ಸಿದ್ಧರಾಮ ಮೋಟಗಿ ಓದಿದ ‘ಕೃಷ್ಣಾಯಿ ಜೋಗುಳ’

ಆಡುಭಾಷೆ ಕಥಾಶೈಲಿಯ ವಿಶಿಷ್ಟ ಪ್ರಯೋಗ

ಸಿದ್ಧರಾಮ ಮೋಟಗಿ

ಈ ಲೇಖನ ‘ಸುಗಮ ಪುಸ್ತಕ’ ಫೇಸ್‌ಬುಕ್‌ ಪೇಜ್‌ ನಲ್ಲಿ ಈ ಮೊದಲು ಪ್ರಕಟಗೊಂಡಿದೆ

ಅಂತರರಾಷ್ಟೀಯ ಸಂವಹನ ಮಾಧ್ಯಮವಾಗಿ ಬೆಳೆದು ನಿಂತಿರುವ ಇಂಗ್ಲಿಷ ಭಾಷೆಯನ್ನು ತಮ್ಮ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ʻಬಂಡು ಕೋಳಿʼ ಗುರುಗಳು ಈ ಕಥಾ ಸಂಕಲನದ ಮೂಲಕ ನಮ್ಮ ಮನೆಯಂಗಳದ ಭಾಷೆಯ ವಿಶಿಷ್ಟ ಉಚ್ಛಾರ ಶೈಲಿ ಹಾಗೂ ಅಪಾರವಾದ ಗ್ರಾಮ್ಯ ಪದಸಂಪದವನ್ನು ಜೀವಂತವಾಗಿಡುವ, ಅದರ ಸತ್ವವನ್ನು ಎತ್ತಿ ಹಿಡಿಯುವ ಸಾಹಸ ಮಾಡಿದ್ದಕ್ಕಾಗಿ ಅವರಿಗೆ
ಧನ್ಯವಾದಗಳು.

ಇಲ್ಲಿರುವ ಕಥೆಗಳೆಲ್ಲವೂ ಬರಿ ಕಥೆಗಳಲ್ಲವೇ ಅಲ್ಲ, ನನಗಂತೂ ಅವೆಲ್ಲವೂ ಸತ್ಯಕಥೆಗಳಂತೆ ಭಾಸವಾಗುತ್ತಿವೆ. ನಿಸ್ಸಂದೇಹವಾಗಿಯೂ ಇವು ಈ ಭಾಗದ ಸಮಗ್ರ ಜೀವನದ ಸಾಕ್ಷ್ಯಚಿತ್ರಗಳೇ ಹೌದು. ಮಹಾತಾಯಿ ಕೃಷ್ಣೆಯ ಒಡಲಿನ ಮಕ್ಕಳ ಇತಿಹಾಸ ರಚಿಸಲು ನೆರವಾಗಬಹುದಾದ ಪ್ರತ್ಯಕ್ಷ ಪ್ರಮಾಣಗಳೆಂದರೆ ಅತಿಶಯೋಕ್ತಿಯಾಗದು.

ಕಲ್ಪನಾ ಸಾಮ್ರಾಜ್ಯ ಒತ್ತಟ್ಟಿಗಿರಲಿ. ತನ್ನ ಸುತ್ತಲಿನ ಆಗು-ಹೋಗುಗಳನ್ನು ಇಷ್ಟೊಂದು ಸೂಕ್ಷ್ಮಾತಿಸೂಕ್ಷ್ಮವಾಗಿ ಗಮನಿಸುವುದು. ಕಥಾಲೋಕಕ್ಕೆ ಅವುಗಳನ್ನು ಅಚ್ಚುಕಟ್ಟಾಗಿ ಹೊಂದಿಸುವುದು ಸುಲಭದ ಮಾತಲ್ಲ, ಅದು ವ್ರತಧಾರಿಯಿಂದ ಮಾತ್ರ ಸಾಧ್ಯವಾಗಬಹುದಾದ ಕೆಲಸ. ಲೇಖಕರು ಹುಟ್ಟಿ ಬೆಳೆದ ವಾತಾವರಣದಲ್ಲಿನ ಏರು-ಪೇರುಗಳು ಅವರ ಸ್ಮೃತಿಪಟಲದಲ್ಲಿ ಇನ್ನೂ ಹಚ್ಚಹಸಿರಾಗಿವೆ. ಅವರು ಬಾಲ್ಯದಿಂದ ಮೈಯೆಲ್ಲಾ ಕಣ್ಣಾಗಿ, ಕಿವಿಯಾಗಿ ಇದ್ದುದರಿಂದ ಅವರಿಗೆ ಈ ಮಟ್ಟದ ಕಥನಕಲೆ ಸಿದ್ಧಿಸಿದೆ.

ಜನಸಾಮಾನ್ಯರ ಬದುಕಿನ ಆಳ-ಅಗಲಗಳನ್ನು ಇಷ್ಟೊಂದು ಚೆನ್ನಾಗಿ, ವಿಸ್ತೃತವಾಗಿ ಗ್ರಹಿಸಿ, ಅದನ್ನು ನ್ಯಾಯಯುತವಾಗಿ ಕಥೆಯಾಗಿಸುವುದು ಎಂದರೆ, ಅದೊಂದು ತೆರನಾದ ಪರ್ವತಾರೋಹಣವೇ ಸರಿ. ಆಡುನುಡಿಯನ್ನು ಇಷ್ಟು ಸಮರ್ಥವಾಗಿ ಬಳಸಿಕೊಳ್ಳುವ ಸಾಮರ್ಥ್ಯವು ಪರಿಸರದ ಬಳುವಳಿಯೇ. ತನ್ನದೇ ಪರಿಸರವನ್ನು ಹಚ್ಚಿಕೊಂಡು, ಆತ್ಮೀಯವಾಗಿ ಕಂಡು, ಅಲ್ಲಿನ ಜನಜೀವನದ ಎಳೆಎಳೆಗಳನ್ನು ತಮ್ಮ ಕಥಾಹಂದರಗಳಲ್ಲಿ ಯಥೇಚ್ಛವಾಗಿ ಜೋಡಿಸಿದ ರೀತಿಯು ಅನುಪಮ ಹಾಗೂ ಪ್ರಶಂಸನೀಯವಾದುದು.

ನಮ್ಮ ಕನ್ನಡ ಸಾರಸ್ವತ ಲೋಕದ ರತ್ನ ಜಿ. ಪಿ. ರಾಜರತ್ನಂ ಅವರು ತಮ್ಮ ಅಪರೂಪದ ವಿಶಿಷ್ಟ ಶೈಲಿಯ ಪದಬಳಕೆ ಹಾಗೂ ಕಾವ್ಯಶಕ್ತಿಯ ಮೂಲಕವೇ ಜನಜನಿತರಾದದ್ದಿದೆ. ಈ ಕಥಾಸಂಕಲನದ ಒಂದೊಂದು ಸಾಲಿನಲ್ಲಿಯೂ ‘ನನಗೆ ನಾನೇ ಮಾದರಿ’ ಎಂಬ ಸ್ವಂತಿಕೆಯ ಪರಾಕಾಷ್ಠೆ ಎದ್ದು ಕಾಣುತ್ತಿದೆ. ಇದು ಒಂದು ರೂಢಿಗತ ಕಥಾಶೈಲಿಯ ವಿರುದ್ಧ ಸಾರಿದ ಸಮರವೇ ಆಗಿರಬಹುದು.

ಅಳೆದು, ತೂಗಿ ಮಾತನಾಡದ ಉತ್ತರ ಕರ್ನಾಟಕದವರ ಎತ್ತರ ಬಿತ್ತರಗಳನ್ನು ಅರಗಿಸಿಕೊಳ್ಳಲಾಗದ, ಅರಿತುಕೊಳ್ಳಲಾಗದ ಪೂರ್ವಾಗ್ರಹಪೀಡಿತರಾದ ದಕ್ಷಿಣದ ನಮ್ಮ ಬಂಧುಗಳು ಈ ಕತೆಗಳನ್ನು ಕಣ್ತೆರೆದು ಓದಿನೋಡಲಿ. ನಮ್ಮವರ ಭಾಷೆಯ ಸೊಗಡು, ಮಾತಿನ ಒರಸೆ, ನೇರಾನೇರ ನಿಸ್ಸಂಕೋಚ ನಿಲುವು, ಕೊನೆಯಿಲ್ಲದ ಬದುಕಿನ ಬವಣೆಗಳು, ಒಮ್ಮೊಮ್ಮೆ ಉಕ್ಕಿ ಹರಿಯುವ ಆಕ್ರೋಶ, ಅಸಮಾಧಾನಗಳು, ಸಂದಿಗ್ಧ ಪರಿಸ್ಥಿತಿಗಳು, ಪರಿಹಾರ ಕಾಣದ ಸಮಸ್ಯೆಗಳು, ಒಣ ಉಪದೇಶಗಳಿಗೆ ಕಿವಿ ಗೊಡದೆ ಬಂದದ್ದಕ್ಕೆ ಬಾ ಎನ್ನುವ, ಹೋದದ್ದಕ್ಕೆ ಹೋಗೆನ್ನುವ, ಘನ ಗಂಭೀರ ಸನ್ನಿವೇಶಗಳನ್ನು ಸಹಜವಾಗಿ ಕಾಣುವ, ಛಿದ್ರವಿಚ್ಛಿದ್ರವಾದುದೆಲ್ಲವನ್ನೂ ನಿರ್ಲಿಪ್ತರಾಗಿ ನೋಡುವ, ಪುನರ್ನಿರ್ಮಾಣದ ಅವಕಾಶಗಳಿಗಾಗಿ ಕಾಯುವ, ಹೋರಾಟಮಯವಾದ ಬದುಕಿನ ಹಾದಿಯನ್ನು ಕ್ರಮಿಸಲು ಹಗಲಿರುಳೆನ್ನದೇ ಹೆಣಗಾಡುವ,
ಅಲ್ಪ ತೃಪ್ತಿಯೋ? ಸಂತೃಪ್ತಿಯೋ ? ಒಟ್ಟಾರೆ ಜೀವನ್ಮುಖಿಗಳಾಗಿರುವ ಈ ಕಥಾ ಪಾತ್ರಧಾರಿಗಳೆಲ್ಲ ನಮ್ಮವರೇ, ಅವರಲ್ಲಿ ಬಹಳಷ್ಟು ಮಂದಿಯ ಬದುಕು ಸುವ್ಯವಸ್ಥಿತವಾಗಿರಲಿಕ್ಕಿಲ್ಲ, ಅವರು ಸುಸಂಸ್ಕೃತ, ಸುಶಿಕ್ಷಿತರಿಲ್ಲದಿರಬಹುದು, ಹೌದು. ಆದರೆ ಅವರೆಲ್ಲರೂ ಸ್ಥಿತಪ್ರಜ್ಞರೆಂಬುದು ಅಷ್ಟೇ ಸತ್ಯವಲ್ಲವೇ ? ಆ ನನ್ನವರು ಬದುಕನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಆ ರೀತಿ ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುವುದರಲ್ಲಿ ಸಂಶಯವಿಲ್ಲ.

ಆಡುಭಾಷೆಯ ಬಳಕೆಯ ದೃಷ್ಟಿಯಿಂದ ಈ ಕಥಾ ಸಂಗ್ರಹ ನಿಜವಾಗಿಯೂ ಒಂದು ವಿಶೇಷವಾದ ಪ್ರಯೋಗ, ಈ ಪ್ರಯೋಗಗಳಿಗೆ ನಮ್ಮ ನೆರೆ-ಹೊರೆಯೇ ಪ್ರಯೋಗಶಾಲೆಯಾಗಿರುವುದು ನನ್ನಲ್ಲಿ ಹೆಮ್ಮೆಯನ್ನು ಹುಟ್ಟು ಹಾಕುತ್ತಿದೆ. ಸೂಕ್ಷ್ಮಗ್ರಾಹಿ ಸಹೋದರ ʻಬಂಡು‌ ಕೋಳಿʼಯವರು ಗಡಿಪ್ರದೇಶದ ಕಾಯಕಜೀವಿಗಳ ಭಾಷೆಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರೆಸಿದ್ದಕ್ಕೆ ನಾನವರನ್ನು ಅತಿ ಸಂತೋಷದಿಂದ ಅಭಿನಂದಿಸುತ್ತೇನೆ.

ಹಿರಿಯರು, ಚಿಂತನಶೀಲರು ಹಾಗೂ ಪ್ರಾಜ್ಞರಾದ ಡಾ. ಬಾಳಾಸಾಹೇಬ ಲೋಕಾಪುರ ಅವರು ಈ ಕಥಾ ಸಂಕಲನದ ಮುನ್ನುಡಿಯಲ್ಲಿ…
‘ಈ ಕಥೆಗಳು ಕಥನಶಿಲ್ಪದ ಸಿದ್ಧ ಮಾದರಿಯನ್ನು ಮುರಿದು ಇವು ಹೀಗೇ ನೋಡಿ, ಇವು ನನ್ನ ಮಾದರಿ ಎನ್ನುವಂತೆ ರೂಪ ತಳೆದಿವೆ.’ ಎಂದಿರುವುದು. ನಮ್ಮ ಪಾಲಿಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿದ್ದಂತೆ. ಅವರು ಈ‌ ಕಥೆಗಳ ಕುರಿತು ಬಲು ತೂಕದ ಮಾತುಗಳನ್ನೇ ಆಡಿದ್ದಾರೆ.

‍ಲೇಖಕರು Admin

October 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: