'ಭಗವಾನ್ ಅವರ ಹೇಳಿಕೆ ಮಹಿಳಾ ವಿರೋಧಿಯಾಗಿದೆ…'

ಸೃಜನಶೀಲತೆ ಉಳಿಯಲು ಸಂಯಮವೂ ಬೇಕು

na divakar
ನಾ ದಿವಾಕರ

ಯಾವುದೇ ಒಬ್ಬ ಸಾಹಿತಿ ಅಥವಾ ಕಲಾವಿದ ತನ್ನ ಸೃಜನಶೀಲ ಮನಸ್ಸಿನ ಮತ್ತು ಸಂವೇದನಾಶೀಲ ಚಿಂತನೆಯ ಅಭಿವ್ಯಕ್ತಿಯಾಗಿ ವ್ಯಕ್ತಪಡಿಸುವ ಅಭಿಪ್ರಾಯ ಅಥವಾ ಮಂಡಿಸುವ ಪ್ರತಿಪಾದನೆ ವಿವಾದ ಸೃಷ್ಟಿಸಿದರೆ ಈ ವಿವಾದ ಹುಟ್ಟುಹಾಕುವ ವಿಕೃತ ಮನಸ್ಸುಗಳನ್ನು ಪ್ರಶ್ನಿಸುವುದು ಉಚಿತ. ಭಾರತದ ಪ್ರಸ್ತುತ ಸಂದರ್ಭದಲ್ಲಿ ವಿಕೃತಿ ಮೇಲುಗೈ ಸಾಧಿಸುತ್ತಿರುವುದು ಸ್ಷಷ್ಟ.

ಒಂದು ಮುಕ್ತ ಸಮಾಜದಲ್ಲಿ ಇದು ಸಹಜವೂ ಹೌದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಆಲದ ಮರದ ನೆರಳಿನಲ್ಲಿ ಸಂವೇದನೆ ಮತ್ತು ಸೃಜನಶೀಲತೆ ಆಶ್ರಯ ಪಡೆಯುವಂತೆಯೇ ವಿಕೃತಿಯೂ, ವಿತಂಡವಾದವೂ ಆಶ್ರಯ ಪಡೆಯುತ್ತದೆ. ಆದರೆ ಆಶ್ರಿತ ಮನಸ್ಸುಗಳೆಲ್ಲವೂ ಸ್ವೀಕೃತವಾಗಬೇಕಿಲ್ಲ. ಈ ವೈವಿಧ್ಯತೆಯ ನಡುವೆಯೇ, ಭಿನ್ನತೆಯ ನಡುವೆಯೇ ಸೃಜನಶೀಲತೆ ಬದುಕುತ್ತದೆ. ಉಸಿರಾಡುತ್ತದೆ. ಇದು ಪ್ರಜಾತಂತ್ರ ಮೌಲ್ಯಗಳ ನೆಲೆಯಲ್ಲಿ ಕಂಡುಬರುವ ವಿದ್ಯಮಾನ ಇತಿಹಾಸ ಕಾಲದಿಂದಲೂ ಪ್ರಮಾಣೀಕರಿಸಲ್ಪಟ್ಟಿದೆ.

rama sitaಆದರೆ ಒಂದು ಸಾಮಾಜಿಕ ನೆಲೆಯಲ್ಲಿ ಸೃಜನಶೀಲ ಚಿಂತನೆಗಳು ಹಲವಾರು ಬಗೆಯಲ್ಲಿ, ಹಲವು ಆಯಾಮಗಳಲ್ಲಿ ವ್ಯಕ್ತವಾಗುತ್ತವೆ. ಸೃಜನಶೀಲ ಮನಸ್ಸುಗಳ ಹರಿವು ಒಂದೇ ದಿಕ್ಕಿನಲ್ಲಿ ಸಾಗುತ್ತವೆ ಎಂದು ಅಪೇಕ್ಷಿಸುವುದು, ಎಲ್ಲೋ ಒಂದು ಬೆಟ್ಟದ ಮೂಲೆಯಲ್ಲಿ ಚಿಮ್ಮುತ್ತಾ ತನ್ನ ಮಾರ್ಗವನ್ನು ತಾನೇ ನಿರ್ಧರಿಸಿ ಹರಿಯುವ ನದಿಗೆ ಅಣೆಕಟ್ಟು ನಿರ್ಮಿಸಿ ಆ ನೀರಿನ ಮೂಲ ಸೆಲೆ ಮತ್ತು ನೆಲೆಯ ಮೇಲೆ ಅಧಿಪತ್ಯ ಸಾಧಿಸಿದಂತಾಗುತ್ತದೆ. ಬಹುಶಃ ಭಾರತೀಯ ಸಮಾಜ ಈ ಗೊಂದಲವನ್ನು ಎದುರಿಸುತ್ತಿದೆ.

ಸೃಜನಶೀಲ ಮನಸ್ಸುಗಳು ಆಯ್ಕೆ ಮಾಡಿಕೊಳ್ಳುವ ಭಿನ್ನ ವಾಹಿನಿಗಳಿಗೆ ಅಣೆಕಟ್ಟುಗಳು ಹೆಚ್ಚಾಗುತ್ತಲೇ ಇವೆ. ಮುಕ್ತವಾಗಿ ಹರಿಯುವ ಚಿಂತನೆ ಎಂಬ ನದಿ ನೀರನ್ನು ಅಣೆಕಟ್ಟುಗಳ ಮೂಲಕ ನಿರ್ಬಂಧಿಸುವ ಪ್ರಯತ್ನ ಅವ್ಯಾಹತವಾಗಿ ನಡೆಯುತ್ತಿರುವಂತೆಯೇ ಮತ್ತೊಂದೆಡೆ ನೀರನ್ನು ಜಡಗಟ್ಟಿಸುವ ತೊರೆಗಳು, ಹೊಂಡಗಳು ನಿರ್ಮಾಣವಾಗುತ್ತಿವೆ. ಈ ಹೊಂಡಗಳ ನಿರ್ಮಾತೃಗಳು , ಅಣೆಕಟ್ಟುಗಳ ನಿರ್ಮಾತೃಗಳು ತಮ್ಮ ಅಸ್ಮಿತೆಗಳನ್ನು ಹರಿವ ನೀರಿನ ಒಡಲಲ್ಲೇ ಸಮೀಕರಿಸುವ ಮೂಲಕ ಒಂದು ವ್ಯವಸ್ಥಿತ ಚೌಕಟ್ಟನ್ನು ರೂಪಿಸಿಕೊಳ್ಳುತ್ತಿದ್ದಾರೆ. ಶತಮಾನಗಳ ಕಾಲ ತಮ್ಮ ಭದ್ರಕೋಟೆಗಳನ್ನು ಸುರಕ್ಷಿತವಾಗಿ ಕಾಪಾಡಲು ಬುನಾದಿಗಳನ್ನು ಅರಸುತ್ತಿದ್ದಾರೆ. ಈ ಬುನಾದಿಗಳ ಗುದ್ದಲಿ ಪೂಜೆಗಾಗಿ ಮುಕ್ತ ಚಿಂತಕರ ಆತ್ಮಗಳನ್ನು ರಕ್ತತರ್ಪಣದ ಮೂಲಕ ಬಲಿ ನೀಡುತ್ತಿದ್ದಾರೆ. ಪನ್ಸಾರೆ, ಧಬೋಲ್ಕರ್, ಕಲಬುರ್ಗಿಇಂತಹ ಒಂದು ಸ್ಥಾವರಗಳ ಅಡಿಗಲ್ಲುಗಳಾಗಿ ಈಗಾಗಲೇ ಮೇಧಿನಿಯ ಒಡಲಲ್ಲಿ ಸೇರಿಹೋಗಿದ್ದಾರೆ.

ಭವಿಷ್ಯದ ಪೀಳಿಗೆಗೆ ಈ ಹರಿಯುವ ನೀರು ತೃಷೆ ನೀಗಿಸಲು ಉಪಯುಕ್ತವಾಗುವುದೋ ಅಥವಾ ಉಸಿರುಗಟ್ಟಿಸುವ ಪ್ರವಾಹ ಸೃಷ್ಟಿಸುವುದೋ ಎನ್ನುವುದು ಪ್ರಜಾತಂತ್ರ ಮೌಲ್ಯಗಳ ಅಳಿವು ಉಳಿವನ್ನು ಅವಲಂಬಿಸಿರುತ್ತದೆ. ಈ ಮೌಲ್ಯ ಸಂರಕ್ಷಣೆಗಾಗಿ ಹೋರಾಡುವ ಮನಸ್ಸುಗಳ ಸೃಜನಶೀಲತೆ ಮತ್ತು ದಾರ್ಶನಿಕತೆಯನ್ನು ಶಾಶ್ವತವಾಗಿ ಭೂಗತವಾಗಿಸುವ ಹುನ್ನಾರ ಸಮಾಜದ ಎಲ್ಲ ಸ್ತರಗಳಲ್ಲೂ ಗೋಚರಿಸುತ್ತಿದೆ. ಧರ್ಮ, ಭಾಷೆ, ಜಾತಿ, ನಂಬಿಕೆ, ವಿಶ್ವಾಸ ಮತ್ತು ಅಸ್ಮಿತೆಗಳ ಉಬ್ಬು ತಗ್ಗುಗಳು ಮುಕ್ತ ಚಿಂತನೆಯ ಹರಿವಿಗೆ ತಡೆಗೋಡೆಗಳಂತೆ ಎದುರಾಗುತ್ತಿವೆ.

ಈ ಸಂದರ್ಭದಲ್ಲಿ ಸೃಜನಶೀಲ ಮನಸ್ಸುಗಳ ಆದ್ಯತೆಗಳೇನು ? ಸಂವೇದನಾಶೀಲ ಮನಸ್ಸುಗಳ ಆಯ್ಕೆಗಳೇನು? ಇತಿಹಾಸವನ್ನು ಕೆದಕುತ್ತಲೇ ಇರುವುದೇ ಅಥವಾ ಇತಿಹಾಸದಲ್ಲಿ ಸಂಭವಿಸಿರುವ ಪ್ರಮಾದಗಳನ್ನು ಸರಿಪಡಿಸುವುದೇ ? ಈ ಗೊಂದಲದ ನಡುವೆಯೇ ಭಾರತದ ಸಾಂಸ್ಕೃತಿಕ ಸಂಕಥನ ಮುನ್ನಡೆಯುತ್ತಿದೆ. ಭೂಗತವಾಗಿರುವ ಚಾರಿತ್ರಿಕ ಸತ್ಯಗಳನ್ನು ಮತ್ತು ಪೌರಾಣಿಕ ಮಿಥ್ಯೆಗಳನ್ನು ಸಮಕಾಲೀನ ಸಾಮಾಜಿಕ ಅಸ್ಮಿತೆಗಳೊಡನೆ ಸಮೀಕರಿಸುವ ಮೂಲಕ ಈಗಾಗಲೇ ಮತೀಯವಾದಿಗಳು ಮನುಕುಲವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಮಿಥ್ಯೆಗಳನ್ನು ಇತಿಹಾಸವನ್ನಾಗಿ ಪರಿವರ್ತಿಸುವ ಚಾಣಕ್ಯ ತಂತ್ರಗಳ ಪರಿಣಾಮ ಇತಿಹಾಸವೇ ಮಸುಕಾಗಿ ಪೌರಾಣಿಕ ಮಿಥ್ಯೆಗಳು ಇತಿಹಾಸದ ಮೆರುಗು ಪಡೆಯುತ್ತಿವೆ.

ಹಾಗಾಗಿಯೇ ಒಂದೆಡೆ ಕಲ್ಪಿತ ಕಾವ್ಯಗಳು ಇತಿಹಾಸವಾಗುತ್ತಿದೆ, ಮತ್ತೊಂದೆಡೆ ನೈಜ ಮಾನವ ಇತಿಹಾಸ ಕಪೋಲ ಕಲ್ಪಿತ ಕಾವ್ಯವಾಗಿ ಮೂಲೆಗುಂಪಾಗುತ್ತಿದೆ. ಸಂಸ್ಕೃತಿ ಎನ್ನುವ ಒಂದು ವಿಶಾಲ ಅರ್ಥದ ವಿದ್ಯಮಾನವನ್ನು ನಿರ್ಧಿಷ್ಟ ಚೌಕಟ್ಟಿನಲ್ಲಿ ಬಂಧಿಸುವ ಮೂಲಕ ಅಸ್ಮಿತೆಗಳ ಹೊಸ ಲೋಕವನ್ನು ಸೃಷ್ಟಿಸಲಾಗುತ್ತಿದೆ. ನಾವು ಯಾವ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇವೆ ಎಂಬ ಪ್ರಶ್ನೆಗೆ ಉತ್ತರ ನಮ್ಮ ಅಸ್ಮಿತೆಯಲ್ಲೇ ಅಡಗಿರುವಂತಹ ವಿಕೃತ ಸಮಾಜವನ್ನು ಆಧುನಿಕ ಭಾರತ ಸೃಷ್ಟಿಸುತ್ತಿರುವುದು ದುರಂತವಾದರೂ ಸತ್ಯ.

rama with bowಇತಿಹಾಸ ಆಗಲಿ, ಪುರಾಣ ಮತ್ತು ಮಿಥ್ಯೆಗಳೇ ಅಗಲಿ ಎಲ್ಲವೂ ಸಹ ಅಂದಿನ ಕಾಲಘಟ್ಟದ ಸ್ಥಾಪಿತ ವ್ಯವಸ್ಥೆಯನ್ನು ಬಿಂಬಿಸುವ ಆಕರಗಳಾಗಿರುತ್ತವೆ. ಸಮಕಾಲೀನ ಸಂದರ್ಭದಲ್ಲಿ ಈ ಗತ ವಿದ್ಯಮಾನಗಳನ್ನು ಅವಲೋಕಿಸುವಾಗ ಪ್ರಗತಿಪರ ಮನಸುಗಳು ಇಂದಿನ ಸಾಮಾಜಿಕ ಅನಿಷ್ಟಗಳಿಗೆ ಗತಕಾಲದ ಸಾಮಾಜಿಕ ಚೌಕಟ್ಟಿನೊಳಗೆ ಬುನಾದಿ ಇರುವುದನ್ನು ಗುರುತಿಸುತ್ತಾರೆ. ಆದರೆ ಈ ಗುರುತಿಸುವಿಕೆ ಸಂಪ್ರದಾಯವಾದಿಗಳಿಗೆ ಮತ್ತು ಎಲ್ಲ ಕಾಲಘಟ್ಟಗಳ ಸ್ಥಾಪಿತ ವ್ಯವಸ್ಥೆಯ ಸಂರಕ್ಷಕರಿಗೆ ರುಚಿಸುವುದಿಲ್ಲ.

ರಾಮ ಅಪ್ಪನಿಗೆ ಹುಟ್ಟಿದವನಲ್ಲ ಎಂದು ಹೇಳುವ ಮುನ್ನ ರಾಮನ ಪಾತ್ರವನ್ನು ಸೃಷ್ಟಿಸಿದ ಮಹಾಕವಿಯೇ ಅವನ ಅಪ್ಪನ ಪಾತ್ರವನ್ನೂ ಸೃಷ್ಟಿಸಿದ್ದಾನೆ ಎಂಬ ವಾಸ್ತವವನ್ನು ಗ್ರಹಿಸಬೇಕು. ಇಲ್ಲವಾದಲ್ಲಿ ಒಂದು ಮಹಾಕಾವ್ಯಕ್ಕೆ ಇತಿಹಾಸದ ಲೇಪನ ನೀಡುವ ಸಂಪ್ರದಾಯವಾದಿಗಳ ನೆಲೆಯನ್ನು ಸಮಥರ್ಿಸಿಸಂತಾಗುತ್ತದೆ. ವಾಲ್ಮೀಕಿ ಕವಿ ತನ್ನ ಕಾಲಘಟ್ಟದಲ್ಲಿ ಕಂಡ ಸಾಮಾಜಿಕ ವಿದ್ಯಮಾನ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ರಾಮನ ಜನ್ಮವನ್ನು ರೂಪಿಸಿದ್ದಾನೆ. ಪ್ರಾಚೀನ ಭಾರತೀಯ ಸಮಾಜದಲ್ಲಿ ಪ್ರಚಲಿತವಾಗಿದ್ದ ನಿಯೋಗ ಶಿಶು ಪದ್ಧತಿ ಮತ್ತು ಪುರುಷ ಹಾಗೂ ಸ್ತ್ರೀಯರ ನಡುವಿನ ಸಂಬಂಧಗಳನ್ನು ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ನಿಂತು ನೋಡಿದಾಗ ಸಾಂಪ್ರದಾಯಿಕ ಮನಸುಗಳು ಕೆರಳುತ್ತವೆ. ಏಕೆಂದರೆ ಇಲ್ಲಿ ಸಮಾಜದ ಅಂತಃಸತ್ವ ಅಡಗಿರುತ್ತದೆ.

ಸೃಜನಶೀಲ ಮನಸುಗಳು ಇಂತಹ ವಿಚಾರಗಳಲ್ಲಿ ಪಾರದರ್ಶಕತೆಯಿಂದ, ನಿಷ್ಪಕ್ಷಪಾತವಾಗಿ ತಮ್ಮ ಅಭಿವ್ಯಕ್ತಿಯನ್ನು ಪ್ರತಿಪಾದಿಸಬೇಕಾಗುತ್ತದೆ. ಪ್ರೊ ಕೆ ಎಸ್ ಭಗವಾನ್ ರಾಮ ಅಪ್ಪನಿಗೆ ಹುಟ್ಟಿದವನಲ್ಲ ಎಂದು ಹೇಳಿರುವುದು ಪುರುಷಾಹಂಕಾರಕ್ಕೆ ಪೆಟ್ಟು ನೀಡಿದಂತಾಗಿದೆ ಎಂದು ಭಾವಿಸಲಾಗುವುದಿಲ್ಲ. ಬದಲಾಗಿ ಮಹಿಳಾ ದೃಷ್ಟಿಕೋನದಿಂದ ನೋಡಿದಾಗ ಭಗವಾನ್ ಅವರ ಹೇಳಿಗೆ ಮಹಿಳಾ ವಿರೋಧಿಯಾಗಿದೆ.

ಆಧುನಿಕ ಪರಿಭಾಷೆಯಲ್ಲಿ ಅಪ್ಪನಿಗೆ ಹುಟ್ಟಿದವನಾಗಿದ್ದರೆ ಎಂದು ಮೂದಲಿಸುವುದು ಸಾಮಾನ್ಯ. ಈ ಮೂದಲಿಕೆಯ ಹಿಂದೆ ಹೆತ್ತ ತಾಯಿಯ ಶೀಲವನ್ನು ಶಂಕಿಸುವ ಒಂದು ಅನಾಗರೀಕ ಮನಸ್ಸು ಸುಪ್ತವಾಗಿರುವುದನ್ನು ಪ್ರಗತಿಪರ ಮನಸ್ಸುಗಳು ಗ್ರಹಿಸಲೇಬೇಕು. ಒಬ್ಬ ವ್ಯಕ್ತಿ ಯಾರ ವೀರ್ಯದಿಂದ ಜನ್ಮ ತಾಳುತ್ತಾನೋ ಅವನನ್ನೇ ಅಪ್ಪ ಎಂದು ಸ್ವೀಕರಿಸುವ ಮನೋಬಲ, ದಾಷ್ಟ್ರ್ರತೆ ಪ್ರಬುದ್ಧ ಸಮಾಜಕ್ಕೆ ಇರಬೇಕು. ಹಾಗಾದಾಗ ಮಹಿಳೆಯ ಶೀಲವನ್ನು ಶಂಕಿಸುವ ಪುರುಷಪ್ರಧಾನ ಧೋರಣೆಗೆ ಸವಾಲೆಸೆದಂತಾಗುತ್ತದೆ.

ಸೃಜನಶೀಲತೆಯನ್ನು ಕೇವಲ ವಿಮರ್ಶಾತ್ಮಕ ನೆಲೆಯಲ್ಲಿ ಮಾತ್ರವೇ ನೋಡದೆ, ವಸ್ತುನಿಷ್ಠ ನೆಲೆಯಲ್ಲಿ ನೋಡಿದಾಗ ಸಂಯಮ ಮತ್ತು ಸೃಜನಶೀಲತೆಯ ನಡುವಿನ ಸೂಕ್ಷ್ಮ ಸಂಬಂಧಗಳು ಅರಿವಾಗುತ್ತದೆ. ಫ್ಯಾಸಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸೃಜನಶೀಲತೆಯಷ್ಟೇ ಸಂಯಮವೂ ಅಗತ್ಯ.

‍ಲೇಖಕರು admin

October 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: