ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಕಂಡ ಕನಸು

gp-4

ಜಿ ಪಿ ಬಸವರಾಜು

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಿಲಿಕಾನ್ ವ್ಯಾಲಿಯಲ್ಲಿ ನಿಂತು ಕನಸುಗಳನ್ನು ಕಂಡಿದ್ದಾರೆ. ತಮ್ಮ ಕನಸುಗಳನ್ನು ಬೃಹತ್ ಐಟಿ ಕಂಪನಿಗಳ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದಾರೆ. ಮೋದಿಯವರ ಕನಸುಗಳು ಕೇಳುಗರಲ್ಲಿ ಉತ್ಸಾಹ ಉಕ್ಕಿಸಿವೆ. ಚಪ್ಪಾಳೆಯ ಸುರಿಮಳೆಯೂ ಆಗಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದೆನಿಸಿರುವ ಭಾರತದ ಪ್ರಧಾನಿ ಕಂಡ ಕನಸುಗಳಲ್ಲಿ ಐಟಿ ಕಂಪನಿಗಳ ಕನಸುಗಳೂ ಸೇರಿ, ಆ ಸನ್ನಿವೇಶವನ್ನು ಮತ್ತಷ್ಟು ಭಾವಪೂರ್ಣಗೊಳಿಸಿರುವ ಸಾಧ್ಯತೆಯೂ ಇದೆ.

ಮೋದಿಯವರ ಕನಸು ಡಿಜಿಟಲ್ ಇಂಡಿಯಾ ಕನಸು; ಐಟಿ ಕಂಪನಿಗಳ ಬೃಹತ್ ಬಂಡವಾಳವನ್ನು ಭಾರತಕ್ಕೆ ತರುವ ಕನಸು. ಭಾರತದ ಹಳ್ಳಿಹಳ್ಳಿಗಳಲ್ಲೂ ಇಂಟರ್ನೆಟ್ ಸೌಲಭ್ಯ ಇರಬೇಕು. ಅಮೆರಿಕದಂಥ ಮುಂದುವರಿದ ರಾಷ್ಟ್ರಗಳಲ್ಲಿರುವಂತೆ ಭಾರತದ ಪ್ರತಿ ರೈಲು ನಿಲ್ದಾಣದಲ್ಲೂ ವೈ-ಫೈ ಸೌಕರ್ಯ ಇರಬೇಕು. ಆಪಲ್ನಂಥ ಪ್ರತಿಷ್ಠಿತ ಸಂಸ್ಥೆ ತನ್ನ ಬಂಡವಾಳವನ್ನು ಭಾರತದಲ್ಲಿ ಹೂಡಬೇಕು ಮೈಕ್ರೋಸಾಫ್ಟ್, ಗೂಗಲ್ನಂಥ ಇನ್ನೂ ಹಲವು ದೈತ್ಯ ಸಂಸ್ಥೆಗಳು ಭಾರತವನ್ನು ತಮ್ಮ ಕಾರ್ಯಕ್ಷೇತ್ರದ ಪ್ರಮುಖ ಕೇಂದ್ರವಾಗಿ ಮಾಡಿಕೊಳ್ಳಬೇಕು ಇತ್ಯಾದಿ ಒಂದರೊಳಗೊಂದು ಬೆರೆತ ಹಲವಾರು ಕನಸುಗಳನ್ನು ಪ್ರಧಾನಿ ಸಿಲಿಕನ್ ವ್ಯಾಲಿಯಲ್ಲಿ ಕಂಡುಕೊಂಡಿದ್ದಾರೆ.

ಮೋದಿಯವರ ಕನಸಿಗೆ ಅದ್ಭುತವಾದ ಸ್ಪಂದನವೂ ದೊರೆತಿದೆ. ಭಾರತದ ನೆಲದಲ್ಲಿ ಹೂಡಲು ದೈತ್ಯ ಸಂಸ್ಥೆಗಳು ತಕ್ಷಣ ಘೋಸಿರುವ ಹಣದ ಮೊತ್ತವೇ ಮಿಲಿಯಾಂತರ ಡಾಲರನ್ನು ದಾಟಿದೆ. ಇದನ್ನು ಗಮನಿಸಿದರೆ ಚಿನ್ನದ ಹೊಳೆಯನ್ನು ಸಿಲಿಕನ್ ವ್ಯಾಲಿಯಿಂದ ಮೋದಿ ಭಾರತಕ್ಕೆ ಹರಿಸಿದ್ದಾರೆ. ಇದಕ್ಕಿಂತ ರೋಮಾಂಚನ ಹುಟ್ಟಿಸುವ ಬೇರೊಂದು ಸುದ್ದಿ ಇರಲು ಸಾಧ್ಯವೇ?

೧೨೧

ಈ ಕನಸುಗಳಿಂದ ಹೊರಬಂದು ನಿಜ ಸಂಗತಿಗಳೇನು ಎಂದು ಅರಿಯುವುದು ಬಹಳ ಮುಖ್ಯ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳು ಹದ್ದುಗಳಂತೆ ಕಾದಿವೆ. ಅವುಗಳ ಬಂಡವಾಳ ಹೂಡಿಕೆಗೆ ಅಭಿವೃದ್ಧಿಶೀಲ ರಾಷ್ಟ್ರಗಳು ಬೇಕೇಬೇಕು. ಮೋದಿ ಕನಸು ಕಾಣದಿದ್ದರೂ, ಭಾರತಕ್ಕೆ ಕಾಲಿರಿಸಲು ಈ ದೈತ್ಯ ಸಂಸ್ಥೆಗಳು ದಾರಿಯನ್ನು ಹುಡುಕುತ್ತಲೇ ಇದ್ದವು. ಈ ಸಂಸ್ಥೆಗಳನ್ನು ಸ್ವಾಗತಿಸಲು ಹಲವು ಸೌಲಭ್ಯಗಳನ್ನು ಭಾರತ ರೂಪಿಸಿಕೊಡಬೇಕಾಗುತ್ತದೆ. ಈ ಸೌಲಭ್ಯಗಳು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಈ ಸಂಸ್ಥೆಗಳಿಗೆ ದೊರೆಯಬೇಕಾಗುತ್ತದೆ. ಕೋಟ್ಯಂತರ ರೂಪಾಯಿ ಆದಾಯವನ್ನು ಈ ಸಂಸ್ಥೆಗಳು ತಂದುಕೊಡುತ್ತವೆ; ಉದ್ಯೋಗಗಳನ್ನು ಸೃಷ್ಟಿಸುತ್ತವೆ; ಭಾರತಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಎಲ್ಲ ಫಲಗಳೂ ದೊರಕುತ್ತವೆ ಎಂಬ ಲೆಕ್ಕಾಚಾರದಲ್ಲಿ ಮೋದಿ ಇರುವಂತೆ ಕಾಣುತ್ತದೆ. ಈ ದೈತ್ಯ ಸಂಸ್ಥೆಗಳು ಕೇವಲ ತಮ್ಮ ಬಂಡವಾಳ, ಲಾಭ-ನಷ್ಟಗಳ ಸುತ್ತಲೇ ಸುತ್ತುವುದಿಲ್ಲ. ನಿಧಾನಕ್ಕೆ ತಮ್ಮ ಹಿಡಿತವನ್ನು ಬಲಪಡಿಸಿಕೊಂಡಂತೆಲ್ಲ ತಮ್ಮದೇ ಕಾರ್ಯಸೂಚಿಯನ್ನು ಬಿಚ್ಚುತ್ತವೆ. ಸರ್ಕಾರಗಳ ಮೇಲೆ, ರಾಜಕೀಯ ಪಕ್ಷಗಳ ಮೇಲೆ ನಿಯಂತ್ರಣವನ್ನು ಸಾಧಿಸುತ್ತವೆ.

ಅಂದರೆ ಭಾರತದ ರಾಜಕಾರಣದಲ್ಲಿ, ಆಡಳಿತದಲ್ಲಿ, ಹಣಕಾಸಿನಲ್ಲಿ, ಉದ್ಯೋಗಾವಕಾಶಗಳಲ್ಲಿ, ಸಂಪನ್ಮೂಲಗಳ ಬಳಕೆಯಲ್ಲಿ ಹೀಗೆ ಅನೇಕ ಸಂಗತಿಗಳಲ್ಲಿ ಮೂಗು ತೂರಿಸುತ್ತವೆ. ಇಲ್ಲಿನ ಪ್ರಜಾಪ್ರಭುತ್ವ ಮೌಲ್ಯಗಳನ್ನು ರೂಪಿಸುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಕೂಡಾ ಈ ಸಂಸ್ಥೆಗಳ ಕೈವಾಡ ಇದ್ದೇ ಇರುತ್ತದೆ. ಗುಜರಾತಿ ಭಾಷೆಯೂ ಸೇರಿದಂತೆ ಹತ್ತು ಭಾರತೀಯ ಭಾಷೆಗಳ ತಂತ್ರಾಂಶಗಳನ್ನೂ ಗೂಗಲ್ ರೂಪಿಸಲಿದೆ. ನಮ್ಮ ಸಾಂಸ್ಕೃತಿಕ ಕ್ಷೇತ್ರಕ್ಕೂ ಈ ಸಂಸ್ಥೆಗಳು ಕೈಚಾಚುತ್ತವೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹೀಗೆ ಯಾವ ಕ್ಷೇತ್ರವನ್ನು ಬಿಡದೆ ಎಲ್ಲೆಲ್ಲಿಯೂ ತನ್ನ ಬಾಹುಗಳನ್ನು ಚಾಚುವ ಈ ಸಂಸ್ಥೆಗಳು ಮುಂದಿನ 20-30 ವರ್ಷಗಳ ಭಾರತದಲ್ಲಿ ಯಾವ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟ. ಆದರೆ ಅದರ ದಿಕ್ಕು ದೆಸೆಗಳನ್ನು ಊಹಿಸಬಹುದು. ಬೃಹತ್ ಸಂಸ್ಥೆಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೂಡುವ ಬಹು ದೊಡ್ಡ ಬಂಡವಾಳ ಕೇವಲ ಬಂಡವಾಳವಾಗಿರುವುದಿಲ್ಲ ಎಂಬ ವಾಸ್ತವ ನಮಗೆ ಈಗಾಗಲೇ ತಿಳಿದಿದೆ. ಅದರ ಬಿಸಿಯನ್ನು ನಾವು ಈಗ ಅನುಭವಿಸಿದ್ದೇವೆ.

ರೈತರ ಆತ್ಮಹತ್ಯೆ, ರಸಗೊಬ್ಬರ, ಕೀಟನಾಶಕಗಳು ನಮಗೆ ಅನಿವಾರ್ಯವಾಗುವಂಥ ಸನ್ನಿವೇಶವನ್ನು ಭಾರತದಲ್ಲಿ ಸೃಷ್ಟಿಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿ ಹೊರಟರೆ ಬಂಡವಾಳ ತರುವ ಅಪಾಯಗಳು ಎಂಥವು ಎಂಬುದರ ವಿವರಣೆ ಸಿಕ್ಕುತ್ತದೆ. ಬಂಡವಾಳ ಎನ್ನುವುದು ಮೇಲು ನೋಟಕ್ಕೆ ಆಕರ್ಷಕವಾಗಿ ಕಂಡರೂ ಅದರ ಒಡಲಲ್ಲಿ ವಿಷದ ಬೀಜಗಳಿರುತ್ತವೆ ಎಂಬುದನ್ನು ಮರೆಯಬಾರದು. ಒಮ್ಮೆ ನಾವು ಈ ಅಪಾಯದ ಬಾಗಿಲನ್ನು ತೆರೆದರೆ, ಮತ್ತ ಮುಚ್ಚುವುದಕ್ಕೆ ದಶಕಗಳ ಸತತ ಪ್ರಯತ್ನವೇ ಬೇಕಾಗುತ್ತದೆ. ಈ ಎಚ್ಚರವೂ ನಮಗೆ ಇರಬೇಕಾಗುತ್ತದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರತಿಭಾವಂತ ತರುಣರಿಗೆ ದೊಡ್ಡ ಹೆಸರಿದೆ. ಅವರ ಕೊಡುಗೆಗೆ ಜಗತ್ತಿನಲ್ಲಿ ಬಹಳ ಬೆಲೆ ಇದೆ. ಇವತ್ತು ಅಮೆರಿಕ, ಇಂಗ್ಲಂಡ್, ಜರ್ಮನಿ, ಫ್ರಾನ್ಸ್ ಹೀಗೆ ಅನೇಕ ರಾಷ್ಟ್ರಗಳಲ್ಲಿ, ವಿಶೇಷವಾಗಿ ಅಮೆರಿಕ, ಯೂರೋಪಿನಲ್ಲಿ ಭಾರತದ ಬಗ್ಗೆ ಗೌರವ ಮೂಡಿದ್ದರೆ ಅದರ ಹಿಂದೆ ನಮ್ಮ ತರುಣರ ಶ್ರಮ ಮುಖ್ಯವಾಗಿ ಕಾಣಿಸುತ್ತದೆ. ಇಂಥ ತರುಣ ಪ್ರತಿಭೆಗಳ ಬೆವರನ್ನು ಬಳಸಿಕೊಂಡೇ ಐಟಿ ಕ್ಷೇತ್ರದ ದೈತ್ಯರು ಬೆಳೆದಿದ್ದಾರೆ. ಇಂಥ ತರುಣರನ್ನು ಭಾರತ ಹೇಗೆ ಬಳಸಿಕೊಳ್ಳಬೇಕು ಎಂಬುದರ ಸುತ್ತ ಪ್ರಧಾನಿಯ ಕನಸುಗಳು ಹರಿದಿದ್ದರೆ ಅದು ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಅದು ನಮ್ಮ ಪ್ರಜಾಪ್ರಭುತ್ವವನ್ನು ಇನ್ನೂ ಬಲಗೊಳಿಸುತ್ತಿತ್ತು. ಪ್ರಧಾನಿ ಕಟ್ಟುವ ಕನಸುಗಳಲ್ಲಿ ಇಂಥ ತರುಣರ ಕನಸುಗಳೂ ಸೇರಿದರೆ ಅದು ಹೆಚ್ಚು ಪ್ರಯೋಜನಕಾರಿ.
ಗಂಗಾನದಿಯನ್ನು ಸ್ವಚ್ಛಗೊಳಿಸುವ ಕನಸನ್ನು ನಮ್ಮ ಪ್ರಧಾನಿ ಒಮ್ಮೆ ಕಂಡಿದ್ದರು. ಶುದ್ಧೀಕರಣಕ್ಕಾಗಿ ಕಾರ್ಯಕ್ರಮವನ್ನೂ ಹಾಕಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡರು. ಆದರೆ ನಂತರ ಗಂಗೆಯ ಪಾಡು ಏನಾಯಿತು ಎಂಬುದನ್ನು ಅವರು ಚಿಂತಿಸಿದಂತೆ ಕಾಣಲಿಲ್ಲ. ಇದೇ ಪ್ರಧಾನಿ ಪೊರಕೆ ಹಿಡಿದು ಭಾರತವನ್ನು ಗುಡಿಸುತ್ತೇನೆಂದು ಹೊರಟು ಟಿವಿ ಚಾನಲ್ಗಳಿಗೆ ಪೋಸ್ ಕೊಟ್ಟರು. ಭಾರತದ ಕಸ ಒಂದಂಗುಲವೂ ಚಲಿಸಿದಂತೆ ಕಾಣಲಿಲ್ಲ.

ಇವತ್ತಿಗೂ ನಮ್ಮ ಹಳ್ಳಿಗಳು ಯಾವ ಸ್ಥಿತಿಯಲ್ಲಿವೆ? ಪ್ರತಿಮನೆಗೂ ಕಕ್ಕಸಿಲ್ಲ; ಯೋಜನೆಗಳೇನೋ ಬೇಕಾದಷ್ಟು ಬಂದು ಹೋಗಿವೆ. ನಗರಗಳು ಶುದ್ಧಗಾಳಿ ಕೂಡಾ ಇಲ್ಲದೆ ತಡಬಡಿಸುತ್ತಿವೆ. ನಮ್ಮ ಕೊಳೆಗೇರಿಗಳ ಪಾಡಾದರೂ ಎಂಥದು?-ಇವನ್ನೆಲ್ಲ ಮೋದಿ ಗಂಭೀರವಾಗಿ ನೋಡಿ, ಕನಸು ಕಾಣಬೇಕಾಗಿತ್ತು. ಎಲ್ಲ ರಾಜ್ಯದ ಮುಖ್ಯಮಂತ್ರಿಗಳು, ಕನಸುಗಾರರು, ಇಂಜಿನಿಯರುಗಳು, ಹಳ್ಳಿ ನಗರಗಳ ಪ್ರತಿನಿಧಿಗಳು ಹೀಗೆ ಎಲ್ಲರನ್ನೂ ಒಳಗೊಳ್ಳುವಂತೆ, ಎಲ್ಲರ ಚಿಂತನೆಗಳೂ ಹುರಿಗೊಳ್ಳುವಂತೆ, ಜನರಲ್ಲಿ ಹೊಸ ಹುಮ್ಮಸ್ಸು ಮೂಡಿಸಿ ಅವರೂ ಪ್ರಧಾನಿಯ ಕನಸುಗಳನ್ನು ಹಂಚಿಕೊಳ್ಳುವಂತೆ ಮಾಡಿದ್ದರೆ ದೇಶದಲ್ಲಿ ಒಂದಿಷ್ಟಾದರೂ ಬದಲಾವಣೆ ಸಾಧ್ಯವಿತ್ತು. ಕೇವಲ ಪಕ್ಷದ ಕಾರ್ಯಕ್ರಮವಾದರೆ ಅದಕ್ಕೆ ಸ್ಪಂದನ ಸಿಕ್ಕುವುದು ಕಷ್ಟ. ಮೊದಲು ಈ ರಾಷ್ಟ್ರದ ಜನಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಕೆಮಾಡಿಕೊಳ್ಳಬೇಕು; ಅದೇ ಬಹುದೊಡ್ಡ ಬಂಡವಾಳ. ಗಾಂಧೀಜಿ ಹೀಗೆ ಮಾಡಿ ಗೆದ್ದರು.

ಸಂಪರ್ಕ ಸಾಧನೆಯ ವಿಚಾರದಲ್ಲಿ ಮೊದಲು ಹದಗೊಳ್ಳಬೇಕಾದದ್ದು ಮನಸ್ಸುಗಳು. ಗೋವಾ, ಮಹಾರಾಷ್ಟ್ರ, ಕನರ್ಾಟಕ, ತಮಿಳುನಾಡು, ಕೇರಳ ಹೀಗೆ ನದೀ ನೀರಿನ ಹಂಚಿಕೆಯಲ್ಲಿ ಮುನಿಸಿಕೊಂಡಿರುವ ಮುಖ್ಯಮಂತ್ರಿಗಳ ನಡುವ ಸಂಪರ್ಕ ಸಾಧ್ಯವಾದರೆ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಪ್ರಧಾನಿ ಮನಸ್ಸು ಮಾಡಿದರೆ ಈ ಸಂಪರ್ಕ ಏರ್ಪಡುವುದು ಕಷ್ಟವೇನಲ್ಲ. ಈ ಸಂಪರ್ಕಕ್ಕೆ ಪ್ರಧಾನಿ ‘ಡಿಜಿಟಲ್ ಇಂಡಿಯಾ’ ಕನಸು ಕಾಣಬೇಕಿಲ್ಲ!

ಕುಡಿಯುವ ನೀರು ಇವತ್ತಿಗೂ ಭಾರತದಲ್ಲಿ ಬಹುದೊಡ್ಡ ಸಮಸ್ಯೆ. ಉದಾಹರಣೆಗೆ ಕರ್ನಾಟಕವನ್ನೇ ನೋಡಿ: ಕಳಸಾ ಬಂಡೂರಿ ಹೋರಾಟ ಕುಡಿಯುವ ನೀರಿಗಾಗಿ ಬಾಯಾರಿದವರು ನಡೆಸುತ್ತಿರುವ ಹೋರಾಟ. ಎತ್ತಿನಹೊಳೆ ಯೋಜನೆಯೂ ಬಾಯಾರಿದವರಿಗಾಗಿ ರೂಪಿಸಿರುವ ಯೋಜನೆ. ಇವತ್ತಿಗೂ ಉತ್ತರ ಕನರ್ಾಟಕದ ಬಾಯಾರಿಕೆ ನೀಗಿಲ್ಲ. ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೂರಾರು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿದೆ. ಇದು ಕೇವಲ ರಾಜ್ಯ ಸಕರ್ಾರ ಮಾತ್ರ ನಿಭಾಯಿಸಬೇಕಾದ ಸಮಸ್ಯೆಯಲ್ಲ. ಇದರಲ್ಲಿ ಕೇಂದ್ರದ ಪಾಲೂ ಇದೆ. ಕೇಂದ್ರದ ಅನುಮತಿಯೂ ಅಗತ್ಯವಾಗಿರುವ ಯೋಜನೆಗಳಿವೆ. ಇಡೀ ಭಾರತದಲ್ಲಿರುವ ನೀರಿನ ಸಮಸ್ಯೆಯ ಬಗ್ಗೆ ಪ್ರಧಾನಿ ಒಮ್ಮೆ ಚಿಂತಿಸಬೇಕು; ಮಾಧ್ಯಮಗಳಿಗಾಗಿ ಅಲ್ಲ; ಜನರಿಗಾಗಿ.

ಅನ್ನ, ಬಟ್ಟೆ, ನೀರು, ವಸತಿ, ಶುದ್ಧ ಕುಡಿಯುವ ನೀರು (ಬಾಟಲ್ ನೀರು ಅಲ್ಲ), ಓಡಾಡಲು ರಸ್ತೆಗಳು, ಕನಿಷ್ಟ ವಾಹನ ಸೌಲಭ್ಯ, ಆಸ್ಪತ್ರೆ, ಶಿಕ್ಷಣ ಹೀಗೆ ಮೊದಲು ಕೈಗೆತ್ತಿಕೊಳ್ಳಬೇಕಾದ ಸಮಸ್ಯೆಗಳು ಹಲವಿವೆ. ಇತ್ತ ಗಮನ ಹರಿಸದೆ ವೈ-ಫೈ, ಡಿಜಿಟಲ್ ಇಂಡಿಯಾ, ಇಂಟರ್ನೆಟ್ ಸೌಲಭ್ಯ, ಬೃಹತ್ ಬಂಡವಾಳಿಗರನ್ನು ಆಹ್ವಾನಿಸುವುದು ಇತ್ಯಾದಿ ಕನಸು ಕಾಣುವುದು ನಿಜ ಭಾರತದ ನಿಜ ಸಮಸ್ಯೆಗಳಿಗೆ ಬೆನ್ನು ತೋರಿಸಿದಂತೆ.

‍ಲೇಖಕರು admin

October 11, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: