಧುನಿಕತೆಗಳ ಏಕಮುಖ ಸಮರ್ಥನೆ ಅಥವಾ ನಿರಾಕರಣೆಯ ಸರಳ ನೆಲೆಗಳಿಗೆ ತೆತ್ತುಕೊಳ್ಳದೆ ಒಂದು ಚಾರಿತ್ರಿಕ ಸಂದರ್ಭವನ್ನು ವಿವಿಧ ಕೋನಗಳಿಂದ ಅವಲೋಕಿಸುವ ಪ್ರಯತ್ನವನ್ನು ಮಾಡುತ್ತದೆ. ಸತ್ತವರ ಸಂಚಾರದ ದಾರಿಯು ಆಧುನಿಕ ಜಗತ್ತಿನಲ್ಲಿ ಸಂಪ್ರದಾಯದ ನಿರಂತರತೆಯ ಸಂಕೇತವಾಗಿದೆ. ಕಥಾನಾಯಕ ಮೈಕಲ್ ಓಬಿಯ ಗುರಿಯು ಶಾಲೆಯನ್ನು ಆಧುನೀಕರಿಸುವುದು ಮತ್ತು ಸುಂದರಗೊಳಿಸುವುದು ಆಗಿದೆ. ಆದರೆ ಅವನ ವಿಚಾರಗಳಿಗೆ ಗ್ರಾಮಸ್ಥರ ವಿರೋಧವಿದೆ. ಸಂಪ್ರದಾಯ-ಆಧುನಿಕತೆಗಳ ಸಂಘರ್ಷದೊ೦ದಿಗೆ, ವಿರೋದಾಭಾಸ-ದ್ವಂದ್ವಗಳೊ೦ದಿಗೆ, ಧಾರ್ಮಿಕ-ವೈಚಾರಿಕ ವಿಚಾರಗಳ ಹಿನ್ನೆಲೆಯೊಂದಿಗೆ ಮೈಕಲ್ ಓಬಿ ಕಂಡುಕೊಳ್ಳುವ ಸತ್ಯಗಳು ಮತ್ತು ತೆಗೆದುಕೊಳ್ಳುವ ನಿರ್ಧಾರಗಳು ಮತ್ತೆ ಮತ್ತೆ ಆಲೋಚನೆಗೆ ತೊಡಗಿಸುತ್ತವೆ.

ಚಿನುವಾ ಅಚೆಬೆಯ ಕಥೆಗಳು ಆಫ್ರಿಕನ್ ಸಾಹಿತ್ಯದ ಅನನ್ಯ ಮಾದರಿಗಳಂತಿವೆ. ‘ಮದುವೆಯೆಂಬುದು ಖಾಸಗಿ ಸಂಗತಿ’, ‘ಮತದಾರ’, ‘ಸೇಡಿನ ಸಾಲಗಾರ’, ‘ಸತ್ತವರ ಸಂಚಾರದ ದಾರಿ’, ‘ನಿವಾಳಿಸಿದ ಮೊಟ್ಟೆ’, ‘ಶುಗರ್ ಬೇಬಿ’, ‘ಯುದ್ಧ ಕಾಲದ ಹುಡುಗಿಯರು’, ‘ಹುಚ್ಚ’ ಮತ್ತು ‘ಯುದ್ಧಾನಂತರದ ಶಾಂತಿ’ ಈ ಸಂಲಕನದ ಅತ್ಯುತ್ತಮ ಕಥೆಗಳು. ಈ ಕಥೆಗಳಲ್ಲಿ ಕಥೆಗಾರ ಅಚೆಬೆ ತೋರಿರುವ ಸಂಯಮ ಅಪೂರ್ವವಾದುದು. ಗಟ್ಟಿಯಾದ ವಸ್ತು, ತಂತ್ರ, ಸಹಜ ಭಾಷೆ, ವ್ಯಂಗ್ಯ, ವಿಡಂಬನೆ, ಸಂಕೇತ, ಪ್ರತಿಮೆ, ಲವಲವಿಕೆಯ ನಿರೂಪಣೆ ಮತ್ತು ಸ್ವಾರಸ್ಯಕರ ಸಂಭಾಷಣೆಗಳಿ೦ದ ಈ ಕಥೆಗಳು ಓದುಗರನ್ನು ವಿಚಾರಕ್ಕೆ ಹಚ್ಚುತ್ತವೆ. ಉಳಿದ ‘ಅಕೆಕ’, ‘ಚಾಯಿಕನ್ ಶಾಲಾ ದಿನಗಳು’ ಮತ್ತು ‘ಅಂಕಲ್ ಬೆನ್‌ನ್ ಆಯ್ಕೆ’ ಕಥೆಗಳು ಕುತೂಹಲದಿಂದ ಓದಿಸಿಕೊಳ್ಳುತ್ತವೆ. ಆದರೆ ಈ ಕಥೆಗಳಲ್ಲಿ ವಿವರಗಳು ತೆಳುವಾಗಿವೆ.

ಚಿನುವಾ ಅಚೆಬೆಯ ಕಥೆಗಳನ್ನು ಕನ್ನಡಕ್ಕೆ ತರುವ ಮೂಲಕ ಅನುವಾದಕ ಚನ್ನಪ್ಪ ಕಟ್ಟಿಯವರು ಮಹತ್ವದ ಕೆಲಸವನ್ನೇ ಮಾಡಿದ್ದಾರೆ. ಅವರ ಶ್ರಮ ಸಾರ್ಥಕ. ಅವರ ಅನುವಾದ ಸರಳವಾಗಿದೆ; ಸುಂದರವಾಗಿದೆ. ಬೇರೊಂದು ಸಂಸ್ಕೃತಿಯ ಬದುಕಿನ ವಿವರಗಳನ್ನು ಕನ್ನಡದ ಭಾಷೆಯ ಜಾಯಮಾನಕ್ಕೆ ಒಗ್ಗಿಸಲು ಕಟ್ಟಿಯವರು ಸಾಕಷ್ಟು ಯಶಸ್ವಿಯಾಗಿದ್ದಾರೆ. ನಿರೂಪಣೆಗೆ ಶಿಷ್ಟಭಾಷೆಯನ್ನೂ, ಸಂಭಾಷಣೆಗೆ ಉತ್ತರ ಕರ್ನಾಟಕದ ಆಡು ಭಾಷೆಯನ್ನೂ ಉಪಯೋಗಿಸಿರುವ ಅವರ ಭಾಷಾ ಪ್ರಯೋಗ ಸಾಕಷ್ಟು ಯಶಸ್ವಿಯಾಗಿದೆ. ಕುವೆಂಪು, ಕಾರಂತ, ಅನಂತಮೂರ್ತಿ, ಲಂಕೇಶ್, ಬಸವರಾಜ ಕಟ್ಟೀಮನಿ, ಚೆನ್ನಣ್ಣ ವಾಲೀಕಾರ, ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವರ ಬರವಣ ಗೆಗಳನ್ನು ಓದಿಕೊಳ್ಳುವಂತೆ ಅಚೆಬೆ ಬರವಣ ಗೆಯನ್ನು ಸಹಜವಾಗಿ ಓದಿಕೊಳ್ಳಬಹುದು. ವ್ಯಕ್ತಿ, ಊರಿನ ಹೆಸರು ಮತ್ತು ಭೌಗೋಳಿಕ ವಿವರಗಳನ್ನು ಬಿಟ್ಟರೆ ಇದು ಕನ್ನಡ ನೆಲದ ಕೃತಿ ಎನ್ನುವಷ್ಟು ಸಹಜವಾಗಿ ಚನ್ನಪ್ಪ ಕಟ್ಟಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

‍ಲೇಖಕರು avadhi

March 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: