ಸಿನಿಮಾ ಉಳಿಸೋದು ನಿಮ್ಮ ಕೈಯಲ್ಲಿದೆ..

ಮ ಶ್ರೀ ಮುರಳಿ ಕೃಷ್ಣ

ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ (ಪ್ರಸ್ತುತ ದೊಡ್ಡ ನಗರಗಳಲ್ಲಿ ಮಲ್ಟಿಪ್ಲೆಕ್ಸ್) ವೀಕ್ಷಿಸುವುದಕ್ಕೂ ಮನೆಗಳಲ್ಲಿ ಕುಳಿತು ಟಿವಿ, ಡೆಸ್ಕ್/ಲ್ಯಾಪ್‌ಟಾಪ್ಗಳು, ಮೊಬೈಲ್ಗಳಲ್ಲಿ ನೋಡುವುದಕ್ಕೂ ವ್ಯತ್ಯಾಸಗಳಿವೆ.  ಸಿನಿಮಾಗಳನ್ನು ಸಾಮೂಹಿಕವಾಗಿ ವೀಕ್ಷಿಸುವಾಗ ಲಭಿಸುವ ರಸಾನುಭವವೇ ಬೇರೆ ತೆರನಾದದ್ದು.  ಕತ್ತಲೆಯ ವಾತಾವರಣದಲ್ಲಿ, ವೀಕ್ಷಕರ ನಾನಾ ರೀತಿಯ ಮೆಲು ಹಾಗೂ ತೀವ್ರ ಸ್ಪಂದನಗಳ ನಡುವೆ ಥಿಯೇಟರ್ಗಳಲ್ಲಿ ಸಿನಿಮಾಗಳ ಆಂತರ್ಯದಲ್ಲಿ ಲೀನವಾಗುವುದರ ಸೊಗಸಿದೆಯಲ್ಲ ಅದರ ಅನುಭವವೇ ಬೇರೆ. ಪ್ರದರ್ಶನಗಳ ತರುವಾಯ ಸಮಯವಿದ್ದರೇ ಸ್ನೇಹಿತ-ಸ್ನೇಹಿತೆಯರ ಜೊತೆ ಗಪ್ಪ ಹೊಡೆಯುತ್ತ, ಟೀ-ಕಾಫಿ ಗುಟುಕರಿಸುತ್ತ, ವೀಕ್ಷಿಸಿದ ಸಿನಿಮಾಗಳ ಕುರಿತು ಜರುಗುವ ವಿಚಾರ ವಿನಿಮಯಗಳು ಕೂಡ ಮುದದಾಯಕ ಸಂಗತಿಗಳೇ.

ಈ ಪರಿಯ ಪೀಠಿಕೆಯನ್ನು ನೀಡಿರುವುದ್ದಕ್ಕೆ ಕಾರಣಗಳಿವೆ.  ಭಾರತದ ಚಲನಚಿತ್ರರಂಗದಲ್ಲಿ ದಲಿತ ಸಂಕಥನವನ್ನು ಹೊಂದಿರುವ ಸಿನಿಮಾಗಳು ತಯಾರಾಗಿರುವುದು ತುಂಬ ಕಡಿಮೆ ಎಂದರೆ ಅತಿಶಯೋಕ್ತಿಯಾಗಲಾರದು.  ಅದಕ್ಕೆ ಗಹನ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳಿವೆ.  ಆದರೆ ಇತ್ತೀಚಿನ ಒಂದೆರಡು ದಶಕಗಳಲ್ಲಿ ಮರಾಠಿ, ತಮಿಳು, ಮಲಯಾಳಂ, ಹಿಂದಿ ಮುಂತಾದ ಪ್ರಾಂತೀಯ ಚಲನಚಿತ್ರರಂಗಗಳಲ್ಲಿ ಕೆಲವು ದಲಿತ ಸಂವೇದನೆ/ಏಸ್ಥಿಟಿಕ್ಸ್ ಇರುವ ಸಿನಿಮಾಗಳು ಬಿಡುಗಡೆಯಾಗಿವೆ.  ಜಬ್ಬಾರ್‌ ಪಟೇಲ್‌, ನಾಗರಾಜ್‌ ಮಂಜುಳೆ, ನೀರಜ್‌ ಘೆವಾನ್‌, ಪ ರಂಜಿತ್‌, ಮಾರಿಯಾ ಸೆಲ್ವರಾಜ್‌, ಬಿಜುಕುಮಾರ್‌ ದಾಮೋದರನ್‌, ರಾಜೀವ್‌ ರವಿ ಮುಂತಾದ ಸಿನಿಮಾ ನಿರ್ದೇಶಕರು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿದ್ದಾರೆ.  ಕನ್ನಡದಲ್ಲಿ  ಬಿ ಎಂ ಗಿರಿರಾಜ್‌, ಕೆ ಶಿವರುದ್ರಯ್ಯ ಮುಂತಾದ ನಿರ್ದೇಶಕರು ಯತ್ನಿಸಿದ್ದಾರೆ.

ಜೀವಾ ನವೀನ್‌ ಎಂಬ ಯುವ ಸಿನಿಮಾ ನಿರ್ದೇಶಕ ʼ ಪಾಲಾರ್‌ ʼ ಎಂಬ ಕನ್ನಡ ಸಿನಿಮಾವನ್ನು, ಅದೂ ಪೂರ್ಣಪ್ರಮಾಣದ ದಲಿತ ಕಥನ (ಕೋಲಾರ ಸೀಮೆಯ) ಇರುವ ಸಿನಿಮಾವನ್ನು ನಿರ್ದೇಶಿಸಿದ್ದಾರೆ, ಅದು ತೆರೆ ಕಾಣಲಿದೆ ಎಂದು ತಿಳಿದಾಗ, ಅದನ್ನು ವೀಕ್ಷಿಸಬೇಕು ಎಂಬ ಮನಸ್ಸಾಯಿತು. ನಮ್ಮ ಒಂದು ಸಿನಿಮೋತ್ಸಾಹಿಗಳ ಅಥವಾ ಸಿನಿಮಾ ಪೈತ್ಯರು ಎಂದು ಕರೆಯಬಹುದಾದ  ಒಂದು ದುಷ್ಟರ ಗುಂಪಿದೆ!  ಈ ʼದುಷ್ಟ ಕೂಟʼ ಎಂಬ ಪದಪ್ರಯೋಗವನ್ನು ಲಂಕೇಶರು ಮಾಡುತ್ತಿದ್ದರು.  ಅವರ ಕಚೇರಿಯಲ್ಲಿ ಸಂಜೆ/ರಾತ್ರಿ ಸಮಯ ಸೇರುತ್ತಿದ್ದ ಸ್ನೇಹಿತರ ದಂಡನ್ನು ಅವರು ʼದುಷ್ಟ ಕೂಟʼ ಎಂದು ಕರೆಯುತ್ತಿದ್ದರು!  ನಮ್ಮ ಸಿನಿಮಾʼ ದುಷ್ಟ ಕೂಟ ʼವಾರಕ್ಕೊಮ್ಮೆ ಕ್ಲಬ್‌ ಹೌಸ್‌ನಲ್ಲಿ ಸೇರಿ ʼ ಸಿನಿಮಾ ಓದು ʼ ಎಂಬ ಕಾರ್ಯಕ್ರಮದಡಿ ಸಿನಿಮಾಗಳ ಬಗೆಗೆ ಚರ್ಚೆಯನ್ನು ಮಾಡುತ್ತದೆ.  ಇತ್ತೀಚೆಗೆ ಅದು ಸೇರಿದಾಗ, ʼ ಪಾಲಾರ್‌ ʼಬೆಂಗಳೂರಿನಲ್ಲಿ  ಕೇವಲ ಒಂದು ವಾರದ ಮಟ್ಟಿಗೆ 6-7 ಮಲ್ಟಿಪ್ಲೆಕ್ಸ್‌ಗಳಲ್ಲಿ ತೆರೆ ಕಾಣಲಿದೆ ಎಂಬ ವಿಷಯ ತಿಳಿಯಿತು.  ಇದರ ಪ್ರೀಮಿಯರ್‌ ಶೋ ನೋಡಿದ ನಮ್ಮ ಕೂಟದ ಕೆಲವು ಸದಸ್ಯರು ಪುನಃ ವೀಕ್ಷಿಸಲು ತಯಾರಾದರು.  ನನಗೂ ಆಹ್ವಾನವಿತ್ತರು.  ಆದರೆ ಕೆಲವು ಕಾರಣಗಳಿಂದ ನನಗೆ ಹೋಗಲಾಗಿರಲಿಲ್ಲ.

ನಿನ್ನೆ (ಮಾರ್ಚ್‌ 2 )ಅದರ ಕೊನೆ ಶೋ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ ನ ಪಿವಿಆರ್‌ ಮಲ್ಟಿಪ್ಲೆಕ್ಸ್‌ನಲ್ಲಿ ರಾತ್ರಿ 7.10ಕ್ಕೆ ಇತ್ತು.  ಸರಿ, ʼ BookMyShow Appನಲ್ಲಿ ನೋಡಿದಾಗ 15 ಸೀಟ್‌ ಗಳು ಬುಕ್‌ ಆಗಿರುವುದು ತಿಳಿಯಿತು (ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ 10 ವೀಕ್ಷಕರಿದ್ದರೆ ಮಾತ್ರ ಶೋ ಇರುತ್ತದೆ). ಸರಿ, ದೂರದಲ್ಲಿರುವ ನಮ್ಮ ಮನೆಯಿಂದ ಮೆಟ್ರೊ ಹಿಡಿದು, ಸಿನಿಮಾ ಶುರುವಾಗುವುದಕ್ಕೆ ಒಂದೂವರೆ ತಾಸಿನ ಮುನ್ನವೇ ತಲುಪಬೇಕಿದ್ದ ತಾಣವನ್ನು ತಲುಪಿದೆ.  ಬುಕಿಂಗ್‌ ಕೌಂಟರ್ನಲ್ಲಿ ವಿಚಾರಿಸಿದಾಗ, ನಾನೊಬ್ಬನೇ ವೀಕ್ಷಕನಿರುವುದು ತಿಳಿದು ಬಂದಿತು!.  ಅಲ್ಲಿದ್ದ ಹುಡುಗ “ ಶೋ ನಡೆಸಲು ಹತ್ತು ಮಂದಿ ವೀಕ್ಷಕರು ಇರಬೇಕು……” ಎಂದು ಹೇಳಿದ. 

ನಾನು Appನಲ್ಲಿ 15 ಸೀಟ್‌ಗಳು ಬುಕ್‌ ಆಗಿವೆ ಎಂದು ತಿಳಿಸಿದಾಗ ಆತ ಅವು VVIPಗಳಿಗೆ ಮೀಸಲಿಟ್ಟಿರುವ ಸೀಟ್‌ಗಳು, ಯಾರೂ ಇವರೆಗೂ ಬುಕ್‌ ಮಾಡಿಲ್ಲ ಎಂಬ ಮಾಹಿತಿಯನ್ನು ರವಾನಿಸಿದ.  ನಾನು ಬೇಸ್ತು ಬಿದ್ದಿದ್ದೆ ! ಸರಿ, ಹಾಗೂ ಹೀಗೂ ಮುಕ್ಕಾಲು ಗಂಟೆ ಸಮಯವನ್ನು ಕಳೆದು ಕೌಂಟರಿನಲ್ಲಿ ವಿಚಾರಿಸಿದಾಗ, ಇನ್ನೂ ನಾನೊಬ್ಬನೇ ವೀಕ್ಷಕ ಎಂಬ ಸಮಾಚಾರ ತಿಳಿಯಿತು! ಬಂದ ದಾರಿಗೆ ಸುಂಕವಿಲ್ಲ ಎಂದು ಬಗೆದು ಮನೆಗೆ ಹಿಂದಿರುಗಲು ಉದ್ಯುಕ್ತನಾದೆ.  ಕೌಂಟರಿನಿಂದ ವಾಪಸ್ಸು ಬರುತ್ತಿದ್ದಾಗ, ಗ್ಲಾಸ್‌ ದ್ವಾರದ ಬಳಿ, ಹೆಗಲ ಮೇಲೆ ಮಡಿಚಿದ ಹಸಿರು ಶಾಲಿದ್ದ ವ್ಯಕ್ತಿಯನ್ನು ಕಂಡೆ.  ಪರಿಚಿತ ಮುಖವೆನಿಸಿತು.  ಅವರು ನೀವು ಪಾಲಾರ್‌ ನೋಡುವುದಕ್ಕೆ ಬಂದಿದ್ದೀರಾ ಎಂದು ವಿಚಾರಿಸಿದರು.  ನನ್ನ ಪರಿಚಯ ಮಾಡಿಕೊಂಡೆ. ಅವರು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾಗಿರುವ ವೀರಸಂಘಯ್ಯರಾಗಿದ್ದರು! ಅವರ ಜೊತೆ ಅವರ ಶ್ರೀಮತಿಯವರಿದ್ದರು.  ನಂತರ ಹಿರಿಯ ದಂಪತಿಯರು ಬಂದರು.  ಒಂದಿದ್ದ ಸಂಖ್ಯೆ ಐದಕ್ಕೆ ಏರಿತು. 

ತರುವಾಯ ವೀರಸಂಘಯ್ಯನವರು ತಮ್ಮ ಗೆಳೆಯರಿಗೆ ಪೋನಾಯಿಸಿ ಶೋಗೆ ನೋಡಲು ಆಹ್ವಾನಿಸಿದರು.  ಐದಿದ್ದ ಸಂಖ್ಯೆ ಒಂಬತ್ತಕ್ಕೆ ಏರಿತು! ಸರಿ, ನಾವು ಮ್ಯಾನೇಜರ್‌ ಬಳಿ ಹೋಗಿ ನಾವು ಒಂಬತ್ತು ಮಂದಿ ಇದ್ದೇವೆ.  ದಯವಿಟ್ಟು ಶೋ ನಡೆಸಿ ಎಂದು ವಿನಂತಿಸಿದೆವು.  ಆ ಯುವ ಮ್ಯಾನೇಜರಿನ  ಪ್ರತಿಕ್ರಿಯೆ ಸಕಾರಾತ್ಮಕವಾಗಿತ್ತು.  ಒಂದು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟು, ನಾವು ಒಳಗಡೆ ಹೋದೆವು.  ಸಿನಿಮಾ ಶುರುವಾದ ಐದು ನಿಮಿಷಗಳ ನಂತರ 8-9 ವ್ಯಕ್ತಿಗಳಿದ್ದ ಒಂದು ಕುಟುಂಬ ನಮ್ಮನ್ನು ಸೇರಿಕೊಂಡಿತ್ತು.  ಮುಗಿದ ತರುವಾಯ ಸಿನಿಮಾದಲ್ಲಿ ಪ್ರಧಾನಪಾತ್ರವನ್ನು ನಿರ್ವಹಿಸಿರುವ ಯುವನಟ ತಿಲಕ್‌ ರಾಜ್ ಬಂದು ನಮ್ಮ ಅಭಿಪ್ರಾಯಗಳನ್ನು ಕೇಳಿದರು. 

ನಾನೂ ಈ ಸಿನಿಮಾದ ಬಗೆಗೆ ಏನನ್ನೂ ಬರೆಯುತ್ತಿಲ್ಲ.  ಏಕೆಂದರೆ ಈಗಾಗಲೇ ಇಲ್ಲಿ ನಮ್ಮ ಸಿನಿಮಾ ʼ ದುಷ್ಟ ಕೂಟʼದ ನಾಗರಾಜ್‌ ಶೆಟ್ಟಿ ಮತ್ತು ಚಂದ್ರಪ್ರಭಾ ಕಠಾರಿಯವರು ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ.

ಮೆಟ್ರೋದಲ್ಲಿ ವಾಪಸ್ಸು ಬರುವಾಗ, ಬೆಂಗಳೂರಿನಂತಹ ಮಹಾನಗರದಲ್ಲಿ ಹತ್ತಾರು ದಲಿತ/ಎಡ ಸಂಘಟನೆಗಳು ಸಕ್ರಿಯವಾಗಿರುವಾಗ ʼ ಪಾಲಾರ್‌ ʼನಂತಹ ಸಿನಿಮಾಗಳು ಒಂದು ವಾರದ ಕಾಲ ಕೂಡ ನಡೆಯುವುದು ಕಷ್ಟವಾಗುತ್ತಿದೆಯಲ್ಲ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದಷ್ಟೇ ಅಲ್ಲ, ಕಾಡಿತು !

‍ಲೇಖಕರು avadhi

March 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಿಂಗರಾಜ ಸೊಟ್ಟಪ್ಪನವರ

    ನೀವುಗಳು ಇಷ್ಟು ಶ್ರಮಪಟ್ಟು ಸಿನೆಮಾ ನೋಡಿದ್ದು.. ಇಂತಹ ಸಿನೆಮಾಗಳನ್ನು ನೋಡುವ ಉತ್ತೇಜಿಸುವ ನಿಮ್ಮ ಸಿನೆಮಾ ಪ್ರೀತಿಗೆ
    ನಾನೂ ನೋಡುತ್ತೇನೆ ಗೆಳೆಯರಿಗೂ ಹೇಳುತ್ತೇನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: