ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ಧಲಿಂಗ ಪಟ್ಟಣಶೆಟ್ಟಿ ಹೊಸ ಕವಿತೆ- ಪರಿಷ್ಕಾರ…

ಸಿದ್ಧಲಿಂಗ ಪಟ್ಟಣಶೆಟ್ಟಿ

ತುದುಕಳಿಸಿ ಬಂದ ಹೊತ್ತು
ಅಚ್ಚಿನಮನೆಗೆ
ಹೊರಟ ಲೇಖನದ ಕರಡಚ್ಚು
ಈಗಾಗಲೇ ಎರಡು ಸಲ ತಿದ್ದಿದ್ದೇನೆ,
ಆದರೂ ಕೊನೆಯ ಸಲ ಎನ್ನುತ್ತ
ಮತ್ತೊಮ್ಮೆ ಕರಡು ನೋಡುತ್ತೇನೆ.
ಸಮಾಧಾನ,
ಅಲ್ಲಲ್ಲಿ ತಿದ್ದುಪಡಿ ಮಾಡುತ್ತೇನೆ
ತೆಗೆಯುತ್ತೇನೆ ಸೇರಿಸುತ್ತೇನೆ
ಬದಲಿಸುತ್ತೇನೆ ಕಣ್ಣಾಡಿಸುತ್ತೇನೆ ಮತ್ತೆ
ಮತ್ತೆ ತಿದ್ದುತ್ತೇನೆ ಪ್ರೂಫ್.

ಅಚ್ಚಾಗಿ ಹೊರನಗುವ ಲೇಖನದ ಮುಖದಲ್ಲಿ
ತಪ್ಪುತಡಿ ಕಪ್ಪುಕಲೆ ಮಸಿಮಣ್ಣು
ಕಾಣುವುದು ಇರುವುದು ಬೇಡ
ಉಲ್ಲಾಸ ಸುಖ ಸೊಗಸು ಮಾತ್ರ ಸರಿ
ಆಗ ಋಜು ಮಾತು
ರುಜುವಾತು.

ಬರವಣಿಗೆ ಸಾಧ್ಯವಿದ್ದಷ್ಟು
ಶುದ್ಧವಾಗಿರಲಿ ಪರಿಪೂರ್ಣ ಸುಂದರವಿರಲಿ
ಕನಿಷ್ಠ ಪಕ್ಷ
ಈ ಕ್ಷಣಕ್ಕೆ ಈ ದಿನಕ್ಕೆ ಈಗಿನ ಕಾಲಕ್ಕೆ
ಓದುವ ತಿಳಿಯಬಯಸುವ
ವಿದ್ವಜ್ಜಗದ ಮಹನೀಯರೆಂದುಕೊಂಡವರು
ಮೆಚ್ಚುವ ಹಾಗೆ ಲಕ್ಷಿಸುವಂತೆ
ಆಗಲೇಬೇಕು…
ಹಂಬಲಿಸಿ, ಯತ್ನಿಸುತ್ತೇನೆ.

ಅಚ್ಚುಕೂಟದಿಂದ ವಾಸದ ಮನೆಗೆ ಮರಳುತ್ತೇನೆ
ತಟ್ಟನೇ ನೆನಪು ಹಸಿಹಸಿಯಾಗಿ ಗರಿಗೆದರುತ್ತವೆ
ಬದುಕಿನ ಒಂದೊಂದು ಆಗುಹೋಗು
ಯತ್ನ ಘಟನೆ ಪ್ರಸಂಗ ಪರಿಸ್ಥಿತಿ
ಕಳೆದುಹೋದ ಮಾತು ಯೋಚನೆ
ಆಡಿ ಕೇಳಿ ಹೇಳಿ ಸಹಿಸಿ ಅನುಭವಿಸಿದ
ಒಂದೊಂದು ಕ್ಷಣವೂ
ಹೀಗೆಯೇ ತಿದ್ದುಪಡಿಗೆ ಒಲಿದಿದ್ದರೆ
ಲಭಿಸಿದ್ದರೆ ಅನುಕೂಲವಿರುತ್ತಿದ್ದರೆ
ಕರೆಕ್ಶನ್ ಸಾಧ್ಯವಿದ್ದಿದ್ದರೆ
ಹಾಗೆ
ಬದುಕು ನಿಜವಾಗಿಯೂ
ಮಧುರ ಮನೋಹರ ಮೋಹನ ರಾಗ
ಸಂಗೀತವಾಗುತ್ತಿತ್ತು,
ಈಗ ಬರೆದಂಥ ಒಂದೇ ಒಂದು ಲೇಖನವನ್ನೂ
ಬರೆಯುವುದು ಬರೆಯಬಯಸುವುದು
ಕರಡಚ್ಚುಗೊಳಿಸುವುದು ತಿದ್ದುವುದು
ಬೇಕಿರಲಿಲ್ಲ
ಬೇಕೇ ಇರಲಿಲ್ಲ…

‍ಲೇಖಕರು Admin

24 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading