ಸಿ ಎಂ ಜೊತೆ ಮಕ್ಕಳ ಸಮಾಲೋಚನೆ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

| ಕಳೆದ ಸಂಚಿಕೆಯಿಂದ |

‘ಮುಖ್ಯಮಂತ್ರಿಗಳು ನಮ್ಮ ಹತ್ತಿರ ಬಂದು ನಿಂತು ಮಾತನಾಡಿದರು. ನಮ್ಮನ್ನ,  ಮಕ್ಕಳನ್ನ ವಿಧಾನಸೌಧದ ದೊಡ್ಡ ಸಭಾಭವನದಲ್ಲಿ ಕೂರಿಸಿಕೊಂಡು ನಮ್ಮ ವಿಷಯ, ಸಮಸ್ಯೆ ಕುರಿತು ಕೇಳಿದರು. ಕೆಲವಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಲಿಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. ನಾವು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನ ಕುರಿತು ಮುಖ್ಯಮಂತ್ರಿಗಳು, ವಿಧಾನಸೌಧ, ಬೆಂಗಳೂರು ಅಂತ ನೇರವಾಗಿ ಪತ್ರ ಬರೆಯಲು ಹೇಳಿದರು’ ಆ ಹೊತ್ತು ವಿಧಾನಸೌಧದ ಮೂರನೇ ಮಹಡಿಯ ಸಭಾಂಗಣದಲ್ಲಿ ಮುಖ್ಯಮಂತ್ರಿಗಳೊಡನೆ ಸಮಾಲೋಚನೆ ಮುಗಿಸಿ ಹೊರಬಂದ ಮಕ್ಕಳು ಮಾಧ್ಯಮ ಪ್ರತಿನಿಧಿಗಳೊಡನೆ ಹೇಳುತ್ತಿದ್ದರು. (೧೫ ನವೆಂಬರ್‌ ೨೦೧೧)

ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದ ೮೦ ಮಕ್ಕಳ ಪ್ರತಿನಿಧಿಗಳು ಸುಮಾರು ಎರಡು ಗಂಟೆಗಳ ಕಾಲ ಅಂದಿನ ಸನ್ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸದಾನಂದ ಗೌಡರೊಡನೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಮುಖ್ಯ ಸಭಾಂಗಣದಲ್ಲಿ ಸಮಾಲೋಚನೆ ನಡೆಸಿದ್ದರು.

ಅಂಗನವಾಡಿಗಳಲ್ಲಿ ವ್ಯವಸ್ಥೆ ಇನ್ನಷ್ಟು ಉತ್ತಮ ಪಡಿಸಿ ಎಂದು ಒಂದು ಮಗು ಹೇಳಿದರೆ ಮತ್ತೊಬ್ಬರು ಹಳ್ಳಿಗಳಲ್ಲಿ ಸಂಜೆಗಳಲ್ಲಿ ವಿದ್ಯುತ್‌ ವ್ಯತ್ಯಯ, ಓದಿಕೊಳ್ಳುವುದು ಹೇಗೆ, ಹೊರಗೆ ಹೋಗುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದರು. ಅಂಗನವಾಡಿ ವ್ಯವಸ್ಥೆಗಳನ್ನು ಇನ್ನಷ್ಟು ಉತ್ತಮ ಪಡಿಸುವ ಭರವಸೆ ನೀಡಿದ ಮುಖ್ಯಮಂತ್ರಿಗಳು, ವಿದ್ಯುತ್‌ ಉತ್ಪಾದನೆ, ವಿದ್ಯುತ್‌ ಕೊಳ್ಳುವ ಆರ್ಥಿಕತೆಯ ವಿಚಾರಗಳು, ಇಷ್ಟರ ಮೇಲೆ ಮಲೆನಾಡು ಮತ್ತು ದೂರದ ಹಳ್ಳಿಗಳಿಗೆ ವಿದ್ಯುತ್‌ ಕೊಡಿಸುವಲ್ಲಿ ಇರುವ ಅಡಚಣೆಗಳನ್ನು ವಿವರಿಸಿ, ಪರಿಸ್ಥಿತಿ ಉತ್ತಮ ಪಡಿಸಲು ಮುಂದಾಗುವುದಾಗಿ ಹೇಳಿದರು. ಅಷ್ಟರಲ್ಲೇ ಇನ್ನೊಬ್ಬರು ಕೇಳಿದ ಪ್ರಶ್ನೆ ‘ಜಾತಿ, ಮತ, ಲಿಂಗ ಎಂದಷ್ಟೇ ಅಲ್ಲ ರೋಗ, ಬಡತನ ಹೀಗೆಲ್ಲಾ ತಾರತಮ್ಯ ಶಾಲೆಗಳಲ್ಲಿ ನಡೆಯುತ್ತದೆ ನಿಲ್ಲಿಸಿ’ ಎಂದು ಆಗ್ರಹಿಸುತ್ತಿದ್ದ.

ಶಾಲೆಗಳಲ್ಲಿ ಆರೋಗ್ಯ ತಪಾಸಣೆ ಎನ್ನುವ ನಾಟಕ ನಡೆಯುತ್ತದೆ, ಅದಕ್ಕೆ ಗಂಭೀರವಾದ ಚೌಕಟ್ಟು ಕೊಟ್ಟು ಸೂಕ್ತ ವ್ಯವಸ್ಥೆ ಮಾಡಲು ಸಾಧ್ಯವೆ? ಎಂದು ಇನ್ನೊಬ್ಬರು ಪ್ರಶ್ನಿಸುತ್ತಿದ್ದರೆ ಇನ್ನೊಬ್ಬರು ಸಂಜೆಗಳಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವ ಪುಂಡುಪೋಕರಿಗಳನ್ನು ಹೇಗೆ ನಿಗ್ರಹಿಸುತ್ತೀರಿ ಎಂದು ಕೇಳುತ್ತಿದ್ದರು. 

ಮುಖ್ಯ ಮಂತ್ರಿಗಳು ನಗುಮುಖದಲ್ಲೇ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಸಂಭ್ರಮ ತುಂಬಿದ ಸಭಾಂಗಣದಲ್ಲಿ ಕುಳಿತಿದ್ದ ಯಾರೋ ಸಭಿಕರೊಬ್ಬರು ಗೊಣಗಿಬಿಟ್ಟರು, ‘ಎಲ್ಲಾ ಯಾರೋ ದೊಡ್ಡವರು ಪ್ರಶ್ನೆಗಳನ್ನ ಬರೆದುಕೊಟ್ಟಿರಬೇಕು… ಇಲ್ಲಿ ಮಕ್ಕಳು ಓದಿಕೊಂಡು ಕೇಳ್ತಿದ್ದಾರೆ!’ ಆ ಅವರಿಗದು ಏನೋ ದೊಡ್ಡಸ್ತಿಕೆಯ ಮಾತಾಗಿತ್ತು. ಆಗಲೇ ಒಂದಷ್ಟು ಮಕ್ಕಳು ಸಭೆಯ ಮುಖ್ಯ ಕಲಾಪ ನಡೆಯುತ್ತಿರುವಾಗಲೇ ಆ ವ್ಯಕ್ತಿಗೆ ‘ಮಕ್ಕಳ ಹಕ್ಕುಗಳ ಸಂಸತ್‌’ನ ಕಲ್ಪನೆ ಮತ್ತು ಪ್ರಕ್ರಿಯೆ ಕುರಿತು ವಿವರಿಸಲಾರಂಭಿಸಿದ್ದರು. 

ಕಲ್ಪನೆ ಮತ್ತು ಅನುಷ್ಠಾನ

ಜನಪ್ರತಿನಿಧಿಗಳು ಮಕ್ಕಳನ್ನೂ ಪ್ರತಿನಿಧಿಸುತ್ತಾರೆ. ಇದನ್ನು ಮತ್ತೆ ಮತ್ತೆ ಹೇಳಿ ನೆನಪಿಸುವ ಅನಿವಾರ್ಯತೆ ಸದಾಕಾಲಕ್ಕೂ ಇದ್ದದ್ದೇ. ಮಕ್ಕಳೂ ಪ್ರಜೆಗಳು. ಜೊತೆಗೆ ಮಕ್ಕಳೂ ಸಂವಿಧಾನಬದ್ಧ ಹಕ್ಕುಗಳಿರುವ ಪ್ರಜೆಗಳು ಎನ್ನುವುದನ್ನೂ ಮತ್ತೆ ಮತ್ತೆ ಹೇಳುತ್ತಲೇ ಇರಬೇಕಿದೆ. ಅದನ್ನು ಪ್ರಾಯೋಗಿಕವಾಗಿ ಖಾತರಿಗೊಳಿಸಲು ೨೦೦೩ರಲ್ಲಿ ೧೫ ಗ್ರಾಮಪಂಚಾಯತಿಗಳಲ್ಲಿ ಆರಂಭಿಸಿದ ಪ್ರಯೋಗ ೨೦೦೬ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯೊಡನೆ ನಡೆಸಿದ ವಕೀಲಿಯಿಂದಾಗಿ ಪ್ರತಿಯೊಂದು ಗ್ರಾಮಪಂಚಾಯಿತಿಗಳು ‘ಮಕ್ಕಳ ಹಕ್ಕುಗಳ ಗ್ರಾಮಸಭೆ’ ಆಯೋಜಿಸಬೇಕೆಂಬ ಸುತ್ತೊಲೆ ಪಡೆಯುವ ಮೂಲಕ ಯಶಸ್ವಿಯಾಯಿತು. ಆಡಳಿತದ ತಳಮಟ್ಟದ ಸರ್ಕಾರದೊಂದಿಗೆ ಮಕ್ಕಳ ವಿಚಾರಗಳು ಮುಖಾಮುಖಿಯಾಗಲು ಅನುವಾಯಿತು. 

ಇದರ ಮುಂದಿನ ಹಂತವನ್ನು ಕಂಡುಕೊಳ್ಳಬೇಕು, ಮಕ್ಕಳ ಹಕ್ಕುಗಳ ವಿಚಾರ ಸರ್ಕಾರದ ಉನ್ನತ ಮಟ್ಟ ತಲುಪಬೇಕೆಂಬ ಸಮಾಲೋಚನೆಯನ್ನು ೨೦೦೬ರಲ್ಲಿ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನಲ್ಲಿ ಆರಂಭಿಸಿದೆವು. ಅಷ್ಟು ಹೊತ್ತಿಗೆ ‘ವಿಧಾನಸೌಧದಲ್ಲಿ ಮಕ್ಕಳಿದ್ದಾರೆಯೆ?’ ಎಂಬ ಪ್ರಶ್ನೋತ್ತರಗಳ ವಿಶ್ಲೇಷಣೆಯನ್ನು ೨೦೦೪ರಲ್ಲಿ ಹೊರತಂದಿದ್ದೆವು. ಶಾಸನ ಸಭೆಯ ಸದಸ್ಯರಾಗಿದ್ದ ಬಸವರಾಜ ಹೊರಟ್ಟಿ, ವೀರಣ್ಣ ಮತ್ತಿಕಟ್ಟಿ, ಮನೋಹರ ಮಸ್ಕಿ, ನರೇಂದ್ರ ಬಾಬು ಆಗ್ಗೆ ವಿಧಾನಪರಿಷತ್ತಿನ ಅಧ್ಯಕ್ಷರಾಗಿದ್ದ ಸುದರ್ಶನ್‌ ಮತ್ತಿತರರೊಡನೆ ಯಾವುದೇ ರಾಜಕೀಯ ಪಕ್ಷಗಳ ನೆರಳು, ವಾಸನೆಯಿಲ್ಲದೆ ಮಕ್ಕಳ ವಿಚಾರವಾಗಿ ಆತ್ಮೀಯವಾಗಿ ಮಾತನಾಡಲು ಸಾಧ್ಯವಾಗಿತ್ತು.

೨೦೦೮ರ ಹೊತ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಕ್ಕಳ ಪ್ರತಿನಿಧಿಗಳನ್ನು ಆಹ್ವಾನಿಸಿ ವಿಧಾನಸೌಧದಲ್ಲಿ ಶಾಸಕರೊಡನೆ ಸಮಾಲೋಚನೆ ನಡೆಸಬಹುದಾದ ಸಾಧ್ಯತೆಯ ಸ್ಥೂಲ ಕಲ್ಪನೆಯನ್ನು ಪರಿಚಯವಾಗಿದ್ದ ಮಕ್ಕಳ ಸ್ನೇಹೀ ಶಾಸಕರು ಮತ್ತು ಯುನಿಸೆಫ್‌ನ ವಿಕಾಸ್‌ ವರ್ಮಾ ಮುಂದೆ ಪ್ರಸ್ತಾಪಿಸಿದೆವು. 

ಈ ಕುರಿತು ಅದಾಗಲೇ ರೂಪುಗೊಳ್ಳುತ್ತಿದ್ದ ʼಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರʼದ ಸದಸ್ಯ ಸಂಸ್ಥೆಗಳಲ್ಲೂ ಪ್ರಸ್ತಾಪಿಸಿದೆವು. ಜಿಲ್ಲೆಗಳಲ್ಲಿರುವ ಸ್ವಯಂಸೇವಾ ಸಂಘಟನೆಗಳು ವಿವಿಧ ತಾಲೂಕುಗಳಿಂದ ಆಸಕ್ತ ಮಕ್ಕಳನ್ನು ಆಹ್ವಾನಿಸಿ ಜಿಲ್ಲಾ ಮಟ್ಟದಲ್ಲಿ ʼಮಕ್ಕಳ ಸಂಸತ್‌ʼ ಆಯೋಜಿಸಬೇಕು. ಗ್ರಾಮಪಂಚಾಯತಿ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಗಳಲ್ಲಿ ಭಾಗವಹಿಸಿರುವ ಮಕ್ಕಳಿಗೆ ಆದ್ಯತೆ ನೀಡಬೇಕು.

ಮಕ್ಕಳು ಬಂದು ಸೇರಿದಾಗ ಅವರಿಗೆ ಮಕ್ಕಳ ಹಕ್ಕುಗಳ ಸ್ಥೂಲ ಪರಿಚಯ ಮಾಡಿ, ರಾಜ್ಯ ಮತ್ತು ಆಯಾ ಜಿಲ್ಲೆಯ ಮಕ್ಕಳ ಪರಿಸ್ಥಿತಿ ಹೇಗಿದೆ ಎಂದು ಪ್ರಕರಣಗಳು ಮತ್ತು ಅಂಕಿಸಂಖ್ಯೆಗಳನ್ನು ಎದುರಿಟ್ಟು ಮಾತನಾಡಲು ಪ್ರೋತ್ಸಾಹಿಸಬೇಕು. ಮುಖ್ಯವಾಗಿ ಆ ಜಿಲ್ಲೆಯಲ್ಲಿನ ಜನಸಂಖ್ಯೆ, ಅದರಲ್ಲಿ ೧೮ ವರ್ಷದೊಳಗಿನ ಮಕ್ಕಳ ಪಾಲು, ಆರೋಗ್ಯ ಪರಿಸ್ಥಿತಿ, ಶಿಶು ಮರಣ, ಮಕ್ಕಳ ಮರಣ, ಅಂಗವಿಕಲತೆ, ಅಂಗನವಾಡಿ ಮತ್ತು ಶಾಲೆಗಳಿಗೆ ದಾಖಲಾಗಿರುವ ಮಕ್ಕಳು, ಹಾಜರಾಗುವ ಮಕ್ಕಳ ಸಂಖ್ಯೆ, ಅಪೌಷ್ಟಿಕತೆ, ಬಾಲ್ಯವಿವಾಹ, ಬಾಲಕಾರ್ಮಿಕರು, ಇತ್ಯಾದಿ.

ಆ ನಂತರ ಮಕ್ಕಳು ತಮಗೆ ತಿಳಿದಿರುವ ವಿಚಾರಗಳು, ತಮಗೆ ನೇರವಾಗಿ ಸಂಬಂಧಿಸಿದ ಅಥವಾ ಕೇಳಿದ, ನೋಡಿದ ಮಕ್ಕಳಿಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಮಾತನಾಡಲು, ಸಂಬಂಧಿಸಿದವರ ಗಮನ ಸೆಳೆಯಲು ವಿಚಾರಗಳನ್ನು ಹೇಳಲು ಸನ್ನಿವೇಶವನ್ನು ಸೃಷ್ಟಿಸಬೇಕು. ಆ ಎಲ್ಲ ವಿಚಾರಗಳನ್ನು ಕ್ರೋಢೀಕರಿಸಿ ದಿನದಾಂತ್ಯಕ್ಕೆ ಆಯಾ ಜಿಲ್ಲೆಯಿಂದ ಮಕ್ಕಳ ಪ್ರಶ್ನೆಗಳು ಅಥವಾ ವಿಚಾರಗಳೆಂದು ಪಟ್ಟಿ ಮಾಡಿ ಅದನ್ನು ಆಹ್ವಾನಿತ ಸ್ಥಳೀಯ ಶಾಸಕರು, ಅಧಿಕಾರಿಗಳೆದುರು ಮಂಡಿಸಿ ಅವರ ಅಭಿಪ್ರಾಯ, ಪ್ರತಿಕ್ರಿಯೆಯನ್ನು ಕೇಳಬೇಕು. ಅಂತ್ಯದಲ್ಲಿ ಪ್ರತಿ ಜಿಲ್ಲೆಯಿಂದ ಮಕ್ಕಳೇ ಮುಂದಾಗಿ ಬೆಂಗಳೂರಿನ ಸಭೆಯಲ್ಲಿ ತಮ್ಮನ್ನು ಪ್ರತಿನಿಧಿಸಲು ಇಬ್ಬರನ್ನು ಆಯ್ಕೆ ಮಾಡಬೇಕು. 

ಹೊಸ ಕಲ್ಪನೆ. ರಾಜ್ಯದ ಎಲ್ಲ ಜಿಲ್ಲೆಗಳನ್ನು ಪ್ರತಿನಿಧಿಸುವ ಸ್ವಯಂಸೇವಾ ಸಂಘಟನೆಗಳ ಗೆಳೆಯರಿಗಿದೊಂದು ಪುಳಕ ಕೊಟ್ಟಿತು. ಪ್ರಕ್ರಿಯೆ ಆರಂಭವಾಯಿತು. 

ಇದು ಹೇಳುವಷ್ಟು ಸುಲಭವಾಗಿರಲಿಲ್ಲ. ಇಡೀ ರಾಜ್ಯದಲ್ಲಿನ ಮಕ್ಕಳಿಗೆ ಸಂಬಂಧಿಸಿದ ಅಂಕಿಸಂಖ್ಯೆಗಳನ್ನು ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಲು ಚಿತ್ರ ಅದಕ್ಕೆ ವಿವರಣೆಗಳನ್ನು ಗೆಳೆಯ ಸತೀಶ್‌ ಜಿಸಿ ಸಿದ್ಧಪಡಿಸಿದರು. ಅವುಗಳನ್ನು ಮಂಡಿಸುವ ವಿಧಾನಗಳನ್ನು ಮತ್ತು ಇಡೀ ದಿನ ಹೇಗೆ ಮಕ್ಕಳನ್ನು ತೊಡಗಿಸಿಕೊಳ್ಳಬೇಕು ಎಂಬುದನ್ನು ಕುರಿತು ನಾಗಸಿಂಹ, ನಾನು ಮತ್ತು ಇತರ ಗೆಳೆಯರು ಸೇರಿ ಚೌಕಟ್ಟು ನಿರ್ಮಿಸಿದೆವು.

ಎಲ್ಲ ಜಿಲ್ಲೆಗಳಲ್ಲಿ ಸುಮಾರು ೪೫ ದಿನಗಳಲ್ಲಿ ಈ ಇಡೀ ಪ್ರಕ್ರಿಯೆ ಮುಗಿಯಬೇಕು, ಎಲ್ಲರಿಂದಲೂ ವರದಿಗಳು ಬರಬೇಕು, ಆಯ್ಕೆಯಾದ ಮಕ್ಕಳನ್ನು ಬೆಂಗಳೂರಿಗೆ ಕರೆತರಲು ಪೋಷಕರು ಮತ್ತು ಶಿಕ್ಷಕರು (ಮಗು ಶಾಲೆಗೆ ಹೋಗುವವರಾಗಿದ್ದರೆ) ಅನುಮತಿ ಪತ್ರ ಪಡೆದಿರಬೇಕು. ಮಕ್ಕಳ ಜೊತೆಯಲ್ಲಿ ಜವಾಬ್ದಾರಿಯುತ ವ್ಯಕ್ತಿಗಳು ಬರಬೇಕು. ಹೆಣ್ಣುಮಕ್ಕಳೊಡನೆ ವಯಸ್ಕ ಸ್ತ್ರೀಯರು ಇರಲೇಬೇಕು, ಇತ್ಯಾದಿ. 

ಎಲ್ಲ ೩೦ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ವಿವಿಧ ಸ್ವಯಂಸೇವಾ ಸಂಘಟನೆಗಳು ಮುಂದೆ ಬಂದವು. ಹಾಗೆಯೇ ಮಕ್ಕಳನ್ನು ಕರೆತರಲು ಶಿಕ್ಷಣ ಇಲಾಖೆಯ ಅನುಮತಿ ಬೇಕಿತ್ತು. ವಿವಿಧ ಹಿನ್ನೆಲೆಯ ಮಕ್ಕಳ ಪ್ರತಿನಿಧಿಗಳು ಭಾಗವಹಿಸಬೇಕು. ಹೆಣ್ಣು ಮಕ್ಕಳು, ಅಂಗವಿಕಲತೆಯಿರುವ ಮಕ್ಕಳು, ಶಾಲೆಯಿಂದ ಹೊರಗಿರುವ ಮಕ್ಕಳು, ದುಡಿಯುವ ಮಕ್ಕಳು, ವಿವಿಧ ರೀತಿಯ ಸಂಸ್ಥೆಗಳಲ್ಲಿ ದೀರ್ಘಕಾಲದಿಂದ ಇರಬೇಕಾದ ಮಕ್ಕಳು, ಹೀಗೆ ವೈವಿಧ್ಯವಾದ ಅನುಭವ, ಕಾಣ್ಕೆಗಳಿರುವ ಮಕ್ಕಳನ್ನು ಸೇರಿಸಬೇಕಿತ್ತು. 

ದೊಡ್ಡ ಪ್ರಕ್ರಿಯೆ. ಮೊದಲ ಪ್ರಯೋಗದಲ್ಲೇ ಸಾಕಷ್ಟು ಯಶಸ್ವಿಯಾಯಿತು. ವಿಧಾನಸೌಧದ ಪಕ್ಕದಲ್ಲಿರುವ ಶಾಸಕರ ಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳೆದುರು ಬಂದ ಮಕ್ಕಳ ಸ್ನೇಹೀ ಶಾಸಕರಾದ ಮನೋಹರ ಮಸ್ಕಿ, ನೆಲ ನರೇಂದ್ರಬಾಬು, ವೀರಣ್ಣ ಮತ್ತಿಕಟ್ಟಿ, ಸಿ.ಟಿ. ರವಿ, ಮೋಟಮ್ಮ, ವಿಮಲಾ ಗೌಡ, ಆರ್.ವಿ. ವೆಂಕಟೇಶ್‌ ಮತ್ತಿತರರು ಮಕ್ಕಳೊಡನೆಯ ಮಾತುಕತೆಯಾಡಿ ಒಂದು ಕಡೆ ಸಂತೋಷ ಪಟ್ಟರೆ, ಮತ್ತೊಂದು ಕಡೆ ಮಕ್ಕಳೆತ್ತಿದ ಸಮಸ್ಯೆಗಳು, ಪ್ರಶ್ನೆಗಳನ್ನು ಕೇಳಿ ಆತಂಕಗೊಂಡರು. ಆರೋಗ್ಯ, ರಕ್ಷಣೆ, ಶಿಕ್ಷಣ, ವ್ಯವ‍ಸ್ಥೆಗಳು, ಅವ್ಯವಸ್ಥೆಗಳು, ಭ್ರಷ್ಟಾಚಾರ, ಮೋಸ, ಹಿಂಸೆ, ಶೋಷಣೆಯ ವಿಚಾರಗಳು ಮಕ್ಕಳ ಬಾಯಿಂದ ಬಂದಿತ್ತು. ಅವುಗಳಲ್ಲಿ ಕೆಲವನ್ನು ಸರ್ಕಾರದ ಗಮನಕ್ಕೆ ತರಲಾಗುವುದೆಂದು ಶಾಸಕರು ಭರವಸೆ ನೀಡಿದರು. 

ಮೊದಲ ಮೂರು ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್‌ʼಗಳು ಇದೇ ಮಾದರಿಯಲ್ಲಿ ನಡೆಯಿತು. ಮುಂದಿನ ಹಂತ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳೊಡನೆ ಮಕ್ಕಳ ಸಮಾಲೋಚನೆ ಎಂಬುದು ನನ್ನ ಯೋಜನೆಯಾಗಿತ್ತು. ಸಮಯ ಬಂದಾಗಲೆಲ್ಲಾ ಅದನ್ನು ಮನೋಹರ ಮಸ್ಕಿ ಮತ್ತಿತರರ ಎದುರು ಪ್ರಸ್ತಾಪಿಸುತ್ತಲೇ ಇದ್ದೆ. ಆದರೆ ಮುಖ್ಯಮಂತ್ರಿಗಳ ಸಮಯ ಪಡೆಯುವುದು ಕಷ್ಟಸಾಧ್ಯ! 

ಅಂತಹದೊಂದು ದಿನ ಬಂದೇಬಿಟ್ಟಿತು. ‘ಮುಖ್ಯಮಂತ್ರಿಗಳಾದ ಸದಾನಂದ ಗೌಡರು ಕರ್ನಾಟಕ ವಿದ್ಯುತ್‌ ಕಾರ್ಪೋರೇಷನ್‌ ಕಛೇರಿಯಲ್ಲಿ ಒಂದು ಸಭೆಯಲ್ಲಿದ್ದಾರೆ. ಅಲ್ಲಿಗೆ ಬಂದರೆ ಈಗ ಭೇಟಿ ಮಾಡಿಸಿ ನಮ್ಮ ಮುಂದಿನ ಮಕ್ಕಳ ಹಕ್ಕುಗಳ ಸಮಾಲೋಚನೆಗೆ ಕರೆಯೋಣ, ಬರುವಿರೇನು?’ ಎಂದು ಮನೋಹರ ಮಸ್ಕಿ ದೂರವಾಣಿ ಕರೆ ಮಾಡಿ ಹೇಳಿದರು. ಮುಂದಿನ ಕೆಲವೇ ನಿಮಿಷಗಳಲ್ಲಿ ನಾವು ಪ್ರಸ್ತಾವನೆ ಹಿಡಿದು ಮುಖ್ಯಮಂತ್ರಿಗಳೆದುರು ಇದ್ದೆವು.

ಮನೋಹರ ಮಸ್ಕಿಯವರು ಪರಿಚಯ ಮಾಡಿಸಿ ಮಕ್ಕಳೊಡನೆ ಮುಖ್ಯಮಂತ್ರಿಗಳ ಸಮಾಲೋಚನೆ ಬಗ್ಗೆ ಹೇಳಿದರು. ಇಂತಹದು ಇದೇ ಪ್ರಥಮ. ಅದರ ಸಾಧ್ಯತೆಗಳು ಬಹಳ ದೊಡ್ಡದು. ರಾಜ್ಯದ ಜನೆತೆಗೆ, ಮಕ್ಕಳಿಗೆ ಹಾಗೂ ಅಧಿಕಾರಿ ವರ್ಗಕ್ಕೆ ಒಂದು ಸಮರ್ಥವಾದ ಸಂದೇಶ ಇತ್ಯಾದಿ ಹೇಳಿದೆವು. ಅವರು ಒಪ್ಪಿದರು. ಮುಂದಿನದು ಮಕ್ಕಳ ಹಕ್ಕುಗಳ ಚಳವಳಿಯ ಚರಿತ್ರೆಯ ಭಾಗ. 

ವಿಧಾನಸೌಧದಲ್ಲಿ ಮಕ್ಕಳ ಕಲರವ

ಮುಕ್ತವಾದ ಅವಕಾಶ ಸೃಷ್ಟಿಯಾದರೆ ಮಾಹಿತಿಯೊಡನೆ ಒಂದಷ್ಟು ಕಾಳಜಿ ಬೆಳೆಸಿಕೊಂಡಿದ್ದರೆ ನಗರವೇನು, ಹಳ್ಳಿಯೇನು, ಕಲಿತ ಮಾಧ್ಯಮ ಯಾವುದಾದರೇನು ಮಕ್ಕಳು ಬಹಳ ಸಹಜವಾಗಿ ಯಾವುದೇ ಹಮ್ಮು ಬಿಮ್ಮು, ಹೆದರಿಕೆ, ಆತಂಕ, ಅಡ್ಡಿಯಿಲ್ಲದೆ ಯಾರಾದರೇನು ಅವರೊಡನೆ ನೇರವಾಗಿ ಮಾತನಾಡಲು ಮುಂದಾಗುತ್ತಾರೆ. ೨೦೧೧ರಿಂದ ನವೆಂಬರ್‌ ತಿಂಗಳಲ್ಲಿ ಮಕ್ಕಳ ದಿನಾಚರಣೆಯ ಆಸುಪಾಸಿನಲ್ಲಿ ನಡೆದಿರುವ ಎಲ್ಲ ಮಕ್ಕಳ ಹಕ್ಕುಗಳ ಸಂಸತ್‌ ಮತ್ತು ಮುಖ್ಯಮಂತ್ರಿಗಳೊಡನೆ ಮಕ್ಕಳ ಸಮಾಲೋಚನೆಯಲ್ಲಿ ಇದು ಮತ್ತೆ ಮತ್ತೆ ಖಾತರಿಯಾಗುತ್ತಿದೆ.

ಸದಾನಂದ ಗೌಡರು ಮತ್ತು ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರೊಬ್ಬರೇ ನೇರವಾಗಿ ಮಕ್ಕಳೊಡನೆ ಮಾತನಾಡಿದರು. ನಂತರ ಸಿದ್ದರಾಮಯ್ಯನವರು ತಮ್ಮ ಮಂತ್ರಿಮಂಡಲದಿಂದ ಉಮಾಶ್ರೀ, ಕಿಮ್ಮನೆ ರತ್ನಾಕರ್‌, ಜಯಚಂದ್ರ ಟಿ.ಬಿ, ಆಂಜನೇಯ, ಖಾದರ್‌ ಯು.ಟಿ. ಮೊದಲಾದ ಮಕ್ಕಳಿಗೆ ಸಂಬಂಧಿಸಿದ ಇಲಾಖೆಗಳ ಸಚಿವರನ್ನೂ ಕರೆತಂದು ಮಕ್ಕಳೊಡನೆ ಮಾತುಕತೆಯಲ್ಲಿ ತೊಡಗಿಸಿದರು.

ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯಲು ಶಾಸಕರಾದ ಆರ್.ವಿ. ವೆಂಕಟೇಶ್‌, ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಪುಟ್ಟಣ್ಣ, ಜಯಮಾಲ, ತಾರಾ, ರಾಮಚಂದ್ರ ಗೌಡ, ಅರುಣ ಶಹಾಪುರ, ಐವಾನ್‌ ಡಿʼಸೌಜಾ, ರಾಜೀವ್‌ ಪಿ, ಶಕುಂತಲಾ ಶೆಟ್ಟಿ ಮತ್ತಿತರರು ಸಹಕರಿಸಿದರು. ಅನೇಕ ಶಾಸಕರು, ಕೆಲವು ಇಲಾಖೆಗಳ ಉನ್ನತ ಅಧಿಕಾರಿಗಳು ತಾವಾಗೇ ಮುಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳ ಮಾತುಕತೆ ಕೇಳಲು ಬರಲಾರಂಭಿಸಿದರು.  

ಮುಖ್ಯಮಂತ್ರಿಗಳು ಪ್ರತಿಯೊಬ್ಬ ಮಗುವಿನ ಹತ್ತಿರ ಮಾತನಾಡುವುದು, ಪ್ರಶ್ನೆಗಳಿಗೆ ಉತ್ತರಿಸುವುದು ಕೇವಲ ಆಚರಣೆಯಾಗಿ ಉಳಿಯಲಿಲ್ಲ.  ಅಲ್ಲಿನ ಮಾತುಕತೆಯ ನೇರ ಪ್ರಸಾರವನ್ನು ಕೆಲವು ವಾರ್ತಾ ವಾಹಿನಿಗಳು ಪ್ರಸಾರ ಮಾಡಿದವು. ಪತ್ರಿಕೆಗಳು ತಮ್ಮದೇ ಶೈಲಿಯಲ್ಲಿ ವರದಿ ಮಾಡಿದವು. ಕಾರ್ಯಕ್ರಮದ ಯಾಥಾವತ್‌ ವರದಿಯನ್ನು ಸಂಬಂಧಿಸಿದ ಇಲಾಖೆಗಳಿಗೆ ಮುಖ್ಯಮಂತ್ರಿಗಳ ಕಛೇರಿಯಿಂದ ಕಳುಹಿಸಿ ಪ್ರತಿಕ್ರಿಯೆಗಳನ್ನು ಕೇಳಲಾಯಿತು.

ಹಾಸ್ಟೆಲ್‌ಗಳು, ಶಾಲೆಗಳಲ್ಲಿ ವ್ಯವಸ್ಥೆ, ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗಾಗಿ ವಿಶೇಷ ಕಾಳಜಿಯ ಅವಶ್ಯಕತೆ, ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ಕುರಿತು ಕ್ರಮಕೈಗೊಳ್ಳಲು ಸಂಬಂಧಿಸಿದ ಪೊಲೀಸ್‌ ಠಾಣೆಗಳಿಗೆ ತಾಕೀತು, ಹೆಚ್‌.ಐ.ವಿ. / ಏಡ್ಸ್‌ ಬಾಧಿತ/ಪೀಡಿತ ಮಕ್ಕಳಿಗೆ ಶಾಲಾ ದಾಖಲಾತಿಯಲ್ಲಿದ್ದ ತೊಂದರೆ ನಿವಾರಣೆಯೇ ಮೊದಲಾದವು ಸಂಚಲನ ಮೂಡಿಸಿತು.

ಮಗುವೊಂದು ತಮಗೆ ಮನೆ ಕಟ್ಟಿಕೊಳ್ಳಲು ಮಂಜೂರಾಗಿದ್ದರೂ, ಸ್ಥಳೀಯ ಅಧಿಕಾರಿಗಳು ಅದಕ್ಕೆ ಅವಕಾಶ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಂತೆಯೇ ಸಿದ್ದರಾಮಯ್ಯನವರು ತಮ್ಮ ಸಹಾಯಕರಿಗೆ ಹೇಳಿ ಸಂಬಂಧಿತ ಅಧಿಕಾರಿಯನ್ನು ಎಲ್ಲರೆದುರೇ ದೂರವಾಣಿ ಕರೆಗೆ ತೆಗೆದುಕೊಂಡು ವಿಚಾರಿಸಿದರು. ಅದಂತೂ ಎಲ್ಲರಿಗೂ ರೋಮಾಂಚನಗೊಳಿಸಿತು. ಜಗದೀಶ್‌ ಶೆಟ್ಟರ್‌ ಅವರು ಆರೋಗ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೆಂದರೆ, ಒಂದು ವಾರದ ನಂತರ ತಮ್ಮ ನಿರ್ದೇಶನ ಜಾರಿಯಾಗಿದೆಯೋ ಇಲ್ಲವೋ ತಿಳಿಸಲು ಸೂಚಿಸಿದ್ದರು. 

‘ಮಕ್ಕಳ ಹಕ್ಕುಗಳ ಸಂಸತ್‌ ಮತ್ತು ಮಕ್ಕಳೊಡನೆ ಮುಖ್ಯಮಂತ್ರಿಗಳ ಸಮಾಲೋಚನೆ’ ಕೇವಲ ಆಚರಣೆಯಲ್ಲ ಬದಲಿಗೆ ಒಂದು ಸಂದೇಶ ಎಂದು ಹಲವಾರು ಜನ ಗುರುತಿಸಲು ಆರಂಭಿಸಿದರು. ನೆರೆಯ ರಾಜ್ಯಗಳಲ್ಲಿ ಈ ಪ್ರಯೋಗ ನಡೆಸಲು ಯುನಿಸೆಫ್‌ನ ಪ್ರತಿನಿಧಿಗಳಾಗಿ ಇಡೀ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದ ರೂತ್‌ ಲಿಯೋನಾ, ಸೋನಿ ಕುಟ್ಟಿ ಜಾರ್ಜ್, ಪ್ರಸೂನ್‌ ಸೇನ್‌ ಮತ್ತಿತರರು  ಸುಳಿವು ನೀಡಿದರು. ಮಕ್ಕಳು ಕೇಳುವ ವಿಚಾರಗಳನ್ನು ಕರ್ನಾಟಕದ ಶಾಸಕರು ವಿಧಾನ ಮಂಡಲದ ಅಧಿವೇಶನಗಳಲ್ಲಿ ಚರ್ಚೆಗೆ ತೆಗೆದುಕೊಂಡರು. 

ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಕಷ್ಟು ಮಕ್ಕಳು ಈಗಲೂ ನಮ್ಮ ಸಂಪರ್ಕದಲ್ಲಿದ್ದಾರೆ. ಕೆಲವರು ಸಮಾಜಕಾರ್ಯ, ಮಕ್ಕಳ ಹಕ್ಕು, ಮಹಿಳೆಯರು ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಸಮಾಜಕಾರ್ಯ ಅಧ್ಯಯನ ಮಾಡಿರುವವರು, ಸ್ವಯಂಸೇವಾ ಸಂಘಟನೆಗಳಲ್ಲಿ ಕಾರ್ಯನಿರತರಾಗಿದ್ದಾರೆ. ಮಕ್ಕಳ ಸಂಸತ್‌ನ ಪ್ರಕ್ರಿಯೆಯಲ್ಲಿನ ಅನುಭವ ಅವರಲ್ಲಿ ವಿಭಿನ್ನವಾದ ವ್ಯಕ್ತಿತ್ವವನ್ನು ನಾಯಕತ್ವವನ್ನು ಬೆಳೆಸಿರುವುದನ್ನು ಕಂಡಿದ್ದೇನೆ. ಈ ಕಾರ್ಯಕ್ರಮ ಆಯೋಜನೆ ಮಾಡುವುದರಲ್ಲಿ ಪಳಗಿದ ನನ್ನ ಸಹೋದ್ಯೋಗಿಗಳಾದ ಮಂಜುನಾಥ್‌, ಸತ್ಯನಾರಾಯಣ, ಕಳಕಪ್ಪ, ನಾಗೇಂದ್ರ‌ ಪ್ರಸಾದ್, ನಾಗಮಣಿ, ನಾಗರಾಜ್‌ ಬಿಜಿ, ಸಂತೋಷ್‌, ವೆಂಕಟೇಶ್‌ ಮತ್ತಿತರರು ಅತ್ಯುತ್ತಮ ಸಂಘಟಕರಾಗಿ ವಿಕಾಸ ಹೊಂದಿದ್ದನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. 

ಆದರೆ ೨೦೧೭ರ ನಂತರದ ರಾಜಕೀಯ ಬೆಳವಣಿಗೆಗಳು, ಒತ್ತಡಗಳು, ಕೊರೋನಾ ಮತ್ತು ಸಮಯಾವಕಾಶಗಳ ಕೊರತೆಯೋ ಮೊದಲಾದವು ರಾಜ್ಯದ ಮಕ್ಕಳು ಮತ್ತು ಮುಖ್ಯಮಂತ್ರಿಗಳ ನಡುವೆ ಏರ್ಪಟ್ಟಿದ್ದ ಅರ್ಥಪೂರ್ಣ ವೇದಿಕೆಯ ಸದುಪಯೋಗ ಮಾಡಿಕೊಳ್ಳಲು ಸೋತಂತಾಗಿದೆ. ಹಲವು ಸಾಧ್ಯತೆಗಳನ್ನು ತೆರೆದಿಡುತ್ತಿದ್ದ ಮಕ್ಕಳ ಹಕ್ಕುಗಳ ಸಂಸತ್‌ ಆಯೋಜಿಸಲು ನಾವು ಯತ್ನಿಸುತ್ತಲೇ ಇದ್ದೇವೆ. ಇಂತಹದೊಂದು ಸಭೆಯನ್ನು ನಡೆಸಲು ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಮಾಜಕಲ್ಯಾಣ ಇಲಾಖೆಗಳೇ ಮುಂದಾಗಬೇಕು. ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿ  ಮುಖ್ಯಮಂತ್ರಿಗಳ ಕಛೇರಿಯೇ ದಿನಾಂಕವೊಂದನ್ನು ನಿಗದಿ ಮಾಡಿ ಮಕ್ಕಳಿಗೆ ಕಾಯುವಂತಾಗಬೇಕು ಎಂಬ ಕನಸಿನಲ್ಲೇ ಇದ್ದೇನೆ.  

೨೦೨೧ರಲ್ಲಿ ಶಾಸಕರು ಮತ್ತು ಮುಖ್ಯಮಂತ್ರಿಗಳು ಮುಂದಾಗಿ ಮುತುವರ್ಜಿ ತೋರಿದರೆ ಮತ್ತೊಮ್ಮೆಜಿಲ್ಲಾ ಮತ್ತು ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್‌ ಮತ್ತು ಮುಖ್ಯಮಂತ್ರಿಗಳೊಡನೆ ಮಕ್ಕಳ ಸಮಾಲೋಚನೆ ಸಾಧ್ಯವಾಗುತ್ತದೆ. 

(ಮುಂದುವರೆಯುವುದು. ಮಕ್ಕಳ ಹಕ್ಕುಗಳ ಸುಸ್ಥಿರ ಜಾರಿಗಾಗಿ ಶಾಸಕರ‌ ಪ್ರಾಂತೀಯ ಸಮ್ಮೇಳನ)

| ಮುಂದಿನ ಸಂಚಿಕೆಯಲ್ಲಿ |

‍ಲೇಖಕರು ವಾಸುದೇವ ಶರ್ಮ

April 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: