ಸಿ ಎಚ್ ಭಾಗ್ಯ ಓದಿದ ‘ನನ್ನವ್ವನ ಬಯೋಗ್ರಫಿ’

ಸಿ ಎಚ್ ಭಾಗ್ಯ

ನಮಸ್ತೆ ಜಯರಾಮಾಚಾರಿಯವರೆ, ನಾನು ಭಾಗ್ಯ.ಸಿ.ಎಚ್. ಒಬ್ಬ ಓದುಗಿ. ನಿಮ್ಮನ್ನು ಭೇಟಿಯಾಗಿಲ್ಲ. ಇಂದು ನಿಮ್ಮ
‘ಅವ್ವ’ನ ಮೂಲಕ ಭೇಟಿಯಾದೆ.

ಬಹುರೂಪಿಯಿಂದ ಬೆಳಗ್ಗೆ ತಾನೇ ಮನೆಗೆ ಬಂದ “ನನ್ನವ್ವನ ಬಯೊಗ್ರಫಿ” ಮೊದಲು ಅದರ ಆಕೃತಿ,ಮುಖಪುಟ, ಗಾತ್ರದಿಂದ ಸೆಳೆಯಿತು. ಕನ್ನಡದ ಹೆಸರಾಂತ ನಿರ್ದೇಶಕರೊಬ್ಬರ ಸಾಲು ಸಾಲಾಗಿ ಬಂದು ಕರ್ಚೀಫ಼್ ಒದ್ದೆಮಾಡಿದ ಮದರ್ ಸೆಂಟಿಮೆಂಟೇ ಇಲ್ಲೂ ಇರಬಹುದೆ ಎಂಬ ಒಂದು ಸಣ್ಣಅನುಮಾನದಿಂದ ಪುಸ್ತಕ ಕೈಗೆತ್ತಿಕೊಂಡೆ. ಕೈಗೆತ್ತಿಕೊಂಡವಳು ಒಂದೇ ಗುಕ್ಕಿನಲಿ ಓದಿ ಮುಗಿಸಿಯೇ ಕೆಳಗಿಟ್ಟೆ. ಇದರಲ್ಲಿ ಅವ್ವನ ವ್ಯಕ್ತಿತ್ವದ ಪಾಲೂ ಇದೆ,ನಿಮ್ಮ ನಿರೂಪಣೆಯ ಪಾಲೂ ಇದೆ.

ಮಾತೃದೇವೋ ಭವ, ದೇವರು ಎಲ್ಲ ಕಡೆಯೂ ಇರಲು ಸಾಧ್ಯವಿಲ್ಲವೆಂದು ತಾಯಂದಿರನ್ನು ಸೃಷ್ಟಿಸಿದ,…ಇತ್ಯಾದಿ ತಾಯಂದಿರ ಬಗೆಗಿನ ಸಿದ್ಧಮಾದರಿಯ ಗ್ರಹಿಕೆಯನ್ನು ಪಲ್ಲಟಗೊಳಿಸಿದವರು ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಮೊದಲು ಲಂಕೇಶರು.

ಪುಸ್ತಕದ ಹಿಂಭಾಗದಲ್ಲಿ, ಒಳಪುಟದ ಆರಂಭದಲ್ಲಿ ಲಂಕೇಶರ ‘ಅವ್ವ’ನ ಕೆಲ ಸಾಲುಗಳನ್ನು ನೀವು ಉಲ್ಲೇಖಿಸಿರುವುದು ನೀವು ಅವ್ವನನ್ನು ಕಂಡರಿಸಿರುವುದಕ್ಕೆ‌ ಪೀಠಿಕೆಯಂತಿದೆ. ಅವ್ವನನ್ನು ಆಕೆಯ ಎಲ್ಲಾ ಪರಚಾಟ, ಅರಚಾಟ, ಪ್ರೇಮದೊಂದಿಗೆ ಹಳ್ಳಿಯ ಅನಕ್ಷರಸ್ಥ, ಜೀವನಪ್ರೀತಿಯ ಹೆಣ್ಣುಮಗಳಾಗಿ ಲಂಕೇಶ್ ಕಟ್ಟಿಕೊಟ್ಟಿದ್ದಾರೆ.

ಬದುಕಿನೊಂದಿಗೆ ಗುದ್ದಾಡಿಕೊಂಡೇ ಜೀವನ್ಮುಖಿಯಾಗುಳಿಯುತ್ತಾಳೆ ನಿಮ್ಮ ಕೃತಿಯ ಅವ್ವ.! ಮನೆಯ ಜಗಳಗಳನ್ನು, ನಿಮಗೆ ತಾಯಿಯೊಡನೆ ಆದ ಇರಸುಮುರಸುಗಳನ್ನು ಬಣ್ಣಕಟ್ಟದೆ ನಿರೂಪಿಸಿರುವುದರಿಂದ ಆಪ್ತವೆನಿಸುತ್ತಾಳೆ ಅವ್ವ. ಆಕೆ ತನ್ನ ಹಿರಿಯಮಗನಿಗೆ ಮದ್ಯಪಾನಕ್ಕೆ ಹಣಕೊಡುವಲ್ಲಿ ಇರುವ ತಾಯ್ತನದ ವಿವೇಕ ಬೆಚ್ಚಿಬೀಳಿಸುತ್ತದೆ. ವಿಶ್ರಾಂತಿಯಲ್ಲಿ ನಂಬಿಕೆ ಇರದ‌ ಆಕೆ ಎಲ್ಲ ಹಳ್ಳಿಗಾಡಿನ ಮಹಿಳೆಯರ ಪ್ರತಿನಿಧಿ ಎನಿಸುತ್ತಾಳೆ. ರೆಸ್ಟ್, ರಿಲ್ಯಾಕ್ಸ..ಇವೆಲ್ಲಾ ಎಷ್ಟೇ ಆಗಲಿ ನಗರದ ಪರಿಕಲ್ಪನೆಗಳಷ್ಟೆ.
ತಾಯಿಯ ಜೊತೆಗೇ ಒಂದೆಡೆ ನೀವು ಕಟ್ಟಿಕೊಟ್ಟಿರುವ ಅಣ್ಣಾವ್ರಂತೂ ಹಳ್ಳಿಗಾಡಿನ ಜನರು ಪ್ರೀತಿಸಿದ ಆರಾಧಿಸಿದ ಈ ನಾಡಿನ ಒಂದು ವಿಸ್ಮಯದ ಅತ್ಯಂತ ಸಹಜ ಚಿತ್ರವಾಗಿದೆ.

ಮೇಷ್ಟ್ರು ಕಿ.ರಂ.ಯಾವಾಗಲೂ “ರಾಜ್ ಕುಮಾರ್ ನಮ್ಮ ಸಾಂಸ್ಕೃತಿಕ ಹೀರೋ ರೀ” ಎನ್ನುತ್ತಿದ್ದುದು ನೆನಪಾಯ್ತು.
ಮಧ್ಯವಯಸ್ಸು ಮೀರಿದ‌ ತಾಯಿ, ಮಗಳ ಜೊತೆಗೆ ಮಗುವಿಗೆ ಜನ್ಮಕೊಟ್ಟಿದ್ದನ್ನು ಆಕೆಯ ಗೌರವಕ್ಕೆ‌ಚ್ಯುತಿ ತಾರದಂತೆ ನಿರೂಪಿಸಿರುವುದು ಖುಷಿಯೆನಿಸಿತು.

ತಾಯ್ತನವನ್ನು ವೈಭವೀಕರಿಸದೆ ಗೌರವದಿಂದ ನೋಡಿರುವ ಕ್ರಮ ಸ್ಟೀರಿಯೋ ಟಿಪಿಕಲ್ “ಮಾತೆ” ಯಿಂದ‌ ‘ಅವ್ವ’ ನನ್ನು ಬೇರೆಯಾಗಿಸಿ. ಇವಳೊಬ್ಬಳು ಬನದ ಕರಡಿಯಂತಹ ಅವ್ವ ಎನ್ನುವ ಭಾವನೆ ಮೂಡಿಸುತ್ತದೆ.

ಎಲ್ಲರ ಅಮ್ಮನೆನಿಸಿರುವ “ಕುದಿ ಎಸರು”ವಿನ ವಿಜಯಮ್ಮ ಈ ಪುಸ್ತಕವನ್ನು ಬಿಡುಗಡೆ ಮಾಡಿರುವುದು ಒಂದು ಆಪ್ಯಾಯಮಾನ ಅಕಸ್ಮಿಕ ವಿರಬಹುದೆ.!?

ಅಂದಹಾಗೆ ಒಂದು ಮಾತು ಮರೆತೆ.ಬಹುರೂಪಿಯ ಛಾಪು ಈ ಪುಸ್ತಕದ ಮೇಲೂ ಬಿದ್ದಿದೆ.

ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://bit.ly/3adbtdK

‍ಲೇಖಕರು Admin

July 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭಾ

    ತುಂಬಾ ಚೆನ್ನಾದ ಪ್ರವೇಶಿಕೆ ಭಾಗ್ಯ ಮೇಡಂ. ಪುಸ್ತಕ ಓದುವ ಹಂಬಲ ಉಂಟು ಮಾಡಿತು ಬರಹ.ಅಭಿನಂದನೆ ನಿಮಗೂ ಲೇಖಕರಿಗೂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: