ಸಿರಾಜ್ ಬಿಸರಳ್ಳಿ
1. ಕಾಗಕ್ಕ ಗುಬ್ಬಕ್ಕ ಕವಿತೆ
ಮಡಿವಂತರೂರಿನಲ್ಲೊಂದು
ಪೂರ್ವಜನ್ಮದ ಪುಣ್ಯದಿಂದ
ಕಾಗೆಯೊಂದು ಅವತರಿಸಿತ್ತು
ತನ್ನ ಕುಹು ಕುಹೂ ನಿನಾದದಿಂದ
ಸಕಲಹೃನ್ಮನಗಳ ತಣಿಸಿತ್ತು
ಪಿಂಡಾನ್ನಗಳ ತಿಂದುಂಡು ತ್ರಿಲೋಕ
ಸಂಚಾರಗೈಯುತ ಹಾರುತಿತ್ತು, ಹಾಡುತಿತ್ತು…

ಆಗೀಗ ದೂರದೂರಿಂದ ಹಾರಿ ಬರುತ್ತಿದ್ದ
ಗುಬ್ಬಿಯ ಕಾವ್ ಕಾವ್ ಕೋಗಿಲೆಯ
ಚಿಂವ್ ಚಿಂವ್ ಕರ್ಕಶ ಶಬ್ದಕ್ಕೆ
ಕರ್ಣಗಳ ಮುಚ್ಚಿಕೊಳ್ಳುತ್ತಿತ್ತು
ಪಕ್ಷಿ ಕುಲಕ್ಕೆ ಕಳಂಕವಾಗಿರ್ದ
ಕಾವ್, ಚಿಂವ್ ಗಳ ಕರ್ಕಶಕ್ಕೆ
ಅವಮಾನದಿಂದ ಮುಖ ಮುಚ್ಚಿಕೊಂಡು
ತಾನವರಂತಲ್ಲ ಎನ್ನುತ್ತಿತ್ತು
ಮಡಿವಂತರೆದುರು ಲಗಾಟಿ ಹೊಡೆದು
ತನ್ನ ನಿಷ್ಠೆ ಸಾಭೀತು ಮಾಡುತ್ತಿತ್ತು..
ಮಡಿವಂತರು ಮುಸುರೆಗೈ ಹಿಂದೆ ಮಾಡಿ
ಎಡಗೈಯಿಂದ ಗುಬ್ಬಿ, ಕೋಗಿಲೆಗಳ ಓಡಿಸುತಿರೆ
ಸಂತಸದಿಂದ ಕುಣಿಯುತಿತ್ತು
ಆದಿಕವಿಯಿಂ ಸಂತೆಕವಿವರೆಗಿರ್ದ
ಗ್ರಂಥಗಳ ಪಾರಾಯಣ ಮಾಡುತ್ತ ಕೇಳುತ್ತ
ಅರೆನಿಮಿಲಿತವಾಗಿ ಧ್ಯಾನ ಮಾಡುತಿತ್ತು
ಛೇ.. ಛೇ.. ಧ್ಯಾನಕ್ಕೆ ದಕ್ಕೆಯಾಗುವ
ಕಾವ್ ಕಾವ್, ಚಿಲಿಪಿಪಿಗೆ ಉಗ್ರವಾಗಿ
ಕಣ್ಬಿಟ್ಟೊಡನೆ ಕಂಡಿದ್ದೇನು ಅಕಟಕಟಾ..
ಮೂಳೆ ಮಾಂಸದ ತುಂಡಿನ ಸುತ್ತ ತನ್ನ ಕುಲಜರೇ !

ಅಲ್ಲಲ್ಲಿ ಬೆಂಕಿ ಹೊಗೆ…
ಚೀರಾಡುತ್ತ ಕೂಗಾಡುತ್ತ ಓಡುತ್ತಿರುವ
ದರಿದ್ರರ ಹಿಂದೆ ದೊಣ್ಣೆ ಹಿಡಿದ ಮನುಜರು…
ಮಾಂಸ, ಮನೆ ಸುಟ್ಟವಾಸನೆ
ಈ ದರಿದ್ರರಿಗೆ ಯಾವಾಗ ಬುದ್ದಿ ಬರುತ್ತೊ….
ಪಂಪಭಾರತದ ರಾಧೇಯ ಭಾನುಮತಿ
ಪಗಡೆ ಪ್ರಸಂಗ ಪಾರಾಯಣ ಮಾಡಿದೊಡೆ
ಸಕಲ ಜೀವಾತ್ಮ…
2. ನನಗೆ ನಿನ್ನ ದರುಶನ ಭಾಗ್ಯವಿಲ್ಲ
ಶತ ಶತಮಾನಗಳಿಂದ ಈ ಕಲ್ಲು ಕೋಟೆಗಳಲಿ ಬಂದಿ ನಾನು
ಕಾವಲಿಗೆ ಬಂದವರೇ ಸುತ್ತ ಕೋಟೆ ಕಟ್ಟಿದ್ದಾರೆ
ಆರಾಧಿಸಲು ಬಂದವರು ಅಡ್ಡ ಹಾಕಿದ್ದಾರೆ
ಧೂಪ ದೀಪಗಳ ಮುಸುಕಿನಲಿ
ಸಂಪತ್ತಿನ ಭಾರದಲಿ ಮರೆಮಾಡಿದ್ದಾರೆ
ಒಂದಲ್ಲ ಎರಡಲ್ಲ ಹತ್ತಾರು ಬಾಗಿಲುಗಳು
ಬೀಗ ಹೊತ್ತುಕೊಂಡು ಭದ್ರವಾಗಿವೆ
ನನ್ನೆದುರು ಸಾಲು ಸಾಲು ಅಂಗಡಿಗಳು
ಇಲ್ಲಿ ಎಲ್ಲವೂ ಮಾರಾಟಕ್ಕಿವೆ
ಎಂದೋ ಕಳಚಿ ಬರಬೇಕಿತ್ತು ಈ ಎಲ್ಲ ಬಂಧನಗಳ
ಏನು ಮಾಡಲಿ ತಡವಾಗಿ ಹೋಗಿದೆ

ಮುಗ್ದ ಕಂದಮ್ಮಗಳ, ತಾಯಂದಿರ ಆಕ್ರಂದನ
ಕೇಳಲಾಗದೇ ಕಿವುಡನಾಗಿದ್ದೇನೆ
ನೋಡಲಾಗದೇ ಕುರುಡನಾಗಿದ್ದೇನೆ
ಸ್ಪರ್ಷ ಸಂವೇದನೆಯನ್ನೇ ಕಳೆದುಕೊಂಡಿದ್ದೇನೆ
ನೀನು ನನ್ನ ಮುಟ್ಟದೇ…
ಕ್ಷಮಿಸಿಬಿಡು ಕೂಸೇ,
ಬಿಕ್ಕಳಿಸುತ ದೇವ ಹೇಳಿದ
ನನಗೆ ನಿನ್ನ ದರುಶನ ಭಾಗ್ಯವಿಲ್ಲ…






0 Comments