ಸಿದ್ಧಲಿಂಗಯ್ಯನವರಿಗೆ ಮಮತಾ ಅರಸೀಕೆರೆ ನುಡಿ ನಮನ…

ಮಮತಾ ಅರಸೀಕೆರೆ

ಖ್ಯಾತ ಕವಿಗಳು, ಲೇಖಕರು ಡಾ. ಸಿದ್ದಲಿಂಗಯ್ಯನವರನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕಂಡಿದ್ದೆನಾದರೂ, ಹತ್ತಿರದಿಂದ ಭೇಟಿಯಾದದ್ದು ಆತ್ಮೀಯವಾಗಿ ಮಾತನಾಡಿದ್ದು ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ. ಬೆಂಗಳೂರಿನ ಕನ್ನಡ ಭವನದಲ್ಲಿರುವ ಅಕಾಡೆಮಿಯೊಂದಕ್ಕೆ ಹೋದಾಗ ಪ್ರಾಧಿಕಾರದಲ್ಲಿ ಡಾ. ಸಿದ್ದಲಿಂಗಯ್ಯನವರನ್ನು ಕಂಡು ನಾನೂ ನನ್ನ ಸ್ನೇಹಿತೆ ಅಲ್ಲಿಗೆ ತೆರಳಿದ್ದೆವು. ಈಗಾಗಲೆ ನಾವೊಂದು ಸಂಸ್ಥೆ ನಡೆಸುತ್ತಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು, ಸೆಮಿನಾರ್‌ಗಳು, ರಂಗಸಂಘಟನೆ ಆಯೋಜಿಸುತ್ತಿದ್ದುದರಿಂದ ಅವರೂ ನಮ್ಮಗಳ ಹೆಸರನ್ನು ಕೇಳಿದ್ದರಂತೆ.

ನಾವು ಅರಸೀಕೆರೆ ಅಂದಾಕ್ಷಣ ಡಾ. ಎಚ್.ಆರ್. ಸ್ವಾಮಿಯವರು ನಿಮಗೆ ಗೊತ್ತಾ? ಅಂತ ಕೇಳಿದ್ದರು. ನಾವು ಅವರ ಶಿಷ್ಯೆಯರು ಅಂದಾಗ ಖುಷಿಪಟ್ಟು, ಅವರ ಫೋನ್ ನಂಬರ್ ಕೇಳಿ ಪಡೆದು ಆತ್ಮೀಯವಾಗಿ ಮಾತನಾಡಿಸಿದ್ದರು. ನಮ್ಮ ಪ್ರಾಧಿಕಾರದ ವತಿಯಿಂದಲೂ ಏನಾದರೂ ಕಾರ್ಯಕ್ರಮ ಆಯೋಜಿಸಿ ಅಂತ ಅವರೇ ಹೇಳಿ ಅಲ್ಲಿಯೇ ಪತ್ರ ಬರೆಸಿ ಕಾರ್ಯಕ್ರಮ ನಡೆಸಲು ಅನುಮತಿಯನ್ನೂ ಕೊಟ್ಟಿದ್ದರು. ನಾವು ಅವರನ್ನು ನಮ್ಮೂರಿಗೆ ಆಹ್ವಾನಿಸಿ ಬಂದಿದ್ದೆವು. ನಮ್ಮೂರಿನಲ್ಲಿ ಕಾರ್ಯಕ್ರಮ ಆಯೋಜನೆಯಾದಾಗ ಖಂಡಿತ ಬಂದೇ ಬರುತ್ತೇನೆ ಅಂದವರು ನಂತರ ಎರಡು ಬಾರಿ ಪ್ರಾಧಿಕಾರದ ಸಹಯೋಗದಲ್ಲಿ ಚಟುವಟಿಕೆ ನಡೆದರೂ ಬಂದಿರಲಿಲ್ಲ. ನಂತರದ ದಿನಗಳಲ್ಲಿ ಹೆಚ್ಚೇನೂ ಸಂಪರ್ಕವಿರಲಿಲ್ಲ.

ನಮ್ಮ ಗೆಳೆಯರನೇಕರು ಡಾ. ಸಿದ್ದಲಿಂಗಯ್ಯನವರ ಮನೆಯ ಲೈಬ್ರರಿ ತುಂಬಾನೇ ಚೆನ್ನಾಗಿದೆ, ವಿಪರೀತ ಪುಸ್ತಕಗಳಿವೆ ಅಂತೆಲ್ಲಾ ಉತ್ಪ್ರೇಕ್ಷಿಸಿ ಹೇಳುವಾಗ ನನಗೂ ನೋಡುವ ಆಸೆಯಾಗಿತ್ತು. ನಮ್ಮ ಗುರುಗಳು ಅದೇ ಬಡಾವಣೆಯಲ್ಲಿ ವಾಸವಾಗಿದ್ದರಿಂದ ‘ಒಮ್ಮೆ ಅವರ ಮನೆಗೆ ಹೋಗಬೇಕೆಂದು, ಕರೆದೊಯ್ಯಬೇಕೆಂದೂ’ ಆಗಾಗ್ಗೆ ಮನವಿ ಮಾಡಿಕೊಳ್ಳುತ್ತಿದ್ದುದಿತ್ತು. ಸಂದರ್ಭ ಕೂಡಿ ಬಂದಿರಲಿಲ್ಲ. ಈ ನಡುವೆ ನಮ್ಮ ಗುರುಗಳು ಹಾಗೂ ಅವರ ಗೆಳೆಯರು ೨೦೨೧ ರ ಇದೇ ಮೆ ೨ ರಂದು ಬೆಂಗಳೂರಿನಲ್ಲಿ ವಿಜ್ಞಾನ ಸಮಾವೇಶ ಮಾಡಬೇಕೆಂದು ಫೆಬ್ರವರಿಯಿಂದಲೇ ಯೋಜನೆ ಶುರು ಮಾಡಿದ್ದರು. ಅದಕ್ಕಾಗಿ ಅತಿಥಿಗಳ ಆಯ್ಕೆಯೂ ನಡೆದಿತ್ತು.

ಸಿದ್ದಲಿಂಗಯ್ಯನವರೂ ಅತಿಥಿಗಳಲ್ಲಿ ಒಬ್ಬರು. ನನ್ನ ಕೆಲಸ ಈ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವೈಚಾರಿಕ ಬರಹಗಳನ್ನು ತರಿಸಿಕೊಂಡು ಪುಸ್ತಕ ರೂಪದಲ್ಲಿ ಸಂಪಾದನೆ ಮಾಡುವುದಾಗಿತ್ತು. ಆಗ ಸಿದ್ದಲಿಂಗಯ್ಯನವರೊಡನೆ ಮಾತನಾಡುವ ಪ್ರಸಂಗ ಬಂದು ಫೋನ್ ಮಾಡಿದರೆ ಅವರು ದೆಹಲಿಯಲ್ಲಿದ್ದರು.’ ಆರೋಗ್ಯ ಸರಿಯಿರಲಿಲ್ಲ ಅಂದವರು, ನೀವು ಫೋನ್ ಮಾಡಿದ್ದು ಖುಷಿಯಾಯಿತು, ಖಂಡಿತಾ ಲೇಖನವೊಂದನ್ನು ಬರೆದುಕೊಡುವೆ’ ಅಂತ ಹೇಳುತ್ತಾ ಹಾಸ್ಯವಾಗಿ ಕೆಲವು ಪ್ರಸಂಗಗಳನ್ನು ಹೇಳುತ್ತಾ ಹೋದರು. ಅವುಗಳನ್ನೇ ಲೇಖನವಾಗಿ ಬರೆಯಬಹುದಲ್ಲವಾ’ ಅಂದರು. ಆದರೆ ಕೋವಿಡ್ ಕಾರಣಕ್ಕೆ ಆ ಕಾರ್ಯಕ್ರಮ ಮುಂದೂಡಲ್ಪಟ್ಟಿತು. ಲೇಖನ ಸಂಗ್ರಹ ಕಾರ್ಯಕ್ಕೂ ತಡೆಯಾಯಿತು.

ಏಪ್ರಿಲ್ ತಿಂಗಳಲ್ಲಿ ಅನಿರೀಕ್ಷಿತವಾಗಿ ಅವರ ಮನೆಗೆ ತೆರಳುವ ಸಂದರ್ಭ ಬಂದಿತು. ಅವರಿಗೆ ಫೋನ್ ಮಾಡಿ ಅವರ ಉಪಸ್ಥಿತಿ ಬಗ್ಗೆ ತಿಳಿದು ಅವರು ಹೇಳಿದ ಸಮಯಕ್ಕೆ ನಾವು ಮೂರು ಮಂದಿ ಅವರ ಮನೆಗೆ ಹೋದೆವು. ನಂತರ ನಮ್ಮ ಮೇಷ್ಟುç ಡಾ. ಸ್ವಾಮಿಯವರನ್ನ ಕವಿಗಳೇ ಕರೆ ಮಾಡಿ ಕರೆಸಿಕೊಂಡರು. ಆ ದಿನ ಮಾತಾಡಿದ್ದು ಮರೆಯುವಂತೆಯೇ ಇಲ್ಲ. ಮಾತು, ಮಾತು, ಸತತ ೩ ಗಂಟೆಗಳ ಕಾಲ ಸಾಕಷ್ಟು ಮಾತನಾಡಿದರು.

ನಮ್ಮ ಮೇಷ್ಟ್ರು ಹಾಗೂ ಅವರ ಸಂಪರ್ಕ, ಆಗಿನ ಕೆಲವು ಘಟನೆಗಳು, ಗುರುಶಿಷ್ಯರ ಸಂಬಂಧವನ್ನೆಲ್ಲಾ ನೆನಪಿಸಿಕೊಂಡು ಮಾತನಾಡಿದರು. ನಡುನಡುವೆ ವೈಚಾರಿಕತೆ, ವೈಚಾರಿಕ ವ್ಯಕ್ತಿಗಳು, ನಾಸ್ತಿಕತೆ ಮೊದಲಾದ ವಿಚಾರಗಳೂ ಬಂದವು. ಕೆಲವಷ್ಟನ್ನು ನಾನು ವೀಡಿಯೋ ಮಾಡಿದ್ದೆ. ಕೆಲವು ತಮಾಷೆಯ ಪ್ರಸಂಗಗಳನ್ನು ಹೇಳುವಾಗ ಸಿದ್ದಲಿಂಗಯ್ಯನವರೇ ವೀಡಿಯೋ ಮಾಡಲು ಬಿಡಲಿಲ್ಲ. ಆ ದಿನ ಸಾಕಷ್ಟು ನಗಿಸಿಬಿಟ್ಟಿದ್ದರು. ದೋಸೆ, ಕಾಫಿ ತರಿಸಿ ಆತಿಥ್ಯ ನೀಡಿದರು. ನಾನೊಂದು ರೆಬೆಲ್ ಆದ ಒಂದು ವಿಷಯ ಹೇಳಿದ್ದೆ. ಕೇಳಿಸಿಕೊಂಡು ಅವರೂ ಅಚ್ಚರಿಪಟ್ಟಿದ್ದರು. ಅವರ ಈ ಭೇಟಿಯ ನಂತರ ಕರೆ ಮಾಡಿದಾಗ ಆ ಸಂದರ್ಭದ ಬಗ್ಗೆ ಮಾತು ತೆಗೆದು ಬೆರಗು ಪಡುತ್ತಿದ್ದರು.

ನಮ್ಮ ಮಾತುಕತೆ ನಡುವೆ ಅವರ ಆರೋಗ್ಯ ಮಾತು ಬಂದಾಗ ಸಾಕಷ್ಟು ಸಮಸ್ಯೆ ಇರುವುದಾಗಿ ಹೇಳಿ ಅವೆಲ್ಲದರಿಂದ ದೂರವಿರಲು ಹೀಗೆ ತನ್ನನ್ನು ತಾನು ಕಾಲೆಳೆದುಕೊಳ್ತರ‍್ತೇನೆ, ತಮಾಷೆ ಮಾಡುತ್ತಿರ್ತೇನೆ ಅಂದಿದ್ದರು.ಅವರ ಮನೆಯ ಗ್ರಂಥಾಲಯ ನಿಜಕ್ಕೂ ದೊಡ್ಡದಿತ್ತು. ಬಹಳ ಅಪರೂಪ ಪುಸ್ತಕಗಳಿದ್ದವು. ಅವನ್ನೆಲ್ಲ ನೋಡಿಯೇ ನಾನು ಸುಸ್ತಾಗಿದ್ದೆ. ಪುಸ್ತಕಗಳನ್ನೆಲ್ಲ ಯೋಜಿತ ಕ್ರಮದಲ್ಲಿ ಸಜ್ಜುಗೊಳಿಸಲಾಗಿತ್ತು. ಮೆಚ್ಚುಗೆ ವ್ಯಕ್ತಪಡಿಸಿದ್ದೆ.

ಅವರ ಮನೆಯಿಂದ ಹೊರಟಾಗ ನಮ್ಮೊಂದಿಗಿದ್ದ ವೈದ್ಯರು ಮತ್ತೊಮ್ಮೆ ಅವರ ಆರೋಗ್ಯದ ವಿಷಯ ತೆಗೆದು ದಿನವೂ ವಾಕಿಂಗ್ ಹೋಗಲು ಹೇಳಿದರೆ ಅವರ ಪತ್ನಿಯೂ ದನಿಗೂಡಿಸಿ, ‘ಅದೊಂದು ಕೆಲಸ ಮಾಡೊಲ್ಲ ಅವರು, ಗಟ್ಟಿಯಾಗಿ ಹೇಳಿ’ ಅಂದಿದ್ದರು. ನಂತರದ ದಿನಗಳಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿ ವತಿಯಿಂದ ಕಮ್ಮಟವೊಂದನ್ನು ಆಯೋಜಿಸೋಣ ಅಂದ ಕವಿಗಳು ನನ್ನಿಂದ ನಮ್ಮ ಸಂಸ್ಥೆಯ ಲೆಟರ್ ಹೆಡ್ ನಲ್ಲಿ ಅಕಾದೆಮಿಗೆ ಪತ್ರವೊಂದನ್ನು ಬರೆಸಿಸಿದ್ದರು. ಆ ಸಂಬಂಧ ಆಗಾಗ್ಗೆ ಮಾತನಾಡುವಾಗ ಅವರು ಯಾವುದಾದರೊಂದು ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುತ್ತಿದ್ದರು.

ಏಪ್ರಿಲ್ ತಿಂಗಳು ಕೋವಿಡ್‌ನ ಎರಡನೆ ಅಲೆಯ ಅಪಾಯದ ಕಾಲ. ಅಂತದ್ದರಲ್ಲೂ ಹೊರಗೆ ಕಾರ್ಯಕ್ರಮಕ್ಕೆಂದು ಓಡಾಡುವಾಗ ನಾನು ಆತಂಕಿತಳಾಗಿ’ ಬೇಡ ಸರ್ ಹೊರಗೆ ಓಡಾಡುವುದು ತೀರಾ ಅಪಾಯ. ಅದೃಷ್ಟ ಚೆನ್ನಾಗಿದ್ದರೆ ವೈರಸ್‌ನಿಂದೇನೋ ಬಚಾವಾಗಬಹುದು , ನಿಮ್ಮ ಇತರೆ ಸಮಸ್ಯೆಗಳು ನಿಮಗೆ ತೀರಾ ತೊಂದರೆ ಕೊಡಬಹುದು. ದಯಮಾಡಿ ಕೆಲವು ದಿನ ಎಲ್ಲವನ್ನೂ ಸ್ಥಗಿತಗೊಳಿಸಿ.’ ಅಂತ ಹೇಳುತ್ತಿದ್ದರೆ, ‘ಏನು ಮಾಡೋದು ಅಭಿಮಾನವಿಟ್ಟು ಕರೆಯುತ್ತಾರೆ. ನನಗೂ ಲವಲವಿಕೆ. ಇನ್ನು ಕೆಲವೇ ಕಾರ್ಯಕ್ರಮಗಳಿವೆ. ನಂತರ ಹೋಗೋಲ್ಲ ಬಿಡಿ’ ಅನ್ನುತ್ತಿದ್ದರು. ಆದರೂ ಓಡಾಟ ನಿಲ್ಲಿಸಲೇ ಇಲ್ಲ. ಅವರ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಿಂದ ಗೊತ್ತಾಗುತ್ತಿತ್ತು.

ಅವರು ಆಸ್ಪತ್ರಗೆ ದಾಖಲಾದ ದಿನ ಫೋನ್ ಮಾಡಿದ್ದರು. ಬೆಡ್ ಸಿಗದೆ ಆರಂಭದಲ್ಲಿ ಅವರಿಗೂ ತೊಂದರೆಯಾಗಿತ್ತು. ಮಾತನಾಡುವಾಗ ಕೆಮ್ಮುತ್ತಿದ್ದರು. ದನಿ ದಣಿದಿತ್ತು. ‘ ನೋಡಿ ಪಾಸಿಟೀವ್ ಆಗಿಬಿಟ್ಟಿದೆ. ನೀವು ಹೇಳ್ತಿದ್ರಿ ಈಗ ಹಾಗೇ ಆಗಿದೆ’ ಅಂದರು. ಆದಿನ ನನಗೆ ತುಂಬಾ ಬೇಸರವಾಗಿತ್ತು. ‘ಧೈರ್ಯದಿಂದಿರಿ ಸರ್ ಖಂಡಿತಾ ಗುಣವಾಗಿ ಬರುತ್ತೀರ’ ಅಂತ ಹಾರೈಸಿದರೂ ಮನದ ಮೂಲೆಯಲ್ಲೆಲ್ಲೋ ತೀರದ ಆತಂಕ. ತಳಮಳ. ಅಂದಿನಿಂದ ಕೆಲವು ದಿನಗಳು ಏನಾಯ್ತೊ ಅನ್ನುವ ದುಗುಡ.

ಕವಿಗಳು ಗುಣವಾಗ್ತಿದಾರೆ ಅನ್ನುವ ಸಂದೇಶ ಬಂದಾಗ ನಿರಾಳವಾಗುತ್ತಿದ್ದೆವು. ಕಡೆಗೂ ಪ್ರಾರ್ಥನೆ ಫಲಿಸಲೇ ಇಲ್ಲ. ಎಲ್ಲ ದುರಿತ ಕಳೆದು ಪುನಃ ಮೊದಲಿನಂತೆ ಕವಿಗಳು ತಮಾಷೆ ಮಾಡಿಕೊಂಡು ಓಡಾಡ್ತಾರೆ ಅನ್ನುವ ಆಶಯ ಕೊನೆಗೂ ಹುಸಿಯಾಯಿತು. ತೀರದ ನೋವೊಂದನ್ನು ಉಳಿಸಿ ಕೊನೆಗೂ ಕವಿಗಳು ಕಣ್ಮರೆಯಾದರು.ಅವರ ಸಾಹಿತ್ಯ, ಅಲ್ಲಿನ ಆಶಯಗಳನ್ನ ಲೇಖನ, ಕಾವ್ಯಗಳ ಮೂಲಕ ಅರಿತಿದ್ದ ನನಗೆ ಅವರ ಸಮುದಾಯದ ಪರವಾದ ಅವರ ತೀವ್ರ ಸಂವೇದನೆ ಮೆಚ್ಚುಗೆಯಾಗಿತ್ತು.

ತನ್ನ ಜನಗಳ ಒಳತುಡಿತಗಳಿಗೆ ದನಿಯಾಗಿ ಸತತವಾಗಿ ದುಡಿದ, ತನ್ನ ದನಿಯನ್ನು ಸಮರ್ಥವಾಗಿ ದುಡಿಸಿಕೊಂಡ ಅವರ ಕಾರ್ಯವೈಖರಿ ಶ್ಲಾಘನೀಯವಾದದ್ದು. ಅವರ ಬಗೆಗಿನ ಕೆಲವು ಅಸಮಾಧಾನಗಳನ್ನು ಅವರ ಎದುರೇ ವ್ಯಕ್ತಪಡಿಸಿದರೂ ನಗುತ್ತಲೆ ಉತ್ತರಿಸುತ್ತಿದ್ದುದು ಅವರ ಪ್ರಮುಖ ಗುಣಗಳಲ್ಲೊಂದು. ಅವರಿಂದ ಮತ್ತಷ್ಟು ಕೆಲಸಗಳನ್ನು ದಲಿತ ಸಮುದಾಯ ಅಪೇಕ್ಷಿಸಿದ್ದು ನ್ಯಾಯಯುತವಾಗೇ ಇದ್ದಿತ್ತು. ಆ ಬಗೆಗಿನ ಗೊಣಗಾಟಗಳು ಆಗಾಗ್ಗೆ ಮೂಡಿದರೂ ಇಲ್ಲೀವರೆಗಿನ ಅವರ ಕೆಲಸ ಸಾಕಷ್ಟಿದ್ದು ಒಂದು ಕಾಲಘಟ್ಟದ ಜನರನ್ನು ಎಚ್ಚರಿಸಿದ್ದು ಪ್ರಮುಖ ಸಂಗತಿ. ಈ ಬಗ್ಗೆ ಸಾಕಷ್ಟು ಬರಹಗಳು ಬಂದಿವೆ. ಮಾತುಗಳನ್ನೂ ಆಡಿದ್ದಾರೆ. ಏನೇ ಆದರೂ ಕವಿಗಳು ಅಕಾಲದಲ್ಲಿ ಮರೆಯಾದದ್ದು ನಷ್ಟವೇ ಸರಿ.

‍ಲೇಖಕರು Avadhi

June 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mallikarjuna Hosapalya

    ಉತ್ತಮ ಬರಹ, ಕವಿಗಳು ಹಾಗೂ ತಮ್ಮ ಒಡನಾಟದ ಗಳಿಗೆಗಳು ಚೆನ್ನಾಗಿವೆ. ಅವರ ಅಗಲಿಕೆಯೇ ತುಂಬಾ ನೋವು ತರುವ ಸಂಗತಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: