ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ ಎಚ್ ಭಾಗ್ಯ ಅನುವಾದಿತ ಕವಿತೆ- ನಮಗೆ ಆಕಾಶ ತೋರಿಸಬೇಡ…

ಮೂಲ: ಅಖಿಲ ನಾಯಕ್

ಕನ್ನಡಕ್ಕೆ: ಸಿ ಎಚ್ ಭಾಗ್ಯ

ಒಡಿಯಾ ಕವಿ ಅಖಿಲ ನಾಯಕ್ ಅವರ ಒಂದು ಕವಿತೆಯ ಅನುವಾದ…

ಒಂದು ವಾರವಾಯಿತು
ಒಂದು ತುತ್ತು ಅನ್ನವೂ
ಹೊಟ್ಟೆಗೆ ಬಿದ್ದಿಲ್ಲ.

ನಮಗೆ ಇನ್ನುಮೇಲಾದರೂ ಆಕಾಶವನ್ನು ತೋರಿಸಬೇಡ,
ನಮ್ಮ ಹಸಿವಿನ ದಾವಾನಲದ ಎದುರು
ಈ ಕಾಮನಬಿಲ್ಲಿನ ಭ್ರಮೆಗೆ
ಯಾವುದೇ ಅರ್ಥವಿಲ್ಲ.

‘ ಆಕಾಶದಲ್ಲಿ ಹಸಿವಿಲ್ಲ,ದುಃಖವಿಲ್ಲ’
ನೀನೇ ಹೇಳಿದ್ದು ಅದು;
ಇದು ದೊಡ್ಡ ಬೊಗಳೆ.

ಆಕಾಶದಲ್ಲಿ ಒಂದು ಗಂಟೆಗೂ ಮಿಗಿಲಾಗಿ
ಹಕ್ಕಿಯು ಗಿರಕಿಹೊಡೆಯುತ್ತಿರುವುದು ಕಾಣದೇ
ಅದು ಈಗ ಹತಾಶೆಯಿಂದ
ಹುಳು ಹಿಡಿಯಲು ಭೂಮಿಗಿಳಿಯುತ್ತಿದೆ.

ಮತ್ತೆಲ್ಲೂ ಇಲ್ಲ,
ನಮ್ಮ ಭೂಮಿಯ ಕಂದು ಮೈಮೇಲೆ ಮಾತ್ರ
ಹುಲ್ಲು ಹುಟ್ಟುತ್ತದೆ,
ಅಣಬೆ ಚಿಗುರೊಡೆಯುತ್ತದೆ, ಹೂ ಅರಳುತ್ತದೆ, ರಾಗಿ ಬೆಳೆಯುತ್ತದೆ,
ಮೀನು,ಹಿಪ್ಪೆ ಸಿಗುತ್ತದೆ.
ಇನ್ನೆಲ್ಲಾದರೂ ಮನೆ,ಪಟ್ಟಣವನ್ನು ಯಾರಾದರೂ ಕಟ್ಟಲು ಸಾಧ್ಯವೆ ?
ನೀನು ಭೂಮಿಯಮೇಲೆ ಇರುವುದು ನಿಜ
ಆದರೆ ಆಕಾಶದ ಗುಣಗಾನ ಮಾಡುತ್ತೀ.
ಆಕಾಶ ಸದಾ ಆಪ್ಯಾಯಮಾನ
ಏಕೆಂದರೆ ಅಲ್ಲಿ ಕೊಳೆ, ಕಸ ಇಲ್ಲ ಎನ್ನುತ್ತೀ.

ನೊಣದ ಹಾಗೆ ನಿನಗೆ
ಈ ಭೂಮಿಯಮೇಲೆ ಬರೀ ಕಸ,ಕೊಳೆ ಕಾಣುತ್ತದೆ.
ಆದರೆ ನಮಗೆ ಚಾಚಿದ ಹಸಿರು ಕಾಣುತ್ತದೆ.

ನಿನಗೆ ಗೊತ್ತೆ-
ನೀನೆಂದೂ ಈ ಭೂಮಿಯನ್ನು ಪ್ರೀತಿಸೇ ಇಲ್ಲ.

ನೀನು ಹೇಗೆ ಈ ಭೂಮಿಯನ್ನು ಪ್ರೀತಿಸಲು ಸಾಧ್ಯ?

ಹಗಲಿರುಳೂ
ನಾವು ಹೃದಯತೆತ್ತು,ಬೆವರುಹರಿಸಿ ಬೆಳೆದ ಬಂಗಾರವನ್ನು ನೀನು ತಗಲೂಪಿತನದಿಂದ
ಕಸಿಯುವ ಯೋಚನೆಯಲ್ಲಿ ಇದ್ದಾಗ!

ಚಡಾವು,ಬಂಗಾರದ ದಾರವನ್ನು ಧರಿಸಲು
ನಮ್ಮ ಬಾಯಿಂದ ಆಹಾರವನ್ನು ಕದ್ದಿದ್ದೀ.

ನೋಡು,ನಾವು ಒಂದು ವಾರದಿಂದ ಏನನ್ನೂ ತಿಂದಿಲ್ಲ.
ನೀನು ಹೊಟ್ಟೆ ಬಿರಿಯ ತಿಂದು
ನಮ್ಮೆದುರು ತೇಗುತ್ತಿದ್ದೀ.

ಇನ್ನು ಮೇಲಾದರೂ ನಮಗೆ ಜೋಗುಳ ಹಾಡಬೇಡ
ನಮಗೆಂದೂ ಆಕಾಶ ತೋರಿಸಬೇಡ.

‍ಲೇಖಕರು Admin

26 September, 2022

1 Comment

  1. Prathibha Nandakumar

    ಮತ್ತೊಂದು ಉತ್ತಮ ಕವನ ಉತ್ತಮ ಅನುವಾದ ಭಾಗ್ಯ ಥ್ಯಾಂಕ್ಸ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading