ಸಿದ್ಧಲಿಂಗ ಪಟ್ಟಣಶೆಟ್ಟಿ: ಮಾತನಾಡುತ್ತಾರೆ…

ಸತೀಶ ಕುಲಕರ್ಣಿ

ಅದೊಂದು ಅಪರೂಪದ ಸಂದರ್ಭ. ಲೇಖಕರೊಂದಿಗೆ ಭೇಟಿ- ಎಂಬ ಕೇಂದ್ರ ಸಾಹಿತ್ಯದ ಅಕಾಡೆಮಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಒಂದೂವರೆ ಗಂಟೆಗಳ ಕಾಲ ತಮ್ಮ ಬಾಲ್ಯದ ನೆನಪು ಮತ್ತು ಸಾಹಿತ್ಯ ರಚನೆಯ ಹಿಂದಿನ ಪ್ರೇರಣೆಗಳ ಕುರಿತು ಮಾತನಾಡಿದರು. ಸೂಜಿ ಬಿದ್ದರೂ ದನಿ ಕೇಳುವ ಆಪ್ತ ಸಮಾರಂಭ, ಹೆಸರು Meet the author. ಸಿ.ಪ. ಮಾತನಾಡುತ್ತ ಹೋದರು. ಸಂಗೀತ ಕಛೇರಿಯ ಒಂದು ಬೈಠಕದಂತೆ ನಾನಾ ಭಾವ ತಂತು ಮೀಟುಗಳು ಇದ್ದವು. ಜೊತೆಗೆ ಹಂಚಿನಮನಿ ಆರ್ಟ ಗ್ಯಾಲರಿಯ ಅಹ್ಲಾದಕರ ವಾತಾವರಣ. ಅವರೇ ಹೇಳಿದಂತೆ ಮೀಟ್ ಅಂದರೆ- ಲೇಖಕನ ಅಂತರ೦ಗವನ್ನು ಮೀಟಿದಂತೆ. ನೋವು ವಿಷಾದ, ಹಾಸ್ಯ, ಆಗಿಹೋದ ಅನಾಹುತಗಳು, ಸಾಧಿಸಿದ ಹುಮ್ಮಸ್ಸು ಇವೆಲ್ಲವನ್ನು ಮೆಟ್ಟಿ ನಿಂತ ಮಾತುಗಳಾಗಿದ್ದವು.

‘ಒಂದೂವರೆ ವರ್ಷದವನಿರುವಾಗ ನನ್ನಪ್ಪ ತೀರಿಕೊಂಡ, ಅವ್ವ, ಇದ್ದ ಮನೆಯನ್ನು ಮಾರಿ ಅಪ್ಪ ಹೆಣವನ್ನು ಸಾಗಿಸಿದಳು. ಈಗಲೂ ಇದು ನನ್ನನ್ನು ಕಾಡುವ ಘಟನೆ. ಕಪ್ಪು ಬಸಿ ತೊಳೆದೆ, ಬೀದಿ ದೀಪದ ಕೆಳಗೆ ಓದಿದೆ. ಶಿಕ್ಷಣ ಮುಗಿಸಿದೆ. ಬದುಕು ಒಂದು ಸಂತಿ, ಜಾತ್ರಿ ಪ್ಯಾಟಿ ಇದ್ದಂತೆ, ಏನೇನೊ ಹುಡುಕುತ್ತೇವೆ. ಬೇಕದದ್ದು ಒಮ್ಮೊಮ್ಮೆ ಸಿಗುವುದೇ ಇಲ್ಲ’ ಹೀಗೆ ತಮ್ಮ ಬಾಲ್ಯದ ನೆನಪು ಮತ್ತು ಬದುಕಿನ ಪಯಣವನ್ನು ಹಂಚಿಕೊಳ್ಳುತ್ತ ಹೋದರು.

‘ಬರವಣಿಗೆ ಎಂದರೆ ಲೇಖಕನೊಬ್ಬನ ನೆನಪುಗಳ ಮೆರವಣಿಗೆ. ಸಾಹಿತಿ ಇದ್ದಾಗ ಮಾತನಾಡುವರು, ಇಲ್ಲದಾಗ ಆತನ ಸಾಹಿತ್ಯ ಮಾತನಾಡುತ್ತದೆ. ಸಾಹಿತ್ಯ ಲೋಕವೇ ವಿಚಿತ್ರ, ಪ್ರಶಸ್ತಿಗಳು ಬರಬೇಕಾದವರಿಗೆ ಬರುವುದಿಲ್ಲ, ಹಾಗೆ ನೋಡಿದರೆ ಡಿ.ವ್ಹಿ. ಗುಂಡಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಾಗಿತ್ತು. ಬರಲಿಲ್ಲ. ಇದು ತಪ್ಪೊ ಸರಿಯೊ ನನಗೆ ಗೊತ್ತಿಲ್ಲ. ಬಾರದಿರುವುದಂತೂ ನಿಜ’

‘ಗೋಕಾಕರು ನಮ್ಮೆಲ್ಲರ ಸಾಹಿತ್ಯದ ಗುರುಗಳು. ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಮೀಟ್ ದಿ ಆಥರ್ ಅಥವಾ ಲೇಖಕರೊಂದಿಗೆ ಭೇಟಿ ಇದರ ಮೊದಲ ಸಂವಾದಕರು ಅವರೇ. ಗೋಕಾಕರು ನನಗೆ ಚಂಪಾನಿಗೆ ಗುರುಗಳು. ಅಕಾಡೆಮಿಯ ಈ ಕಾರ್ಯಕ್ರಮ ಲೇಖಕರಿಗೆ ಕೊಡುವ ದೊಡ್ಡ ಗೌರವ. ಹೀಗೇಕೆ ಬರೆದೆ ? ಎಂದು ನೀವು ಕೇಳಬಹುದು. ಆದರೆ ಹೀಗೆ ಬರೆ ಎಂದು ನೀವು ಹೇಳಲು ಸಾಧ್ಯವಿಲ್ಲ’

ನಾನು ಕಲಿತ ಬಾಸಲ್ ಮಿಶನ್ ಶಾಲೆ, ಕಾರ್ನಾಡ, ಸುರೇಶ ಹೆಬ್ಳೀಕರ ಹಾಗೂ ನನ್ನು ಬೆಳಿಸಿತು. ವರದರಾಜ ಹುಯಿಲುಗೋಳರು ನಮಗೆಲ್ಲ ಸಾಹಿತ್ಯದ ಆರಂಭಿಕ ಮಾರ್ಗದರ್ಶಿಗಳು. ನನ್ನಲ್ಲಿ ಶೆಲ್ಲಿ, ಕೀಟ್ಸ್, ವರ್ಡ್ಸವರ್ತರನ್ನು ಬಿತ್ತಿದರು. ಬೇಂದ್ರೆಯವರ ಕಡೆಗೆ ಕರೆದುಕೊಂಡು ಹೋಗಿ ಪರಿಚಯಿಸಿದರು. ‘ನನ್ನಂಗ ಬರಿ’ – ಬೇಂದ್ರೆ ಹೇಳಿದರು ಎಂದು ತಮ್ಮ ಆರಂಭಿಕ ಬರವಣಿಗೆಯ ಬಗ್ಗೆ ಪಟ್ಟಣಶೆಟ್ಟಿ ಅವರು ನೆನಪಿಸಿಕೊಂಡರು.

‘ಹಿಂದಿ ಪರೀಕ್ಷೆಯಲ್ಲಿ ಸಿಕ್ಕ ಆರು ರೂಪಾಯಿಯ ಸ್ಕಾಲರ್ ಶಿಫ್ ನನ್ನ ಓದಿಗೆ ಊರುಗೋಲಾಯಿತು. ಅವ್ವ ಗಿರಿಜವ್ವ ಹಟ ಮಾಡಿ ಯಾದವಾಡ ಹಳ್ಳಿ ಬಿಟ್ಟು ಧಾರವಾಡಕ್ಕೆ ಕರೆತಂದು ಓದಿಸಿದಳು. ನನಗೆ ಪ್ರತಿ ದಿನ ಹೊಸ ದಿನ. ವಿಚಿತ್ರ ಘಟನೆಗಳು ಜರುಗಿದವು. ಹಿಂದಿ ಮತ್ತು ಇಂಗ್ಲೀಷ ಭಾಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದದ್ದರಿಂದಲೇ ಎರಡು ವರ್ಷ ನೌಕರಿ ಸಿಗಲಿಲ್ಲ. ಚಂಪಾ ಮಧ್ಯಸ್ಥಿಕೆ ವಹಿಸಿ ಪಾವಟೆ ಮತ್ತು ಗುದ್ಲೆಪ್ಪ ಹಳ್ಳಕೇರಿ ಅವರನ್ನು ಭೇಟಿಯಾಗಿ ನೌಕರಿ ಕೊಡಿದನು .

ಮುಂದು ವರೆದು ಮಾತನಾಡಿದ ಪಟ್ಟಣಶೆಟ್ಟರು, ‘ನಿನ್ನ ಮರೆಯೋ ಮಾತು ಬಿಡು’ ಎಂಬ ಕವಿತೆ ನನ್ನ ಪ್ರಸಿದ್ಧಿಗೆ ತಂದಿತು. ಅದು ಒಂದು ಹುಡುಗಿಯ ಮೇಲೆ ಬರೆದ ವಿರಹದ ಕವಿತೆ. ಅವಳೇ ಕಳೆದ ವಾರ ಮನೆಗೆ ಬಂದು, ತನ್ನ ಮೊಮ್ಮಗಳ ಲಗ್ನ ಪತ್ರ ತಂದು ಕೊಟ್ಟು ಹೋದಳು, ಅವಳಿಗೆ ನನ್ನ ಕವಿತೆಯ ಯಾವ ಎಳೆಯ ಬಗ್ಗೆಯೂ ಗೊತ್ತಿಲ್ಲ ಅವಳು ಮುಗ್ಧಳು, ಕೀಟ್ಸನ ಪ್ಲಾಟೋನಿಕ್ ಪ್ರೇಯಸಿ ಇದ್ದಂತೆ’ ಎಂದು ಹೇಳಿದಾಗ ಸಭೆಯಲ್ಲಿ ನಗೆಗಡಲು ಹರೆಯಿತು. ಇದರಲ್ಲಿ ಹೇಮಾ ಕೂಡ ಕೂಡಿಕೊಂಡರು.

ಕವಿತೆಯ ಪ್ರತಯೊಂದು ಸಾಲು ಮನದಲ್ಲಿ ನಾಟಬೇಕು, ಕವಿಯ ಬೇಗುದಿ ಓದುಗನದಾಗಬೇಕು. ‘ಆವೋ ಪ್ಯಾರೆ ಸಾಥ ಹಮಾರೆ’ ಎಂಬ ನನ್ನ ಹಿಂದಿ ಹಾಡು ಇಡೀ ದೇಶದ ತುಂಬ ಗುನುಗುನುತ್ತಿದೆ. ಇದು ಜೀವ ವಿಮಾ ನಿಗಮದ ಧ್ಯೇಯ ಗೀತೆಯಾಗಿದೆ ಎಂಬುದೇ ನನ್ನ ಗರ್ವದ ಮಾತು.

ನೋವು ಬಡತನ ಪ್ರೀತಿ ಇವೇ ನನ್ನ ಕವಿತೆಯ ಪ್ರತಿಮೆಗಳು. ಬೇಂದ್ರೆ ನಂತರ ಧಾರವಾಡದ ಭಾಷೆಯನ್ನು ಗದ್ಯದಲ್ಲಿ ಬಳಸಿದವ ನಾನು. ‘ಚಾ ಜೋಡಿ ಚೂಡಾದಾಂಗ’ ಈ ಅಂಕಣ ನನ್ನನ್ನು ಪ್ರಸಿದ್ಧಿಗೆ ತಂದಿತು. ಅವ್ವ ಪ್ರತಿಯೊಬ್ಬನ ಜೀವನದಲ್ಲಿ ಮುಖ್ಯ, ಅವಳ ನಂತರ ಹೆಂಡತಿ ಆ ಸ್ಥಾನ ತುಂಬುತ್ತಾಳೆ ಹೆಣ್ಣು ಇಲ್ಲದಿದ್ದರೆ ಜಗತ್ತು ಬರುಡಾಗತಿತ್ತು.

ಸಾಹಿತ್ಯ ಆಕಾಡೆಮಿಯ ಸಂಚಾಲಕ ಸದಸ್ಯ ಡಾ. ಸರ್ಜೂ ಕಾಟ್ಕರ್ ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕನ್ನಡದ ಅತ್ಯಂತ ಮಹತ್ವದ ಕವಿ. ತಮ್ಮದೇಯಾದ ಕಾವ್ಯ ಮಾರ್ಗವನ್ನು ನಿರ್ಮಿಸಿಕೊಂಡವರು. ಧಾರವಾಡದ ಆಡು ಮಾತು, ಲಯ ವಿನ್ಯಾಸ, ಪದ ಪ್ರಯೋಗಗಳನ್ನು ಸಮೃದ್ಧವಾಗಿ ಕಾವ್ಯಕ್ಕೆ ತಂದವರು. ಕರ್ನಾಟಕ ಕಾಲೇಜಿಗೆ ಅವರನ್ನು ನೋಡಲು ಹೋಗುತ್ತಿದ್ದೆ. ಒಂದು ಸಂದರ್ಭದಲ್ಲಿ ಕೇಂದ್ರ ಸಾಹಿತ್ಯದ ಸಂಚಾಲಕರು ಸಿ.ಪ ಅವರಾಗಿದ್ದರು. ಈಗ ನಾನು ಇರುವೆ. ಇದೊಂದು ಅಪರೂಪದ ಪ್ರಸಂಗ. ಮೊದಲ ಮೀಟ್ ದಿ ಆಥರ್ ಕಾರ್ಯಕ್ರಮವನ್ನು ಆರಂಭಿಸಿದವರು ಡಾ. ವಿ.ಕೃ. ಗೋಕಾಕ್. ಅದೇ ನೆಲದಲ್ಲಿ ಈಗ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಸಂವಾದ ನಡೆಯುತ್ತಿದೆ ಎಂದರು ಸರ್ಜೂ.

ಸಮಾರಂಭದಲ್ಲಿ ಶ್ರೀಮತಿ ಹೇಮಾ ಪಟ್ಟಣಶೆಟ್ಟಿ, ಜಿಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಯ್ಯ ಹಿರೇಮಠ, ತಾಲ್ಲೂಕಾ ಅಧ್ಯಕ್ಷರಾದ ವಾಯ್. ಬಿ. ಆಲದಕಟ್ಟಿ, ಶಶಿಕಲಾ ಅಕ್ಕಿ, ಸಿ. ಎಸ್. ಮರಳಿಹಳ್ಳಿ, ಲಿಂಗರಾಜ ಸೊಟ್ಟಪ್ಪನವರ, ದೇವೂ ಪತ್ತಾರ, ಪ್ರವೀಣ ಮೈಸೂರ, ಪರಿಮಳಾ ಜೈನ್, ಋಷಿಕೇಶ ಬಹಾದ್ದೂರ ದೇಸಾಯಿ, ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಸಾಹಿತ್ಯ ಆಕಾಡೆಮಿಯ ಕನ್ನಡ ಭಾಷಾ ಸಲಹಾ ಸಮಿತಿಯ ಸದಸ್ಯರಾದ ಸತೀಶ ಕುಲಕರ್ಣಿ ಸ್ವಾಗತಿಸಿದರೆ, ಕಾರ್ಯಕ್ರಮವನ್ನು ಎಸ್. ಆರ್.ಹಿರೇಮಠ ನಡೆಸಿದರು. ಕೊನೆಯಲ್ಲಿ ಕರಿಯಪ್ಪ ಹಂಚಿನಮನಿ ವಂದಿಸಿದರು.

‍ಲೇಖಕರು Admin

May 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: