ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿನಿಮಾ..

ದಾದಾಪೀರ್ ಜೈಮನ್

ನಾಲ್ಕು ಗೋಡೆಗಳ ನಡುವೆ
ಕೂತು ಕೋಣೆಗಳ ಒಳಗೆ
ಚಿತ್ರಗಳ ಬೆಳಕಲ್ಲಿ ಕಂಡಿದ್ದು ಯಾರು?
ಚಕಚಕನೆ ಚಲಿಸುತ್ತ
ನಗಿಸುತ್ತಾ ಅಳಿಸುತ್ತ
ಹಾಡುತ್ತ ಕುಣಿಯುತ್ತ
ಭಾವನದ ರಸಸೃಷ್ಟಿ ಮಾಡಿದ್ದು ಯಾರು?

ಸುಳಿಸುಳಿದು ಒಳಹೊರಗೆ
ಸುಡುಸುಡುವ ಸಂಕಟವ
ಭೂತ ಭವಿತವ್ಯಗಳ ವರ್ತಮಾನದ ಹಾಡ
ಯಾರದೊ ಎಲ್ಲಿಯದೋ ಭೂಗೋಳದ
ತುಂಬಾ ನಡೆನಡೆದು ತುಂಬಿದುದು
ಜೋಳಿಗಿ ಜಂಗಮ ಜೋಗಿ ಆದದ್ದು ಯಾರು?

ದಶದಿಕ್ಕುಗಳಲಿ ಚದುರಿ ಬೆಳೆವ ಮಣ್ಣಲಿ ಬೆರೆತು
ಬಾಳುವ ಮನುಜರ ಪಾತ್ರ
ಬಿಳಿಪರದೆಯಲಿ ಹರಡಿ
ದೃಶ್ಯ ಪಾಚಿಯ ಕದಡಿ
ಹಾಡು ಹಸೆ ಮಾತು ಮೌನ

ಕಣ್ಣೊಳಗೆ ಉಳಿದ ಪಸೆ
ಹೃದಯದಲಿ ಪಿಸುಗುಡುವ ಓಂಕಾರ ನಾದ
ನರನಾಡಿಗಳಲಿ ಜೀವಮಿಡಿತದ ಸದ್ದು
ಕೇಳಿದ್ದು ಕರುಳಿನ ಕೂಗು ಮನುಜರ ಪಾಡು
ಕಂಡದ್ದು ಬಹುಷಃ ನಮ್ಮನ್ನೇ ಇರಬೇಕು
ಮುಂದೆ ಚಲಿಸುವುದೆಲ್ಲ ಕನ್ನಡಿ ಆಗಿರಬೇಕು

ಎಲ್ಲವು ನಮ್ಮದೇ ಆಗಿ
ಒಳಗು ಹಿಗ್ಗುತ ಹೋಗಿ
ದರ್ಶನದ ಬೆಳಗೊಂದು
ಕಿಡಿಕಿಡಿಯಾಗಿ ಹತ್ತಿಳಿಯುತಿರಲು
ದಾಟಬಹುದೆ  ಹೀಗೆ ಬಾಳುವೆಯ ಹೊಳೆಯ
ಕರೆಯಬಹುದೆ ಇದಕೆ ಸಿನಿಮಾನವತೆ ಕಥೆಯ…

 

‍ಲೇಖಕರು avadhi

21 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading